Daily Archives: December 7, 2012

ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲವಾದರೆ…


-ಚಿದಂಬರ ಬೈಕಂಪಾಡಿ


 

ಜನ ನಿದ್ದೆಯ ಮಂಪರಿಗೆ ಜಾರುವ ಹೊತ್ತಲ್ಲಿ ಕಾವೇರಿ ತಮಿಳುನಾಡಿನತ್ತ ಧುಮ್ಮಿಕ್ಕಿ ಹರಿಯತೊಡಗಿದಳು. ಅವಳು ಈಗಲೂ ಹರಿಯುತ್ತಿದ್ದಾಳೆ. ಕಾವೇರಿಯನ್ನೇ ನಂಬಿ ಬದುಕುತ್ತಿರುವ ಜನ ಮುಂಜಾನೆ ಬೀದಿಗೆ ಇಳಿದಿದ್ದಾರೆ. ರಸ್ತೆ ತಡೆ, ಧರಣಿ, ಪ್ರತಿಭಟನೆ ಮುಂತಾದ ಪ್ರಲಾಪಗಳು ನಡೆಯುತ್ತಿವೆ. ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಅದೇ ಹೊತ್ತಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗಿರುವ ಕಾವೇರಿ ನೀರು ಕುಡಿದೇ ಬೆಳೆದವರೊಂದಿಗೆ ಸಭೆ ನಡೆಸುತ್ತಿದ್ದರು. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರದ ಅನಿವಾರ್ಯತೆ. ಕಾವೇರಿ ನೀರು ಹರಿಸಿಕೊಂಡಿರುವುದು ತಮಿಳುನಾಡಿನ ಮುಖ್ಯಮಂತ್ರಿ ಓರ್ವ ಹೆಣ್ಣು ಮಗಳು ಕನ್ನಡತಿ ಜಯಲಲಿತಾ ಅವರ ರಾಜಕೀಯ ಪ್ರಬುದ್ಧತೆ ಮತ್ತು ಇಚ್ಛಾಶಕ್ತಿಯ ಅನಾವರಣ. ಹಾಗಾದರೆ ನಾವು, ನಮ್ಮ ಮುಖ್ಯಮಂತ್ರಿ, ನಮ್ಮ ಮಂತ್ರಿಗಳು, ಸಂಸದರು, ಶಾಸಕರು?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧರಣಿ ನಿರತ ಕಾವೇರಿ ಪ್ರದೇಶದ ಶಾಸಕರ ಒತ್ತಡಕ್ಕೆ ಮಣಿದು ನೀಡಿದ ಹೇಳಿಕೆಯಲ್ಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುವ ಎಳೆಗಳಿದ್ದವು. ತಮಿಳುನಾಡಿಗೆ ಕಾವೇರಿ ಹರಿಸದಿದ್ದರೆ ರೈತರ ಹಿತಕ್ಕೆ ಧಕ್ಕೆಯಾಗುತ್ತದೆ, ಹಿಂದೆಯೂ ಹೀಗೆಯೇ ಆಗಿತ್ತು ಎನ್ನುವ ಅವರ ಮಾತುಗಳನ್ನು ಅರ್ಥಮಾಡಿಕೊಂಡವರಿಗೆ ಜಗದೀಶ್ ಶೆಟ್ಟರ್ ರೈತರ ಹೆಸರಲ್ಲಿ ತಮ್ಮ ಹಿತ ಕಾಪಾಡಿಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು, ಅದು ಹಾಗೆಯೇ ಆಯಿತು. ನಿಜಕ್ಕೂ ಜಗದೀಶ್ ಶೆಟ್ಟರ್ ತಮಿಳುನಾಡಿಗೆ ಕಾವೇರಿ ಹರಿಸಿ ತಪ್ಪು ಮಾಡಿದರು ಎನ್ನುವವರು ಅಧಿಕಾರವಿಲ್ಲದವರು. ಅಧಿಕಾರದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೇ ಮುಖ್ಯವಾಗುತ್ತದೆ, ಈ ಮಾತಿಗೆ ಶೆಟ್ಟರ್ ಕೂಡಾ ಹೊರತಲ್ಲ ಎನ್ನುವುದು ಸಾಬೀತಾಗಿದೆ.

