Karnataka High Court

ನವೀನ್ ಸೂರಿಂಜೆಗೆ ಹೈಕೋರ್ಟ್‌ನಲ್ಲೂ ಜಾಮೀನು ನಿರಾಕರಣೆ…

– ರವಿ ಕೃಷ್ಣಾರೆಡ್ಡಿ

ಎರಡು ವಾರದ ಹಿಂದೆ (12/12/12) ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರ ಜಾಮೀನು ಅರ್ಜಿ ಕುರಿತಾದ ವಾದ-ಪ್ರತಿವಾದ ನಡೆದು ನ್ಯಾಯಾಧೀಶರು ಅದರ ಕುರಿತ ತೀರ್ಪನ್ನು ಮೀಸಲಿಟ್ಟಿದ್ದರು. ಮುಂದಿನ ಎರಡು ದಿನಗಳಲ್ಲಿ ತೀರ್ಪು ಪ್ರಕಟವಾಗಲಿಲ್ಲ. ಅದಾದ ನಂತರ ಕೋರ್ಟ್‌ಗೆ ಚಳಿಗಾಲದ ರಜೆ. ಇಂದು ರಜಾ ಪೀಠ ಆದೇಶ ಹೊರಡಿಸಿತು: “ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.” ನಾನು ಕೋರ್ಟ್‌ನಿಂದ ಹೊರಗೆ ಬಂದ ವಕೀಲರನ್ನು ನ್ಯಾಯಾಧೀಶರು ವಜಾಕ್ಕೆ ಕೊಟ್ಟಿರುವ ಕಾರಣಗಳನ್ನು ಕೇಳಿದೆ. ಅದಕ್ಕೆ ವಕೀಲರು ಪೋಲಿಸರು ಚಾರ್ಜ್‌ಷೀಟ್‌ನಲ್ಲಿ ಕೊಟ್ಟಿರುವ ಕಾರಣಗಳನ್ನೇ ಹೇಳುತ್ತಾ ಹೋದರು.

ಈಗ ಬಹುಶಃ ಮುಂದಿನ ದಾರಿ ದೆಹಲಿಯ ಸುಪ್ರೀಂ ಕೋರ್ಟ್.

ನಾನು ಸುಮಾರು ವರ್ಷದ ಹಿಂದೆ (2011 ರ ನವೆಂಬರ್‌ನಲ್ಲಿ) ಸಚಿವ ಸೋಮಣ್ಣನವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಸಮಯದಿಂದ ಕೋರ್ಟ್‌ ಕಲಾಪಗಳನ್ನು ಹತ್ತಿರದಿಂದ ನೋಡುತ್ತ ಬರುತ್ತಿದ್ದೇನೆ. ಕೋರ್ಟ್‌ಗಳ ಸ್ವಾತಂತ್ಯ, ಅಧಿಕಾರ, ಪ್ರಭಾವ, ಇವೆಲ್ಲವುಗಳ ಬಗ್ಗೆ ಕೆಲವು ನ್ಯಾಯಾಲಯಗಳ ಕಾರ್ಯವೈಖರಿ ನೋಡಿ ಭಯಮಿಶ್ರಿತ ಗೌರವ ಮೂಡಿತ್ತು. ಹಲವು ನ್ಯಾಯಾಧೀಶರ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ನೋಡಿ ಹೆಮ್ಮೆ ಸಹ ಪಡುತ್ತಿದ್ದೆ.

