ಕೊಟ್ಟೂರಿನಲ್ಲಿ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಸ್ನೇಹಿತರೇ,

ವರ್ತಮಾನ.ಕಾಮ್ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹತ್ತನೇ ಕಾರ್ಯಕ್ರಮದ ಸಂಭ್ರಮ. ಪ್ರಾಮಾಣಿಕತೆ ಮತ್ತು ಆದರ್ಶಗಳೆಂಬ ಪದಗಳು ತುಟ್ಟಿಯೂ, ಮತ್ತು ಅವನ್ನು ವೈಯಕ್ತಿಕ ನೆಲೆಯಲ್ಲಿ ಪಾಲಿಸುವುದೇ ಸವಾಲಾಗಿರುವ ಇಂದಿನ ದೌರ್ಭಾಗ್ಯಕರ ಸಂದರ್ಭದಲ್ಲಿ, ತಮ್ಮ ನಡೆನುಡಿಯಲ್ಲಿ ಕನಿಷ್ಟ ಮಟ್ಟದ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನಾದರೂ ಹೊಂದಿರುವ ಯುವ ತಲೆಮಾರಿನ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಆಗಸ್ಟ್ 30-31, 2014) ಅದರ ತವರಿನಲ್ಲಿ ನಡೆಯುತ್ತಿದೆ. kotturuವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ಎಂದಿನಂತೆ ವರ್ತಮಾನ ಬಳಗದ ಹಲವಾರು ಮಿತ್ರರೂ ಅದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಎರಡೂ ದಿನ ಉಚಿತ ಊಟ-ತಿಂಡಿ-ಕಾಫಿ-ಟೀ ವ್ಯವಸ್ಥೆಯಿದೆ. ಹಾಗೆಯೇ ಶನಿವಾರ ರಾತ್ರಿಗೆ ಉಚಿತ ವಸತಿಯೂ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬರುವವರು ಯಾವುದಕ್ಕೂ ಒಂದು ಮಾತನ್ನು ಕೊನೆಯ ಚಿತ್ರದಲ್ಲಿರುವ ಫೋನ್ ನಂಬರ್‌ಗಳಲ್ಲಿ ಯಾವುದಕ್ಕಾದರೂ ಸಂಪರ್ಕಿಸಿ ಅವರಿಗೆ ತಿಳಿಸಿದರೆ ಅವರಿಗೂ ವ್ಯವಸ್ಥೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಎಷ್ಟೇ ಜನ ಹೇಳದೇ ಬಂದರೂ ಕೊಟ್ಟೂರಿನಲ್ಲಿ ವ್ಯವಸ್ಥೆ ಮಾಡಲು ಈ ಬಳಗ ಶಕ್ತವಿದೆ ಎನ್ನಿಸುತ್ತದೆ. (ನನಗೆ ಗೊತ್ತಿರುವ ಹಾಗೆ ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಹತ್ತಾರು ಜನ ಸಮಾನಮನಸ್ಕರು ಹಂಚಿಕೊಳ್ಳುತ್ತಾರೆ. ನಿಮಗೆ ಶಕ್ಯವಿದ್ದಲಿ ನೀವೂ ಸ್ವಲ್ಪ ಧನಸಹಾಯ ಮಾಡಬಹುದು. ಕೆಲವು ಜನರ ಮೇಲೆ ಬೀಳುವ ಹೆಚ್ಚಿನ ಹೊರೆಯನ್ನು ಅದು ತಗ್ಗಿಸಲು ಸಹಾಯಕವಾಗಬಹುದು.)

ಆಗಲೇ ಹೇಳಿದಂತೆ, ವರ್ತಮಾನ ಬಳಗದ ಹಲವು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನನಗೆ ತಪ್ಪಿಸಲಾಗದ ಪಕ್ಷದ ಕಾರ್ಯಕ್ರಮವೊಂದು ಇರುವುದರಿಂದ ಮೊದಲ ದಿನ ಬರಲಾಗದು. ಆದರೆ ಎರಡನೆ ದಿನ ಬೆಳ್ಳಂಬೆಳಗ್ಗೆಯೇ ಅಲ್ಲಿಗೆ ಬರಬಹುದು. ಕರ್ನಾಟಕದ ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ-ರಾಜಕೀಯವನ್ನು ಗುಣಾತ್ಮಕ ನೆಲೆಯಲ್ಲಿ ಕಟ್ಟಲು ಪ್ರಯತ್ನಿಸುತ್ತಿರುವವರೊಡನೆ ಒಡನಾಡುವುದು ಯಾವಾಗಲೊ ಒಮ್ಮೊಮ್ಮೆ ದೊರಕುವ ಅವಕಾಶ. ಕಳೆದುಕೊಳ್ಳುವ ಮನಸ್ಸಿಲ್ಲ.

ನಮಸ್ಕಾರ,
ರವಿ

naavunammalli-2014-1
naavunammalli-2014-2
naavunammalli-2014-3
naavunammalli-2014-4

Leave a Reply

Your email address will not be published. Required fields are marked *