Daily Archives: January 14, 2012

ನಮ್ಮ ಪರಿಸರ – ನೆಲ ಜಲ : 1

– ಪ್ರಸಾದ್ ರಕ್ಷಿದಿ

ನೀರಿನ ಬೆಲೆ ಹಾಲಿಗಿಂತ ದುಬಾರಿ ಯಾಕೆ?  ಶುಂಠಿ ಬೇಸಾಯ ಯಾರಿಗೆ ಆದಾಯ? ಎಂಡೋಸಲ್ಫಾನ್ ಬಳಕೆಯಿಂದ ನರಕವಾದ “ಸ್ವರ್ಗ” (ಸ್ವರ್ಗ ಎನ್ನುವುದು ಕಾಸರಗೋಡು ತಾಲ್ಲೂಕಿನ ಒಂದು ಊರು). ಇತ್ಯಾದಿ ಶೀರ್ಷಿಕೆ-ಬರಹಗಳನ್ನು, ನಾವು ಪ್ರತಿನಿತ್ಯ ಪತ್ರಿಕೆಗಳಲ್ಲಿ ಕಾಣುತ್ತೇವೆ. ಇತರೆ ಮಾಧ್ಯಮಗಳಲ್ಲೂ, ಹಾಳಾಗುತ್ತಿರುವ ನಮ್ಮ ನೆಲ, ಜಲ, ಗಾಳಿ, ಪರಿಸರ, ಆರೋಗ್ಯಗಳ ಬಗ್ಗೆ, ವರದಿಗಳು ಚರ್ಚೆಗಳು, ನುಡಿಚಿತ್ರಗಳು, ಜೊತೆಗೆ ದಿನನಿತ್ಯ ಅದಕ್ಕೆಂದೇ ಮೀಸಲಾದ ಕಾರ್ಯಕ್ರಮಗಳು, ಇವುಗಳಿಗೆಲ್ಲ ಲೆಕ್ಕವೇ ಇಲ್ಲ. ಇವೆಲ್ಲದರ ಜೊತೆಯಲ್ಲಿ ಇದೇ ವಿಷಯಗಳ ಬಗ್ಗೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆಯೂ ಕಡಮೆಯೇನಲ್ಲ.

ಇವುಗಳ ಜೊತೆಗೆ ನೆಲ, ಜಲ, ಪರಿಸರ ಸಂರಕ್ಷಣೆಯನ್ನೇ ಕಾಯಕವನ್ನಾಗಿಸಿಕೊಂಡ ಅನೇಕ ವ್ಯಕ್ತಿಗಳು ಹಲವು ಸಂಘಸಂಸ್ಥೆಗಳು ಇವೆ. ಇವುಗಳಲ್ಲಿ ಕೆಲವು ಸದ್ದಿಲ್ಲದೆ ಕೆಲಸ ಮಾಡುತ್ತ ಇನ್ನುಕೆಲವು ಬರೀ ಸದ್ದನ್ನೇ ಮಾಡುತ್ತ ಮುಂದುವರಿಯುತ್ತಿವೆ. ಪರಿಸರ ಸಂರಕ್ಷಣೆಗೆಂದೇ ಕೇಂದ್ರ ಸರ್ಕಾರದ ಸಂಪುಟ ದರ್ಜೆ ಸಚಿವಾಲಯವೂ ಇದೆ. ಈ ವರ್ಷ ಕರ್ನಾಟಕ  ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಹಲವು ಕೋಟಿ ರೂಪಾಯಿಗಳ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆಯೆಂಬ ಸುದ್ದಿಯೂ ಇತ್ತೀಚೆಗೆ ಕೇಳಿ ಬಂದಿದೆ. ಅದರ ಅನುಷ್ಠಾನಕ್ಕಾಗಿಯೇ ಹಲವಾರು ಸಂಸ್ಥೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಇವೆ.