ಆದರೆ, ನವೀನ್ ಸೂರಿಂಜೆ ಬಂಧನವಾದಂದಿನಿಂದ ಕೋರ್ಟ್‌ಗಳ ಕಲಾಪವನ್ನು ಇನ್ನೂ ಹೆಚ್ಚಿನ ಕುತೂಹಲದಿಂದ ಗಮನಿಸುತ್ತಿದ್ದೇನೆ. ಪರಿಣಾಮವಾಗಿ ಕೋರ್ಟ್‌ಗಳ ಬಗ್ಗೆ ಅನುಮಾನ ಮತ್ತು ಅಸಮಾಧಾನ ಹೆಚ್ಚಾಗಿದೆ. ನಮ್ಮ ಹಲವು ಅಥವ ಅನೇಕ ನ್ಯಾಯಾಧೀಶರುಗಳು ಹೊರಗಿನ ಶಕ್ತಿಗಳ ಹಸ್ತಕ್ಷೇಪ, ಪ್ರಭಾವ, ಕಣ್ಸನ್ನೆಗಳಿಗೆ ಹೊರತಾಗಿಲ್ಲ ಎಂದು ಅರಿವಾಗುತ್ತಿದೆ. ಈ ನ್ಯಾಯಾಧೀಶರುಗಳೂ ಸಹ ನಮ್ಮ ಸಮಕಾಲೀನ ಸಮಾಜದ ಉತ್ಪನ್ನಗಳೇ ಅಲ್ಲವೇ? ಅವರೂ ಸಹ ವಕೀಲರಾಗಿ ಕಾರ್ಯನಿರ್ವಹಿಸಿ ನಂತರ ನ್ಯಾಯಾಧೀಶರಾದವರು. ನಮ್ಮ ಇಡೀ ಸಮಾಜ ಅನೈತಿಕತೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅದಕ್ಷತೆ, ಅಪ್ರಾಮಾಣಿಕತೆಯಿಂದ ನರಳುತ್ತಿರುವಾಗ ನಮ್ಮ ಸಮಾಜದಿಂದಲೇ ಬಂದಂತಹ ಎಲ್ಲಾ ನ್ಯಾಯಾಧೀಶರುಗಳೂ ಅದಕ್ಕೆ ಹೊರತಾಗಿರುತ್ತಾರೆ ಎಂದು ಹೇಳುವುದು ಅಸಮಂಜಸ ಮತ್ತು ಅವಾಸ್ತವಿಕ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರಿರುವಂತೆ ಇಲ್ಲೂ ಇದ್ದಾರೆ, ಅಷ್ಟೇ.

ಎರಡು ದಿನಗಳ ಹಿಂದೆ ಹಿರಿಯ ವಕೀಲರೊಬ್ಬರು ಹೇಳುತ್ತಿದ್ದ ವಿಚಾರ ಕೇಳಿ ನನ್ನ ಗಾಬರಿ ಇನ್ನೂ ಹೆಚ್ಚಾಗಿದೆ. ನಿಮಗೆ ಗೊತ್ತಿಲ್ಲದಿರಬಹುದು, ನ್ಯಾಯಾಧೀಶರಾಗಿದ್ದ ಕೆಲವರು ಆ ಸಂಬಳಕ್ಕಿಂತ ವಕೀಲ ವೃತ್ತಿಯಲ್ಲಿಯೇ ಹೆಚ್ಚು ದುಡಿಯಬಹುದು ಎಂದು ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ವಕೀಲರಾಗಿದ್ದಾರೆ. ಮತ್ತು ರಾಜ್ಯದ ಹಲವು ಕಡೆ ಹಿರಿಯ ವಕೀಲರ ಜೂನಿಯರ್‌ಗಳಾಗಿದ್ದವರು ಇಂದು ನ್ಯಾಯಾಧೀಶರಾಗಿದ್ದಾರೆ. ಮತ್ತು ಇಲ್ಲಿ ಎಂತಹ ಗುಲಾಮಿತನ ಇದೆ ಎಂದರೆ ಕೆಲವೊಮ್ಮೆ ನ್ಯಾಯಾಧೀಶರ ಸೀನಿಯರ್ ಆಗಿದ್ದ ವಕೀಲರು ಕೋರ್ಟ್‌ ಹಾಲ್‌ನ ಒಳಗೆ ಪ್ರವೇಶಿಸಿದ ತಕ್ಷಣ ತಾನು ನ್ಯಾಯಾಧೀಶ ಎನ್ನುವುದನ್ನು ಮರೆತು ಅಭ್ಯಾಸಬಲದಿಂದ ನ್ಯಾಯಾಧೀಶರೇ ಎದ್ದು ನಿಂತದ್ದಿದೆಯಂತೆ. ಇಂದು ಭೇಟಿಯಾದ ವಕೀಲರೊಬ್ಬರು ಹೇಳುತ್ತಿದ್ದರು: “ನ್ಯಾಯಾಧೀಶರುಗಳನ್ನು ಅವರು ಪ್ರಾಕ್ಟಿಸ್ ಮಾಡುತ್ತಿದ್ದ ಜಾಗದಿಂದ ಐನೂರು-ಸಾವಿರ ಕಿ.ಮೀ.ಗಳ ದೂರಕ್ಕೆ ವರ್ಗಾಯಿಸಿ ಬಿಡಬೇಕು. ಆಗಲಾದರೂ ಈ ಗುಲಾಮಿತನ ಮತ್ತು ಕೆಲವು ವಕೀಲರುಗಳು ಬಕೆಟ್ ಹಿಡಿಯುವುದು ನಿಲ್ಲಬಹುದು.” ವಕೀಲರಲ್ಲಿಯೂ ನ್ಯಾಯಾಂಗದ ಪಕ್ಷಪಾತಿತನ ಅಥವ ಅದಕ್ಷತೆಯ ವಿರುದ್ಧದ ಕೂಗು ಹೆಚ್ಚಾಗುತ್ತಿದೆ.

