Daily Archives: January 2, 2012

2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ…

 -ರವಿ ಕೃಷ್ಣಾರೆಡ್ಡಿ

ಕಳೆದ ವರ್ಷದ ಜಾಗತಿಕ ಮತ್ತು ರಾಷ್ಟ್ರ ಮಟ್ಟದ ವಿದ್ಯಮಾನಗಳ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ದಿನೇಶ್ ಅಮಿನ್ ಮಟ್ಟುರವರು ಉತ್ತಮವಾಗಿ ಬರೆದು ವಿಶ್ಲೇಷಿಸಿದ್ದರು. ಓದದೇ ಇದ್ದವರು ದಯವಿಟ್ಟು ಅದನ್ನು ಓದಿ. ಅವರು 2011 ನ್ನು ಬೆಳಕಿನ ವರ್ಷ ಎನ್ನುತ್ತಾ, ಮನುಕುಲದ ಮುನ್ನಡೆಯ ಹಾದಿಗೆ ಬೆಳಕು ತೋರಿದ ಭರವಸೆಯ ವರ್ಷವೂ ಹೌದು ಎನ್ನುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ.

ಕಳೆದ ವರ್ಷ ಪ್ರಪಂಚದ ಬೇರೆಬೇರೆ ಕಡೆ ಹೊತ್ತಿಕೊಂಡ ಪ್ರಜಾಪ್ರಭುತ್ವದ ಕಿಡಿಗಳು ಮತ್ತು ಜನಹೋರಾಟದ ಕಾರಣವಾಗಿಯೇ ಪತನಗೊಂಡ ಸರ್ವಾಧಿಕಾರಿ ಆಡಳಿತಗಳು ಒಬ್ಬ ಪ್ರಜಾಪ್ರಭುತ್ವ ಪ್ರೇಮಿಯಾಗಿ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿಗಳು. ಈ ವರ್ಷವೂ ಅದು ಮುಂದುವರೆದು ಇಡೀ ಅರೇಬಿಯಾದಲ್ಲಿ, ರಷ್ಯದಲ್ಲಿ, ಬರ್ಮಾದಲ್ಲಿ, ಉತ್ತರ ಕೊರಿಯಾದಲ್ಲಿ, ಮಧ್ಯ-ದಕ್ಷಿಣ ಅಮೇರಿಕಾಗಳಲ್ಲಿ ಮತ್ತು ಎಲ್ಲೆಲ್ಲಿ ರಾಜಪ್ರಭುತ್ವ, ಹುಸಿಪ್ರಜಾಪ್ರಭುತ್ವ, ಸೇನಾಡಳಿತ, ಸರ್ವಾಧಿಕಾರಿಗಳ ಆಡಳಿತ ಇದೆಯೋ ಅಲ್ಲೆಲ್ಲಾ, ಅಲ್ಲಿಯ ಸ್ಥಳೀಯ ಜನರ ನೈಜ ಬೇಡಿಕೆ ಮತ್ತು ಹೋರಾಟವಾಗಿ ಪಸರಿಸಿ ಗಟ್ಟಿಯಾದ ಜನತಂತ್ರಗಳು ನೆಲೆಯೂರಲಿ ಎಂದು ಆಶಿಸುತ್ತೇನೆ.

