Monthly Archives: January 2013

ಗೃಹಮಂತ್ರಿಯ ಆಶ್ವಾಸನೆ/ಮನವಿ ಮೇರೆಗೆ ಎರಡು ದಿನಗಳ ನಂತರ ಉಪವಾಸ ಸತ್ಯಾಗ್ರಹ ಅಂತ್ಯ

ಸ್ನೇಹಿತರೆ,

ಇಂದು ಹಲವಾರು ಜನರ ಹೋರಾಟ ಮತ್ತು ಒತ್ತಾಯಗಳ ಕಾರಣದಿಂದಾಗಿ ಸಂಜೆ 6:30 ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಗೃಹಮಂತ್ರಿ ಆರ್.ಅಶೋಕ್, ’ತಾವು ಈಗಾಗಲೆ ನವೀನ್ ಸೂರಿಂಜೆಯ ವಿರುದ್ಧ ದಾಖಲಾಗಿರುವ ಸುಳ್ಳು ಆರೋಪಗಳನ್ನು ಕೈಬಿಡುವಂತೆ ಡಿ.ಜಿ.ಪಿ.ಯವರಿಗೆ ಬರೆದಿದ್ದೇನೆ, ಕಡತ ಕಾನೂನುಬದ್ಧವಾಗಿ ಕ್ಯಾಬಿನೆಟ್ ಮುಂದೆ ಬರಲಿದೆ, ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾತನಾಡುತ್ತೇನೆ, ಮೊಕದ್ದಮೆಗಳನ್ನು ಕೈಬಿಡುವ ಪ್ರಕ್ರಿಯೆ ಸ್ವಲ್ಪ ದೀರ್ಘ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ನಿಧಾನವಾಗುತ್ತಿದೆ, ಧರಣಿ ಮಾಡುತ್ತಿರುವವರು ಧರಣಿ ಕೈಬಿಟ್ಟು ಸರ್ಕಾರದ ಮಟ್ಟದಲ್ಲಿ ಈ ಪ್ರಕ್ರಿಯೆಯನ್ನು ಹಿಂಬಾಲಿಸಬೇಕು, ಏನೇ ಸಮಸ್ಯೆಗಳಿದ್ದರೂ ತಾವು ಅದರ ಬಗ್ಗೆ ಕೂಡಲೇ ಗಮನ ಹರಿಸುತ್ತೇನೆ,’ ಎಂದು ಆಶ್ವಾಸನೆ ನೀಡಿದರು.

ಆ ಭರವಸೆ ಮತ್ತು ನಾಳೆಯಿಂದಲೇ ಆರೋಪಗಳನ್ನು ಕೈಬಿಡುವ ವಿಷಯವನ್ನು ಫಾಲೋ ಅಪ್ ಮಾಡುವ ಉದ್ದೇಶದಿಂದ ನಾವು ಧರಣಿಯನ್ನು ಒಂದು ದಿನ ಮುಂಚಿತವಾಗಿ ನಿಲ್ಲಿಸಿದ್ದೇವೆ. ನಾಳೆ ಸೋಮವಾರ. ನಮ್ಮ ಮಿತ್ರರುಗಳು ಗೃಹಮಂತ್ರಿಯ ಕಚೇರಿಯ ಜೊತೆ ನಾಳೆಯಿಂದಲೇ ಸಂಪರ್ಕ ಇಟ್ಟುಕೊಂಡು ಆದಷ್ಟು ಬೇಗ ನವೀನ್ ಮೇಲಿರುವ ಆರೋಪಗಳನ್ನು ಸರ್ಕಾರ ಕೈಬಿಡುವ ನಿಟ್ಟಿನಲ್ಲಿ ತಾವೂ ತೊಡಗಿಸಿಕೊಳ್ಳಲಿದ್ದಾರೆ.

ಇಂದಿನ ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣರಾದವರು ಅನಂತ ಚಿನಿವಾರ್, ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಲಕ್ಷ್ಮಣ ಹೂಗಾರ್, ಮತ್ತಿತರರು. ಎರಡೂ ದಿನಗಳಿಂದ ಈ ಧರಣಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ, ಪಾಲ್ಗೊಂಡ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.  ಈ ಎರಡೂ ದಿನಗಳಲ್ಲಿ ಆದ ಬೆಳವಣಿಗೆಗಳ ಬಗ್ಗೆ ಮತ್ತೊಮ್ಮೆ ವಿಸ್ತೃತವಾಗಿ ಬರೆಯುತ್ತೇನೆ.

“ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಅಡಿಯಲ್ಲಿ ಆರು ಜನ ಪೂರ್ತಿ ಎರಡೂ ದಿನ (ನಲವತ್ತೆಂಟು ಗಂಟೆ) ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಏಳೆಂಟು  ಜನ ಹಗಲು ಪೂರ್ತಿ ಅಥವ ದಿನಪೂರ್ತಿ ಉಪವಾಸ ಮಾಡಿದ್ದಾರೆ. ಬಹುತೇಕ ಎಲ್ಲರೂ ಇಂದು ಮನೆಗೆ ಹಿಂದಿರುಗಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ. ನಾನು ಮತ್ತು ಬಹುಶ: ಇನ್ನೂ ಒಬ್ಬರಿಬ್ಬರು ಪೂರ್ತಿ ಮೂರು ದಿನ ಉಪವಾಸ ಇರಲು ನಿರ್ಧರಿಸಿದ್ದೇವೆ. ಆದರೆ ಎಲ್ಲರೂ ಎರಡು ಹಗಲು ಮತ್ತು ಒಂದು ರಾತ್ರಿಯ ಪ್ರತಿಭಟನೆಯ ನಂತರ ಮನೆಗಳಿಗೆ ಹಿಂದಿರುಗಿದ್ದಾರೆ.

ಇಂದು ಹೆಚ್ಚು ಬರೆಯಲು ಆಗುತ್ತಿಲ್ಲ. ಬಹುಶ: ನಾಳೆಯೂ ಕಷ್ಟವಾಗಬಹುದು. ಆದರೆ ಕೂಡಲೇ ನಮ್ಮ ಓದುಗರಿಗೆ ನೆನ್ನೆಯ ಮತ್ತು ಇಂದಿನ ಬೆಳವಣಿಗೆಗಳನ್ನು ತಿಳಿಸೋಣ ಎಂದು ಇಷ್ಟು ಮಾತ್ರ ಬರೆಯುತ್ತಿದ್ದೇನೆ.

ಬಹುಶಃ ನಾಡಿದ್ದು ಹೆಚ್ಚು ವಿಸ್ತೃತವಾಗಿ ಬರೆಯುತ್ತೇನೆ. (ನಾಳೆ ಸಾಧ್ಯವಾದರೆ ಪತ್ರಿಕಾ-ವರದಿಗಳನ್ನು ವರ್ತಮಾನದಲ್ಲಿ ಪ್ರಕಟಿಸುತ್ತೇನೆ.)

ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಇವು ನೆನ್ನೆ ಮತ್ತು ಇಂದಿನ ಕೆಲವು ಚಿತ್ರಗಳು. ಚಿತ್ರಕೃಪೆ: KPN. (ನಾನು ತೆಗೆದ ಒಂದಷ್ಟು ಚಿತ್ರಗಳು ನಮ್ಮ ವರ್ತಮಾನ.ಕಾಮ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಇವೆ: http://www.facebook.com/vartamaana)
Photo Caption
Photo Caption
Photo Caption
Photo Caption
Photo Caption
Photo Caption

ಮೂರು ದಿನಗಳ ಉಪವಾಸ ಸತ್ಯಾಗ್ರಹ ಇಂದಿನಿಂದ…

ಸ್ನೇಹಿತರೇ,

ನವೀನ್ ಸೂರಿಂಜೆಯ ಮೇಲಿರುವ ಸುಳ್ಳು ಆರೋಪಗಳನ್ನು ಕೈಬಿಡಬೇಕೆಂದು ಮತ್ತು ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಹಮ್ಮಿಕೊಂಡಿರುವ ಮೂರು ದಿನಗಳ ಉಪವಾಸ ಸತ್ಯಾಗ್ರಹ ಇಂದಿನಿಂದ (ಜನವರಿ 5, 2013) ಆರಂಭವಾಗಿದೆ. ಇನ್ನೊಂದೆರಡು ಗಂಟೆಗಳಲ್ಲಿ ಉಪವಾಸ ಸತ್ಯಾಗ್ರಹದ ವೇದಿಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿದ್ಧವಾಗಲಿದೆ. ಸುಮಾರು ಹತ್ತು ಗಂಟೆಯ ವೇಳೆಗ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿರುವ ಹಲವಾರು ಸಂಘಟನೆಗಳ ಕಾರ್ಯಕರ್ತರು, ಪತ್ರಕರ್ತರು, ಲೇಖಕರು, ಪ್ರಜಾಪಭುತ್ವವಾದಿಗಳು ಅಲ್ಲಿ ಸೇರಲಿದ್ದಾರೆ.

ನಾವು ಒಂದಷ್ಟು ಜನ ಮೂರೂ ದಿನಗಳ ಕಾಲ ಉಪವಾಸ ಮಾಡಲಿದ್ದೇವೆ ಮತ್ತು ಹಗಲು-ರಾತ್ರಿ ಸ್ವಾತಂತ್ರ್ಯ ಉದ್ಯಾನದ ವೇದಿಕೆಯಲ್ಲಿಯೇ ಕೂರಲಿದ್ದೇವೆ. ದಿನಪೂರ್ತಿ ಅನೇಕ ಮಂದಿ ಉಪವಾಸ ಕೂರಲಿದ್ದಾರೆ.

