Daily Archives: December 30, 2013

ಹೀಗೊಂದು ಕುವೆಂಪು ಜಯಂತಿ ಕಾರ್ಯಕ್ರಮ : ವಿರೋಧಾಭಾಸ ಎಂದರೆ ಇದೇ ಅಲ್ಲವೆ..?

– ಸೂರ್ಯಕಾಂತ್

ವಿರೋಧಾಭಾಸಕ್ಕೆ (Oxymoron) ಇದು ಪಕ್ಕಾ ಉದಾಹರಣೆ ಆಗಬಹುದು. ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿ ಬೋಧಿಸಿದ ಕುವೆಂಪು ಜಯಂತಿ ಕಾರ್ಯಕ್ರಮವೊಂದು ಭಾನುವಾರ (ಡಿ.29, 2013) ಹಾಸನದ ದುಬಾರಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಒಕ್ಕಲಿಗ ಸಂಘದ ಪದಾಧಿಕಾರಿಗಳ ಮಧ್ಯೆ ಕುಳಿತು ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಕಾರ್ಯಕ್ರಮ ನಡೆಸಿಕೊಟ್ಟರು. ಸಭೆ ತುಂಬಿತ್ತು. ಮೊದಲು ಕುವೆಂಪು ಗೀತೆಗಳ ಗಾಯನ, kuvempu-caste-1ಕೊನೆಯಲ್ಲಿ ಪ್ರೊ.ಕೃಷ್ಣೇಗೌಡರಿಂದ ಹಾಸ್ಯ ಸಂಜೆ. ಅಂದಹಾಗೆ, ಆ ಕಾರ್ಯಕ್ರಮ ನಡೆದ ಕಲ್ಯಾಣಮಂಟಪವೂ ಇದೇ ಶಾಖಾ ಮಠಕ್ಕೆ ಸೇರಿದ್ದು.

ಕಾರ್ಯಕ್ರಮಕ್ಕೆ ಪ್ರಸ್ತಾವನೆ ಒದಗಿಸಿದವರು ‘ಆದಿಚುಂಚನಗಿರಿ ಸಂಸ್ಥಾನ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳನ್ನು, ಎಲ್ಲಾ ಜಾತಿಗಳನ್ನು ಸಮಾನವಾಗಿ ಕಂಡ ಆದರ್ಶ ಮಠ. ಹಾಗಾಗಿ ವಿಶ್ವಮಾನವ ಸಂದೇಶ ಸಾರಿದ ಕವಿ ಕುವೆಂಪು ಅವರ ಜಯಂತಿಯನ್ನು ಆದಿಚುಂಚನಗಿರಿ ಮಠ ಆಯೋಜಿಸಿರುವುದು ಅರ್ಥಪೂರ್ಣ’ ಎಂದರು. ಮಾತನಾಡಿದ ಇಬ್ಬರು ಸ್ವಾಮೀಜಿಗಳು ಕುವೆಂಪು ಅವರನ್ನು ನೆನಪಿಸಿಕೊಳ್ಳುವುದರ ಜೊತೆ ಜೊತೆಗೆ ತಮ್ಮ ಹಿರಿಯ ಗುರು ದಿವಂಗತ ಬಾಲಗಂಗಾಧರನಾಥ ಸ್ವಾಮಿಯವರನ್ನು ಕೊಂಡಾಡಿದರು. ಕುವೆಂಪು ಬರಹದ ಮೂಲಕ ಸಾರಿದ್ದನ್ನು ತಮ್ಮ ಗುರು ಅಕ್ಷರಶಃ ಸಾಧಿಸಿದರು ಎಂದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ ಅವರು ತಮ್ಮ ಮಾತುಗಳಲ್ಲಿ ಕುವೆಂಪು kuvempu-caste-2ಹೇಳಿದ್ದ ಮಂತ್ರ ಮಾಂಗಲ್ಯ, ಸರಳ ವಿವಾಹ ಕ್ರಮಗಳು ಒಂದು ಕಾಲಘಟ್ಟದ ತರುಣರನ್ನು ಪ್ರಭಾವಿಸಿದ ಪರಿಯನ್ನು ವಿವರಿಸಿದರು. ಅಂತಹದೇ ಪ್ರೇರಣೆಗೆ ಒಳಗಾಗಿ ಅವರು ಕೂಡಾ ಹುಡುಕಿ, ಹುಡುಕಿ ಅಮವಾಸ್ಯೆ ದಿನ ತೀರಾ ಸರಳವಾಗಿ ಮದುವೆಯಾದವರು. (ಅವರ ಮಗಳ ಮದುವೆಯನ್ನು ಅದ್ಧೂರಿಯಾಗಿ ಚಿಕ್ಕಮಗಳೂರಿನ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪದಲ್ಲಿ ಮಾಡಿದರು ಎನ್ನುವುದು ಬೇರೆ ಮಾತು.)