ಸುಪ್ರೀಂಕೋರ್ಟ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದಾಗ ಅದನ್ನು ಪಾಲಿಸಬೇಕೇ, ಬೇಡವೇ, ಎನ್ನುವ ಗೊಂದಲ ಮೂಡಿತ್ತು. ಕೋರ್ಟ್ ಆದೇಶ ಪಾಲನೆ ಮಾಡಿದರೆ ಮಾತ್ರ ಮತ್ತೆ ನಮ್ಮ ವಾದ ಮಂಡಿಸಲು ಅವಕಾಶವಾಗುತ್ತದೆ ಎನ್ನುವ ಕಾನೂನು ಪಂಡಿತರ ಸಲಹೆ ಸಮಯೋಚಿತವೇ ಆಗಿತ್ತು. ಆದೇಶವನ್ನು ಪಾಲನೆ ಮಾಡಿ ನಂತರ ತಮ್ಮ ಸಂಕಷ್ಟವನ್ನು ಮತ್ತೊಮ್ಮೆ ಕೋರ್ಟ್ ಮುಂದೆ ಹೇಳಿಕೊಳ್ಳಲು ಅನುವಾಗುತ್ತದೆ, ಇಲ್ಲವಾದರೆ ಮೊದಲು ಆದೇಶ ಪಾಲಿಸಿ, ನಂತರ ನಿಮ್ಮ ವಾದ ಮಂಡಿಸಿ ಎನ್ನುವ ಮಾತನ್ನು ಕೋರ್ಟ್ ಹೇಳುತ್ತದೆ, ಹಿಂದೆಯೂ ಹೇಳಿದೆ. ಕಾನೂನು, ಕೋರ್ಟ್ ತನ್ನ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅದನ್ನು ನಿರ್ವಹಿಸುವುದು ಅದರ ಜವಾಬ್ದಾರಿ. ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಬರಲು ಕಾರಣವಾದ ಅಂಶಗಳು ಕೂಡಾ ಅನೇಕ ಇವೆ, ಅದಕ್ಕೂ ಇತಿಹಾಸವಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಜನಮೆಚ್ಚುವಂಥದ್ದಲ್ಲ, ಇದನ್ನು ಜನ ನಿರೀಕ್ಷೆ ಮಾಡಿರಲಿಲ್ಲ. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ವಪಕ್ಷಗಳ ಸಭೆ ನಡೆಸಿದಾಗಲೂ ಕಾವೇರಿ ನೀರು ಹರಿಸಲು ಯಾರೂ ಸಹಮತ ವ್ಯಕ್ತಪಡಿಸಿರಲಿಲ್ಲ. ನೀರು ಹರಿಸಬಾರದು ಎನ್ನುವುದೇ ಮುಖ್ಯವಾಗಿತ್ತು. ಈ ಕಾರಣದಿಂದಲೇ ವಿಧಾನ ಸಭೆಯ ಕಲಾಪ ಬೆಳಿಗ್ಗೆ ನಡೆಯಲಿಲ್ಲ. ಮಧ್ಯಾಹ್ನದ ನಂತರ ವಿಧಾನ ಸಭೆಯ ಕಲಾಪ ಆರಂಭವಾದಾಗ ಕಾವೇರಿ ಪ್ರದೇಶದ ಶಾಸಕರು ಪ್ರತಿಭಟನೆ ಮಾಡಿದ ನಂತರವೇ ಮುಖ್ಯಮಂತ್ರಿ ಸದನಕ್ಕೆ ಹಾಜರಾಗಿ ಶುಕ್ರವಾರ ಸಂಸದರ ನಿಯೋಗವನ್ನು ಪ್ರಧಾನಿ ಬಳಿಗೆ ಕೊಡೊಯ್ಯುವ ಭರವಸೆ ನೀಡಿದರು. ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ತೆಗೆದುಕೊಳ್ಳುವ ವಚನ ನೀಡಿದ್ದರು ವಿಧಾನ ಸಭೆಗೆ. ಹೊರಗೆ ಬಂದು ಕಾವೇರಿಗೆ ಹರಿಯಲು ಹೇಳಿ ದೆಹಲಿ ವಿಮಾನ ಹತ್ತಿದರು. ಯಾಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೀಗೆ ಮಾಡಿದರು?