ಮತ್ತೊಮ್ಮೆ ಇದನ್ನು ನಮ್ಮ ಓದುಗರ ಗಮನಕ್ಕೆ ತರಬಯಸುತ್ತೇನೆ:

ಇದು ನವೀನ್ ಸೂರಿಂಜೆ ವಿರುದ್ಧ ಪೋಲಿಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿರುವ ಆರೋಪ ಪಟ್ಟಿ: ಅಕ್ರಮ ಕೂಟ (ಐಪಿಸಿ 143), ದೊಂಬಿ (147), ಮಾರಕಾಸ್ತ್ರಗಳಿಂದ ದೊಂಬಿ (148), ಅಕ್ರಮ ಪ್ರವೇಶ (447), ಮನೆ ಮೇಲೆ ದಾಳಿ (448), ಅಕ್ರಮವಾಗಿ ಮತ್ತೊಬ್ಬರನ್ನು ಹಿಡಿದು ನಿಲ್ಲಿಸುವುದು (341), ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ (323/324), ಬೆದರಿಕೆ (506), ಉದ್ದೇಶ ಪೂರ್ವಕ ದಾಳಿ ಮತ್ತು ಶಾಂತಿ ಭಂಗ (504), ಮಹಿಳೆ ಮೇಲೆ ದಾಳಿ (354) ಮತ್ತು ಡಕಾಯತಿ (395).

Charges against Naveen Soorinje by the police: unlawful assembly [IPC section 143], rioting [147], rioting with deadly weapons [148], criminal trespass [447], house trespass [448], wrongful restraint [341], voluntarily causing hurt by dangerous weapons or means [323/324], criminal intimidation [506], intentional insult with intent to provoke breach [504], assault or criminal force against women with intent [354] and dacoity [395].

ಅಂದ ಹಾಗೆ, ಮುಂದಿನ ಮೂರು ದಿನಗಳ ಕಾಲ ನಾನು ಬಹುಶಃ ಕಂಪ್ಯೂಟರ್‌ನಿಂದ ದೂರ ಇರುವುದರಿಂದ ನಮ್ಮ ವರ್ತಮಾನ.ಕಾಮ್‌ನಲ್ಲಿ ಈ ಮೂರು ದಿನಗಳ ಕಾಲ ಯಾವುದೇ ಲೇಖನಗಳು ಪ್ರಕಟವಾಗುವುದಿಲ್ಲ. ನವೀನ್ ಸೂರಿಂಜೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಓದುಗರಿಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ನಿಮಗೆ ವಿಷಯದ ಗಾಂಭೀರ್ಯತೆ ಮತ್ತು ವಿಷಮತೆ ಅರ್ಥವಾಗಿದೆ. ಹಾಗಾಗಿ, ಬೆಂಗಳೂರಿನ ಸ್ವಾತಂತ್ಯ ಉದ್ಯಾನದಲ್ಲಿ ಕೈಗೊಂಡಿರುವ ಈ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಬೆಂಬಲ ಮತ್ತು ಆಗಮನದ ನಿರೀಕ್ಷೆಯಲ್ಲಿ…

ರವಿ ಕೃಷ್ಣಾರೆಡ್ಡಿ


ಇಂದಿನ ಆರಂಭವಾಗಲಿರುವ ಉಪವಾಸ ಸತ್ಯಾಗ್ರಹದ ಕುರಿತು ನೆನ್ನೆ ನಡೆದ ಪತ್ರಿಕಾಗೋಷ್ಟಿಯ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ಬಂದಿರುವ ಕೆಲವು ವರದಿಗಳು:

One India Kannada : ಪತ್ರಕರ್ತನ ಬಿಡುಗಡೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ : ಸೂರಿಂಜೆ ಅಕ್ರಮ ಬಂಧನ: 5 ರಿಂದ ಉಪವಾಸ ಧರಣಿ
Prajavani-5-1-13

ಉದಯವಾಣಿ: ಪತ್ರಕರ್ತರ ಅಕ್ರಮ ಬಂಧನ: ಇಂದಿನಿಂದ 3 ದಿನ ಉಪವಾಸ
udayavani-5-1-13

ವಿಜಯ ಕರ್ನಾಟಕ : ಪತ್ರಕರ್ತನ ಬಂಧನ ವಿರೋಧಿಸಿ ನಿರಶನ ಇಂದಿನಿಂದ
vijaykarnataka-5-1-13

ಕನ್ನಡ ಪ್ರಭ : ಪತ್ರಕರ್ತರ ಬಂಧನ : ಇಂದಿನಿಂದ ಉಪವಾಸ
kanaadaprabha-5-1-13

ವಾರ್ತಾಭಾರತಿ : ನವೀನ್ ಸೂರಿಂಜೆ ಬಿಡುಗಡೆಗೆ ಆಗ್ರಹಿಸಿ ಇಂದಿನಿಂದ ಪತ್ರಕರ್ತರ ಉಪವಾಸ ಸತ್ಯಾಗ್ರಹ 

ವಿಜಯವಾಣಿ : ಪತ್ರಕರ್ತರ ಸೆರೆ ಖಂಡಿಸಿ ಇಂದಿನಿಂದ ಧರಣಿ
Vijayavani-5-1-13

The Hindu : Journalists to go on three-day fast seeking Naveen Soorinje’s release 

Deccah Herald : Three-day fast to demand scribe’s release 

Deccan Chronicle :

daijiworld.com : Naveen Soorinje Arrest – Bangalore Journos Go on Hunger Strike

ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ – ಪತ್ರಿಕಾ ಪ್ರಕಟಣೆ

ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ

ಪತ್ರಿಕಾ ಪ್ರಕಟಣೆ

ದಿನಾಂಕ: 4-01-2013

ಬೆಂಗಳೂರು

ವಿಷಯ: ಪತ್ರಕರ್ತ ನವೀನ್ ಸೂರಿಂಜೆಯ ಅಕ್ರಮ ಬಂಧನ ವಿರೋಧಿಸಿ ಉಪವಾಸ ಸತ್ಯಾಗ್ರಹ

ದಿನಾಂಕ 28-07-2012 ರಂದು ಮಂಗಳೂರಿನಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಹೋಮ್‌ಸ್ಟೇವೊಂದರ ಮೇಲೆ ದಾಳಿ ನಡೆಸಿ ಹಲವು ವಿದ್ಯಾರ್ಥಿಗಳು ಮತ್ತು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಇಡೀ ನಾಡಿಗೇ ಗೊತ್ತಿರುವಂತಹ ಸಂಗತಿ. ಈ ಘಟನೆಯನ್ನು ಪತ್ರಕರ್ತನ ಕರ್ತವ್ಯದ ಭಾಗವಾಗಿ ಸ್ಥಳಕ್ಕೆ ಧಾವಿಸಿ ಪ್ರಾಮಾಣಿಕವಾಗಿ ವರದಿ ಮಾಡಿದ ಕಸ್ತೂರಿ ಕನ್ನಡ ಚಾನಲ್‌ನ ಮಂಗಳೂರು ವರದಿಗಾರ ನವೀನ್ ಸೂರಿಂಜೆ ಅವರನ್ನು ಪೋಲಿಸರು ಸಾಕ್ಷಿಯಾಗಿ ಪರಿಗಣಿಸದೆ ಆರೋಪಿಯಾಗಿ ಪರಿಗಣಿಸಿ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ನವೀನರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿದ್ದಾರೆ. ಇದರ ಪರಿಣಾಮವಾಗಿ ನವೀನ್ ಸೂರಿಂಜೆಯವರು ಪೋಲಿಸರಿಂದ ನವೆಂಬರ್ 7, 2012 ರಂದು ತಡರಾತ್ರಿ ಬಂಧಿಸಲ್ಪಟ್ಟಿದ್ದಾರೆ.

ಸಾಕ್ಷಿಯನ್ನಾಗಿ ಪರಿಗಣಿಸಬೇಕಿದ್ದ ನವೀನ್ ಸೂರಿಂಜೆಯನ್ನು ಆರೋಪಿಯನ್ನಾಗಿ ಹೆಸರಿಸಿ ಇಂದಿನವರೆಗೂ ಬಂಧನದಲ್ಲಿರುವಂತೆ ನೋಡಿಕೊಂಡಿರುವುದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾತ್ರವಲ್ಲ. ಜೊತೆಜೊತೆಗೆ ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವಂತಹ ದಮನಕಾರಿ ನಡೆಗಳೂ ಸಹ.

ನಿರಪರಾಧಿ ಪತ್ರಕರ್ತನ ಈ ಬಂಧನದ ವಿರುದ್ಧ ಈಗಾಗಲೆ ನಾಡಿನ ಹಲವಾರು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಮತ್ತು ಪ್ರಜ್ಞಾವಂತ ನಾಗರಿಕರು ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಮತ್ತು, ಸರ್ಕಾರ ಈ ಕೂಡಲೆ ನವೀನ್ ಸೂರಿಂಜೆಯವರ ಮೇಲೆ ಹೂಡಲಾಗಿರುವ ಎಲ್ಲಾ ಸುಳ್ಳು ಆರೋಪಗಳನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ. ಹಲವಾರು ಸಲ ಪತ್ರಕರ್ತರ ನಿಯೋಗ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವಿಚಾರವನ್ನು ಗೃಹಮಂತ್ರಿಗಳ ಗಮನಕ್ಕೂ ತಂದಿದ್ದಾರೆ. ಮತ್ತು ಶಾಸನಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದೆ.

