Daily Archives: January 25, 2012

ಜೀವನದಿಗಳ ಸಾವಿನ ಕಥನ – 21


– ಡಾ.ಎನ್. ಜಗದೀಶ್ ಕೊಪ್ಪ


ಅಣೆಕಟ್ಟುಗಳ ನೆಪದಲ್ಲಿ ಜೀವನದಿಗಳನ್ನ ಕೊಲ್ಲುತ್ತಿರುವ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರತಿಭಟನೆಗಳು ಜರುಗುತ್ತಿವೆ. ಎಲ್ಲಾ ಸರ್ಕಾರಗಳಿಗೆ ಪ್ರತಿಭಟನೆಯ ಬಿಸಿ ತಾಕತೊಡಗಿದೆ. ನದಿಗಳ ರಕ್ಷಣೆಗಾಗಿ ಅನೇಕ ಸ್ವಯಂ ಸೇವಾ ಸಂಘಟನೆಗಳು, ಕಾರ್ಯಕರ್ತರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಫೇಸ್‌ಬುಕ್, ಗೂಗ್ಲ್ ಪ್ಲಸ್, ಮುಂತಾದ ಸಾಮಾಜಿಕ ತಾಣಗಳು, ಇ-ಮೈಲ್, ಬ್ಲಾಗ್‌ಗಳು ಪರಿಸರ ಪ್ರೇಮಿಗಳಿಗೆ ಅನುಕೂಲಕರ ವೇದಿಕೆಗಳಾಗಿ ಮಾರ್ಪಟ್ಟಿವೆ.

ಅಣೆಕಟ್ಟುಗಳನ್ನ ವಿರೋಧಿಸುವುದಾದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ನಗರೀಕರಣ, ನೀರು, ವಿದ್ಯುತ್‌ಗಳ ಬೇಡಿಕೆ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಬೇಕಾದ ಆಹಾರ ಧಾನ್ಯ, ಇದಕ್ಕಾಗಿ ನೀರಾವರಿ ವ್ಯವಸ್ಥೆ, ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ವರ್ತಮಾನದ ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವೊಂದೇ ಉತ್ತರವಲ್ಲ. ಹಾಗೆಂದ ಮಾತ್ರಕ್ಕೆ ದಿಡೀರ್ ಪರಿಹಾರಕ್ಕೆ ಯಾವ ಮಂತ್ರ ದಂಡ ಯಾರ ಬಳಿಯೂ ಇಲ್ಲ ನಿಜ. ಆದರೆ ನಾವೀಗ ನಮ್ಮ ಪೂರ್ವಿಕರು ನಡೆದು ಬಂದ ಹಾದಿಯಲ್ಲಿ ನಾವು ಹಾದಿ ತಪ್ಪಿದ್ದು ಎಲ್ಲಿ ಎಂಬುದನ್ನ ಕಂಡುಕೊಳ್ಳುವುದರ ಮೂಲಕ ಉತ್ತರ ಹುಡಕಬೇಕಾಗಿದೆ. ನಮ್ಮನ್ನು ತಾಯಿಯಂತೆ ಪೋಷಿಸುತ್ತಿರುವ ನಿಸರ್ಗದಲ್ಲಿ, ಅದರ ಜೀವಜಾಲ ವ್ಯವಸ್ಥೆಯಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೆ ಪರಿಹಾರವಿದೆ. ಅದನ್ನು ಗ್ರಹಿಸುವ, ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಷ್ಟೆ. ನದಿ ನೀರು ಕಲ್ಮಶವಾಗದಂತೆ ಕಾಪಾಡುವ, ಪ್ರವಾಹವನ್ನು ನಿಯಂತ್ರಿಸುವ, ಹೂಳನ್ನು ತಡೆಗಟ್ಟುವ ಬಗ್ಗೆ ನಮ್ಮ ಪೂರ್ವಿಕರು ಅನುಕರಿಸುತಿದ್ದ ಪದ್ದತಿಗಳತ್ತ ನಾವು ಗಮನ ಹರಿಸಬೇಕಾಗಿದೆ.