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕೋರ್ಟ್ ಆದೇಶವನ್ನು ಪಾಲನೆ ಮಾಡಿದೆ, ಕಾನೂನಿಗೆ ತಲೆ ಬಾಗಿದೆ ಎನ್ನುವ ಸಂತೃಪ್ತಿ ಹೆಮ್ಮೆ ಮುಖ್ಯಮಂತ್ರಿಯವರಿಗೆ ಇರಬಹುದು. ಆದರೆ ಕನ್ನಡಿಗರ ಆಶಯಕ್ಕೆ, ಅವರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡರು ಎನ್ನುವ ಕಳಂಕ ಅವರ ಮೈಗೆ ಅಂಟಿಕೊಂಡದ್ದೂ ಸತ್ಯ. ರಾಜಕೀಯದಲ್ಲಿ ಸಜ್ಜನಿಕೆಗೆ ಹೆಸರಾದ ಜಗದೀಶ್ ಶೆಟ್ಟರ್ ಹೀಗೇಕೆ ಮಾಡಿದರು ಎನ್ನುವುದಕ್ಕಿಂತಲೂ ಅವರಿಗೆ ಹಾಗೆ ಮಾಡುವ ಅನಿವಾರ್ಯತೆ ಇತ್ತು ಎನ್ನುವುದೇ ಲೇಸು.

ಒಂದು ವೇಳೆ ಕೋರ್ಟ್ ಆದೇಶದಂತೆ ನೀರು ಹರಿಸದೇ ಇದ್ದಿದ್ದರೆ ಕಾನೂನಿಗೆ ಅಗೌರವ ಸೂಚಿಸಿದಂತಾಗುತ್ತಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಿತ್ತು, ಅಧಿಕಾರ ಕಳೆದುಕೊಳ್ಳುವ ಭೀತಿಯಿತ್ತು. ರಾಜಕೀಯದಲ್ಲಿ ಸಾಕಷ್ಟು ಹಾದಿ ಕ್ರಮಿಸಿರುವ ಜಗದೀಶ್ ಶೆಟ್ಟರ್ ಯೋಚಿಸುವ ವಿಧಾನದಲ್ಲಿ ಸೋತರು ಅನ್ನಿಸುತ್ತದೆ. ಯಾಕೆಂದರೆ ಈಗಲೂ ಅವರ ಸರ್ಕಾರ ಸುಭದ್ರವಾಗಿಲ್ಲ. ಅವರು ಅದೆಷ್ಟು ದಿನ ಇದೇ ಅಧಿಕಾರದಲ್ಲಿರುತ್ತಾರೆ ಎನ್ನುವುದು ನಮಗಿಂತಲೂ ಅವರಿಗೇ ಚೆನ್ನಾಗಿ ಗೊತ್ತು. ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲ ಎನ್ನುವುದಾದರೆ ಜನರಿಗಾಗಿ ಅಧಿಕಾರ ಕಳೆದುಕೊಳ್ಳುವುದು, ನ್ಯಾಯಾಂಗ ನಿಂದನೆಗೆ ಗುರಿಯಾಗುವುದು ಅಪಮಾನವೆಂದು ಯಾಕೆ ಭಾವಿಸಬೇಕು?

ಇಷ್ಟಕ್ಕೂ ಕಾವೇರಿ ನೀರು ಹರಿಸಿದ್ದರಿಂದ ಜಗದೀಶ್ ಶೆಟ್ಟರ್ ಕುರ್ಚಿ ಭದ್ರವಾಗಲಿಲ್ಲ ಅಥವಾ ಅವರಿಗಿರುವ ಅಧಿಕಾರದ ಅವಧಿ ವಿಸ್ತರಣೆಯಾಗಲಿಲ್ಲ. ಕಳಂಕ ರಹಿತವಾಗಿ ರಾಜಕೀಯ ನಡೆಸಿ ಸಂಭಾವಿತ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಿಧಾನ ಮಂಡಲದ ಕಲಾಪ ನಡೆಯುತ್ತಿರುವಾಗಲೇ ಎಡವಿದ್ದು ಮಾತ್ರ ವಿಪರ್ಯಾಸ.

ಕಾವೇರಿ ನೀರು ಹರಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ ನಿಜ. ಈ ಕಾರಣಗಳು ಜನರ ವಿಶ್ವಾಸವನ್ನು ಕಟ್ಟಿಕೊಡುವುದಿಲ್ಲ ಅಥವಾ ಹರಿದುಹೋದ ನೀರನ್ನು ಮರಳಿ ಪಡೆಯಲು ನೆರವಾಗುವುದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಚಾಣಾಕ್ಷ ನಡೆಗಳನ್ನು ಕಡುವಿರೋಧಿಯೂ ಮೆಚ್ಚಿದರೆ ತಪ್ಪಲ್ಲ. ಅವರೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ಹರಿಸಿಕೊಂಡಿದ್ದರೂ ಅಲ್ಲಿನ ಜನ ಅವರಿಗೆ ಅವರಿಗೆ ಅಧಿಕಾರವನ್ನು ಗಟ್ಟಿಗೊಳಿಸಬಹುದು. ಆದರೆ ಜಗದೀಶ್ ಶೆಟ್ಟರ್ ಕಾನೂನಿನ ಹೆದರಿ ಜನರ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡಿದರು ಎನ್ನುವ ಅಪವಾದ ಅಳಿಸಿಹೋಗದು.