ಆದರೆ, ಮೇಲಿನ ಈ ಎಲ್ಲಾ ಪ್ರಯತ್ನಗಳೂ ಯಾವುದೇ ಫಲ ನೀಡಿಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಪತ್ರಕರ್ತರು, ಲೇಖಕರು, ಮತ್ತು ನಾಡಿನ ಪ್ರಜೆಗಳಾದ ನಾವೆಲ್ಲ ಮೌನವಾಗಿರುವುದು ತರವಲ್ಲ. ಈ ಕಾರಣಕ್ಕಾಗಿ “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ”ಯ ಮೂಲಕ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ನಾಡಿನ ಅನೇಕ ಪತ್ರಕರ್ತರ ಸಂಘಟನೆಗಳು, ಲೇಖಕ-ಲೇಖಕಿಯರು, ನಾಗರಿಕ ಹಕ್ಕುಗಳ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಯೂ ಸಹ ಈ ವಿಚಾರವಾಗಿ ಬೆಂಬಲ ನೀಡಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ.

ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಂಗಳೂರು

ದಿನಾಂಕ: ಜನವರಿ 5, 2013 ರಿಂದ ಜನವರಿ 7, 2013

 

Forum Against Illegal Arrest of Journalists

 

Press Release

 

Date: January 4, 2013

Bangalore

 Sub: Three-day fast against the illegal arrest of journalist Naveen Soorinje

As you are aware, a group of anti-social elements attacked students and girls at a Homestay in Mangalore on July 28, 2012. In pursuit of his professional commitments, Kasturi Newz24 journalist Naveen Soorinje visited the spot and conscientiously reported the outrage.

However, instead of taking Mr. Soorinje on-board as a witness in the case, the Mangalore police foisted false charges against him and made him an accused in the case. As a result of this manipulation of the law, Naveen was arrested on November 7, 2012 and has been in judicial custody ever since.

The listing of Mr. Soorinje as an accused and not a witness, is not just an affront to press freedom but also a grave violation of his Constitutionally guaranteed right to liberty and freedom of speech.

Outraged by the arrest of an innocent, several journalists’ organisations, senior journalists, as well as common citizens have registered their protest and demanded that the government drop its proceedings against him. Many delegations of journalists have also met the Governor and the Chief Minister in this regard and submitted memorandums seeking Mr. Soorinje’s immediate release. The issue was also taken up with the Home Minister on the floor of the State legislative assembly during the recently concluded session at Belgaum.

Unfortunately, all these efforts have failed to bear fruit. In these circumstances, journalists, writers and citizens of Karnataka have decided that it is no longer prudent to remain silent in the face of such a serious atrocity. They have come together to form the “Forum Against Illegal Arrest of Journalists” and taken a decision to hold a three-day fast to protest against the wrongful incarceration of Naveen Soorinje.

Many journalists, writers and human rights activists have already expressed their support for this agitation. It is our hope that common citizens of the State too will join the cause and stand up for what is right.

Venue: Freedom Park, Bangalore.

Date:January 5, 2013 to January 7, 2013

ಪ್ರಜಾ ಸಮರ – 16 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದಲ್ಲಿ ಅಧಿಕೃತವಾಗಿ ನಕ್ಸಲ್ ಚಟುವಟಿಕೆ ದಾಖಲಾದದ್ದು 2002 ರಲ್ಲಿ. ಚಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಬಳಿಯ ಕಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಮೊದಲ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಮಹಿಳೆಯೊಬ್ಬಳ ಕಾಲಿಗೆ ಗುಂಡು ತಗಲುವುದರ ಮೂಲಕ ನಕ್ಸಲರು ಕರ್ನಾಟಕದ ಮಲೆನಾಡಿಗೆ ಕಾಲಿಟ್ಟಿದ್ದಾರೆ ಎಂಬುದನ್ನು ಧೃಡಪಡಿಸಿತು. ನಂತರ 2003 ರ ನವಂಬರ್ ತಿಂಗಳಿನಲ್ಲಿ ಈದು ಎಂಬ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರು ಜಿಲ್ಲೆಯ ಪಾರ್ವತಿ ಮತ್ತು ಹಾಜಿಮ ಎಂಬ ಯುವತಿಯರು ಬಲಿಯಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲ್ ರಕ್ತ ಚರಿತ್ರೆಗೆ ಮೊದಲ ಅಧ್ಯಾಯ ಬರೆದರು.

ಕರ್ನಾಟಕಕಕ್ಕೆ ನಕ್ಷಲ್ ಚಳುವಳಿಯನ್ನು ವಿಸ್ತರಿಬೇಕೆಂಬುದು ಆಂಧ್ರ ಪೀಪಲ್ಸ್ ವಾರ್ ಗ್ರೂಪ್ 1982 ರಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಸಂಘಟನೆಯನ್ನು ರೂಪಿಸುವ ಜವಬ್ದಾರಿಯನ್ನು ಚುರುಕುರಿ ರಾಜ್‌ಕುಮಾರ್ ಅಲಿಯಾಸ್ ಅಜಾದ್ ಎಂಬಾತನಿಗೆ ವಹಿಸಲಾಗಿತ್ತು. 1982 ರಿಂದ ಕರ್ನಾಟಕದ ಉಸ್ತುವಾರಿ ಹೊಣೆ ಹೊತ್ತಿದ್ದ ಅಜಾದ್ ರಾಯಚೂರು, ಬೀದರ್, ಗುಲ್ಬರ್ಗಾ ಮತ್ತು ಮಧುಗಿರಿ, ಪಾವಗಡ ಮಂತಾದ ಸ್ಥಳಗಳಲ್ಲಿ ಸಂಚರಿಸುತ್ತಾ ಯುವಕರನ್ನು ಸೆಳೆಯುವಲ್ಲಿ ನಿರತನಾಗಿದ್ದ. ವಾರಂಗಲ್ ಪಟ್ಟಣದ ಇಂಜಿನಿಯರಿಂಗ್ ಕಾಲೇಜಿನಿಂದ ಎಂ.ಟೆಕ್ ಪದವಿ ಪಡೆದು ನಕ್ಸಲ್ ಚಳುವಳಿಗೆ ಸೇರ್ಪಡೆಯಾಗಿದ್ದ ಅಜಾದ್ ತನ್ನ ವಿದ್ಯೆ ಮತ್ತು ಸಂಘಟನಾ ಚಾತುರ್ಯದಿಂದಾಗಿ ಸಿ.ಪಿ.ಐ.(ಎಂ.ಎಲ್.) ನ ಪಾಲಿಟ್ ಬ್ಯೂರೊ ನ ಸದಸ್ಯನಾಗಿ ಕೂಡ ಕಾರ್ಯ ನಿರ್ವಹಿಸಿದ್ದ. ಈತನನ್ನು 2010 ರಲ್ಲಿ ಆಂಧ್ರ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿ ಜೊತೆಗಿದ್ದ ಹೇಮಂತ್ ಕುಮಾರ್ ಪಾಂಡೆ ಎಂಬ ಪತ್ರಕರ್ತನನ್ನು ಸಹ ಕರೆದೊಯ್ದು ಆಂಧ್ರ ಗಡಿಭಾಗದ ಅರಣ್ಯದಲ್ಲಿ ಎನ್ ಕೌಂಟರ್ ಮಾಡಿ ಮುಗಿಸಿದರು. 1982 ರ ನಂತರ ಮಾವೋವಾದಿ ನಕ್ಸಲ್ ಸಂಘಟನೆಗೆ ಕರ್ನಾಟಕದಿಂದ ಸಿರಿಮನೆ ನಾಗರಾಜ್ SakethRajanಮತ್ತು ಸಾಕೇತ್ ರಾಜನ್ ಇವರ ಬೆಂಬಲ ದೊರೆತ ನಂತರ ರಾಯಚೂರು ಜಿಲ್ಲೆಯ ಕಮ್ಯೂನಿಷ್ಟ್ ಪಕ್ಷದ ಅನೇಕ ಯುವ ಕಾರ್ಯಕರ್ತರು ಕೈ ಜೋಡಿಸಿದರು. ಆನಂತರ ಅದಕ್ಕೊಂದು ಸ್ವತಂತ್ರ ಅಸ್ತಿತ್ವ ಬಂತು.

ಹಾಗೇ ನೋಡಿದರೇ 1975-76 ರ ಸಮಯದಲ್ಲಿ ಕರ್ನಾಟಕಕ್ಕೆ ಕೇರಳದ ಕಣ್ಣೂರು ಮತ್ತು ಕಾಸರಗೂಡು ಮೂಲಕ ನಕ್ಸಲ್ ಚಟುವಟಿಕೆ ವಿಸ್ತರಿಸುವ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಕೇರಳದಲ್ಲಿ 1968 ರಲ್ಲಿ ಅಂಬಾಡಿ ಶಂಕರನ್ ಕುಟ್ಟಿ ಮತ್ತು ಕುನ್ನಿಕಲ್ ನಾರಾಯಣನ್ ಹಾಗೂ ಅವರ ಪುತ್ರಿ ಕೆ.ಅಜಿತಾ ಇವರ ನೇತೃತ್ವದಲ್ಲಿ ಆರಂಭವಾದ ಚಟುವಟಿಕೆ 1976 ರವರೆಗೆ ತಲಚೇರಿ, ಕಣ್ಣೂರು, ಕೊಟ್ಟಾಯಂ, ತಿರುವನಂತಪುರಂ, ವೈನಾಡು,ಕಾಸರಗೂಡು, ಕೊಲ್ಲಂ ಜಿಲ್ಲೆಗಳಿಗೆ ವಿಸ್ತರಿಸಿ ನಂತರ ಸ್ಥಗಿತಗೊಂಡಿತು. 1976 ರ ನಂತರ ಸಿ.ಪಿ.ಐ (ಎಂ.ಎಲ್) ರೆಡ್ ಪ್ಲಾಗ್ (ಕೆಂಬಾವುಟ) ಹೆಸರಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುತ್ತಾ, ಕಾರ್ಮಿಕರ ಪರವಾಗಿ ಹೋರಾಟ ನಡೆಸಲು ಆರಂಭಿಸಿತು.