ನದಿಯ ನೀರಿನ ಕಲ್ಮಶಕ್ಕೆ ಮೂಲ ಕಾರಣ ಮಳೆಯ ನೀರು. ಈ ನೀರು ನೆಲಕ್ಕೆ ಬಿದ್ದಾಗ ಭೂಮಿಯಲ್ಲಿ ಇಂಗಿ ಹೋಗದೆ ನೇರವಾಗಿ ನದಿಗೆ ಸೇರುತ್ತಿದೆ. ನದಿ ಪಾತ್ರದಲ್ಲಿದ್ದ ಅರಣ್ಯ, ಗಿಡ ಮರಗಳ ನಾಶ ಮತ್ತು ನೀರಿನ ತಾಣಗಳ (ಹೊಂಡ) ನಾಶದಿಂದಾಗಿ ನದಿಗಳ ಪ್ರವಾಹ, ಹೂಳು ತುಂಬುವಿಕೆಗೆ ಕಾರಣವಾಗಿದೆ. ಅರಣ್ಯ ಹಾಗೂ ನದಿಯ ಇಕ್ಕೆಲಗಳಲ್ಲಿ ಇರುತ್ತಿದ್ದ ಗಿಡ ಮರಗಳಿಂದ ಉದುರುತಿದ್ದ ಎಲೆಗಳು ಭೂಮಿಯಲ್ಲಿ ಶೇಖರಗೊಂಡು ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀರನ್ನು ಇಂಗಿಸುತಿದ್ದವು. ಗಿಡ ಮರಗಳ ಕೆಳಗೆ ಹತ್ತಿಯ ಹಾಸಿಗೆಯಂತಹ ಒಂದು ಪದರ  ನಿರ್ಮಾಣವಾಗುತ್ತಿತ್ತು. ಇದಕ್ಕೆ ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿಯದಂತೆ ತಡೆದು ಭೂಮಿಗೆ ನೀರುಣಿಸುವ ಸಾಮರ್ಥ್ಯವಿತ್ತು. ಅದೇ ರೀತಿ ನೀರಿನ ಹೊಂಡಗಳಲ್ಲಿ ಮಳೆ ನೀರು ಶೇಖರವಾಗಿ ಅಂತರ್ಜಲ ಹೆಚ್ಚಲು ಸಹಕಾರಿಯಾಗುತ್ತಿತ್ತು. ಜೊತೆಗೆ ನದಿಗಳ ದಡದ ಇಕ್ಕೆಲಗಳಲ್ಲಿ ಬೆಳೆದ ಗಿಡ ಮರಗಳ ಬೇರುಗಳು ಮಣ್ಣು ಕುಸಿದು ನದಿಗೆ ಸೇರದಂತೆ ತಡೆದು ಹಿಡಿದಿಟ್ಟುಕೊಳ್ಳುತ್ತಿದ್ದವು. ಪರಿಸರದ ಸ್ವಯಂಕೃತವಾದ ಈ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವಿದ್ದ ನಮ್ಮ ಪೂರ್ವಿಕರು ನಿಸರ್ಗದ ನೈಜ ಚಟುವಟಿಕೆಗೆ ಕೈ ಹಾಕದೇ ಹಾಗೇ ಪೋಷಿಸಿಕೋಡು ಬಂದಿದ್ದರು.

ಇಂದಿನ ಆಧುನಿಕ ಅಭಿವೃದ್ಧಿಯ ಅಂಧಯುಗದಲ್ಲಿ ನಗರೀಕರಣ ರಭಸದಿಂದ ಸಾಗುತ್ತಿರುವಾಗ, ನಿಸರ್ಗವಿರುವುದೇ ನಮಗಾಗಿ ಎಂಬ ಅಹಂಕಾರ ನಮ್ಮಲ್ಲಿ ಮನೆ ಮಾಡಿರುವಾಗ, ಅರಣ್ಯ, ನೀರಿನ ತಾಣ, ಗಿಡ ಮರ ಅವನತಿಯತ್ತಾ  ಸಾಗಿ ನದಿಗಳು ಈಗ ನಗರ ಪಟ್ಟಣಗಳ ಕೊಳಚೆ ನೀರನ್ನು ಸಾಗಿಸುವ ವ್ಯವಸ್ಥೆಗಳಾಗಿ ಮಾರ್ಪಟ್ಟಿವೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಪ್ರತಿಪಾದಿಸುವ ಸರ್ಕಾರಗಳು, ತಜ್ಞರು ನಮ್ಮ ಮುಂದಿಡುವ ವಾದವೆಂದರೆ, ನದಿಗಳ ಪ್ರವಾಹ ನಿಯಂತ್ರಣ ಮತ್ತು ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಇವರ ದೃಷ್ಟಿಯಲ್ಲಿ ಸಣ್ಣ ಮಟ್ಟದ ಜಲಾಶಯಗಳು ನಿಷ್ಪ್ರಯೋಜಕ. ನಿಸರ್ಗದ ಇತಿಹಾಸ ಬಲ್ಲವರು, ಅದರ ಚಟುವಟಿಕೆ ಅರ್ಥ ಮಾಡಿಕೊಂಡವರು ಆಧುನಿಕ ತಂತ್ರಜ್ಞಾನವನ್ನು ಒಪ್ಪುವುದಿಲ್ಲ. ಅಣೆಕಟ್ಟುಗಳ ಮೊದಲಿಗೆ ಇದ್ದ ನೀರಿನ ತಾಣಗಳು, ಅವು ಸಣ್ಣ ಸ್ವರೂಪದವುಗಳಾಗಿದ್ದು, ಕೊಳವಾಗಿರಲಿ, ಕೆರೆಯಾಗಿರಲಿ ಇವುಗಳ ಮಹತ್ವವನ್ನು ಅರಿಯದವರು ಮಾತ್ರ ದೊಡ್ಡ ಅಣೆಕಟ್ಟುಗಳ ಬಗ್ಗೆ ಮಾತನಾಡುತ್ತಾರೆ.

ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿಕೊಂಡು ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ ಇವುಗಳು ನೀರಿನ ಕಲ್ಮಶವನ್ನು ತಡೆಗಟ್ಟಿ ನದಿಗೂ ಪರಿಶುದ್ಧ ನೀರನ್ನು ಹರಿಯಬಿಡುತಿದ್ದವು. ಈಗಲೂ ಕೂಡ ಆಳವಾದ ನದಿಗಳ ದಡದಲ್ಲಿ ಈ ರೀತಿಯ ನೀರು ಜಿನುಗುವುದರ ಮೂಲಕ ನದಿ ಸೇರುವುದನ್ನು ನಾವು  ಕಾಣಬಹುದು. ಅರಣ್ಯ ನಾಶ ಕೇವಲ ಅಂತರ್ಜಲ ಕೊರತೆಗೆ ಮಾತ್ರ ಕಾರಣವಾಗಿಲ್ಲ, ಆಯಾ ಪ್ರದೇಶದಲ್ಲಿ ಬೀಳುತ್ತಿದ್ದ ಸರಾಸರಿ ಮಳೆಯ ಪ್ರಮಾಣದ ಕುಸಿತಕ್ಕೂ ಕಾರಣವಾಗಿದೆ. ಅರಣ್ಯ ಮತ್ತು ಗಿಡ ಮರಗಳ ನಾಶದಿಂದ ಭೂಮಿಯ ಮೇಲಿರುತಿದ್ದ ಎಲೆಗಳ ಹೊದಿಕೆ ನಾಶವಾಗಿ ಮಳೆಯ ನೀರಿಗೆ ಭೂಮಿಯ ಮೇಲ್ಪದರು ಕೊಚ್ಚಿ ಹೋಗಿ ನದಿಗೆ ಸೇರ್ಪಡೆಯಾಗುತ್ತಿದೆ. ಇದು ಪರೋಕ್ಷವಾಗಿ ನದಿಗಳಲ್ಲಿ ಹೂಳು ಶೇಖರವಾಗಲು ಕಾರಣವಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆಯಂದರೆ, ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಈಶಾನ್ಯ ಭಾರತದ ಚಿರಾಪುಂಜಿಯಲ್ಲಿ ವರ್ಷವೊಂದಕ್ಕೆ ಸರಾಸರಿ 900 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಅಲ್ಲಿನ ಅರಣ್ಯನಾಶದಿಂದಾಗಿ ಈಗ ಮಳೆಯ ಪ್ರಮಾಣ 400 ರಿಂದ 530 ಮಿಲಿ ಮೀಟರ್‌ಗೆ ಕುಸಿದಿದೆ.

ಅರಣ್ಯದಲ್ಲಿ ಬೆಳೆಯುತಿದ್ದ ದಟ್ಟವಾದ ಹುಲ್ಲು ಮಳೆ ನೀರಿಗೆ ಭೂಮಿಯ ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತಿತ್ತು. ಅರಣ್ಯ ಬರಿದಾದ ಮೇಲೆ ಮಳೆನೀರಿನ ಜೊತೆ ಹರಿಯುತ್ತಿರುವ ಮಣ್ಣು ನದಿಯ ಒಡಲು ಸೇರುತ್ತಿದೆ. ಜಗತ್ತಿನಾದ್ಯಂತ 1990ರ ದಶಕದಲ್ಲಿ ವರ್ಷವೊಂದಕ್ಕೆ ಒಂಬೈನೂರು ಕೋಟಿ ಟನ್ ಮಣ್ಣು ನದಿಗಳಿಗೆ ಸೇರ್ಪಡೆಯಗುತ್ತಿತ್ತು. ಈಗ ಅದರ ಪ್ರಮಾಣ ನಾಲ್ಕುವರೆ ಸಾವಿರ ಕೋಟಿ ಟನ್‌ಗೆ ಏರಿಕೆಯಾಗಿದೆ. ನದಿ ಮತ್ತು ಅದರ ನೀರಿನ ರಕ್ಷಣೆಗೆ ಇರುವ ಏಕೈಕ ಪರ್ಯಾಯವೆಂದರೆ, ಕೃಷಿನೀರಿನ ತಾಣ ಮತ್ತು ಅರಣ್ಯದ ರಕ್ಷಣೆ ಮಾತ್ರ.  ಇವುಗಳಿಂದಾಗಿ ಜೈವಿಕ ಪರಿಸರ ಸಮತೋಲನದಲ್ಲಿರುತ್ತದೆ. ಬಹುತೇಕ ಸರ್ಕಾರಗಳು ಕಾಯ್ದಿಟ್ಟ ಅರಣ್ಯ ಅಥವಾ ರಾಷ್ಡೀಯ ಉದ್ಯಾನವನ ಎಂಬ ಯೋಜನೆಯಡಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿವೆ. ಇವರನ್ನು ಹೊರಹಾಕುವ ಹಿಂದೆ ಮರಗಳ್ಳರ ಮಾಫಿಯ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರಣ್ಯಕ್ಕಾಗಲಿ, ಅಲ್ಲಿನ ಪರಿಸರ ಅಥವಾ ಪ್ರಾಣಿಗಳ ಬದುಕಿಗೆ ಧಕ್ಕೆಯಾಗದಂತೆ ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಶತಮಾನಗಳುದ್ದಕ್ಕೂ ಅದರ ರಕ್ಷಕರಂತೆ ಬಾಳಿದ್ದ ಇವರು ಈಗ ಅಕ್ಷರಶಃ ಅನಾಥರು. ಇವರನ್ನು ಅರಣ್ಯದಿಂದ ಹೊರ ಹಾಕಿದ ನಂತರ ಅರಣ್ಯ ಮತ್ತಷ್ಟು ನಾಶವಾಗಿದೆಯೇ ಹೊರತು ಉದ್ಧಾರವಾಗಿಲ್ಲ. ಈಗ ಭಾರತ ಸರ್ಕಾರ  ಅರಣ್ಯವಾಸಿಗಳಿಗೆ ಹಕ್ಕನ್ನು ದಯಪಾಲಿಸಿದ್ದು ಯಾವ ಸರ್ಕಾರಗಳೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅರಣ್ಯದ ಕಿರು ಉತ್ಪನ್ನಗಳ ಜೊತೆ ಜೀವಿಸುವ ಹಕ್ಕನ್ನು ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಇವರ ಅಭಿವೃದ್ಧಿಗಾಗಿ ಕಳೆದ ನಲವತ್ತು ವರ್ಷಗಳಿಂದಲೂ ದುಡಿಯುತ್ತಿರುವ ಡಾ. ಹೆಚ್. ಸುದರ್ಶನ್‌ರವರ ಪರಿಶ್ರಮವಿದೆ. ಇವರಂತೆ ಹಲವಾರು ಸಮಾಜ ಸೇವಕರು ಒರಿಸ್ಸಾ, ಮಧ್ಯಪ್ರದೇಶ, ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡುತಿದ್ದು, ಇವರಿಗೆ ದೆಹಲಿ ಮೂಲದ ಪರಿಸರಕ್ಕೆ ಮೀಸಲಾದ “ಡೌನ್ ಟು ಅರ್ಥ್” ಮಾಸಪತ್ರಿಕೆ ಬೆನ್ನೆಲುಬಾಗಿ ನಿಂತಿದೆ.

