ವೋಟಿಗಾಗಿ ಪಟಗಳ ಪರಾಕ್ರಮಣದಲ್ಲಿ ಒಂದಷ್ಟು ವಿಶ್ರಾಂತಿ

– ಮಹಾದೇವ ಹಡಪದ

ಮಹಾತ್ಮರುಗಳ ಆದರ್ಶದ ಗುರುತಿಗಾಗಿ, ಆರಾಧನೆಯ ಭಾಗವಾಗಿ, ಅವರ ಗುಣಾವಗುಣಗಳನ್ನು ಎಳ್ಳಷ್ಟು ಅಳವಡಿಸಿಕೊಳ್ಳದ ಇವರ ದುಂದುಗಾರಿಕೆಯ ಪ್ರಚಾರದ ಭಿತ್ತಿಪತ್ರದಲ್ಲಿ, ಪಕ್ಷದ ಸಣ್ಣ-ದೊಡ್ಡ ಕರಪತ್ರ, ಫ್ಲೆಕ್ಸ್‌ ಮತ್ತು ಕಟೌಟಗಳಲ್ಲಿ ಎಲ್ಲ ಮಾಹಾನ್ ವ್ಯಕ್ತಿಗಳ ಪಟಗಳು ರಾರಾಜಿಸುತ್ತಿದ್ದವು. ಆ ಆದರ್ಶದ ಮಾದರಿ ವ್ಯಕ್ತಿತ್ವಗಳ ಚಿತ್ರದ ಕೆಳಗೆ ಈ ಪುಂಡರ ಭಯಂಕರ ವಿನಯದ, ಹುಸಿನಗೆಯ, ಕೈಮುಗಿದ, ಎರಡು ಬೆರಳೆತ್ತಿದ ಕಕ್ಕದ ಗೆಶ್ಚರ್ ಫೋಜುಗಳಲ್ಲಿ ಇವರ ಬಿಳಿ ವಸ್ತ್ರದ ಪಟಗಳಿದ್ದವು. ಮತದಾರನ ಆಯ್ಕೆ ತೋರಿಕೆಯದಾದರೆ, ಹಣ-ಹೆಂಡದ ಸೊತ್ತಾದರೆ, ಜಾತಿ ಅಭಿಮಾನ ಬೆಂಬಲಿಸಿದರೆ… ಕಳೆದೈದು ವರ್ಷದ ಮಠಸರ್ಕಾರ ಮತ್ತೆಷ್ಟನ್ನು ದಾನ ಮಾಡೀತು ಎಂಬ ಭಯ ಹುಟ್ಟಿತು. ಆ ಫ್ಲೆಕ್ಸ್‌ವೊಳಗಿನ ಚಿತ್ರಗಳು ಮಾತು ಮರೆತಿವೆ ಅನಿಸುತ್ತಿತ್ತು. ಅವುಗಳು ಪಾತ್ರವಾಗಿ ಈ ರಂಗದ ಮೇಲೆ ಬರುವ ಹಾಗೆ ಇದ್ದಿದ್ದರೆ…!? ಕನಸೊಳಗ ಬಂದಂಗ ನನ್ನ ಮನೋರಂಗದ ಆಳದೊಳಗ ಇಳಿದು ಕಷ್ಟ ಸುಖ ಹಂಚಿಕೊಂಡ ಚಿತ್ರದೊಳಗಿನ ವೋಟು ಕದಿಯುವ ಪಟಗಳಲ್ಲೂ ಚೈತನ್ಯ ಬತ್ತಿದಂತೆ ಭಾಸವಾಯ್ತು.