ಕರ್ನಾಟಕದ ನಕ್ಸಲ್ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟು ಹೋರಾಟದ ಮುಂಚೂಣಿಯಲ್ಲಿ ನಿಂತು ಗುಂಡಿಗೆ ಬಲಿಯಾದ ಮೈಸೂರಿನ ಸಾಕೇತ್ ರಾಜನ್ ಬದುಕು ನಿಜಕ್ಕೂ ದುರಂತ ಕಥನವೇ ಸರಿ. ಕರ್ನಾಟಕದ ಜನತೆಗೆ ಸಾಕೇತ್‌ ರಾಜನ್ ಜೀವನಚಿತ್ರ ಪೊಲೀಸರ ಗುಂಡಿಗೆ ಬಲಿಯಾದ ನಂತರವಷ್ಟೇ ಪರಿಚಿತವಾಯಿತು, ಆದರೆ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ 80 ರ ದಶಕದಲ್ಲೇ ಎಲ್ಲಾ ಪ್ರಗತಿಪರರಿಗೆ, ಯುವ ಬರಹಗಾರರಿಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದರು. ಈ ದಿನ ನಮ್ಮ ನಡುವಿನ ಬರಹಗಾರರಾದ ಡಾ.ಮೊಗಳ್ಳಿ ಗಣೇಶ, ಡಾ. ಬಂಜಗೆರೆ ಜಯಪ್ರಕಾಶ್, ಅಬ್ದುಲ್ ರಶೀದ್, ಪತ್ರಕರ್ತ ಬಿ.ಎಸ್. ಸತ್ಯನಾರಾಯಣ, ಬಡಗಲಪುರ ನಾಗೇಂದ್ರ, ಕೇಶವ ಶರ್ಮ, ರೈತ ವಿದ್ಯಾರ್ಥಿ ಒಕ್ಕೂಟದ ಡಿ. ಹೊಸಳ್ಳಿ ಶಿವು, ಬರಹಗಾರ ಕೆ.ಶಿವಸುಂದರ್, ಪತ್ರಕರ್ತೆ ಗೌರಿ ಲಂಕೇಶ್, ಮೈಸೂರು ಮಿತ್ರ ಸಂಪಾದಕ ಕೆ.ಬಿ.ಗಣಪತಿ, ಪ್ರೊ. ಲಿಂಗರಾಜ್ ಗಾಂಧಿ ಸೇರಿದಂತೆ ಹಲವರ ಜೊತೆ ಸಾಕೇತ್ ರಾಜನ್‌ಗೆ ಒಡನಾಟವಿತ್ತು.

ಅಯ್ಯಂಗಾರ್ ಕುಟುಂಬಕ್ಕೆ ಸೇರಿದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಪುತ್ರನಾಗಿ ಜನಿಸಿದ ಸಾಕೇತ್ ರಾಜನ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಗೆ ಸೇರಿದ ಪ್ರತಿಷ್ಟಿತ ಇಂಡಿಯನ್ ಇನ್ಸಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಪತ್ರಿಕೋದ್ಯಮದ ಸ್ನಾತ್ತಕೋತ್ತರ ಪದವಿಗೆ ಸೇರ್ಪಡೆಯಾಗಿದ್ದರು. ಮೈಸೂರಿನಲ್ಲಿದ್ದಾಲೇ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಸಾಕೇತ್ ದೆಹಲಿಯಲ್ಲಿದ್ದಾಗ ಮಾವೋವಾದಿ ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. Frantz_Fanon_The_Wretched_of_the_Earthಆ ವೇಳೆಗೆ ಅವರು ಓದಿಕೊಂಡಿದ್ದ ಫ್ರ್ಯಾನ್ಜ್ ಫಾನನ್ ಎಂಬಾತನ “Wretched of the Earth” (ಭೂಮಿ ಮೇಲಿನ ತಿರಸ್ಕೃತರು) ಎಂಬ ಕೃತಿ ಅವರ ಮನಸ್ಸನ್ನು ಸಂಪೂರ್ಣವಾಗಿ ಕ್ರಾಂತಿಯತ್ತ ತಿರುಗಿಸಿತ್ತು. ಪತ್ರಿಕೋದ್ಯಮದಲ್ಲಿ ನಾಲ್ಕು ಚಿನ್ನದ ಪದಕದೊಂದಿಗೆ ಪದವಿ ಪಡೆದು, ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಘಟಿಕೋತ್ಸವದಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವ ವಿ.ಸಿ. ಶುಕ್ಲಾ ರವರಿಂದ ಪದವಿ ಪತ್ರ ಸ್ವೀಕರಿಸಿದ ಕೂಡಲೇ ವೇದಿಕೆಯ ಮೇಲೆ ಅದನ್ನು ಹರಿದು ಹಾಕಿ ವ್ಯವಸ್ಥೆಯ ಬಗ್ಗೆ ಧಿಕ್ಕಾರ ಕೂಗಿದ ಮೊದಲ ಕ್ರಾಂತಿಕಾರಿ ವಿದ್ಯಾರ್ಥಿ ಸಾಕೇತ್ ರಾಜನ್. (ಸಾಕೇತ್ ರಾಜನ್ ಬೆಂಗಳೂರಿನ ವಿ.ವಿ.ಯಲ್ಲಿ ಕೂಡ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದಿದ್ದರು. ಗೌರಿ ಲಂಕೇಶ್ ಅವರ ಸಹಪಾಠಿಗಳಲ್ಲಿ ಒಬ್ಬರು.) ದೆಹಲಿಯಲ್ಲಿದ್ದಾಗಲೇ ಎಡಪಂಥೀಯ ವಿಚಾರಧಾರೆಗಳಿಂದ ಪ್ರೆರೇಪಿತರಾಗಿದ್ದ ರಾಜನ್ ಅಂತಹದೊಂದು ಪಡೆಯನ್ನು ಕಟ್ಟಬೇಕೆಂದು ಕನಸು ಕಾಣುತ್ತಾ 1982 ರಲ್ಲಿ ಮೈಸೂರಿಗೆ ಬಂದರು.

ಮೈಸೂರಿನ ಪ್ರತಿಷ್ಟಿತ ಬಡಾವಣೆ ಜಯಲಕ್ಷ್ಮಿಪುರಂ ಬಡಾವಣೆಯಲ್ಲಿ ಬಂಗಲೆ ಇದ್ದರೂ ಕೂಡ ಮನೆಗಿಂತ ಹೆಚ್ಚಾಗಿ ಸ್ನೇಹಿತರ ಹಾಸ್ಟಲ್ ರೂಮುಗಳಲ್ಲಿ ಕಾಲ ಕಳೆಯುತಿದ್ದ ಸಾಕೇತ್ ರಾಜನ್, ಮೈಸೂರು ವಿ.ವಿ. ಮುಂಭಾಗದ ಕುಕ್ಕರಳ್ಳಿ ಕೆರೆ ಏರಿಯನ್ನು ಹಗಲಿನ ವೇಳೆಯಲ್ಲಿ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಕುಕ್ಕರಹಳ್ಳಿ ಕೆರೆಗೆ ಮೈಸೂರು ನಗರದ ಬಡಾವಣೆಗಳಿಂದ ಕೊಳಚೆ ನೀರು ಬಂದು ಸಂಗ್ರಹವಾಗುವುದನ್ನು ಪ್ರತಿಭಟಿಸಿ ಮೈಸೂರಿನ “ಸ್ಟಾರ್ ಆಪ್ ಮೈಸೂರು” ಇಂಗ್ಲೀಷ್ ಪತ್ರಿಕೆಯಲ್ಲಿ ನಿರಂತರ ಲೇಖನಗಳನ್ನು ಬರೆದು ನಾಗರೀಕರಲ್ಲಿ ಜಾಗೃತಿ ಮೂಡಿಸಿದರು. ಆ ವೇಳೆಗೆ ಕರ್ನಾಟಕದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಚಳುವಳಿ ಆರಂಭವಾಗಿತ್ತು. ಅಹಿಂಸೆಯ ಮಾದರಿಯಲ್ಲಿ ನಡೆಯುತಿದ್ದ ರೈತ ಚಳುವಳಿಗೆ ಒಲವು ತೋರಿಸದ ಸಾಕೇತ್ ರಾಜನ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗುತಿದ್ದರು.

