Daily Archives: December 17, 2013

ಕೆ.ಪಿ.ಎಸ್.ಸಿ ಅವ್ಯವಹಾರ: ಪ್ರಮುಖ ಪಕ್ಷಗಳ ಮೌನ

– ಸುಧಾಂಶು ಕಾರ್ಕಳ

ಕೆಲ ದಿನಗಳ ಹಿಂದೆಯಷ್ಟೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೆ.ಪಿ.ಎಸ್.ಸಿ ಅವ್ಯವಹಾರ ಚರ್ಚೆಯಾಗುತ್ತೆ ಎಂದು ಅನೇಕರು ನಿರೀಕ್ಷಿಸಿದ್ದರು. ಕರ್ನಾಟಕ ಆಡಳಿತ ಸೇವೆಗಳು, ಉಪನ್ಯಾಸಕ ವರ್ಗ, ವಿವಿಧ ಇಲಾಖೆಗಳು ಮುಖ್ಯಸ್ಥರು ಸೇರಿದಂತೆ ಬಹುತೇಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸರಕಾರ ಎದುರು ನೋಡುವ ಸಂಸ್ಥೆ ಈ ಕೆ.ಪಿ.ಎಸ್.ಸಿ.

ಈ ಸಂಸ್ಥೆಯ ಮೂಲಕ ನೇಮಕವಾಗಲು ವಿವಿಧ ಹುದ್ದೆಗಳಿಗೆ ಮೂರು-ನಾಲ್ಕು KPSC-bribe-ratesಲಕ್ಷಗಳಿಂದ ಎಪ್ಪತ್ತು-ಎಂಬತ್ತು ಲಕ್ಷಗಳ ವರೆಗೆ ಲಂಚ ಕೊಟ್ಟವರು ಅಧಿಕಾರ ವಹಿಸಿಕೊಂಡ ನಂತರ ನಿಯತ್ತಾಗಿ ಕೆಲಸ ಮಾಡಲಿ ಎಂದು ನಿರೀಕ್ಷಿಸುವುದು ಕಷ್ಟ. ಇತ್ತೀಚೆಗೆ ಕೆ.ಪಿ.ಎಸ್.ಸಿ ಮೂಲಕ ನೇಮಕವಾದ ಪೊಲೀಸ್ ಅಧಿಕಾರಿಯೊಬ್ಬರು ವಿವಿಧ ಪ್ರಕರಣಗಳಲ್ಲಿ ಬೇಕಾದವರನ್ನು ಗುಡ್ಡೆ ಹಾಕಿಕೊಂಡು ಇಂತಿಷ್ಟು ವಸೂಲಿ ಮಾಡಿದರು. ಅವರು ಆರೋಪಿಗಳೊಂದಿಗೆ ವಸೂಲಿ ಬಗ್ಗೆ ಮಾತುಕತೆ ನಡೆಸುವಾಗ ಹೇಳಿದ್ದ ಒಂದು ಮಾತು, ’ನಾವೇನು ಪುಕ್ಸಟೆ ಇಲ್ಲಿಗೆ (ಈ ಹುದ್ದೆಗೆ) ಬಂದಿಲ್ಲ’. ಅದರರ್ಥ ಹೀಗೆ ನೇಮಕ ಆದವರು ಪ್ರಾಮಾಣಿಕತೆಯಿಂದ ದುಡಿಯುವ ಸಾಧ್ಯತೆಗಳು ಕ್ಷೀಣ.

ಲಂಚ ಕೊಟ್ಟು ಉಪನ್ಯಾಸಕರಾದವರು ಮುಂದೆ ಇದೇ ಕೆ.ಪಿ.ಎಸ್.ಸಿ ಸಂಸ್ಥೆಯಿಂದ ನಡೆಸುವ ಪರೀಕ್ಷೆಗಳ ಮೌಲ್ಯಮಾಪಕರಾಗಿ ಅನ್ಯಮಾರ್ಗಗಳಿಂದ ದುಡ್ಡು ಮಾಡುವ ಪ್ರಯತ್ನ ಮಾಡುತ್ತಾರೆ. ಅಷ್ಟೇ ಅಲ್ಲ, ಉಪನ್ಯಾಸದ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಕಾಲೇಜಿಗೆ ಆಗಾಗ ಬಿಡುಗಡೆಯಾಗುವ ಹಣ ದುರುಪಯೋಗ ಮಾಡಿಕೊಳ್ಳಲು ಉತ್ಸುಕರಾಗಿರುತ್ತಾರೆ. ಅಥವಾ, ತಮ್ಮ ವಾರಿಗೆ ಇತರರು ಕಮಾಯಿ ಹೆಚ್ಚು ಇರುವ ಇಲಾಖೆಗಳಲ್ಲಿ ನೇಮಕಗೊಂಡು ದುಡ್ಡು ಮಾಡುತ್ತಿರುವುದನ್ನು ನೋಡಿ ಸಹಿಸಲಾರದೆ, ಇತ್ತ ಮಕ್ಕಳಿಗೆ ನಿಯತ್ತಾಗಿ ಪಾಠವೂ ಮಾಡದೆ ಎಡಬಿಡಂಗಿಗಳಾಗಿ ಉಳಿದು ಬಿಡುತ್ತಾರೆ.

