Daily Archives: December 25, 2012

ಈಶ್ವರಪ್ಪ ರಾಜೀನಾಮೆ ನೀಡಬಾರದು…

– ರವಿ ಕೃಷ್ಣಾರೆಡ್ಡಿ

ನಾಲ್ಕೈದು ದಿನಗಳ ಹಿಂದೆ ಶಿವಮೊಗ್ಗದ ವಿಶೇಷ ಲೋಕಾಯುಕ್ತ ನ್ಯಾಯಾಲಯ ರಾಜ್ಯದ ಉಪ-ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆಯ ಆರೋಪದ ಕುರಿತು ಲೋಕಾಯುಕ್ತ ಪೋಲಿಸರಿಗೆ ವಿಚಾರಣೆಗೆ ಆದೇಶಿಸಿದಾಗಲೇ ಈಶ್ವರಪ್ಪನವರ ಮನೆ-ಮಠಗಳ ಮೇಲೆ ಲೋಕಾಯುಕ್ತ ಪೋಲಿಸರ ದಾಳಿ ನಿಶ್ಚಿತವಾಗಿತ್ತು. ಪ್ರಥಮ ಮಾಹಿತಿ ವರದಿ ದಾಖಲಿಸಿದ ನಂತರ ಎಂದಾದರೂ ಲೋಕಾಯುಕ್ತ ಪೋಲಿಸರು ಮಾಡಲೇಬೇಕಾಗಿದ್ದ ಕೆಲಸ ಅದು. ಹಾಗಾಗಿ ಈಶ್ವರಪ್ಪನವರಿಗೆ ಏನೇನು ಮುಂಜಾಗ್ರತೆ ತೆಗೆದುಕೊಳ್ಳಬೇಕಾಗಿತ್ತೊ ಅದಕ್ಕೆ ಸಾಕಷ್ಟು ಸಮಯವೂ ಇತ್ತು.

ನೆನ್ನೆ ಈಶ್ವರಪ್ಪನವರ ಮನೆ-ಸಂಸ್ಥೆಗಳ ಮೇಲೆ ದಾಳಿಯಾಯಿತು. ಇಂತಹ ಸಮಯದಲ್ಲಿ ಮಾಮೂಲಿಯಾಗಿ ಕೇಳಿ ಬರುವಂತೆ ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಗಳೂ ಬಂದವು. ಹಾಗೆ ನೋಡಿದರೆ ಪ್ರಮುಖವಾಗಿ ಸಿದ್ದರಾಮಯ್ಯ ಮತ್ತು ಧನಂಜಯ್ ಕುಮಾರ್‌ರಿಂದ ಮಾತ್ರ. KS-Eshwarappaಈಗ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಕೇಳುವ ರಾಜಕಾರಣಿಗಳಿಗೂ ಆ ನೈತಿಕತೆ ಉಳಿದಿಲ್ಲ ಮತ್ತು ಹಾಗೆ ಯಾರೂ ಸುಮ್ಮನೆ ರಾಜೀನಾಮೆ ನೀಡುವುದೂ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಪ್ರಾಮಾಣಿಕರು ಮತ್ತು ನೈತಿಕವಾಗಿ ಉನ್ನತಮಟ್ಟದಲ್ಲಿರುವವರು ಕೇಳಿದಾಗಲೇ ರಾಜೀನಾಮೆ ಕೊಡದ ಈ ಮೂರೂ ಬಿಟ್ಟವರು, ಇನ್ನು ಮೂರೂ ಬಿಟ್ಟವರು ಕೇಳಿದಾಕ್ಷಣ ಕೊಟ್ಟುಬಿಡುತ್ತಾರೆಯೇ?