“ಮೇಕಿಂಗ್ ಹಿಸ್ಟರಿ” ಎಂಬ ಎರಡು ಸಂಪುಟಗಳಲ್ಲಿ ಬಂದಿರುವ ಸಾಕೇತ್ ರಾಜನ್ ಕೃತಿಗಳು ಅವರ ವಿದ್ವತ್ ಮತ್ತು ಪ್ರತಿಭೆಗೆ ಸಾಕ್ಷಿಯಾಗಿವೆ. ಮೊದಲನೆ ಸಂಪುಟದಲ್ಲಿ ಕರ್ನಾಟಕ ಇತಿಹಾಸವನ್ನು ಟಿಪ್ಪು ಸುಲ್ತಾನ್ ಬ್ರಿಟಿಷರೊಂದಿಗೆ ಕಾದಾಡಿ 1799 ರ ನಾಲ್ಕನೆ ಮೈಸೂರು ಯುದ್ದದಲ್ಲಿ ಮಡಿಯುವವರೆಗೆ ಕಟ್ಟಿಕೊಟ್ಟಿರುವ ಸಾಕೇತ್, ಎರಡನೇ ಸಂಪುಟದಲ್ಲಿ 1799 ರಿಂದ 1857 ರ ಸಿಪಾಯಿ ದಂಗೆಯವರೆಗೆ ದಾಖಲಿಸಿದ್ದಾರೆ. 1995 ಮತ್ತು 1997 ರಲ್ಲಿ ಈ ಕೃತಿಗಳು ಪ್ರಕಟಣೆಗೊಂಡವು. 1857 ರಿಂದ 1947 ರ ವರೆಗಿನ ಇತಿಹಾಸ ಮೂರನೇ ಸಂಪುಟದಲ್ಲಿ ಬರಬೇಕಾಗಿತ್ತು. ಅಷ್ಟರಲ್ಲಿ ಸಾಕೇತ್ ಮೈಸೂರನ್ನು ತೊರೆದು ಆಂಧ್ರದತ್ತ ವಲಸೆ ಹೋದ ಕಾರಣ ಬೆಳಕು ಕಾಣಲಿಲ್ಲ. ದುರಂತವೆಂದರೆ, 2005 ರ ಪೆಬ್ರವರಿ 6 ರಂದು ಸಾಕೇತ್ ರಾಜನ್ ನಕ್ಸಲಿಯರ ನಾಯಕನೆಂಬ ಹಣೆಪಟ್ಟಿಯೊಂದಿಗೆ ಪೊಲೀಸರ ಗುಂಡಿಗೆ ಬಲಿಯಾಗಿ ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದ ಸಂದರ್ಭದಲ್ಲಿ ಅವರ ಕೃತಿಗಳ ಹಲವಾರು ಪ್ರಬಂಧಗಳು ದೇಶದ ಹಲವಾರು ವಿ.ವಿ.ಗಳಲ್ಲಿ ಇತಿಹಾಸದ ಪಠ್ಯಗಳಾಗಿ ವಿದ್ಯಾರ್ಥಿಗಳಿಗೆ ಬೋಧಿಸಲ್ಪಡುತಿದ್ದವು. ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ಮತ್ತು ಎಡಪಂಥೀಯ ಚಿಂತನೆಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ ಎಂ.ಡಿ. ಕೊಸಾಂಬಿ ನಂತರ ನಮ್ಮ ನಡುವೆ ಇರುವ ರೊಮಿಲಾ ಥಾಪರ್ ಮತ್ತು ಇರ್ಪಾನ್‌ ಹಬೀಬ್ ಎಂಬ ಇತಿಹಾಸ ತಜ್ಞರಿಗೆ ಸಮನಾಗಿ ನಿಲ್ಲುವ ಪ್ರತಿಭೆ ಸಾಕೇತ್ ರಾಜನ್‌ಗೆ ಇತ್ತು.

ಸಾಕೇತ್ ರಾಜನ್‌ರವರ ಈ ಎರಡು ಕೃತಿಗಳ ರಚನೆ ಮತ್ತು ಹೋರಾಟದ ಹಿಂದೆ ಇದ್ದ ಅವರ ಸಂಗಾತಿ ರಾಜೇಶ್ವರಿಯರ ಶ್ರಮ ಮತ್ತು ತ್ಯಾಗ ಮನೋಭಾವವನ್ನು ಅಲ್ಲಗೆಳಯಲಾಗದು. ಮೈಸೂರಿನ ಬಡಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ಅಲಿಯಾಸ್ ಅನಿತಾ ಎಂದು ಕರೆಸಿಕೊಳ್ಳುತಿದ್ದ ಈ ಹೆಣ್ಣು ಮಗಳು ಪದವಿ ಶಿಕ್ಷಣ ಮುಗಿಸುವ ವೇಳೆಗೆ ಲೊಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದ ಅವರ ತಂದೆ ಅಕಾಲ ಮರಣಹೊಂದಿದರು. com-rajeshwariರಾಜೇಶ್ವರಿ ಕುಟುಂಬದ ಹಿರಿಯ ಮಗಳಾದ್ದರಿಂದ ಕುಟುಂಬದ ಹೊಣೆ ಹೊರುವ ಸಲುವಾಗಿ ಸರ್ಕಾರ ನೀಡುವ ಅನುಕಂಪ ಆಧಾರಿತ ಉದ್ಯೋಗದ ಯೋಜನೆಯಡಿ ಲೋಕೊಪಯೋಗಿ ಇಲಾಖೆಯಲ್ಲಿ ಗುಮಾಸ್ತೆಯಾಗಿ ದುಡಿದರು. ಸತತ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಸಹೋದರ-ಸಹೋದರಿಯರು ನೆಲೆ ನಿಂತ ನಂತರ ಉದ್ಯೋಗಕ್ಕೆ ರಾಜಿನಾಮೆ ನೀಡಿ ಎಡಪಂಥೀಯ ಚಿಂತ ಮತ್ತು ಹೋರಾಟಗಳೊಂದಿಗೆ ಗುರುತಿಸಿಕೊಂಡರು. ಉದ್ಯೋಗದಲ್ಲಿದ್ದಾಗಲೇ ಅನೇಕ ಪ್ರಗತಿ ಪರ ಸಂಘಟನೆಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ರಾಜೇಶ್ವರಿ ಸಹಜವಾಗಿ ಸಾಕೇತ್‌ ರಾಜನ್ ಜೊತೆ ಗುರುತಿಸಿಕೊಂಡರು. ಸಾಕೇತ್ ಬರೆದ ಎರಡು ಸಂಪುಟಗಳಿಗೆ ತಾವೇ ನಿಂತು ಡಿ.ಟಿ.ಪಿ. ಟೈಪಿಂಗ್ ಮಾಡಿದರು. ಆಗ ತಾನೇ ಆರಂಭಗೊಂಡಿದ್ದ ಡಿ.ಟಿ.ಪಿ.ಯನ್ನು ಕಲಿಯಲು ಮೂರು ತಿಂಗಳ ಡಿಪ್ಲೊಮ ಕೋರ್ಸ್‌ಗೆ ರಾಜೇಶ್ವರಿ ಸೇರ್ಪಡೆಯಾಗಿದ್ದರು.

ಕರ್ನಾಟಕದ ಪರಿಸರ ಸಂರಕ್ಷಣ ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂಬುದು ಸಾಕೇತ್ ಅವರ ಕನಸಾಗಿತ್ತು. ಕಾರವಾರದ ಬಳಿ ಸ್ಥಾಪಿಸಲಾದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬೇಕಾದ ಯುರೇನಿಯಂ ಅದಿರನ್ನು ಸಂಸ್ಕರಿಸಲು ಮೈಸೂರಿನ ರಟ್ಟೆಹಳ್ಳಿ ಬಳಿ ಸಂಸ್ಕರಣಾ ಘಟಕ ಆರಂಭಿಸಿದಾಗ ಇದರ ಬಗ್ಗೆ ಪ್ರತಿಭಟಿಸಿ ರಾಜ್ಯದ ಗಮನ ಸೆಳೆದಿದ್ದರು. ಇತ್ತ ಮಲೆನಾಡಿನಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮತ್ತು ಅನೇಕ ಸ್ನೇಹಿತರು ತುಂಗಾ ಉಳಿಸಿ ಎಂಬ ಆಂಧೋಲನ ಆರಂಭಿಸಿದ್ದರು. ಕುದುರೆ ಮುಖ ಗಣಿಗಾರಿಕೆಯಂದ ಆಗುವ ಪರಿಸರ ನಾಶದ ಬಗ್ಗೆ ಪರಿಸರವಾದಿಗಳು ಹೋರಾಟ ಆರಂಭಿಸಿದಾಗ ಹೋರಾಟಕ್ಕೆ ಬೆಂಬಲ ಸೂಚಿಸಿ ಲೇಖನಗಳನ್ನು ಬರೆದು ಅದನ್ನು ರಾಜ್ಯವ್ಯಾಪಿ ಚಳವಳಿಯಾಗಿ ರೂಪಿಸಬೇಕೆಂದು ಬಯಸಿದ್ದರು. ಇದೇ ವೇಳೆಗೆ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಅಭಯಾರಣ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಅರಣ್ಯದಲ್ಲಿದ್ದ ಅನೇಕ ನಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ದೂಡಲ್ಪಟ್ಟರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಬಲಿಷ್ಟ ನಕ್ಸಲ್ ಚಳುವಳಿಯನ್ನು ಕಟ್ಟಬೇಕೆಂಬುದು ಸಾಕೇತ್ ರಾಜನ್‌ವರ ಯೋಜನೆಯಾಗಿತ್ತು. ಆ ವೇಳೆಗಾಗಲೇ ಅವರು ತಮ್ಮ ವಿದ್ವತ್ ಮತ್ತು ಪ್ರತಿಭೆಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸಿ.ಪಿ.ಐ.( ಎಂ.ಎಲ್) ಕಮ್ಯುನಿಸ್ಟ್ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದರು. ಕರ್ನಾಟಕದಲ್ಲಿ ಯಾವುದೇ ಹಿಂಸಾತ್ಮಕ ಹೋರಾಟ ನಡೆಯದೇ ಇದ್ದ ಕಾರಣ ಈ ಬೆಳವಣಿಗೆಯನ್ನು ಕರ್ನಾಟಕ ಪೊಲೀಸರು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇವರ ಒಡನಾಟ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್( ಸಿ.ಪಿ.ಐ.(ಎಂ.ಎಲ್.) ಜೊತೆ ಇದೆ ಎಂಬುವುದನ್ನು ಅರಿತಿದ್ದ ಪೊಲೀಸರು ಮೈಸೂರಿನಲ್ಲಿ ಸಾಕೇತ್‌ರ ಎಲ್ಲಾ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದರು. ರಾಜೇಶ್ವರಿಯ ಸಂಪಾದಕತ್ವದಲ್ಲಿ ಹೊರ ಬರುತಿದ್ದ “ವನಿತಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನ ಬರೆಯುತಿದ್ದರು. ಜೊತೆಗೆ “ಪ್ರಜಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ಆಂಧ್ರದ ನಕ್ಸಲ್ ಚಳುವಳಿ ಮತ್ತು ಅಲ್ಲಿನ ನಾಯಕರ ಸಂದರ್ಶನಗಳು ಪ್ರಕಟವಾಗುತಿದ್ದವು. ಸ್ವತಃ ರಾಜೇಶ್ವರಿ ಆಂಧ್ರಕ್ಕೆ ಪ್ರಯಾಣ ಬೆಳಸಿ ಅಲ್ಲಿ ನಡೆಯುತಿದ್ದ ದೌರ್ಜನ್ಯಗಳನ್ನು ದಾಖಲಿಸಿಕೊಂಡು ಬಂದು ಪತ್ರಿಕೆಯಲ್ಲಿ ಬರೆಯುತಿದ್ದರು. ಅವರ ಇಂತಹ ಪ್ರಯತ್ನ ಅಂತಿಮವಾಗಿ ದುರಂತದಲ್ಲಿ ಅಂತ್ಯಗೊಂಡಿತು.