ನಮ್ಮದೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಳೆದ ವರ್ಷ ಬಹಳ ಮಹತ್ತರವಾದುದಾಗಿತ್ತು. ಜನ ತಮ್ಮ ನಾಗರಿಕ ಜವಾಬ್ದಾರಿಗಳಿಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎನಿಸುತ್ತದೆ. ನಮ್ಮ ರಾಜ್ಯದ ಸ್ಥಿತಿ ನೋಡಿದರೆ ಅದು ಹುಸಿ ಅಂತಲೂ ಭಾಸವಾಗುತ್ತದೆ. ಅಯೋಗ್ಯ, ಅಪ್ರಬುದ್ದ, ಕಳ್ಳ, ವಂಚಕ, ಭ್ರಷ್ಟ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಜೈಲಿಗೆ ಹೋದದ್ದನ್ನು ನೋಡಿದರೆ ವ್ಯವಸ್ಥೆಯಲ್ಲಿ ಅಷ್ಟಿಷ್ಟು ನಂಬಿಕೆಯೂ ಹುಟ್ಟುತ್ತದೆ. ಮತ್ತೆ ಕೆಲವು ಘಟನೆಗಳನ್ನು ಗಮನಿಸಿದರೆ, ಅವೆಲ್ಲಾ ಮೇಲ್ನೋಟಕ್ಕೆ ಮಾತ್ರ ಎಂತಲೂ ಅನ್ನಿಸುತ್ತದೆ. ವಾಸ್ತವದಲ್ಲಿ ದುಷ್ಟರಿಗೆ ಎಂದೂ ಪ್ರಾಯಶ್ಚಿತ್ತವಾಗಲಿ, ಮನ:ಪರಿವರ್ತನೆಯಾಗಲಿ ಆಗುವುದಿಲ್ಲ ಎನ್ನುವ ಮಾತಿಗೆ ಸಾಕಷ್ಟು ಪುರಾವೆ ಸಿಗುತ್ತವೆ.

ವೈಯಕ್ತಿಕವಾಗಿ ನೋಡುವುದಾದರೆ ನನಗೆ ಕಳೆದ ವರ್ಷ ಅನೇಕ ಅನುಭವಗಳ, ಚಟುವಟಿಕೆಗಳ ವರ್ಷ. ಹತ್ತು ವರ್ಷಗಳ ನಂತರ ವರ್ಷಪೂರ್ತಿ (ನಡುವೆ ಒಂದು ತಿಂಗಳನ್ನು ಹೊರತುಪಡಿಸಿ) ದೇಶದಲ್ಲಿಯೇ ಉಳಿದ ವರ್ಷ. ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ಸುತ್ತಿ, ಕರ್ನಾಟಕದ ಹಲವಾರು ಪ್ರದೇಶ, ಜನರನ್ನು ಕಂಡ ವರ್ಷ. ಕೆಲವರ ಬಗ್ಗೆ ಭರವಸೆ ಬೆಳೆಸಿಕೊಂಡ, ಮತ್ತು ಹಲವರ ಬಗ್ಗೆ ಭ್ರಮನಿರಸನಗೊಂಡ ವರ್ಷ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಉತ್ತರಾರ್ಧದಲ್ಲಿ ಮಾತು-ಕೃತಿಯ ಭಾಗವಾಗಿ ವರ್ತಮಾನ.ಕಾಮ್ ಆರಂಭಿಸಿದ ಸಮಯ.

