Daily Archives: March 11, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -11)


– ಡಾ.ಎನ್.ಜಗದೀಶ್ ಕೊಪ್ಪ


 

ಹತ್ತೊಂಬತ್ತನೇ ಶತಮಾನದ ಅಂತ್ಯ ಮತ್ತು ಇಪ್ಪತ್ತನೇ ಶತಮಾನದ ಆದಿಯಲ್ಲಿ ನೈನಿತಾಲ್ ಎಂಬ ಪ್ರಸಿದ್ದ ಗಿರಿಧಾಮವಾದ ಪಟ್ಟಣದಲ್ಲಿ ಫ್ರೆಡರಿಕ್ ಮ್ಯಾಥ್ಯು ಎಂಬುದು ಅತ್ಯಂತ ಪ್ರಸಿದ್ದವಾದ ಹೆಸರು. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಕಬ್ಬಿಣ ಮತ್ತು ದಿನಸಿ ಅಂಗಡಿಯ ವ್ಯಾಪಾರದ ಮೂಲಕ ಸ್ಥಳೀಯರಿಗೆ ಮತ್ತು ಯುರೋಪಿಯನ್ನರಿಗೆ ಅತ್ಯಂತ ಪ್ರೀತಿ ಪಾತ್ರನಾಗಿದ್ದ. ಆ ಕಾಲಕ್ಕೆ ಅವನ ಅಂಗಡಿಯಲ್ಲಿ ಸಿಗದೇ ಇರುವ ವಸ್ತುಗಳು ಇರಲಿಲ್ಲ. ಮ್ಯಾಥ್ಯು, ಜಿಮ್ ಕಾರ್ಬೆಟ್‍ನ ತಾಯಿ ಮೇರಿ ಕಾರ್ಬೆಟ್‍ಳ ವ್ಯವಹಾರಕ್ಕೆ ನೆರವಾಗುವುದರ ಮೂಲಕ ಆಕೆಗೆ ನಿವೇಶನ ಕೊಡಿಸುವುದು, ಮಾರಾಟ ಮಾಡುವುದು ಇವುಗಳಲ್ಲಿ ಭಾಗಿಯಾಗುತಿದ್ದ.

ಮಕ್ಕಳಿಲ್ಲದ ಮ್ಯಾಥ್ಯು ತನಗೆ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯಾಪಾರದಲ್ಲಿ ಬರುವ ಬಹುತೇಕ ಲಾಭವನ್ನು ಧರ್ಮ ಜಾತಿ ಎಂಬ ಭೇಧ ಭಾವವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ  ಆರೋಗ್ಯಕ್ಕೆ ವಿನಿಯೋಗಿಸುತಿದ್ದ. ಈ ಕಾರಣಕ್ಕಾಗಿ  ಅವನನ್ನು ನೈನಿತಾಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆ ಮಾಡುತಿದ್ದರು. ವಯಸ್ಸಾದಂತೆ ತನ್ನ ವ್ಯವಹಾರಕ್ಕೆ ಯಾರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಯೋಚನೆ ಸದಾ ಮ್ಯಾಥ್ಯುವನ್ನು ಕಾಡುತಿತ್ತು. ಇಂತಹ ಸಂದರ್ಭದಲ್ಲಿ ಅವನ ಮನಸ್ಸಿಗೆ ಬಂದವನು ಜಿಮ್ ಕಾರ್ಬೆಟ್. ಮ್ಯಾಥ್ಯು ಬಾಲ್ಯದಿಂದಲೂ ಕಾರ್ಬೆಟ್‍ನನ್ನು ಗಮನಿಸುತಿದ್ದ. ಮೊಕಮೆಘಾಟ್‍ನಲ್ಲಿ ದುಡಿಯುತ್ತಿದ್ದ ವೇಳೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡದೇ ತನ್ನ ತಾಯಿಯ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂಡವಾಳವಾಗಿ ವಿನಯೋಗಿಸುತ್ತಿದ್ದುದ್ದನ್ನು ಗಮನಿಸುತ್ತಾ ಬಂದಿದ್ದ ಮ್ಯಾಥ್ಯು, ಕಾರ್ಬೆಟ್‍ನನ್ನು ತನ್ನ ವ್ಯವಹಾರಕ್ಕೆ ಪಾಲುದಾರನನ್ನಾಗಿ 1905 ರಲ್ಲಿ ನೇಮಕ ಮಾಡಿಕೊಂಡ.

ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲೇ  ಈ ಎಲ್ಲಾ ಘಟನೆಗಳು ಜರುಗಿದವು. 1905 ರಲ್ಲಿ ಕಾರ್ಬೆಟ್, ಮ್ಯಾಥ್ಯು ಒಡೆತನದ ಎಫ್.ಮ್ಯಾಥ್ಯು ಅಂಡ್ ಕಂಪನಿಯ ವ್ಯವಹಾರಕ್ಕೆ ಪಾಲುದಾರನಾದ. ಇದಾದ ಎರಡೇ ವರ್ಷಗಳಲ್ಲಿ ಅಂದರೆ, 1907 ರಲ್ಲಿ ಮ್ಯಾಥ್ಯು ಮರಣ ಹೊಂದಿದ. ಆ ವೇಳೆಗಾಗಲೆ ಅವನ ರಿಯಲ್ ಎಸ್ಟೇಟ್ ಕಂಪನಿಯ ಮೇಲೆ ಅಲಹಬಾದ್ ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಾಲವೂ ಇತ್ತು.

ಮ್ಯಾಥ್ಯು ತಾನು ಸಾಯುವ ಮುನ್ನವೇ ಉಯಿಲು ಬರೆದಿಟ್ಟು ತನ್ನ ಈ ಸಮಗ್ರ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯವಹಾರಕ್ಕೆ ಕಾರ್ಬೆಟ್ ಉತ್ತರಾಧಿಕಾರಿ ಎಂಬುದಾಗಿ ನಮೂದಿಸಿದ್ದ. ಅಂಗಡಿಯಲ್ಲಿ ಸುಮಾರು 10 ಸಾವಿರ ಬೆಲೆ ಬಾಳುವ ವಸ್ತುಗಳಿದ್ದವು. ಬ್ಯಾಂಕಿನ ಸಾಲ 60 ಸಾವಿರದಷ್ಟಿತ್ತು. ಇದರ ಪರಿಹಾರಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ಸುತ್ತಮುತ್ತ ಕಂಪನಿಯ ಹೆಸರಿನಲ್ಲಿದ್ದ 14 ಎಕರೆ ಪ್ರದೇಶವನ್ನು ಮಾರುವುದರ ಜೊತೆಗೆ, ತನ್ನ ಉಳಿತಾಯದ ಹಣವನ್ನು ಸೇರಿಸಿ ಬ್ಯಾಂಕ್ ಸಾಲ ತೀರಿಸಿದ. ಮ್ಯಾಥ್ಯುವಿನ ವಯಸ್ಸಾದ ಪತ್ನಿಗೆ ಕಂಪನಿಯಲ್ಲಿ ಶೇರು ನೀಡಿ ಆಕೆಗೆ ತಿಂಗಳಿಗೆ ಸುಮಾರು ಒಂದೂವರೆ ಸಾವಿರ ರೂಪಾಯಿ ಆದಾಯ ಬರುವಂತೆ ಮಾಡಿ ಜೀವನೋಪಾಯಕ್ಕೆ ದಾರಿ ಮಾಡಿದ್ದ. ಇಡೀ ವ್ಯವಹಾರವೆಲ್ಲಾ ಜಿಮ್ ಕಾರ್ಬೆಟ್ ಒಡೆತನಕ್ಕೆ ಸೇರಿದ ನಂತರವೂ ಕಂಪನಿಯ ಹೆಸರು ಬದಲಾಯಿಸದೆ, ಮ್ಯಾಥ್ಯು ಅಂಡ್ ಕಂಪನಿ ಹೆಸರಿನಲ್ಲಿ ವ್ಯವಹಾರ ಮುಂದುವರಿಯಿತು. ಅವನ ಸಹೋದರಿ ಮ್ಯಾಗಿ ವ್ಯವಹಾರದ ಉಸ್ತುವಾರಿ ಹೊತ್ತಿದ್ದಳು. ಹೀಗೆ ಕುಟುಂಬ ನಿರ್ವಹಣೆ ಮತ್ತು ತನ್ನ ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನೆ ಹಾಕಿಕೊಂಡಿದ್ದ ಕಾರ್ಬೆಟ್ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ತಿಲಾಂಜಲಿ ನೀಡಿದಾಗ ಅವನ ನೆಮ್ಮದಿಯ ಜೀವನಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