ನ್ಯಾಯಾಧೀಶರೂ ಹೇಗೆ ಪ್ರಭಾವಕ್ಕೊಳಗಾಗುತ್ತಾರೆ ಮತ್ತು ಹೇಗೆ ಮಾಡಬಹುದು ಎನ್ನುವುದಕ್ಕೆ ನೀವು ರಾಜ್ಯದ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯರ chhanumantaraya“ವಕೀಲರೊಬ್ಬರ ವಗೈರೆಗಳು” ಪುಸ್ತಕ ನೋಡಬಹುದು.

ಮತ್ತು ನ್ಯಾಯಾಧೀಶರ ಮೇಲೆಯೂ ಎಂತಹ ಗುರುತರ ಆರೋಪಗಳು ಮತ್ತು ಸಂಶಯಗಳಿವೆ ಎನ್ನುವುದಕ್ಕೆ ನೀವು ನಮ್ಮ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾದ ನ್ಯಾ. ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ನೋಡಬೇಕು. ಇದು ನಮ್ಮಲ್ಲಿ ಪ್ರಕಟವಾದ ಮಾರನೆಯ ದಿನವೇ ಈ ಪತ್ರವನ್ನೇ ಆಧಾರವಾಗಿಟ್ಟುಕೊಂಡು “ಡೆಕ್ಕನ್ ಕ್ರಾನಿಕಲ್” ಪತ್ರಿಕೆಯಲ್ಲಿಯೂ “Is this why Governor rejected Bannurmath for Ayukta post?” ಎಂಬ ಮುಖಪುಟ ವರದಿ ಪ್ರಕಟವಾಯಿತು. ಕರ್ನಾಟಕದ ಇನ್ಯಾವ ಘನತೆವೆತ್ತ ಮಾಧ್ಯಮ ಸಂಸ್ಥೆಯೂ ಈ ವಿಚಾರದ ಬಗ್ಗೆ ಮಾತನಾಡುವ, ಪ್ರಸ್ತಾಪಿಸುವ, ಕನಿಷ್ಟ ಪಕ್ಷ ಅದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುವ ಧೈರ್ಯವನ್ನೇ ಮಾಡಲಿಲ್ಲ. ಆದರೂ, ನಮ್ಮಲ್ಲಿ ಮತ್ತು ಡೆಕ್ಕನ್ ಕ್ರಾನಿಕಲ್‌ನಲ್ಲಿ ಈ ವಿಷಯ ಪ್ರಸ್ತಾಪವಾದ ಒಂದೇ ವಾರಕ್ಕೆ ಬನ್ನೂರುಮಠರು ಲೋಕಾಯುಕ್ತ ಹುದ್ದೆಯಿಂದ ಹಿಂದೆ ಸರಿದರು.