ಕನ್ನಡದಲ್ಲಿ ಈಗಾಗಲೆ ಅನೇಕ ವೆಬ್‌ಸೈಟುಗಳಿವೆ. ಆದರೆ ಸಾಮಾಜಿಕ-ರಾಜಕೀಯ-ಆರ್ಥಿಕ-ಮಾಧ್ಯಮ ವಿಚಾರಗಳನ್ನು ಇಟ್ಟುಕೊಂಡು, ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಹುಡುಕಾಟದಲ್ಲಿ ನಾನು ಮತ್ತು ಒಂದಷ್ಟು ಜನ ಸಮಾನಮನಸ್ಕರು ಆರಂಭಿಸಿದ ನಮ್ಮ ವೆಬ್‍ಸೈಟ್ ಆ ದೃಷ್ಟಿಯಲ್ಲಿ ಕನ್ನಡಕ್ಕೆ ವಿಭಿನ್ನವಾದದ್ದು. ಇಲ್ಲಿಯವರೆಗೂ ನಾವು ಖರ್ಚು ಮಾಡಿದ್ದು ಬಹುಶಃ ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆ, ಆದರೆ ಸಾಮೂಹಿಕವಾಗಿ ನಾವೆಲ್ಲ (ನಮ್ಮ ಬಳಗ ಮತ್ತು ಲೇಖಕರು) ಕೊಟ್ಟ ಸಮಯ ಮತ್ತು ಶ್ರಮ ಮಾತ್ರ ಹೆಚ್ಚಿದೆ. ವರ್ಷಾಂತ್ಯದಲ್ಲಿ ನಾನು ಅನಾರೋಗ್ಯಪೀಡಿತನಾಗಿದ್ದು ಮತ್ತು ಸ್ವಲ್ಪ ವಿಶ್ರಾಂತಿ ಬಯಸಿ ಓಡಾಟ ನಿಲ್ಲಿಸಿದ್ದರಿಂದ ಮತ್ತೂ ಒಂದಷ್ಟು ಬೆಳವಣಿಗೆ ಕಮ್ಮಿಯಾಯಿತು ಎನ್ನಬಹುದೇನೊ. ಆದರೆ, ನಮಗೆಲ್ಲ ಈ ಪ್ರಯತ್ನದ ಬಗ್ಗೆ ತೃಪ್ತಿ ಇದೆ. ಈ ವರ್ಷ ಸಮಯದ ಜೊತೆಗೆ ಸಮುದಾಯಿಕವಾಗಿ ಒಂದಷ್ಟು ಹಣ ಸಂಗ್ರಹಿಸಿ, ಅದನ್ನು ಹೂಡಿ, ವರ್ತಮಾನ.ಕಾಮ್ ಅನ್ನು ಹೆಚ್ಚುಹೆಚ್ಚು ಪ್ರಸ್ತುತ ಪಡಿಸುತ್ತ, ವಿಸ್ತಾರಗೊಳಿಸುತ್ತ, ಬೇರೆ ಆಯಾಮಗಳಿಗೂ ಹೊರಳಿಸಬೇಕು ಎನ್ನುವ ಯೋಜನೆ ನಮ್ಮದು.

