ಪ್ರಜಾ ಸಮರ – 17 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

2005 ರ ಪೆಬ್ರವರಿ 5 ಮತ್ತು 6 ರ ನಡುರಾತ್ರಿ ಚಿಕ್ಕಮಗಳೂರು ಅರಣ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಸಾಕೇತ್ ರಾಜ್‌ರ ಶವವನ್ನು ತಕ್ಷಣಕ್ಕೆ ಪೊಲೀಸರಿಗೆ ಗುರುತಿಸಲು ಸಾಧ್ಯವಾಗಲಿಲ್ಲ. SakethRajanಏಕೆಂದರೆ, ಸಾಕೇತ್ “ಪ್ರೇಮ್” ಎಂಬ ಹೆಸರಿನಲ್ಲಿ ತಂಡದೊಂದಿಗೆ ಅಲ್ಲಿ ಬೀಡು ಬಿಟ್ಟಿದ್ದರು. ಸಾಯುವ ಕೆಲ ದಿನಗಳ ಹಿಂದೆ ತಾವಿದ್ದ ಅಡಗುತಾಣಕ್ಕೆ ಕರೆಸಿಕೊಂಡಿದ್ದ ಆಯ್ದ ಪತ್ರಕರ್ತರಿಗೂ ಸಹ ತಾನು ಪ್ರೇಮ್ ಎಂದು ಪರಿಚಯಿಸಿಕೊಂಡಿದ್ದರು. ಪತ್ರಕರ್ತರ ತಂಡದಲ್ಲಿದ್ದ ಗೌರಿ ಲಂಕೇಶ್ ಮಾತ್ರ ನಿಜಸಂಗತಿ ಗೊತ್ತಿತ್ತು. ಆ ದಿನ ಸತತ ಐದು ಗಂಟೆಗಳ ಕಾಲ ಪತ್ರಕರ್ತರ ಜೊತೆ ಮಾತನಾಡಿದ್ದ ಸಾಕೇತ್, “ನನಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನಂಬಿಕೆ ಇದೆ, ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಉಳ್ಳವರ ಮತ್ತು ಸುಲಿಯುವವರ ಆಯುಧವಾಗಿದೆ,” ಎಂದು ತಮ್ಮ ಅತೃಪ್ತಿಯನ್ನು ಹೊರ ಹಾಕಿದ್ದರು. ಪತ್ರಕರ್ತರಿಗೆ ತಮ್ಮ ಭಾವಚಿತ್ರ ತೆಗೆಯದಂತೆ ಸಾಕೇತ್ ವಿನಂತಿಕೊಂಡಿದ್ದರು. ಆದರೆ ತಮ್ಮ ಸಹಪಾಠಿ ಗೌರಿ ಲಂಕೇಶ್‌ಗೆ ಮಾತ್ರ ಇತರರಿಗೆ ತಿಳಿಯದಂತೆ ಎರಡು ಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದ್ದರು. ಕೊನೆಗೆ ಸಾಕೇತ್ ನೆನಪಾಗಿ ಅವರ ಗೆಳೆಯರಿಗೆ ಉಳಿದದ್ದು ಇಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳು ಮಾತ್ರ.saketh-jnu

ಸಾಕೇತ್ ರಾಜ್ ನಕ್ಸಲ್ ಚಳುವಳಿಯಲ್ಲಿ ಗುರುತಿಸಿಕೊಳ್ಳುವ ಮುನ್ನ ಮೈಸೂರಿನಲ್ಲಿ ತಮ್ಮ ತಂದೆಗೆ ಮಿಲಿಟರಿ ಅಧಿಕಾರಿ ಕೋಟಾದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಪೆಟ್ರೋಲ್ ಬಂಕ್‌ನಲ್ಲಿ ಬರುತ್ತಿದ್ದ ಆದಾಯದ ಹಣವನ್ನು ತಮ್ಮ ದಿನ ನಿತ್ಯದ ಖರ್ಚಿಗೆ ಬಳಸುತಿದ್ದರು. ಆದರೆ ಅವರು ಕೈಗೆ ಬಂದೂಕ ಹಿಡಿದ ನಂತರ ತಾಯಿಗಾಗಲಿ, ಸಹೋದರನಿಗಾಗಲಿ ಅಥವಾ ಪೆಟ್ರೋಲ್ ಬಂಕ್ ಸಿಬ್ಬಂದಿಗಾಗಲಿ ಒಂದು ಪತ್ರ ಬರೆಯಲಿಲ್ಲ, ಅಥವಾ ಹಣದ ಸಹಾಯ ಕೇಳಲಿಲ್ಲ ಜೊತೆಗೆ ತಾನು ಎಲ್ಲಿದ್ದೀನಿ ಎಂಬುದರ ಕುರಿತು ಒಂದು ಸಣ್ಣ ಸುಳಿವನ್ನೂ ಸಹ ನೀಡಿರಲಿಲ್ಲ.

ಸಾಕೇತ್ ನಿಧನರಾದ ಸುಮಾರು 12 ಗಂಟೆಗಳ ನಂತರ ಪೊಲೀಸರಿಗೆ ಅವರ ಗುರುತು ಸಿಕ್ಕಿತು. ಕರ್ನಾಟಕದ ಹಿರಿಯ ಐ.ಪಿ.ಎಸ್. ಪೊಲೀಸ್ ಅಧಿಕಾರಿಯೊಬ್ಬರು ಮೈಸೂರಿನ ಕಾಲೇಜು ದಿನಗಳಲ್ಲಿ ಸಾಕೇತ್‌ಗೆ ಸಹಪಾಠಿಯಾಗಿದ್ದರು. ಸಾಕೇತ್ ಶವದ ಭಾವ ಚಿತ್ರ ನೋಡಿ ಗುರುತಿಸಿದವರಲ್ಲಿ ಅವರು ಕೂಡ ಒಬ್ಬರು. ಇನ್ನೊಬ್ಬ ಸಹಪಾಠಿ ಹೊರ ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕೇತ್ ಸಾವಿನಿಂದ ಮನನೊಂದ ಐ.ಎ.ಎಸ್. ಅಧಿಕಾರಿ, ತಮ್ಮ ಬ್ಲಾಗ್‌ನಲ್ಲಿ ತಾನು ಮತ್ತು ಪೊಲೀಸ್ ಅಧಿಕಾರಿ ಇಬ್ಬರೂ ಸಾಕೇತ್ ರಾಜ್‌ಗೆ ಹೇಗೆ ಮಿತ್ರರಾದೆವು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತನ್ನ ಅಸ್ಖಲಿತ ಇಂಗ್ಲೀಷ್ ಭಾಷೆಯ ಮೂಲಕ ಎಲ್ಲಾ ಚರ್ಚಾ ಸ್ಪರ್ಧೆಗಳಲ್ಲಿ ಸಾಕೇತ್ ಜಯ ಗಳಿಸುತ್ತಿದ್ದುದನ್ನು ಹಾಗೂ ದೇಶದ ಸಮಸ್ಯೆಗಳನ್ನು ಅರಿತು ಆಳವಾಗಿ, ಗಂಭೀರವಾಗಿ ವಿಮರ್ಶೆ ಮಾಡುತ್ತಿದ್ದ ಬಗೆಯನ್ನು ಅವರು ವಿವರಿಸಿದ್ದಾರೆ.

