ಸಂಗಯ್ಯ ಹಿರೇಮಠರಿಗೆ ಧನ್ಯವಾದಗಳನ್ನು ತಿಳಿಸುತ್ತಾ…


– ರವಿ ಕೃಷ್ಣಾರೆಡ್ದಿ


 

ಹಿಂದಿನ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಗಣಿ ಹಗರಣಗಳ ವಿರುದ್ಧವಾಗಿ, ಹಾಗೂ ಬಿಜೆಪಿ ಮತ್ತದರ ಸಹಪಕ್ಷಗಳ ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣದ ವಿರುದ್ಧದ ಜನತೀರ್ಪಿನಿಂದಾಗಿ ಆರೇಳು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಕೊನೆಗೂ ಸಂತೋಷ್ ಲಾಡ್ ಹೊರ ನಡೆದಿದ್ದಾರೆ. KPN photoಇದು ಸಿದ್ಧರಾಮಯ್ಯ ಮತ್ತವರ ಪಕ್ಷದವರು ನೈತಿಕತೆ ಮೆರೆಯೋಣ ಎಂದು ಭಾವಿಸಿದ ಕಾರಣಕ್ಕೆ ಅಲ್ಲವೇ ಅಲ್ಲ. ಸಂಗಯ್ಯ ಹಿರೇಮಠ್ ಎಂಬ ಸುಮಾರು ಎಪ್ಪತ್ತು ವರ್ಷದ ಹೋರಾಟಗಾರ ಮತ್ತು ಎಚ್.ಎಸ್.ದೊರೆಸ್ವಾಮಿ ಎಂಬ ತೊಂಬತ್ತೈದು ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಹೋರಾಟದ ಫಲವಾಗಿ ಮಾತ್ರ ಸಂತೋಷ್ ಲಾಡ್ ಎಂಬ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೊತ್ತ ವ್ಯಕ್ತಿ ಈ ರಾಜ್ಯದ ಸಚಿವ ಸಂಪುಟದಿಂದ ಹೊರ ನಡೆಯುವಂತಾಗಿದೆ.

ಅಣ್ಣಾ ಹಜಾರೆಯವರು ತಮ್ಮ ಭಾಷಣಗಳಲ್ಲಿ ಸಂದರ್ಭ ಸಿಕ್ಕಾಗಲೆಲ್ಲ ತಾವು ಮಹಾರಾಷ್ಟ್ರ ಸರ್ಕಾರದ ಎಷ್ಟು ಭ್ರಷ್ಟ ಸಚಿವರ ರಾಜೀನಾಮೆಗೆ ಕಾರಣನಾಗಿದ್ದೇನೆ ಎಂದು ಹೇಳುತ್ತಿರುತ್ತಾರೆ. ವರ್ಷದ ಹಿಂದೆ ನಡೆದ ಕೇಂದ್ರ ಸರ್ಕಾರದ ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ಆರು ಸಚಿವರನ್ನು ಕೈಬಿಟ್ಟ ಸಂದರ್ಭದಲ್ಲೂ “ನಾನು ಆರು ಸಚಿವರ ವಿಕೆಟ್ ಪಡೆದಿದ್ದೇನೆ” ಎಂದು ಹೇಳಿದ್ದರು. ಆ ದೃಷ್ಟಿಯಲ್ಲಿ ಯೋಚಿಸುವುದಾದರೆ ನಮ್ಮ ರಾಜ್ಯದ ಸಮಾಜ ಪರಿವರ್ತನಾ ಸಮುದಾಯanna-hazareಎಸ್.ಆರ್.ಹಿರೇಮಠರು ರಾಜ್ಯದ ಜನತೆಯ ಪರ ತಮ್ಮ ಹೋರಾಟದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ವಿಕೆಟ್‌ಗಳನ್ನು ಪಡೆಯುತ್ತಲೇ ಬಂದಿದ್ದಾರೆ ಮತ್ತು ಭ್ರಷ್ಟರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಈ ರಾಜ್ಯದ ಸಾರ್ವಜನಿಕ ಹಿತಾಸಕ್ತಿ ಮತ್ತು ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ ಅವರು ಮಾಡುತ್ತಿರುವ ಹೋರಾಟಕ್ಕೆ ನಮ್ಮ ಅಭಿನಂದನೆಗಳಲ್ಲ, ಬದಲಿಗೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ತಿಳಿಸಬೇಕಿದೆ.

