Daily Archives: December 19, 2013

ಎದೆಗೆ ಬೀಳಬೇಕಾದ ಅಕ್ಷರಗಳು : “ನಾವು-ನಮ್ಮಲ್ಲಿ” ದೇವನೂರು ಮಹಾದೇವರ ಮಾತುಗಳು

[ದೇವನೂರು ಮಹಾದೇವ ಅವರು “ನಾವು-ನಮ್ಮಲ್ಲಿ” ಕಾರ್ಯಕ್ರಮದ ಉದ್ಘಾಟನಾ ಗೋಷ್ಟಿಯ ಮುಖ್ಯ ಅತಿಥಿ. ಸಭೆಯಲ್ಲಿ ಮಾತನಾಡ ಬೇಕೆಂದರೆ ಅವರು ಥಟ್ಟನೆ ಒಪ್ಪಿಕೊಳ್ಳುವವರಲ್ಲ. ಸಂಘಟಕರ ಮನವಿಗೆ ಒಪ್ಪಿ ಮಾತನಾಡಲು ಬಂದರು. ಅವರ ಭಾಷಣದ ಕೆಲವು ಆಯ್ದ ಭಾಗಗಳ ಪಠ್ಯ ಕೆಳಗಿದೆ.]

– ‘ನಮ್ಮ ಮಾತುಗಳು ಸೋಲುತ್ತಿವೆಯೆ?’ ಜೊತೆಗೆ ‘ಜನಪರ ದನಿಗಳು ಕ್ಷೀಣಿಸುತ್ತಿವೆಯೆ?’ ಎನ್ನುವುದರ ಚರ್ಚೆಯೂ ಇದೆ. devanurಈ ಎರಡನ್ನು ಒಟ್ಟಾಗಿ ನೋಡಿದರೆ ಒಂದಿಷ್ಟು ಹೊಳಹುಗಳು ಸಿಗಬಹುದೇನೋ?

– ಗೆಳೆಯ ರಾಜೇಂದ್ರ ಚೆನ್ನಿ ತಮ್ಮ ‘ದಂತ ಗೋಪುರ ಮತ್ತು ಮಾರುಕಟ್ಟೆ ರಾಜಕೀಯ’ ಲೇಖನದಲ್ಲಿ ಕಾಮಿಕ್ಸ್‌ಗಳಲ್ಲಿ ವಸಾಹತುಶಾಯಿಯ ಒಳಚರಿತ್ರೆಗಳಿವೆ ಎಂದು ಹೇಳುತ್ತಾ ‘ಆದಿವಾಸಿಗಳ ಮೇಲೆ ಹುಕುಂ ಮಾಡುವ ಫ್ಯಾಂಟಮ್ ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಿದ ಬಿಳಿಯನ ಮೂಲಮಾದರಿ ಎನ್ನುವುದನ್ನೂ, ಹಾಗೇ ನಿಸರ್ಗ ಮತ್ತು ಪ್ರಾಣಿಗಳ ಮೇಲೆ ರಮ್ಯವಾದ ರೀತಿಯಲ್ಲಿ ಆಳ್ವಿಕೆ ಟಾರ್ಜನ್, ನಿಸರ್ಗದ ಮೇಲೆ ದಾಳಿ ಮಾಡಿ ಅದನ್ನು ಬಳಸಿಕೊಳ್ಳುವ ಯುರೋಪಿಯನ್ ಮನುಷ್ಯನ ಸಂಕೇತವೆನ್ನುವುದನ್ನು ಮರೆಯುತ್ತೇವೆ’ ಎಂದು ಅಪೂರ್ವ ಒಳನೋಟ ನೀಡುತ್ತಾರೆ. ಟಾರ್ಜನ್ ಎಂದರೆ ಬಿಳಿಯ ಚರ್ಮದವನು ಅಂತವೂ ಅರ್ಥವಂತೆ.