ಭೂಮಿಯ ಮೇಲಿನ ಮಣ್ಣಿನ ಪದರು ನಾಶವಾಗದಂತೆ ತಡೆಗಟ್ಟಲು ನಮ್ಮ ಪೂರ್ವಿಕರು ಅನುಸರಿಸುತಿದ್ದ ಸಾಂಪ್ರದಾಯಿಕ ದೇಶಿ ಕೃಷಿ ಪದ್ಧತಿ ಇವತ್ತಿಗೂ ನಮಗೆ ಮಾದರಿಯಾಗಬಲ್ಲದು. ಈ ಪದ್ಧತಿಯಲ್ಲಿ ರೈತರು ಬೇಸಾಯದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಋತುಮಾನಗಳಿಗೆ ಅನುಗುಣವಾಗಿ ಬೆಳೆಯುತ್ತಿದ್ದರಿಂದ ಭೂಮಿಯ ಫಲವತ್ತತೆಯ ಜೊತೆಗೆ ಮಣ್ಣು ಕೊಚ್ಚಿ ಹೋಗದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬೇರುಗಳು ತಡೆಯುತ್ತಿದ್ದವು. ಗುಡ್ಡಗಾಡು ಇಲ್ಲವೆ ಇಳಿಜಾರು ಪ್ರದೇಶದಲ್ಲಿ ಕೃಷಿಕರು ಭೂಮಿಯನ್ನು ಹಂತ ಹಂತವಾಗಿ ಮೆಟ್ಟಿಲುಗಳ ಆಕಾರದಲ್ಲಿ ವಿನ್ಯಾಸಗೊಳಿಸಿ ಬೇಸಾಯ ಮಾಡುತ್ತಿದ್ದುದ್ದರಿಂದ ಮಳೆನೀರು ಬಿದ್ದ ಸ್ಥಳದಲ್ಲೇ ಭೂಮಿಗೆ ಸೇರುತಿತ್ತು.

ದೇಶಿ ಕೃಷಿ ಪದ್ಧತಿಯಲ್ಲಿ ರೈತರು ಸಾವಯವ ರೀತಿಯನ್ನು ಅಳವಡಿಸಿಕೊಂಡು ಯಾವುದೇ ರಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುತ್ತಿರಲಿಲ್ಲ. ಇದರಿಂದಾಗಿ ಜೈವಿಕ ಜೀವಜಾಲಕ್ಕೆ, ಮತ್ತು  ಬೆಳೆಗಳಿಗೆ ಆವರಿಸುತ್ತಿದ್ದ ಕೀಟಗಳ ಭಕ್ಷಣೆಗೆ ಬರುತಿದ್ದ ಪಕ್ಷಿ ಪ್ರಭೇದಗಳಿಗೆ ತೊಂದರೆಯಾಗುತ್ತಿರಲಿಲ್ಲ. ಇಂತಹ ಕೃಷಿ ಪದ್ಧತಿಯನ್ನು ನಾವು ಇಂದಿಗೂ ಗುಡ್ಡಗಾಡು ಪ್ರದೇಶದ ಅರಣ್ಯವಾಸಿಗಳಲ್ಲಿ ಕಾಣಬಹುದು. ಅವರು ಒಂದು ಪ್ರದೇಶದಲ್ಲಿ ಬೆಳೆ ತೆಗೆದ ನಂತರ ಆ ಭೂಮಿಯನ್ನ ವರ್ಷಗಟ್ಟಲೆ ಹಾಗೆ ಬಿಟ್ಟು ಬೇರೊಂದು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಇದು ಭೂಮಿಯ ಫಲವತ್ತತೆ ಕಾಪಾಡಲು ಅವರು ಅನುಕರಿಸುತ್ತಿದ್ದ ತಂತ್ರ.