ಬಸವಣ್ಣ :
ಒಮ್ಮೆ ಕೈಲಾಸದಿಂದ ಶಿವನು “ವಾರದಲ್ಲೊಂದು ದಿವಸ ದುಡಿಮೆ ಮಾಡಿರಿ, ಉಳಿದ ದಿನಗಳಲ್ಲಿ ಶಿವನ ಪೂಜೆ ಮಾಡಿರಿ” ಎಂಬ ಸಂದೇಶವನ್ನು ಭೂಮಂಡಲದ ಸಮಸ್ತ ಜೀವಿಗಳಿಗೆ ತಲುಪಿಸಿ ಬಾ ಎಂದು ನಂದಿಯನ್ನು ಭೂಮಿಗೆ ಕಳಿಸುತ್ತಾನೆ. ಆದರೆ ನಂದಿಯು ಭೂಮಿಗೆ ಬಂದು “ವಾರದಲ್ಲೊಂದು ದಿನ ಪೂಜೆ ಮಾಡಿರಿ Basavaಉಳಿದ ದಿವಸಗಳಲ್ಲಿ ದುಡಿಮೆ ಮಾಡಿರಿ” ಎಂದು ಉಲ್ಟಾ ಹೇಳಿಬಿಡುತ್ತಾನೆ. ಆಗ ಅವನಿಗೆ ಆ ಶಿವನು ಕೊಟ್ಟ ಶಿಕ್ಷೆ.. ನಾನು ಹೇಳಿದ್ದನ್ನು ನೀನು ಸರಿಯಾಗಿ ತಲುಪಿಸಲಿಲ್ಲವಾದ ಕಾರಣ ನೀನು ಅವರೊಂದಿಗೆ ದುಡಿದುಕೊಂಡು ಬದುಕ ಹೋಗೆಂದು ನಂದಿಯನ್ನು ಭೂಮಂಡಲಕ್ಕೆ ಕಳಿಸಿಬಿಡುತ್ತಾನೆ. ಅಂದಿನಿಂದ ಇಂದಿನತನಕ ರೈತನ ಸಂಗಾತಿಯಾಗಿ ನಂದಿ ಹಗಲಿರುಳೆನ್ನದೆ ಭೂಮಿಯಲ್ಲಿ ದುಡಿಯುತ್ತಿದ್ದಾನೆ. ಎಂಬ ಕತೆ ಜನಪದರಲ್ಲಿ ಪ್ರಸಿದ್ಧವಾಗಿದೆ.

ಆ ಮೂಕ ಬಸವ ತಪ್ಪು ಸಂವಹನಕ್ಕಾಗಿ ಆ ಶಿಕ್ಷೆ ಅನುಭವಿಸುತ್ತಿರಲು ಅಹಿಂಸೆ ಮತ್ತು ಎಲ್ಲರೊಳಗಿನ ಪ್ರೀತಿಗೆ ಎಣ್ಣೆಬತ್ತಿಯಾಗಿ, ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಯಾಗಿ ಜನಮಾನಸದಲ್ಲಿ ನಿಲ್ಲಿಸಿದ ಕರುಣಾಮೂರ್ತಿ 12 ನೆಯ ಶತಮಾನದ ಈ ಬಸವ, ರಾಜನಕಿಂತ ಒಂದು ಕೈ ಮೇಲಾಗಿ ಕುದುರೆ ಏರಿ ಖಡ್ಗ ಹಿರಿದು ರಸ್ತೆಯ ತಿರುವಿನಲ್ಲೆಲ್ಲ ಮೂರ್ತಿಯಾಗಿದ್ದಾನೆ. ಇವರ ಅಡ್ಡನಾಡಿ ಕುಹಕತನಗಳ ಸಮರ್ಥನೆಗಾಗಿ, ಜಾತಿಸಂಘಟನೆಯ ದಾರ್ಷ್ಟ್ಯಕ್ಕಾಗಿ, ಈ ಬಸವ ಇವರ ಫ್ಲೆಕ್ಷಗಳಲ್ಲಿ ಬಂಧಿಯಾಗಿದ್ದಾನೆ.