ಇಷ್ಟಕ್ಕೂ, ಕೇವಲ ಈಶ್ವರಪ್ಪನವರೊಬ್ಬರಿಂದ ರಾಜೀನಾಮೆ ಕೇಳುವುದೇ ಅಸಮಂಜಸ. ಕೇಳುವುದೇ ಹಾಗಿದ್ದರೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿರುವ ಎಲ್ಲಾ ಸಚಿವರಿಂದಲೂ ಪ್ರತಿದಿನ ನಾವು ರಾಜೀನಾಮೆ ಕೇಳುತ್ತಿರಬೇಕು. ಮುರುಗೇಶ್ ನಿರಾಣಿ, ಆರ್. ಅಶೋಕ, ಸೋಮಣ್ಣ, ಸಿ.ಟಿ. ರವಿ,.. ಇವರ ಜೊತೆಜೊತೆಗೆ ಈಶ್ವರಪ್ಪನದೂ. ಇನ್ನು ಆರೋಪಕ್ಕೆ ಒಳಗಾಗಿರುವ, ಆದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿರದ ಸಚಿವರ ದಂಡೇ ಈ ಸಂಪುಟದಲ್ಲಿದೆ. ಸುರೇಶ್ ಕುಮಾರ್, ನಾರಾಯಣ ಸ್ವಾಮಿ, ಆನಂದ್ ಸಿಂಗ್, ಉದಾಸಿ, ರಾಮದಾಸ್, ಯೊಗೇಶ್ವರ್, ಅಸ್ನೋಟಿಕರ್, ಲಿಂಬಾವಳಿ, ಶೋಭಾ ಕರಂದ್ಲಾಜೆ… ಬಗೆದರೆ ಎಲ್ಲರ ವಿರುದ್ಧವೂ ದಾಖಲೆಗಳು ಸಿಗಬಹುದು. ಬಹುಶಃ ಒಬ್ಬೇ ಒಬ್ಬ ಮಂತ್ರಿ ಹಣಕಾಸಿನ, ಸ್ವಂತಕ್ಕೆ ಲಾಭವಾಗುವ ಭ್ರಷ್ಟಾಚಾರ ಮಾಡಿಲ್ಲದಿರಬಹುದು. ಆದರೆ ಆತನೂ ಅಧಿಕಾರ ದುರುಪಯೋಗ ಮತ್ತು ಅನೈತಿಕ ಮತ್ತು ತಾರತಮ್ಯದ ಕೆಲಸ ಮಾಡಿರುತ್ತಾನೆ. ಇದು ನಮ್ಮ ರಾಜ್ಯದ ಮಂತ್ರಿಮಂಡಲ.

ಕಳೆದ ರಾತ್ರಿ ಜನಶ್ರೀ ಟಿವಿಯಲ್ಲಿ ಈಶ್ವರಪ್ಪನವರ ವಿಚಾರದ ಬಗ್ಗೆಯೇ ಇದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ್ ಕುಲಕರ್ಣಿ ಎಂಬ ಜಮಖಂಡಿಯ ಬಿಜೆಪಿ ಶಾಸಕ ಬಹುಶಃ ನಮ್ಮ ರಾಜ್ಯದ ಅವಿದ್ಯಾವಂತ, ಅವೈಚಾರಿಕ, ಅನರ್ಹ ಶಾಸಕರೆಲ್ಲರನ್ನೂ ಪ್ರತಿನಿಧಿಸುತ್ತಿದ್ದರು. ವಿತಂಡವಾದ ಮೂರ್ಖ ಶಿಖಾಮಣಿಯಂತೆ, ಮತ್ತು ತನ್ನ ಪಕ್ಷ ಈ ರಾಜ್ಯದಲ್ಲಿ ನಡೆಸಿದ ಗಂಡಾಗುಂಡಿಗಳ ವಾಸ್ತವಿಕತೆಯ ಪರಿಚಯವೇ ಇಲ್ಲದವರಂತೆ ಮಾತನಾಡುತ್ತಿದ್ದರು. ಅವರ ಪಕ್ಷ ಸಚ್ಚಾರಿತ್ಯವಂತರ, ಪ್ರಾಮಾಣಿಕರ ಪಕ್ಷವಂತೆ. ಈಶ್ವರಪ್ಪನವರ ಬಗ್ಗೆ ಮತ್ತು ವಿಚಾರಣೆ ನಡೆಯುತಿರುವ ಸಂದರ್ಭದಲ್ಲಿ ಮಂತ್ರಿಗಳಾಗಿ ಮುಂದುವರೆಯುವುದು ಸರಿಯೇ ತಪ್ಪೇ ಎಂಬ ಬಗ್ಗೆ ಇದ್ದ ಚರ್ಚೆಯಲ್ಲಿ ಅವರಿಗಿದ್ದ ಒಂದೇ ಒಂದು ಅಭಿಪ್ರಾಯ ಏನೆಂದರೆ ಮೊದಲು ಕೇಂದ್ರದ ಕಾಂಗ್ರೆಸ್‌ನವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು. ಎಂತೆಂತಹವರೆಲ್ಲ ಈ ನೆಲದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ? ಅಂದ ಹಾಗೆ ಇವರು ಸೋಲಿಸಿರುವುದು ಸಿದ್ಧು ನ್ಯಾಮೆಗೌಡರನ್ನು. ಅದೂ 20000 ಮತಗಳ ಅಂತರದಿಂದ.