ಆಧುನಿಕ ಯುಗದಲ್ಲಿ ರೂಪುಗೊಳ್ಳುತ್ತಿರುವ ಜಲಾಶಯಗಳು, ನೀರಾವರಿ ಕಾಲುವೆಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಕೊಂದು ಹಾಕಿದವು. ನಮ್ಮ ಸರ್ಕಾರಗಳು ರೈತರನ್ನು ಒಂದೇ ರೀತಿಯ ಬೆಳೆ ತೆಗೆಯುವಂತೆ ಒತ್ತಾಯಿಸುತ್ತಿವೆ. ರೈತರೂ ಸಹ ಹಣದ ಆಸೆಗೆ ಬಲಿ ಬಿದ್ದು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಅರಣ್ಯ, ನದಿ, ಮಳೆ, ಭೂಮಿ, ನೀರು, ಜೈವಿಕ ವೈವಿಧ್ಯ ಇವೆಲ್ಲವೂ ಒಂದಕ್ಕೊಂದು ಸರಪಳಿಯಂತೆ ಬೆಸೆದುಕೊಂಡಿದ್ದು ಒಂದು ಕೊಂಡಿ ಕಳಚಿಕೊಂಡರೆ, ಇಡೀ ವೈವಸ್ಥೆಯೆ ಕುಸಿದು ಬೀಳುವ ಸ್ಥಿತಿ. ಈ ಸೂಕ್ಷವನ್ನು ರೈತರು, ನೀರಾವರಿ ತಜ್ಙರು ಕೃಷಿವಿಜ್ಞಾನಿಗಳು ಅರಿಯಬೇಕಾಗಿದೆ.

ಪ್ರವಾಹ ನಿಯಂತ್ರಣದ ನೆಪದಲ್ಲಿ ಅಣೆಕಟ್ಟುಗಳ ಮೂಲಕ ನದಿಗಳನ್ನು ನಿಯಂತ್ರಿಸಲು ಹೊರಟಿರುವ ಆಧುನಿಕ ನೀರಾವರಿ ತಜ್ಞರು ನದಿಗಳ ಪ್ರವಾಹದ ಜೊತೆ ಬದುಕು ಸಾಗಿಸುತ್ತಿರುವ ಜನತೆಯ ಕಾರ್ಯವಿಧಾನ, ಅವರ ಕೃಷಿ ಚಟುವಟಿಕೆಗಳನ್ನು ಗಮನಿಸಬೇಕಾಗಿದೆ. ನದಿಗಳನ್ನು ಮಣಿಸಬೇಕೆ? ಅಥವಾ ಬೇಡವೆ? ಇದು ಇವತ್ತಿನ ಪ್ರಶ್ನೆಯಲ್ಲ, ಅದು ಶತಮಾನಗಳ ಉದ್ದಕ್ಕೂ ಮನುಕುಲವನ್ನು ಕಾಡಿರುವ ಪ್ರಶ್ನೆ. ಚೀನಾದ ಪ್ರಸಿದ್ಧ ಚಿಂತಕ ಚಿಯೊಜಂಗ್ ಎಂಬಾತ ನದಿಗಳ ಕುರಿತು ಈ ರೀತಿ ಬಣ್ಣಿಸಿದ್ದಾನೆ: “ನದಿಗಳೆಂದರೆ ಮಗುವಿನ ಬಾಯಿ ಇದ್ದಂತೆ. ಅದನ್ನು ಮುಚ್ಚಲು ಹೊರಟರೆ ಕರ್ಕಶ ಶಬ್ದ ಕೇಳಬೇಕು, ಇಲ್ಲವೇ ಉಸಿರುಗಟ್ಟಿ ಸಾಯುವುದನ್ನು ನೋಡುವುದಕ್ಕೆ ಸಿದ್ದವಾಗಿರಬೇಕು.”

ಚೀನಾದಲ್ಲೂ ಕೂಡ ನದಿಗಳನ್ನು ಪ್ರವಾಹದ ನೆಪದಲ್ಲಿ ಮಣಿಸಲು ಹೊರಟಾಗ ನಡೆದ ಪರ-ವಿರೋಧಗಳ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ನದಿಗಳು ಪ್ರವಾಹದ ಸಂದರ್ಭದಲ್ಲಿ ತುಂಬಿ ಹರಿದು ಇಕ್ಕೆಲಗಳ ಒಣಭೂಮಿಗೆ ನೀರು ಉಣಿಸುವುದರಿಂದ ತೇವಾಂಶಭರಿತ ಭೂಮಿಯಲ್ಲಿ ಅಲ್ಪಾವಧಿಯ ಬೆಳೆ ತೆಗೆಯುವ ಕಲೆಯನ್ನು ನಮ್ಮ  ಪೂರ್ವಿಕರು ಕರಗತ ಮಾಡಿಕೊಂಡಿದ್ದರು. ಇದು ಜಗತ್ತಿನ ನಾಗರೀಕತೆಯ ಇತಿಹಾಸದಿಂದ ಹಿಡಿದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಹದ ನದಿಗಳಿರುವ ನಮ್ಮ ನೆರೆಯ ಬಾಂಗ್ಲಾ ದೇಶದಲ್ಲಿ ಮೇಘನಾ, ಬ್ರಹ್ಮಪುತ್ರ, ಗಂಗಾನದಿಗಳ  ಪ್ರವಾಹದ ಜೊತೆ ಅಲ್ಲಿ ಜನರ ಸಾಹಸಮಯ ಬದುಕು ಕುತೂಹಲಕಾರಿಯಾಗಿದೆ. ಪ್ರವಾಹ ಬರುವ ಮುನ್ನವೇ ನದಿಯ ಪಾತ್ರದಲ್ಲಿ 5 ರಿಂದ 8 ಅಡಿ ಎತ್ತರ ಬೆಳೆಯುವ ದೇಶಿ ಬತ್ತದ ಬೀಜವನ್ನು ಬಿತ್ತುತ್ತಾರೆ. ಪ್ರವಾಹ ಇಳಿಮುಖವಾದ ನಂತರ ಫಸಲನ್ನು ಪಡೆಯುತ್ತಾರೆ. ಅದೇ ತೇವ ಭರಿತವಾದ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳಾದ ಕಲ್ಲಂಗಡಿ, ಸೌತೆ. ಹಾಗೂ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ.

