Daily Archives: December 22, 2012

ಬದುಕು ಕಸಿದುಕೊಂಡವನಿಗೆ ಬದುಕುವ ಹಕ್ಕು ಬೇಕೇ?


-ಚಿದಂಬರ ಬೈಕಂಪಾಡಿ


 

ರಾಷ್ಟ್ರದ ಶಕ್ತಿ ಕೇಂದ್ರ ದೆಹಲಿಯಲ್ಲಿ ನಡೆದಿರುವ ಎರಡು ಗ್ಯಾಂಗ್ ರೇಪ್ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿವೆ, ಭಯದ ವಾತಾವರಣದಲ್ಲಿ ಬದುಕು ಅದೆಷ್ಟು ಅಸುರಕ್ಷಿತ ಎನ್ನುವ ಚಿಂತೆ ಹುಟ್ಟು ಹಾಕಿವೆ. ಕೇವಲ ಐದು ದಿನಗಳ ಅಂತರದಲ್ಲಿ ರಾಜಧಾನಿಯಲ್ಲಿ ನಡೆದಿರುವ ಈ ಕುಕೃತ್ಯಗಳು ವಿಕೃತ ಮನಸ್ಸಿನ ಅಟ್ಟಹಾಸ ಎನ್ನುವುದರಲ್ಲಿ ಅನುಮಾನವಿಲ್ಲ.

ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಒಂಟಿ ಮಹಿಳೆಯ ಮೇಲೆ ಮನೆಗೆ ನುಗ್ಗಿ ನಡೆಸಿದ ಕ್ರೌರ್ಯ ಅಮಾನುಷ ಮಾತ್ರವಲ್ಲ ಹೇಯವಾದುದು. ಓರ್ವ ಹೆಣ್ಣು ಮಗಳು ಅಧಿಕಾರ ನಡೆಸುತ್ತಿರುವ ದೆಹಲಿಯಲ್ಲಿ ಹೆಣ್ಣು ಮಕ್ಕಳಿಗೇ ರಕ್ಷಣೆಯಿಲ್ಲ ಎನ್ನುವಂತಾಗಿರುವುದು ಕಾಕತಾಳೀಯ. ಹಾಗೆಂದು ಬೇರೆ ರಾಜ್ಯಗಳು ಇಂಥ ಘಟನೆಗಳಿಂದ ಹೊರತಾಗಿವೆ ಎನ್ನುವಂತಿಲ್ಲ. ಬೆಳಕಿಗೆ ಬಂದಿರುವ ಮತ್ತು ಮಾಧ್ಯಮಗಳ ಬೆಳಕಲ್ಲಿ ಗಮನ ಸೆಳೆದ ಪ್ರಕರಣಗಳು ಇವು ಹೊರತು ಇಡೀ ದೇಶದಲ್ಲಿ ನಿತ್ಯವೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ, ಆದರೆ ಅವುಗಳು ಬೆಳಕಿಗೆ ಬರುವುದಿಲ್ಲ; ಅನೇಕ ಕಾರಣಗಳಿಂದಾಗಿ.

ಒಂದು ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತೀ 20 ನಿಮಿಷಗಳಿಗೆ ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆಯಂತೆ. ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿ ಹರ್ಯಾಣದಲ್ಲಿ 17 ಅತ್ಯಾಚಾರ ಪ್ರಕರಣಗಳು ನಡೆದಿವೆ. 2010 ರಲ್ಲಿ ದೇಶದಲ್ಲಿ 20,206 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಳಕಿಗೆ ಬಂದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಇಷ್ಟಿದ್ದರೆ ಬೆಳಕಿಗೆ ಬಾರದೆ ಅವಮಾನಕ್ಕೆ ಅಂಜಿ, ದಬ್ಬಾಳಿಕೆಗೆ ನಲುಗಿ ಬದುಕು ಕಳೆದುಕೊಂಡ ಪ್ರಕರಣಗಳು ಅದೆಷ್ಟಿರಬಹುದು? ನೀವೇ ಊಹಿಸಿಕೊಳ್ಳಿ.