ಬರಲಿರುವ ದಿನಗಳಲ್ಲಿ ಭಾರತದಲ್ಲಿ ನ್ಯಾಯಕ್ಕಾಗಿ ಸಂಘರ್ಷ ಹೆಚ್ಚಾಗಲಿದೆ. ಇತ್ತೀಚಿಗೆ ದೆಹಲಿಯಲ್ಲಾಗುತ್ತಿರುವ ಪ್ರತಿಭಟನೆಗಳನ್ನೇ ಗಮನಿಸಿ. ನ್ಯಾಯ ಮತ್ತು ಆದರ್ಶಗಳಿಗಾಗಿ ತಮ್ಮ ವೃತ್ತಿ ಮತ್ತು ಖಾಸಗಿ ಬದುಕನ್ನು ಕಳೆದುಕೊಂಡು ಹೋರಾಟಕ್ಕೆ ಮತ್ತು ಸ್ವಯಂಪ್ರೇರಣೆಯಿಂದ ನ್ಯಾಯದ ಪರವಾಗಿ ಜೈಲಿಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಅದರ ನೇರ ಪ್ರಭಾವ ನಮ್ಮ ನ್ಯಾಯಾಂಗದ ಮೇಲೆಯೂ ಬೀಳಲಿದೆ. ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಎಲ್ಲಕ್ಕಿಂತ ಮೊದಲು ಆರಂಭವಾಗಬೇಕಿದೆ. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳಂತೂ ಪೂರ್ತಿ ಭ್ರಷ್ಟವೂ, ನೆಚ್ಚಿಕೊಳ್ಳಲಾಗದಷ್ಟು ಅದಕ್ಷವೂ, ಅಪ್ರಾಮಾಣಿಕವೂ ಆಗಿವೆ. ಉಳಿದಿರುವ ಊರುಗೋಲು ನ್ಯಾಯಾಂಗವೊಂದೇ. “ನ್ಯಾಯಾಂಗ ನಿಂದನೆ” ಎಂಬ ಬೆದರು ಬೊಂಬೆಗೆ ಭಯಪಡಲು ನಿರಾಕರಿಸಿ ನಮ್ಮ ಈ ದೇಶದ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ನಾವೆಲ್ಲ ಪಣ ತೊಡಬೇಕಿದೆ. ಇಷ್ಟಕ್ಕೂ ನಾವು ಹೊರಗಿದ್ದು ಅಸಹಾಯಕತೆ ಮತ್ತು ಖಿನ್ನತೆ ಅನುಭವಿಸುವುದಕ್ಕಿಂತ ನ್ಯಾಯಕ್ಕಾಗಿ ಧ್ವನಿಯೆತ್ತಿದ ಕಾರಣಕ್ಕೆ ಜೈಲಿನ ಒಳಗೆ ಇರುವುದೇ ನಮ್ಮ ಮಾನಸಿಕ ಆರೋಗ್ಯ ಮತ್ತು ನೈತಿಕತೆ ದೃಷ್ಟಿಯಿಂದ ಉತ್ತಮವಾದದ್ದು ಎನ್ನಿಸುತ್ತದೆ.

