Daily Archives: March 27, 2012

ಪ್ರಸಕ್ತ ಭಾರತದಲ್ಲಿ ರಾಷ್ಟ್ರೀಯ ನಾಯಕರ ಕೊರತೆ

-ಆನಂದ ಪ್ರಸಾದ್

ವರ್ತಮಾನ ಕಾಲದ ಭಾರತದ ರಾಜಕೀಯವನ್ನು ನೋಡಿದರೆ ರಾಷ್ಟ್ರೀಯ ನಾಯಕರಿಲ್ಲದೆ ದೇಶವು ಬಳಲುತ್ತಿದೆ. ಒಂದು ದೇಶವು ಅಭಿವೃದ್ಧಿಯಾಗಬೇಕಾದರೆ ದೂರದೃಷ್ಟಿಯುಳ್ಳ ರಾಷ್ಟ್ರೀಯ ನಾಯಕರು ಇರಬೇಕು. ದೇಶದ ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ ಹಿನ್ನೆಲೆಯ ಅರಿವು ರಾಷ್ಟ್ರೀಯ ನಾಯಕರಿಗೆ ಇರಬೇಕು. ರಾಷ್ಟ್ರೀಯ ನಾಯಕರಿಗೆ ದೇಶದ ಜನತೆಯ ಜೊತೆ ನೇರ ಸಂಪರ್ಕ ಇರಬೇಕು. ಇಡೀ ದೇಶದಲ್ಲಿ ಆಗಾಗ ಪ್ರವಾಸ ಕೈಗೊಂಡು ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಚಾಕಚಕ್ಯತೆ ಹಾಗೂ ಮನಸ್ಸು ಇರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದು ಭಾರತದಲ್ಲಿ ರಾಷ್ಟ್ರೀಯ ನಾಯಕರು ಯಾವ ಪಕ್ಷದಲ್ಲಿಯೂ ಇರುವಂತೆ ಕಾಣುವುದಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಾಯಕರು ಎನಿಸಿಕೊಂಡವರು ಪ್ರಚಾರಕ್ಕೆ ಬರುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಯಾವುದೇ ನಾಯಕರು ರಾಷ್ಟ್ರ ಸಂಚಾರ ಮಾಡುತ್ತಿರುವುದು ಕಂಡು ಬರುವುದಿಲ್ಲ. ಹೀಗಾಗಿ ಇಂದಿನ ನಮ್ಮ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡ ಪಕ್ಷಗಳಿಗೂ ರಾಷ್ಟ್ರದ ಮೂಲಭೂತ ಸಮಸ್ಯೆಗಳ ಅರಿವು ಇಲ್ಲ ಮತ್ತು ನೆಲದ ಜೊತೆ ಸಂಪರ್ಕವೇ ಇಲ್ಲ. ಹೀಗಾಗಿ ಇಡೀ ದೇಶಕ್ಕೆ ನಾಯಕತ್ವ ನೀಡಬಲ್ಲ ಮುತ್ಸದ್ಧಿಗಳ ಕೊರತೆ ಇದೆ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಗಾಂಧಿಯವರಿಗೆ ಜನರ ನೇರ ಸಂಪರ್ಕ ಇರುವಂತೆ ಕಾಣುವುದಿಲ್ಲ. ಭವಿಷ್ಯದ ನಾಯಕ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವ ರಾಹುಲ್ ಗಾಂಧಿಗೂ ಜನತೆಯ ನೇರ ಸಂಪರ್ಕ ಇಲ್ಲ. ಹೀಗಾದರೆ ಒಂದು ರಾಷ್ಟ್ರೀಯ ಪಕ್ಷ ಬೆಳೆಯುವುದಾದರೂ ಹೇಗೆ? ದೇಶದ ಹಾಗೂ ರಾಜ್ಯದ ಆಗುಹೋಗುಗಳನ್ನು ತನ್ನ ಸುತ್ತ ಕಟ್ಟಿಕೊಂಡ ಒಂದಿಷ್ಟು ಮಂದಿಯ ಮೂಲಕವೇ ಅರಿಯುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿದೆ. ಹೀಗಾದಾಗ ನಿಜ ಸ್ಥಿತಿ ಏನೆಂದು ತಿಳಿಯುವ ಸಂಭವ ಕಡಿಮೆ. ತನ್ನ ಸುತ್ತ ಮುತ್ತ ಇರುವ ಮಂದಿ ಹೇಳಿದ್ದೇ ನಿಜ ಎಂಬ ಪರಿಸ್ಥಿತಿ ಇದರಿಂದ ರೂಪುಗೊಳ್ಳುತ್ತದೆ. ಪಕ್ಷದ ಅಧ್ಯಕ್ಷರಾಗಿರುವವರು ತಾನೇ ಸ್ವತಹ: ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ತೆಗೆದುಕೊಳ್ಳದೆ ಹೋದರೆ ರಾಷ್ಟ್ರೀಯ ನಾಯಕತ್ವ ಬೆಳೆಯಲಾರದು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಾಗ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ತಿಳಿಯುತ್ತಾ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆ ಕೊಡುವುದು ಮತ್ತು ಪಡೆಯುವುದು ಮಾಡುವುದರಿಂದ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆಗೊಳ್ಳಬಹುದು ಮತ್ತು ಹೀಗೆ ಮಾಡುವುದರಿಂದ ದೇಶದ ಎಲ್ಲೆಡೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಲು ಸಾಧ್ಯ. ಕಾಂಗ್ರೆಸ್ ಪಕ್ಷದ ವೆಬ್‍ಸೈಟ್ ನೋಡಿದರೆ ಅಲ್ಲಿಯೂ ಜನರ ಜೊತೆ ನೇರ ಸಂಪರ್ಕಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜನರು ದೇಶದ ಯಾವುದೇ ಭಾಗದಿಂದಾದರೂ ತಮ್ಮ ಸಲಹೆ, ಸೂಚನೆ, ಸಮಸ್ಯೆಗಳನ್ನು ಪಕ್ಷಕ್ಕೆ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸಲು ವ್ಯವಸ್ಥೆಯನ್ನು ಒಂದು ಉತ್ತಮ ಪಕ್ಷವು ಮಾಡಬೇಕು ಮತ್ತು ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಬೇಕು. ಹೀಗೆ ಮಾಡುವುದರಿಂದ ಪಕ್ಷದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಬೆಳೆಯಲು ಸಾಧ್ಯ.