ಮಠಗಳಿಗೆ ಭೇಟಿ ಕೊಡುವ ಪ್ರತಿಯೊಬ್ಬ ಶಾಸಕ, ಮಂತ್ರಿಮಹೋದಯರು ಸ್ವಾಮಿಗಳನ್ನು ಮೆಚ್ಚಿಸಲೋಸುಗ ಮಠಗಳಿಗೆ ಆರ್ಥಿಕ ಬೆಂಬಲ ನೀಡುತ್ತ ಬಂದಿದ್ದಾರೆ. ಇನ್ನು ಕೆಲವರ ಕಪ್ಪು ಹಣ ಬಿಳಿಯಾದದ್ದು ಮಠಗಳ ಕೃಪಾಶೀರ್ವಾದದಿಂದ ಅನ್ನುವುದು ಜಗಜ್ಜಾಹೀರು. ಇವರೆಲ್ಲರ ಆದರ್ಶದ ಆ ಬಸವಣ್ಣನೂ ಪಟದೊಳಗೆ ತಣ್ಣಗೆ ಕೂತಿರುವುದ ಕಂಡು ಪಾಪ! ಬಸವ ಎಂಬ ಮರುಕ ಹುಟ್ಟಿತು. ವೇದಿಕೆಯ ಮೆಲೆ ಕಳ್ಳ ಗುರುಗಳು ಸುಳ್ಳ ಶಿಷ್ಯರು ಕುಳಿತು ವಚನಕಾಲದ ಶರಣ ತತ್ವಗಳನ್ನು ಪಾಲಿಸಲು ಎದುರು ಕುಳಿತಿರುವ ಸಾವಿರಾರು ಮುಗ್ಧ ಭಕ್ತರಿಗೆ ಬೋಧೆ ಮಾಡುತ್ತಾರೆ. ಕಳ್ಳ-ಸುಳ್ಳರು ತಾವೆಂಬುದು ಮನದಟ್ಟಾಗಿದ್ದರೂ ತಾವಲ್ಲ, ನೀವು ಹೀಗೆ ಬದುಕಿ ಎಂದು ಮತ್ತೊಬ್ಬರಿಗೆ ಹೇಳುವ ಇವರ ನಡುವೆ ಆ ಬಸವ ಮೂಕನಾಗಿದ್ದಾನೆ. ವಚನ ಸಂದೆಶಗಳ ಹೆಸರಿನಲ್ಲಿ ಬಸವಣ್ಣನವರ ಪಟ ಮಾತ್ರ ಪ್ರಚಾರಕ್ಕೆ ಮತ್ತು ದುಡಿಮೆಗಾಗಿ ಬೇಕೆ ಹೊರತು ಅವರ ಆದರ್ಶಗಳು ಇವರಿಗೆ ಬೇಕಿಲ್ಲ – ಇವರ ಕೋಮಿನ ಮತದಾರರಿಗೆ ಬೆಕು. ಅವರೊಳಗಿನ ಜಾತಿಪ್ರಜ್ಞೆಯನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಾರೆ. ಆತ್ಮಸಂವಾದದಲ್ಲಿ ಬಸವಣ್ಣ ನೂರಾರು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತ ತನ್ನೊಳಗೆ ತಾನೆ ಇರುವುದರಿಂದ ಲೋಕಕ್ಕಿಂತ ತನ್ನ ತಾನು ತಿದ್ದಿಕೊಳ್ಳಲಾರದ ಸ್ಥಿತಿಯಲ್ಲಿರುವ ಬಸವ ಕಂಡ.

ಅಂಬೇಡ್ಕರ್ :
ಬೆಳಕಿನ ದೊಂದಿ ಹಿಡಿದ ಸಾವಿರಾರು ನಕ್ಷತ್ರಗಳು ಮಿಣಕಮಿಣ ಮಿಂಚುತ್ತ ಫಳ್..ಫಳಾರ್ ಅಂತ ಮಿಂಚು ಸಿಡಿದು ಆಕಾಶ ಎರಡಾಗಿ ಸೀಳಿದ ಬೆಳಕಲ್ಲಿ ಯಾರೋ ನಿಂತಿದ್ದರು. ಅರೆ…! ಶಿಲ್ಪವಾಗಿರುವ ಮೂರ್ತಿ ಬೇರೆ ಇವರು ಬೇರೆ. ಇವರು ಬರುವಾಗ ಬೆನ್ನ ಹಿಂದೆ ಸರಿದು ಹೋಗುತ್ತಿದ್ದ ಕತ್ತಲಲ್ಲಿ ಎಷ್ಟೋ ಜೀವಿಗಳ ರೋದನ ಕೇಳುತ್ತಿತ್ತು. ಅದೆಲ್ಲದರ ನಡುವೆ ಭಗವತೋ ಅರಹತೋ ಸೊಲ್ಲಿನ ರಾಗ ಕೇಳುತ್ತಿತ್ತು.

