ಗೃಹಮಂತ್ರಿಯ ಆಶ್ವಾಸನೆ/ಮನವಿ ಮೇರೆಗೆ ಎರಡು ದಿನಗಳ ನಂತರ ಉಪವಾಸ ಸತ್ಯಾಗ್ರಹ ಅಂತ್ಯ

ಸ್ನೇಹಿತರೆ,

ಇಂದು ಹಲವಾರು ಜನರ ಹೋರಾಟ ಮತ್ತು ಒತ್ತಾಯಗಳ ಕಾರಣದಿಂದಾಗಿ ಸಂಜೆ 6:30 ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಗೃಹಮಂತ್ರಿ ಆರ್.ಅಶೋಕ್, ’ತಾವು ಈಗಾಗಲೆ ನವೀನ್ ಸೂರಿಂಜೆಯ ವಿರುದ್ಧ ದಾಖಲಾಗಿರುವ ಸುಳ್ಳು ಆರೋಪಗಳನ್ನು ಕೈಬಿಡುವಂತೆ ಡಿ.ಜಿ.ಪಿ.ಯವರಿಗೆ ಬರೆದಿದ್ದೇನೆ, ಕಡತ ಕಾನೂನುಬದ್ಧವಾಗಿ ಕ್ಯಾಬಿನೆಟ್ ಮುಂದೆ ಬರಲಿದೆ, ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾತನಾಡುತ್ತೇನೆ, ಮೊಕದ್ದಮೆಗಳನ್ನು ಕೈಬಿಡುವ ಪ್ರಕ್ರಿಯೆ ಸ್ವಲ್ಪ ದೀರ್ಘ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ನಿಧಾನವಾಗುತ್ತಿದೆ, ಧರಣಿ ಮಾಡುತ್ತಿರುವವರು ಧರಣಿ ಕೈಬಿಟ್ಟು ಸರ್ಕಾರದ ಮಟ್ಟದಲ್ಲಿ ಈ ಪ್ರಕ್ರಿಯೆಯನ್ನು ಹಿಂಬಾಲಿಸಬೇಕು, ಏನೇ ಸಮಸ್ಯೆಗಳಿದ್ದರೂ ತಾವು ಅದರ ಬಗ್ಗೆ ಕೂಡಲೇ ಗಮನ ಹರಿಸುತ್ತೇನೆ,’ ಎಂದು ಆಶ್ವಾಸನೆ ನೀಡಿದರು.

ಆ ಭರವಸೆ ಮತ್ತು ನಾಳೆಯಿಂದಲೇ ಆರೋಪಗಳನ್ನು ಕೈಬಿಡುವ ವಿಷಯವನ್ನು ಫಾಲೋ ಅಪ್ ಮಾಡುವ ಉದ್ದೇಶದಿಂದ ನಾವು ಧರಣಿಯನ್ನು ಒಂದು ದಿನ ಮುಂಚಿತವಾಗಿ ನಿಲ್ಲಿಸಿದ್ದೇವೆ. ನಾಳೆ ಸೋಮವಾರ. ನಮ್ಮ ಮಿತ್ರರುಗಳು ಗೃಹಮಂತ್ರಿಯ ಕಚೇರಿಯ ಜೊತೆ ನಾಳೆಯಿಂದಲೇ ಸಂಪರ್ಕ ಇಟ್ಟುಕೊಂಡು ಆದಷ್ಟು ಬೇಗ ನವೀನ್ ಮೇಲಿರುವ ಆರೋಪಗಳನ್ನು ಸರ್ಕಾರ ಕೈಬಿಡುವ ನಿಟ್ಟಿನಲ್ಲಿ ತಾವೂ ತೊಡಗಿಸಿಕೊಳ್ಳಲಿದ್ದಾರೆ.

ಇಂದಿನ ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣರಾದವರು ಅನಂತ ಚಿನಿವಾರ್, ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಲಕ್ಷ್ಮಣ ಹೂಗಾರ್, ಮತ್ತಿತರರು. ಎರಡೂ ದಿನಗಳಿಂದ ಈ ಧರಣಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ, ಪಾಲ್ಗೊಂಡ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.  ಈ ಎರಡೂ ದಿನಗಳಲ್ಲಿ ಆದ ಬೆಳವಣಿಗೆಗಳ ಬಗ್ಗೆ ಮತ್ತೊಮ್ಮೆ ವಿಸ್ತೃತವಾಗಿ ಬರೆಯುತ್ತೇನೆ.

“ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಅಡಿಯಲ್ಲಿ ಆರು ಜನ ಪೂರ್ತಿ ಎರಡೂ ದಿನ (ನಲವತ್ತೆಂಟು ಗಂಟೆ) ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಏಳೆಂಟು  ಜನ ಹಗಲು ಪೂರ್ತಿ ಅಥವ ದಿನಪೂರ್ತಿ ಉಪವಾಸ ಮಾಡಿದ್ದಾರೆ. ಬಹುತೇಕ ಎಲ್ಲರೂ ಇಂದು ಮನೆಗೆ ಹಿಂದಿರುಗಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ. ನಾನು ಮತ್ತು ಬಹುಶ: ಇನ್ನೂ ಒಬ್ಬರಿಬ್ಬರು ಪೂರ್ತಿ ಮೂರು ದಿನ ಉಪವಾಸ ಇರಲು ನಿರ್ಧರಿಸಿದ್ದೇವೆ. ಆದರೆ ಎಲ್ಲರೂ ಎರಡು ಹಗಲು ಮತ್ತು ಒಂದು ರಾತ್ರಿಯ ಪ್ರತಿಭಟನೆಯ ನಂತರ ಮನೆಗಳಿಗೆ ಹಿಂದಿರುಗಿದ್ದಾರೆ.

ಇಂದು ಹೆಚ್ಚು ಬರೆಯಲು ಆಗುತ್ತಿಲ್ಲ. ಬಹುಶ: ನಾಳೆಯೂ ಕಷ್ಟವಾಗಬಹುದು. ಆದರೆ ಕೂಡಲೇ ನಮ್ಮ ಓದುಗರಿಗೆ ನೆನ್ನೆಯ ಮತ್ತು ಇಂದಿನ ಬೆಳವಣಿಗೆಗಳನ್ನು ತಿಳಿಸೋಣ ಎಂದು ಇಷ್ಟು ಮಾತ್ರ ಬರೆಯುತ್ತಿದ್ದೇನೆ.

ಬಹುಶಃ ನಾಡಿದ್ದು ಹೆಚ್ಚು ವಿಸ್ತೃತವಾಗಿ ಬರೆಯುತ್ತೇನೆ. (ನಾಳೆ ಸಾಧ್ಯವಾದರೆ ಪತ್ರಿಕಾ-ವರದಿಗಳನ್ನು ವರ್ತಮಾನದಲ್ಲಿ ಪ್ರಕಟಿಸುತ್ತೇನೆ.)

ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಇವು ನೆನ್ನೆ ಮತ್ತು ಇಂದಿನ ಕೆಲವು ಚಿತ್ರಗಳು. ಚಿತ್ರಕೃಪೆ: KPN. (ನಾನು ತೆಗೆದ ಒಂದಷ್ಟು ಚಿತ್ರಗಳು ನಮ್ಮ ವರ್ತಮಾನ.ಕಾಮ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಇವೆ: http://www.facebook.com/vartamaana)
Photo Caption
Photo Caption
Photo Caption
Photo Caption
Photo Caption
Photo Caption

One thought on “ಗೃಹಮಂತ್ರಿಯ ಆಶ್ವಾಸನೆ/ಮನವಿ ಮೇರೆಗೆ ಎರಡು ದಿನಗಳ ನಂತರ ಉಪವಾಸ ಸತ್ಯಾಗ್ರಹ ಅಂತ್ಯ

  1. ಅನಾಮಿಕ ಮಂಗಳೂರು

    ನೇರ ವ್ಯವಹಾರದ, ಕಾನೂನನ್ನು ಗೌರವಿಸುವ ಪತ್ರಕರ್ತ ನವೀನ್ ಸೂರಿಂಜೆ ಇದನ್ನು ಒಪ್ಪುತ್ತಾರೆಯೇ? ಹಾಗಿದ್ದರೆ ಅವರು ಈ ಮೊದಲೇ ಪ್ರಕರಣದಲ್ಲಿ ಆರೋಪಿಗಳಾಗಬೇಕಾಗಿದ್ದ ಕೆಲವರು ಮಾಡಿದ ಹಾಗೆ ಗೃಹ ಮಂತ್ರಿ, ಡಿಜಿಪಿ ಅವರಿಗೆ ಒತ್ತಡ ಹೇರಿ ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದರು. ಹಾಗೇ ಮಾಡಿಲ್ಲ. ಇಲ್ಲಿ ಹೋರಾಟ ಮಾಡಬೇಕಾಗಿರುವುದು ಸರಕಾರದ ಪೊಲೀಸರ ಕಾನೂನು ಬಾಹಿರ ಸೇಡಿನ ಕ್ರಮಕ್ಕೆ. ಸೂರಿಂಜೆ ಯಾಕೆ ಅವರ ಗುರಿ ? ಇತರ ಮಾಧ್ಯಮ ಮಂದಿಯ ವಿರುದ್ಧ ಯಾಕೆ ಕ್ರಮ ಇಲ್ಲ ? ನವೀನ್ ಸೂರಿಂಜೆ ಸೇರಿದಂತೆ ಮಾಧ್ಯಮದವರು ಎನ್ನುವ ಮೂರು ಮಂದಿ ಜೈಲಿನಲ್ಲಿದ್ದಾರೆ. ಅವರ ಕತೆ ಏನು ?ಇವೆಲ್ಲವೂ ಸಾರ್ವಜನಿಕ ಚರ್ಚೆ ಆಗುವುದು ಬೇಡವೇ ?

    Reply

Leave a Reply

Your email address will not be published. Required fields are marked *