ಆ ದ್ಯಾವರು ತಂದ ಆಸ್ತಿ

– ಬಿ.ಶ್ರೀಪಾದ ಭಟ್

“ಬೊಮ್ಮಿರೆಡ್ಡಿ ನಾಗಿರೆಡ್ಡಿ” ಎನ್ನುವ ಹೆಸರಿನ ವಿವರುಗಳು ಸಿನಿಮಾದ ಹುಚ್ಚು ಹಿಡಿಸಿಕೊಂಡವರ ಹೊರತಾಗಿ ಇತರರಿಗೆ ಬೇಗನೆ ಫ್ಲಾಶ್ ಆಗುವ ಸಾಧ್ಯತೆಗಳಿಲ್ಲ. ಜೊತೆಗೆ “ಆಲೂರು ಚಕ್ರಪಾಣಿ” ಮತ್ತು “ಕೆ.ವಿ.ರೆಡ್ಡಿ” ಹೆಸರುಗಳನ್ನು ತೇಲಿ ಬಿಟ್ಟಾಗಲೂ ಅಷ್ಟೇ. ಆದರೆ ಈ ಮೂವರು ಸ್ನೇಹಿತರು ಮತ್ತು ಪಾಲುದಾರರು ಒಟ್ಟಾಗಿ ಜೊತೆಗೂಡಿ 40 ರ ದಶಕದಲ್ಲಿ ಆಗಿನ ಮದ್ರಾಸ್‌ನಲ್ಲಿ “ವಿಜಯಾ ವಾಹಿನಿ” ಸ್ಟುಡಿಯೋ ಸ್ಥಾಪಿಸಿದರು ಎಂದಾಕ್ಷಣ ಅನೇಕರ ಕಣ್ಣು ಮಿನುಗುವ ಸಾಧ್ಯತೆಗಳು ಇವೆ.

ಪರಿಚಯಾತ್ಮಕವಾಗಿ ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ “ವಿಜಯಾ ವಾಹಿನಿ” ಸ್ಟುಡಿಯೋದ ಮೂಲಕ ಈ ಮೂವರು ದಿಗ್ಗಜರು ತೆಲುಗು ಭಾಷೆಯಲ್ಲಿ 50 ಮತ್ತು 60 ರ ದಶಕದಲ್ಲಿ ಕೆಲವು ಅತ್ಯುತ್ತಮ ಚಿತ್ರಗಳನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದರು. ಆ ಮೂಲಕ ತೆಲಗು ಚಿತ್ರರಂಗವನ್ನು ಕಟ್ಟಿ ಬೆಳೆಸಿದರು. ಆ ಕಾಲಘಟ್ಟದಲ್ಲಿ ಇವರಿಲ್ಲದಿದ್ದರೆ ಇಂದು ತೆಲುಗು ಚಿತ್ರರಂಗವನ್ನು ಈ ಮಟ್ಟದಲ್ಲಿ ನೆನಸಿಕೊಳ್ಳಲೂ ಸಾಧ್ಯವಿಲ್ಲ. ಇವರ ಚಿತ್ರಗಳು ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಎಸ್.ವಿ.ರಂಗರಾವ್ ಎನ್ನುವ ತ್ರಿಮೂರ್ತಿ ನಟರ, ಸಾವಿತ್ರಿ, ಜಮುನ ಎನ್ನುವ ನಟಿಯರ ಸಿನಿಮಾ ಭವಿಷ್ಯವನ್ನೇ ರೂಪಿಸಿತು. 1947 ರಲ್ಲಿ “ಚಂದಮಾಮ” ಮಾಸ ಪತ್ರಿಕೆಯನ್ನು ಶುರುಮಾಡಿ ಅದನ್ನು ದಕ್ಷಿಣ ಭಾರತದ ಜನಪ್ರಿಯ ಮಕ್ಕಳ ಮಾಸ ಪತ್ರಿಕೆಯನ್ನಾಗಿ ರೂಪಿಸಿದರು ಎಂದೆಲ್ಲಾ ವಿವರಿಸುವಾಗ ನಮ್ಮ ಎದೆಯೂ ತುಂಬಿ ಬರುತ್ತದೆ ಹಾಗೂ ಓದುಗರ ಮನಸ್ಸೂ ಸಹ.

