Daily Archives: January 19, 2012

ಪರಾವಲಂಬಿ ಜೀವಿಗಳ ವಿವೇಕಾನಂದ ಮತ್ತು ಭಾರತಮಾತೆ…

-ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಒಂದು ವರ್ಗವಿದೆ. ಅವರನ್ನು ನೀವು ಕೆಲವೊಂದು ವಿಷಯಗಳನ್ನು ಮಾತನಾಡದಂತೆ ನಿರ್ಬಂಧಿಸಿಬಿಡಿ. ಬದುಕುವುದಕ್ಕಾಗಿ ಅನ್ನ ದುಡಿಯಲಾರದೆ ಸಾಯುತ್ತವೆ ಅವು. ದೇಶ, ಮತ, ದೇವರು, ಇಂತಹುಗಳನ್ನು ಅನ್ನ ದುಡಿಯುವುದಕ್ಕಾಗಿಯೇ ಬಳಸಿಕೊಳ್ಳುವ ಈ ಮೂಲಭೂತವಾದಿಗಳು ನಿಮಗೆ ಎಲ್ಲಾ ದೇಶಗಳಲ್ಲಿ, ಮತಗಳಲ್ಲಿ ಸಿಗುತ್ತಾರೆ.

ಈಗ ಅಂತಹುದೇ ಪರಾವಲಂಬಿ ಜೀವಿಗಳಿಗೆ, ಹಿಂದು ಮತದವರೆಂದು ಹೇಳಿಕೊಳ್ಳುವ ಈ ಕಷ್ಟಪಟ್ಟು ದುಡಿಯಲಾರದ ಕರ್ನಾಟಕದ ಒಂದು ವರ್ಗಕ್ಕೆ ಸೋಮವಾರ ದಿನೇಶ ಅಮಿನ್‌ಮಟ್ಟುರವರ ಲೇಖನ ಓದಿದಂದಿನಿಂದ ತಮ್ಮ ಜೀವನನಿರ್ವಹಣೆಯ ಅವಕಾಶವನ್ನೇ ಕಿತ್ತುಕೊಂಡಂತಹ ಭಯ ಆವರಿಸಿದೆ. ಹಾಗಾಗಿ ಪ್ರತಿಭಟನೆಯನ್ನು ಮಾಡಿಸುತ್ತಿದ್ದಾರೆ, ಮಾಡುತ್ತಿದ್ದಾರೆ.

ನನ್ನಂತಹವನಿಗೆ, ಹಾಗೂ ನನ್ನ ಅನೇಕ ಸಮಾನಮನಸ್ಕರಿಗೆ ಆ ಲೇಖನದಲ್ಲಿ ಆಕ್ಷೇಪಿಸುವಂತಹುದು ಏನೂ ಇರಲಿಲ್ಲ. ಆದರೆ ಇದನ್ನು ಕೋಮುವಾದಿಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನನಗನ್ನಿಸುವ ಪ್ರಕಾರ ಇದೇ ಲೇಖನವನ್ನು ಚಾಚೂ ಬದಲಾಯಿಸದೆ ಒಬ್ಬ ಅಪ್ರಬುದ್ಧ ಹಿಂದುತ್ವವಾದಿ ಲೇಖಕನೊಬ್ಬನ ಹೆಸರಿನಲ್ಲಿ ಪ್ರಕಟಿಸಿದ್ದರೆ, ನಿಜಕ್ಕೂ ಆತನ ವಿರುದ್ಧ ಒಂದೇ ಒಂದು ಮಾತನ್ನು ಈ ಬಳಗ ಆಡುತ್ತಿರಲಿಲ್ಲ. ಬದಲಿಗೆ ಕೊಂಡಾಡುತ್ತಿದ್ದರು. ಸಮಾಜ ಸುಧಾರಣೆಯ ಕೆಲಸ ಎನ್ನುತ್ತಿದ್ದರು. ಮತ್ತು ಅದು ಅಲ್ಲಿಗೇ ಕೊನೆಯಾಗುತ್ತಿತ್ತು. ಹಾಗಾಗಿ ನನಗನ್ನಿಸುವುದು ಇದು ವಿಚಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಬದಲಿಗೆ ಯಾರು ಹೇಳುತ್ತಿದ್ದಾರೆ ಎನ್ನುವುದು. ಯಾಕೆಂದರೆ, ದಿನೇಶರ ಬದಲಿಗೆ ಬೇರೊಬ್ಬರು, ಕನ್ನಡದ ಬೇರೆ ಯಾವುದೇ ದಿನಪತ್ರಿಕೆಯಲ್ಲಿ ಹೇಳಿದ್ದರೆ, ಅದು ಅನಪಾಯಕಾರಿಯೂ, ಸ್ವಹಿತಾಸಕ್ತಿಗೆ ಪೂರಕವೂ ಆಗಿರುತ್ತಿತ್ತು. ಆದರೆ ಪ್ರಸ್ತುತ ಲೇಖಕ, ಲೇಖನ, ಮತ್ತು ಅದು ಪ್ರಕಟವಾಗಿರುವ ಪ್ರಜಾವಾಣಿ ಪತ್ರಿಕೆ, ಈ ಕಾಂಬಿನೇಶನ್ ದೀರ್ಘಕಾಲೀನವಾದ ಮತ್ತು ಶಾಶ್ವತವಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಕಂಡು ಮೇಲಿನ ಪರಾವಲಂಬಿ ಜೀವಿಗಳು ಗಾಬರಿ ಬಿದ್ದಿರುವುದು.