2001 ರ ಮಾರ್ಚ್ 20 ರಂದು ಆಂಧ್ರದ ಉತ್ತರ ಭಾಗದ ಪೂರ್ವ ಗೋದಾವರಿ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಬಳಿ ಕೊತ್ತಪಲ್ಲಿ ಎಂಬ ಅರಣ್ಯದಲ್ಲಿ “ಪೀಪಲ್ಸ್ ವಾರ್ ಗ್ರೂಪ್”‌ಗೆ ಸೇರಿದ ಇಬ್ಬರು ದಳಂ ನಾಯಕರನ್ನು ಬೇಟಿ ಮಾಡಿ ಸಂದರ್ಶಿಸುತಿದ್ದಾಗ ರಾಜೇಶ್ವರಿ ಆಂಧ್ರ ಪೊಲೀಸರಿಂದ ಬಂಧಿಸಲ್ಪಟ್ಟರು. ಆ ಕ್ಷಣದಲ್ಲಿ ರಾಜೇಶ್ವರಿ ಬಳಿ ಇದ್ದುದ್ದು ಒಂದು ನೋಟ್ ಬುಕ್, ಪೆನ್ ಮತ್ತು ಕ್ಯಾಮರಾ ಮಾತ್ರ. ತಾನೊಬ್ಬ ಕರ್ನಾಟಕ ಮೂಲದ ಪತ್ರಕರ್ತೆ ಎಂದು ರಾಜೇಶ್ವರಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಆಂಧ್ರ ಪೊಲೀಸರು ಕರುಣೆ ತೋರಲಿಲ್ಲ. ಆಂಧ್ರದ ಇಬ್ಬರು ದಳಂ ನಾಯಕರನ್ನು ಬೆಳಿಗ್ಗೆ 11 ಗಂಟೆಗೆ ಎನ್‌ಕೌಂಟರ್ ಮೂಲಕ ಮುಗಿಸಿದ ಪೊಲೀಸರು ರಾಜೇಶ್ವರಿಯನ್ನು ಅರಣ್ಯದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಂಜೆ ನಾಲ್ಕು ಗಂಟೆಯವರೆಗೆ ನಕ್ಸಲರ ಕುರಿತ ಮಾಹಿತಿಗಾಗಿ ಇನ್ನಿಲ್ಲದಂತೆ ಚಿತ್ರ ಹಿಂಸೆ ನೀಡಿದ್ದರು. ಅಂತಿಮವಾಗಿ ಸಂಜೆ 4 ಗಂಟೆಗೆ ಅವರನ್ನು ಸಹ ಗುಂಡಿಟ್ಟು ಕೊಂದು, ಪೊಲೀಸರು ಮತ್ತು ನಕ್ಸಲರ ಗುಂಡಿನ ಚಕಮಕಿಯಲ್ಲಿ ಆದಿವಾಸಿ ಮಹಿಳೆಯ ಸಾವು ಎಂಬ ಸುದ್ದಿಯನ್ನು ಪ್ರಕಟಿಸಿದರು. ಆದರೆ ಈ ಎಲ್ಲಾ ಘಟನೆಗಳನ್ನು ಪೊದೆಯ ಹಿಂದೆ ಅಡಗಿ ಕುಳಿತು ವೀಕ್ಷಿಸಿದ್ದ ಅಲ್ಲಿನ ಆದಿವಾಸಿಗಳು ಹೊರ ಜಗತ್ತಿಗೆ ನಿಜವಾದ ಸುದ್ದಿಯನ್ನು ತಲುಪಿಸಿದ್ದರು. ರಾಜೇಶ್ವರಿಯರ ದೇಹದ ಮೇಲೆ ಪೊಲೀಸರು ಸಿಗರೇಟಿನಿಂದ ಸುಟ್ಟಿದ್ದ ಗಾಯದ ಕಲೆಗಳಿದ್ದವು. ತಾರತಮ್ಯವಿಲ್ಲದ ಸುಂದರ ಸಮಾಜದ ಕನಸು ಕಂಡಿದ್ದ ಈ ಮೈಸೂರಿನ ಹೆಣ್ಣು ಮಗಳು ಕೇವಲ ತನ್ನ 37 ನೇ ವಯಸ್ಸಿಗೆ ಆಂಧ್ರದ ಅರಣ್ಯದಲ್ಲಿ ಅನಾಥ ಹೆಣವಾಗಿಬಿಟ್ಟಳು. ರಾಜೇಶ್ವರಿಯ ಹತ್ಯೆಯ ಬಗ್ಗೆ ಕರ್ನಾಟಕದಲ್ಲಾಗಲಿ, ಅಥವ ರಾಷ್ಟ್ರಮಟ್ಟದಲ್ಲಾಗಲಿ, ಯಾವೊಂದು ಮಾದ್ಯಮವೂ ಧ್ವನಿ ಎತ್ತಲಿಲ್ಲ. ಬರಹಗಾರ ಮಿತ್ರ ಕೆ.ಶಿವಸುಂದರ್ ಮಾತ್ರ ಈ ಹತ್ಯೆಯ ಬಗ್ಗೆ ಬೆಂಗಳೂರಿನಲ್ಲಿ ದೊಡ್ಡದಾಗಿ ದ್ವನಿಯೆತ್ತಿ ದೇಶದ ಗಮನ ಸೆಳೆದರು.

ಸಂಗಾತಿ ರಾಜೇಶ್ವರಿಯ ಸಾವು ಸಾಕೇತ್ ರಾಜನ್ ಅವರನ್ನು ತೀವ್ರ ಹತಾಶರನ್ನಾಗಿ ಮಾಡಿತು. ಜೊತೆಗೆ ಅವರು ಯಾವಾಗಲೂ ರೂಪಕದ ಭಾಷೆಯಲ್ಲಿ ಬಳಸುತಿದ್ದ “ಪೆನ್ ಅಂಡ್ ಗನ್”, ಅಂದರೆ ಲೇಖನಿ ಮತ್ತು ಬಂದೂಕ ಎರಡು ಹೋರಾಟ ಒಟ್ಟಿಗೆ ಸಾಗಬೇಕು ಎಂಬ ಅವರ ಆಲೋಚನೆಗೆ ಮೈಸೂರಿನ ಯಾವೊಬ್ಬ ಮಿತ್ರನಿಂದ ಬೆಂಬಲ ದೊರೆಯದಿದ್ದದು ನಿರಾಶೆ ಮೂಡಿಸಿತ್ತು. ಅಂತಿಮವಾಗಿ 2001 ರ ಕೊನೆಯ ದಿನಗಳಲ್ಲಿ ಯಾರೊಬ್ಬರಿಗೂ ಒಂದು ಸಣ್ಣ ಸುಳಿವು ನೀಡದೇ ಒಬ್ಬಂಟಿಯಾಗಿ ಆಂಧ್ರದತ್ತ ನಡೆದು ಕೈಗೆ ಎ.ಕೆ. 47 ಬಂದೂಕ ಕೈಗೆತ್ತಿಕೊಳ್ಳುವುದರ ಮೂಲಕ ಒಂದು ತಂಡದೊಂದಿಗೆ 2002 ರಲ್ಲಿ ಮಲೆನಾಡು ಅರಣ್ಯ ಪ್ರವೇಶ ಮಾಡಿ ನಕ್ಸಲ್ ಹೋರಾಟಕ್ಕೆ ಮುನ್ನುಡಿ ಬರೆದರು.