ಪೆಬ್ರವರಿ ಎಂಟರಂದು ಸಾಕೇತ್ ಶವವನ್ನು ಮರೋಣತ್ತರ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ತರಲಾಗಿತ್ತು. ಅಷ್ಟರ ವೇಳೆಗೆ ಮೈಸೂರಿನಿಂದ ಅವರ ತಾಯಿಯವರು ಶವವನ್ನು ಪೊಲೀಸರು ಅಂತ್ಯಕ್ರಿಯೆ ಮಾಡಬಹುದೆಂದು ಸರ್ಕಾರಕ್ಕೆ ಪತ್ರ ಬರೆದು ಫ್ಯಾಕ್ಸ್ ಮಾಡಿದ್ದರು.

ಅಷ್ಟರ ವೇಳೆಗೆ ಹೈದರಾಬಾದಿನಿಂದ ನಕ್ಸಲ್ ಚಳುವಳಿ ಪರ ಸಹಾನುಭೂತಿಯುಳ್ಳ ಕವಿ ವರವರರಾವ್ ಮತ್ತು ಗಾಯಕ ಗದ್ದಾರ್ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಹಲವು ಸಮಾನ ಮನಸ್ಕರು ಒಡಗೂಡಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ರನ್ನು ಭೇಟಿ ಮಾಡಿ, ಅಂತ್ಯಕ್ರಿಯೆಗಾಗಿ ಸಾಕೇತ್ ಅವರ ಶವವನ್ನು ತಮಗೆ ಒಪ್ಪಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ಸರ್ಕಾರ್ ಮನವಿಯನ್ನು ತಿರಸ್ಕರಿಸಿತು. Saket_gaddarಕೊನೆಗೆ ವರವರರಾವ್ ಮತ್ತು ಗದ್ದಾರ್ ಸೇರಿದಂತೆ ಗೌರಿ ಲಂಕೇಶ್ ಎಲ್ಲರೂ ಸಾಕೇತ್ ಅವರ ಮೃತ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು. ಮುಖ್ಯಮಂತ್ರಿ ಧರ್ಮಸಿಂಗ್ ಇದಕ್ಕೆ ಸಮ್ಮತಿ ಸೂಚಿಸಿದರು. ಆದರೆ, ಇತ್ತ ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಮರೋಣತ್ತರ ಪರೀಕ್ಷೆ ಮುಗಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಪೊಲೀಸರು, ಗೌರಿ ಲಂಕೇಶ್ ಮತ್ತು ಇತರರು ಆಸ್ಪತ್ರೆಗೆ ಬರುತ್ತಿರುವ ಸುದ್ಧಿ ತಿಳಿದು, ತರಾತುರಿಯಲ್ಲಿ ಫ್ರೇಜರ್ ಟೌನ್‌ನಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಸಾಕೇತ್ ಶವವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟರು.

ಕರ್ನಾಟಕ ಪೊಲೀಸರ ಈ ಸಣ್ಣತನದ ಬಗ್ಗೆ ಸಿಟ್ಟಿಗೆದ್ದ ಸಾಕೇತ್ ರಾಜನ್ ಅವರ ಅಭಿಮಾನಿಗಳು ಮತ್ತು ಗೆಳೆಯರು ಪೊಲೀಸರ ಕಾರಿಗೆ ಅಡ್ಡ ಕುಳಿತು ದಿನವಿಡಿ ಪ್ರತಿಭಟನೆ ನಡೆಸಿದರು. ಗದ್ದಾರ್ ಗತಿಸಿ ಹೋದ ಗೆಳೆಯನ ಕುರಿತು ಪ್ರತಿಭಟನೆಯಲ್ಲಿ ಕುಳಿತಿದ್ದವರ ಕಣ್ನು ಒದ್ದೆಯಾಗುವಂತೆ ತೆಲುಗು ಭಾಷೆಯಲ್ಲಿ ಹುತಾತ್ಮ ಗೀತೆಗಳನ್ನು ಹಾಡುತ್ತಾ, ನರ್ತಿಸುತ್ತಾ ಸಾಕೇತ್‌ಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಸಾಕೇತ್‌ರ ನೆನಪಿಗಾಗಿ ಚಿತಾಗಾರದಿಂದ saaket_ashesಚಿತಾ ಭಸ್ಮವನ್ನು ಪಡೆಯಲಾಯಿತು.

ಸಾಕೇತ್‌ ರಾಜ್‌ರ ಸಾವು ರಾಷ್ಟ್ರದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳಲ್ಲಿ ಸುದ್ದಿಯಾಗುವುದರ ಜೊತೆಗೆ ಚರ್ಚೆಯಾಯಿತು. ದೆಹಲಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸಾಕೇತ್ ಬಗ್ಗೆ ಲೇಖನ ಬರೆದು ಶ್ರದ್ಧಾಂಜಲಿ ಸಲ್ಲಿಸಿತು. ಇವೊತ್ತಿಗೂ ಮೈಸೂರಿನ ಕುಕ್ಕರಹಳಿ ಕೆರೆ ಬಳಿ ಹೋದಾಗ ಗೆಳೆಯರಿಗೆ ತಕ್ಷಣ ನೆನಪಿಗೆ ಬರುವುದು ಕುವೆಂಪು ಮತ್ತು ಸಾಕೇತ್. ಏಕೆಂದರೆ ಈ ಇಬ್ಬರೂ ಆ ಕೆರೆಯನ್ನು ಅಪಾರವಾಗಿ ಪ್ರೀತಿಸುತಿದ್ದರು. ಅದೇ ರೀತಿ ಅವರ ಪೆಟ್ರೋಲ್ ಬಂಕ್ ಮುಂದೆ ಹಾಯ್ದು ಹೋಗುವಾಗ ಗೆಳೆಯರ ಜೊತೆ ಚಹಾ ಕುಡಿಯುತ್ತಾ ಹರಟುತ್ತಾ ಕುಳಿತಿರುತಿದ್ದ ಸಾಕಿಯ ಚಿತ್ರಗಳು ನೆನಪಿಗೆ ಬರುತ್ತವೆ.