ಪಂಚಶೀಲತತ್ವಗಳು ರಾಜಕೀಯದ ಅಖಾಡದೊಳಗ ಬಂದರೆ ಉತ್ಕಟವಾದ ಮನುಷ್ಯಪ್ರೀತಿ ಸಾಧ್ಯವಾಗತದ, ಆಗ ಮಾತ್ರ ಮನುಷ್ಯರನ್ನು Young_Ambedkarಮನುಷ್ಯರು ಪ್ರೀತಿಸುವ ಮತ್ತು ಶೋಷಣೆ ಮುಕ್ತ ಸಮಾಜ ಕಟ್ಟಲು ಸಾಧ್ಯವಾದೀತೆಂಬ ಹುಮ್ಮಸ್ಸಿನ ಮಾತು ನನ್ನೊಳಗೆ ಬೆಳೆಯುತ್ತಿದ್ದಂತೆ. ಆರ್.ಪಿ.ಆಯ್. ಕಾಂಗೈನೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಲೆ ಬಾಬಾಸಾಹೇಬರು ಭೂಮಿ ಮ್ಯಾಲಿನ ಆಶಯದ ಕಡೆ ಬೆನ್ನು ತಿರುಗಿಸಿರುವ ಹಾಗೆ ಕಾಣುತ್ತಿದ್ದರು. ಯುಗಪ್ರವರ್ತಕನ ವೇಷದೊಳಗೆ ಬಂದು ಹೋದಂತೆ ಕನಸಾಗಿ ಉಳಿದರೇನೋ ಅನಿಸುತ್ತಿದ್ದಾಗ ಮತ್ತೆ ಮೋಡ ಮರೆಯಾದಂತೆ ಬೆಳಕಿನ ಕಿಡಿ ಆಕಾಶದಗಲಕ್ಕೂ ಏಳತೊಡಗಿತು. ಬುದ್ಧ ನಗುವಿನೊಂದಿಗೆ ಕಾಣಿಸಿಕೊಂಡ ವ್ಯಕ್ತಿಯೋರ್ವ ಕತ್ತಲು ಬೆಳಕಿನಲ್ಲಿ ಓಡಾಡುತ್ತಿದ್ದ. ಆ ಬೆಳಕು ಗಪ್ಪಗಾರಾದಾಗ ಮತ್ತದೆ ನಿಶ್ಯಬ್ಧ.

ಆ ಕತ್ತಲಲ್ಲಿ ಅದೊಂದೇ ಮಾತು ಖಡಕ್ಕಾಗಿ ಆಗಸದಿಂದ ಕೇಳಿಬಂತು. “ಸುಡುಗಾಡದ ಅನುಭವ ಇಂಥದ್ದು ಎಂದರೆ ಸುಡುಗಾಡವನ್ನು ಅರಿತುಕೊಂಡಂತಾಗುವುದಿಲ್ಲ. ಮುನ್ನುಗ್ಗು, ನಿನಗೆ ನೀನೆ ಸೂರ್ಯನಾಗಿ ನಿಲ್ಲು.” ನನ್ನ ಪ್ರಪಂಚ ಸಣ್ಣದಿದೆ ಎಂದು ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ನಮೋ ಭಗವತೋ ಅರಹತೋ ಕೇಳತೊಡಗಿತು. ಆಕೃತಿ ಕತ್ತಲಲ್ಲಿ ಕರಗಿತು. ಆ ಕತ್ತಲದ ರೋದನದಲ್ಲಿ ವೋಟಿನ ವ್ಯಾಪಾರ ಜೋರಾಗಿಯೇ ನಡೆದಿತ್ತು. ಫಂಡರಪುರದಲ್ಲಿ ಕುದುರೆ ವ್ಯಾಪಾರ ನಡೆಸುವ ಹಾಗೆ ಟವೆಲ್ಲನ್ನು ಕೈ ಮೇಲೆ ಹಾಕಿಕೊಂಡ ದಲ್ಲಾಳಿಗಳು, ಒಳಮುಚಗಿನಲ್ಲಿ ಏನೇನೋ ಲೆಕ್ಕಾಚಾರ ನಡೆಸುತ್ತಿದ್ದರು. ಖರೀದಿಗೆ ಕೊಟ್ಟವನಿಗೆ ಸಮಾಧಾನ ಆದಂತೆ ಕಂಡಾಗ ಅವನು ನಕ್ಕ ಇವನು ಗೆದ್ದ ಸಂಭ್ರಮದಲ್ಲಿದ್ದ.