ನೈನಿತಾಲ್ ಪಟ್ಟಣಕ್ಕೆ ವಾಪಸ್ ಬಂದ ಜಿಮ್ ಕಾರ್ಬೆಟ್ ತನ್ನ ಮೆಚ್ಚಿನ ಹವ್ಯಾಸವಾಗಿದ್ದ  ಶಿಕಾರಿಯೊಂದಿಗೆ ವ್ಯವಹಾರವನ್ನು ಅಭಿವೃದ್ಧಿಪಡಿಸಿದ. ಜೊತೆಗೆ 1924 ರಿದ 1928 ರ ಅವಧಿವರೆಗೆ ಅಲ್ಲಿನ ಪುರಸಭೆಯ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿ ಇಡೀ ಪಟ್ಟಣವನ್ನು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ. ಮನೆಗಳಿಂದ ಹೊರಬೀಳುವ ತ್ಯಾಜ್ಯ ನೀರು ನೈನಿ ಸರೋವರ ಸೇರದಂತೆ, ನೀಲನಕ್ಷೆ ತಯಾರಿಸಿ ಪ್ರಥಮ ಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಿಸಿಕೊಟ್ಟ. (ವರ್ತಮಾನದ ದುರಂತವೆಂದರೆ, ಈಗ ನೈನಿತಾಲ್ ಪುರಸಭೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಲ್ಲಿನ ಸಿಬ್ಬಂದಿಗೆ ಜಿಮ್ ಕಾರ್ಬೆಟ್ ಎಂದರೆ ಯಾರೂ ಎಂಬುದು ಸಹ ತಿಳಿದಿಲ್ಲ.)

ಇದೇ ವೇಳೆಗೆ ವಿಂದಮ್ ಎಂಬ ಬ್ರಿಟಿಷ್ ಅಧಿಕಾರಿ ಕುಮಾವನ್ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ. 1886 ರಲ್ಲಿ ಇಂಗ್ಲೆಂಡಿನ  ಆಕ್ಸ್‌ಫರ್ಡ್ ಕಾಲೇಜಿನ ಪದವೀಧರನಾದ ಈತ 1889 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ಭಾರತಕ್ಕೆ ಬಂದವನು. ಪ್ರಾರಂಭದಲ್ಲಿ ಪಾಕ್ ಮತ್ತು ಆಪ್ಘನಿಸ್ಥಾನದ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸಿ, ನಂತರ ಔದ್ ಪ್ರಾಂತ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ, ಬನಾರಸ್ ಸಂಸ್ಥಾನದ ಉಸ್ತುವಾರಿ ಅಧಿಕಾರಿಯಾಗಿ, ಕಂದಾಯ ಆಯುಕ್ತನಾಗಿ,  ಹೀಗೆ ಭಾರತದ ವಿವಿಧೆಡೆ ಸೇವೆ ಸಲ್ಲಸಿ, ಇಲ್ಲಿನ ಬಹುಮುಖಿ ಸಂಸ್ಕೃತಿ ಮತ್ತು ವಿವಿಧ ಭಾಷೆಗಳನ್ನು ಅರಿತವನಾಗಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಸೇರಿದಂತೆ ಹಲವಾರು ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಪ್ರತಿಭೆಯನ್ನು ಹೊಂದಿದ್ದ.