ಎಷ್ಟೆಲ್ಲ ಓದಿದರೂ ಈ ಭೂಮಿ, ಸೂರ್ಯ, ಜೀವ, ಜೀವವಿಕಾಸ, ಮಾನವ ವಿಕಾಸ, ಇವುಗಳೆಲ್ಲ ಅರ್ಥವೇ ಆಗಿರದ ಅಥವ ಓದಿಯೇ ಇಲ್ಲದ ಜನರೇ ನಮ್ಮ ಮಧ್ಯೆ ಇದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸುವುದು ವೈಜ್ಞಾನಿಕ ತಿಳಿವಿನ ಮೂಲಕ ಅಲ್ಲ. ಬದಲಿಗೆ ಪುರಾಣಗಳ, ವೇದಾಂತ ಪ್ರವಚನಗಳ, ವೈರಾಗ್ಯ ಬೋಧಕರ, ಜ್ಯೋತಿಷಿಗಳ, ಮುಠ್ಠಾಳರ ಮೂಲಕ. ಗಿಣಿಶಾಸ್ತ್ರ ಹೇಳುವವರಿಗೆ, ಕವಡೆ-ನಾಡಿ ಶಾಸ್ತ್ರದವರಿಗೆ, ಭಯ ಹುಟ್ಟಿಸುವ ಜ್ಯೋತಿಷಿಗಳಿಗೆ, ದೇವಾಲಯದ ಪೂಜಾರಿಗಳಿಗೆ, ಯಾಗ ಮಾಡುವವರಿಗೆ, ಇದು ಸುಭಿಕ್ಷ ಕಾಲ.

ಈ ವರ್ಗದ ಮುಂದುವರೆದ ಅವತಾರಗಳೇ ವಿವೇಕಾನಂದರನ್ನು ಮತ್ತು ಭಾರತಮಾತೆಯನ್ನು ತಮ್ಮ ಜೀವನ ನಿರ್ವಹಣೆಗೆ ಮಾರ್ಗ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳು. ಇವರಿಗೆ ಭಾರತದ ಜನತೆಯ ಮೇಲಿರುವ ಪ್ರೀತಿಗಿಂತ ನೂರ್ಮಡಿ ಹೆಚ್ಚಿನ ಪ್ರೀತಿ ಅಖಂಡ ಭಾರತದ ಭೂಪಟದ ಮೇಲಿದೆ. ದೇಶ ಎಂದರೆ ಅಲ್ಲಿರುವ ಜನಗಳು ಮತ್ತು ಅವರ ಯೋಗ್ಯತೆ ಚಾರಿತ್ರ್ಯ ಎನ್ನುವುದಕ್ಕಿಂತ ಅದರ ಭೌಗೋಳಿಕ ರೂಪ ಎನ್ನುವುದೇ ಇವರ ಭಾವನೆ. ಈಡಿಯಟ್ಸ್.

ನೆನ್ನೆ ಬೆಂಗಳೂರಿನ ಪ್ರಜಾವಾಣಿ ಕಚೇರಿಯ ಮುಂದೆ ನೆರೆದಿದ್ದ, ಸ್ವಯಂಪ್ರೇರಣೆಯಿಂದ ಬಂದವರೇ ಹೆಚ್ಚು ಇದ್ದ, ಹಿರಿಯರು, ಹೆಂಗಸರು, ಕುಂಕುಮಧಾರಿ ಯುವಕರು. ಪ್ರವಚನಕಾರರು, ರಜೆ ಹಾಕಿ ಬಂದಿದ್ದ ವೃತ್ತಿಪರರು, ಬೇರೆಬೇರೆ ಊರುಗಳಿಂದ ಬಂದಿದ್ದ ಜನರನ್ನೆಲ್ಲ ನೋಡಿ ನನಗೆ ಈ ದೇಶದ ಭವಿಷ್ಯದ ಬಗೆಗಿನ ಆಶಾಭಾವನೆ ಒಂದಷ್ಟು ಮುರುಟಿತು. ಅಸಹನೆ, ಕುರುಡುಭಕ್ತಿ, ಮೌಢ್ಯತೆ, ಕೋಮುವಾದ, ಅವೈಜ್ಞಾನಿಕತೆ, ಅವೈಚಾರಿಕತೆ, ಎದೆಯಿಂದ ಎದೆಗೆ ಹರಿಯುತ್ತಿದೆ, ಸತತ. ಒಂದು ಲೇಖನದ ಆಶಯವನ್ನು ಗ್ರಹಿಸಲಾರದ ವಿದ್ಯಾವಂತರು, ವೈಚಾರಿಕತೆಯನ್ನು ಸಾಧಿಸಲಾಗದ ನಮ್ಮ ಶಿಕ್ಷಣ ಪದ್ದತಿ, ದಾರಿತಪ್ಪಿಸಲು ಬೀದಿಗೊಬ್ಬರಂತೆ ಎದ್ದು ನಿಂತಿರುವ ಜನ; ಇವೆಲ್ಲ ನಮ್ಮನ್ನು ಎತ್ತ ಒಯ್ಯಲಿದೆಯೊ?

