Daily Archives: December 16, 2013

ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಜನಲೋಕಪಾಲ್ ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸಗಳು

– ಆನಂದ ಪ್ರಸಾದ್

ಕೇಂದ್ರ ಸರ್ಕಾರವು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆ ಮಾಡಿರುವುದನ್ನು ನೋಡಿ ಗಾಬರಿಯಾಗಿ ದುರ್ಬಲ ಲೋಕಪಾಲ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ತರಾತುರಿಯಲ್ಲಿ ಮುಂದಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಗಾಬರಿಯಿಂದ ಚರ್ಚೆ ಇಲ್ಲದೆ ಒಪ್ಪಿಕೊಳ್ಳುವ ಇಂಗಿತ ತೋರಿಸಿದೆ. ಈ ದುರ್ಬಲ ಮಸೂದೆಯನ್ನುanna-kejriwal ಹಿಂದೆ ಬಲಿಷ್ಠ ಲೋಕಪಾಲ ಮಸೂದೆಗಾಗಿ ಪಟ್ಟು ಹಿಡಿದಿದ್ದ ಅಣ್ಣಾ ಹಜಾರೆಯವರೂ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದ್ದು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅಣ್ಣಾ ಅವರನ್ನು ದುರ್ಬಲ ಮಸೂದೆಗೆ ಕೆಲವು ಸ್ಥಾಪಿತ ಹಿತಾಸಕ್ತರು ದಾರಿ ತಪ್ಪಿಸಿ ಒಪ್ಪಿಸಿದ್ದಾರೆ ಎಂದೂ ಮತ್ತು ಇದನ್ನು ತಾವು ವಿರೋಧಿಸುವುದಾಗಿಯೂ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್‌ಸೈಟಿನಲ್ಲಿ ಕೇಜ್ರಿವಾಲ್ ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಈ ಹಿಂದೆ ಅಣ್ಣಾ ನೇತೃತ್ವದ ಜನಲೋಕಪಾಲ್ ಚಳುವಳಿ ಸಿದ್ಧಪಡಿಸಿದ ಜನಲೋಕಪಾಲ್ ಮಸೂದೆಯ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಇಂತಿವೆ:

  1. ಲೋಕಪಾಲರ ನೇಮಕ: ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 5 ಸದಸ್ಯರ ಸಮಿತಿ ಇರುತ್ತದೆ. ಅವರೆಂದರೆ ಪ್ರಧಾನಿ, ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ, ಹಾಗೂ ಈ ನಾಲ್ವರು ಸೂಚಿಸುವ ಒಬ್ಬ ವಿದ್ವಾಂಸರು/ನ್ಯಾಯಾಧೀಶರು/ವಕೀಲರು ಅಥವಾ ತೀರ್ಪುಗಾರರು. ಜನಲೋಕಪಾಲ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 7 ಜನರ ಸಮಿತಿ ಇರುತ್ತದೆ. ಅವರ್ಯಾರೆಂದರೆ 2 ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, 2 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು; ಸಿಎಜಿ, ಸಿವಿಸಿ, ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಸೂಚಿಸಿದ ತಲಾ ಒಬ್ಬ ಸದಸ್ಯ; ಪ್ರಧಾನ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ. ಸರ್ಕಾರೀ ಮಸೂದೆಯ ಪ್ರಕಾರ ಇರುವ ಸಮಿತಿಯಲ್ಲಿ ರಾಜಕಾರಣಿಗಳೇ ಹೆಚ್ಚಿರುವ ಕಾರಣ ನಿಷ್ಪಕ್ಷಪಾತ ನೇಮಕ ಸಾಧ್ಯವಾಗಲಾರದು.