2003 ರ ನವೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯ ಈದು ಗ್ರಾಮದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಾಜಿಮಾ ಮತ್ತು ಪಾರ್ವತಿಯ ಸಾವು ಮತ್ತು ಇದಕ್ಕೆ ಪ್ರತಿಯಾಗಿ ಶೃಂಗೇರಿ ತಾಲ್ಲೂಕಿನ ನೆಮ್ಮೂರು ಬಳಿಯ ಅರಣ್ಯ ಇಲಾಖೆಯ ಅತಿಥಿ ಗೃಹದ ಧ್ವಂಸ ಹಾಗೂ 2004 ರಲ್ಲಿ ಶೃಂಗೇರಿ ತಾಲ್ಲೂಕು ಕಿಗ್ಗಾ ಗ್ರಾಮದ ಮಗ್ಗೆಬಯಲು ಚಂದ್ರಶೇಖರ ಇವರ ರಕ್ಷಣೆಗೆ ನೇಮಿಸಿದ್ದ ಪೊಲೀಸ್ ಪೇದೆ ಮುದ್ದಪ್ಪ ಅಪಹರಣ, ನಂತರ ಬಂದೂಕ ಕಸಿದುಕೊಂಡು ಬಿಡುಗಡೆ, ಈ ಎಲ್ಲಾ ಘಟನೆಗಳ ಹಿಂದೆ ಸಾಕೇತ್ ರಾಜನ್ ಇದ್ದರು. ಅವರ ಒಂದು ಮರೆಯಲಾರದ ಶ್ರೇಷ್ಟ ಗುಣವೊಂದನ್ನು ನಾವು ಮೆಚ್ಚಲೇಬೇಕು. ಕರ್ನಾಟಕದಲ್ಲಿ ಮೂರು ವರ್ಷಗಳ ಕಾಲ ನಕ್ಸಲ್ ಚಟುವಟಿಕೆ ನಡೆಸಿದರೂ ಸಹ ಅದರ ಒಂದು ಸಣ್ಣ ಸುಳಿವನ್ನು ಸಾಕೇತ್ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಏಕೆಂದರೆ, ಅವರ ಈ ನಿರ್ಧಾರ ಹಿಂದೆ ತಮ್ಮ ಹಳೆಯ ಮಿತ್ರರ ಬದುಕನ್ನು ಸಂರಕ್ಷಿಸುವ ಆಶಯವಿತ್ತು. ಸಾಕೇತ್ ಇತ್ತ ಅರಣ್ಯದಲ್ಲಿ ಏಕಾಂಗಿಯಾಗಿ ಬಂದೂಕು ಹಿಡಿದಿದ್ದರೇ ಅತ್ತ ಸಮಾಜದಲ್ಲಿ ಅವರ ಗೆಳೆಯರೆಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರಾಗಿ, ಕೆಲವರು ಪತ್ರಕರ್ತರಾಗಿ ಬದುಕು ಕಟ್ಟಿಕೊಂಡಿದ್ದರು. ಕರ್ನಾಟಕದ ನಕ್ಸಲ್ ಹೋರಾಟದ ಹಿಂದೆ ಸಾಕೇತ್ ರಾಜನ್ ಇದ್ದಾರೆ ಎಂಬ ಸಣ್ಣ ಸುಳಿಹು ಪೊಲೀಸರಿಗೆ ಸಿಕ್ಕಿದ್ದರೆ ಬಹುತೇಕ ಅವರ ಹಳೆಯ ಮಿತ್ರರೆಲ್ಲಾ ಮಾಹಿತಿ ನೆಪದಿಂದ ಪೊಲೀಸರಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಈ ಕಾರಣಕ್ಕಾಗಿ ತಮ್ಮ ಚಟುವಟಿಕೆಯನ್ನು ಬಚ್ಚಿಟ್ಟಿದ್ದರು.

ಪೊಲೀಸ್ ಅಪಹರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಉಜ್ಜನಿಗೌಡ ಬಂಧನವಾದ ಕೆಲವೇ ದಿನಗಳಲ್ಲಿ ಅಂದರೇ 2005 ರ ಫೆಬ್ರವರಿ 5 ರಂದು ಚಿಕ್ಕಮಗಳೂರು ಡಿವೈಎಸ್ಪಿ ಶಿವಕುಮಾರ್ ನೇತೃತ್ವದ 80 ಜನರ ಪೊಲೀಸರ ತಂಡ ನಾಲ್ಕು ತಂಡಗಳಾಗಿ ಸಾಕೇತ್ ರಾಜನ್ ಇದ್ದ ಅರಣ್ಯ ಪ್ರದೇಶವನ್ನು ಸುತ್ತುವರಿಯಿತು. ಮೆಣಸಿನ ಹಾಡ್ಯ ಗ್ರಾಮದ ಶೇಷಯ್ಯ ಎಂಬಾತ ಸಾಕೇತ್ ರಾಜನ್ ಮತ್ತು ಸಂಗಡಿಗರು ಇದ್ದ ಸ್ಥಳದ ಬಗ್ಗೆ ಪೊಲೀಸರಿಗೆ ನಿಖರವಾದ ಮಾಹಿತಿ ರವಾನಿಸಿದ್ದ. ಬೆಳಗಿನ ಜಾವ ಒಂದು ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ saketh_rajan_head_blown_offಸಾಕೇತ್ ರಾಜನ್ ಮತ್ತು ಅವರ ಅಂಗ ರಕ್ಷಕನಾಗಿದ್ದ ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಈ ದುರ್ಘಟನೆ ನಡೆಯುವ ಒಂದು ತಿಂಗಳ ಮುಂಚೆಯಷ್ಟೆ ಸಾಕೇತ್ ರಾಜನ್ ಪ್ರಥಮ ಬಾರಿಗೆ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕರ್ನಾಟಕದ ಕೆಲವು ಆಯ್ದ ಪತ್ರಕರ್ತರನ್ನು ಬೇಟಿಯಾಗಿದ್ದರು. ಇವರಲ್ಲಿ ಅವರ ಮಾಜಿ ಸಹಪಾಠಿ ಗೌರಿ ಲಂಕೇಶ್ ಕೂಡ ಒಬ್ಬರು. ಸಾಕೇತ್ ರಾಜನ್ ಹತ್ಯೆಯಿಂದ ಕೆರಳಿದ ಆಂಧ್ರದ ಅನಂತಪುರ ಜಿಲ್ಲೆಯ ಪೀಪಲ್ಸ್ ವಾರ್ ಗ್ರೂಪ್ ಕಾರ್ಯಕರ್ತರು 2005 ರ ಮಾರ್ಚ್ ತಿಂಗಳಿನಲ್ಲಿ ಮಧುಗಿರಿ ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕರ್ನಾಟಕ ಪೊಲೀಸರ ಮೇಲೆ ದಾಳಿ ನಡೆಸಿ ಏಳು ಪೊಲೀಸರನ್ನು ಹತ್ಯೆಗೈಯ್ದುರು. ಸಾಕೇತ್ ಸಾವಿನ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಕ್ಸಲರು ಮೇ ತಿಂಗಳಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮೆಣಸಿನಹಾಡ್ಯದ ಶೇಷಯ್ಯನನ್ನು ಮನೆಯಿಂದ ಹೊರಗೆ ಎಳೆತಂದು ಗುಂಡಿಕ್ಕಿ ಕೊಲ್ಲುವುದರ ಮೂಲಕ ಸಾಕೇತ್ ಸಾವಿಗೆ ಸೇಡು ತೀರಿಸಿಕೊಂಡರು.

ಸಾಕೇತ್ ಪೊಲೀಸರ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ, rajalakshmi saketh rajan motherಮೈಸೂರು ನಗರದಲ್ಲಿ ಯಾವೊಬ್ಬ ಮಾಧ್ಯಮ ಪ್ರತಿನಿಧಿಗೂ ಸಂದರ್ಶನ ನೀಡದೇ ಮನೆಯ ಬಾಗಿಲು ಹಾಕಿಕೊಂಡಿದ್ದ ಅವರ ತಾಯಿ ಪೊಲೀಸರ ಅಧಿಕಾರಿಗಳ ಜೊತೆ ಮಾತನಾಡುವಾಗ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಸಮರ್ಥಿಸಿಕೊಂಡರು. ಬಾಲ್ಯದಿಂದಲೂ ಬಡವರ ಕುರಿತು ಅವನಿಗಿದ್ದ ಕಾಳಜಿಯನ್ನು ಪೊಲೀಸರಿಗೆ ವಿವರಿಸಿದರು. ಆದರೆ, ಅವನ ಶವವನ್ನು ನೋಡುವ ಧೈರ್ಯ ತನಗಿಲ್ಲವೆಂದು ಹೇಳಿ ಶವ ಪಡೆಯಲು ನಿರಾಕರಿಸಿದರು.