ಕರ್ನಾಟಕದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಸಾಕಿಯ ರೀತಿಯಲ್ಲಿ ಕಳೆದು ಹೋದ ಮತ್ತೊಬ್ಬ ಗೆಳೆಯನ ಹೆಸರು ಸಿರಿಮನೆ ನಾಗರಾಜ್. ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಆತ್ಮೀಯ ಮಿತ್ರರ ಬಳಗದಲ್ಲಿ ನಾಗರಾಜ್ ಕೂಡ ಒಬ್ಬರು. ನಾಗರಾಜ್ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕೊಪ್ಪ ಪಟ್ಟಣದಲ್ಲಿ ಮುಂಜಾವು ಎಂಬ ವಾರಪತ್ರಿಕೆಯನ್ನು ಹೊರತರುತಿದ್ದರು. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ, ಬಾಳೇಹೊನ್ನೂರು, ಹರಿಹರಪುರ, ಕಳಸ ಮುಂತಾದ ಪ್ರದೇಶಗಳಲ್ಲಿ ಪತ್ರಿಕೆ ಹೆಸರುವಾಸಿಯಾಗಿತ್ತು. ಸಿರಿಮನೆ ಎಂಬ ಗ್ರಾಮದ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ನಾಗರಾಜ್ ಜಾತಿ ಧರ್ಮಗಳ ಹಂಗು ತೊರೆದು ತನ್ನ ಯೌವನದ ದಿನಗಳಿಂದಲೆ ಸಮಾಜದ ಅಸಮಾನತೆಗಳ ವಿರುದ್ದ ಹೋರಾಡುತ್ತಾ ಬಂದವರು. ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಪರ ಹೋರಾಡುವುದರ ಮೂಲಕ ಕಾಫಿ ಪ್ಲಾಂಟರ್‌ಗಳಲ್ಲಿ ಭಯ ಮತ್ತು ನಡುಕ ಹುಟ್ಟಿಸಿದವರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 1980 ರ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೋರಾಟದ ಮೂಲಕ ಪ್ರಬಲವಾಗಿ ಬೇರೂರಿತ್ತು. ಸುಂದರೇಶ್ ಎಂಬ ಅಪ್ರತಿಮ ಪ್ರತಿಭಾವಂತ ಯುವ ನಾಯಕ ಇಡೀ ಜಿಲ್ಲೆಯಲ್ಲಿ ಕಾಫಿ ತೋಟದ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ರಾಜಕೀಯ ಪಕ್ಷಗಳಿಗೆ, ಸಿರಿವಂತ ಜಮೀನ್ದಾರರು ಮತ್ತು ಕಾಫಿ ಬೆಳೆಗಾರರಿಗೆ ಸಿಂಹ ಸ್ವಪ್ನವಾಗಿದ್ದ. ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಮಾತೃಹೃದಯ ಸುಂದರೇಶ್‌ಗೆ ಇತ್ತು. ಬಹುಶಃ 1985 ಅಥವಾ 86 ರಲ್ಲಿ ಇರಬೇಕು, ಸುಂದರೇಶ್ ದೆಹಲಿಗೆ ಹೋಗಿ ವಾಪಸ್ ಬರುತ್ತಿದ್ದ ಸಮಯದಲ್ಲಿ ಬೆಂಗಳೂರಿನ ಯಲಹಂಕ ಬಳಿ ಹಳಿ ತಪ್ಪಿದ ಕರ್ನಾಟಕ ಎಕ್ಸ್‌ಪ್ರಸ್ ರೈಲು ಅಪಘಾತಕ್ಕೀಡಾಯಿತು. ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಲ್ಲಿ ಸುಂದರೇಶ್ ಕೂಡ ಒಬ್ಬರು. ಸುಂದರೇಶ್‌ಗೆ ಇದ್ದ ಸಂಘಟನಾ ಚಾತುರ್ಯ ನಾಗರಾಜ್ ಮೇಲೆ ಪ್ರಭಾವ ಬೀರಿತ್ತು. ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ ಕೂಡ ಮೌಡ್ಯವನ್ನು ಕಂದಾಚಾರವನ್ನು ವಿರೋಧಿಸುತ್ತಾ ಎಲ್ಲ ಮಠ ಮಾನ್ಯ ಪೀಠಾಧಿಪತಿಗಳೆಂಬ ಆಧುನಿಕ ಸರ್ವಾಧಿಕಾರಿಗಳನ್ನು ಸಿರಿಮನೆ ನಾಗರಾಜ್ ಎದುರು ಹಾಕಿಕೊಂಡಿದ್ದರು. ಪರಿಚಯವಿಲ್ಲದಿದ್ದರೂ ಸಹ ಕಷ್ಟಕ್ಕೆ ಒಳಗಾಗುವವರ ನೆರವಿಗೆ ಓಡಿ ಹೋಗುವ ಧಾವಂತಕ್ಕೆ ಸದಾ ತುಡಿಯುತ್ತಿದ್ದರು.