1850 ರಿಂದಲೂ ಸಹ ಅಮೇರಿಕಾದ ಮಿಸಿಸಿಪ್ಪಿ ನದಿ ಪ್ರಾಂತ್ಯದಲ್ಲಿ ಪ್ರವಾಹ ನಿಯಂತ್ರಣದ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಅಣೆಕಟ್ಟುಗಳು ಅಥವಾ ನೀರಾವರಿ ಕಾಲುವೆಗಳು ಇವುಗಳಿಂದ ದೂರವಾಗಿ ಒಣಭೂಮಿಯಲ್ಲಿ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು ಶೇ.70 ರಷ್ಟು ಜನ ಬೇಸಾಯ ಮಾಡುತಿದ್ದಾರೆ.

ಆಪ್ರಿಕಾದ ಸಹರಾ ಮರುಭುಮಿಯ ಕನಿಷ್ಟ ಮಳೆ ಬೀಳುವ ಪ್ರದೇಶದಲ್ಲಿ ಹುಲ್ಲುಗಾವಲನ್ನು ಆಶ್ರಯಿಸಿಕೊಂಡು ಜಾನುವಾರು ಸಾಕಿಕೊಂಡು ಕಡಿಮೆ ಮಳೆ ಮತು ಉಷ್ಣವನ್ನು ಸಹಿಸಿಕೊಳ್ಳುವ ಶಕ್ತಿಯುಳ್ಳ ಕಿರುಧಾನ್ಯಗಳನ್ನು ಬೆಳೆದು ಜನರು ಜೀವನ ಸಾಗಿಸುತ್ತಿದ್ದಾರೆ. ಚೀನಾದ ಮಂಗೋಲಿಯ ಪ್ರಾಂತ್ಯದಲ್ಲೂ ಕೂಡ ಇಂತಹದೇ ಬದುಕನ್ನು ನಾವು ಕಾಣಬಹುದು. ಋತುಮಾನಗಳಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಈ ಜನತೆ ವಲಸೆ ಹೋಗುವುದುಂಟು. ಜೊತೆಗೆ ತಾವು ವಾಸಿಸುವ ಸ್ಥಳದಲ್ಲಿ ಬೀಳುವ ಅಲ್ಪ ಮಳೆಯನ್ನು ಸಂಗ್ರಹಿಸಿ ಜೀವನ ಸಾಗಿಸುವ ಕಲೆಯನ್ನೂ ಇವರು ಬಲ್ಲರು.

ಭಾರತದ ರಾಜಸ್ಥಾನ, ಗುಜರಾತ್, ದಕ್ಷಿಣ ಇಸ್ರೇಲ್ ಭಾಗದ ನೆಬೇಟಿಯನ್ ಜನಾಂಗ ಮಳೆ ನೀರು ಸಂಗ್ರಹದಲ್ಲಿ ಸಿದ್ಧಹಸ್ತರು. ಇಸ್ರೇಲ್ ಜನತೆ ಮಳೆನೀರು ಆಧಾರಿತ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾವಿರದ ಮುನ್ನೂರು ವರ್ಷಗಳ ಇತಿಹಾಸವಿದೆ. ಈ ಪ್ರದೇಶದಲ್ಲಿ ಕನಿಷ್ಟ ನೂರು ಮಿಲಿ ಮೀಟರ್ ಮಳೆ ಬಿದ್ದರೂ ಇಲ್ಲಿನ ಜನ ಬೇಸಾಯ ಮಾಡಬಲ್ಲರು. ಜಗತ್ತಿಗೆ ಹನಿ ನೀರಾವರಿ ಪದ್ಧತಿ ಪರಿಚಯಿಸಿದ ಕೀರ್ತಿ ಇಲ್ಲಿನ ಜನತೆಗೆ ಸಲ್ಲುತ್ತದೆ.

ಎರಡು ಸಾವಿರ ವರ್ಷಗಳ ಹಿಂದೆ ಅಮೇರಿಕಾದ ನೈರುತ್ಯ ಭಾಗದ ಎತ್ತರ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆ ನೀರನ್ನು ಮಣ್ಣಿನ ಕೊಳವೆ ಮೂಲಕ ಕೆಳಗಿನ ಪ್ರದೇಶಕ್ಕೆ ಸಾಗಿಸಿ ಅಲ್ಲಿನ ಮೂಲನಿವಾಸಿಗಳು ಬೇಸಾಯ ಮಾಡುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಈ ಪದ್ಧತಿಗೆ ಅಲ್ಲಿನ ಜನ ಅನ್ಸೀಜಿ ಎಂದು ಕರೆಯುತಿದ್ದರು. ( ಸ್ಥಳೀಯ ಭಾಷೆಯಲ್ಲಿ ಪ್ರಾಚೀನವಾದದು ಎಂದರ್ಥ.)