– ಒಟ್ಟಿನಲ್ಲಿ, ಸುಲಿಗೆ ಇಂದು ಸುಲಿಗೆಯಾಗಿ ಸುಲಿಯುತ್ತಿಲ್ಲ ರಕ್ಷಕನ ಮುಖವಾಡ ಹಾಕಿ ಸುಲಿಯುತ್ತಿದೆ. ಇದನ್ನು ಮಕ್ಕಳಲ್ಲೆ ಅದರೆ ಗಿಡವಾಗಿದ್ದಾಗಲೆ ಬಗ್ಗಿಸಿ ಸುಲಿಗೆಯನ್ನು ಒಪ್ಪಿತ ಮೌಲ್ಯವಾಗಿಸುವ ಹೊಸ ಬಲೆಗಳನ್ನು ಈ ಭೂಮಿ ಮೇಲೆ ನೇಯಲಾಗುತ್ತಿದೆ. ಜೆರೆಮಿ ಸೀಬೋಕ್ ಬರೆಯುತ್ತ – “‘ಜಗತ್ತಿನ ಕಾರ್ಮಿಕರೆಲ್ಲರೂ ಒಟ್ಟಾಗಿ ಜಗತ್ತನ್ನು ದಾಸ್ಯಯಿಂದ ಮುಕ್ತಗೊಳಿಸಬಲ್ಲರು’ ಎಂಬ ಚಿಂತನೆ ದುರ್ಬಲಗೊಂಡಾಗ ಈಗ ‘ನಮಗೆ ಬೇಕಿರುವುದೆಲ್ಲವನ್ನೂ ಬಂಡವಾಳಶಾಯಿಯ ಮೂಲಕ ಮಾತ್ರ ಪಡೆದುಕೊಳ್ಳಲು ಸಾಧ್ಯ’ ಎಂಬ ಪುರಾಣ ಸೃಷ್ಟಿಸಲಾಗಿದೆ”- ಎನ್ನುತ್ತಾರೆ. ಇಂದು ಜೀವನ ಎಂದರೆ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂಬಂತಾಗಿಬಿಟ್ಟಿದೆ. ಸಮಾನತೆ ಆಶಯಗಳ ಸೈದ್ಧಾಂತಿಕತೆ ಕಣ್ಣುಬಾಯಿ ಬಿಡುತ್ತಿದೆ. ಇಂದಿನ ಜಾಗತೀಕರಣದ ಮಾಯಾಬಜಾರ್ ಖಾಸಗೀಕರಣದ ಬಂಡವಾಳವೆ ಇಂದು ಜಗತ್ತಿನ ಹಸಿವಿನ ಬಗ್ಗೆ ಮಾತಾಡುತ್ತಿದೆ, ಉದ್ಯೋಗದ ಬಗ್ಗೆ ಮಾತಾಡುತ್ತಿದೆ, ಬಡವರ ಉದ್ಧಾರ ತನ್ನ ಕೈಲಿ ಮಾತ್ರ ಎಂಬಂತೆ ಬಿಂಬಿಸಬೇಕೆಂದು ನಂಬಿಸುತ್ತಿದೆ. ಮಾಟ ಮಂತ್ರ ಮಾಯಾ ಬಜಾರ್ ಎಲ್ಲವೂ ವಿಜ್ಞಾನದ ಭಾಷೆಯಲ್ಲೂ ಮಾತಾಡುತ್ತಿದೆ.

ಹೀಗಿರುವಾಗ ವಿಮೋಚನೆ ಹೇಗೆ? ಅಥವಾ ಯಾರಿಂದ? ಖಳನಾಯಕನು ನಾಯಕನನ್ನು ತುಳಿದಿಟ್ಟು ತಾನೇ ನಾಯಕನ ಮಾತುಗಳನ್ನಾಡುತ್ತಿದ್ದಾನೆ. ಇದಕ್ಕೆ ಜಗತ್ತು ಮರುಳಾಗುತ್ತಿದೆ. ಜೊತೆಗೆ ಈ ಕಾಲ ಮಾಹಿತಿ ಯುಗ. ಮನುಷ್ಯ ಹೆಚ್ಚೆಚ್ಚು ಎಚ್ಚರವನ್ನೂ ಪಡೆಯುತ್ತಿದ್ದಾನೆ. ಎಚ್ಚರ ಇಲ್ಲದಿದ್ದಾಗ ಅಸಮಾನತೆ ತಾರತಮ್ಯಗಳು ಇದ್ದರೂ ಎಂಥದೋ ನೆಮ್ಮದಿಯಾದರೂ ಇರುತ್ತಿತ್ತು. ಈಗ ಎಚ್ಚರದೊಡನೆ ತಾರತಮ್ಮಗಳೂ, ಅಸಮಾನತೆಗಳೂ ಹೆಚ್ಚುತ್ತಿದ್ದುವೆಂದರೆ ಕ್ಷೆಭೆಯೂ ಉಲ್ಬಣಗೊಳುತ್ತ ಒಟ್ಟಿನಲ್ಲಿ ನೆಮ್ಮದಿ ಕೆಟ್ಟಿದೆ, ಬಿಡುಗಡೆ ಹೇಗೆ?