ಅಂದ ಹಾಗೆ, ಸಂತೋಷ್ ಲಾಡ್‌ರವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಅವರ ವಿರುದ್ಧ ಯಾವ ಆರೋಪಗಳು ಇದ್ದವೊ ಮತ್ತು ಯಾವ ದಾಖಲೆಗಳು ಲಭ್ಯವಿದ್ದವೊ, ಅದಕ್ಕಿಂತ ತೀರಾ ಹೆಚ್ಚಿನ ಮಾಹಿತಿಗಳೇನೂ ಕಳೆದ ಐದಾರು ತಿಂಗಳಿನಲ್ಲಿ ಹೊರಬಂದಿರಲಿಲ್ಲ. ಲಾಡ್‌ರನ್ನು ಅಕ್ರಮಗಳ ಆರೋಪದ ಮೇಲೆ ಕೈಬಿಡಬೇಕೆಂದಿದ್ದರೆ ಎಂದೋ ಕೈಬಿಡಬಹುದಿತ್ತು. ಇಷ್ಟು ದಿನಗಳ ಕಾಲ ಸ್ವತಃ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಲಾಡ್‌ರನ್ನು ಸಮರ್ಥಿಸಿಕೊಳ್ಳುತ್ತಲೆ ಬಂದರು ಮತ್ತು ತಾವೆ ಅವರಿಗೆ ಕ್ಲೀನ್ ಚಿಟ್ ಕೊಡುತ್ತಿದ್ದರು. ಆದರೆ, ಹಿರೇಮಠರು ಮತ್ತು ದೊರೆಸ್ವಾಮಿಯವರ ಸಂಘಟಿತ ಪ್ರಯತ್ನದ ಫಲವಾಗಿ ಈ ಪ್ರಸ್ತಾಪ ಮತ್ತು ಹೋರಾಟವನ್ನು ಚಾಪೆಯ ಕೆಳಗೆ ಹುದುಗಿಸಿಡಲಾಗದು ಮತ್ತು ಕ್ರಮ ತೆಗೆದುಕೊಳ್ಳುವುದನ್ನು ಹೆಚ್ಚು ದಿನ ಮುಂದೂಡಲಾಗದು ಎನ್ನುವ ಕಾರಣಕ್ಕೆ ತಮಗೆ ಅನುಕೂಲಕರವಾದ ಸಮಯ ಸಂದರ್ಭ ನೋಡಿಕೊಂಡು ಮುಖ್ಯಮಂತ್ರಿಗಳು ಸಂತೋಷ್ ಲಾಡ್‌ರ ರಾಜೀನಾಮೆ ಪಡೆದಿದ್ದಾರೆ.