ಈಗ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ತಡವಾಗಿ ನೀರು ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶೆಟ್ಟರ್ ಈಗ ಎರಡು ತಪ್ಪು ಮಾಡಿದಂತಾಗಿದೆ. ನೀರು ಬಿಡಬಾರದೆಂದು ಜನರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರೂ ನೀರು ಹರಿಸಿದರು, ಜೊತೆಗೆ ತಮಿಳುನಾಡಿನ ವಾದವನ್ನು ಗಮನಿಸಿದರೆ ತಡವಾಗಿ ನೀರು ಬಿಟ್ಟು ಕೋರ್ಟ್ ಆದೇಶ ಪಾಲನೆಯಲ್ಲಿ ವಿಳಂಬ ಮಾಡಿದರು. ಈ ಎರಡೂ ತಪ್ಪುಗಳ ಹೊರೆ ಹೊರುವ ಬದಲು ಸುಪ್ರೀಂ ಆದೇಶ ಹೊರಬಿದ್ದ ತಕ್ಷಣವೇ ನೀರು ಹರಿಸಿದ್ದರೆ ನ್ಯಾಯಾಂಗ ನಿಂದನೆಯಿಂದ ಪಾರಾಗುತ್ತಿದ್ದರು, ಕೇವಲ ನೀರು ಬಿಟ್ಟ ತಪ್ಪಿಗೆ ಗುರಿಯಾಗುತ್ತಿದ್ದರು.

ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಕಲಾಪ ಕಾವೇರಿ ನೀರಿನಲ್ಲಿ ಕೊಚ್ಚಿಹೋಯಿತು, ನೀರೂ ಹರಿದು ಹೋಯಿತು, ಕಳಂಕ ಮಾತ್ರ ಉಳಿಯಿತು.

ದಾರಿ ತಪ್ಪಿದ ಮಕ್ಕಳಾಗುತ್ತಿರುವ ಯುವಕರು

– ಡಾ.ಎಸ್.ಬಿ.ಜೋಗುರ

ಯುವಕರು ಎನ್ನುವ ಪದವೇ ನಿರ್ಮಾಣವನ್ನು ಸೂಚಿಸುವಂಥದು. ಸಾಧಿಸುವಂಥದು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ಕ್ರಾಂತಿಗಳ ಸಂದರ್ಭಗಳಲ್ಲಿಯೂ, ಮಹಾಯುದ್ಧಗಳ ಸಂದರ್ಭಗಳಲ್ಲಿಯೂ ಯುವಕರ ಪಾತ್ರ ನಿರ್ಣಾಯಕವಾಗಿತ್ತು. ಸುಭಾಸಚಂದ್ರ ಭೋಸ್, ಅಝಾದ್, ಭಗತಸಿಂಗ ಮುಂತಾದವರ ಹೋರಾಟ ಮುಟ್ಟಿಸಿದ ಬಿಸಿಗೆ ಬ್ರಿಟಿಷರಿಗೆ ನೆಮ್ಮದಿಯಿಂದ ಮಲಗಿ ನಿದ್ದೆ ಮಾಡಲಾಗಲಿಲ್ಲ. ಅಂಥಾ ಯುವಕರೇ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ಸಾಥ್ ನೀಡಿದವರು. ಅವರು ಆಯ್ಕೆ ಮಾಡಿಕೊಂಡ ಮಾರ್ಗ, ನಡಿಗೆ ಭಿನ್ನವಾಗಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು ಎನ್ನುವದನ್ನು ಮರೆಯುವಂತಿಲ್ಲ. ವಾಂಛಲ್ಯಗಳಿಂದ ಪೂರ್ಣವಾಗಿ ವಿಚಲಿತರಾಗಿ ಅವರು ದೇಶ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೇಶಕ್ಕಾಗಿ ನೇಣುಗಂಬವನ್ನು ಏರುವ ಸಂದರ್ಭದಲ್ಲಿ ಹೆಮ್ಮೆ ಪಡುವ ತಾಯಂದಿರಿದ್ದರು.