– ಯಾಕೆಂದರೆ ಸಮಾನತೆ ಕನಸನ್ನು ಸಾಕ್ಷಾತ್ಕರಿಸಬೇಕಾಗ ನಮ್ಮ ಸೈದ್ಧಾಂತಿಕ ನಾಯಕರು ಅವರೇ ತುಳಿತಕ್ಕೊಳಗಾಗಿದ್ದಾರೆ. ಇವರೂ ಒಟ್ಟಾಗುತ್ತಿಲ್ಲ. ಹೀಗಿರುವಾಗ ತುಳಿತಕ್ಕೊಳಗಾದ ಜನತೆ ಒಟ್ಟಾಗುವುದೆಲ್ಲಿ ಬಂತು? ಒಂದೊಂದು ಸೈದ್ಧಾಂತಿಕತೆಯೂ ತನ್ನದೇ ಶತ್ರುಗಳನ್ನು ಗುರುತಿಸಿಕೊಂಡು ಆ ಶತ್ರುಗಳಿಗೆ ತಕ್ಕಂತೆ ತಮ್ಮ ಪ್ರತ್ಯೇಕತೆ ಆಚರಿಸುತ್ತಿವೆ. ಮಡಿ, ಶತೃತ್ವ ಅಭ್ಯಾಸವಾಗಿಬಿಟ್ಟರೆ, ಕಾಲಾನುಕ್ರಮದಲ್ಲಿ ಜಡತೆ ಆವರಿಸಿಕೊಂಡಾಗ ಅವರು ಗುರುತಿಸಿಕೊಂಡಿದ್ದ ಶತ್ರು, ಮರೆತುಹೋಗಿ ಅವರ ಅಕ್ಕಪಕ್ಕದವರೇ ಶತ್ರುಗಳಾಗಿಬಿಡಬಹುದು.

– ಇದರೊಡನೆ ಖಾಸಗಿ ಬಂಡವಾಳದ ಕೃಪಾಪೋಷಿತ ಎನ್.ಜಿ.ಒಗಳು ಜನಪರ ಶಕ್ತಿಗಳಿಗಿಂತಲೂ ಹೆಚ್ಚು ಜನಪರವಾಗಿ ಮಾತನಾಡುತ್ತ ಜನಪರ ಆಂದೋಲನಗಳಿಗೆ ತೊಡರುಗಾಲು ಹಾಕುತ್ತಿವೆ. ಜೊತೆಗೆ ಸಮಾನತೆ ಆಶಯದ ದಲಿತ, ಮಹಿಳೆ, ಪರಿಸರ, ರೈತ, ಇಂಥ ಸಂಘಟನೆಗಳು, ಪಕ್ಷಗಳು ತಂತಮ್ಮ ಐಡೆಂಟಿಟಿ ರಾಜಕಾರಣವನ್ನೆ ಆನೆಕಾಲುರೋಗದಂತೆ ದೊಡ್ಡದು ಮಾಡಿಕೊಂಡು ಸಮಾನತೆಯನ್ನು ಮರೆತು ತೆವಳುತ್ತಿವೆ. ಇದುವರೆಗಿನ ಭೂಮಿ ಮೇಲಿನ ಶೋಷಣೆಯ ಇತಿಹಾಸದಲ್ಲಿ ಪ್ರಕೃತಿ ನಾಳೆಗೂ ಉಳಿಯುತ್ತಿತ್ತು. ಇಂದಿನ ಜಾಗತಿಕರಣ, ಖಾಸಗಿಕರಣದ ದಾಹದಲ್ಲಿ ನಾಳೆಗೆ ಪ್ರಕೃತಿ ಏನೂ ಉಳಿಯುವುದಿಲ್ಲವೇ ಎಂಬಷ್ಟು ವೇಗವಾಗಿ ಧ್ವಂಸೀಕರಣ ನಡೆಯುತ್ತಿದೆ.