ಬೆಳಗಾವಿಯ ಅಧಿವೇಶನ ಮತ್ತು ಅಲ್ಲಿ ವಿಪಕ್ಷಗಳು ಈ ವಿಷಯ ಎತ್ತಬಹುದಾದ ಸಾಧ್ಯತೆಯಿಂದಾಗಿಯೂ santosh-ladಈಗ ರಾಜೀನಾಮೆ ಪಡೆದಿರಬಹುದು. ಆದರೆ, ವಿಪಕ್ಷಗಳ ಇಂತಹ ಎಷ್ಟು ಒತ್ತಡಗಳನ್ನು ನಮ್ಮ ಆಡಳಿತ ಪಕ್ಷಗಳು ಮೆಟ್ಟಿ ನಿಂತಿಲ್ಲ ಮತ್ತು ಕಡೆಗಣಿಸಿಲ್ಲ? ಇನ್ನು, ಈ ವಿಷಯ ಇರಲಿ, ಇಲ್ಲದಿರಲಿ, ಸದನದ ಕಲಾಪಗಳು ಸುಸೂತ್ರವಾಗಿ ನಡೆಯುವ ಯಾವ ಖಾತರಿ ಇದೆ? ವಿರೋಧಿಸುವುದೇ, ಬಾಯಿ ಮಾಡುವುದೇ ಕಲಾಪದಲ್ಲಿ ಪಾಲ್ಗೊಳ್ಳುವ ವಿಧಾನ ಎಂದು ವಿಪಕ್ಷಗಳ ಸದಸ್ಯರು ಅಂದುಕೊಂಡರೆ, ಇದೊಂದು ಅನಗತ್ಯ ಕಸರತ್ತು, ಸಮಯ ಹಾಳು ಎಂಬ ಭಾವನೆಯಲ್ಲಿ ಆಳುವ ಪಕ್ಷದ ಸದಸ್ಯರು ಮತ್ತು ಸಚಿವರು ಭಾವಿಸುತ್ತಾರೆ. ಅವರು ಸದನದಲ್ಲಿ ಪಾಲ್ಗೊಳ್ಳಲು ತೋರಿಸುವ ಉತ್ಸಾಹದಿಂದಲೇ ಇದನ್ನೆಲ್ಲ ಅಳೆಯಬಹುದು. ಹಾಗಾಗಿ, ವಿಪಕ್ಷಗಳಿಗೆ ಹೆದರಿ ಮತ್ತು ಅವರ ಒತ್ತಡಕ್ಕೆ ಮಣಿದು ಸಿದ್ಧರಾಮಯ್ಯನವರು ಲಾಡ್‌ರ ರಾಜೀನಾಮೆ ಪಡೆದಿದ್ದಾರೆ ಎನ್ನುವುದು ಅಷ್ಟೇನೂ ಸರಿಯಲ್ಲ. (ನಾವು ಪ್ರತಿನಿಧಿಸುವ ಲೋಕ್‌ಸತ್ತಾ ಪಕ್ಷದ ವತಿಯಿಂದ ನಾನು ಮತ್ತು ನನ್ನ ಸಹೋದ್ಯೋಗಿಗಳು ಒಮ್ಮೆ ಪತ್ರಿಕಾಗೋಷ್ಟಿ ಕರೆದು ಸಂತೋಷ್ ಲಾಡ್‌ರ ರಾಜೀನಾಮೆ ಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೆವು. ನಮ್ಮ ಒತ್ತಾಯದ ಕಾರಣಕ್ಕಾಗಿಯೆ ಅವರ ರಾಜೀನಾಮೆ ಪಡೆಯಲಾಯಿತು ಎನ್ನುವುದು ಎಷ್ಟು ಬಾಲಿಶವಾಗುತ್ತದೊ, ಅದಕ್ಕಿಂತ ಸ್ವಲ್ಪ ಕಮ್ಮಿ ಬಾಲಿಶತನದ್ದು ಬಿಜೆಪಿಯವರ ಒತ್ತಡದಿಂದಾಗಿ ಮತ್ತು ಅವರು ಸದನದಲ್ಲಿ ಮಾಡಬಹುದಾದ ಕಿರಿಕಿರಿಯ ಕಾರಣಕ್ಕಾಗಿ ಲಾಡ್‌ರ ರಾಜೀನಾಮೆ ಪಡೆಯಲಾಯಿತು ಎನ್ನುವುದು.)

ಇನ್ನು, ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿವೆ, parameshwara-roshanbeg-dkshivakumarಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮನಸ್ಸಿಲ್ಲದ ಮುಖ್ಯಮಂತ್ರಿಗಳು, ಲಾಡ್‌ರವರು ರಾಜೀನಾಮೆ ನೀಡುವಂತೆ ಮಾಡುವುದರ ಮೂಲಕ ತಮಗಿಷ್ಟವಿಲ್ಲದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಆಗದಂತಹ ವಾತಾವರಣ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಒಂದಷ್ಟು ವಾಸ್ತವಾಂಶ ಇರಬಹುದು. ಸಂಪುಟ ವಿಸ್ತರಣೆ ಎಂದರೆ ಅದು ಭಿನ್ನಮತವನ್ನು ಉಂಟು ಹಾಕಿದಂತೆ ಎನ್ನುವ ವಾತಾವರಣ ನಮ್ಮಲ್ಲಿದೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡಲು ಅಥವ ಹಾಗೆ ವಿಸ್ತರಣೆ ಮಾಡಲೇಬೇಕಾದ ಸಂದರ್ಭ ಬಂದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಬಹುದಾದಂತಹ ಕೆಲವರನ್ನು ಹೊರಗಿಡಲು ಸಿದ್ದರಾಮಯ್ಯನವರು ಹೀಗೆ ಮಾಡಿರಲೂಬಹುದು. ಆದರೆ, ಹಾಗೆ ಆದಲ್ಲೂ ಅದು ನೈತಿಕವಾದ ನಡೆಯಲ್ಲ. ಅದು “ರಾಜಕಾರಣ” ಯಾವೆಲ್ಲ ಕೆಟ್ಟ ಅಧಿಕಾರ್ಥಗಳನ್ನು (connotations) ಕೊಡುತ್ತದೆಯೊ ಅದಕ್ಕೆ ತಕ್ಕನಾದ ನಡವಳಿಕೆಯೇ ಆಗಿದೆ. ರಾಜ್ಯ ಈ ಮುಖ್ಯಮಂತ್ರಿಯಿಂದ ಇನ್ನೂ ಹೆಚ್ಚಿನ ನೈತಿಕತೆ ಮತ್ತು ಪ್ರಬುದ್ಧತೆಯನ್ನು ಬಯಸುತ್ತದೆ.