1984 ರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, 17 ಮಂದಿ ಶಿಷ್ಯರ ಕೈಯಲ್ಲೂ ರಾಜಿನಾಮೆ ಕೊಡಿಸಿ ಮಂಗಳೂರಿಗೆ ಹೋಗಿ ಸಹಕಾರ ತತ್ವದ ಅಡಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, “ಮುಂಗಾರು” ದಿನಪತ್ರಿಕೆಯನ್ನು ಆರಂಭಿಸಿದರು. vaddarse_mungaruಅಲ್ಲಿಯವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ’ಊರಿಗೊಬ್ಬಳೇ ಪದ್ಮಾವತಿ’ ಎಂಬಂತೆ ಮಣಿಪಾಲದ ಪೈ ಕುಟುಂಬದ ಉದಯವಾಣಿ ದಿನಪತ್ರಿಕೆ ಅಲ್ಲಿನ ಜನರ ಜೀವನಾಡಿಯಾಗಿತ್ತು. ಮುಂಗಾರು ಆರಂಭಗೊಂಡ ಕೆಲದಿನಗಳಲ್ಲೇ ತನ್ನ ಪ್ರಗತಿಪರ ಚಿಂತನೆ, ಆಲೋಚನೆ ಹಾಗೂ ಎಲ್ಲಾ ವರ್ಗಕ್ಕೂ ಸಲ್ಲುವ ಸುದ್ದಿಗಳಿಂದ ಹೆಸರುವಾಸಿಯಾಯಿತು. ಇದರಿಂದ ಗಾಬರಿಗೊಂಡ ಪೈ ಕುಟುಂಬ ಅಲ್ಲಿನ ಮಠಾಧೀಶರು ಮತ್ತು ಧರ್ಮಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಮುಂಗಾರು ಪತ್ರಿಕೆಯ ಬಂಡಲುಗಳನ್ನು ಸಾಗಿಸದಂತೆ ಬಸ್ ಮಾಲೀಕರಿಗೆ ತಾಕೀತು ಮಾಡಿಸಿದರು. ಅಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳುರು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳದೇ ದರ್ಬಾರ್ ಆಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲಕರು ಮತ್ತು ಕಂಡಕ್ಟರ್ ಹಾಗೂ ಇತರೆ ಜನಸಾಮಾನ್ಯರು ಸೇರಿ ಸ್ಥಾಪಿಸಿದ ಸಹಕಾರಿ ಸಾರಿಗೆ ಬಸ್‌ಗಳು ಜನಪ್ರಿಯವಾಗಿದ್ದವು. (ಇವುಗಳಿಗೆ ಶಂಕರ್ ಸಹಕಾರಿ ಸಾರಿಗೆ ಎಂಬ ಹೆಸರಿದ್ದ ನೆನಪು.) ಮುಂಗಾರು ಪತ್ರಿಕೆಯ ಬಂಡಲುಗಳನ್ನು ತಡೆ ಹಿಡಿಯಲಾಗುತ್ತಿದೆ ಎಂಬ ಸುದ್ದಿ ತಿಳಿದ ನಾಗರಾಜ್ ನಮ್ಮ ಊರುಗಳಿಗೆ ಮುಂಗಾರು ಪತ್ರಿಕೆ ತರದಿದ್ದ ಮೇಲೆ ನಿಮ್ಮ ಬಸ್ ಸೇವೆ ನಮಗೆ ಬೇಡ ಎಂಬ ಮುಷ್ಕರ ಆರಂಭಿಸಿ ಎಲ್ಲಾ ಬಲಿಷ್ಟ ಶಕ್ತಿಗಳನ್ನು ಮಣಿಸಿದ್ದರು. ಮುಂಗಾರು ದಿನಪತ್ರಿಕೆ ಆರಂಭದ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗಿಂತ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಓದುಗರನ್ನು ಸಂಪಾದಿಸಿತ್ತು.

ಕೊಪ್ಪ ಹಾಗೂ ಸುತ್ತ ಮುತ್ತಲಿನ ನಾಲ್ಕು ತಾಲ್ಲೂಕುಗಳಲ್ಲಿ ಜನಪ್ರಿಯರಾಗಿದ್ದ ಸಿರಿಮನೆ ನಾಗರಾಜ್ 1986 ರಲ್ಲಿ ನನಗೆ ಹತ್ತಿರವಾಗಲು ಒಂದು ಕಾರಣವಿತ್ತು. ಪ್ರಜಾವಾಣಿ ತೊರೆದು ಮುಂಗಾರು ಸೇರಿದ್ದ ನನ್ನ ಮಿತ್ರರು ಕೇವಲ ಆರು ತಿಂಗಳ ಅವಧಿಯಲ್ಲಿ ತಾತ್ವಿಕ ಭಿನ್ನಾಭಿಪ್ರಾಯದಿಂದ ಪತ್ರಿಕೆಯಿಂದ ಹೊರಬಂದರು. ನಂತರ ಹಿರಿಯ ಮಿತ್ರ ದೇವನೂರು ಮಹಾದೇವರ ಸಲಹೆ ಮೇರೆಗೆ ಒಂದಷ್ಟು ಸಮಾನ ಮನಸ್ಕರು ಸೇರಿ ಬೆಂಗಳೂರಿನ ವಿಜಯನಗರದಲ್ಲಿ ’ಪೃಥ್ವಿ ಪ್ರಕಾಶನ ಲಿಮಿಟೆಡ್’ ಎಂಬ ಸಂಸ್ಥೆ ಯನ್ನು ಸ್ಥಾಪಿಸಿದರು. ಬೆಂಗಳೂರಿನಿಂದ ಸುದ್ದಿಸಂಗಾತಿ ವಾರಪತ್ರಿಕೆ ಆರಂಭಿಸಿದಾಗ ತಾವಾಗಿಯೇ ಮುಂದೆ ಬಂದು ಆ ಕಾಲದಲ್ಲಿ ನಲವತ್ತು ಸಾವಿರ ರೂಪಾಯಿ ಶೇರು ಬಂಡವಾಳವನ್ನು ಸಂಗ್ರಹಿಸಿಕೊಟ್ಟಿದ್ದ ಸಹೃದಯ ನಾಗರಾಜ್‌ರದು. ಸುದ್ದಿಸಂಗಾತಿಯಲ್ಲಿದ್ದ ನಾನು ನಾಲ್ಕು ದಿನಗಳ ಕಾಲ ಅವರ ಮನೆಯಲ್ಲಿದ್ದುಕೊಂಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಿರುಗಾಡುತ್ತಾ ಅವರಿಗಿದ್ದ ಪ್ರಭಾವ, ನಿಷ್ಟರುತೆ, ನೈತಿಕತೆ ಇವುಗಳಿಗೆ ಸಾಕ್ಷಿಯಾಗಿದ್ದೆ. ಸಿರಿಮನೆ ನಾಗರಾಜ್‌ರವರ ಅತಿದೊಡ್ಡ ದೌರ್ಬಲ್ಯವೆಂದರೆ, ಅನಾವಶ್ಯಕವಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಹೋರಾಡುವುದು. ಇಂತಹ ಹುಚ್ಚು ಪ್ರವೃತ್ತಿ ಅಂತಿಮವಾಗಿ ಅವರನ್ನು ನಕ್ಸಲ್ ಹೋರಾಟಕ್ಕೆ ಎಳೆದೊಯ್ದು ಬದುಕನ್ನು ಮೂರಾಬಟ್ಟೆಯಾಗಿಸಿತು.