ಈ ಕಾರ್ಯಕ್ರಮದಲ್ಲಿ ಹೆಚ್ಚು ಕಮ್ಮಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳು ಒಂದೇ ಸಮುದಾಯದವರು. ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಚಾರದ ವೇಳೆ ಅನೇಕ ಅಭ್ಯರ್ಥಿಗಳು ಕುವೆಂಪು ಭಾವಚಿತ್ರವನ್ನು ತಮ್ಮ ಕರಪತ್ರಗಳಲ್ಲಿ, ಬ್ಯಾನರ್‌ಗಳಲ್ಲಿ ವಿಶೇಷವಾಗಿ ಅಚ್ಚಾಗಿಸಿದ್ದಾರೆ. ಕುವೆಂಪು ಹುಟ್ಟಿದ್ದು ಒಕ್ಕಲಿಗರ ಮನೆಯಲ್ಲಿ. ಆ ಕಾರಣಕ್ಕೆ ಒಕ್ಕಲಿಗರು ಕುವೆಂಪು ಬಗ್ಗೆ ಹೆಮ್ಮೆ ಪಡುವುದು ಸಹಜ. ಆದರೆ ಹೆಮ್ಮೆ ಪಡುವುದಕ್ಕೆ ಒಂದು ಕ್ರಮ ಬೇಕಲ್ಲ. ಕುವೆಂಪು ತಮ್ಮ ಕಾವ್ಯ, ನಾಟಕ, ಕತೆ, ಲೇಖನಗಳ ಮೂಲಕ ಬೋಧಿಸಿದ್ದು ಶೋಷಣೆ ಮುಕ್ತ ಸಮಾಜದ ಅಗತ್ಯತೆಯನ್ನು. ವಿಶ್ವಮಾನವನಾಗುವುದೆಂದರೆ, ಯಾವ ಬಂಧನಗಳಲ್ಲಿದೆ ಹೊರಬರುವುದು. ಅವರ ಬರಹಗಳ ಒಟ್ಟು ತಾತ್ವಿಕತೆ ದೀನ ದಲಿತರ ಜಾಗೃತಿಗೆ ಮೊರೆ ಇಟ್ಟರೆ, ಉಳ್ಳವರ ಆತ್ಮವಿಮರ್ಶೆಗೆ ಕರೆ ಕೊಡುತ್ತದೆ. ಆ ನಿಟ್ಟಿನಲ್ಲಿ ಒಂದಿಷ್ಟು ಆಲೋಚಿಸಿದರೆ ಈ ಜನಾಂಗ ಪಡುವ ಹೆಮ್ಮೆಗೂ ಒಂದು ಅರ್ಥ ದಕ್ಕೀತಲ್ಲವೆ?

ಈ ಕಾರ್ಯಕ್ರಮ ನಡೆಯುವ ಒಂದು ದಿನದ ಹಿಂದೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ದಲಿತನೊಬ್ಬ ತನ್ನ ಜಮೀನಿನಲ್ಲಿ ಬಹಿರ್ದೆಸೆಗೆ ಬಂದಿದ್ದ ಎಂಬ ಕಾರಣಕ್ಕೆ ದಲಿತನ ಮನೆ ಮೇಲೆ ದಾಳಿ ಮಾಡಿದ ಸವರ್ಣೀಯರು ಅವನನ್ನು, ಅವನ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಹೆಚ್ಚು ಕಮ್ಮಿ ಒಂದು ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನಲ್ಲಿ ದೇವಸ್ಥಾನಕ್ಕೆ ಒಬ್ಬ ದಲಿತ ಪ್ರವೇಶಿಸಿದ ಎಂಬ ಕಾರಣಕ್ಕೆ ಅವನನ್ನು ಅಲ್ಲಿಯ ಸವರ್ಣೀಯರು ಹೊಡೆದಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಹಾಸನ ಸಮೀಪದ ಕುದುರೆಗುಂಡಿ ಎಂಬ ಹಳ್ಳಿಯಲ್ಲಿ ಸರಿಯಾಗಿ ತಮಟೆ ಬಾರಿಸಲಿಲ್ಲ ಎಂಬ ಕಾರಣಕ್ಕೆ ಒಬ್ಬ ದಲಿತನ ಮೇಲೆ ಬಲಿಷ್ಟರು ಹಲ್ಲೆ ಮಾಡಿದ್ದರು. ಅರಕಲಗೂಡು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಇಂದಿಗೂ ದಲಿತರು ಜೀತದಾರರಾಗಿ ಉಳ್ಳವರ ಮನೆಯಲ್ಲಿ ದುಡಿಯುತ್ತಿದ್ದಾರೆ. ನೂರಾರು ದಲಿತರು ಇನ್ನೂ ಮಲಹೊರುವವರಾಗಿ ಇದೇ ಜಿಲ್ಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. (ಸರಕಾರಿ ದಾಖಲೆ ಪ್ರಕಾರ ಯಾರೂ ಇಲ್ಲ ಬಿಡಿ!)