ಹಿಂಸೆಯ ಹಾದಿಯನ್ನು ತುಳಿಯದಿದ್ದರೆ, ಈ ನಾಡಿನ ಒಬ್ಬ ಧೀಮಂತ ಪತ್ರಕರ್ತ ಇಲ್ಲವೇ ಲೇಖಕನಾಗಬಹುದಾಗಿದ್ದ ಎಲ್ಲಾ ಗುಣಗಳನ್ನು ಹೊಂದಿದ್ದ ಸಾಕೇತ್ ರಾಜನ್ ಬಡವರ ಮೇಲಿನ ಕಾಳಜಿಯಿಂದಾಗಿ ತನ್ನ ಶ್ರೀಮಂತಿಕೆಯ ಬದುಕು ತೊರೆದು ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದು, ಕರ್ನಾಟಕ ಹೋರಾಟದ ಇತಿಹಾಸದ ಪುಟಗಳಲ್ಲಿ ಒಂದು ದುರಂತ ಅಧ್ಯಾಯ.

(ಮುಂದುವರಿಯುವುದು)

ನವೀನ್ ಮೇಲಿನ ಆರೋಪಗಳನ್ನು ಕೈಬಿಡಲು ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಿತ್ರರೇ,

ಅನೇಕ ನಿರಪರಾಧಿಗಳು ಜೈಲಿಗೆ ಹೋಗುತ್ತಾರೆ. ಬಹುಪಾಲು ಜನರದು ಸುದ್ದಿಯೇ ಆಗುವುದಿಲ್ಲ. ಅನೇಕ ಮುಗ್ಧರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತವೆ. ಎಲ್ಲವೂ ವರದಿಯಾಗುವುದಿಲ್ಲ ಮತ್ತು ಅವೆಲ್ಲದಕ್ಕೂ ಜನ ಒಂದೇ ರೀತಿ ಸ್ಪಂದಿಸುವುದಿಲ್ಲ. ದೇಶ ಈಗ ತಾನೆ ಅನ್ಯಾಯಕ್ಕೊಳಗಾದವಳ ಪರವಾಗಿ ಸಕಾರಣವಾಗಿ ಸ್ಪಂದಿಸಿ ಈ ದೇಶದಲ್ಲಿ ಎಲ್ಲವೂ ನಷ್ಟವಾಗಿಲ್ಲ ಎಂದು ನಿರೂಪಿಸಿದೆ.

ನವೀನ್ ಸೂರಿಂಜೆಯ ಹಾಗೆ ಅನೇಕ ನಿರಪರಾಧಿಗಳು ಜೈಲಿನಲ್ಲಿರಬಹುದು. ಆದರೆ ನಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನವೀನ್‌ಗೆ ಆಗಿರುವ-ಆಗುತ್ತಿರುವ ಅನ್ಯಾಯ ನಮಗೆಲ್ಲ ತಿಳಿದಿದೆ. ಹಾಗಾಗಿ ನವೀನ್‌ ಪರವಾಗಿ ಹೋರಾಡುವುದು ನಮ್ಮ ಆತ್ಮಸಾಕ್ಷಿಯ ಪ್ರಶ್ನೆ. ಅವರ ಪರವಾಗಿ ಎತ್ತುವ ಧ್ವನಿ ಕೇವಲ ಅವರೊಬ್ಬರ ಪರ ಅಲ್ಲ; ಬದಲಿಗೆ ಅವರಂತಹ ಎಲ್ಲಾ ನಿರಪರಾಧಿಗಳ ಪರವಾಗಿಯೂ ಆಗಿರುತ್ತದೆ.

ಕಳೆದ ಎರಡು ತಿಂಗಳಿನಿಂದ ರಾಜ್ಯದ ನೂರಾರು ಲೇಖಕರು, ಪತ್ರಕರ್ತರು, ಹೋರಾಟಗಾರರು, ಸಮಾಜಮುಖಿಗಳು, naveen-soorinjeಪ್ರಜಾಪ್ರಭುತ್ವವಾದಿಗಳು, ನವೀನ್‌ ಸೂರಿಂಜೆಗೆ ಆಗುತ್ತಿರುವ ಅನ್ಯಾಯವನ್ನು ತಾವು ಯಾವ ರೀತಿ ಪ್ರತಿಭಟಿಸುವುದು ಎಂದು ಗೊತ್ತಾಗದೇ ತೊಳಲಿದ್ದಾರೆ. ಅದರಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ. ಆದರೆ ನಮ್ಮೆಲ್ಲರಿಗೂ ನ್ಯಾಯಾಲಯದಲ್ಲಿಯೇ ಇದು ಇತ್ಯರ್ಥವಾಗಿ ಬೇಗ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿತ್ತು. ರಾಜ್ಯದ ಉಚ್ಚ ನ್ಯಾಯಾಲಯದಲ್ಲಿಯೂ ನವೀನ್ ಎಂಬ ಪತ್ರಕರ್ತನಿಗೆ–ಘಟನೆಯನ್ನು ಕೇವಲ ವರದಿ ಮಾಡುವ ಕರ್ತವ್ಯ ನಿಭಾಯಿಸಿದಾತನಿಗೆ–ಜಾಮೀನು ಸಿಗದೇ ಹೋಯಿತು. ನಮಗೆಲ್ಲರಿಗೂ ಈಗ ಅನ್ನಿಸಿರುವ ಹಾಗೆ, ಈಗ ಇದು ನ್ಯಾಯಾಲಯದಲ್ಲಿ ತೀರ್ಮಾನವಾಗುವ ವಿಷಯವಾಗಿ ಉಳಿದಿಲ್ಲ. ಸರ್ಕಾರ ಈ ಕೂಡಲೇ ತನ್ನ ಪೋಲಿಸರು ಹೊರಿಸಿರುವ ಸುಳ್ಳು ಆರೋಪಗಳನ್ನು ಕೈಬಿಡುವಂತೆ ಮಾಡಿದರೆ ಮಾತ್ರ ಇಲ್ಲಿ ನವೀನ್ ಜೈಲಿನಿಂದ ಹೊರಗೆ ಬರುತ್ತಾರೆ. ಆಗುತ್ತಿರುವ ಅನ್ಯಾಯ ನಿಲ್ಲುತ್ತದೆ.

ಹಾಗಾಗಿ ಈಗ ನಾವೆಲ್ಲರೂ ಹೋರಾಟ ಮಾಡಲೇಬೇಕಿದೆ. ಈ ವಿಷಯದ ಮೇಲೆ ಸರ್ಕಾರದ ಮೇಲೆ ಒತ್ತಡ ತರುವ, ನಾಡಿನ ಜನತೆಗೆ ವಿಷಯ ಮುಟ್ಟಿಸುವ, ಆಗಿರುವ ಅನ್ಯಾಯವನ್ನು ತಿಳಿಸಿ ಜನಾಭಿಪ್ರಾಯ ರೂಪಿಸುವ ಸಮಯ ಬಂದಿದೆ. ಇಷ್ಟು ದಿನ ನವೀನ್ ಬಂಧನವನ್ನು ವಿರೋಧಿಸಿ ತಾವೇನು ಮಾಡಬಹುದು ಎಂದುಕೊಂಡವರಿಗೆಲ್ಲ, ಈ ಹೋರಾಟದಲ್ಲಿ ಪಾಲ್ಗೊಳ್ಳಲು ಸಂದರ್ಭ ಬಂದಿದೆ.

ಈಗಾಗಲೆ ನಾನು ಒಂದಷ್ಟು ಹಿರಿಯ ಪತ್ರಕರ್ತರ ಜೊತೆ, ಸಂಘಟನೆಗಳ ಜೊತೆ, ಸಮಾನ ಮನಸ್ಕರ ಜೊತೆ ಮಾತನಾಡಿದ್ದೇನೆ. ನಾವೊಂದಷ್ಟು ಜನ ಈ ಶನಿವಾರದಿಂದ (5-1-2013) ಬೆಂಗಳೂರಿನಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ನಮ್ಮ ಜೊತೆ ನೂರಾರು ಜನರು ಭಾಗಿಯಾಗುವ ವಿಶ್ವಾಸ ಇದೆ. ನಾಡಿನ ಹಿರಿಯ ಲೇಖಕರು, ಪತ್ರಕರ್ತರು, ಸಂಘಟನೆಗಳು, ಮೌಲ್ಯಾಧಾರಿತ ರಾಜಕಾರಣಿಗಳು, ಹೋರಾಟಗಾರರು, ಅಲ್ಲಿಗೆ ಬಂದು ಈ ಹೋರಾಟಕ್ಕೆ ಬೆಂಬಲಿಸಲಿದ್ದಾರೆ.

ನಾಳೆ ಮತ್ತು ನಾಡಿದ್ದು ಇದೇ ವಿಚಾರವಾಗಿ ಒಂದೆರಡು ಸಭೆಗಳಾಗಲಿವೆ. ಸಮಾನಮನಸ್ಕರ ಒಂದು ವೇದಿಕೆ ರಚನೆಯಾಗಿ ಅದರ ಆಶ್ರಯದಲ್ಲಿ ಈ ಹೋರಾಟ, ಜಾಗೃತಿ, ಉಪವಾಸ ಸತ್ಯಾಗ್ರಹ ನಡೆಯಲಿದೆ. ಹೆಚ್ಚಿನ ವಿವರಗಳು ಒಂದೆರಡು ದಿನಗಳಲ್ಲಿ ನೀಡಲಾಗುತ್ತದೆ.

ಈ ಸತ್ಯಾಗ್ರಹದಲ್ಲಿ ಕೇವಲ ಬೆಂಗಳೂರಿನಲ್ಲಿರುವವರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಿಂದಲೂ ಅನ್ಯಾಯವನ್ನು ವಿರೋಧಿಸುವ ಮನಸ್ಥಿತಿಯುಳ್ಳ ಎಲ್ಲರೂ ಬಂದು ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