  2. ಲೋಕಪಾಲರನ್ನು ತೆಗೆದುಹಾಕುವುದು: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲರನ್ನು ತೆಗೆದುಹಾಕಲು ಒಂದೋ ಆಳುವ ಸರ್ಕಾರ ಅಥವಾ 100 ಜನ ಲೋಕಸಭಾ ಸದಸ್ಯರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಮಾತ್ರ ಅವಕಾಶ ಇದೆ. ಜನಲೋಕಪಾಲ್ ಮಸೂದೆ ಪ್ರಕಾರ ಯಾವುದೇ ನಾಗರಿಕನೂ ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ನೀಡುವ ಮೂಲಕ ಲೋಕಪಾಲದ ಸದಸ್ಯರನ್ನು ತೆಗೆದುಹಾಕಲು ದೂರು ಕೊಡಬಹುದು. ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ತೆಗೆದು ಹಾಕಲು ದೂರು ನೀಡುವ ಅಧಿಕಾರ ಆಳುವ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಮಾತ್ರವೇ ಇರುವುದರಿಂದ ಲೋಕಪಾಲದ ದಕ್ಷತೆ ಹಾಗೂ ಸ್ವಾತಂತ್ರ್ಯದ ಮೇಲೆ ಗಂಭೀರ ಲೋಪ ಉಂಟಾಗಬಹುದು.
  3. ತನಿಖಾ ದಳ: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲಕ್ಕೆ ಬರುವ ದೂರುಗಳ ವಿಚಾರಣೆಯನ್ನು ಕೈಗೊಳ್ಳಲು ಸರ್ಕಾರೀ ಅಧೀನದಲ್ಲಿರುವ ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಯನ್ನು ಅವಲಂಬಿಸಬೇಕು. ಸಿಬಿಐ ಅಧಿಕಾರಿಗಳ ನೇಮಕ, ವರ್ಗಾವಣೆ ಹಾಗೂ ನಿವೃತ್ತಿಯ ನಂತರದ ಸೇವೆಗಳಿಗೆ ನೇಮಕ ಮಾಡುವ ಅಧಿಕಾರ ಸಂಪೂರ್ಣವಾಗಿ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಇರುವ ಕಾರಣ ಸಿಬಿಐ ಸಂಸ್ಥೆಯ ಹಿಡಿತ ಸರ್ಕಾರದ ಬಳಿಯೇ ಇರಲಿದ್ದು ತನಿಖಾ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಗಂಭೀರ ಹಾನಿಯಾಗುತ್ತಿರುತ್ತದೆ (ಈಗ ಆಗುತ್ತಿರುವಂತೆ). ಜನಲೋಕಪಾಲ್ ಮಸೂದೆ ಪ್ರಕಾರ ಸಿಬಿಐ ತನಿಖಾ ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣವು ಲೋಕಪಾಲದ ಅಡಿಯಲ್ಲಿ ಇರುತ್ತದೆ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುತ್ತದೆ.
  4. ವಿಷಲ್ ಬ್ಲೋವರ್ ರಕ್ಷಣೆ: ಸರ್ಕಾರೀ ಮಸೂದೆ ಪ್ರಕಾರ ವಿಷಲ್ ಬ್ಲೋವರ್ಗಳಿಗೆ (ಅಂದರೆ ಜನಜಾಗೃತಿಗಾಗಿ ಕೆಲಸ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರು ಇತ್ಯಾದಿ ಜನರಿಗೆ) ರಕ್ಷಣೆ ನೀಡುವ ಯಾವುದೇ ವಿಚಾರ ಇಲ್ಲ. ಜನಲೋಕಪಾಲ್ ಮಸೂದೆಯಲ್ಲಿ ವಿಷಲ್ ಬ್ಲೋವರ್‌ಗಳಿಗೆ ರಕ್ಷಣೆ ನೀಡುವ ವ್ಯವಸ್ಥೆ ಇರುತ್ತದೆ.