ಇವುಗಳಿಗೆ ಸಾಮಾಜಿಕ-ರಾಜಕೀಯ ಪರ್ಯಾಯವೊಂದನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಳ್ಳಲಾಗದೆ ಹೋದರೆ…

Almatti-Dam

ಜೀವನದಿಗಳ ಸಾವಿನ ಕಥನ – 20

ಡಾ. ಎನ್. ಜಗದೀಶ್ ಕೊಪ್ಪ

“ಹಸಿರು ಕ್ರಾಂತಿ ಯೋಜನೆಯಡಿ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಂಡಿರುವ ಕೃಷಿ ಚಟುವಟಿಕೆಗಳಾಗಲಿ, ಅಥವಾ ನೀರಾವರಿ ಯೋಜನೆಗಳಾಗಲಿ ತಮ್ಮ ಮೂಲಭೂತ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಹಸಿವು ಇಂದಿಗೂ ತಾಂಡವವಾಡುತ್ತಿದೆ.” ಇವು ಎರಡು ದಶಕದ ಹಿಂದೆ ನೈಸರ್ಗಿಕ ಕೃಷಿ ಆಂದೋಲನದಲ್ಲಿ ಕೇಳಿ ಬಂದ ಮಾತುಗಳು. ದುರಂತವೆಂದರೆ, ಹಸಿವು ಕುರಿತಂತೆ ಜಗತ್ತಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

ಜಗತ್ತಿನ ಹಿರಿಯಣ್ಣನೆಂದು ತೊಡೆ ತಟ್ಟಿ ನಿಂತಿರುವ ಅಮೇರಿಕಾದಲ್ಲೂ ಕೂಡ ಜನತೆ ಹಸಿವಿನಿಂದ ಮುಕ್ತರಾಗಿಲ್ಲ. ಕ್ಯಾಲಿಫೋರ್ನಿಯದಂತಹ ಸಮೃದ್ಧ ನೀರಾವರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯ ಬೆಳೆಯುತಿದ್ದರೂ ಕೂಡ ಅಮೇರಿಕಾದ ಪ್ರತಿ ಆರು ಜನರಲ್ಲಿ ಒಬ್ಬ ವ್ಯಕ್ತಿ ಹಸಿವಿನಿಂದ ಬಳಲುತಿದ್ದಾನೆ. ಇದು ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ಸಂಶೋಧಕರು ಬಹಿರಂಗ ಪಡಿಸಿರುವ ಸತ್ಯ.

ಇವತ್ತಿಗೂ ತೃತೀಯ ಜಗತ್ತಿನ ರಾಷ್ಟಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಂಗ್ಲಾದೇಶ ಮುಂತಾದ ದೇಶಗಳಲ್ಲಿ ಪ್ರತಿದಿನ ಕೋಟ್ಯಾಂತರ ಜನ ಹಸಿವಿನಿಂದ ನರಳುತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಧೀಶರ ಸಂಖ್ಯೆ ಹೆಚ್ಚಾಗುತ್ತಿರುವುದು ನಮ್ಮ ಮಾಧ್ಯಗಳಿಗೆ ಹೆಮ್ಮೆಯ ಸುದ್ಧಿಯೇ ಹೊರತು, ನಮ್ಮ ಜನಪ್ರತಿನಿಧಿಗಳ, ಯೋಜನೆಗಳ ನಿರ್ಮಾಪಕರ ಕೆನ್ನೆಗೆ ಹೊಡೆದಂತೆ ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಆದಿವಾಸಿ ಮತ್ತು ಬುಡಕಟ್ಟು ಜನಾಂಗ ಹಸಿವಿನಿಂದ ಸಾಯುತ್ತಿರುವುದು ಸುದ್ಧಿಯಲ್ಲ. ಇದು ಸುದ್ಧಿ ಮಾಧ್ಯಮಗಳ ಅಜ್ಙಾನವೊ, ಅಥವಾ ಅಸಡ್ಡೆತನವೋ ತಿಳಿಯಲಾಗದು.

ಭಾರತ ಈಗ ಆಹಾರದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದ್ದು, ದೇಶದ ಗೋದಾಮುಗಳಲ್ಲಿ ಬಡವರಿಗೆ ವಿತರಣೆಯಾಗದೆ 30 ಲಕ್ಷ ಟನ್ ಆಹಾರ ಕೊಳೆಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಎಲ್ಲರೂ ಬಲ್ಲ ಸಂಗತಿ. ನ್ಯಾಯಾಲಯ ಕಪಾಳಕ್ಕೆ ಬಾರಿಸಿದ ನಂತರವೂ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಎಚ್ಚೆತ್ತುಕೊಂಡಿಲ್ಲ.