ಇನ್ನು ವಿಜಯಾ ವಾಹಿನಿ ಸ್ಟುಡಿಯೋ ಬ್ಯಾನರ್‌ನ ಮೂಲಕ ಇವರು ಬರೆದು, ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳನ್ನು ಹೆಸರಿಸಬೇಕೆಂದರೆ, ಓಹ್!! ರೋಮಾಂಚನವಾಗುತ್ತದೆ. “ಯೋಗಿ ವೇಮನ್ನ”ದ ಮೂಲಕ ಪ್ರಾರಂಭಗೊಂಡ ಚಿತ್ರಗಳ ಸರಣಿ ಕೆಲವು ಹೀಗಿವೆ: Mayabazarಪಾತಾಳ ಭೈರವಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಪೆಳ್ಳಿ ಚೇಸಿ ಚೂಡು(ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ, ಜಮುನ, ಜಗ್ಗಯ್ಯ), ಚಂದ್ರಹಾರಂ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ), ಮಿಸ್ಸಮ್ಮ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಗುಣಸುಂದರಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಮಾಯಾ ಬಜಾರ್ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ), ಜಗದೇಕ ವೀರುನಿ ಕಥ (ಎನ್.ಟಿ.ರಾಮರಾವ್), ಗುಂಡಮ್ಮ ಕಥ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಕನ್ನಡದಲ್ಲಿ Dr-Rajkumar-in-Satya-Harischandra- ಸತ್ಯ ಹರಿಶ್ಚಂದ್ರ ( ರಾಜ್‌ಕುಮಾರ್, ಫಂಡರೀಬಾಯಿ), ಹಿಂದಿಯಲ್ಲಿ ರಾಮ್ ಔರ್ ಶ್ಯಾಮ್ (ದಿಲೀಪ್ ಕುಮಾರ್, ವಹೀದ ರೆಹಮಾನ್)…