ನಾಗರಾಜ್ ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದರ ಹಿಂದೆ ಒಂದು ಸಣ್ಣ ಇತಿಹಾಸ ಅಡಗಿದೆ. ಚಿತ್ರದುರ್ಗದ ಮೂಲದ ನನ್ನ ಇನ್ನೊಬ್ಬ ಕಿರಿಯ ಆತ್ಮೀಯ ಮಿತ್ರ Banjagere-Jayaprakashಡಾ. ಬಂಜಗೆರೆ ಜಯಪ್ರಕಾಶ್ ಮೈಸೂರಿನಲ್ಲಿ ಓದುತ್ತಿದ್ದಾಗಲೆ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ತನ್ನ ಪ್ರಖರ ವೈಚಾರಿಕತೆಯಿಂದ ಮುಂಚೂಣಿಗೆ ಬಂದ ಯುವಕ. ವಿದ್ಯಾಭ್ಯಾಸದ ನಂತರ ಅಸಮಾನತೆ, ಜಾತಿ ಸಂಘರ್ಷ, ಸಮಾಜದ ವೈರುದ್ಧ್ಯಗಳ ಕುರಿತಂತೆ ಯುಜನತೆಯಲ್ಲಿ ಪ್ರಜ್ಞೆ ಹುಟ್ಟುಹಾಕಬೇಕೆಂಬ ಕನಸು ಹೊತ್ತಿದ್ದ ಬಂಜಗೆರೆ 1987 ರ ಸಮಯದಲ್ಲಿ “ಕರ್ನಾಟಕ ವಿಮೋಚನಾ ರಂಗ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅದಕ್ಕೆ ರಾಜ್ಯ ಮಟ್ಟದ ಸ್ವರೂಪ ನೀಡಿದ್ದರು. ಈ ಸಂಘಟನೆಗೆ ಸಿರಿಮನೆ ನಾಗರಾಜ್ ಉಪಾಧ್ಯಕ್ಷರಾಗಿ ಸೇರ್ಪಡೆಯಾದರು. ಮಲೆನಾಡಿನಲ್ಲಿ ನಡೆಯುತ್ತಿದ್ದ ಪರಿಸರ ಉಳಿಸಿ ಚಳುವಳಿಗೆ ಕೆ.ವಿ.ಆರ್. ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ವಿಮೋಚನಾ ರಂಗ ಕೈಜೋಡಿಸಿತ್ತು.

ಇದೇ ವೇಳೆಗೆ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ನಗರದ ಹೊರಭಾಗದಲ್ಲಿರುವ ಕೊಲಾರ ಎಂಬ ಗ್ರಾಮದ ಬಳಿ ರಾಜ್ಯ ಸರ್ಕಾರ ಸ್ಥಾಪಿಸಿದ್ದ ಕೈಗಾರಿಕಾ ಬಡಾವಣೆಯಲ್ಲಿ ಆಂಧ್ರದ ಉದ್ಯಮಿಗಳು ತಳ ಊರಿ ಸಗಟು ಔಷಧ ತಯಾರಿಕೆಯ ಘಟಕಗಳನ್ನು ಸ್ಥಾಪಿಸಿದ್ದರು. ಈ ಕೈಗಾರಿಕೆಗಳಿಂದ ಹೊರಬೀಳುತಿದ್ದ ವಿಷಯುಕ್ತ ತ್ಯಾಜ್ಯದ ನೀರು ಸುತ್ತ ಮುತ್ತಲಿನ ಕೃಷಿ ಭೂಮಿಯನ್ನು ಕಲುಷಿತಗೊಳಿಸಿ, ಹಲವಾರು ಜಾನುವಾರುಗಳ ಸಾವಿಗೆ ಕಾರಣವಾಗಿದ್ದವು. ಅಲ್ಲಿನ ಜನರ ಮುಗ್ದತೆಯನ್ನು ಮತ್ತು ಅನಕ್ಷರತೆ ಹಾಗೂ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದ ಕೈಗಾರಿಕೋದ್ಯಮಿಗಳು ಇನ್ನಿಲ್ಲದಂತೆ ಕೊಬ್ಬಿಹೋಗಿದ್ದರು.

ಚಿಕ್ಕಮಗಳೂರಿನಿಂದ ದೂರದ ಬೀದರ್ ಜಿಲ್ಲೆಗೆ ತೆರಳಿದ ಸಿರಿಮನೆ ನಾಗರಾಜು ಕರ್ನಾಟಕ ವಿಮೋಚನಾ ರಂಗದ ಮೂಲಕ ಅಲ್ಲಿನ ಜನರನ್ನು ಸಂಘಟಿಸಿ ಹೋರಾಟ ನಡೆಸುವುದರ ಮೂಲಕ ಕೈಗಾರಿಕೆಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಸಹಜವಾಗಿ ಈ ಹೋರಾಟ ನೆರೆಯ ಗಢಿಭಾಗದ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಮಾವೋವಾದಿ ನಕ್ಸಲರ ಸಂಘಟನೆಯ ಗಮನ ಸೆಳೆದಿತ್ತು. ಹೋರಾಟದ ಜೊತೆಗೆ ಹುಂಬತನವನ್ನು ಮೈಗೂಡಿಸಿಕೊಂಡಿದ್ದ ಸಿರಿಮನೆ ನಾಗರಾಜ್, ಈ ಘಟನೆಯಿಂದಾಗಿ ಆಂಧ್ರ ನಕ್ಸಲರ ಸಂಪರ್ಕಕ್ಕೆ ಬಂದರು.