ಗಾಂಧಿ :
ಕತ್ತಲೆಂದರೆ ಭಯಗೊಳ್ಳುವ ನನಗೆ ಕನಸುಗಳು ಬಿದ್ದದ್ದು ಅಪರೂಪವೇ ಅನ್ನಬೇಕು. ಆದರೆ ನೆನ್ನೆ ದಿನ ಒಂದು ಪಾತ್ರ ಏಕಾಕಿಯಾಗಿ ಇತಿಹಾಸದಿಂದ ಜಿಗಿದು ನೇರವಾಗಿ ನನ್ನ ಕಣ್ಣೊಳಗೆ ಮೂಡಿತ್ತು. ಜಗತ್ತೇ ನಮ್ರವಾಗಿ ನಮಿಸುವಾಗ ಇವನೇಕೆ ತಲೆಬಾಗುತ್ತಿಲ್ಲವೆಂಬ ಕುತೂಹಲದಿಂದ ಬಂದ ಪಾತ್ರವದು. ನನ್ನ ಹಾಸಿಗೆಯ ಹಿಂತುದಿಯಲ್ಲಿ ಕುಳಿತು ಮೆದುವಾಗಿ ನನ್ನ ಮೈದಡವಿ ಎಚ್ಚರಿಸಿ ಎದ್ದು ನಿಂತಿತು. ಅದೇ ಆ ಬೋಳುದಲೆ, ಉದ್ದಮೂಗಿನ ಚಪ್ಪಟೆಯ ಹಣೆ, ಮುಖದ ಆಳದಲ್ಲೆಲ್ಲೋ ಅವಿತು ಕುಳಿತಂತಿರುವ ಕಣ್ಣುಗಳಿಗೆ ವೃತ್ತಾಕಾರದ ಕನ್ನಡಕ, ಒಣಗಿ ಹೋಗಿದ್ದ ಒಣಕಲು ಕಡ್ಡಿಯಂತ ಆ ದೇಹ ವ್ಯಂಗ್ಯಚಿತ್ರದಿಂದ ಜೀವತಳೆದು ಮಾತಾಡಿಸಿ ಹೋಗಲು ಬಂದಂತಿತ್ತು. “ಇಷ್ಟು ತಡರಾತ್ರಿಗೆ ಬಂದ ನೀವು ಅದಾರು..? ನಿಮ್ಮ ನಾಮಾಂಕಿತವು ಅದೇನು..?” ಎಂದು ಅನಾಗರೀಕ ದೊಡ್ಡಾಟದ ಪಾತ್ರವಾಗಿ ಮಾತಾಡಿಸಿಬಿಟ್ಟೆ. “ರಾಮನೆಂದರೆ ಯಾರೆಂಬುದನ್ನು ಬಲ್ಲೆಯಾ?” ಬಚ್ಚಬಾಯಿಯಲ್ಲಿ ಹಲ್ಲಿಲ್ಲದಿದ್ದರೂ ಮಾತು ಸ್ಫಟಿಕವಾಗಿದ್ದವು. “ಓ ಹೌದೇನು ರಾಮರಲ್ಲಿ ನನಗೆ ಇಬ್ಬರು ರಾಮರ ಬಗ್ಗೆ ಗೊತ್ತುಂಟು” ಎಂದು ಬೀಗಿದೆ ನಾನು. “ವರ್ಗ ವ್ಯವಸ್ಥೆಯನ್ನು ಸುಭದ್ರ ಕಾಪಾಡಲು ಸೃಷ್ಟಿಸಲ್ಪಟ್ಟ ಮಹಾಕಾವ್ಯದ ಕ್ಷಾತ್ರ ಕುಲದ ಪಾತ್ರ ರಾಮನ ಬಗ್ಗೆ ಕೇಳುತ್ತಿದ್ದೀರಾ..? ಅಥವಾ ಸಂಸ್ಕೃತಿಯನ್ನು ಹಾಗೆ! ಹೀಗೆ! ಆ ಹಿಂದೆ ಹೇಗಿತ್ತು ಈಗ ಹೀಗಾಯ್ತಲ್ಲ ಅಂತ ರಾಷ್ಟ್ರದ ಭವಿಷ್ಯ ಭ್ರಮಿಸಲ್ಪಟ್ಟ್ಟು – ಇತಿಹಾಸವನ್ನು ಸರಿಪಡಿಸಲು ಟೊಂಕ ಕಟ್ಟಿರುವ ಪುಂಡರ, ಭಂಡರ ಗುಂಪುಗಾರಿಕೆಗೆ ವಸ್ತುವಾಗಿರುವ ರಾಮನೋ..? ಯಾವ ರಾಮ ಹೇಳಿ?” ಎಂದು ಮರುಪ್ರಶ್ನಿಸಿದಾಗ. ಆ ಬಂದಂಥ ಮಹಾನುಭಾವ ಕನಿಕರದಿಂದಲೇ “ಆ ರಾಮರು ಬೇರೆ – ನಾನು ಕೇಳುತ್ತಿರುವ ರಾಮ ಬೇರೆ” ಎಂದರು.