ಸಂತೋಷ್ ಲಾಡ್‌ರ ರಾಜೀನಾಮೆಯ ಸಂದರ್ಭ ಏನೇ ಇರಲಿ, ಎಸ್.ಆರ್.ಹಿರೇಮಠರು ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತ, ಸುಪ್ರೀಮ್‌ ಕೋರ್ಟ್‌ನಲ್ಲಿ ದಾವೆಗಳನ್ನು ನಡೆಸುತ್ತ, sr-hiremath-hansrajದೆಹಲಿಯ ಕಾಂಗ್ರೆಸ್ ವರಿಷ್ಠರಿಗೂ ಈ ಬಗ್ಗೆ ಮಾಹಿತಿಯನ್ನು ತಲುಪಿಸುವಂತಹ, ಮತ್ತು ಮಾಧ್ಯಮಗಳಲ್ಲಿ ಈ ವಿಷಯ ಕಾಲಕಾಲಕ್ಕೆ ಚರ್ಚೆಯಾಗುವಂತೆ ಮಾಡದೇ ಹೋಗಿದ್ದಿದ್ದರೆ, ಈ ಸಂದರ್ಭವೂ ಬರುತ್ತಿರಲಿಲ್ಲ. ಬಹುಶಃ ದೊರೆಸ್ವಾಮಿಯವರು ಐವತ್ತು ಪೈಸೆಯ ಅಂಚೆ ಕಾಗದದ ಮೇಲೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೆ ಇದ್ದಿದ್ದರೆ ಇನ್ನೂ ಒಂದಿಬ್ಬರು ಕಳಂಕಿತರು ಈ ಸಂಪುಟದಲ್ಲಿ ಇರುತ್ತಿದ್ದರು. ನಾಡು ಈ ಹಿರಿಯರಿಬ್ಬರ ಹೋರಾಟಕ್ಕೆ ಎಂದೂ ಕೃತಜ್ಞರಾಗಿರಬೇಕಿದೆ.

