ಮೋದಿ ಅಂತಃಪುರದಲ್ಲಿ ಬೆಂಗಳೂರು ಯುವತಿ : ಸರ್ವಾಧಿಕಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ಇಲ್ಲ

– ಸುಧಾಂಶು ಕಾರ್ಕಳ

ತನ್ನ ಮಗಳು ಹೊತ್ತಲ್ಲದ ಹೊತ್ತಲ್ಲೂ ಆಸ್ಪತ್ರೆಗೆ ಅಮ್ಮನನ್ನು ಭೇಟಿಯಾಗೋಕೆ ಹೋಗಬೇಕಾಗುತ್ತೆ. ಹಾಗಾಗಿ ಅವಳಿಗೆ ಸೂಕ್ತ ಭದ್ರತೆ ಕೊಡಿ ಅಂತ ತಂದೆಯೊಬ್ಬರು ತನಗೆ ಪರಿಚಿಯ ಇರುವ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅದು ದೇಶದ ಬಹುದೊಡ್ಡ ಸಮಸ್ಯೆ ಏನೋ ಎಂಬಂತೆ, ಮುಖ್ಯಮಂತ್ರಿ ತನ್ನ ಮಂತ್ರಿಮಂಡಲದ ಪ್ರಮುಖ ಮಂತ್ರಿಗೆ ಭದ್ರತೆಯ ಜವಾಬ್ದಾರಿ ವಹಿಸುತ್ತಾರೆ. amit-shahಆ ಮನುಷ್ಯ ತನ್ನ ಇಲಾಖೆಯ ಅಧೀನದಲ್ಲಿರುವ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿಯನ್ನು ಬಳಸಿಕೊಂಡು ಆ ಯುವತಿಗೆ ಭದ್ರತೆ ಕೊಡುತ್ತಾರೆ.

ಅದು ಎಷ್ಟರ ಮಟ್ಟಿಗೆ ಎಂದರೆ… ಸ್ವತಃ ಮಂತ್ರಿಯವರೇ ಪದೇ ಪದೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಹುಡುಗಿ ಎಲ್ಲಿದ್ದಾಳೆ, ಅವಳ ಜೊತೆ ಯಾರಿದ್ದಾರೆ, ಅವಳು ಯಾರಿಗೆ ಫೋನ್ ಮಾಡಿದಳು, ಯಾವ ವಿಮಾನದಲ್ಲಿ ಪ್ರಯಾಣಿಸಿದಳು, ಯಾವ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದಳು, ಜೊತೆಯಲ್ಲಿದ್ದ ಹುಡುಗನ ವಯಸ್ಸೆಷ್ಟು.. ಹೀಗೆ ನಾನಾ ಮಾಹಿತಿ ಕಲೆ ಹಾಕುತ್ತಾರೆ. ಅಷ್ಟೇ ಅಲ್ಲ ಅವಳಿಗೆ ’ಭದ್ರತೆ’ ನೀಡುತ್ತಿರುವ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಿಡಬಹುದು ಅಂತ ಸ್ವತಃ ಮಂತ್ರಿ ಆತಂಕ ವ್ಯಕ್ತಪಡಿಸುತ್ತಾರೆ. ಜೊತೆಗೆ ಅವಳು ಐಎಎಸ್ ಅಧಿಕಾರಿಯನ್ನು ಸಂಪರ್ಕಿಸುತ್ತಾಳಾ ಎಂಬುದನ್ನೂ ಕರ್ತವ್ಯ ನಿರತ ಅಧಿಕಾರಿಗಳು ಪರಿಶೀಲಿಸಬೇಕು. ಆದರೂ ಆ ಪಕ್ಷದವರು ಸರಕಾರದ ’ಭದ್ರತೆ’ ಬಗ್ಗೆ ಆಕೆಗೆ ಗೊತ್ತಿತ್ತು ಎಂದು ಸುಳ್ಳೇ ಹೇಳುತ್ತಾರೆ.

ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಸದ್ಯ ಮುಖ್ಯಮಂತ್ರಿಯಾಗಿರುವ modi_amit_shahಗುಜರಾತ್ ರಾಜ್ಯದಿಂದ ಕೇಳಿ ಬಂದಿರುವ ಕತೆ ಇದು. ’ಭದ್ರತೆ’ಗೆ ಆದೇಶ ಕೊಟ್ಟವರು ಮುಖ್ಯಮಂತ್ರಿ, ಹೊಣೆ ಹೊತ್ತವರು ಅಮಿತ್ ಶಾ ಮತ್ತು ಆದೇಶವನ್ನು ಶಿರಸಾವಹಿಸಿ ಪಾಲಿಸಿದವರು ಪೊಲೀಸ್ ಅಧಿಕಾರಿ ಜಿ.ಎಲ್. ಸಿಂಘಾಲ್.