– ಇತ್ತೀಚೆಗೆ, ‘ಗ್ರಾಮ ಸ್ವರಾಜ್, ಗಾಂಧಿ ಮತ್ತು ಅಂಬೇಡ್ಕರ್ – ಒಂದು ಅನುಸಂಧಾನ’ ಎಂಬ ಚರ್ಚೆ ನಡೆಯಿತು. ನಾನು ಆ ಸಂಘಟಕರಿಗೆ ‘ಏನು ಜಗಳವನ್ನು ಸರಸ ಮಾಡಬೇಕು ಅಂತಿದ್ದೀರಾ ಹೇಗೆ?’ ಎಂದು ತಮಾಷೆ ಮಾಡಿದೆ. ಈ ಇಬ್ಬರ ನಡುವೆ ಇಂದು ಜಗಳ ನಡೆಯುತ್ತಿದೆ. ಅದು ತೀವ್ರವಾಗೂ ಇದೆ. ಇದರ ಅರ್ಥ ಈ ಇಬ್ಬರೂ ಇನ್ನೂ ಸತ್ತಿಲ್ಲ ಅಂತಲೇ ಅರ್ಥ. ಇಂದೂ ಅವರು ಹೆಚ್ಚು ಜೀವಂತವಾಗಿದ್ದಾರೆ ಅಂತಲೂ ಅರ್ಥ. ನಾವು ಈ ಇಬ್ಬರ ಸಮಕಾಲೀನರಾದರೆ ಜಗಳ ಅನಿವಾರ್ಯ,..ಆದರೆ ಸಮಗ್ರವಾಗಿ ನೋಡಿದರೆ ಅವರಿಬ್ಬರ ನಡುವೆ ಸರಸ ಆಗಲೂಬಹುದು. ಅವರಲ್ಲಿ ಯಾರು ಗಂಡು, ಯಾರು ಹೆಣ್ಣು ನಿರ್ಧರಿಸಲು ಅವರವರ ಭಾವಕ್ಕೆ ಬಿಡುವೆ. ಯಾಕೆಂದರೆ ‘ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಹೊರಗೆ ಇರುವ ಮಗ’ ಎಂದು ನಾನು ಹೇಳಿದ್ದರಲ್ಲಿ ಮಗ ಎಂದರೆ ಹಕ್ಕಿರುವ ವಾರಸುದಾರ ಔಟ್‌ಕಾಸ್ಟ್ ಆಗಿದ್ದಾನೆ ಎಂಬರ್ಥದಲ್ಲಿ ಗ್ರಹಿಸದೆ ಕೆಲವರು ಪದಶಃ ಅರ್ಥ ಅರ್ಥಮಾಡಿಕೊಂಡರು. ಅದಕ್ಕಾಗಿ ಅವರವರ ಭಾವಕ್ಕೆ ಬಿಡುವೆ.

ನಾವು ಗಾಂಧಿಯವರ ಸಮಕಾಲೀನರಾಗಿ ನೋಡಿದರೆ ಗಾಂಧಿಯವರ 1921-22 ಇಸವಿ ಅಭಿಪ್ರಾಯಗಳನ್ನು –

  • ಹಿಂದೂ ಧರ್ಮ ಜಾತಿ ಪದ್ಧತಿಯ ಆಧಾರದ ಮೇಲೆ ಸ್ಥಾಪಿತ
  • ಸ್ವರಾಜ್ಯದ ಬೀಜಗಳು ಜಾತಿಪದ್ಧತಿಯಲ್ಲಿದೆ
  • ಸಮಾಜ ನಿಯಂತ್ರಣಕ್ಕೆ ಮತ್ತೊಂದು ಹೆಸರೇ ಜಾತಿ
  • ಸಮಾಜ ನಿಯಂತ್ರಣಕ್ಕೆ ಮತ್ತೊಮದು ಹೆಸರೇ ಜಾತಿ
  • ರಾಷ್ಟ್ರೀಯ ಐಕ್ಯತೆಗೆ ಸಹಭೋಜನ, ಅಂತರ್ಜಾತಿ ವಿವಾಹಗಳ ಅಗತ್ಯವಿಲ್ಲ
  • ಜಾತಿ ಪದ್ಧತಿ ಬಿಡುವುದೆಂದರೆ ಹಿಂದೂಗಳು ವಂಶಪಾರಂಪರ್ಯ ಉದ್ಯೋಗ ಕಳೆದುಕೊಂಡಂತೆ
  • ಜಾತಿ ಪದ್ಧತಿ ಸಮಾಜವೊಂದರ ಸ್ವಾಭಾವಿಕ ಶ್ರೇಣೀಕರಣ
  • ಜಾತಿ ಪದ್ಧತಿ ನಾಶ ಪಡಿಸಲು ಯತ್ನಿಸುವ ಯಾರದೇ ಪ್ರಯತ್ನಕ್ಕೂ ನನ್ನ ವಿರೋಧವಿದೆ
  • ಇತ್ಯಾದಿ..ಇತ್ಯಾದಿಗಳು.