ವಾಪಸು ನವೀನ್ ಸೂರಿಂಜೆ ವಿಷಯಕ್ಕೆ ಬರುವುದಾದರೆ, ನವೀನ್ ಸೂರಿಂಜೆ ಈಗ ಮಂಗಳೂರಿನ ಸರ್ಕಾರಿ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿದ್ದಾರೆ. naveen-soorinjeಮಂಗಳೂರಿನಲ್ಲಿ ಕಳೆದ ಎರಡು-ಮೂರು ವಾರಗಳಿಂದ ಹರಡುತ್ತಿರುವ ಚಿಕನ್‌ಪಾಕ್ಸ್ ಅಥವ ಸಿಡುಬು ಜ್ವರ, ನವೀನ್ ಸೂರಿಂಜೆ ಇದ್ದ ಜೈಲ್ ಸೆಲ್‌ನ ಸಹಬಂಧಿಗಳಿಗೂ ಹರಡಿ, ಅದು ಹೀಗೆರಡು ದಿನಗಳ ಹಿಂದೆ ನವೀನ್‌ಗೂ ಹಬ್ಬಿ ಅವರು ಈಗ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿ ಐಸೋಲೇಷನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರಂತೆ.

ಒಂದು ವ್ಯವಸ್ಥೆ ಮತ್ತೂ ಉತ್ತಮವಾಗಿ ಬದಲಾಗಬೇಕಾದರೆ ಅಮಾಯಕರ, ನಿರಪರಾಧಿಗಳ, ನ್ಯಾಯಪರರ ಶೋಷಣೆ ಮತ್ತು ಬಲಿದಾನ ಬೇಕೇ ಬೇಕು ಎನ್ನುವುದು ಒಂದು ಸಮಾಜದ ಸಮಕಾಲೀನ ಸ್ಥಿತಿಯ ಘೋರ ನೀಚತನವನ್ನು ತೋರಿಸುತ್ತದೆ.

3 thoughts on “ನವೀನ್ ಸೂರಿಂಜೆಗೆ ಹೈಕೋರ್ಟ್‌ನಲ್ಲೂ ಜಾಮೀನು ನಿರಾಕರಣೆ…

  1. xxxx

    ನ್ಯಾಯಾಧೀಶರಾಗಿದ್ದ ಕೆಲವರು ಆ ಸಂಬಳಕ್ಕಿಂತ ವಕೀಲ ವೃತ್ತಿಯಲ್ಲಿಯೇ ಹೆಚ್ಚು ದುಡಿಯಬಹುದು ಎಂದು ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ವಕೀಲರಾಗಿದ್ದಾರೆ. It means those who know law, ability to practice will practice law and earn their livelihood. Those who dont learnt law, dont have the ability to practice will find other way for their livelihood which gives more power, authority and respect which they can not earn by their ability and intelligence…