ಮೇಲಿನವು ಕೆಲವು ಉದಾಹರಣೆಗಳು ಮಾತ್ರ. ಇವಲ್ಲದೇ ಇನ್ನೂ ಇಪ್ಪತ್ತಕ್ಕೂ ಮೇಲ್ಪಟ್ಟು ಚಿತ್ರಗಳನ್ನು ನಿರ್ಮಿಸಿ, ನಿದೇಶಿಸಿದ್ದಾರೆ. ಮೇಲಿನ ಎಲ್ಲಾ ಚಿತ್ರಗಳು ಮನರಂಜನಾತ್ಮಕವಾದ, ಮುಗ್ಧತೆಯನ್ನು ಜೀವಾಳವಾಗಿರಿಸಿಕೊಂಡ, ಬಲು ಎತ್ತರದ ಸ್ತರದಲ್ಲಿ ಫ್ರೊಫೆಶನಲ್ ಅನ್ನು ಮೈಗೂಡಿಸಿಕೊಂಡ, ಕಮರ್ಶಿಯಲ್ ಆಗಿ ಸೂಪರ್ ಹಿಟ್ ಮತ್ತು ಟ್ರೆಂಡ್ ಸೆಟ್ಟರ್ ಆದ, ಸಾಮಾಜಿಕ,ಪೌರಾಣಿಕ, ಜಾನಪದ ಸಿನಿಮಾಗಳೆಂದೇ ಪ್ರಖ್ಯಾತಗೊಂಡಿವೆ. ಇಲ್ಲಿ ನಾಗಿರೆಡ್ಡಿ ಚಿತ್ರಗಳನ್ನು ನಿರ್ಮಿಸುತ್ತಿದ್ದರೆ, ಆಲೂರು ಚಕ್ರಪಾಣಿ ಕಥೆ, ಚಿತ್ರಕಥೆ ಬರೆಯುತ್ತಿದ್ದರು, ಕೆ.ವಿ.ರೆಡ್ಡಿ ನಿರ್ದೇಶಕರು. ಇವರಲ್ಲದೆ ಎಲ್.ವಿ.ಪ್ರಸಾದ್ ಮತ್ತು ಕಮಲಾಕರ ಕಮಲೇಶ್ವರ್ ರಾವ್ ಸಹ ಮೇಲಿನ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ 50 ರ ಮತ್ತು 60 ರ ದಶಕದಲ್ಲಿ ಎನ್.ಟಿ.ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಸಿನಿಮಾರಂಗದ ಸೂಪರ್ ಸ್ಟಾರ್ ನಟರಾಗಿದ್ದರೂ ಸಹ ಇವರಿಬ್ಬರೂ ಯಾವುದೇ ಬಿಗುಮಾನ, ಅಹಂಕಾರ, ದರ್ಪವಿಲ್ಲದೆ, ತನ್ನ ಪಾತ್ರವೇ ಮೇಲುಗೈ ಸಾಧಿಸಬೇಕೆನ್ನುವ ಹಠವಿಲ್ಲದೆ ವಿಜಯಾ ವಾಹಿನಿ ಸ್ಟುಡಿಯೋದ ಬ್ಯಾನರ್ ಅಡಿಯಲ್ಲಿ ಮೂರು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಲ್ಲಿನ ಉದಾಹರಣೆಯನ್ನು ಹೊರತುಪಡಿಸಿ ಇಂಡಿಯಾದ ಬೇರಾವ ಭಾಷೆಯಲ್ಲಿಯೂ ಸೂಪರ್ ಸ್ಟಾರ್‌ಗಳು ಒಂದಕ್ಕಿಂತಲೂ ಮೇಲ್ಪಟ್ಟು ಒಟ್ಟಾಗಿ ನಟಿಸಿದ್ದಕ್ಕೆ ಉದಾಹರಣೆಗಳಿಲ್ಲ. ಇದು ಇವರಿಬ್ಬರ ಸರಳತೆ ಮತ್ತು ಬದ್ಧತೆಯನ್ನು ತೋರುವುದರ ಜೊತೆಗೆ ನಾಗಿರೆಡ್ಡಿ, ಕೆ.ವಿ.ರೆಡ್ಡಿಯವರ ಸಾಮರ್ಥ್ಯವನ್ನು ನಮಗೆ ಪರಿಚಯಿಸಿಕೊಡುತ್ತದೆ. ಈ ಮಹಾನುಭಾವರು ಅಂದು ಬುನಾದಿ ರೂಪದಲ್ಲಿ ಕಟ್ಟಿದ ಅಪಾರ ವಿನಯವಂತಿಕೆಯ ಈ ಫ್ರೊಫೆಶನಲ್ ಶೈಲಿ ಮತ್ತು ನಡತೆ ಇಂದಿಗೂ ತೆಲುಗು ಚಿತ್ರರಂಗವನ್ನು ಪೊರೆಯುತ್ತಿದೆ. ಇಂದಿಗೂ ಯಾವುದೇ ನಖರಾಗಳಿಲ್ಲದ, ರಾಜಕೀಯವಿಲ್ಲದ, ಒಳ ಪಿತೂರಿಗಳಿಲ್ಲದ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ ಮಾತ್ರ. ಇದರ ಸಂಪೂರ್ಣ ಶ್ರೇಯಸ್ಸು ಮೇಲಿನ ದೊಡ್ಡವರಿಗೆ ಸಲ್ಲುತ್ತದೆ.

ವಿಜಯಾ ವಾಹಿನಿಯ ತಂಡ ತಮ್ಮ ಸರಳ ಮತ್ತು ನೇರ ಚಿತ್ರಗಳ ಮೂಲಕ ಕಟ್ಟಿಕೊಟ್ಟ ಅಪಾರವಾದ, ಉಕ್ಕುವ ಜೀವನಪ್ರೇಮ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಯಾವುದನ್ನೂ ಸಂಕೀರ್ಣಗೊಳಿಸದೆ ನಟ, ನಟಿಯರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಈ ದೊಡ್ಡವರು ಸಿನಿಮಾ ಭಾಷೆಗೆ ಬರೆದ ನುಡಿಕಟ್ಟುಗಳು ಇಂದಿಗೂ ನವನವೀನ ಮತ್ತು ಅನನ್ಯವಾದದ್ದು. ಪಾತಾಳ ಭೈರವಿ, ಮಾಯಾ ಬಜಾರ್‍, ಸತ್ಯ ಹರಿಶ್ಚಂದ್ರ ಚಿತ್ರಗಳ ಜನಪದ ಲೋಕ ಒಂದಲ್ಲ, ಎರಡಲ್ಲ, ಐದು ತಲೆಮಾರುಗಳನ್ನು ರೂಪಿಸಿದೆ. ಮಿಸ್ಸಮ್ಮ, ಗುಂಡಮ್ಮ ಕಥ ಚಿತ್ರಗಳ ಅಪ್ಪಟ ಸಾಮಾಜಿಕ ಲೋಕ ಲಕ್ಷಾಂತರ ಸದಭಿರುಚಿಯ ಪ್ರೇಕ್ಷಕರನ್ನು ಸೃಷ್ಟಿಸಿದವು. ಇವರಿಗೆ ಸಿನಿಮಾ ನೋಡುವ ಬಗೆಯನ್ನೇ ಪರಿಚಯಿಸಿದವು.