ಯಾವ ಕಾರಣಕ್ಕೂ ಅಹಿಂಸೆಯನ್ನು ಒಪ್ಪದ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಕನಸು ಕಂಡಿದ್ದ ಬಂಜಗೆರೆಗೆ ಸಿರಿಮನೆ ನಾಗರಾಜುವಿನ ನಿರ್ಧಾರ ದೊಡ್ಡ ಶಾಕ್ ನೀಡಿತು. ಅಂತಿಮವಾಗಿ ಕರ್ನಾಟಕ ವಿಮೋಚನಾ ವೇದಿಕೆಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಂಜಗೆರೆ ಜಯಪ್ರಕಾಶ್, ಹೋರಾಟದ ಹಾದಿಯನ್ನು ತೊರೆದು ಬೆಂಗಳೂರಿನ ಹೊರ ವಲಯದ ಕನಕಪುರ ರಸ್ತೆಯ ಹಾರೋಹಳ್ಳಿಗೆ ಬಂದು ನೆಲೆಸಿ ಓದು ಬರಹ ಇವುಗಳತ್ತ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಯಿತು. ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವುದೇ ಸಂಘಟನೆಯೊಂದಿಗೆ ನೇರವಾಗಿ ಗುರುತಿಸಿಕೊಳ್ಳದ ಬಂಜಗೆರೆ ಜಯಪ್ರಕಾಶ್, ಸೈದ್ಧಾಂತಿಕ ವಿಚಾರಗಳ ತಳಹದಿಯಿಲ್ಲದ ಸಂಘಟನೆಗಳು ಅಪಾಯಕಾರಿ ಎಂದು ನಂಬಿದ ವ್ಯಕ್ತಿ.

ಹೀಗೆ 1988-89 ರ ಸಮಯದಲ್ಲಿ ಕಾಣೆಯಾಗುವುದರ ಮೂಲಕ ನಕ್ಸಲ್ ಚಳುವಳಿಯಲ್ಲಿ ಇದ್ದಾರೆ ಎಂದು ಹೇಳಲ್ಪಡುವ ಸಿರಿಮನೆ ನಾಗರಾಜ್ ಈವರೆಗೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಈಗ ಆಸುಪಾಸು 58 ಅಥವಾ 59 ವರ್ಷವಾಗಿರುವ ಈ ನನ್ನ ಗೆಳೆಯ ಮಲೆನಾಡ ಅರಣ್ಯದಲ್ಲಿ ಇದ್ದಾರೆ ಎಂದರೆ, ನಾನು ನಂಬಲು ಸಿದ್ಧನಿಲ್ಲ. ಏಕೆಂದರೇ ಪಶ್ಚಿಮ ಘಟ್ಟದ ಮಳೆಯ ಕಾಡುಗಳಲ್ಲಿ ಜೀವಿಸುವಷ್ಟು ದೈಹಿಕ ಶಕ್ತಿ ಸಿರಿಮನೆಗೆ ಇಲ್ಲ. ಈಗ ಕರ್ನಾಟಕದ ಪೋಲಿಸರು ಅವರ ಸುಳಿವಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕಳೆದ ನವಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್ ಪ್ಯಾಕೇಜ್ ಯೋಜನೆಯಡಿ ಸಿರಿಮನೆ ಶರಣಾಗುತ್ತಾರೆ ಎಂದು ನಂಬಿದ್ದವರ ಪೈಕಿ ನಾನೂ ಒಬ್ಬನಾಗಿದ್ದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಅವರ ಪತ್ನಿ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ಅನಾಮಿಕರಂತೆ ವಾಸಿಸುತ್ತಿದ್ದಾರೆ. ಒಂದು ಸುಂದರ ಹೂವಿನ ಹೆಸರುಳ್ಳ ಮಗಳನ್ನು ಐದಾರು ವರ್ಷವಿರುವಾಗ ತೊರೆದು ಹೋದ ನಾಗರಾಜ್ ಈವರೆಗೆ ತಿರುಗಿ ನೋಡಿಲ್ಲ. ಬುದ್ಧಿವಂತ ಪದವೀಧರೆಯಾದ ಆಕೆ ತಂದೆಯ ಕೃತ್ಯದಿಂದಾಗಿ ಸರ್ಕಾರಿ ಉಗ್ಯೋಗಗಳಿಂದ ವಂಚಿತಳಾಗಿ, ಹೆಣ್ಣು ಮಕ್ಕಳ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಯಲ್ಲಿ ದುಡಿಯುತ್ತಿದ್ದಾಳೆ. ಆಕೆಯನ್ನು ನೋಡಿದಾಗಲೆಲ್ಲಾ ಮನಸ್ಸಿಗೆ ಬೇಸರ ಮತ್ತು ಸಂಕಟವಾಗುತ್ತದೆ.

ತನ್ನ ಮನೆಯನ್ನು ಉದ್ಧಾರ ಮಾಡಲಾಗದ ವ್ಯಕ್ತಿಯೊಬ್ಬ ಸಮಾಜವನ್ನು ಉದ್ಧಾರ ಮಾಡುತ್ತೇನೆ ಎಂದು ಹಿಂಸೆಯ ಹಾದಿ ತುಳಿದರೆ ಆತನನ್ನು ಹೇಗೆ ಅರ್ಥೈಸೋಣ? ತನ್ನ ಮನೆಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗಲು ಹೊರಟ ವ್ಯಕ್ತಿಯನ್ನು ಉದಾರಿ ಎಂದು ಕರೆಯಲು ಸಾಧ್ಯವೇ? ಬದಲಾಗಿ ಅಜ್ಞಾನಿ ಅಥವಾ ಮೂರ್ಖ ಎಂದು ಕರೆಯಲಾಗುತ್ತದೆ. ನನ್ನ ಮಿತ್ರ ಸಿರಿಮನೆ ನಾಗರಾಜು ಸ್ಥಿತಿ ಕೂಡ ಅದೇ ಆಗಿದೆ.

(ಮುಂದುವರಿಯುವುದು)

7 thoughts on “ಪ್ರಜಾ ಸಮರ – 17 (ನಕ್ಸಲ್ ಕಥನ)

 1. yusuf patel

  co.BKsundresh 1995 janavary 1randu nammannu agalidaru.sirimane nagarajra horata mukyavagi gubbugadde kaadina horata.hutatmarada parvati horatakkilidaga parvati primary school student.sirimane nagaraj avara kutumba serikollali eega RTI act ondu gun.mukya vahinige barali.