ನಮಗೆ ಸ್ವಾತಂತ್ರ್ಯ ದಕ್ಕಿ ಅದಾಗಲೇ ಆರು ದಶಕಗಳಾದರೂ ನಮಗೆ ಮತ್ತೆ ಆ ತರಹದ ಯುವ ಸಮೂಹವನ್ನು ಕಾಣಲಾಗುತ್ತಿಲ್ಲ. ಸ್ವಾತಂತ್ರ್ಯ ಎನ್ನುವದು ಈಗಿನ ಯುವಕರಿಗೆ ಅನಾಮತ್ತಾಗಿ ದಕ್ಕಿರುವ ಒಂದು ಮೌಲ್ಯವಾಗಿರುವದರಿಂದ ಅದರ ದುರುಪಯೋಗ ಶುರುವಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಸ್ವೇಚ್ಛೆ ಆರಂಭವಾಗಿದೆ. ಇವರೆಲ್ಲಾ ನಮ್ಮದೇ ದೇಶದ ಯುವಕರೇ..? ಅನ್ನುವ ಹಾಗೆ ಅವರ ಅಪವರ್ತನೆಗಳಿವೆ. ಅವರೊಂಥರಾ ಮಾನಸಿಕವಾಗಿ ವಿಕ್ಷಿಪ್ತರಾದವರ ಹಾಗೆ ತೋರುತ್ತಾರೆ. ಅಷ್ಟಕ್ಕೂ ಅವರಿನ್ನೂ 25 ರ ಗಡಿಯನ್ನು ದಾಟಿರುವದಿಲ್ಲ, ಆಗಲೇ ತಮ್ಮ ಬದುಕಿನಲ್ಲಿ ಎಲ್ಲವೂ ಮುಗಿದು ಹೋದಂತೆ, ಇಲ್ಲವೇ ಮುಗಿಸಲು ಹೊರಟಂತೆ ಬದುಕುತ್ತಿರುವದನ್ನು ನೋಡಿದಾಗ, ತುಂಬಾ ಕಸಿವಿಸಿ ಎನಿಸುತ್ತದೆ. ದೇಶದ ಭವಿಷ್ಯ ರೋಗಗ್ರಸ್ಥವಾಗಿ ರೂಪಗೊಳ್ಳುತ್ತಿದೆಯಲ್ಲ ಎನ್ನುವ ಭಯ ಕಾಡುತ್ತದೆ. ಅವರ ವರ್ತನೆಗಳಲ್ಲಿ ಆವೇಶವೇ ಹೆಚ್ಚಾಗಿ ತುಂಬಿಕೊಂಡಿದೆ. ಯಾರ ಮಾತನ್ನೂ ಅವರು ತಾಳ್ಮೆಯಿಂದ ಕೇಳುವ ಸ್ಥಿತಿಯಲ್ಲಿಲ್ಲ. ಪರಿಣಾಮವಾಗಿ ಅವರು ಆಡಿದ್ದೇ ಆಟ..ನೋಡಿದ್ದೇ ನೋಟ.. ನಡೆದದ್ದೇ ಮಾರ್ಗ ಎನ್ನುವ ದುಡುಕಿನ ತೀರ್ಮಾನಗಳಲ್ಲಿ ಅವರ ಭವಿಷ್ಯ ಮಾತ್ರ ಹಾಳಾಗುವದಲ್ಲ, ದೇಶದ ಭವಿಷ್ಯವೂ ಹಾಳಾಗುತ್ತದೆ. ಯುವಕರು ಸಾರಾಸಗಟಾಗಿ ಹಾಳಾಗುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಹಾಳಾಗುತ್ತಿರುವವರೂ ಹಾದಿಗೆ ಬರುವಂತಾಗಬೇಕು ಎನ್ನುವುದು ನನ್ನ ಆಶಯ.

ಯುವಕರನ್ನು ವಯೋಮಾನವನ್ನು ಇಟ್ಟುಕೊಂಡು ಗುರುತಿಸುವಾಗ 15-24 ರ ವಯೋಮಿತಿಯ ಮಧ್ಯೆ ಬರುವ ಎಲ್ಲರೂ ಯುವಕರೇ. ಆದರೆ ಕೇವಲ ವಯೋಮಾನ ಒಂದನ್ನೇ ಆಧರಿಸಿ ಯುವಕರನ್ನು ಗುರಿತಿಸಲಾಗದು. ಅಣ್ಣಾ ಹಜಾರೆಯಂಥ ಹೋರಾಟಗಾರರನ್ನು ವಯೋಮಿತಿಗೆ ಸಿಲುಕಿಸಿ ನಿರ್ಧರಿಸಲಾಗುವದಿಲ್ಲ. 95 ರ ಆಸುಪಾಸಿನಲ್ಲೂ ನಿಯಮಿತವಾಗಿ ಬರೆಯುವ ಖುಶ್ವಂತ್ ಸಿಂಗ್‌ರನ್ನು ವಯೋಮಿತಿಗೆ ಸಿಲುಕಿಸಿ ಚರ್ಚಿಸಲಾಗುವದಿಲ್ಲ.