ಬಿಜೆಪಿ ಎಂಬ ಇನ್ನೊಂದು ರಾಷ್ಟ್ರೀಯ ಪಕ್ಷದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಪಕ್ಷದ ಅಧ್ಯಕ್ಷರಿಗೆ ರಾಜ್ಯಗಳ ಜೊತೆ ನೇರ ಸಂಪರ್ಕ ಇಲ್ಲ. ಅದರ ವೆಬ್‍ಸೈಟ್‍ನಲ್ಲೂ ಜನರು ನೇರವಾಗಿ ಸಂಪರ್ಕಿಸುವ ವ್ಯವಸ್ಥೆ ಇಲ್ಲ. ಬಿಜೆಪಿಯಲ್ಲಿಯೂ ರಾಷ್ಟ್ರೀಯ ನಾಯಕರ ಅಭಾವ ಇದೆ. ಉಳಿದಂತೆ ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇದ್ದರೂ ಅವುಗಳ ಪ್ರಭಾವ ಪ್ರಾದೇಶಿಕ ಮಾತ್ರವೇ ಆಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳು ಇಲ್ಲವೆಂದೇ ಹೇಳಬಹುದು. ಈ ಎರಡೂ ಪಕ್ಷಗಳ ನೀತಿಯೂ ಉದಾರೀಕರಣದ ನಂತರ ಒಂದೇ ಆಗಿದೆ ಎಂಬ ದೂರು ಇದೆ. ಹೀಗಾಗಿ ಇವುಗಳನ್ನು ಬಿಟ್ಟು ಇನ್ನೊಂದು ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದಿರುವುದರಿಂದ ಜನರಿಗೆ ಆಯ್ಕೆಯೇ ಇಲ್ಲದಂತೆ ಆಗಿದೆ. ತೃತೀಯ ರಂಗ ಎಂದು ರೂಪುಗೊಳ್ಳಬಹುದಾದ ಒಂದು ರಂಗದಲ್ಲಿ ರಾಷ್ಟ್ರೀಯ ವರ್ಚಸ್ಸಿನ ನಾಯಕರು ಕಾಣಿಸುತ್ತಿಲ್ಲ. ಇರುವ ನಾಯಕರೆಲ್ಲರೂ ಪ್ರಾದೇಶಿಕ ರಾಜಕೀಯಕ್ಕೆ ಸೀಮಿತವಾಗಿರುವುದರಿಂದಾಗಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದು ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟುಗೂಡಿಸಿ ಸಂಭಾಳಿಸಿಕೊಂಡು ಹೋಗುವುದು ಸಾಧ್ಯವಾಗದ ಒಂದು ಪರಿಸ್ಥಿತಿ ಇದೆ. ಇಂಥ ಸ್ಥಿತಿ ಇರುವುದರಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಬಹಳಷ್ಟು ರಾಷ್ಟ್ರೀಯ ನಾಯಕರು ರೂಪುಗೊಂಡಿದ್ದರು. ಗಾಂಧಿ, ನೆಹರೂ, ಪಟೇಲ್ ಮೊದಲಾದ ನಾಯಕರು ರಾಷ್ಟ್ರದಲ್ಲಿ ಆಗಾಗ ಪ್ರವಾಸ ಮಾಡುತ್ತಾ ಜನರ ಜೊತೆ ನೇರ ಸಂಪರ್ಕ ಇರಿಸಿಕೊಂಡ ಕಾರಣ ಇಡೀ ರಾಷ್ಟ್ರದಲ್ಲಿ ಅವರಿಗೆ ವರ್ಚಸ್ಸು ಇತ್ತು. ಇಂದು ಅಂಥ ರಾಷ್ಟ್ರೀಯ ನಾಯಕರು ಇಲ್ಲದೆ ಹೋಗಿರುವುದರಿಂದಾಗಿಯೇ ಪ್ರಾದೇಶಿಕ ಪಕ್ಷಗಳು ಬೆಳೆದು ರಾಷ್ಟ್ರೀಯ ಹಿತಾಸಕ್ತಿಗಳು ಮರೆಯಾಗಿ ಪ್ರಾದೇಶಿಕ ಹಿತಾಸಕ್ತಿಗಳು ತಾಂಡವವಾಡುತ್ತಿದ್ದು ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯೇ ರೂಪುಗೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ವಾಪಾಸ್ ಪಡೆಯುವ ಬೆದರಿಕೆ ಹಾಕಿ ತಮ್ಮ ರಾಜ್ಯಕ್ಕೆ ಮಾತ್ರ ಅನುಕೂಲ ಮಾಡಿಕೊಂಡು ಉಳಿದ ರಾಜ್ಯಗಳನ್ನು ಕಡೆಗಣಿಸುವ ಪ್ರವೃತ್ತಿಯಿಂದಾಗಿ ಮೈತ್ರಿರಂಗದ ರಾಜಕೀಯ ದೇಶದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಲು ಕಾರಣವಾಗಿದೆ. ಇಂಥ ಪ್ರವೃತ್ತಿ ರಾಷ್ಟ್ರ ಹಿತಕ್ಕೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಪ್ರವೃತ್ತಿಯಿಂದ ಹೊರಬರಬೇಕಾದರೆ ರಾಷ್ಟ್ರೀಯ ಪಕ್ಷಗಳನ್ನು ಜನರು ಬೆಂಬಲಿಸಬೇಕಾದ ಅಗತ್ಯ ಇದೆ.