ಜಿ.ಎಲ್. ಸಿಂಘಾಲ್ ಸಿಐಡಿಗೆ ಸಲ್ಲಿಸಿರುವ ಫೋನ್ ರೆಕಾರ್ಡಿಂಗ್ ದಾಖಲೆಗಳಲ್ಲಿ ಅಮಿತ್ ಶಾ ಮತ್ತು ಆತನ ನಡುವೆ ನಡೆದ ಸಂಭಾಷಣೆಯ ಪೂರ್ಣ ವಿವರಗಳಿವೆ. ಕೋಬ್ರಾಪೋಸ್ಟ್.ಕಾಂ ಆ ಧ್ವನಿ ಮುದ್ರಿಕೆಗಳನ್ನು ಪ್ರಕಟಿಸಿದೆ. ಆ ಮಾತುಗಳನ್ನು ಒಮ್ಮೆ ಕೇಳಿದರೆ, ಗುಜರಾತ್ ಮುಖ್ಯಮಂತ್ರಿಯ ಇದುವರೆಗೆ ಅಷ್ಟಾಗಿ ಹೊರಬಾರದ ಮುಖ ಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರು ಮೂಲದ ಆರ್ಕಿಟೆಕ್ಟ್ ಒಬ್ಬಳು ಭೂಕಂಪದಿಂದ ತತ್ತರಿಸಿದ್ದ ಕಛ್ ಪುನರ್ನಿಮಾಣ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಪ್ರದೀಪ್ ಶರ್ಮ ಅವರ ಸಂಪರ್ಕಕ್ಕೆ ಬರುತ್ತಾಳೆ. ಭುಜ್ ನಗರದ ಗುಡ್ಡ ಪ್ರದೇಶವನ್ನು ಸುಂದರಗಾಣಿಸುವ ಯೋಜನೆಗೆ ಆಕೆ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಟ್ ಆಗಿ ಆಯ್ಕೆ ಆಗಿರುತ್ತಾಳೆ. ಆ ಯೋಜನೆ ಮುಗಿದು ಉದ್ಘಾಟನೆಯಾಗುವ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಗೆ ಪರಿಚಿತಳಾಗುತ್ತಾಳೆ. ಮೊದಲ ಭೇಟಿಯಲ್ಲಿ ಮೋದಿ ತನ್ನ ಖಾಸಗಿ ಇ-ಮೇಲ್ ಅವಳಿಗೆ ನೀಡುತ್ತಾರೆ.

ಸದ್ಯ ವಿವಿಧ ಆರೋಪಗಳನ್ನು ಹೊತ್ತು ಸೇವೆಯಿಂದ ಅಮಾನತ್ತಾಗಿರುವ ಪ್ರದೀಪ್ ಶರ್ಮ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಈ ಎಲ್ಲಾ ಮಾಹಿತಿಗಳಿವೆ. ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಸುಪ್ರಿಂಕೋರ್ಟ್‌ನಲ್ಲಿ ಅವರು ಮನವಿ ಮಾಡಿಕೊಂಡಿದ್ದರೆ. ನರೇಂದ್ರ ಮೋದಿ ಮತ್ತು ಆರ್ಕಿಟೆಕ್ಟ್ ನಡುವಿನ ’ಸಂಬಂಧ’ದ ಬಗ್ಗೆ ತನಗೆ ಖಚಿತ ಮಾಹಿತಿ ಇರುವುದು modi-for-women-powerಕೂಡಾ ತನ್ನ ವಿರುದ್ಧ ’ಸುಳ್ಳು’ ಆರೋಪಗಳನ್ನು ಹೊರಿಸಿ ಬಂಧಿಸಲು ಮತ್ತು ಅಮಾನತ್ತು ಮಾಡಲು ಕಾರಣ ಎನ್ನುವುದು ಅವರ ವಾದ.