ತೃತೀಯ ಜಗತ್ತಿನ ಹಸಿವಿನ ಕುರಿತು ವಾಖ್ಯಾನಿಸಿರುವ ಕೃಷಿತಜ್ಙ ರಾಬರ್ಟ್ ಛೇಂಬರ್ಸ್, ದಕ್ಷಿಣ ಏಷ್ಯಾದಲ್ಲಿ ಮೂಲಭೂತವಾಗಿ ಹಸಿವು ಒಂದು ಸಮಸ್ಯೆಯಲ್ಲ, ಅಲ್ಲಿನ ಜನರು ಪಾರಂಪರಿಕವಾಗಿ ಅನೇಕ ಕಿರು ಧಾನ್ಯಗಳನ್ನು ಬೆಳೆದು ಹಸಿವಿನಿಂದ ಮುಕ್ತರಾಗುತಿದ್ದರು. ಆದರೆ, ಆಧುನಿಕ ಸರ್ಕಾರಗಳ ಒತ್ತಡದಿಂದ ರೈತರು ಎಣ್ಣೆಕಾಳು, ಕಬ್ಬು ಹತ್ತಿ ಮುಂತಾದ ವಾಣಿಜ್ಯ ಬೆಳೆಗಳಿಗೆ ಶರಣು ಹೋದದ್ದರಿಂದ ಅವರು ತಮಗೆ ಅರಿವಿಲ್ಲದಂತೆ ಹಸಿವಿನ ಬಲೆಯೊಳಗೆ ಸಿಲುಕಿಬಿಟ್ಟಿದ್ದಾರೆ ಎಂದಿದ್ದಾನೆ.

1960 ರಿಂದ 1985 ರವರೆಗಿನ 25 ವರ್ಷಗಳಲ್ಲಿ ಭಾರತದಲ್ಲಿ ಜರುಗಿದ ಹಸಿರು ಕ್ರಾಂತಿಯ ಫಲವಾಗಿ ಭತ್ತ ಮತ್ತು ಗೋಧಿಯ ಫಸಲು ನೀರಾವರಿ ಪ್ರದೇಶಗಳಲ್ಲಿ ಮೂರು ಪಟ್ಟು ಹೆಚ್ಚಾಯಿತು. ಇವುಗಳ ಜೊತೆಗೆ ಎಣ್ಣೆಕಾಳು ಬೆಳೆಗಳು ಸಹ ದ್ವಿಗುಣಗೊಂಡವು. ಆದರೆ, ಪೌಷ್ಟಿಕ ಅಂಶಗಳನ್ನು ಒಳಗೊಂಡಿದ್ದ ಸಾಂಪ್ರದಾಯಕ ಬೆಳೆಗಳಾದ ಜೋಳ, ಸಜ್ಜೆ, ನವಣೆ, ಮುಂತಾದ ಕಿರುಧಾನ್ಯಗಳು ಕುಂಠಿತಗೊಂಡವು. ಭಾರತ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನೀರಾವರಿ ಯೋಜನೆಗಳಿಗೆ ವಿನಿಯೋಗಿಸಿದ್ದು ಕೇವಲ ಭತ್ತ ಮತ್ತು ಗೋಧಿ ಮುಂತಾದ ಬೆಳೆಗಳಿಗೆ ಹೊರತು, ಸಾಂಪ್ರದಾಯಕ ಬೆಳೆಗಳಿಗಲ್ಲ. ಕಿರುಧಾನ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ರಾಜಸ್ತಾನದ ಥಾರ್ ಮರುಭೂಮಿಯಲ್ಲಿ 1970 ರ ದಶಕದಲ್ಲಿ ಅಲ್ಲಿಗೆ ಇಂದಿರಾಗಾಂಧಿ ಬೃಹತ್ ನೀರಾವರಿ ನಾಲುವೆ ಯೋಜನೆ ಬರುವ ಮುನ್ನ ಅಲ್ಲಿನ ಜನತೆ ದೇಶಿ ತಂತ್ರಜ್ಙಾನ ಬಳಸಿ ಮಳೆನೀರನ್ನು ಶೇಖರಿಸಿಟ್ಟುಕೊಂಡು ಹಲವಾರು ರೀತಿಯ ಸಾಂಪ್ರದಾಯಿಕ ಬೆಳೆ ತೆಗೆಯುತಿದ್ದರು. ಇವುಗಳಲ್ಲಿ ಜೋಳ, ಸಜ್ಜೆ, ಸಾಸಿವೆ, ಮೆಣಸಿನಕಾಯಿ, ಎಳ್ಳು ಮುಂತಾದ ಬೆಳೆಗಳಿದ್ದವು. ಹೀಗೆ ತಮ್ಮ ಅವಶ್ಯಕತೆಗೆ ತಕ್ಕಂತೆ, ಹವಾಮಾನಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದರು.