ಅಲ್ಲದೆ ದೇಶದಲ್ಲಿ ಈಗ ಇರುವ ಎರಡು ಪ್ರಧಾನ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇನ್ನೂ ಒಂದು ರಾಷ್ಟ್ರವ್ಯಾಪಿ ಪಕ್ಷವನ್ನು ರೂಪಿಸಬೇಕಾದ ಅಗತ್ಯ ಇದೆ ಅಥವಾ ಈಗ ಇರುವ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾದ ಸೈದ್ದಾಂತಿಕ ಆಧಾರದಲ್ಲಿ ಒಂದು ರಾಷ್ಟ್ರೀಯ ರಂಗವನ್ನು ರಚಿಸಿಕೊಂಡು ಚುನಾವಣೆಗಳಲ್ಲಿ ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟಾಗಿ ಹೋರಾಡಿ ಒಂದು ರಾಷ್ಟ್ರೀಯ ಸರ್ಕಾರ ರೂಪಿಸುವ ಪರಿಸ್ಥಿತಿ ಬರುವಂತೆ ಮಾಡಬೇಕಾದ ಅಗತ್ಯ ಇದೆ. ಇಂಥ ರಾಷ್ಟ್ರೀಯ ರಂಗವನ್ನು ರಚಿಸುವಾಗಲೇ ಸಂಕುಚಿತ ಪ್ರಾದೇಶಿಕ ಬೇಡಿಕೆಗಳಿಗಾಗಿ ಬೆಂಬಲ ವಾಪಸ್ ಪಡೆಯಲು ಅವಕಾಶ ನೀಡದಂಥ ಒಂದು ಪ್ರಣಾಳಿಕೆಯನ್ನು ರಚಿಸಬೇಕಾಗುತ್ತದೆ ಮತ್ತು ಅದಕ್ಕೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳುವ ಲಿಖಿತ ದಾಖಲೆಯ ಭರವಸೆಯನ್ನು ಪಡೆದುಕೊಳ್ಳುವಂತೆ ಮಾಡಬೇಕಾದ ಅಗತ್ಯ ಇದೆ.

(ಚಿತ್ರಕೃಪೆ: ವಿಕಿಪೀಡಿಯ)