ಇನ್ನು ನಮ್ಮಲ್ಲಿ ‘ಫುಕುವೋಕಾ’ನ ಶಿಷ್ಯರು, ತದ್ರೂಪಿಗಳು, ಸಮರ್ಥಕರು ಹಾಗೂ ವಿರೋಧಿಗಳು ಇವರುಗಳಿಗೇನೂ ಕೊರತೆಯಿಲ್ಲ.  Do nothing Farming ಎನ್ನುವುದನ್ನು ಅಪಹಾಸ್ಯಕ್ಕೀಡಾಗುವಷ್ಟು ಅಧ್ವಾನವನ್ನು ಇವರಲ್ಲಿ ಹಲವರು ಈಗಾಗಲೇ ಎಬ್ಬಿಸಿದ್ದಾರೆ. ಈ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ‘ಫುಕುವೋಕಾ’ನ ವಿಚಾರ ನಮಗೆ ಹೊಸದೇನಲ್ಲ. ನಮ್ಮಜ್ಜನ ಕಾಲದಲ್ಲಿ ಹೀಗೆಯೇ ಕೃಷಿ ನಡೆದಿತ್ತು, ನಮ್ಮ ಹಳೆಯ ಗ್ರಂಥದಲ್ಲಿ ಹೀಗೆ ಹೇಳಿದೆ ಎಂದು ಒಳ್ಳೆಯದೇನಾದರೂ ವಿಚಾರ ಬಂದರೆ ಅದು ನಮ್ಮಲ್ಲಿ ಹಿಂದೆಯೇ ಇತ್ತು ಎಂದೂ ಕೆಟ್ಟದ್ದೇನಾದರೂ ಇದ್ದರೆ ಅದು ಹೊರಗಿನವರಿಂದ ಬಂತು ಎಂದು ಹೇಳುತ್ತ ಭಾರತದ ಗತಕಾಲದ ಶ್ರೇಷ್ಟತೆಯಲ್ಲೇ ಇಂದೂ ಮುಳುಗಿರುವವರ ಬಗ್ಗೆ ಹೇಳದಿರುವುದೇ ಕ್ಷೇಮ. ಆದರೆ ನಮ್ಮಲ್ಲಿ ಒಳ್ಳೆಯದೇನೂ ಇರಲೇ ಇಲ್ಲವೆಂದು ನನ್ನವಾದವಲ್ಲ. ಆ ಒಳ್ಳೆಯದನ್ನು ನಮಗೆ ಯಾಕೆ ಉಳಿಸಿಕೊಂಡು ಬರಲಾಗಲಿಲ್ಲ, ಅದಕ್ಕೆ ಕಾರಣಗಳೇನು? ಇತ್ಯಾದಿಗಳನ್ನೆಲ್ಲ ನಮ್ಮ ನಡುವೆಯೇ ಹುಡುಕಬೇಕಲ್ಲವೇ? ಇದು ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ.

ನಮ್ಮ ಪರಿಸರ ಎಂದಾಗ, ನಮಗೆ ತಟ್ಟನೆ ಮನಸ್ಸಿಗೆ ಬರುವುದು ನಮ್ಮ ಕಾಡುಗಳು, ಹೊಳೆ, ನದಿ ಕೆರೆ, ಸಮುದ್ರ, ಗಾಳಿ, ಆಕಾಶ, ಅನಂತರ ಪ್ರಾಣಿಗಳು, ಮತ್ತು ಕೊನೆಯದಾಗಿ ಮನುಷ್ಯನೆಂಬ ಪ್ರಾಣಿ. ಇವುಗಳಲ್ಲಿ ಯಾರ ಅಂಕೆಯಲ್ಲೂ ಇಲ್ಲದ  ಆದರೆ ಎಲ್ಲವನ್ನೂ ಕಾಲಬದ್ಧ, ನಿಯಮಬದ್ಧವಾಗಿ ನಡೆಸುವ ಪ್ರಕೃತಿ ಒಂದೆಡೆಯಾದರೆ, ತನ್ನ ಅಲ್ಪಜ್ಞಾನವನ್ನೇ ಮಹಾನ್ ಸಾಧನೆಯೆಂದು ನಂಬಿ ಪ್ರಕೃತಿಯನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಿರುವ ಮನುಷ್ಯ ಇನ್ನೊಂದೆಡೆಯಲ್ಲಿದ್ದಾನೆ.  ಪ್ರಕೃತಿ ತನ್ನ ಅಗಾಧವಾದ ಸಾಮರ್ಥ್ಯದೊಡನೆ ಪ್ರಕೋಪ-ವಿಕೋಪಗಳನ್ನುಂಟುಮಾಡುತ್ತ ಮತ್ತೆ ಅದೇ ಅದ್ಭುತ ರೀತಿಯಲ್ಲಿ ತನ್ನನ್ನು ತಾನೇ ಪುನಶ್ಚೇತನಗೊಳಿಸಿಕೊಳ್ಳುತ್ತ, ಬೇಡವಾದದ್ದನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಳ್ಳುತ್ತ, ಬೇಕಾದ ಹೊಸತನ್ನು ಸೃಷ್ಟಿಸಿಕೊಳ್ಳುತ್ತ ಇದೆ. ಆದರೆ ಮನುಷ್ಯನೆಂಬ ಪ್ರಾಣಿ ಜಗತ್ತಿನ ಎಲ್ಲವೂ ತನ್ನ ಉಪಯೋಗಕ್ಕಾಗಿಯೇ ಇದೆಯೆಂಬ ಅಹಂಕಾರದಿಂದ ಮಾಡಿರುವ, ಮಾಡುತ್ತಿರುವ ಅನಾಹುತಗಳು ಬಲುದೊಡ್ಡವು.  ನಾವು ಯೋಚಿಸಬೇಕಿರುವುದು, ಪ್ರಕೃತಿಗೆ ಇರುವ-ತನಗೆ ಬೇಡವಾದದ್ದನ್ನು  ನಿರ್ದಾಕ್ಷಿಣ್ಯವಾಗಿ ನಿವಾರಿಸಿಬಿಡುವ ಅಗಾಧ ಶಕ್ತಿಯ ಬಗ್ಗೆ. ಆದ್ದರಿಂದ ಪ್ರಕೃತಿಗೆ ಬೇಡವಾದದ್ದರಲ್ಲಿ ಮನುಷ್ಯನೇ ಮೊದಲಿಗನಾಗನಹುದೆಂಬ ಭಯ ಮತ್ತು ಎಚ್ಚರದಿಂದ ನಾವು ವರ್ತಿಸಬೇಕಾಗಿದೆ.