1990 ರಲ್ಲಿ ನಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ನೀರಾವರಿಗೆ ಒಳಪಟ್ಟ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 13 ಸಾವಿರ ಹೆಕ್ಟೇರ್ ನಲ್ಲಿ ಗೋಧಿ, ಉಳಿದ 2 ಸಾವಿರ ಹೆಕ್ಟೇರ್ ಪ್ರದೇಶ್ಲ ಎಣ್ಣೆಕಾಳು, ಭತ್ತ, ಬೆಳೆಗಳಿಗೆ ಸೀಮಿತವಾಯಿತು. ಅಲ್ಲಿನ ರೈತರು ಅನೇಕ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದರೂ ಸಹ, ದಲ್ಲಾಳಿಗಳು, ಮಧ್ಯವರ್ತಿಗಳ ಮುಂತಾದವರ ಕಪಿಮುಷ್ಟಿಗೆ ಸಿಲುಕಿ ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವಲ್ಲಿ ವಿಪಲರಾದರು. ಕೃಷಿಗಾಗಿ ತಾವು ಬ್ಯಾಂಕಿನಿಂದ ಪಡೆದ ಸಾಲ ತೀರಿಸಲಾರದೆ ಅತಂತ್ರರಾದರು. ಆತಂಕದ ಸಂಗತಿಯೆಂದರ, ನೀರಾವರಿ ಪ್ರದೇಶದ ಜನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿತು. ರಾಜಸ್ತಾನದ ಬರಪೀಡಿತ ಜಿಲ್ಲೆಗಳ ಜನತೆಗಿಂತ ಕಡಿಮೆಯ ಕ್ಯಾಲೊರಿ ಆಹಾರವನ್ನು ಇವರು ಸೇವಿಸುತಿದ್ದರು. ದೀಪದ ಕೆಳೆಗೆ ಕತ್ತಲು ಎಂಬಂತೆ ಮಕ್ಕಳೂ ಸಹ ಅಪೌಷ್ಟಿಕತೆಯಿಂದ ಸಾಯುತ್ತಿರುವುದು ಬೆಳಕಿಗೆ ಬಂತು.

ಇದು ಭಾರತದ ಸಂಕಟದ ಕಥೆಯಾದರೆ, ಆಫ್ರಿಕಾದ ಸೂಡಾನಿನ ಗೆರ್ಣಜೇರಿಯಾ ಪ್ರಾಂತ್ಯದ 84 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಗೋಳಿನ ಕತೆಯು ಇಂತಹದ್ದೇ ಆಗಿದೆ. ಅಲ್ಲಿನ ಬ್ಲೂನೈಲ್ ನದಿಯ ನೀರನ್ನು ಬಳಸಿಕೊಂಡು 1920ರ ದಶಕದಲ್ಲೇ ಬ್ರಿಟೀಷರು ಹತ್ತಿ ಬೆಳೆಯಲು ಪ್ರಾರಂಭಿಸಿದ್ದರು. ನಂತರದ ದಿನಗಳಲ್ಲಿ ಸೂಡಾನ್ ಸರ್ಕಾರ ಈ ನದಿಗೆ ಸೆನ್ನಾರ್ ಮತ್ತು ರೂಸಿಯರ್ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ಮತ್ತೆ ಹತ್ತಿ ಮತ್ತು ಕಬ್ಬು ಬೆಳೆಯಲು ಆದೇಶ ಹೊರಡಿಸಿತು. ಇದರಿಂದಾಗಿ ಇಲ್ಲಿನ ರೈತರು ಜೋಳ, ಮೆಕ್ಕೆಜೋಳ, ಗೆಣಸು ಮುಂತಾದ ಸಾಂಪ್ರದಾಯಕ ಬೆಳೆಗಳು ಹಾಗೂ ಪಶುಪಾಲನೆ, ಮೀನುಗಾರಿಕೆ, ಕೋಳಿಸಾಕಾಣಿಯಂತಹ ಕಸುಬುಗಳಿಂದ ವಂಚಿತರಾದರು.

ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಿದ ಕಾಲುವೆಗಳ ನಿಮಾರ್ಣದ ವಿಷಯವೇ ಈಗ ಜಗತ್ತಿನಾದ್ಯಂತ ವಿವಾದಕ್ಕೆ ಗುರಿಯಾಗಿದೆ. ಇದೊಂದು ವ್ಯಾಪಕ ಭ್ರಷ್ಟಾಚಾರಕ್ಕಾಗಿ ನಮ್ಮನ್ನಾಳುವ ಸರ್ಕಾರಗಳು, ಜನಪ್ರತಿನಿಧಿಗಳು ರೂಪಿಸಿಕೊಂಡ ವ್ಯವಸ್ಥೆ ಎಂಬ ಆರೋಪವಿದೆ. 1986ರಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಭಾರತದ ನೀರಾವರಿ ಯೋಜನೆಗಳ ಕುರಿತಂತೆ ಹೀಗೆ ಹತಾಶರಾಗಿ ನುಡಿದಿದ್ದರು. ಭಾರತದಲ್ಲಿ 1951 ರಿಂದ 246 ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಗೊಂಡಿದ್ದರೂ ಈವರೆಗೆ 65 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 180 ಯೋಜನೆಗಳು ಇವತ್ತಿಗೂ ಮುಗಿದಿಲ್ಲ. ನಾವು ಹೆಮ್ಮೆಯಿಂದ ಎದೆಯುಬ್ಬಿಸಿ ಇಂತಹ ಯೋಜನೆಗಳ ಬಗ್ಗೆ ಮಾತನಾಡಬಲ್ಲೆವು ಅಷ್ಟೇ. ರೈತರ ಪಾಲಿಗೆ ಕಾಲುವೆಯೂ ಇಲ್ಲ, ನೀರೂ ಇಲ್ಲ. ರೈತರ ಕೃಷಿ ಬದುಕಿನ ಬಗ್ಗೆ ಇಂತಹ ಸ್ಥಿತಿಯಲ್ಲಿ ಮಾತನಾಡುವುದು ಎಂದರೆ, ಅದೊಂದು ಆತ್ಮವಂಚನೆಯ ಸಂಗತಿ; ರಾಜೀವ್ ಗಾಂಧಿಯವರ ಮಾತು ಮೇಲ್ನೋಟಕ್ಕೆ ಆತ್ಮವಿಮರ್ಶೆ ಮಾತುಗಳಂತೆ ಕಂಡುಬಂದರೂ ಸಹ ವಾಸ್ತವಿಕವಾಗಿ ಭಾರತದ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಭಾರತದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಕೂಡ ರಾಜೀವ್ ಗಾಂಧಿಯವರ ಮಾತನ್ನು ಪುಷ್ಟೀಕರಿಸುತ್ತದೆ.

Almatti-Dam

Almatti Dam

ಭಾರತದಲ್ಲಿ ಸ್ವಾತಂತ್ರ ನಂತರ ಈವರೆಗೂ ಒಂದೇ ಒಂದು ಬೃಹತ್ ನೀರಾವರಿ ಯೋಜನೆ ನಿಗದಿತ ಅವಧಿಯೊಳಗೆ, ನಿಗದಿತ ಅಂದಾಜು ವೆಚ್ಚದೊಳಗೆ ಪೂರ್ಣಗೊಂಡಿಲ್ಲ ಎಂದು ವರದಿ ತಿಳಿಸಿದೆ. ಅಷ್ಟೇ ಏಕೆ? ಕರ್ನಾಟಕದ ಆಲಮಟ್ಟಿ ಜಲಾಶಯ ಲಾಲ್ ಬಹದ್ದೂರ್ ಶಾಸ್ರಿಯವರಿಂದ ಶಂಕುಸ್ಥಾಪನೆಗೊಂಡ 35 ವರ್ಷಗಳ ನಂತರ ಹೆಚ್.ಡಿ. ದೇವೆಗೌಡರಿಂದ ಉದ್ಘಾಟನೆಯಾದದ್ದು ಕನ್ನಡಿಗರೆಲ್ಲಾ ಬಲ್ಲ ಸಂಗತಿ. ಭಾರತವಷ್ಟೇ ಅಲ್ಲ ಜಗತ್ತಿನ ನೂರಾರು ಯೋಜನೆಗಳು ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿವೆ. ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಇಂತಹ ಪ್ರಮಾದಗಳು ಹೆಚ್ಚಾಗಿ ಜರುಗಿವೆ.

ನೈಜೀರಿಯ ಸರ್ಕಾರ 1970 ರ ದಶಕದಲ್ಲಿ 3ಲಕ್ಷ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆಯನ್ನು ರೂಪಿಸಿ ಇದಕ್ಕಾಗಿ ಅಂತರಾಷ್ಟೀಯ ಮಟ್ಟದಲ್ಲಿ ಕೋಟ್ಯಾಂತರ ಡಾಲರ್ ಹಣವನ್ನು ಸಾಲ ತಂದು ವ್ಯಯ ಮಾಡಿತು. 30 ವರ್ಷಗಳ ಕಾಲ ನಡೆದ ಕಾಮಗಾರಿ 2000 ದಲ್ಲಿ ಮುಕ್ತಾಯಗೊಂಡಾಗ ನೀರುಣಿಸಲು ಸಾಧ್ಯವಾದದ್ದು ಕೇವಲ 31 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ. ಯಾವುದೇ ಒಂದು ಯೋಜನೆ ರೂಪಿಸುವಾಗ ಕಾಲುವೆಗಳ ಆಳ, ಅಗಲ, ಉದ್ದ, ವಿನ್ಯಾಸ ಇವುಗಳ ಜೊತೆಗೆ ಜಲಾಶಯದಲ್ಲಿ ಸಿಗುವ ನೀರಿನ ಪ್ರಮಾಣ ಇಂತಹ ವಿಚಾರಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಸದಿದ್ದರೆ ಇಂತಹ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಾಲುವೆಗಳಲ್ಲಿ ಸೋರಿ ಹೋಗುವ ನೀರಿನ ಪ್ರಮಾಣವನ್ನು ಯಾವೊಂದು ಸರ್ಕಾರಗಳು ಈವರೆಗೆ ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಕಾಲುವೆಯ ಮೊದಲ ಭಾಗದ ರೈತರಿಗೆ ಸಿಗುವಷ್ಟು ನೀರು ಕೊನೆಯ ಭಾಗದ ರೈತರಿಗೆ ದೊರಕುವುದಿಲ್ಲ.