    Reply
  2. ಪ್ರಜೆ

    ಗಾಂಧೀಜಿಯವರ ಕನಸಿನ, ಅಂಬೇಡ್ಕರ್​ರ ಕಲ್ಪನೆಯ ಭವ್ಯ ಭಾರತ ಇದೇನಾ? ದೇಶದ ಪರಿಸ್ಥಿತಿ ನೆನೆಸಿಕೊಂಡರೆ ನಿಜಕ್ಕೂ ಸಂಕಟವಾಗುತ್ತೆ. ಒಬ್ಬ ಅಸಹಾಯಕ ಪತ್ರಕರ್ತನನ್ನ ವಿನಾಕಾರಣ ಕಾಡಿಸುವ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲೆ ಸಾಮಾನ್ಯರ ನಂಬಿಕೆ ಉಳಿಯೋದಾದ್ರೂ ಹೇಗೆ?
    ಒಂದು ಕ್ಷಣ ನ್ಯಾಯಾಂಗದ ಮಾತನ್ನೇ ಒಪ್ಪಿಕೊಳ್ಳೋಣ; ಪತ್ರಕರ್ತ ಕಾನೂನು ಪ್ರಕಾರ ತಪ್ಪು ಮಾಡಿದ್ದಾರೆ ಅಂತ್ಲೇ ಇಟ್ಟುಕೊಳ್ಳೋಣ. ಆದ್ರೆ ಅದು ಜಾಮೀನು ನೀಡಲಾಗದಂಥ ಅಪರಾಧವೇ?
    ಎಂಥ ವಿಪರ್ಯಾಸ ನೋಡಿ; ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿ ಕೇಸುಗಳು ಬಿದ್ದಿದ್ದರೂ ಯಡಿಯೂರಪ್ಪ, ಕುಮಾರಸ್ವಾಮಿಯಂಥವರಿಗೆ ಜಾಮೀನು ಸಿಕ್ಕಿಬಿಡುತ್ತದೆ. `ಬೇಕಿದ್ದರೆ` ಕೇಸುಗಳೂ ಖುಲಾಸೆಯಾಗಿಬಿಡ್ತವೆ. ನವೀನ್​ ಸಾಕ್ಷಿಗಳನ್ನು ಬೆದರಿಸ್ತಾರೆ ಅನ್ನುತ್ತೆ ನ್ಯಾಯಾಲಯ. ಹಾಗಾದ್ರೆ ಸರ್ಕಾರವನ್ನೇ ಬೀಳಿಸೋ ಸವಾಲು ಹಾಕುವ ಯಡ್ಯೂರಪ್ಪನಿಗೆ ಸಾಕ್ಷಿಗಳನ್ನು ಬೆದರಿಸುವ ಪ್ರಭಾವ ಇಲ್ಲವೇ? ತನ್ನ ವಿರುದ್ಧ ಕೇಸ್​ ಹಾಕಿದವನನ್ನು ನೋಡಿಕೊಳ್ತೇನೆ ಅಂತ ಈಶ್ವರಪ್ಪ ಹೇಳಿದ್ದಾನೆ. ಆದ್ರೆ ಈವರೆಗೆ ಆತನ ಬಂಧನ ಆಗಿಲ್ಲ!
    ದುರಂತ ನೋಡಿ; ಹೋಂಸ್ಟೇನಲ್ಲಿ ಹುಡುಗಿಯರ ಮೇಲೆ ಹಲ್ಲೆ ಮಾಡಿದ ಹಿಂದುಳಿದ ವರ್ಗದ ಕಾರ್ಯಕರ್ತರು ಜೈಲುಪಾಲಾಗಿದ್ದಾರೆ. ಅದನ್ನು ವರದಿ ಮಾಡಿದ ಪತ್ರಕರ್ತರೂ ಜೈಲು ಸೇರಿದ್ದಾರೆ. ಆದ್ರೆ ಇದಕ್ಕೆಲ್ಲ ಮೂಲ ಕಾರಣನಾದ ಕಲ್ಲಡ್ಕ ಪ್ರಭಾಕರ ಭಟ್ಟನಂಥ ಆರ್​ಎಸ್​ಎಸ್​ ಭಟ್ಟಂಗಿಗಳು ಇವತ್ತಿಗೂ ಖುಲ್ಲಂಖುಲ್ಲಾ ಓಡಾಡಿಕೊಂಡಿದ್ದಾರೆ!
    ಜನಪರ ಹೋರಾಟವನ್ನು ಹತ್ತಿಕ್ಕುವ ಸರ್ಕಾರಿ ಮಾದರಿ ಹೇಗಿರುತ್ತದೆ ಅನ್ನೋದಕ್ಕೆ `ಕುಮಾರ ಸಮತಳ` ಅವರ ಅನುಭವ ಕಥನ `ಜೈಲೆಂಬ ಲೋಕದಲ್ಲಿ` ಪುಸ್ತಕ ಸ್ಪಷ್ಟ ನಿದರ್ಶನ. ಗೌರಿ ಲಂಕೇಶ್​ ಪತ್ರಿಕೆ ಪ್ರಕಾಶನದ ಈ ಪುಸ್ತಕ ನಮ್ಮ ವ್ಯವಸ್ಥೆಯ ಕರಾಳ ಮುಖಕ್ಕೆ ಕನ್ನಡಿ ಹಿಡಿದಿದೆ. ಕುರೂಪವನ್ನೇ ಸೌಂದರ್ಯ ಅಂದುಕೊಂಡಿರುವ ವ್ಯವಸ್ಥೆ ಬದಲಾಗೋದಾದ್ರೂ ಯಾವಾಗ?