ಕೊನೆಯದಾಗಿ, ಸಂತೋಷ್ ಲಾಡ್‌ರ ರಾಜೀನಾಮೆಯ ನಂತರ ಎಸ್.ಆರ್.ಹಿರೇಮಠರು ಪ್ರತಿಕ್ರಿಯಿಸಿರುವ ಮಾತುಗಳಲ್ಲಿರುವ ಘನತೆ ಮತ್ತು ದೊಡ್ಡತನವನ್ನು ರಾಜ್ಯದ ಜನತೆ ಗಮನಿಸಬೇಕಿದೆ. “ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ನಮ್ಮ ಹೋರಾಟವಲ್ಲ. ಆತ ಎಷ್ಟೇ ಪ್ರಭಾವಶಾಲಿಯಿದ್ದರೂ, ಯಾವುದೇ ಪಕ್ಷವಿದ್ದರೂ ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟ ಅವಿರತ, ನಿಶ್ಚಲ. ಅದೇ ನಮ್ಮ ಧ್ಯೇಯ. ಸಿದ್ದರಾಮಯ್ಯ ಅವರು ಸಚ್ಚಾರಿತ್ರ್ಯ ಹೊಂದಿದ್ದವರು. ಇಂತಹ ಕೆಲವರು ಸೇರಿಕೊಂಡು ಮುಜುಗರ ತಂದಿದ್ದರು. ಕಾಂಗ್ರೆಸ್ ಪಕ್ಷ ಕೂಡ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದಾಗಿ ರಾಜ್ಯದ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೇರಿತ್ತು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕೇ ವಿನಃ ಇಂತಹ ಕ್ಷುಲ್ಲಕ ಸಂಗತಿಗಳು ಚರ್ಚೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಅಧಿವೇಶನಕ್ಕೆ ಮೊದಲೇ ಈ ವಿಷಯಕ್ಕೆ ಅಂತ್ಯ ಹಾಡಿದ್ದಾರೆ. ಇದು ರಾಜ್ಯದ ಜನತೆಗೆ, ನ್ಯಾಯಕ್ಕೆ ಸಿಕ್ಕ ಜಯ.” ಹೀಗೆಂದಿರುವ ಹಿರೇಮಠರ ರೀತಿಯಲ್ಲಿಯೇ ನಮ್ಮ ರಾಜ್ಯದ ಬಹುಸಂಖ್ಯಾತ ಜನರೂ ನಮ್ಮ ಜನಪ್ರತಿನಿಧಿಗಳಿಂದ ಹೆಚ್ಚಿನ ಉತ್ತರದಾಯಿತ್ವ ಮತ್ತು ನೈತಿಕತೆಯನ್ನು ಆಗ್ರಹಿಸಿದಾಗ ಮಾತ್ರ ಅವರಂತಹವರ ಹೋರಾಟಗಳಿಗೂ ಒಂದು ಅರ್ಥ ಮತ್ತು ತಾರ್ಕಿಕ ಅಂತ್ಯ ಇರುತ್ತದೆ. ಇಲ್ಲದಿದ್ದರೆ, ಇವೆಲ್ಲ ಈ ಸಂದರ್ಭದ ಕ್ಷಣಿಕ ಗೆಲುವುಗಳಾಗುತ್ತವೆ. ಅದು ನಾವು ಹಿರೇಮಠರಂತಹವರಿಗೆ ಕೃತಜ್ಞತೆಯ ಬದಲಿಗೆ ಕೃತಘ್ನತೆ ತೋರಿಸಿದಂತೆ. ಈ ರಾಜ್ಯದ ಸಮಷ್ಟಿ ಪ್ರಜ್ಞೆ ಹಾಗೆ ಇಲ್ಲ ಎನ್ನುವ ಆಶಾವಾದ ಮತ್ತು ಕ್ರಿಯಾಶೀಲತೆ ನಮ್ಮದಾಗಲಿ.

5 thoughts on “ಸಂಗಯ್ಯ ಹಿರೇಮಠರಿಗೆ ಧನ್ಯವಾದಗಳನ್ನು ತಿಳಿಸುತ್ತಾ…

 1. arogyasatya

  ಹೌದು ಸಾರ್, ಹಿರೇಮಠ್ ಮತ್ತು ದೊರೆಸ್ವಾಮಿ ಹೋರಾಟ ಬಹುವಾಗಿ ಮೆಚ್ಚಲೇ ಬೇಕಾಂತ್ತಾದ್ದು. ಇವರ ಕೆಚ್ಚೆದೆಯ ಹೋರಾಟ ಇಲ್ಲದಿದ್ದರೆ ಈ ರಾಜ್ಯ ಕ್ಕೆ ತುಂಬಾನೇ ಕಷ್ಟ ಆಗುತ್ತಿತ್ತು. ಹ್ಯಾಟ್ಸ್ ಆಫ್ ಟು ಹಿರೇಮಠ್ ಮತ್ತು ದೊರೆಸ್ವಾಮಿ.