ನೀರಾವರಿ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ನೀರು ಬೇಡುವ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ರೈತರು ಮುಂದಾಗುತ್ತಾರೆ ಅವರುಗಳಿಗೆ ಪರೋಕ್ಷವಾಗಿ ಸಕ್ಕರೆ ಕಂಪನಿಗಳು, ಅಕ್ಕಿ ಗಿರಣಿಗಳು ಬೆಂಬಲಕ್ಕೆ ಇರುತ್ತವೆ. ಇವೆಲ್ಲವೂ ಬಲಿಷ್ಠ ರಾಜಕಾರಣಿಗಳು ಇಲ್ಲವೆ, ಬೃಹತ್ ಕಾರ್ಪೊರೇಟ್ ಕಂಪನಿಗಳ ಒಡೆತನದಲ್ಲಿರುತ್ತವೆ. ಇದರ ಲಾಭಿ ಸರ್ಕಾರಗಳನ್ನು ಮಣಿಸುವಷ್ಟು ಶಕ್ತಿಯುತವಾಗಿರುತ್ತದೆ. ಮಹರಾಷ್ಟದ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದ್ಲ ಶೇ.70 ರಷ್ಟು ಭಾಗದಲ್ಲಿ ರೈತರು ಕಬ್ಬು ಬೆಳೆಯುತಿದ್ದಾರೆ. ಅಲ್ಲಿನ ಸಕ್ಕರೆ ಕಾರ್ಖಾನೆಗಳ ಲಾಭಿಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವ ವಹಿಸಿರುವುದು ಎಲ್ಲರೂ ತಿಳಿದ ವಿಷಯ.

ಗುಜರಾತ್‌ನ ಕಛ್ ಮತ್ತು ಸೌರಾಷ್ಟದ ಮರುಭೂಮಿಗೆ ನೀರು ಒದಗಿಸುವ ಯೋಜನೆಯೆಂದು ಪ್ರಾರಂಭವಾದ ನರ್ಮದಾ ನದಿಯ ಸರ್ದಾರ್ ಸರೋವರ್ ಜಲಾಶಯದ ನೀರು ಈವರೆಗೆ ನಾಲುವೆ ಕೊನೆಯ ಭಾಗದ ರೈತರಿಗೆ ಸಿಕ್ಕಿಲ್ಲ. ನಾಲುವೆ ಪ್ರಾರಂಭದ ಅಚ್ಚುಕಟ್ಟು ಪ್ರದೇಶದಲ್ಲಿ 10 ಬೃಹತ್ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿದ್ದು, ರೈತರಿಗೆ ಕಬ್ಬು ಬೆಳೆಯಲು ಪ್ರೊತ್ಸಾಹಿಸಿವೆ. ಇದರಿಂದ ನಾಲುವೆ ಕೊನೆ ಭಾಗದ ರೈತರು ನರ್ಮದಾ ನೀರಿನಿಂದ ವಂಚಿತರಾದರು. ನದಿಗಳಲ್ಲಿ ವಾಸ್ತವವಾಗಿ ನೀರು ದೊರಕುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾಲುವೆಗಳ ಮೂಲಕ ನೀರು ಹರಿಸಲಾಗುವುದೆಂದು ಸರ್ಕಾರಗಳು ಸುಳ್ಳು ಹೇಳುವುದರ ಮೂಲಕ ರೈತರನ್ನು ವಂಚಿಸುತ್ತಿವೆ. ಅಣೆಕಟ್ಟು ನಾಲುವೆ ಮುಂತಾದವುಗಳ ವೆಚ್ಚ ಮಿತಿ ಮೀರಿದಾಗ ಜನಸಾಮಾನ್ಯರ ಕಣ್ಣೊರೆಸಲು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಇಂತಹ ಸುಳ್ಳಿಗೆ ಮುಂದಾಗುತ್ತವೆ.