ಮೇಲಿನ 1920 ರ ಆಜುಬಾಜಿನ ಗಾಂಧಿ ಆಲೋಚನೆಗಳನ್ನು ನಾವು ಆ ಕಾಲಮಾನದಲ್ಲಿದ್ದರೆ ವಿರೋಧಿಸಬೇಕಾಗುತ್ತದೆ, ಪ್ರತಿಭಟಿಸಬೇಕಾಗುತ್ತೆ. ಅಂಬೇಡ್ಕರ್ ಅವರಷ್ಟೇ ಉಗ್ರವಾಗಿ. ಆದರೆ ಆ ಕರ್ಮಠ ಸನಾತನಿ ಗಾಂಧಿ ಅಲ್ಲೇ ಉಳಿಯುವುದಿಲ್ಲ. ದಿನದಿನವೂ ಸತ್ತು ದಿನದಿನವೂ ಹುಟ್ಟುತ್ತಾನೆ. 1928 ರ ಹೊತ್ತಿಗೆ ಒಂದೇ ವರ್ಣದ ಉಪಜಾತಿಗಳ ಜೊತೆ ಅಂತರ್ಜಾತಿ ವಿವಾಹವಾಗುವುದನ್ನು ಪ್ರೋತ್ಸಾಹಿಸುವ ಗಾಂಧಿ ಒಂದೊಂದೇ ಹೆಜ್ಜೆ ಇಡುತ್ತ 1946 ರ ಹೊತ್ತಿಗೆ ಸವರ್ಣ ಹಿಂದು ಮತ್ತು ಹರಿಜನರ ನಡುವೆ ನಡೆಯುವ ಅಂತರ್‌ಜಾತಿ ವಿವಾಹಗಳಿಗೆ ಮಾತ್ರವೆ ತಾವು ಹೋಗುವುದಾಗಿ ನೇಮ ಮಾಡಿಕೊಳ್ಳುತ್ತಾರೆ. ವಧು ವರರಲ್ಲೊಬ್ಬರು ಹರಿಜನರಲ್ಲದ ಪಕ್ಷದಲ್ಲಿ ಸೇವಾಗ್ರಾಮದಲ್ಲಿ ಮದುವೆಯಾಗುವ ಅವಕಾಶವನ್ನು ನಿರಾಕರಿಸುತ್ತಾರೆ. ನಾವು ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಬೇಕೆಂದರೆ ಜಾತಿಯು ಹೋಗಲೇಬೇಕು ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. 1946 ರ ಗಾಂಧಿ ಆಲೋಚನೆಗಳು 1920ರಲ್ಲಿಯೇ ಕಾಣಿಸಿಕೊಂಡಿದ್ದರೆ ಏನಾಗುತ್ತಿತ್ತು? ಭಾರತದ ಜಾತಿ ಧರ್ಮಗಳು ಆ ಗಾಂಧಿಯನ್ನು ನುಂಗಿ ನೊಣೆದು ಬಿಡುತ್ತಿದ್ದವು. ಈ ಗಾಂಧಿಯೇ ಇರುತ್ತಿರಲಿಲ್ಲ!