ಜಿಮ್ ಕಾರ್ಬೆಟ್‍ನಂತೆ ಈತ ಕೂಡ  ಅವಿವಾಹಿತನಾಗಿದ್ದ. ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಒಬ್ಬ ಸಂಸ್ಥಾನದ ಮಾಂಡಲೀಕನಂತೆ ಹಲವಾರು ನೌಕರರನ್ನು ನೇಮಕ ಮಾಡಿಕೊಂಡಿದ್ದ. ಅತ್ಯಂತ ಮುಂಗೋಪಿಯಾಗಿದ್ದ ವಿಂದಮ್ ಸಣ್ಣ ಪುಟ್ಟ ವಿಷಯಗಳಿಗೆ ಎಲ್ಲರೆದುರು ಸಿಡಿದೇಳುತಿದ್ದ. ಆದರೆ, ಮರು ಕ್ಷಣವೇ ಶಾಂತನಾಗುತಿದ್ದ. ತನ್ನ ಬಳಿ ಕೆಲಸ ಮಾಡುವ ನೌಕರರ ಕಷ್ಟ ಸುಖಗಳಿಗೆ ಧಾರಳವಾಗಿ ನೆರವು ನೀಡುತಿದ್ದ. ಸಿಟ್ಟಿನ ನಡುವೆಯೂ ಅವನು ಎಂತಹ ಹೃದಯವಂತನೆಂದರೆ, ತನ್ನ ಕೈಕೆಳಗಿನ ಅಧಿಕಾರಿಗಳು ಅಥವಾ ನೌಕರರು ಭ್ರಷ್ಟಾಚಾರ ಇಲ್ಲವೆ ಕೆಲಸದಲ್ಲಿ ನಿರ್ಲಕ್ಷ್ಯತನ ತೋರಿದರೆ, ಉಳಿದ ಬ್ರಿಟಿಷ್ ಅಧಿಕಾರಿಗಳಂತೆ ಅವರನ್ನು ಕೆಲಸದಿಂದ ತೆಗೆಯುತ್ತಿರಲಿಲ್ಲ, ಬದಲಾಗಿ ಅವರಿಗೆ ಹಿಂಬಡ್ತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುತಿದ್ದ. ಈ ಕುರಿತಂತೆ ಪ್ರತಿಕ್ರಿಯಿಸುತ್ತಾ  ಅವರ ಕುಟುಂಬದ ಅನ್ನವನ್ನು ಕಸಿಯಬಾರದು ಎಂದು ವಿಂದಮ್ ಮಾರ್ಮಿಕವಾಗಿ ನುಡಿಯುತಿದ್ದ. ತನ್ನ ನಿಷ್ಠುರ ಹಾಗೂ ಮಾನವೀತೆಯ ಮುಖವುಳ್ಳ ವ್ಯಕ್ತಿತ್ವದ ನಡುವೆಯೂ ವಿಂದಮ್‍ಗೆ ಶಿಕಾರಿಯ ಬಗ್ಗೆ ಹುಚ್ಚಿತ್ತು.

ಅದರಲ್ಲೂ ಹುಲಿ ಬೇಟೆಯೆಂದರೆ, ವಾರಗಟ್ಟಲೆ ಅರಣ್ಯಗಳಲ್ಲಿ ತನ್ನ ಸಿಬ್ಬಂದಿ ಕೊತೆ ಗುಡಾರದಲ್ಲಿ ಬೀಡು ಬಿಡುತಿದ್ದ. ಈತನಿಗೂ ಕಾರ್ಬೆಟ್‍ಗೂ ಹುಲಿ ಬೇಟೆಯಲ್ಲಿ ಇದ್ದ ಪ್ರಮುಖ ವ್ಯತ್ಯಾಸವೆಂದರೆ, ಕಾರ್ಬೆಟ್ ಕೇವಲ ನರಭಕ್ಷಕ ಹುಲಿಗಳನ್ನು ಮರದ ಮೇಲೆ ಕುಳಿತು, ಅವುಗಳು ಬೇಟೆಯಾಡಿದ ಮಾನವರ ಕಳೇಬರಗಳನ್ನು ತಿನ್ನಲು ಬಂದಾಗ ಮಾತ್ರ ಕೊಲ್ಲುತಿದ್ದ. ಆದರೆ, ವಿಂದಮ್ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮಸ್ಥರನ್ನು  ಅರಣ್ಯಕ್ಕೆ ಕಳಿಸಿ ಹುಲಿ ಇರುವ ಜಾಗ ಪತ್ತೆ ಮಾಡಿಸಿ ಆನೆ ಮೇಲೆ ಸವಾರಿ ಮಾಡುತ್ತಾ ಗ್ರಾಮಸ್ಥರು ಮತ್ತು ತನ್ನ ಸೇವಕರ ನೆರವಿನಿಂದ ಬೇಟೆಯಾಡುತಿದ್ದ. ಈ ಶಿಕಾರಿ ಹವ್ಯಾಸ ಮುಂದಿನ ದಿನಗಳಲ್ಲಿ ಈ ಇಬ್ಬರನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿತು.