ನನ್ನ ಪ್ರಕಾರ 2012 ಅನೇಕ ವಿಚಾರಗಳಿಗೆ ನಿರ್ಣಾಯಕವಾಗಲಿದೆ. ಈ ವರ್ಷವೂ ನಾವು ಜಾಗತಿಕವಾಗಿ ಅನೇಕ ಪಲ್ಲಟಗಳನ್ನು ಕಾಣಲಿದ್ದೇವೆ, ಅಮೆರಿಕ ಮತ್ತು ರಷ್ಯದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ನಡೆಯಲಿವೆ. ಒಬಾಮ ಎರಡನೆ ಅವಧಿಗೆ ಚುನಾಯಿತನಾಗುವುದು ಕಷ್ಟಸಾಧ್ಯವೇನಲ್ಲ-ಅನಿರೀಕ್ಷಿತ ಘಟನೆಗಳು ಜರುಗದೇ ಇದ್ದಲ್ಲಿ. ಆದರೆ ರಷ್ಯದಲ್ಲಿ ಪುಟಿನ್ ಬಗ್ಗೆ ಅದೇ ಮಾತನ್ನು ಹೇಳುವ ಹಾಗೆ ಇಲ್ಲ. ನನ್ನ ಸಹೋದ್ಯೋಗಿಯಾಗಿದ್ದ ಉಕ್ರೇನ್ ಮೂಲದ ಸ್ನೇಹಿತನ ಮಾತನ್ನು ನಂಬುವುದಾದರೆ ಅಲ್ಲಿಯ ಈಗಿನ ಪ್ರಧಾನಿ ವ್ಲಾಡಿಮಿರ್ ಪುಟಿನ್ ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸಿರುವುದೇ ಅಲ್ಲದೆ ಭ್ರಷ್ಟ ಮಾರ್ಗಗಳಿಂದ ಬಿಲಿಯನ್ ಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನೂ ಸ್ಥಾಪಿಸಿಕೊಂಡಿದ್ದಾನೆ. ಅಲ್ಲಿಯ ವಿರೋಧ ಪಕ್ಷಗಳು ಹೇಳುವ ಪ್ರಕಾರ ಆತ ಆ ದೇಶದ ಅತಿ ಶ್ರೀಮಂತ ವ್ಯಕ್ತಿ. ಅಲ್ಲಿ ನಿಜಕ್ಕೂ ಹೇಳಿಕೊಳ್ಳುವಂತಹ ಪ್ರಜಾಪ್ರಭುತ್ವ ಇಲ್ಲ. ಕಳೆದ ತಿಂಗಳು ಅಲ್ಲಿ ನಡೆದ ಸಂಸತ್ ಚುನಾವಣೆಗಳು ಮೋಸದಿಂದ ಕೂಡಿದ್ದವು. ಅಲ್ಲಿಯ ಈಗಿನ ಅಧ್ಯಕ್ಷ ಪುಟಿನ್‌ನ ಕೈಗೊಂಬೆ. ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಪುಟಿನ್ ಮತ್ತೆ ಸ್ಪರ್ಧಿಸುತ್ತಿದ್ಡಾನೆ. ಅವನ ಸೋಲು-ಗೆಲುವು ಕೇವಲ ರಷ್ಯಕ್ಕಷ್ಟೇ ಅಲ್ಲ, ಜಾಗತಿಕವಾಗಿಯೂ, ನಮಗೂ, ಮುಖ್ಯವಾಗಲಿದೆ. ಯಾಕೆಂದರೆ, ಶಕ್ತಿ ಉತ್ಪಾದನೆಯಲ್ಲಿ ರಷ್ಯ ಪ್ರಪಂಚದ ಸೂಪರ್‌ಪವರ್ (energy superpower of the world). ತೈಲ ಉತ್ಪಾದನೆಯಲ್ಲಿ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೂರು ವರ್ಷಗಳೇ ಆದವು. ಇವೆಲ್ಲವುಗಳಿಂದಾಗಿ, ಜಾಗತಿಕ ತಾಪಮಾನ ಕಾರಣಗಳಿಗಾಗಿ, ಸೌರ ಅಲೆಗಳು, ಹುಚ್ಚು ಪ್ರಳಯದ ಭೀತಿ, ಪ್ರವಾಹ ಮತ್ತು ಬರಗಾಲಗಳು, ಹೀಗೆ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಘಟನಾವಳಿಗಳಿಂದ ಕೂಡಿರುತ್ತದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ, ಉತ್ತರ ಪ್ರದೇಶದ ಜೊತೆಗೆ ಇನ್ನೂ ಐದು ರಾಜ್ಯದ ಚುನಾವಣೆಗಳು ನಡೆಯಲಿವೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬಹುದು. ಅಣ್ಣಾ ತಂಡ ಅಥವ ಮತ್ತೊಂದು ನಾಗರಿಕರ ತಂಡ ಇದನ್ನು ಮೀರಿ ಚುನಾವಣಾ ಸುಧಾರಣೆಗಳಿಗಾಗಿ ಹೋರಾಡಬಹುದು. ದೇಶದಾದ್ಯಂತ ಇನ್ನಷ್ಟು ರಾಜಕಾರಣಿಗಳು ಜೈಲಿಗೆ ಹೋಗುವ ಸಾಧ್ಯತೆಗಳು ಈ ಭ್ರಷ್ಟಾಚಾರದ ಯುಗದಲ್ಲಿ ಹೆಚ್ಚೇ ಇದೆ. ಭ್ರಷ್ಟಾಚಾರ ಈ ವರ್ಷವೂ ಬಹುಮುಖ್ಯ ವಿಷಯವಾಗಿರುತ್ತದೆ. ಜಯಾ-ಮಾಯಾ-ಮಮತಾರಿಂದಾಗಿ, ಅಥವಾ ಕಾಂಗ್ರೆಸ್‌ನ ನಾಯಕರ ಅಹಂಕಾರದ ಫಲವಾಗಿ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ಬಂದರೆ ಅದೇನೂ ಅನಿರೀಕ್ಷಿತವಲ್ಲ. ಮಮತಾರ ಒಂದೇ ಕಾರಣದಿಂದ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ಲೋಕಪಾಲ್ ಮಸೂದೆ ವಿಚಾರವಾಗಿ ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಯಿತು. ಹಾಗಾಗಿ ಮನಮೋಹನ್ ಸಿಂಗ್, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ಮುಂದಿನ ವರ್ಷಗಳನ್ನು ನಿರ್ಧರಿಸುವ ವರ್ಷ ಇದು. ದೇಶದಲ್ಲಿ ಮತ್ತೆ ತೃತೀಯ ರಂಗ ಪ್ರಸ್ತುತವಾದರೆ ನನಗೇನೂ ಆಶ್ಚರ್ಯವಿಲ್ಲ. ಆದರೆ ಅದು ಕಾಂಗ್ರೆಸ್ ಅಥವ ಬಿಜೆಪಿಯ ಬೆಂಬಲ ಇಲ್ಲದೆ ಅಧಿಕಾರಕ್ಕೆ ಬರಲಾಗದು.