– ಅಷ್ಟೊಂದು ಬೆಳವಣಿಗೆ ಒಂದೇ ಜೀವಿತದಲ್ಲಿ ಆಗುವ ಗಾಂಧಿ ವೃತ್ತಿ ಬಗ್ಗೆ ಮಾತ್ರ ಕೌಶಲ್ಯದ ಕಾರಣವಾಗಿ ವಂಶವೃತ್ತಿಯನ್ನು ಹೇಳುತ್ತಿದ್ದುದನ್ನು ಕೊನೆವರೆಗೂ ಉಳಿಸಿಕೊಂಡರೇ ಹೇಗೋ ನನಗೆ ಗೊತ್ತಿಲ್ಲ. ಇಲ್ಲಿ ಜೀವನ ನಿರ್ವಹಣೆಗಾಗುವಷ್ಟು ಮಾತ್ರ ವೇತನ ಎಂ ಆಶಯ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ವಂಶವೃತ್ತಿ ಕೌಶಲ್ಯ ಯಾಂತ್ರಿಕತೆ ತಂದುಕೊಟ್ಟರೆ ವಂಶವೃತ್ತಿ ಬದಲಾವಣೆಯೂ, ವೃತ್ತಿಗಳಿಗೇನೆ ಸೃಷ್ಟ್ಯಾತ್ಮಕತೆ ತಂದುಕೊಡುತ್ತದೆ ಎಂಬುದನ್ನು ಸದಾ ಮುನ್ನಡೆಯುವ ಗಾಂಧಿಗೆ ಮನದಟ್ಟು ಮಾಡಬೇಕಾಗಿದೆ. ಅಥವಾ 1946 ರಲ್ಲಿ ವರ್ಗರಹಿತವಾದ, ಜಾತಿರಹಿತವಾದ ಇಂಡಿಯಾ ನಿರ್ಮಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಗಾಂಧಿ ಹೇಳುತ್ತ ಒಂದೇ ಜಾತಿಯು ಉಳಿದಿರುವಂಥ ಮತ್ತು ಬ್ರಾಹ್ಮಣರು ಹರಿಜನರನ್ನು ಮದುವೆಯಾಗುವಂತಹ ದಿನಕ್ಕಾಗಿ ಗಾಂಧಿ ಹಂಬಲಿಸುತ್ತ ಗಾಂಧಿ ಒಂದು ನುಡಿ ನುಡಿಯುತ್ತಾರೆ: ‘ಅಸಮಾನತೆಯಿಂದ ಹಿಂಸೆಯು ಹುಟ್ಟಿಕೊಳ್ಳುತ್ತದೆ ಮತ್ತು ಸಮಾನತೆಯಿಂದ ಅಹಿಂಸೆಯು ಹುಟ್ಟಿಕೊಳ್ಳುತ್ತೆ’ ಎಂದು ಅಹಿಂಸೆ ಮತ್ತು ಸಮಾನತೆಯನ್ನು ಒಂದೇ ನಾಣ್ಯ ಮಾಡುತ್ತಾರೆ. ತನ್ನ ದರ್ಶನದ ಅಚಿತಿಮ ಸ್ಥಿತಿಯಲ್ಲಿ “ಸ್ಟೇಟ್ ವಿದರ್ ಅವೆ” ಮಹಾವಾಕ್ಯ ನೀಡಿದ ಮಾರ್ಕ್ಸನ ಸಮಸಮವಾಗಿದೆ.

– ಇಂದು ಸಾವಿರಾರು ಅಸಮಾನತೆಗಳು ಭೂಮಿ ಮೇಲೆ ಬಲೆ ಹಾಕಿವೆ. ಎಷ್ಟು ಅಸಮಾನತೆಗಳು ಇವೆಯೋ ಅಷ್ಟೇ ಸಂಖ್ಯೆಗಳಲ್ಲಿ ಹಿಂಸೆಗಳೂ ಕತ್ತು ಹಿಸುಕುತ್ತಿವೆ. ಮುಖಾಮುಖಿಯಾಗುವುದು ಹೇಗೆ?

– ನನ್ನ ಗೆಳೆಯ ಡಿ.ಆರ್. ನಾಗರಾಜರ ಒಂದು ಒಗಟಿನಂತಹ ನುಡಿಗಟ್ಟಲ್ಲಿ ಒಂದು ನಿಧಿ ಇರಬಹುದೇನೋ ಎಂಬಂತೆ ಭಾಸವಾಗುತ್ತದೆ. ಡಿ.ಆರ್ ತಮ್ಮ ಲೇಖನವೊಂದರಲ್ಲಿ “ಹಳ್ಳಿಯ ಜೀವಂತ ಸಂದರ್ಭದೊಳಗೆ ಅಂಬೇಡ್ಕರ್‌ವಾದಿಯಾಗಿ ಹಾಗೂ ಅದರ ಹೊರಗೆ ಗಾಂಧಿವಾದಿಯಾಗಿ ಕಂಡರೆ ಅದು ಅಧಿಕೃತವಾದದ್ದು” ಅನ್ನುತ್ತಾರೆ. ಈ ಬೀಜವಾಕ್ಯದಿಂದ ನಾವು ಬೆಳೆ ತೆಗೆಯಬೇಕಾಗಿದೆ.