ದಿನಪತ್ರಿಕೆಗಳನ್ನು ಓದುವಾಗ ನಡೆಯುತ್ತಿರುವ ಅಪರಾಧಿ ಕೃತ್ಯಗಳನ್ನು ಗಮನಿಸಿದಾಗ ಯುವಕರೇ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪರಾಧಗಳಲ್ಲಿ ತೊಡಗಿದವರಿದ್ದಾರೆ. ಪೋಲಿಸರು ಬಂಧಿಸಿರುವ ಸಂದರ್ಭದಲ್ಲಿ ರಾಜಾರೋಷವಾಗಿ ಅವರು ಕ್ಯಾಮೆರಾ ಎದುರಿಸುವದನ್ನು ನೋಡಿದಾಗ ಅತ್ಯಂತ ಬೇಸರವೆನಿಸುತ್ತದೆ. ಅವರು ಮಾಡಿದ ಪ್ರಮಾದಗಳ ಬಗ್ಗೆ ಅವರಲ್ಲಿ ಕಿಂಚಿತ್ತೂ ಬೇಸರವಿಲ್ಲದಿರುವದನ್ನು ಕಂಡಾಗ ನಮ್ಮ ಸಮಾಜ ಸಾಗುತ್ತಿರುವ ರೀತಿಯನ್ನು ನೆನೆದು ನಾನಂತೂ ಕಂಗಾಲಾಗುತ್ತೇನೆ. ಈಚೆಗೆ ಧಾರವಾಡದ ಬಜಾರಲ್ಲಿ ಒಬ್ಬ ಯುವಕ ಬರ್ರನೇ ಬೈಕ್ ಮೇಲೆ ಬಂದ. ಸವಕಾಶ ಹೋಗು ಮಾರಾಯಾ ಯಾವನಾದರೂ ಬಂದು ಹೊಡದಾನು..? ಅಂದಾಗ ಆತ ತಕ್ಷಣವೇ ಹೊಡಕೊಂಡು ಹೋಗಲಿ ಎಂದು ಮತ್ತೆ ಅದೇ ವೇಗದಲ್ಲಿ ನಡೆದ. ಇಂಥವರ ಮುಕುಳಿಗೆ ಬೈಕ್ ಅಂಟಿಸಿರುವವರ ಬಗ್ಗೆಯೇ ನನಗೆ ಮರುಕವೆನಿಸಿತು. ಯಾವುದೋ ಇಂಗ್ಲಿಷ ಸಿನೇಮಾದ ಶೂಟಿಂಗ್‌ಲ್ಲಿ ಭಾಗವಹಿಸಿರುವ ಫ಼ೈಟರ್ ತರಹ ಬೈಕ್ ಓಡಿಸುವ ಹರಕತ್ತಾದರೂ ಏನಿದೆ..? ಎಂದು ಆತನ ಪಾಲಕರೂ ಕೇಳುವದಿಲ್ಲ. ಮಕ್ಕಳು..ವಯಸ್ಸು..ರಿಯಾಯತಿ.

ಮೊನ್ನೆ ಬೆಳಿಗ್ಗೆ ಹಿಂದುಸ್ಥಾನ ಟೈಮ್ಸ್ ಇ-ಪತ್ರಿಕೆ ಓದುವಾಗ ರಾಜಧಾನಿ ದೆಹಲಿಯಲ್ಲಿ ನಡೆದ ಎರಡು ಅಪವರ್ತನೆಗಳು ನನ್ನನ್ನು ಹಿಡಿದು ಸ್ವಲ್ಪ ಸಮಯ ಅಲ್ಲಾಡಿಸಿದವು. ಒಂದು ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆ, ಮತ್ತೊಂದು ಕೊಲೆಗೆ ಸಂಬಂಧಿಸಿದ್ದು. ಎಷ್ಟು ಯತಾರ್ಥವಾಗಿ ಈ ಬಗೆಯ ಕುಕೃತ್ಯಗಳು ಜರುಗುತ್ತಿವೆಯಲ್ಲ..! ಎನ್ನುವುದೊಂದು ಅಚ್ಚರಿಯಾದರೆ, ಇನ್ನೊಂದು ಬದಿಗೆ ಇವರೆಲ್ಲಾ ಬಹುತೇಕವಾಗಿ ಯುವಕರು. ತಮ್ಮ ಭವಿಷ್ಯವನ್ನು ಯಾವ ರೀತಿ ಹಾಳು ಮಾಡಿಕೊಂಡರಲ್ಲ..? ಎನ್ನುವ ಬೇಸರವೂ ಇತ್ತು. ನನಗಿರೋ ಬೇಸರ ಪೋಲಿಸರ ಅಕ್ಕ-ಪಕ್ಕದಲ್ಲಿ ನಿಂತು ಪೋಜು ನೀಡಿದ ಅವರ ಮುಖದಲ್ಲಿರಲಿಲ್ಲ ಎನ್ನುವದು ನನ್ನಲ್ಲಿ ಇನ್ನೊಂದು ರೀತಿಯ ಭಯಕ್ಕೆ ಕಾರಣವಾಗಿತ್ತು. ಮೊದಲನೆಯ ಅಪರಾಧ ಅತ್ಯಂತ ಹೇಯವಾದದ್ದು. ಆ ಬಾಲಕಿಗೆ ಕೇವಲ ಎರಡೇ ವರ್ಷ, ಅವಳಿನ್ನೂ ಮಗು. ಪಕ್ಕದ ಮನೆಯಲ್ಲಿ ಬಾಡಿಗೆಯಿರುವ ದುರುಳ ವಿಜಯೇಂದ್ರ ಎನ್ನುವವ ಆ ಮಗುವನ್ನು ಆಡಿಸಲೆಂಬಂತೆ ಕರೆದೊಯ್ದು ಆ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ. ಅವನಿಗೆ 27 ರ ವಯಸ್ಸು. ಇಲ್ಲಿ ಮಗುವಿನ ಬಗೆಗೆ ಸಿಂಪಥಿ ಇವನ ಬಗೆಗಿನ ಆಕ್ರೋಶ ಅವೆರಡೂ ನಂತರ. ಅದಕ್ಕಿಂತಲೂ ಮುಖ್ಯವಾಗಿ ಅವನ ಮನ:ಸ್ಥಿತಿಯ ಬಗ್ಗೆಯೂ ಯೋಚಿಸಬೇಕು. ಅವನು ಪಕ್ಕಾ ವಿಕ್ಷಿಪ್ತನೇ.. ಇಂಥವರು ನಮ್ಮ ಸುತ್ತ ಮುತ್ತಲೂ ಬೇಕಾದಷ್ಟು ಜನರಿದ್ದಾರೆ. ಇವರೆಲ್ಲರೂ ಇದೇ ಬಗೆಯ ಕೃತ್ಯವನ್ನು ಮಾಡಬೇಕೆಂದೇನಿಲ್ಲ. ಅವರಿಗೆ ಸಾಧ್ಯವಾಗಬಹುದಾದ ಕುಕೃತ್ಯಗಳನ್ನು ಮಾಡಬಹುದು. ಇವರಿಗೆ ಸಮಾಜ, ಹಿರಿಯರು, ಮೌಲ್ಯ ಇವಾವುಗಳ ಬಗ್ಗೆಯೂ ಹೆದರಿಕೆಯಿಲ್ಲ. ಅದೇ ಅವರ ಕುಭಂಡತನಕ್ಕೆ ಕಾರಣ.

ಇನ್ನೊಂದು ಘಟನೆ ಕೊಲೆಗೆ ಸಂಬಂಧಿಸಿದ್ದು. ಇದರಲ್ಲಿ ಇಬ್ಬರು ಭಾಗಿಗಳು. ಕೊಲೆ ಮಾಡಿದ್ದು ಬೇರೆ ಯಾರನ್ನೋ ಅಲ್ಲ. ತನ್ನದೇ ಜೊತೆಗಿರುವ ಸ್ನೇಹಿತನನ್ನು. ಅಷ್ಟಕ್ಕೂ ಈ ಮೂವರೂ ಸೈತಾನ ಬುದ್ದಿಯವರೇ.. ತಮ್ಮ ಊರಿನ ಮಹಿಳೆಯೊಂದಿಗೆ ಮೊಬೈಲ್‌ಲ್ಲಿ ಸೆಕ್ಸ್ ಚಾಟ್ ಮಾಡೊ ಕಿರಾತಕರು. ಆ ಮಹಿಳೆಯ ನಂಬರ್ ಗೊತ್ತಿದ್ದದ್ದು ಮೊದಲಿಬ್ಬರಿಗೆ. ಅವರು ಪ್ರತಿದಿನ ಹಾಗೆ ಚಾಟ್ ಮಾಡುವದನ್ನು ಕಂಡು ಇನ್ನೊಬ್ಬ ಕಿರಾತಕ ರೂಮ್‌ಮೇಟ್ ಆ ಮಹಿಳೆಯ ನಂಬರನ್ನು ಕದ್ದು ತಾನು ಮಾತಾಡತೊಡಗಿದ. ಅಷ್ಟೆ ಆಗಿದ್ದರೆ ಕೊಲೆಯ ಹಂತಕ್ಕೆ ಹೋಗುತ್ತಿರಲಿಲ್ಲವೇನೋ.. ಆದರೆ ನಂಬರ್ ಕದ್ದ ಕಿರಾತಕ ಈ ಮೊದಲು ಆ ಮಹಿಳೆಯ ಬಳಿ ಮಾತಾಡುತ್ತಿದ್ದವನ ಬಗ್ಗೆ ಸುಳ್ಳು ಮಾಹಿತಿ ನೀಡಿದ ಅವನಿಗೆ ಮದುವೆಯಾಗಿ ಎರಡು ಮಕ್ಕಳಿವೆ ಎಂದಿದ್ದ. ಈ ಮೂವರೂ 20 ರ ಆಸುಪಾಸಿನವರು, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುವವರು. ತನ್ನ ಬಗ್ಗೆ ಹೀಗೆ ಸುಳ್ಳು ಹೇಳಿದವನನ್ನು ಕರೆದೊಯ್ದು ಕುಡಿಸಿದ ಮೊದಲ ಇಬ್ಬರು ಅವನನ್ನು ಕೊಲೆ ಮಾಡಿ ರಾಮಲೀಲಾ ಮೈದಾನದಲ್ಲಿ ಅವನ ಶವವನ್ನು ಹೂತು ನಂತರ ಬಯಲಾಗಿ ಈಗ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಈ ಎರಡೂ ಘಟನೆಗಳಲ್ಲಿಯೂ ಲೈಂಗಿಕ ಕಾಮನೆ ಮುಖ್ಯವಾದ ಕಾರಣವಾಗಿದೆ. ಅದೂ ವಿಕೃತ ರೂಪದ ಕಾಮನೆ ಎನ್ನುವುದು ಸ್ಪಷ್ಟ.

ನಮ್ಮ ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಅವರು ಇಂದು ತೀರಾ ಯಾಂತ್ರಿಕವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿರುವ ಗುರು-ಶಿಷ್ಯ ಸಂಬಂಧಗಳೂ ಈಗ ನೆಟ್ಟಗಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರ ಕಣ್ಣೆದುರಲ್ಲಿ ಒಳ್ಳೆಯ ಮಾದರಿಗಳಿಲ್ಲ. ಇರುವುದೆಲ್ಲಾ ಬರೀ ಬಾಲಿವುಡ್, ಹಾಲಿವುಡ್ ಸಿನೇಮಾಗಳು, ವಿಪರೀತ ಬಯಕೆಗಳು, ಅವುಗಳನ್ನು ಹೇಗಾದರೂ ಸರಿ ಪೂರೈಸಿಕೊಳ್ಳಬೇಕು ಎನ್ನುವ ಧಾವಂತಗಳು. ಪರಿಣಾಮವೇ ಈ ಬಗೆಯ ಅಪವರ್ತನೆಗಳು. ಇದು ಹೀಗೆಯೇ ಮುಂದುವರೆದರೆ ಯುವಕರು ಮತ್ತು ರಾಷ್ಟ್ರನಿರ್ಮಾಣ ಎಂದು ಮಾತನಾಡುವ ಬದಲಾಗಿ ನಿರ್ನಾಮ ಎಂದು ಮಾತನಾಡಬೇಕಾಗುತ್ತದೆ. ಸಮಾಜ, ಶಾಲೆ, ನೆರೆಹೊರೆ, ಪಾಲಕರು, ಮಾಧ್ಯಮಗಳು ಎಲ್ಲರ ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಈ ಬಗೆಯ ಯುವಕರಲ್ಲಿಯ ಹೊಣಗೇಡಿತನವನ್ನು ಕಡಿಮೆ ಮಾಡಬಹುದು.