  Reply
 2. Anil Hossur

  Anyayavannu prathibhatisoke tanna ooru/Maneyadarenu, yaava ooradru ondae. Namma ooru baere ooru andkondiddarindale nammanthavrella krupa poshitha companygalanna saerikondu hatharalli hannondagi huthatmarige lip sympathy jasthy andrae akshara namana sallisutta irbekagutte. haagagirodindane saket anthahavaru mattu nanu balla Sirimane Nagaraj anthahavru jana maanasadalli sada irthare.

  Reply
 3. Shashidhar Hemmady

  ಲೇಖಕರು ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಕಲ್ಪನೆ ಮಾಡಿಕೊಂಡು ತಮ್ಮ ಊಹೆಗಳ ಮೂಲಕ ಬೇರೆಯವರ ಬದುಕಿನ ಕಥನವನ್ನು ಬರೆದಂತಿದೆ. ಸಿರಿಮಗೆ ನಾಗರಜರು ಮಾಡಿದ ‘ಕೃತ್ಯಗಳ’ ಕಾರಣ ಅವರ ಮಗಳಿಗೆ ಸರಕಾರಿ ನೌಕರಿ ದೊರೆಯಲಿಲ್ಲ ಎಂದು ಲೇಖಕರು ಬರೆಯುತ್ತಾರೆ. ಈ ನಾಡಿನಲ್ಲಿ ಅರ್ಹತೆಯಿದ್ದೂ ಸರಕಾರಿ ನೌಕರಿ ಸಿಗದ ಹೆಣ್ಣುಮಕ್ಕಳಿಗೆ ಅವರ ತಂದೆಯ ‘ಕೃತ್ಯಗಳ’ ಕಾರಣವೇ ನೌಕರಿ ಸಿಗಲಿಲ್ಲವೇ? ಸರಕಾರಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಬೇರೇನೂ ಗತಿ ಇಲ್ಲದೆ ಸಿರಿಮನೆ ನಾಗರಾಜರ ಮಗಳು ಅನಿವಾರ್ಯವಾಗಿ ಸ್ವಯಂ ಸೇವಾ ಸಂಘಟನೆಯಲ್ಲಿ ದುಡಿಯುತ್ತಿದ್ದಾರೆ ಎಂಬರ್ಥ ಲೇಖಕರ ಮಾತಿನಲ್ಲಿದೆ. ಇದು ಆ ಹೆಣ್ಣು ಮಗಳು ಮಾಡುತ್ತಿರುವ ಹೋರಾಟಕ್ಕೆ ಲೇಖಕರು ಮಾಡುತ್ತಿರುವ ಅವಮಾನ. ಸಿರಿಮನೆ ನಾಗರಾಜರು ದರೋಡೆಯೋ, ಕಳ್ಳತನವೋ ಮಾಡಿ ಅವರ ಹೆಂಡತಿ ಮಕ್ಕಳು ತಲೆ ಎತ್ತಿ ನಡೆಯದಂತೆ ಮಾಡಿದ್ದಾರೆ, ಹೀಗಾಗಿ ಅವರ ಕುಟುಂಬ ಮುಖ ಮುಚ್ಚಿಕೊಂಡು ಬದುಕುತ್ತಿದ್ದಾರೆ ಎಂದು ಲೇಖಕರು ಬರೆಯುತ್ತಾರೆ. ಈ ತರ್ಕ ವಿಚಿತ್ರವಾಗಿದೆ.

  ಮನೆಯನ್ನು ಉದ್ದಾರ ಮಾಡಲು ಆಗದ ಮನುಷ್ಯ ಸಮಾಜವನ್ನು ಉದ್ಧಾರ ಮಾಡಲು ಹೊರಟಿದ್ದಾರೆ ಎಂದರೆ ಏನರ್ಥ? ನಕ್ಸಲರೇ ಇರಲಿ ಅಥವಾ ಸಮಾಜದ ‘ಮುಖ್ಯ ಧಾರೆಯಲ್ಲಿ’ ಇದ್ದುಕೊಂಡು ಹೋರಾಟ ನಡೆಸುವ ಮಂದಿಯೇ ಇರಲಿ, ಎಲ್ಲರೂ ತಮ್ಮ ಮನೆ, ಕುಟುಂಬದ ವ್ಯಾಮೋಹ ಬಿಟ್ಟು ಬಂದಿರುವ ಕಾರಣಕ್ಕೇ ಅವರು ಜನಪರ ಹೋರಾಟ ನಡೆಸಲು ಸಾಧ್ಯವಾಗಿದೆ. ಎಲ್ಲರೂ ತಮ್ಮ ಮನೆ ಉದ್ಧಾರ ಮಾಡಿ ಆ ಮೇಲೆ ಸಮಾಜ ಉದ್ಧಾರ ಮಾಡುತ್ತೇನೆ ಎಂದು ಮನೆಯಲ್ಲೇ ಕುಳಿತಲ್ಲಿ ಯಾವ ಹೋರಾಟಗಳು ನಡೆಯುತ್ತಿರಲಿಲ್ಲ. ‘ಮನೆಯ ಉದ್ಧಾರ’ ಎಂಬುದಕ್ಕೆ ಕೊನೆ ಎಂಬುದಿಲ್ಲ. ಹೋರಾಟಗಾರರಿಗೆ ಜಗತ್ತೇ ತಮ್ಮ ಮನೆ ಎಂದು ಅನಿಸಿರುತ್ತದೆ. ಅದಕ್ಕಾಗಿಯೇ ಅವರು ಹೋರಾಟಕ್ಕೆ ಧುಮುಕುತ್ತಾರೆ. ಸಿರಿಮನೆ ನಾಗರಾಜ ತಮ್ಮ ಮನೆಗೆ ಬೆಂಕಿ ಹಚ್ಚಿ ಸಮಾಜ ಉದ್ಧಾರ ನಡೆಸಲು ಹೋಗಿದ್ದಾರೆ ಎಂದು ಎಂದಾದರೂ ಸಿರಿಮನೆ ನಾಗರಾಜ ಕುಟುಂಬ ಹೇಳಿಕೊಂಡಿದೆಯೆ? ಖಂಡಿತವಾಗಿಯೂ ಇರಲಿಕ್ಕಿಲ್ಲ. ಲೇಖಕರು ಎಲ್ಲದರ ಮತ್ತು ಎಲ್ಲರ ಕುರಿತು ಹಗುರವಾಗಿ ಮಾತನಾಡುವುದು ಖಂಡಿತವಾಗಿಯೂ ನನಗೆ ಸಮ್ಮತವಿಲ್ಲ. ಸಿರಿಮನೆ ನಾಗರಾಜರ ಮಗಳನ್ನು ಕಂಡು ಲೇಖಕರು ಸಹಾನುಭೂತಿ, ಬೇಸರ ವ್ಯಕ್ತಪಡಿಸುವುದು ಬಿಟ್ಟು ಅವರ ಜನಪರ ಕಾಳಜಿಯ ಪ್ರಾಮಾಣಿಕ ಹೋರಾಟವನ್ನು ಅರ್ಥೈಸಿಕೊಳ್ಳಬೇಕಾಗಿದೆ.
  ಶಶಿಧರ ಹೆಮ್ಮಾಡಿ, ಕುಂದಾಪುರ