ಈ ಜಗತ್ತಿನಲ್ಲಿ ಮೂರನೆಯ ರಾಮನೊಬ್ಬನಿದ್ದಾನೆಯೇ? ಅಯ್ಯಯ್ಯೋ ಹಾಗಿದ್ದರೆ ಆ ರಾಮನ ಕುರಿತಾಗಿ ನಾನು ತಿಳಿದುಕೊಳ್ಳಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿರುವಾಗಲೇ… “ನಿನಗೆ ತಿಳಿದಿರಲೋ ಹುಡಗಾ, ಅವನೊಬ್ಬ ಅಹಿಂಸಾತ್ಮಕ ರಾಮ. ಮನಸ್ಸಿನ ತೇಜಸ್ಸನ್ನು, ನೈತಿಕ ನಡೆಯನ್ನು ಕ್ಷಣಕ್ಷಣಕ್ಕೂ ನಿನ್ನಲ್ಲಿ ಒರೆಗೆ ಹಚ್ಚುವ ಅಂತಃಶ್ಯಕ್ತಿಯ ಸೂಚಕ ಈ ರಾಮ” ಎಂದು ಹೇಳುತ್ತಿದ್ದಾಗ ನನಗೆ ಈಗ ಬಂದಿರುವ ಇವರು ಯಾರೆಂಬ ಬೆರಗು ಮೂಡತೊಡಗಿತು. ನನ್ನ ಮನದೊಳಗಿನ ಪ್ರಶ್ನೆ ಕಣ್ಣೊಳಗಿನ ಕಸ/ಕೆಸರು ಚುಚ್ಚುವ ಹಾಗೆ ಆತನ ಎದೆಗೆ ನಾಟಿತೋ ಏನೋ ಅವರು ಕಸಿವಿಸಿಯಾಗುತ್ತಿದ್ದರು. “ಅಯ್ಯೋ ಹುಚ್ಚು ಹುಡುಗಾ ನಾನಪ್ಪಾ, ಬದುಕಿದ್ದಾಗಲೇ ಮಹಾತ್ಮನಾಗಿದ್ದ ಈ ದೇಶದ ಪಿತಾಮಹಾ! ನನ್ನ ಗುರುತು ಸಿಕ್ಕಲಿಲ್ಲವೇನಪ್ಪ ನಿನಗೆ?” ಕನಿಕರದ ಮುಗುಳ್ನಗೆ ತುಟಿಯಿಂದಾಚೆ ಮೂಡಲಿಲ್ಲ, ಆದರೂ ನಕ್ಕರು.