ತಮ್ಮ ಅಫಿಡವಿಟ್ಟಿನಲ್ಲಿ ಅವರು ಹೇಳುವಂತೆ, ಆರ್ಕಿಟೆಕ್ಟ್ ಆಗಾಗ ತನ್ನ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದಾಳೆ. ಅವಳು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಹಾಗೆ ಹೇಳುತ್ತಿರಬಹುದು ಎಂದು ಮೊದಮೊದಲು ಸಂಶಯಿಸಿದ್ದ ಪ್ರದೀಪ್ ಶರ್ಮಾಗೆ ಅವಳ ಮಾತು ಸತ್ಯ ಎಂದು ಗೊತ್ತಾಗುವುದು ಸರಕಾರಿ ಕಾರ್ಯಕ್ರಮವೊಂದರಲ್ಲಿ ಮೋದಿ ಮತ್ತು ಆ ಯುವತಿ ಆಪ್ತವಾಗಿ ಖಾಸಗಿ ಸಂಗತಿಯನ್ನು ಹಂಚಿಕೊಂಡದ್ದನ್ನು ಆಕಸ್ಮಿಕವಾಗಿ ಅವರು ಕೇಳಿಸಿಕೊಂಡಾಗ.

2006 ರ ಮಾರ್ಚ್‌ನಲ್ಲಿ ಒಮ್ಮೆ ಬೆಂಗಳೂರಿನಿಂದ ಅಹ್ಮದಾಬಾದ್‌ಗೆ ಬಂದ ಆ ಯುವತಿ ಪ್ರದೀಪ್ ಶರ್ಮಾರನ್ನು ಫೋನ್ ಮೂಲಕ ಸಂಪರ್ಕಿಸಿ ಭುಜ್‌ಗೆ ಭೇಟಿ ನೀಡುವ ಉದ್ದೇಶ ಇದೆ ಎಂದು ಹೇಳುತ್ತಾಳೆ. ಆದರೆ ನಂತರ ಪ್ರದೀಪ್ ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಕಾರಣ ಅವಳ ದೂರವಾಣಿ ಆಫ್ ಆಗಿರುತ್ತದೆ. modi-bangalore-rallyನಂತರ ಭೇಟಿಯಾದಾಗ ಅವಳು ಹೇಳುವುದು ಆ ಎರಡು ದಿನ ಅವಳು ಇದ್ದದ್ದು ಮುಖ್ಯಮಂತ್ರಿಯ ನಿವಾಸದಲ್ಲಿ. ಅವಳನ್ನು ಹಿಂದಿನ ಬಾಗಿಲಿನಿಂದ ಒಳಗೆ ಕರೆದುಕೊಂಡು ಹೋಗಿದ್ದರಂತೆ. ಮುಖ್ಯಮಂತ್ರಿ ಮಲಗುವ ಕೋಣೆ ಸಮೀಪದಲ್ಲಿಯೇ ಅವಳನ್ನು ಉಳಿಸಿದ್ದರಂತೆ. ಅಂದು ಹೋಳಿ. ಮುಖ್ಯಮಂತ್ರಿ ಭೇಟಿ ಮಾಡಲು ಅನೇಕ ಗಣ್ಯರು ಬಂದಿದ್ದರು. ಆದರೂ, ಅವರು ಬೇಗನೆ ಮನೆಗೆ ಹಿಂತಿರುಗಿ ಅವಳೊಂದಿಗೆ ಕಾಲ ಕಳೆಯುತ್ತಾರೆ. ಆಗ ಅವಳಿಗೆ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತೆ. ತಕ್ಷಣ ಒಬ್ಬ ವೈದ್ಯರನ್ನು ಕರೆಸಬಹುದೇ ಎಂದು ಅವಳು ಕೇಳಿದಾಗ, ತನ್ನ ಆ ಹೊತ್ತಿನ ವಿಚಿತ್ರ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುತ್ತಾರಂತೆ ಸದ್ಯ ’ಭಾರತವನ್ನೇ ಉಳಿಸಲು’ ಹೊರಟಿರುವ ಪ್ರಧಾನಿ ಅಭ್ಯರ್ಥಿ!

ಆ ಯುವತಿ ಮೋದಿಯೊಂದಿಗೆ ಸಂಪರ್ಕಿಸಲು ಕರೆ ಮಾಡುತ್ತಿದ್ದ ಮೊಬೈಲ್ ದೂರವಾಣಿ ಸಂಖ್ಯೆಯನ್ನು (99099-23400) ಪ್ರದೀಪ್ ಶರ್ಮಾ ಅವಳಿಂದಲೇ ಪಡೆದು ತನ್ನ ಒಂದು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಅದೊಂದು ದಿನ ಆಕಸ್ಮಿಕವಾಗಿ ಯಾರಿಗೋ ಕರೆ ಮಾಡಲು ಹೋಗಿ, ಆ ನಂಬರ್ ಡಯಲ್ ಆಗಿ ಬಿಡುತ್ತದೆ. ಅತ್ತ ಕಡೆಯಿಂದ ಕರೆ ರಿಸೀವ್ ಮಾಡಿದವರು ಮಾತನಾಡುವುದಿಲ್ಲ. ಪ್ರದೀಪ್ ಶರ್ಮಾರ ಪ್ರಕಾರ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿ ಜೈಲು ಸೇರಲು ಈ ಘಟನೆ ಪ್ರಮುಖ ಕಾರಣ.