ಪ್ರಕೃತಿಯಲ್ಲಿ ಒಂದಾಗಿ, ಸಹಜವಾಗಿ ಇತರ ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಈ ಮನುಷ್ಯ ಬಹಳದೂರ ಬಂದಿದ್ದಾನೆ. ಅತ್ಯಂತ ಜಟಿಲ ಹಾಗೂ ಸಂಕೀರ್ಣ ಜೀವನಕ್ರಮದ ಬುದ್ಧಿವಂತನೆನಿಸಿದ್ದಾನೆ. ಈಗ ಮನುಷ್ಯನಿಗೆ ಸಾಮಾಜಿಕ,  ಆರ್ಥಿಕ,  ಸಾಂಸ್ಕೃತಿಕವಾದ ಭಿನ್ನತೆಗಳು ಮತ್ತು ಕಾಲ ದೇಶಗಳ ವೈವಿದ್ಯತೆಗಳೂ ಸೇರಿಕೊಂಡಿವೆ. ಹಾಗಾಗಿ ನಾವು ಪರಿಸರದ ಬಗ್ಗೆ ಮಾತಾಡುವಾಗಲೆಲ್ಲ ಈ ವಿಷಯಗಳನ್ನೆಲ್ಲ ಮರೆತು ಅಥವಾ ಬಿಟ್ಟು ಆಯಾ ಸಂದರ್ಭದಲ್ಲಿ ಒಂದೊಂದೇ ವಿಷಯವನ್ನು ಪ್ರತ್ಯೇಕವಾಗಿ ಕಂಡುಕೊಂಡು ಪರಿಹಾರ ಹುಡುಕುತ್ತಾ ಹೋದರೆ ರೋಗಕ್ಕಿಂತ ಚಿಕಿತ್ಸೆಯೇ ಭಯಾನಕವಾದೀತು. ಹಾಗಾಗಿ ನಮ್ಮ ಪರಿಸರ ಪ್ರಜ್ಞೆಯೂ ಕೂಡಾ ನಮ್ಮ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳೊಂದಿಗೆ, ಪ್ರತಿಯೊಂದನ್ನು ಸಮಗ್ರವಾಗಿ ಗ್ರಹಿಸುತ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೃಷಿ, ಉದ್ಯಮ, ವಿದ್ಯಾಭ್ಯಾಸ, ಆಡಳಿತ, ಆರ್ಥಿಕತೆ,  ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ಪುನರ್ ಪರಿಶೀಲಿಸುತ್ತ  ಪುನರ್ರಚಿಸುತ್ತ ಸಾಗಬೇಕಾಗಿದೆ.