ಛೇ..! ನನ್ನ ತಲೆಯಲ್ಲಿ ಭೀಮಗಾತ್ರದ ಮಾನವೀಯ ಮುಖಗಳನ್ನು ಬಿಟ್ಟರೆ ಬೇರೆಲ್ಲ ಮುಖಗಳು 200px-MKGandhi[1]ಗೋಮುಖದ ಸೋಗಿನ ಪಾತ್ರಗಳಂತೆ ಇತಿಹಾಸದಲ್ಲಿ ಕುಣಿಯುತ್ತಿದ್ದವು. ಇವನಾರು…? ಶುದ್ಧೋದನನ ಮಗ ಸುಗತ ಸಿದ್ಧಾರ್ಥನೇ? ಅಲ್ಲ. ಬಾವಲಿ ಥರದ ಚಾಚು ರೆಕ್ಕೆಗಳಲ್ಲಿ ಅವಮಾನ ಹತಾಶೆಗಳೆಲ್ಲವನು ಮುಚ್ಚಿಟ್ಟುಕೊಂಡು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮನ್ನಣೆ ಕೊಡಿಸಿ, ಮಖಮಲ್ಲು ವಸ್ತ್ರದಲ್ಲಿ ಬೆಚ್ಚಗಿನ ಬದುಕಿಗೆ ಅಣಿಮಾಡಿಕೊಟ್ಟ ಬಾಬಾ ಸಾಹೇಬ್..? ಅವರೂ ಅಲ್ಲ. ಈ ದೇಶದ ಪ್ರತಿಯೊಬ್ಬ ದೀನ ದಲಿತರ ಹಿಂದುಳಿದವರ ಉದ್ಧಾರ ಮಾಡಲು ಬರುವ ಪ್ರತಿಯೊಬ್ಬರೂ ಮಹಾತ್ಮರೇ ಆಗಿರುವಾಗ ಈಗ ಬಂದಿರುವ ಇವರ್‍ಯಾರು..?

“ನೆತ್ತಿಮಾಸ ಆರದ ಎಳೆಗರುವಿನಂತೆ ಯಾಕೆ ನಿನ್ನ ಚಿತ್ತವನ್ನು ಚಂಗನೆ ಚಂಚಲಗೊಳಿಸುತ್ತಿರುವೆ ಹುಡುಗಾ… ನಾನು ಕಣಪ್ಪ ಕಂದ, ಹಳ್ಳಿಯ ಸಾಂಸ್ಕೃತಿಕ ಮಾದರಿಯಲ್ಲಿ ಇಡೀ ಭಾರತವನ್ನು ನನ್ನ ಕನಸಿನ ಗ್ರಾಮಭಾರತವಾಗಿಸಲು ಹವಣಿಸಿದವ. ಅದೇ ಮಾದರಿಯಿಟ್ಟುಕೊಂಡು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಸತತ ಸೆಣಿಸಿದ ಸತ್ಯವಂತ ಅಹಿಂಸಾಮಾರ್ಗಿ ಗಾಂಧಿ,”

ನನ್ನ ದುರ್ದೆಸೆಗೆ ಮರುಕಪಟ್ಟಿರಬೇಕು. ನಾನು ಕ್ಷಮೆಯಾಚಿಸಲು ಏನೂ ಉಳಿದಿರಲಿಲ್ಲ ಅಲ್ಲಿ. ಹೇಗೆ ಸತ್ಕರಿಸಬೇಕು. ಯಾವ ಬಗೆಯಲ್ಲಿ ಉಪಚರಿಸಬೇಕೆಂದು ತಿಳಿಯದಾಗಿತ್ತು. ವಂದಮಿ, ಜೈ ಭೀಮ ಹೇಳಲೇ, ಲಾಲ್‌ಸಲಾಮ್ ಅನ್ನಲೇ, ಕಾಮ್ರೇಡ್ ಕುಳಿತುಕೊಳ್ಳಿ ಅನ್ನಬೇಕೋ ಅಥವಾ ಗುರು ಹಿರಿಯರನ್ನು ಕಂಡಾಗ ಮನಸ್ಸಿಲ್ಲದ ಮನಸ್ಸಿನಿಂದ ನಮಸ್ಕರಿಸುವಂತೆ ನಮಸ್ಕರಿಸಬೇಕೋ, ರಾಮರಾಮಾ ಎಂದು ಹೇಳಬೇಕೊ,,, ಒಂದೂ ತಿಳಿಯದೇ ಗೊಂದಲದಲ್ಲಿದ್ದಾಗ ಗಾಂಧಿ ಮುಂದೆ ಬಂದು ನನ್ನ ಬಿಗಿ ಹಿಡಿದು ಅಪ್ಪಿಕೊಳ್ಳಲು ಮುಂದಾದರು. “ನನ್ನಲ್ಲಿ ತ್ರಾಣ ಉಳಿದಿಲ್ಲ ಮಾರಾಯಾ, ಉಪವಾಸಕ್ಕೊಂದು ಕೊನೆಯೆಂಬುದು ಇಲ್ಲವಾಗಿದೆ ನನಗೆ, ಹಾಲು ಹಣ್ಣು ಕೊಟ್ಟು ಸಲಹುತ್ತೀಯಾ?” ನಮ್ರವಾಗಿತ್ತು ಮಾತಿನ ಧಾಟಿ.