  5. ಸಿಟಿಜೆನ್ ಚಾರ್ಟರ್: ಸರ್ಕಾರೀ ಮಸೂದೆ ಪ್ರಕಾರ ಇಂಥ ಯಾವುದೇ ವ್ಯವಸ್ಥೆ ಇಲ್ಲ (ಸಿಟಿಜನ್ ಚಾರ್ಟರ್ ಎಂದರೆ ನಾಗರಿಕರಿಗೆ ಅವಶ್ಯವಿರುವ ಸರ್ಕಾರೀ ಸೇವೆಗಳನ್ನು ಮಾಡಿಕೊಡಲು ಕಾಲಾವಧಿ ನಿಗದಿಪಡಿಸುವುದು ಮತ್ತು ಆ ಕಾಲಾವಧಿಯೊಳಗೆ ಕೆಲಸ ಮಾಡಿಕೊಡದಿದ್ದರೆ ದಂಡ ವಿಧಿಸುವ ಅವಕಾಶ). ಜನಲೋಕಪಾಲ್ ಮಸೂದೆಯ ಪ್ರಕಾರ ಸಿಟಿಜನ್ ಚಾರ್ಟರ್ ಅನ್ನು ಲೋಕಪಾಲದೊಳಗೆ ಸೇರಿಸಲಾಗುತ್ತದೆ.
  6. ರಾಜ್ಯಗಳಲ್ಲಿ ಲೋಕಾಯುಕ್ತಗಳನ್ನು ರೂಪಿಸುವುದು: ಸರಕಾರೀ ಲೋಕಪಾಲದ ಪ್ರಕಾರ ಇದನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗುತ್ತದೆ. ಜನಲೋಕಪಾಲ್ ಮಸೂದೆ ಪ್ರಕಾರ ಲೋಕಪಾಲ್ ವ್ಯವಸ್ಥೆಯನ್ನು ಕೇಂದ್ರದಲ್ಲಿ ರೂಪಿಸಿದಂತೆಯೇ ರಾಜ್ಯಗಳಲ್ಲಿ ಅದೇ ಮಾದರಿಯಲ್ಲಿ ಲೋಕಾಯುಕ್ತಗಳನ್ನು ರೂಪಿಸಬೇಕು.
  7. ಸುಳ್ಳು ದೂರುಗಳು: ಸರ್ಕಾರೀ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ದೂರುದಾರರನ್ನು ಒಂದು ವರ್ಷದ ಅವಧಿಗೆ ಸೆರೆಮನೆಗೆ ತಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ನೀಡಲಾಗುತ್ತದೆ (ಇದರಿಂದಾಗಿ ಪ್ರಾಮಾಣಿಕ ದೂರುದಾರರೂ ಲೋಕಪಾಲಕ್ಕೆ ದೂರು ನೀಡಲು ಹಿಂಜರಿಯುವ ಸಂಭವ ಇದೆ). ಜನಲೋಕಪಾಲ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯನ್ನು ದೂರುದಾರರಿಗೆ ವಿಧಿಸಬಹುದು, ಆದರೆ ಜೈಲು ಶಿಕ್ಷೆ ಇಲ್ಲ.
  8. ಲೋಕಪಾಲದ ಮಿತಿ: ಸರ್ಕಾರೀ ಲೋಕಪಾಲ್ ಪ್ರಕಾರ ನ್ಯಾಯಾಂಗ ಹಾಗೂ ಜನಪ್ರತಿನಿಧಿಗಳನ್ನು ಅವರ ಸದನದ ಒಳಗಿನ ಮತ ಹಾಗೂ ಮಾತುಗಳ ವಿಷಯದಲ್ಲಿ ಲೋಕಪಾಲದಿಂದ ಹೊರಗಿಡಲಾಗುತ್ತದೆ. ಜನಲೋಕಪಾಲದ ಪ್ರಕಾರ ಎಲ್ಲಾ ಸರ್ಕಾರೀ ಸೇವಕರನ್ನು, ಜನಪ್ರತಿನಿಧಿಗಳನ್ನು ಹಾಗೂ ನ್ಯಾಯಾಂಗದ ನ್ಯಾಯಾಧೀಶರನ್ನೂ ಲೋಕಪಾಲದ ವ್ಯಾಪ್ತಿಗೆ ತರಲಾಗುತ್ತದೆ.