ಮೊದಲನೆಯದಾಗಿ ನಮ್ಮ ಕೃಷಿವಲಯದ ಬಗ್ಗೆ ಯೋಚಿಸೋಣ. ಸಧ್ಯದಲ್ಲಿ ಪರಿಸರ ಪ್ರಿಯರೆಲ್ಲರ ಬಾಯಲ್ಲಿ ಯಾವಾಗಲೂ ಕೇಳುತ್ತಿರುವ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವ ವಿಷಯವೆಂದರೆ  ” ಸಹಜ ಕೃಷಿ”. ಇದೊಂದು ಆದರ್ಶಸ್ಥಿತಿ. ಧ್ಯಾನದಂತಹ ಕ್ರಿಯೆ. ನೀರಿನಲ್ಲಿ ಮೀನಿನಂತೆ ಸಹಜವಾಗಿ ಬದುಕುವ ಗತಿ. ಇಲ್ಲಿ ಕೃಷಿಕ ಸಂಪೂರ್ಣವಾಗಿ ಪ್ರಕೃತಿಯ ಭಾಗವೇ ಆಗಿರುತ್ತಾನೆ. ಈ ಸಹಜ ಕೃಷಿಯು ನಮ್ಮ ಇಂದಿನ ಪರಿಸ್ಥಿತಿಯಲ್ಲಿ  ಕೆಲವೇ ಕೆಲವರಿಗೆ (ಅದೂ ಕೂಡಾ ಪೂರ್ಣವಾಗಿ ಅಲ್ಲ) ಸಾಧ್ಯವಾಗಬಹುದು. ಇಂತಹವರಲ್ಲಿ ಜಪಾನಿನ ‘ಫಕುವೋಕಾ’ ನಮ್ಮವರೇ ಆದ ‘ಚೇರ್ಕಾಡಿ ರಾಮಚಂದ್ರರಾಯರು’ ಬರುತ್ತಾರೆ.

ಚೇರ್ಕಾಡಿ ರಾಮಚಂದ್ರರಾಯರು

ಯಾಕೆಂದರೆ ಇವರು ಯಾವುದೇ ಆಧುನಿಕ ಸೌಲಭ್ಯಗಳನ್ನು ಬಯಸದೆ ಎಣ್ಣೆದೀಪ ಉರಿಸುತ್ತ,ಬಾವಿಯಿಂದ ನೀರನ್ನು ಸೇದಿ ಬಳಸುತ್ತ, ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ಎಲ್ಲ ಕೆಲಸಗಳನ್ನು ತಾವೇಮಾಡುತ್ತ ನಮ್ಮ ಪ್ರಾಚೀನ ಕಾಲದ ಋಷಿಮುನಿಗಳಂತೆ ಬದುಕಿದವರು. ಆದ್ದರಿಂದಲೇ ಇರಬೇಕು ಫುಕುವೋಕಾ ಹೇಳಿದ್ದು ನನ್ನ ತೋಟ, ಮನೆ ಆಧುನಿಕರಿಗೆ ಎಷ್ಟು ಕುತೂಹಲ ತಂದಿದೆಯೋ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು. (ನಮ್ಮ ಮಠ ಮಾನ್ಯರುಗಳು ಈ ಆಧ್ಯಾತ್ಮಿಕ ಗುಂಪಿಗೆ ಸೇರುವುದಿಲ್ಲ) ಹಾಗಾಗಿ ಈ ‘ಸಹಜ ಕೃಷಿ’ ಒಂದು ಆದರ್ಶವಾಗಿ ಉಳಿದೀತೆ ಹೊರತು, ಸಾರ್ವತ್ರಿಕ ಆಚರಣೆಗೆ ಬರುವುದು ಕಷ್ಟ,

ಎರಡನೆಯದಾಗಿ ನಾವೀಗ ಎಲ್ಲಡೆ ಕಾಣುವ- ಕೇಳುವ, ಇತ್ತೀಚೆಗಂತೂ ಕಿವಿಗೆ ಅಪ್ಪಳಿಸುತ್ತಿರುವ ‘ಹೈಟೆಕ್ ತಂತ್ರಜ್ಞಾನ’ ಮತ್ತು ‘ಹೈಟೆಕ್ ಕೃಷಿ’ ಈ ಹೈಟಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ.

ಒಂದುಕಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ ಈ ಹೈಟೆಕ್ ಕೃಷಿಗೆ ನೀಡುತ್ತಿರುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಸರ್ಕಾರ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಜಾನರು ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ   ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್ ಮಾಡಿ ಸರ್ಜರಿ ಆಪರೇಷನ್ಗೆಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’ , ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗುದೆಯೇ? ಎಂದು.

ಅನ್ನಿಸದೆ ಇರದು. ಆದರೆ ಹೌದು ಅವರ ಪಾಲಿಗೆ ನಮ್ಮ ಕೃಷಿಕ್ಷೇತ್ರ ಖಂಡಿತವಾಗಿಯೂ ಸಮೃದ್ಧವಾಗಿದೆ! ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’  ‘ಕೃಷಿಉದ್ಯಮ’  ಜೊತೆಗೆ  ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು,  ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ,  ಗದ್ದೆ, ಹೊಲಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

(ಮುಂದುವರೆಯುವುದು)