ವಿಂದಮ್ ನೈನಿತಾಲ್ ಪ್ರಾಂತ್ಯಕ್ಕೆ ಬಂದೊಡನೆ ಆ ಪ್ರದೇಶದ  ಸುತ್ತಮುತ್ತ ದಂತಕಥೆಯಾಗಿ ಹೋಗಿದ್ದ ಜಿಮ್ ಕಾರ್ಬೆಟ್ ಬಗ್ಗೆ ತಿಳಿದು ತಾನೇ ಮುಂದಾಗಿ ಸ್ನೇಹ ಹಸ್ತ ಚಾಚುವುದರ ಮೂಲಕ ಕಾರ್ಬೆಟ್‍ನನ್ನು ಗೆಳೆಯನನ್ನಾಗಿ ಮಾಡಿಕೊಂಡ. ಕಾರ್ಬೆಟ್ ಮೊಕಮೆಘಾಟ್‍ನಿಂದ ರಜೆಗೆ ಊರಿಗೆ ಬಂದಾಗಲೆಲ್ಲಾ ವಿಂದಮ್‍ನನ್ನು ಭೇಟಿಯಾಗುತಿದ್ದ ಇಬ್ಬರೂ ಕೂಡಿ ಶಿಕಾರಿ ಬಗ್ಗೆ ಚರ್ಚಿಸುವುದು ಇಲ್ಲವೇ ಅರಣ್ಯಕ್ಕೆ ತೆರಳಿ ಶಿಕಾರಿ ಮಾಡುವುದು ನಿರಂತರವಾಗಿ ನಡೆದಿತ್ತು.

ಕಾರ್ಬೆಟ್ ನಿವೃತ್ತಿ ಪಡೆದ ನಂತರ ಈ ಜೋಡಿ ವಾರಗಟ್ಟಲೆ ಕಾಡಿನಲ್ಲಿ ಬಿಡಾರ ಹೂಡಿ ಅಲೆಯುತಿದ್ದರು. ಶಿಕಾರಿ ಕುರಿತಂತೆ ಇಬ್ಬರ ಅನುಭವ ಭಿನ್ನವಾಗಿತ್ತು. ಕಾರ್ಬೆಟ್ ಬಳಿ ಜೋಡಿ ನಳಿಕೆಯ ಹಾಗೂ ಸಿಂಗಲ್ ಬ್ಯಾರಲ್ ಬಂದೂಕಗಳಿದ್ದವು. ಆದರೆ, ವಿಂದಮ್ ಬಳಿ ಆತ್ಯಾಧುನಿಕ ಬಂದೂಕಗಳಿದ್ದವು. ಅವುಗಳಲ್ಲಿ ಆನೆ ಮೇಲೆ ಕುಳಿತು ಹುಲಿ ಅಥವಾ ಚಿರತೆಗಳನ್ನು ಬೇಟೆಯಾಡಲು ಬಳಸುವ, ಬಂದೂಕದ ಮುಂಭಾಗದ ನಳಿಕೆಗಳು ಬಾಗಿರುವಂತಹ ವಿಶೇಷ ಬಂದೂಕಗಳಿದ್ದವು.

ಕಾರ್ಬೆಟ್, ವಿಂದಮ್‍ಗೆ ನೆಲದಲ್ಲಿ ನಿಂತು ಬೇಟೆಯಾಡುವ ಕಲೆ ಹಾಗೂ ಅಪಾಯಕಾರಿ ಪ್ರಾಣಿಗಳ ಕುರಿತಂತೆ ತೆಗೆದುಕೊಳ್ಳಬೇಕಾದ ಎಚ್ಚರಕೆ ಇವುಗಳನ್ನು ವಿವರಿಸುತಿದ್ದ. ಹುಲಿಗಳು ಮನುಷ್ಯನ ಇರುವನ್ನು ವಾಸನೆ ಮೂಲಕ ಕಂಡು ಹಿಡಿದು, ಸುಳಿವು ಸಿಗದಂತೆ ಸನಿಹಕ್ಕೆ ಬಂದು ಮನುಷ್ಯರ ಮೇಲೆ ಎರಗುವ ಬಗ್ಗೆ ರೋಚಕವಾಗಿ ಮನಮುಟ್ಟುವಂತೆ ಹೇಳುತಿದ್ದ. ಅದೇ ರೀತಿ ವಿಂದಮ್ ಸಹ  ಆನೆಯ ಮೇಲೆ ಕುಳಿತು ಬೇಟೆಯಾಡುವಾಗ ಬರುವ ತೊಂದರೆಗಳು, ಆನೆಯ ಮಾವುತನ ಧೈರ್ಯ ಮತ್ತು ವಿವೇಚನೆಗಳ ಮೇಲೆ ನಿರ್ಧಾರವಾಗುತಿದ್ದ ಶಿಕಾರಿ ಇಂತಹ ಅನುಭವಗಳನ್ನು ಕಾರ್ಬೆಟ್  ಜೊತೆ  ಹಂಚಿಕೊಳ್ಳುತ್ತಿದ್ದ.

(ಮುಂದುವರಿಯುತ್ತದೆ.)