ಆಪ್ರಿಕಾದ ಜನತೆ ಮೂರು ಸಾವಿರ ವರ್ಷಗಳ ಹಿಂದೆ ನದಿ ತೀರದಲ್ಲಿ 12 ರಿಂದ 15 ಅಡಿ ಎತ್ತರ ಬೆಳೆಯುತ್ತಿದ್ದ ಭತ್ತದ ಬೇಳೆ ತೆಗೆಯುತಿದ್ದರು. ಇತ್ತೀಚಿಗಿನ 10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲೂ 6 ಅಡಿ ಎತ್ತರದ ಭತ್ತದ ಬೆಳೆ ತೆಗೆಯುವ ಪದ್ಧತಿ ಚಾಲ್ತಿಯಲ್ಲಿತ್ತು.

ಭಾರತದ ರಾಜಸ್ಥಾನದ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ವೈವಿಧ್ಯಮಯ ವಿಧಾನಗಳಿವೆ. ರಾಜಸ್ಥಾನದ ಜೋಧಪುರ, ಜೈಪುರ, ಜೈಸಲ್ಮೇರ್, ಉತ್ತರ ಪ್ರದೇಶದ ಗ್ವಾಲಿಯರ್, ಮಹರಾಷ್ಟ್ರದ ಔರಂಗಬಾದ್, ದೌಲತಬಾದ್ ಮುಂತಾದ ನಗರಗಳ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೋಟೆಗಳಲ್ಲಿ ಅಂದಿನ ರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿದ್ದ ವ್ಯವಸ್ಥೆಗಳು ಇಂದಿಗೂ ನಮಗೆ ಮಾದರಿಯಾಗಬಲ್ಲವು.

ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಕಾಡೀಸ್ ಎಂಬ ಪದ್ಧತಿಯಲ್ಲಿ ಇಳಿಜಾರು ಪ್ರದೇಶದಲ್ಲಿ 4 ರಿಂದ  5ಅಡಿ ಎತ್ತರದ ದಿಬ್ಬಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ಬೇಸಾಯ ಮಾಡುವ ವೃತ್ತಿ ಈಗಲೂ ಚಾಲ್ತಿಯಲ್ಲಿದೆ. ಮಳೆನೀರಿಗೆ ಕೊಚ್ಚಿಹೋಗದಂತೆ ದಿಬ್ಬಗಳ ಮೇಲೆ ಗಿಡ ಮರಗಳನ್ನು ಬೆಳಸಿರುವುದರಿಂದ ಒಂದಿಷ್ಟು ಹಸಿರು ಸಹ ಕಾಣತೊಡಗಿದೆ.

1970 ರಲ್ಲಿ ಈ ಪ್ರದೇಶಕ್ಕೆ ಇಂದಿರಾಗಾಂಧಿ ನಾಲುವೆ ಹರಿದ ಪ್ರಯುಕ್ತ ರೈತರು ತಮ್ಮ ದೇಶಿ ಕೃಷಿ ಕೈಬಿಟ್ಟರು. ಮತ್ತೇ 1986 ರಿಂದ ರೈತರು ದೇಶಿ ಕೃಷಿ ನೀರಾವರಿ ಪದ್ಧತಿಗೆ ಒಲವು ತೋರಿದ್ದು, ಸಹಕಾರ ತತ್ವದಡಿ ನದಿಗಳಿಗೆ ಸಣ್ಣ ಮಟ್ಟದ ಅಣೆಕಟ್ಟುಗಳನ್ನು ಸ್ವಂತ   ಖರ್ಚಿನಲ್ಲಿ ನಿರ್ಮಿಸಿಸಕೊಂಡು 100 ರಿಂದ 250 ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ಪರಿಸರ ಪ್ರೇಮಿ ಹಾಗೂ ನೈಸ ರ್ಗಿಕ ನೀರಿನ ತಜ್ಞ ಡಾ. ರಾಜೇಂದ್ರಸಿಂಗ್ ನೇತೃತ್ವದಲ್ಲಿ ಅಲ್ಲಿನ ರೈತರು ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ.

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ

-ಭೂಮಿ ಬಾನು

ಸಿಂಧಗಿಯ ಬಸ್ ಕಂಡಕ್ಟರ್ ಅಂಬಣ್ಣ ಎಂ. ದಾವಲರ್ ತನ್ನ ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ರಾಜ್ಯಪಾಲರಿಗೆ ಹಿಂತಿರುಗಿಸಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿರುವ ಇವರು ಕರ್ನಾಟಕ ಲೋಕಸೇವಾ ಆಯೋಗದಿಂದ ತಮಗೆ ಅನ್ಯಾಯವಾಗಿದೆ, ಅರ್ಹತೆ ಇದ್ದರೂ ಉಪನ್ಯಾಸಕ ಹುದ್ದೆ ಸಿಗಲಿಲ್ಲ ಎಂದು ಬೇಸತ್ತು ‘ಇನ್ಯಾಕೆ ಈ ಪ್ರಮಾಣಪತ್ರಗಳು’ ಎಂದು ವಿಶ್ವವಿದ್ಯಾನಿಲಯದ ಕುಲಾಧಿಪಾತಿಗಳಾದ ರಾಜ್ಯಪಾಲರಿಗೆ ರವಾನಿಸಿದ್ದಾರೆ.