ಶರ್ಮಾ ಹೇಳುವಂತೆ ತಮ್ಮ ಕರೆಯ ನಂತರ ಮೋದಿ ಆ ನಂಬರ್‌ನ ವಾರಸುದಾರರನ್ನು ಹುಡುಕಿಸಿ ಹಿಂದಿನ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಆ ಮೂಲಕ ಆ ಯುವತಿ ಇವರೊಂದಿಗೆ ಸಂಪರ್ಕದಲ್ಲಿರುವುದನ್ನು ತಿಳಿದುಕೊಂಡರು. ಆ ನಂತರವೇ ಮೋದಿ ಸರಕಾರ ಆ ಯುವತಿಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನಿಸಿದ್ದು. ಆ ಕೆಲಸಕ್ಕೆ ಅಮಿತ್ ಶಾ ನೇಮಿಸಿದ್ದು ಜಿ.ಎಲ್.ಸಿಂಘಾಲ್‌ರನ್ನು. ಅವರು ಎಲ್ಲಾ ಕಾನೂನುಗಳನ್ನು ಸುಟ್ಟು ಹಾಕಿ ಅನೇಕರ ಫೋನ್‌ಗಳನ್ನು ಕದ್ದಾಲಿಸಿದ್ದಾರೆ. ಒಬ್ಬ ಯುವತಿಯನ್ನು ಎಡಬಿಡದಂತೆ ಫಾಲೋ ಮಾಡಿದ್ದಾರೆ. ಅವಳು ಸಂಪರ್ಕಿಸುವ ಎಲ್ಲರ ಹಿನ್ನೆಲೆ ಜಾಲಾಡಿದ್ದಾರೆ. ಇದನ್ನೆಲ್ಲಾ ನಾಗರಿಕ ಸಮಾಜ ಒಪ್ಪಿಕೊಳ್ಳಬೇಕೆ? ಆದರೂ ಆ ಯುವತಿಯ ಅಪ್ಪನ ಮನವಿ ಮೇರೆಗೆ ಸರಕಾರ ರಕ್ಷಣೆ ಕೊಟ್ಟಿತ್ತು ಎಂದು ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಮತ್ತು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಳ್ಳುತ್ತಾರೆಂದರೆ ಅವರನ್ನು ಏನನ್ನಬೇಕು?

ಒಬ್ಬ ಯುವತಿ ತನ್ನ ತಾಯಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಾಗ ಹೋಗುತ್ತಿರುತ್ತಾಳೆ ಎಂಬ ಕಾರಣಕ್ಕೆ ಒಬ್ಬ modi-rakhidayತಂದೆ ಮುಖ್ಯಮಂತ್ರಿಗೆ ಹೇಳಿ ಭದ್ರತೆ ಬೇಡಿದರು ಎಂದು ಬೂಸಿ ಬೀಡುವವರನ್ನು ಮುಂದಿನ ನಗೆಹಬ್ಬಕ್ಕೆ ಆಹ್ವಾನಿಸುವುದು ಸೂಕ್ತ. ನಮ್ಮ ಜನರಿಗೆ ಒಂದಿಷ್ಟು ಮನರಂಜನೆ ಸಿಗುತ್ತೆ. ಭದ್ರತೆ ನೀಡುವವರು ಕಾನೂನು ಉಲ್ಲಂಘಿಸಿ ಎಲ್ಲರ ಫೋನ್ ಕದ್ದು ಆಲಿಸಬಹುದೇ? ಇದನ್ನು ಹೇಗೆ ಒಪ್ಪಿಕೊಳ್ಳೋದು? ಇಷ್ಟೇ ಅಲ್ಲ.. ಹೀಗೆ ಅದೆಷ್ಟು ಜನರಿಗೆ ಈ ಗುಜರಾತ್ ಸರಕಾರ ಇಂತಹ “ವಿಶೇಷ ಭದ್ರತೆ” ನೀಡಿದೆಯೋ? ಎಷ್ಟು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರು ಈ “ಭದ್ರತೆ”ಯಿಂದ ಬಳಲಿದ್ದಾರೋ?