ಈ ಭಾಗದ ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ಹಿರಿಯ ಮುತ್ಸದ್ಧಿ ತನ್ನೂರಿನ ದಲಿತರ ಸ್ಥಿತಿಗತಿ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ! ಕುವೆಂಪು ಜಯಂತಿ ಆಯೋಜಿಸುವವರು ಮುಖ್ಯವಾಗಿ ಈ ಬಗ್ಗೆ ಮಾತನಾಡಬೇಕಿತ್ತಲ್ಲವೆ? ಸುತ್ತಲೂ ಶೋಷಣೆ, ದೌರ್ಜನ್ಯಗಳನ್ನು ಪೋಷಿಸಿಕೊಂಡು ಬಂದು, ವಿಶ್ವಮಾನವ ಸಂದೇಶವನ್ನು ಹೊತ್ತು ಮೆರೆಸಿದರೆ ಏನುಪಯೋಗ?

ಕುವೆಂಪು ಸರಳ ವಿವಾಹ ಉಪದೇಶಿಸುವುದರ ಹಿಂದೆ ವಿನಾ ಕಾರಣ ಖರ್ಚು ಮತ್ತು ವರದಕ್ಷಿಣೆ ವಿರೋಧಿಸುವ ಉದ್ದೇಶವಿತ್ತು. ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಹಾಸ್ವಾಮಿಗಳು kuvempuಅದ್ಧೂರಿಯಾಗಿ ನಡೆಯುವ ಮದುವೆಗಳಿಗೆ ತಾವು ಹೋಗುವುದಿಲ್ಲ ಅಥವಾ ವರದಕ್ಷಿಣೆ ಪಡೆದ/ನೀಡಿದ ವಿವಾಹಗಳಿಗೆ ಹೋಗುವುದಿಲ್ಲ ಎಂದು ಘೋಷಿಸಲು ಸಾಧ್ಯವೇ? ಅದು ಸಾಧ್ಯವಾಗಿದ್ದರೆ, ತಾವೇ ಮುಂದೆ ನಿಂತು ಮುತುವರ್ಜಿಯಿಂದ ತಮ್ಮ ಮಠದ ಆಶ್ರಯದಲ್ಲಿ ಅದ್ಧೂರಿ ಕಲ್ಯಾಣ ಮಂಟಪಗಳನ್ನು ಕಟ್ಟಿಸುತ್ತಿರಲಿಲ್ಲ.

ಬೇರೆ ಸಮುದಾಯಗಳ ಹಿತ ಒತ್ತಿಟ್ಟಿಗಿರಲಿ, ತಮ್ಮ ಮಠ ಪ್ರತಿನಿಧಿಸುವ ಸಮುದಾಯದ ಬಡ ಕುಟುಂಬಗಳ ಸ್ಥಿತಿಗತಿ ಬಗ್ಗೆ ಒಮ್ಮೆ ಯೋಚಿಸಬೇಕಲ್ಲವೆ? ವರದಕ್ಷಿಣೆ ಪಿಡುಗಿನಿಂದ ಪೋಷಕರು ಹತಾಶರಾಗಿದ್ದಾರೆ. ಬಡ ಗುಮಾಸ್ತ ತನ್ನ ಆದಾಯದ ಮಿತಿ ಒಳಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡುವ ಸ್ಥಿತಿಯಲ್ಲಿಲ್ಲ. ಕುವೆಂಪು ತಮ್ಮ ಜನಾಂಗದವರೆಂಬ ಹೆಮ್ಮೆಗೆ ಒಂದು ಅರ್ಥ ಬರಬೇಕೆಂದರೆ ಕನಿಷ್ಟ ಪಕ್ಷ ಈ ಸಮುದಾಯ ಸರಳ ವಿವಾಹದ ಕಡೆ ಯೋಚಿಸಬೇಕಲ್ಲವೆ? ಅದ್ಧೂರಿಯಾಗಿ ಕುವೆಂಪು ಜಯಂತಿ ಕಾರ್ಯಕ್ರಮ ಮಾಡುವ ಶ್ರೀಗಳು ಇತ್ತ ಸ್ವಲ್ಪ ಯೋಚಿಸಲಿ. ಇಲ್ಲವಾದರೆ, ’ವಿಶ್ವಮಾನವ ಸಂದೇಶ ಸಾರಿದ್ದೂ ನಮ್ಮ ಒಕ್ಕಲಿಗ ಕವಿಯೇ’ ಎಂಬ ಹೆಮ್ಮೆ ಪಡಲು ಅಂತಹದೊಂದು ಸಮಾರಂಭ ಅವಕಾಶ ಮಾತ್ರ ಆದೀತು. ಅಂದಹಾಗೆ ಈ ಹೆಮ್ಮೆಯೂ ವಿರೋಧಾಭಾಸಕ್ಕೆ ಪ್ರಬಲ ಉದಾಹರಣೆ!