ಮತ್ತೆ ಇವರೆಲ್ಲ ಕೀರ್ತಿಶನಿಯನ್ನು ಸಂಪೂರ್ಣವಾಗಿ ದೂರವಿಟ್ಟರು. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರೂ ಕ್ಯಾಕಸ್ ಅನ್ನು ಬೆಳೆಸಲೇ ಇಲ್ಲ. ಈ ದೊಡ್ಡವರು ಕ್ರಿಯಾಶೀಲವಾಗಿ ಬದುಕಿ, ಆ ಕ್ರಿಯಾಶೀಲತೆಯನ್ನೇ ನೆಚ್ಚಿ ಪ್ರಾಮಾಣಿಕತೆ ಮತ್ತು ದಿಟ್ಟತನವನ್ನು ತೆಲುಗು ಚಿತ್ರರಂಗಕ್ಕೆ ತಂದೊಕೊಟ್ಟಿದ್ದು ಕಡಿಮೆ ಸಾಧನೆಯಂತೂ ಅಲ್ಲವೇ ಅಲ್ಲ.

ಇವರು “ಚಂದಮಾಮ” ಮಾಸ ಪತ್ರಿಕೆಗೆ ಜನ್ಮ ನೀಡಿ, ಮುತುವರ್ಜಿಯಿಂದ ಬೆಳೆಸಿದ್ದನ್ನು ಕುರಿತು ಹೊಸದಾಗಿ ಹೇಳುವುದೇನಿದೆ? ಇದರ ಕುರಿತಾಗಿ ಬರೆದಷ್ಟು ನಮ್ನ ಅಕ್ಷರದ ಅಹಂಕಾರವಾಗುತ್ತದೆ. ಅಷ್ಟೇ.

ಇದೆಲ್ಲ ನೆನಪಾದದ್ದು 2012 ರ ವರ್ಷ ನಾಗಿರೆಡ್ಡಿ ಮತ್ತು ಕೆ.ವಿ.ರೆಡ್ಡಿಯವರ ಜನ್ಮ ಶತಮಾನೋತ್ಸವಗಳ ವರ್ಷವಾಗಿತ್ತೆಂದು ನೆನಪಾದಾಗ. ಕೆ.ವಿ.ರೆಡ್ಡಿ ಜುಲೈ 1912 ರಲ್ಲಿ ಹುಟ್ಟಿದರೆ, ನಾಗಿರೆಡ್ಡಿ ಡಿಸೆಂಬರ್ 1912 ರಲ್ಲಿ ಜನಿಸಿದರು. ತೆಲುಗು ಚಿತ್ರರಂಗ ಮತ್ತು ಅಲ್ಲಿನ ಪ್ರೇಕ್ಷಕರು ಇವರನ್ನು ನೆನೆಸಿಕೊಂಡಿತೇ? ಗೊತ್ತಿಲ್ಲ. ಮಗಧೀರರ, ಫ್ಯಾಕ್ಷನಿಷ್ಟರ ಈ ಕಾಲಘಟ್ಟದಲ್ಲಿ ನಳನಳಿಸುವ, ಅಪಾರ ಕಾಂತಿಯ ಈ ಗುಲಾಬಿ ಹೂಗಳು ನಲುಗಿ ಹೋಗಿರಲಿಕ್ಕೂ ಸಾಕು. ಹಾಗಿದ್ದರೆ ಬಲು ಬೇಸರವಾಗುತ್ತದೆ. ಮನಸ್ಸಿಗೆ ವ್ಯಥೆಯಾಗುತ್ತದೆ.

Leave a Reply

Your email address will not be published. Required fields are marked *