ಅರ್ಹತೆಗೆ ತಕ್ಕಂತೆ, ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ ಎನ್ನುವುದು ಅವರ ವಾದ. ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ.

ಆಯೋಗದ ಭ್ರಷ್ಟಾಚಾರ, ಸರಕಾರದ ನಿಲುವುಗಳ ಬಗ್ಗೆ ಬೇಸತ್ತು ಈ ಅಭ್ಯರ್ಥಿ ಈ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಸ್ಪಷ್ಟ.

ಅಂಬಣ್ಣ ಇತಿಹಾಸ ವಿಭಾಗದ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ್ದರು. ಇವರಿಗೆ ಪಿಎಚ್‍ಡಿ ಇದ್ದರೂ, ಕೇವಲ ಎಂಫಿಲ್ ಪದವಿ ಗಳಿಸಿದ್ದವರಷ್ಟೆ ಆಯ್ಕೆಯಾದರು. ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಆಯ್ಕೆಯಾದ ಅನೇಕರು ಬೋಗಸ್ ಎಂಫಿಲ್ ಪಡೆದಿದ್ದಾರೆ ಎಂದು ನೇರಾನೇರ ಮಾಧ್ಯಮಗಳಿಗೆ ಹಲವು ಬಾರಿ ಹೇಳುತ್ತಿದ್ದರು. ಆದರೂ ಅವರೆಲ್ಲರ ಆಯ್ಕೆಯನ್ನು ತಡೆಯಲು ದಿಟ್ಟ ಕ್ರಮ ಕೈಗೊಳ್ಳಲಿಲ್ಲ. ಅರ್ಥಾತ್ ಸರಕಾರ ಅನರ್ಹರು ಲಾಬಿ, ಹಣದ ಕಾರಣಗಳಿಗಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಗೊತ್ತಿದ್ದರೂ ಸುಮ್ಮನಿತ್ತು.

ಹಣ ಅಥವಾ ಪ್ರಭಾವ ಇಲ್ಲದವರು ಕೆಪಿಎಸ್‌ಸಿ ಮೂಲಕ ನಡೆಯುವ ಯಾವ ಹುದ್ದೆಗೂ ಆಯ್ಕೆಯಾಗಲು ಸಾಧ್ಯವಿಲ್ಲ ಎನ್ನುವುದು ಜನಜನಿತ. ಈ ಬಗ್ಗೆ ಒಂದಿಷ್ಟು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಪ್ರಯತ್ನಗಳೇ ನಡೆಯಲಿಲ್ಲ.

ಅಂಕಪಟ್ಟಿಯ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯುತ್ತಾರೆ. ನಂತರ ಸಂದರ್ಶನ ವೇಳೆ ಎಷ್ಟು ಅಂಕ ಕೊಟ್ಟರೆ ಆಯ್ಕೆಯಾಗುತ್ತಾರೆ ಅಥವಾ ಆಗುವುದಿಲ್ಲ ಎನ್ನುವ ಲೆಕ್ಕಾಚಾರದ ಮೇಲೆ ಅಂಕಗಳು ನಿಗದಿಯಾಗುತ್ತವೆ. ಹಾಗಾಗಿ ಅನೇಕ ಬಾರಿ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದರೂ, ಸಂದರ್ಶನದಲ್ಲಿ ಅವರ ಗಳಿಕೆ ಎರಡು ಅಥವಾ ಮೂರು ಆಗಿರುತ್ತದೆ. ಅದೇ ರೀತಿ ಕೆಲವರು ಆಶ್ಚರ್ಯಕರ ರೀತಿಯಲ್ಲಿ ಪೂರ್ತಿ ಅಂಕ ಪಡೆದಿರುತ್ತಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳಾಗದಿದ್ದರೆ ಇಂತಹ ಬೇಸರ, ಸಿಟ್ಟುಗಳಿಗೆ ಕೊನೆಯಿಲ್ಲ.

ಹೀಗೆ ಅನ್ಯಮಾರ್ಗಗಳ ಮೂಲಕ ಆಯ್ಕೆಯಾದವರು ಅದ್ಯಾವ ಪರಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದು ಅಧ್ಯಯನ ಯೋಗ್ಯ. ತಮಗೆ ನಿಗದಿಯಾಗಿರುವ ಗಂಟೆಗಳ ಕಾಲ ಹೇಗೋ ಟೈಮ್ ಪಾಸ್ ಮಾಡಿದರಷ್ಟೆ ಸಾಕು ಎನ್ನುವ ಮನೋಭಾವ ಕೆಲವರಲ್ಲಿದೆ. ಕಾಲೇಜಿಗೆ ಬರುವುದೇ ತಡ. ತಡವಾಗಿ ಬಂದರೂ, ಬೇಗ ಮನೆ ಸೇರುವ ತವಕ. ಹೊಸತನ್ನು ಓದಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಉತ್ಸಾಹವೇ ಇಲ್ಲ. ಅವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.