ಇಂಥ ಕೃತ್ಯಗಳು ಯಾಕಾಗಿ ಘಟಿಸುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ಇಂಥ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕೊಡುವ ಶಿಕ್ಷೆ ದುರ್ಬಲವಾಗಿರುವುದು. ಮಾನವಹಕ್ಕುಗಳನ್ನು ಪ್ರತಿಪಾದಿಸುವವರು ಮರಣ ದಂಡನೆಯಂಥ ಶಿಕ್ಷೆ ರದ್ಧು ಮಾಡಬೇಕು ಎನ್ನುತ್ತಾರೆ. rape-illustrationಆದರೆ ಕೀಚಕರ ಕೈಗೆ ಸಿಕ್ಕಿ ನಲುಗಿ ಬದುಕು ಕಳೆದುಕೊಂಡ ಹೆಣ್ಣು ಮಗಳಿಗೆ ನ್ಯಾಯ ಕೊಡುವ ವಿಧಾನ ಹೇಗೆ? ಅತ್ಯಾಚಾರಿಗೆ ಜೈಲು ಶಿಕ್ಷೆ ಅವನಿಂದ ಶೀಲ ಕಳೆದುಕೊಂಡವಳಿಗೆ ಮರಳಿ ಶೀಲ ತಂದುಕೊಡುವುದೇ? ಆಕೆ ಇತರರಂತೆ ಬದುಕು ಸಾಗಿಸಲು ಸಾಧ್ಯವೇ? ಈ ಸಮಾಜ ಆಕೆಯನ್ನು ಹೇಗೆ ನೋಡುತ್ತದೆ? ಕಾನೂನು, ಕೋರ್ಟ್ ಆಕೆಯನ್ನು ಹೇಗೆಲ್ಲಾ ಪ್ರಶ್ನೆ ಮಾಡುತ್ತದೆ? ಕಟಕಟೆಯಲ್ಲಿ ನಿಂತು ಆಕೆ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಹೇಳಿಕೊಳ್ಳುವುದು ಸಾಧ್ಯವೇ? ಆಕೆ ಹೇಳಿಕೊಳ್ಳದಿದ್ದರೆ ಕಾನೂನು ಆಕೆಗೆ ರಕ್ಷಣೆ ಕೊಡುತ್ತದೆಯೇ? ಇಂಥ ನೂರೆಂಟು ಪ್ರಶ್ನೆಗಳು ಉತ್ತರ ಕೊಡುವುದಿಲ್ಲ, ಅವು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ. ಈ ದೌರ್ಬಲ್ಯವನ್ನು ಅತ್ಯಾಚಾರಿಗಳು ತಮ್ಮ ಬಂಡವಾಳ ಮಾಡಿಕೊಳ್ಳುತ್ತಾರೆ, ಕಾನೂನಿನ ನೆರವಿನಿಂದ ಅವನೂ ಪಾರಾಗಲು ಸಾಕಷ್ಟು ಅನುಕೂಲತೆಗಳಿವೆ ಎನ್ನುವುದನ್ನು ಮರೆಯಲು ಸಾಧ್ಯವೇ?

ಜಿದ್ದು, ಆಕರ್ಷಣೆ, ವಿಕೃತ ಕಾಮ, ಮನೋವಿಕೃತಿ, ದ್ವೇಷ, ದೌರ್ಬಲ್ಯ ಅತ್ಯಾಚಾರಕ್ಕೆ ಹಲವು ಕಾರಣಗಳು. ಅವಳು ಅಬಲೆ ಎನ್ನುವ ಪುರುಷನ ಬಹುಮುಖ್ಯ ನಂಬಿಕೆ ಹೇಯ ಕೃತ್ಯಕ್ಕೆ ಹೇತು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾನಳು ಎನ್ನುವ ಅಥವಾ ಆಕೆಯೂ ಸರಿಸಮಾನಳು ಎನ್ನುವುದು ಇನ್ನೂ ನೆಲೆಗೊಂಡಿಲ್ಲ. ಆಕೆಯನ್ನು ಹಲವು ನಿರ್ಬಂಧಗಳು ಬಂಧಿಸಿಟ್ಟಿವೆ. ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಲು ಮುಗಿ ಬೀಳುವ ದಾಂಡಿಗರನ್ನು ಕಂಡು ಮನೆ ಮಂದಿ ತಮ್ಮ ಮನೆಯ ಬಾಗಿಲು ಭದ್ರಪಡಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾಗಳಲ್ಲಿ ತೋರಿಸುತ್ತಾರೆ. ಆಕೆ ನಡುಬೀದಿಯಲ್ಲಿ ಶೀಲಕಳೆದುಕೊಂಡು ರೋಧಿಸುವುದನ್ನು ಕಿಟಕಿ ಮರೆಯಲ್ಲಿ ಇಣುಕಿ ಜನ ನೋಡುತ್ತಾರೆ. ಅತ್ಯಾಚಾರಿಗಳು ತಮ್ಮ ಪೌರುಷವನ್ನು ಪ್ರದರ್ಶಿಸಿಕೊಂಡು ರಾಜಾರೋಷವಾಗಿ ಹೋಗುತ್ತಾರೆ. ಇಂಥ ದೃಶ್ಯಗಳು ಕೊಡುವ ಸಂದೇಶವಾದರೂ ಏನು? ಇದು ಕಾಲ್ಪನಿಕವಾದರೂ ದೆಹಲಿಯಲ್ಲಿ ಬಸ್‌ನಲ್ಲಿ ನಡೆದಿರುವ ರೇಪ್, ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾಡಿದ ರೇಪ್ ವಾಸ್ತವಕ್ಕಿಳಿಯಲು ಪ್ರೇರಣೆ ಏನಿರಬಹುದು?

ಮಾನವ ಹಕ್ಕುಗಳ ರಕ್ಷಣೆಯ ನೆಪದಲ್ಲಿ ಇಂಥ ಅಮಾನವೀಯ ಕೃತ್ಯಗಳನ್ನು ಸಹಿಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಗ್ಯಾಂಗ್ ರೇಪ್ ಪ್ರಕರಣಗಳು ಉದಾಹರಣೆ. ಅಮಾನವೀಯತೆಯನ್ನು ಮಾನವೀಯತೆಯ ಬೆಳಕಲ್ಲಿ ನೋಡಿದರೆ ಬದುಕು ಕಳೆದುಕೊಂಡ ಹೆಣ್ಣು ಮಗಳ ಹಕ್ಕಿನ ನಿರಾಕರಣೆಯಾಗುವುದಿಲ್ಲವೇ?

ಇವೆಲ್ಲವೂ ನಗರಕೇಂದ್ರೀಕೃತ ವ್ಯವಸ್ಥೆಯ ಮೇಲಿನ ನೋಟವಾದರೆ ಹಳ್ಳಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಅರಣ್ಯರೋಧನ. ಹಾಲು ಕೊಡಲು ಹೋಗುವ ಬಾಲಕಿ, ಜಾನುವಾರು ಮೇಯಿಸಲು ಕಾಡಿಗೆ ಹೋಗುವ ಹೆಣ್ಣು ಮಕ್ಕಳು, ಹೊಲ, ಗದ್ದೆ ಕೆಲಸಗಳಿಗೆ ಹೋಗಿ ಬರುವ ಮಹಿಳೆಯರು ಅನುಭವಿಸುತ್ತಿರುವ ಯಾತನೆ ಬೆಳಕಿಗೆ ಬರುವುದೇ ಇಲ್ಲ.

ಹಾಗಾದರೆ “ಮುಂದೇನು?” ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಎಷ್ಟಿಡಬಹುದು? ದೆಹಲಿಯ ಪರಿಸ್ಥಿತಿ ಅವಲೋಕಿಸಿದರೆ ಈಗ ಭುಗಿಲೆದ್ದಿರುವ ಅಲ್ಲಿನ ಮಹಿಳೆಯರ ಆಕ್ರೋಶ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿರುವುದರ ದ್ಯೋತಕ. ನೈತಿಕ ಪೊಲೀಸಿಂಗ್ ಪ್ರೋತ್ಸಾಹಿಸುವಂಥದ್ದಲ್ಲ. ಆದರೆ ಇಂಥ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನನ್ನೇ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಆತ್ಮರಕ್ಷಣೆಗೆ ಅನಿವಾರ್ಯವೇನೋ ಅನ್ನಿಸದಿರದು. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಜಯಲಲಿತಾ, ಉಮಾಭಾರತಿ ತಮ್ಮ ರಾಜಕೀಯವನ್ನು ಪಕ್ಕಕ್ಕೆ ಸರಿಸಿ ಚಿಂತನೆಗೆ ಮುಂದಾಗುವುದು ಈ ಕ್ಷಣದ ತುರ್ತು.

ಸಾಮೂಹಿಕ ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವುದು ಒಂದು ದಿನಕ್ಕೆ ಸೀಮಿತವಾಗಬಾರದು. ಅಬಲೆಯ ಬದುಕನ್ನು ಕಸಿದುಕೊಳ್ಳುವ ಅತ್ಯಾಚಾರಿಗೆ ಬದುಕುವ ಹಕ್ಕು ಬೇಕೆನ್ನುವುದು ಅಮಾನವೀಯ. ಗಲ್ಲು ಶಿಕ್ಷೆ ಅತ್ಯಾಚಾರಿಗೆ ಅತಿಯಾದ ಶಿಕ್ಷೆ ಎನ್ನುವುದು ಸಹಜ, ಆದರೆ ನಡುಬೀದಿಯಲ್ಲಿ ಬದುಕು ಕಳೆದುಕೊಂಡ ಅಬಲೆಗೆ ನ್ಯಾಯ ಸಿಗಬೇಕಾದರೆ, ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಬೇಕಾದರೆ ಅತ್ಯಾಚಾರಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧವಾಗಲಾರದು, ಅಲ್ಲವೇ?

(ಚಿತ್ರಕೃಪೆ: ತೆಹೆಲ್ಕ)