ಜಗತ್ತಿ ನೀರಾವರಿ ಯೋಜನೆಗಳ ಸಾದಕ ಬಾಧಕಗಳ ಕುರಿತಂತೆ ವಿಶ್ವಬ್ಯಾಂಕ್ ತನ್ನ ತಜ್ಞರ ತಂಡದ ಮೂಲಕ ನಡೆಸಿದ ಅಧ್ಯಯನ ಎಂತಹವರನ್ನೂ ಬೆಚ್ಚಿ ಬೇಳಿಸುತ್ತದೆ. ಸಾಮಾನ್ಯವಾಗಿ ಒಂದು ಅಣೆಕಟ್ಟು ಯೋಜನೆ ರೂಪಿಸುವಾಗ ಅದಕ್ಕೆ ತಗಲುವ ವೆಚ್ಚ, ನೀರಾವರಿ ಯೋಜನೆಗಳಿಂದ ಸಿಗುವ ಪ್ರತಿಫಲ, ಇವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶ್ವಬ್ಯಾಂಕ್ ಲೆಕ್ಕಾಚಾರದ ಪ್ರಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಬಾರತದಲ್ಲಿ 15ರಿಂದ 25ಸಾವಿರ, ಬ್ರೆಜಿಲ್ ನಲ್ಲಿ 30ಸಾವಿರ, ಮೆಕ್ಸಿಕೊನಲ್ಲಿ 50ಸಾವಿರ, ಆಫ್ರಿಕಾ ಖಂಡದ ದೇಶಗಳಲ್ಲಿ 60ಸಾವಿರದಿಂದ 1ಲಕ್ಷದವರೆಗೆ ಖರ್ಚು ಬರುತ್ತಿದೆ. (ಈ ವೆಚ್ಚದಲ್ಲಿ ಭೂ ಪರಿಹಾರ, ಪುನರ್ವಸತಿ ಎಲ್ಲವೂ ಸೇರಿದೆ.) ಇವುಗಳ ಪ್ರತಿಫಲ ಈ ರೀತಿ ಇದೆ. ನೀರಾವರಿ ಯೋಜನೆಗಳಲ್ಲಿ ಭಾರತ ಶೇ. 60ರಷ್ಟು ಸಾಧನೆ ಸಾಧಿಸಿದ್ದು, ಸಮರ್ಪಕವಾಗಿ ನೀರನ್ನು ಬಳಸಿಕೊಂಡ ಯೋಜನೆಗಳ ಕಾರ್ಯಕ್ಷಮತೆ ಕೇವಲ ಶೆ. 25ರಿಂದ 35ರಷ್ಟು ಮಾತ್ರ. ಜಾಗತಿಕವಾಗಿ ನೀರಾವರಿ ಯೋಜನೆಗಳು ಯಶಸ್ವಿಯಾಗಿರುವುದು ಶೇ.40 ರಷ್ಟು ಮಾತ್ರ.

ಭಾರತದ ನೀರಾವರಿ ಯೋಜನೆ ಕುರಿತಂತೆ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಇಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿವೆ. ಭಾರತದ ನಾಲುವೆಗಳಾಗಲಿ, ಒಳಚರಂಡಿಗಳಾಗಲಿ ಇವುಗಳ ಕಾಮಗಾರಿಯ ಗುಣಮಟ್ಟ ತೀರ ಕಳಪೆಯದ್ದಾಗಿವೆ ರೈತರ ಬಗ್ಗೆ. ನಿಜವಾಗಿ ಇರಬೇಕಾದ ಕಾಳಜಿ ಇಲ್ಲವಾಗಿದ್ದು, ಕೆಲವೆಡೆ ರಾಜಕೀಯ ಹಿತಾಸಕ್ತಿಗಾಗಿ ಯೋಜನೆಗಳ ವಿನ್ಯಾಸಗಳನ್ನೇ ಬದಲಿಸಲಾಗಿದೆ. ನಿಜಕ್ಕೂ ಇದು ಅಘಾತಕರ ಸಂಗತಿ. ಈ ವ್ಯಾಖ್ಯಾನವನ್ನು ಅವಲೋಕಿಸಿದಾಗ ನಮ್ಮ ನೀರಾವರಿಗಳ ನಿಜವಾದ ಗುರಿ ಏನು? ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಯೋಜನೆಗಳಿಗೆ ಬದ್ಧತೆ, ಪ್ರಾಮಾಣಿಕತೆ, ನಿಖರತೆ ಇಲ್ಲದಿದ್ದರೆ, ಇವುಗಳ ದುರಂತದ ಹೊಣೆಯನ್ನು ಜನಸಾಮಾನ್ಯರು ಹೊರಬೇಕಾಗುತ್ತದೆ. ಶ್ರೀಲಂಕಾದಲ್ಲಿ 16 ಸಾವಿರ ರೈತ ಕುಟುಂಬಗಳಿಗೆ ನೀರುಣಿಸುವ ಗುರಿಯಿಟ್ಟುಕೊಂಡು 200 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಹಾವೇಲಿ ನದಿಗೆ ವಿಕ್ಟೋರಿಯಾ ಅಣೆಕಟ್ಟು ನಿರ್ಮಿಸಲಾಯಿತು. 1982ರಲ್ಲಿ ಆರಂಭವಾಗಿ 1990ರಲ್ಲಿ ಮುಗಿದ ಈ ಯೋಜನೆಯಲ್ಲಿ ಈವರೆಗೆ ನೀರಿನ ಕರ ರೂಪದಲ್ಲಿ ವಾಪಸ್ ಬಂದಿರುವ ಬಂಡವಾಳ ಶೇ.5 ರಷ್ಟು ಮಾತ್ರ. ಇಂತಹದ್ದೇ ಕಥೆ ನೇಪಾಳ. ಥ್ಯಾಲೆಂಡ್, ದಕ್ಷಿಣಕೊರಿಯಾ ದೇಶಗಳದ್ದು.

(ಮುಂದುವರೆಯುವುದು)