    Reply
  3. anand prasad

    ನ್ಯಾಯಾಧೀಶರಾದವರಲ್ಲಿ ದೇಶದ ಬಗ್ಗೆ ಕಾಳಜಿ ಹಾಗೂ ದೇಶಭಕ್ತಿ ಕಾಣೆಯಾಗಿದೆ. ದೇಶದ ಹೆಚ್ಚಿನ ನ್ಯಾಯಾಧೀಶರುಗಳು ಪುರೋಹಿತಶಾಹಿ ಮನಸ್ಥಿತಿಯವರಾಗಿದ್ದಾರೆ. ಅವರು ತೀರ್ಪು ನೀಡುವುದು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಅಲ್ಲ ಬದಲಾಗಿ ಪುರೋಹಿತಶಾಹಿ ಸಂವಿಧಾನಕ್ಕೆ ಅನುಗುಣವಾಗಿ. ಹೀಗಾಗಿಯೇ ಇಡೀ ಪ್ರಪಂಚಕ್ಕೇ ಗೊತ್ತಿರುವ ಬಾಬ್ರಿ ಮಸೀದಿ ಉರುಳಿಸಿದವರಿಗೆ ಹಾಗೂ ದೇಶಾದ್ಯಂತ ಹಿಂಸೆಯ ರುದ್ರ ನರ್ತನಕ್ಕೆ ಕಾರಣರಾದವರಿಗೆ ಇಂದಿಗೂ ಶಿಕ್ಷೆಯಾಗಿಲ್ಲ. ಸಂವಿಧಾನಕ್ಕೆ ಅನುಗುಣವಾಗಿ ತೀರ್ಪುನೀಡದೇ ನುಣುಚಿಕೊಳ್ಳುವ ಪುರೋಹಿತಶಾಹಿ ಮನಸ್ಥಿತಿಯ ನ್ಯಾಯಾಧೀಶರಿಂದ ಈ ದೇಶದಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿದೆ. ದೇಶಭಕ್ತಿಯಿಲ್ಲದ, ಭೋಗಜೀವನದಲ್ಲಿ ಮುಳುಗಿರುವ ಹೆಚ್ಚಿನ ನ್ಯಾಯಾಧೀಶರಿಂದ ನಮ್ಮ ದೇಶದ ನ್ಯಾಯ ವ್ಯವಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದೆ. ಇಂಥ ನ್ಯಾಯಾಧೀಶರನ್ನು ಹೊಂದಿರುವ ಭಾರತದ ನ್ಯಾಯ ವ್ಯವಸ್ಥೆಯಿಂದ ಪ್ರಗತಿಶೀಲ ಗುಣ ಹೊಂದಿರುವ ಭಾರತೀಯ ಸಂವಿಧಾನದ ಸ್ಪೂರ್ತಿಯ ಪ್ರಕಾರ ತೀರ್ಪು ನಿರೀಕ್ಷಿಸುವಂತೆಯೇ ಇಲ್ಲ. ಭೋಗಜೀವನದಲ್ಲಿ ಮುಳುಗಿರುವ ನ್ಯಾಯಾಧೀಶರಿಗೆ ದೇಶದ ಕಾಳಜಿ ಇಲ್ಲ. ನ್ಯಾಯ ನೀಡಿದರೂ, ನೀಡದಿದ್ದರೂ ಅವರಿಗೆ ಅವರಿಗೆ ಬರುವ ಸಂಬಳ ಬಂದೇ ಬರುತ್ತದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರದೇ ಇದನ್ನು ಜನಪರವಾಗಿ ಹಾಗೂ ನ್ಯಾಯಪರವಾಗಿ ಬದಲಾಯಿಸಲು ಸಾಧ್ಯವಿಲ್ಲ.

    Reply

Leave a Reply

Your email address will not be published. Required fields are marked *