ಅಮಲುಗಣ್ಣುಗಳಿಗೆ ಮಾತ್ರ ಈ ಮೋದಿ ಅಪ್ರತಿಮ ನಾಯಕನಂತೆ ಕಾಣಬಹುದು. ಬೆಂಗಳೂರಿಗೆ ಬಂದಾಗ ಹೆಲಿಪ್ಯಾಡ್‌ನಲ್ಲಿ ಅವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಬಹುದು. ಆದರೆ ಜನಸಾಮಾನ್ಯರು ಇಂತಹವರ ರಾಜ್ಯದಲ್ಲಿ ಎಷ್ಟು ಸುರಕ್ಷಿತ? ಮೋದಿ ಮುಖದಲ್ಲಿ ಒಬ್ಬ ಸರ್ವಾಧಿಕಾರಿ ಕಂಡರೆ ನಿಮ್ಮ ಕಣ್ಣುಗಳು ಆರೋಗ್ಯವಾಗಿದ್ದಾವೆ ಎಂದೇ ಅರ್ಥ.


ಸಿಂಘಾಲ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವರಗಳು

3 comments

  1. ಮೋದಿಗೆ ಬೈಯಲು ಹೋಗಿ ಬೆಂಗಳೂರಿನ ಯುವತಿಯ ಚಾರಿತ್ರ್ಯವಧೆ ಮಾಡಿದ್ದೀರಲ್ಲಾ ಸ್ವಾಮಿ… ಪ್ರದೀಪ್ ಶರ್ಮಾ ಹೇಳಿದ್ದು ಸತ್ಯ ಎಂದು ಹೇಗೆ ನಂಬ್ತೀರಿ. ಆತ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದರೂ ಸಹ ಅದರ ಬಗ್ಗೆ ವಿಚಾರಣೆಯಾಗಬೇಕಲ್ಲವೇ, ಸತ್ಯಾಸತ್ಯತೆ ಗೊತ್ತಾಗಬೇಕಲ್ಲವೇ. ಇನ್ನೊಬ್ಬರ ಜೊತೆ ಯುವತಿಯೊಬ್ಬಳನ್ನು ಲಿಂಕ್ ಮಾಡುವಾಗ ಎಚ್ಚರವಿರಲಿ. ಅದು ಆಕೆಯ ಬದುಕಿಗೆ ಕಪ್ಪುಚುಕ್ಕೆಯಾಗುತ್ತೆ ಎಂಬುದು ಗೊತ್ತಿರಲಿ.

  2. ಕೆಲವರು ಹಾಗೇನೆ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಪಕ್ಕದವರ ತಟ್ಟೆಯಲ್ಲಿ ನೊಣ ಹುಡುಕುತ್ತಾರೆ . ಅಲ್ಲ ಸ್ವಾಮಿ ಯಾಕೆ ಮೋದಿ ಗೆ ಈ ಪಾಟಿ ಪಬ್ಲಿಸಿಟಿ ಕೊಡ್ತೀರ ?? ನೀವು ಬರೆಯುವ ಒಂದೊಂದು ” ಮೋದಿ ವಿರೋದಿ ” ಲೇಖನಗಳು ಇಂದು ಮೋದಿಯನ್ನು ಹೀರೋ ಮಾಡುತ್ತಿವೆ . ನಿಜ ಹೇಳಬೇಕೆಂದರೆ ೬ ತಿಂಗಳ ಹಿಂದೆ ಮೋದಿ ಯಾರೆಂಬುದೇ ನನಗೆ ಗೊತ್ತಿರಲಿಲ್ಲ . ಇವತ್ತು ೮-೧೦ ಸಾವಿರ ಜನಸಂಖ್ಯೆ ಇರುವ ನಮ್ಮೂರಿನಲ್ಲಿ ಎಲ್ಲರೂ ಮೋದಿಯ ಬಗ್ಗೆ ಮಾತಾಡೋರೆ !! ಇವತ್ತು ದೇಶದ ಜನರಿಗೆ ಮೋದಿಯನ್ನು ಹೊರತುಪಡಿಸಿ , ಯಾವ ನಾಯಕನ ಬಗ್ಗೆ ಜನರಿಗೆ ನಂಬಿಕೆಯಿಲ್ಲ . ಮೋದಿ ಬಗ್ಗೆ ಇಂತಹ ಕೆಲಸಕ್ಕೆ ಬಾರದ ಆರೋಪಗಳನ್ನು ಮಾಡುವುದು ಬಿಡಿ . ಅದು ಅಲ್ಲದೆ ಇಂದು ಉಗ್ರಗಾಮಿಗಳು ಯಾವ ಯುವತಿಯ ವೇಷದಲ್ಲಿದ್ದರೋ ???

Leave a Reply

Your email address will not be published.