“ಬಾಪೂಜಿ, ಈಗ ಯಾವ ಉಪವಾಸ ಮಾಡುತ್ತಿದ್ದೀರಿ..?”

“ಹತೋಟಿಯಲ್ಲಿಟ್ಟುಕೊಳ್ಳಲಾರದ ಆಸೆಗಳ ವಿರುದ್ಧ ಅಂತ ಹೇಳಲೇನು, ಇರುವ ರೊಕ್ಕ ಇದ್ದ ಹಾಗೆನೆ ಅದರ ಬೆಲೆಗೆ ಮಹತ್ವಕೊಟ್ಟು ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ ನನ್ನ ನೋಟುಗಳ ವಿರುದ್ಧ ಅನ್ನಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ ಉಪವಾಸಕ್ಕೊಂದು ಕೊನೆಯಿಲ್ಲದಾಗಿದೆ…” ಮನಸ್ಸಿನ ಖಿನ್ನತೆಯಲ್ಲಿ ಇನ್ನೂ ಏನನ್ನೋ ಹೇಳುತ್ತಲಿದ್ದರು.

“ಇಲ್ಲೇ ಇರಿ ಈಗ ಬಂದೆ,” ಎಂದು ಎದ್ದು ಒಳಹೋಗುತ್ತಿದ್ದಂತೆಯೇ ರಘುಪತಿ ರಾಘವ ಭಜನ್ ಕೇಳಿತೋ ಇಲ್ಲವೋ ಎಂಬಂತೆ ಕೇಳತೊಡಗಿತು. ಇಡೀ ಖೋಲಿಯೇ ಖಾಲಿಯಾಗಿತ್ತು ನನ್ನ ಕುರುಹಿಗೂ ನಾನು ಉಳಿದಿರಲಿಲ್ಲ. ಇದು ಚುನಾವಣಾ ಅಖಾಡದಿಂದ ಹೊರಗಿರುವ ಪಾತ್ರವೆನಿಸತೊಡಗಿತು. ಅದೇ ಆ ರಾಜಕೀಯ ಅಂಗಳದಲ್ಲಿನ ಫ್ಲೆಕ್ಷ್ ಒಂದರಿಂದ ಎದ್ದು ಬಂದಂತಿದ್ದ ಅವರ ಬಡಕಲು ಶರೀರದ ಅಂತಃಕರಣ ನನ್ನ ಕೆಣಕಿತ್ತು.

ಇವರ ಹೊರತಾಗಿ ಮತ್ತೊಬ್ಬರು ಮನಃಪಟಲದಲ್ಲಿ ಸುಳಿಯಲಿಲ್ಲವಾಗಿ ಬುದ್ದ, ಬಸವ, ಗಾಂಧಿ ಮತ್ತು ಅಂಬೇಡ್ಕರ ಅವರ ಆಲೋಚನೆಯ ಬೆಳಕಿನಲ್ಲಿರುವ ಪ್ರಜಾಪ್ರಭುತ್ವದ ಆಶಯಗಳು ಫ್ಲೆಕ್ಸ್‌ನಿಂದ ಹೊರಬಂದು ಆಚೆಗೆ ನಿಂತ ಚೈತನ್ಯಗಳಲ್ಲಿವೆ. ವೋಟ ಮಾಡಲು ಆ ರೂಪದ ವ್ಯಕ್ತಿಗಳ ತಲಾಶ ಮಾಡಬೇಕಿದೆ. ಆಗ ಮತ(ವೋಟು)ದ ಸಾರ್ಥಕ್ಯವೂ ಬಲಗೊಳ್ಳುತ್ತದೆ.

Leave a Reply

Your email address will not be published.