ಸದ್ಯದ ನಮ್ಮರಾಜಕಾರಣಿಗಳ ಮನಸ್ಥಿತಿ ಮತ್ತು ನಮ್ಮ ಸಮಾಜವೂ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಗಮನಿಸಿ ಕೊನೆಗೆ ನಾನೊಂದು ಮಾತು ಹೇಳಿದೆ; “ಈಶ್ವರಪ್ಪನವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಆವರು ಕೊಟ್ಟರೆ ಇನ್ನೂ ಬಹಳ ಜನ ರಾಜೀನಾಮೆ ಕೊಡಬೇಕಾಗುತ್ತದೆ. ಆವರ್ಯಾರೂ ಕೊಟ್ಟಿಲ್ಲ. ಹಾಗಾಗಿ ಈಶ್ವರಪ್ಪನವರ ರಾಜೀನಾಮೆಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ವಿರುದ್ದ ಇರುವ ಎಲ್ಲಾ ಆರೋಪ-ಮೊಕದ್ದಮೆಗಳನ್ನು ಕೈಬಿಡಬೇಕು. ಜೊತೆಜೊತೆಗೆ ಜೈಲುಗಳಲ್ಲಿರುವ ಕೊಲೆಗಡುಕರನ್ನು, ರೇಪಿಸ್ಟ್‌ಗಳನ್ನೂ ಬಿಡುಗಡೆ ಮಾಡಬೇಕು. ಹಾಗೆ ಮಾಡುವುದರಿಂದ ಜೈಲು ಸಿಬ್ಬಂದಿಗೆ ಕೆಲಸ ಇಲ್ಲದಂತಾಗುತ್ತದೆ ಎಂದಾದರೆ ದಾರಿಯಲ್ಲಿ ಹೋಗುವ ನಿರಪರಾಧಿಗಳನ್ನು, ಕಾನೂನು ಪಾಲಿಸುವವರನ್ನು ಬಂಧಿಸಿ ಜೈಲಿಗೆ ಹಾಕಬಹುದು. ರಾಜೀನಾಮೆ ಕೊಡದೆ ಈಶ್ವರಪ್ಪನವರು ತಮ್ಮ ಸತ್ಯಸಂಧತೆ ಮತ್ತು ಹರಿಶ್ಚಂದ್ರತೆಯನ್ನು ಮುಂದುವರೆಸಬೇಕು.”

ಇದು ನಿರಾಶಾವಾದದ ಮಾತಲ್ಲ. ವ್ಯಂಗ್ಯವಾದರೂ ಈಗ ನಡೆಯುತ್ತಿರುವ ವಿದ್ಯಮಾನವೇ. naveen-soorinjeಕರ್ನಾಟಕಕ್ಕಷ್ಟೇ ಸೀಮಿತ ಮಾಡಿಕೊಂಡರೆ, ನಮಗೆ ಗೊತ್ತಿರುವ ಹಾಗೆ ನವೀನ್ ಸೂರಿಂಜೆಯಂತಹ ಅನೇಕ ನಿರಪರಾಧಿಗಳು ಜೈಲಿನಲ್ಲಿದ್ದಾರೆ. ಸದ್ಯಕ್ಕೆ ಎಲ್ಲೂ ನ್ಯಾಯ ಸಿಗುವ ಸಾಧ್ಯತೆ ಇಲ್ಲ. ನ್ಯಾಯಾಂಗವೂ ಭ್ರಷ್ಟಾಚಾರದಿಂದ, ಅನರ್ಹರಿಂದ, ಅದಕ್ಷರಿಂದ ಕೂಡಿದೆ. ಜನತಾ ನ್ಯಾಯಾಲಯಗಳೂ ಪ್ರತಿ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಅನರ್ಹರ ಮತ್ತು ಭ್ರಷ್ಟರ ಪರವೇ ತೀರ್ಪು ನೀಡುತ್ತಿವೆ. ಅದೂ ಹತ್ತಾರು ಸಾವಿರ ಮತಗಳ ಅಂತರದಲ್ಲಿ.

ಪಾಪ, ಮತಿಭ್ರಮಣೆಗೊಳಗಾದವರಂತೆ ಏನೇನೊ ಹುಚ್ಚುಚ್ಚಾಗಿ ಮಾತನಾಡುವ, ಕರ್ನಾಟಕದ ಜನತೆಗೆ ಆಗಾಗ ಉಚಿತ ಮನರಂಜನೆ ಒದಗಿಸುವ ಮಾನ್ಯ ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು? ಹಸ್ತಕ್ಷೇಪ ಮತ್ತು ಅಧಿಕಾರ ದುರುಪಯೋಗ ಇವರೆಲ್ಲರ ಆಜನ್ಮಸಿದ್ಧ ಹಕ್ಕಲ್ಲವೇ?


ಜನಶ್ರೀ ಟಿವಿಯಲ್ಲಿ ನಡೆದ ಚರ್ಚೆ:
ಭಾಗ – 1 : http://www.yupptv.com/vod/player.aspx?sc=1193731
ಭಾಗ – 2 : http://www.yupptv.com/vod/player.aspx?sc=1193818