  Reply
 2. ರವಿಕಾಂತ್ , ಬಳ್ಳಾರಿ

  ಸಂದೇಹವೇ ಬೇಡ, ಇದು ಹಿರೇಮಠ ಮತ್ತು ದೊರೆಸ್ವಾಮಿ ಅವರಿಗೆ ಸಂದ ವಿಕೆಟ್. ಆದರೆ, ಬಿಜೆಪಿ ಸರಕಾರದಲ್ಲಿದ್ದ ಗಣಿಕಳ್ಳರ ವಿರುದ್ಧ ಮಾತನಾಡುತ್ತಿದ್ದ, ಹೋರಾಟ ನಡೆಸುತ್ತಿದ್ದ ನಾಡಿನ ಸಾಹಿತಿಗಳು, ಬುದ್ಧಿಜೀವಿಗಳು ಮಾತ್ರ ಸಂತೋಷ್ ಲಾಡ್ ವಿಷಯದಲ್ಲಿ ಮೌನವಾಗಿದ್ದರು. ಅದ್ಯಾವ ಋಣಭಾರ ಅವರನ್ನು ಕಾಡಿತ್ತೋ ತಿಳಿಯದು. ನೋಡ್ತಾ ಇರ್ರಿ, ಈಗ ಒಬ್ಬೊಬ್ಬರೇ ಮಾತಿಗಿಳಿಯುತ್ತಾರೆ. ಅವರ ಸೋಗಲಾಡಿತನ ಮರೆಯೋಣ. ಹಿರೇಮಠ ಅವರಂಥ ಶ್ರೀ ಸಾಮಾನ್ಯ ನಾಗರಿಕರು ಹೆಚ್ಚಲಿ ಎಂದು ಹಾರೈಸೋಣ.

  Reply
 3. g.mahanthesh

  ಸಂತೋಷ್ ಲಾಡ್​ ಒಬ್ಬರೇ ಗುರಿಯಾಗಬಾರದು. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿರುವ ಎಲ್ಲಾ ಭ್ರಷ್ಟರನ್ನ ಮಟ್ಟ ಹಾಕಬೇಕು. ಹಿರೇಮಠ್​ ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ವಿಶ್ವಾಸವಿದೆ….

  Reply
 4. ಜೆ.ವಿ.ಕಾರ್ಲೊ, ಹಾಸನ

  ಕೊಳೆತು ನಾರುತ್ತಿರುವ ವ್ಯವಸ್ಥೆಯನ್ನು ನೋಡಿ ಎಲ್ಲರೂ ಮೂಗು ಮುಚ್ಚಿ ಕೊಂಡು ತಿರುವು ದಾರಿ ಹಿಡಿಯುತ್ತಿರುವಾಗ ಎಪ್ಪತ್ತು ವರ್ಷ ವಯಸ್ಸಿನ ಹಿರೇಮಠ್ ರವರು ಏಕಾಂಗಿಯಾಗಿ ಹಟ ತೊಟ್ಟ ತ್ರಿವಿಕ್ರಮನಂತೆ ಹೋರಾಡುತ್ತಿರುವುದು ನೋಡಿ ಆಶ್ಚರ್ಯ ಮತ್ತು ನಾಚಿಕೆಯಾಗುತ್ತದೆ.

  Reply
 5. Kodava

  ಹ್ಯಾಟ್ಸ್ ಆಫ್ ಟು ಹಿರೇಮಠ್ ಸರ್ .. ನಿಮ್ಮಂಥವರು ಸಾವಿರಾರು ಜನ ಕರ್ನಾಟಕದಲ್ಲಿ ಹುಟ್ಟಿ ಬರಲಿ .. ಪ್ರತಿಯೊಬ್ಬ ಸಾಮಾನ್ಯ ಪ್ರಜೆಯು ಹಿರೇಮಠ್ ರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲಿ…

  ಲಾಡ್‌ ಕಂಪನಿ ಗಡಿವ್ಯಾಪ್ತಿ ಮೀರಿ ಅಕ್ರಮವಾಗಿ ವೇಸ್ಟ್ ಅನ್ನು ಸರಕಾರಿ ಅರಣ್ಯದೊಳಗೆ dump ಮಾಡಿರುವುದನ್ನು ಕುರುಡನೂ ಗುರುತಿಸಬಲ್ಲ ….. ಆದರೂ ತೊಡೆ ತಟ್ಟಿಕೊಂಡು ಬಳ್ಳಾರಿಗೆ ಪಾದಯಾತ್ರೆ ಮಾಡಿದ ಮುಖ್ಯಮಂತ್ರಿಗಳು ಇಷ್ಟು ತಡ ಮಾಡಬಾರದಿತ್ತು ಅಲ್ವಾ ?? ನ್ಯಾಯ ಎಲ್ಲರಿಗೂ ಒಂದೇ ಇರಬೇಕು ಅಲ್ವಾ ???

  Reply

Leave a Reply

Your email address will not be published.