ಕರ್ನಾಟಕದಲ್ಲಿ ಈ ವರ್ಷವೂ ಒಂದಷ್ಟು ಹಾಲಿ ಮಂತ್ರಿಗಳು ಮತ್ತು ರಾಜಕಾರಣಿಗಳು ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ. ಯಡಿಯೂರಪ್ಪನವರು ಯಾವುದೋ ಒಂದು ಕೇಸಿನಲ್ಲಾದರೂ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿದರೂ ತೀರ್ಮಾನಿಸಿತು. ಅವರ ವಿರುದ್ಧ ಅಷ್ಟೊಂದು ಕೇಸುಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕಾರಣವಾಗಿ ಮತ್ತೂ ಒಂದಿಬ್ಬರು ಸಚಿವರು ರಾಜೀನಾಮೆ ಕೊಡಬೇಕಾಗಿ ಬರಬಹುದು. ನೋಡುತ್ತಿದ್ದರೆ ಈ ಸರ್ಕಾರ ಅದಕ್ಕೆ ಮುಂಚೆ ಬಿದ್ದರೂ ಬಿದ್ದೀತು. ಏನೇ ಆಗಲಿ ಈ ವರ್ಷದ ಅಂತ್ಯದ ಒಳಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಆಗುತ್ತದೆ, ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರುತ್ತದೆ. ಕರ್ನಾಟಕದ ಜನ ಏನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಯಡ್ಡಯೂರಪ್ಪನವರು ಜೈಲಿನಿಂದ ಬಂದಾಗ ಜನ ವರ್ತಿಸಿದ ರೀತಿ, ಕಳೆದ ವರ್ಷ ಪ್ರತಿ ಉಪಚುನಾವಣೆಯಲ್ಲಿ ಮತ ಹಾಕಿದ ಪರಿ, ಮುಂದುವರೆದ ಜಾತಿ ಮತ್ತು ಹಣದ ಪ್ರಭಾವ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಬಿಜೆಪಿಗಿಂತ ಭಿನ್ನವಾಗಿಲ್ಲದ ರಾಜಕಾರಣ, ಮತ್ತು ಅಲ್ಲಿಯವರಿಗಿಂತ ಬೇರೆ ರೀತಿ ಕಾಣಿಸುತ್ತಿಲ್ಲದ ಈ ಪಕ್ಷಗಳ ಶಾಸಕರು-ನಾಯಕರು, ಯಾವುದೂ ಏನನ್ನೂ ಬಿಟ್ಟುಕೊಡುತ್ತಿಲ್ಲ. ಆದರೆ ಈ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿ 2011 ಕ್ಕಿಂತ ಹೆಚ್ಚೇ ಇರುತ್ತದೆ. ರಾಜ್ಯಕ್ಕೆ ಬರಗಾಲ ಈಗಾಗಲೆ ಉತ್ತರದಲ್ಲಿ ಒಂದು ಕಾಲನ್ನು ಇಟ್ಟಿದೆ.

ಇವೆಲ್ಲವೂ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಬೇಕು. ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ. ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)