  Reply
  1. vsu

   ಪ್ರಿಯ ಹೆಮ್ಮಾಡಿಯವರೇ,
   ಈ ಲೇಖನದಲ್ಲಿ ಜಗದೀಶ ಕೊಪ್ಪ ಅವರ ದೃಷ್ಟಿಕೋನ ಮಾತ್ರವಲ್ಲದೇ ಹಲವಾರು ತಪ್ಪು ಮಾಹಿತಿಗಳೂ ಇವೆ. ಈ ವಿಚಾರದಲ್ಲಿ ಮಾಹಿತಿ ಇರುವವರಿಗೆ ಕೆಲವೊಮ್ಮೆ ತಮಾಷೆ ಅಂತಲೂ, ಕೆಲವೊಮ್ಮೆ ಸಿಟ್ಟೂ ಬರುವಂತೆ ನಕ್ಸಲೈಟರ ಕುರಿತ ಬರಹಗಳು ಇರುತ್ತವೆ. ಅದಕ್ಕೆ ಆ ಬರಹಗಾರರು ಕಾರಣರಾಗಿರುವುದಕ್ಕಿಂತ, ಇಡೀ ನಕ್ಸಲೈಟ್ ಚಳವಳಿಯೇ ಅತ್ಯಂತ ನಿಗೂಢವಾಗಿರುವುದರಿಂದ ಅದು ಕಲ್ಪಿಸಿಕೊಂಡಂತೆಲ್ಲಾ ವಿಸ್ತಾರವೂ, ವಿಸ್ಮಯಕಾರಿಯೂ ಆಗಿಬಿಡುತ್ತದೆ. ಅದೇ ಇಲ್ಲೂ ಆಗಿದೆ.
   ಆದರೆ ಜಗದೀಶ್ ಕೊಪ್ಪ ಅವರು ತಾವು ಹೆಸರಿಸಿದ ವ್ಯಕ್ತಿಗಳ ಕುರಿತು ಪ್ರೀತಿಯಿಂದ ಮತ್ತು ತಾವು ನಂಬಿಕೊಂಡ ವಿಚಾರಗಳ ಬಗ್ಗೆ ಕಾಳಜಿಯಿಂದಷ್ಟೇ ಆ ರೀತಿ ಬರೆದಿದ್ದಾರೆ ಎಂದು ನನಗನ್ನಿಸಿದ್ದರಿಂದ ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಈಗ ನೀವು ಬರೆದಿದ್ದನ್ನು ನೋಡಿದ ಮೇಲೆ ನಾಲ್ಕು ಸಾಲು ಬರೆಯೋಣವೆನ್ನಿಸಿ…………

   Reply
 4. John Mathais

  ಕಾಮ್ರೆಡ್ ಬಿ.ಕೆ ಸುಂದರೇಶ್ ಅವರು ೧೯೯೪ ಡಿಸೆಂಬರ್ ೩೧ ರಂದು ಬೆಳಗ್ಗೆ ಮುಂಬೈನಿಂದ ಬೆಂಗಳೂರಿಗೆ ಉದ್ಯಾನ ಎಕ್ಸ್ ಪ್ರೆಸ್ ರೈಲಿನಲ್ಲಿ ಬರುವಾಗ, ಯಲಹಂಕ ಸಮೀಪ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದರು. ಅವರ ಅಗಲಿಕೆಯ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಷಿತರ ಪರವಾದ ಹೋರಾಟ ಕೊನೆಯುಸಿರೆಳೆಯಿತು. ನೀವು ಸಿರಿಮನೆ ನಾಗರಾಜ್ ಅವರನ್ನು ನೆನಪಿಸಿಕೊಂಡು ಈ ಬರಹ ಬರೆದಿರುವ ಸಂದರ್ಭದಲ್ಲಿ ಕಾಕತಾಳೀಯ ಎನ್ನುವಂತೆ ಅವರ ಇರುವಿಕೆಯ ಬಗ್ಗೆ ವಿವರ ತಿಳಿದುಕೊಳ್ಳಲು ನಾನು ಕಳೆದ ವಾರ ಕೊಪ್ಪಕ್ಕೆ ಭೇಟಿ ನೀಡಿದ್ದೆ. ನನಗೂ ಗೆಳೆಯರಾಗಿರುವ ಅವರ ಮಿತ್ರರಿಗೂ ನಾಗರಾಜ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

  ಕೊನೆಗೆ ನಾನು ವಿಶ್ರಾಂತ ರಾಜಕೀಯ ಮುತ್ಸದ್ಧಿ ಜಿ. ಹೆಚ್ ಗೋವಿಂದೇ ಗೌಡರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ ಮೊದಲಾದ ಗಂಭೀರ ಸಮಸ್ಯೆಗಳ ಬಗ್ಗೆ ಮಾತನಾಡಿಕೊಂಡು ಬಂದೆ. ಅದೇನೆ ಇರಲಿ ನಿಮ್ಮ ಈ ಲೇಖನ ಅದ್ಭುತವಾಗಿದೆ.

  Reply

Leave a Reply

Your email address will not be published.