ಇಂತಹವರ ನೇಮಕ ಆಗುವಾಗ ನಡೆದ ಅಕ್ರಮಗಳ ಬಗ್ಗೆ ಸಿ.ಐ.ಡಿ ತನಿಖೆ ನಡೆಸಿ ಸೂಕ್ತ ಸಾಕ್ಷಿ ಆಧಾರಗಳೊಂದಿಗೆ ವರದಿ ಸಲ್ಲಿಸಿದರೂ, ಸರಕಾರಕ್ಕೆ ತಕ್ಕ ತೀರ್ಮಾನ ತೆಗೆದುಕೊಳ್ಳುವ ಮನಸ್ಸಿಲ್ಲ. ಕಾರಣ ಆ ಬಗ್ಗೆ ವಿರೋಧ ಪಕ್ಷಗಳೂ ಒತ್ತಾಯ ಹೇರುತ್ತಿಲ್ಲವಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಅವರ ಅಣ್ಣ ಎಚ್.ಡಿ.ರೇವಣ್ಣ ಆಗಾಗ ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ gonal-bhimappaಗೋನಾಳ್ ಭೀಮಪ್ಪನವರನ್ನು ಬೆಂಬಲಿಸಿಯೇ ಮಾತನಾಡಿದರು. ’ಪಾಪ ಅವರು ದಲಿತರು ಅನ್ನೋ ಕಾರಣಕ್ಕೆ ಸರಕಾರ ಅವರನ್ನು ಶಿಕ್ಷಿಸಲು ಹವಣಿಸುತ್ತಿದೆ..’ ಎಂದು ರೇವಣ್ಣ ಅನೇಕ ಬಾರಿ ಹೇಳಿದ್ದನ್ನು ಪತ್ರಕರ್ತರು ಕೇಳಿಸಿಕೊಂಡಿದ್ದಾರೆ. ತಮ್ಮ ಊರಲ್ಲಿರುವ ದಲಿತರ ಬಗ್ಗೆ ಎಂದಿಗೂ ಕಾಳಜಿ ತೋರಿಸದ ಇವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ದಲಿತ ಅಧಿಕಾರಿ ಪರ ಮಾತನಾಡುವುದೇಕೆ?

ಕಾರಣ ಇಷ್ಟೆ… ದೇವೇಗೌಡರ ಕುಟುಂಬದ ಕೃಪೆಯಿಂದ ಗೋನಾಳ್ ಭೀಮಪ್ಪ ಅಧ್ಯಕ್ಷರಾದರು. ಆ ನಂತರ ಅಧ್ಯಕ್ಷರು ಆ ಕುಟುಂಬದ ನಿರ್ದೇಶನದಲ್ಲಿ ಹಲವರಿಗೆ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಿದರು ಎಂಬುದು ಅನೇಕರು ದೂರುವ ಸಂಗತಿ. ಹಾಗಾಗಿ ಪ್ರಮುಖ ಪ್ರತಿಪಕ್ಷದ ನೇತಾರರಿಗೆ ತನಿಖೆ ಅಗತ್ಯ ಇರಲಿಲ್ಲ. ಇನ್ನು ಬಿಜೆಪಿಯ ಅನೇಕ ರಾಜಕಾರಣಿಗಳು ತಮ್ಮ ಅವಧಿಯಲ್ಲಿ ನೇಮಕವಾದ ಕೆ.ಪಿ.ಎಸ್.ಸಿ ಸದಸ್ಯರ ಮೂಲಕ ತಮ್ಮ ಹಿತೈಷಿಗಳಿಗೆ ಕೆಲಸ ಕೊಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನವರೂ ಇದಕ್ಕಿಂತ ಬೇರೆಯಲ್ಲ. ಹಾಗಾಗಿ ಯಾರಿಗೂ ತನಿಖೆ ಬೇಡ.

ಇತ್ತೀಚೆಗಷ್ಟೆ ಕಣ್ಣು ತೆರೆದಿರುವ ಲೋಕಸತ್ತಾ ಪಾರ್ಟಿ ಈ ವಿಚಾರವನ್ನು ಎತ್ತಿಕೊಂಡು ಪ್ರತಿಭಟನೆಗೆ ಇಳಿದಿದೆ. ಮೊದಲು ತನಿಖಾ ವರದಿಯನ್ನು ಬಹಿರಂಗ ಪಡಿಸಿ ಎಂದು ಸರಕಾರದ ಮೇಲೆ ಒತ್ತಡ ಹೇರಿತು. ಸರಕಾರ ಬಹಿರಂಗ ಮಾಡದೇ ಇದ್ದಾಗ ಪಕ್ಷದ ಮುಖಂಡರೇ ವರದಿಯನ್ನು ಬಿಡುಗಡೆ ಮಾಡಿದರು. ಆ ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ನೇರವಾಗಿ ಕೆಲ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಕ್ಕೆ ಪುರಾವೆಗಳಿವೆ. ಮೌಲ್ಯಮಾಪನದಲ್ಲಿ ಅವ್ಯವಹಾರ ಆಗಿದ್ದಕ್ಕೆ ದಾಖಲೆಗಳಿವೆ. ಇನ್ನಾದರೂ ಸರಕಾರ ಇತ್ತ ಗಮನ ಹರಿಸಲಿ.


ಕೆಪಿಎಸ್‌ಸಿ ಹಗರಣದ ಕುರಿತು ತನಿಖೆ ನಡೆಸಿದ ರಾಜ್ಯ ಗುಪ್ತಚರ ಇಲಾಖೆ (ಸಿಐಡಿ) ಸರ್ಕಾರಕ್ಕೆ ಸಲ್ಲಿಸಿರುವ ಸಂಪೂರ್ಣ ತನಿಖಾ ವರದಿ ಇಲ್ಲಿದೆ.

ವರ್ತಮಾನ.ಕಾಮ್‌ನಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮ, ಅನೈತಿಕತೆಗಳ ಕುರಿತು ಬಂದಿರುವ ಕೆಲವು ಲೇಖನಗಳು: