Monthly Archives: December 2011

ಯಡಿಯೂರಪ್ಪನ ಯಾಗ ಮತ್ತು ನರಸತ್ತ ನಾಗರೀಕ ಸಮಾಜ

ಪ್ರಿಯ ಮಿತ್ರರೆ,

ಅತ್ಯಂತ ನೋವು ಮತ್ತು ಯಾತನೆಯಿಂದ ಈ ಲೇಖನ ಬರೆಯುತಿದ್ದೇನೆ. ಇಲ್ಲಿನ ಶಬ್ಧಗಳು ಕಟುವಾಗಿದ್ದರೆ, ಕ್ಷಮೆಯಿರಲಿ.

ನಿನ್ನೆ ಅಂದರೆ 19-12-11ರ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಭಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಗ ನಡೆಸಿದರು. ಇದಕ್ಕೆ ಕೊಟ್ಟ ಕಾರಣ ಮಾತ್ರ “ಲೋಕ ಕಲ್ಯಾಣಕ್ಕಾಗಿ” ಎಂಬುದಾಗಿತ್ತು. ಇದಕ್ಕೂ ಮುನ್ನ 17ರ ಶನಿವಾರ ಯಲಹಂಕ ಉಪನಗರದ ಬಳಿ 10 ಸಾವಿರ ಮಹಿಳೆಯರ ಜೊತೆಗೂಡಿ ಲಲಿತ ಸಹಸ್ರ ಕುಂಕುಮಾರ್ಚನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನ ನೀವು ಗಮನಿಸಿದ್ದೀರಿ.

ಯಡಿಯೂರಪ್ಪ ಮತ್ತು ಆ ಹತ್ತು ಸಹಸ್ರ ಮಹಿಳೆಯರು ತಮಗೆ ಅರ್ಥವಾಗದ ಮಂತ್ರಗಳನ್ನು ವದರುತ್ತಾ ಸಹಸ್ರಾರು ರುಪಾಯಿಗಳ ಕುಂಕುಮವನ್ನು ಗಾಳಿಗೆ ತೂರುವ ಬದಲು 10 ಸಾವಿರ ಗಿಡಗಳನ್ನ ಅದೇ ಯಲಹಂಕದ ಸುತ್ತ ಮತ್ತಾ ನೆಟ್ಟಿದ್ದರೆ ಅದು ಎಷ್ಟು ಅರ್ಥಪೂರ್ಣವಾಗಿರುತಿತ್ತು ಅಲ್ಲವೆ? ಒಮ್ಮೆ ಯೋಚಿಸಿ.

ಮುಖ್ಯಮಂತ್ರಿಯ ಗಾದಿಯಿಂದ ಇಳಿದ ಮೇಲೆ ಈ ಮನುಷ್ಯನ ವರ್ತನೆ, ಪ್ರತಿಕ್ರಿಯೆ, ದೇವಸ್ಥಾನಗಳ ಸುತ್ತಾಟ ಇವೆಲ್ಲಾ ಗಮನಿಸಿದರೆ, ಇವರು ಮಾನಸಿಕ ಅಸ್ವಸ್ಥ ಎಂಬ ಗುಮಾನಿ ಮೂಡುತ್ತಿದೆ. ಈಗ ಯಡಿಯೂರಪ್ಪನವರ ಪಾಲಿಗೆ ಮೂರ್ಖ ಜೊತಿಷಿಗಳೇ ಆಪ್ತ ಬಾಂಧವರಾಗಿದ್ದಾರೆ. ಮತ್ತೇ ಅಧಿಕಾರ ಪಡೆಯುವುದಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿರುವ ಯಡಿಯೂರಪ್ಪನವರಿಗೆ ಸದ್ಯಕ್ಕೆ ಬಾಕಿ ಉಳಿದಿರುವುದೊಂದೇ ಅದು ನರಬಲಿ. ಇಂತಹ ಮನೆಹಾಳತನದ ಸಲಹೆಯನ್ನು ಇವರಿಗೆ ಯಾರೂ ನೀಡಿಲ್ಲ.

ಇವರಿಗೆಲ್ಲಾ ಆತ್ಮಸಾಕ್ಷಿ, ಪ್ರಜ್ಷೆ ಎಂಬುದು ಇದ್ದಿದ್ದರೆ, ಜನ ನಾಯಕರಾಗಿ ಈ ರೀತಿ ವರ್ತಿಸುತ್ತಿರಲಿಲ್ಲ. ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಯಾವ ಮುಖ್ಯ ಮಂತ್ರಿಯೂ ಅಲ್ಲಿಗೆ ಬೇಟಿ ನೀಡಲಿಲ್ಲ. ಬೇಟಿ ನೀಡದಿದ್ದರೂ ಯಾಕೆ ಅಧಿಕಾರ ಕಳೆದುಕೊಂಡೆವು ಎಂಬುದನ್ನ ಯಾವ ಮುಖ್ಯಮಂತ್ರಿಯೂ ಆಲೋಚಿಸಲಿಲ್ಲ. ಇದು ಈ ನಾಡಿನ ವೈಚಾರಿಕ ಪ್ರಜ್ಙೆಗೆ ಗರ ಬಡಿದ ಸಂಕೇತವೇ? ನನಗಿನ್ನೂ ಅರ್ಥವಾಗಿಲ್ಲ.

ಎರಡು ತಿಂಗಳ ಹಿಂದೆ ಯಡಿಯೂರಪ್ಪನವರ  ಆಪ್ತರಾದ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಚಾಮರಾಜನಗರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇರಳದಿಂದ ಪುರೋಹಿತರನ್ನು ಕರೆಸಿ ಯಜ್ಞ ಯಾಗ ಮಾಡಿದರು. ಲಕ್ಷಾಂತರ ರೂಪಾಯಿಯ ತುಪ್ಪ ಬೆಣ್ಣೆ, ರೇಷ್ಮೆ ಬಟ್ಟೆಗಳನ್ನ ಬೆಂಕಿಗೆ ಹಾಕಿ ಆಹುತಿ ಮಾಡಿದರು. ನಾಡಿನ ಜನಪ್ರತಿನಿಧಿಗಳಾಗಿದ್ದುಕೊಂಡು, ಸಚಿವರಾಗಿ ಇಂತಹ ಅರ್ಥಹೀನ ಆಚರಣೆಗಳ ಮಾಡುವ ಮುನ್ನ ಈ ಮೂರ್ಖರು ಒಮ್ಮೆ ಉತ್ತರ ಕರ್ನಾಟಕದ ಸ್ಥಿತಿ ಏನಾಗಿದೆ ಎಂದು ನೋಡಿ ಬಂದಿದ್ದರೆ ಚೆನ್ನಾಗಿರುತಿತ್ತು. ಅಲ್ಲಿಯ ಬದುಕು ಅರ್ಥವಾಗುತಿತ್ತು

ಕಳೆದ ಹತ್ತು ವರ್ಷಗಳ ನಂತರ ಉತ್ತರ ಕರ್ನಾಟಕ ಭೀಕರ ಬರಗಾಲದಲ್ಲಿ ತತ್ತರಿಸುತ್ತಿದೆ. ಬಿಜಾಪುರ ಜಿಲ್ಲೆಯಲ್ಲಿ ಈ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆ ಬಿದ್ದಿದೆ ಎಂದರೆ ನೀವು ನಂಬಲಾರರಿ. ಅಲ್ಲಿನ ಜನ ತಮಗೆ ಹಾಗೂ ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ತಿನ್ನುವ ಅನ್ನ ಮತ್ತು ಮೇವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸ್ಥಿತಿವಂತ ರೈತರು ತಮ್ಮ ದನ ಕರುಗಳನ್ನ ಮೇವು ನೀರು ಇರುವ ಪ್ರದೇಶಗಳ ನೆಂಟರ ಮನೆಗಳಿಗೆ ಸಾಗಿಸುತಿದ್ದಾರೆ, ಏನೂ ಇಲ್ಲದವರು ಗೋವಾ ಹಾಗೂ ಕೇರಳದ ಕಸಾಯಿಖಾನೆಗಳಿಗೆ ಅಟ್ಟುತಿದ್ದಾರೆ. ಅವುಗಳ ಮೇಲಿನ ಪ್ರೀತಿ ಮತ್ತು ಭಾವುಕತೆಯಿಂದ ಮಾರಲಾಗದ ಅಸಹಾಯಕರು ಮೂಕ ಪ್ರಾಣಿಗಳನ್ನ ಬಟ್ಟ ಬಯಲಿನಲ್ಲಿ ಬಿಟ್ಟು ರಾತ್ರೋರಾತ್ರಿ ಕೂಲಿ ಅರಸಿಕೊಂಡು ಪೂನಾ, ಮುಂಬೈ ರೈಲು ಹತ್ತುತಿದ್ದಾರೆ. ಡಿಸಂಬರ್ ಚಳಿಗಾದಲ್ಲಿ ಕೂಡ ಉರಿಯುತ್ತಿರುವ ಸೂರ್ಯನ ಬಿಸಿಲಿಗೆ ಮೇವು ನೀರಿಲ್ಲದ ಈ ಮೂಕ ಪ್ರಾಣಿಗಳು ನಿಂತಲ್ಲೆ ನೆಲಕ್ಕೊರುಗುತ್ತಿವೆ.

ಕಳೆದ ಒಂದು ತಿಂಗಳಿನಿಂದ ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡದ ಗ್ರಾಮಾಂತರ ಪ್ರದೇಶಗಳನ್ನು ಸುತ್ತಿ ಬಂದ ಮೇಲೆ ನನಗೆ,  ಜನಪ್ರತಿನಿಧಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಇಲ್ಲಿನ ಜನತೆ ಕಪಾಳಕ್ಕೆ ಇನ್ನೂ ಬಾರಿಸಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದ ಜನಪದ ಗೀತೆಗಳು ನೆನಾಪಾಗುತ್ತಿವೆ.

1) ಹಾದೀಲಿ ಹೋಗುವವರೇ ಹಾಡೆಂದು ಕಾಡಬೇಡಿ
ಇದು ಹಾಡಲ್ಲ ನನ್ನೊಡಲುರಿ ದೇವರೆ
ಇದು ಬೆವರಲ್ಲ ನನ್ನ ಕಣ್ಣೀರು

2) ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
ಒಡಲ ಬೆಂಕೀಲಿ ಹೆಣ ಬೆಂದೋ ದೇವರೆ
ಬಡವರಿಗೆ ಸಾವ ಕೊಡಬೇಡೋ

3) ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೋ
ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೋ

4) ಕಣಜ ಬೆಳೆದ ಮನೆಗೆ ಉಣಲಾಕೆ ಕೂಳಿಲ್ಲ
ಬೀಸಾಕ ಕವಣೆ ಬಲವಿಲ್ಲ ಕೂಲಿಯವರ
ಸುಡಬೇಕ ಜನುಮ ಸುಖವಿಲ್ಲ

ಗೋರಕ್ಷಣೆಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಅವುಗಳ ಪಕ್ಕ ನಿಂತು ಚಿತ್ರ ತೆಗೆಸಿಕೊಳ್ಳುವ ಕಪಟ ಸ್ವಾಮಿಗಳಿಗೆ, ನಕಲಿ ರೈತರ ಹೆಸರಿನ ಅಸ್ತಿತ್ವಕ್ಕೆ ಬಂದ ಸಾವಯವ ಕೃಷಿ ಮಿಷನ್ ಮೂಲಕ ರೈತರಲ್ಲದವರಿಗೆ ವರ್ಷಕ್ಕೆ ನೂರಾರು ಕೋಟಿ ಹಣ ನೀಡುತ್ತಿರುವ ಸರ್ಕಾರದ ಕ್ರಮವನ್ನು ನಾಗರೀಕ ಸಮಾಜದಲ್ಲಿ ಬದುಕುತ್ತಿರುವ ನಾವು ಈಗಲಾದರೂ ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ, ಈ ಸಮಾಜವನ್ನು ನರಸತ್ತ ನಾಗರೀಕ ಸಮಾಜವೆಂದು ನಾವೆಲ್ಲರೂ ಒಕ್ಕೊರಲಿನಿಂದ ಘೋಷಿಸಿ ಕೊಳ್ಳಬೇಕಾಗಿದೆ.

ಸಮ್ಮನೆ ಒಮ್ಮೆ ತಣ್ಣಗೆ ಕುಳಿತು ಯೋಚಿಸಿ. ಈ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ದೇಗುಲಗಳಿಗೆ, ಮಠ ಮಾನ್ಯಗಳ ಬೇಟಿಗಾಗಿ ಖರ್ಚು ಮಾಡಿದ ಪ್ರಯಾಣದ ವೆಚ್ಚ, ಹಾಗೂ ಇವುಳಿಗೆ ನೀಡಿದ ಅನುದಾನ ಇದನ್ನು ಲೆಕ್ಕ ಹಾಕಿದರೆ, ನೂರು ಕೋಟಿ ರೂಪಾಯಿ ದಾಟಲಿದೆ.

ಇದೇ ಹಣವನ್ನ ದನಕರುಗಳ ಮೇವಿಗಾಗಿ ಇಂದು ಉತ್ತರ ಕರ್ನಾಟಕದಲ್ಲಿ ವಿನಿಯೋಗಿಸಿದ್ದರೆ,  ದೇವಸ್ಥಾನ, ಮಠ ಬೇಟಿ ನೀಡಿದ್ದಕ್ಕೆ ಹಾಗು ಹೋಮ ಹವನ ಮಾಡಿಸಿದ್ದಕ್ಕೆ ಸಿಗುವ ಫಲಕ್ಕಿಂತ ಹೆಚ್ಚಿನ ಪುಣ್ಯ ಯಡಿಯೂರಪ್ಪನವರಿಗೆ ಸಿಗುತ್ತಿತ್ತೇನೊ?

ಡಾ. ಎನ್. ಜಗದೀಶ್ ಕೊಪ್ಪ

ಮಾಯಾ-ಮುಲಾಯಮ್ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ “ಹಿಂದ” ರಾಜಕೀಯ

-ಬಿ.ಶ್ರೀಪಾದ ಭಟ್

“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ

ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು   ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ.

ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ  ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ  ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್.

ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು  ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ  ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ  ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ.

ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ  ಅಂಬೇಡ್ಕರ್ ಅವರ  “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ  ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ.

ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ.

20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ.

Three Gorges Dam

ಜೀವನದಿಗಳ ಸಾವಿನ ಕಥನ – 16

-ಡಾ. ಎನ್. ಜಗದೀಶ್ ಕೊಪ್ಪ

ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳ ಪ್ರವಾಹ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟಗಳು ಎದುರುಸುತ್ತಿರುವ ಅತಿ ದೊಡ್ಡ ನೈಸರ್ಗಿಕ ವಿಕೋಪ. ಇದಕ್ಕಾಗಿ ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ವ್ಯಯವಾಗುತ್ತಿದೆ.

ಭಾರತದ ಪೂರ್ವ ಭಾಗದ ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಮಿಜೋರಾಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ರಹ್ಮಪುತ್ರ ಮತ್ತು ಗಂಗಾ ನದಿಗಳ ಪ್ರವಾಹದಿಂದ ಪ್ರತಿ ವರ್ಷ ಹಲವಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗುತ್ತಿದೆ.

ಇಂತಹ ದಯನೀಯ ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನ ಎಲ್ಲೆಡೆ ನಿಯಮಿತವಾಗಿ ನಡೆಯುತ್ತಿರವ ನೈಸರ್ಗಿಕ ದುರಂತವಿದು.

ಅಮೇರಿಕಾ ದೇಶವೊಂದೇ ತನ್ನ ಆರ್ಮಿ ಕೋರ್‍ಸ್ ಇಂಜಿನಿಯರ್ಸ್ ಸಂಸ್ಥೆ ಮೂಲಕ ತನ್ನ ದೇಶದ 500 ಅಣೆಕಟ್ಟುಗಳನ್ನು ಪ್ರವಾಹದಿಂದ ಸಂರಕ್ಷಿಸಲು ಪ್ರತಿ ವರ್ಷ 25 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ. 1937 ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ವಿಶೇಷ ಮಸೂದೆಯನ್ನು ಜಾರಿಗೆ ತಂದ ಅಮೇರಿಕಾ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಬಜೆಟ್ಟಿನ್ನಲ್ಲಿ ಹಣವನ್ನು ಮೀಸಲಾಗಿಡುತ್ತಿದೆ. ಈ ವೆಚ್ಚ ಇತ್ತೀಚೆಗಿನ ವರ್ಷಗಳಲ್ಲಿ ದ್ವಿಗುಣಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭಾರತ ಸರ್ಕಾರ ಕೂಡ 1953 ರಿಂದ 1980 ರವರೆಗೆ 40 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಆನಂತರ ಕಳೆದ 25 ವರ್ಷಗಳಲ್ಲಿ ಈ ವೆಚ್ಚ ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನದಿಗಳ ಪ್ರವಾಹಕ್ಕೆ ಮಳೆಯಷ್ಟೇ ಕಾರಣ ಎಂದು ನಾವು ನಂಬಿದ್ದೇವೆ, ಅದೇ ರೀತಿ ಸರ್ಕಾರಗಳೂ ಕೂಡ ನಮ್ಮನ್ನು ನಂಬಿಸಿಕೊಂಡು ಬಂದಿವೆ. ಜಾಗತಿಕ ತಾಪಮಾನದಿಂದ ಏರುತ್ತಿರುವ ಉಷ್ಣತೆ, ಇದರಿಂದಾಗಿ ಹಿಮಗೆಡ್ಡೆಗಳು ಕರಗುತ್ತಿರುವುದು, ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಹೀರುತಿದ್ದ ಹಳ್ಳ ಕೊಳ್ಳಗಳ ನಾಶ, ನಗರೀಕರಣದಿಂದ ಕಣ್ಮರೆಯಾಗುತ್ತಿರುವ ಅರಣ್ಯ, ಕೆರೆಗಳು ಇಂತಹ ಅಂಶಗಳು ನಮ್ಮ ಗಣನೆಗೆ ಬರುವುದೇ ಇಲ್ಲ. ಜೊತೆಗೆ, ಮಳೆಗಾಲದಲ್ಲಿ ನದಿಯ ಇಕ್ಕೆಲಗಳು ನೀರಿನಲ್ಲಿ ಕೊಚ್ಚಿ ಹೋಗುವ ಪರಿಣಾಮ ನದಿಗಳಲ್ಲಿ ಹೂಳು ಶೇಖರವಾಗತ್ತಾ ಹೋಗಿ ನದಿಯ ಆಳ ಕಡಿಮೆಯಾದಂತೆ ಪ್ರವಾಹದ ನೀರು ಸುತ್ತ ಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ.

ಅಣೆಕಟ್ಟುಗಳ ಮೂಲಕ ಮತ್ತು ನದಿಯ ದಿಬ್ಬಗಳನ್ನು ಎತ್ತರಿಸುವುದರ ಮೂಲಕ ಪ್ರವಾಹ ನಿಯಂತ್ರಣಕ್ಕೆ ಪ್ರಯತ್ನ ನಡೆದಿದ್ದರೂ ಕೂಡ ಕೆಲೆವೆಡೆ ಈ ಕಾರ್ಯ ಅವೈಜ್ಙಾನಿಕವಾಗಿದ್ದು ನದಿ ತೀರದ ಜನವಸತಿ ಪ್ರದೇಶದ ನಾಗರೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಜಗತ್ತಿನೆಲ್ಲೆಡೆ ನಿರ್ಮಿಸಲಾಗಿರುವ ಅಣೆಕಟ್ಟುಗಳು ಕುಡಿಯುವ ನೀರಿಗಾಗಿ ಇಲ್ಲವೇ ನೀರಾವರಿ ಯೋಜನೆಗಾಗಿ ನಿರ್ಮಿಸಿರುವುದರಿಂದ, ಪ್ರವಾಹ ನಿಯಂತ್ರಣಕ್ಕಾಗಿ ನಿರ್ಮಿಸಿದ ಅಣೆಕಟ್ಟುಗಳು ಬಹುತೇಕ ಕಡಿಮೆ ಎಂದು ಹೇಳಬಹುದು. ಕುಡಿಯುವ ನೀರು ಇಲ್ಲವೆ, ನೀರಾವರಿ ಅಥವಾ ಜಲವಿದ್ಯುತ್‌ಗಾಗಿ ಜಲಾಶಯಗಳಲ್ಲಿ ಯಾವಾಗಲೂ ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದರಿಂದ ಪ್ರವಾಹದಲ್ಲಿ ಹರಿದು ಬಂದ ನೀರನ್ನು ಹಾಗೆಯೇ ಹೊರಬಿಡಲಾಗುತ್ತದೆ. ಇದರ ಪರಿಣಾಮವಾಗಿ ನದಿ ಕೆಳ ಪಾತ್ರದ ಜನಕ್ಕೆ ನದಿಗಳ ಪ್ರವಾಹವೆಂಬುದು ಶಾಪವಾಗಿದೆ.

ಒರಿಸ್ಸಾದ ಮಹಾನದಿಯ ಪ್ರವಾಹ ನಿಯಂತ್ರಣಕ್ಕಾಗಿ ಭಾರತದಲ್ಲಿ ಪ್ರಥಮವಾಗಿ ಹಿರಾಕುಡ್ ಅಣೆಕಟ್ಟನ್ನು ನಿರ್ಮಿಸಲಾಯಿತು ಆದರೆ, 1980 ರ ಪ್ರವಾಹವನ್ನು ನಿಯಂತ್ರಿಸಲಾಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಇಂತಹದ್ದೇ ಇನ್ನೊಂದು ದುರಂತ 1978 ರಲ್ಲಿ ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟಿನಲ್ಲೂ ಸಂಭವಿಸಿ 65 ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು.

1986 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯದ ರಾಜಧಾನಿ ಸಾಕ್ರೊಮೆಂಟೊ ನಗರದ 5 ಲಕ್ಷ ಜನತೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಮಳೆಯಿಂದಾಗಿ ಅಲ್ಲಿನ ಪಾಲ್ ಸೋಮ್ ಜಲಾಶಯ ಇಂಜಿನೀಯರಗಳ ನಿರೀಕ್ಷೆಯನ್ನು ಮೀರಿ ವಾರಕ್ಕೆ ಬದಲಾಗಿ ಕೇವಲ 36 ಗಂಟೆಯ ಅವಧಿಯಲ್ಲಿ ತುಂಬಿ ಹೋಗಿತ್ತು.

ಚೀನಾ ದೇಶದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ರೂಪುಗೊಂಡ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾದ ತ್ರೀ ಗಾರ್ಜಸ್ ಜಲಾಶಯದ ಸ್ಥಿತಿ ಕೂಡ ಇವುಗಳಿಗಿಂತ ಬೇರೆಯಾಗಿಲ್ಲ. ಪ್ರವಾಹದ ಸಂದರ್ಭದಲ್ಲಿ ಮತ್ತು ಜಲಾಶಯದ ಹಿನ್ನೀರಿನಿಂದಾಗಿ ಸುಮಾರು 10 ಲಕ್ಷ ಮಂದಿ ನಿರ್ವಸತಿಗರಾಗಿದ್ದಾರೆ. ಯಾಂಗ್ಟೇಜ್ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟಿನ ಕೆಳಭಾಗದ 5 ಲಕ್ಷ ಮಂದಿ ರೈತರು ಪ್ರವಾಹದ ಸಮಯದಲ್ಲಿ ತಮ್ಮ ಆಸ್ತಿ, ಮನೆಗಳನ್ನು ಕಳೆದುಕೊಂಡ ಪರಿಣಾಮ ಅವರ ಬದುಕು ಮೂರಾಬಟ್ಟೆಯಾಗಿದೆ.

ನಮ್ಮ ಅಭಿವೃದ್ಧಿಯ ವಾಖ್ಯಾನಗಳನ್ನು, ಚಿಂತನೆಗಳನ್ನು ಮರುಚಿಂತನೆಗೆ ಒಳಪಡಿಸಬೇಕಾದ ಅವಶ್ಯಕತೆ ಇದ್ದು, ನಮ್ಮ ನದಿಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗಿದೆ. ನದಿಯ ಮೊದಲ ಪ್ರವಾಹದ ಮೂಲ ಹಿಡಿದು ಸಾಗಿದರೆ, ಸ್ವಚ್ಛಂದ ನದಿಯ ಹರಿಯುವಿಕೆಗೆ ನಮ್ಮ ಅಭಿವೃದ್ಧಿಯ ಕೆಲಸಗಳು ಎಲ್ಲೆಲ್ಲಿ ಅಡ್ಡಿಯಾಗಿವೆ ಎಂಬುದು ನಮ್ಮ ಅರಿವಿಗೆ ಬರುವ ಸಾಧ್ಯತೆಗಳಿವೆ. ಅದು ಅರಣ್ಯ ನಾಶವಿರಬಹುದು, ಕೆರೆ, ಹಳ್ಳ-ಕೊಳ್ಳಗಳ ನಾಶವಿರಬಹುದು ಅಥವಾ ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪ್ರಮಾಣವಿರಬಹುದು, ಇವುಗಳನ್ನು ನೋಡುವ, ತಿಳಿಯುವ ಮನಸ್ಸುಗಳು ಬೇಕಷ್ಟೆ.

’ಕುಡಿಯುವ ನೀರಿಗಾಗಿ ಅಣೆಕಟ್ಟುಗಳ” ಎಂಬ ಯೋಜನೆಗಳು ಎಂಬುದು ಜಾಗತಿಕ ಮಟ್ಟದ ಅತಿ ದೊಡ್ಡ ಪ್ರಹಸನವೆಂದರೆ ತಪ್ಪಾಗಲಾರದು. ಚೀನಾದಲ್ಲಿ ವಿಶೇಷವಾಗಿ ಜನಪದರಲ್ಲಿ ಒಂದು ಗಾದೆ ಪ್ರಚಲಿತದಲ್ಲಿದೆ, ’ನೀರು ಕುಡಿಯುವಾಗ ಋತುಮಾನಗಳನ್ನು ನೆನಪಿಡು,’ಎಂದು . ಪ್ರಕೃತಿಯ ಕೊಡುಗೆಯಾದ ನೀರಿನ ಬಗ್ಗೆ ಇರುವ ಕಾಳಜಿ ಇದರಲ್ಲಿ ಎದ್ದು ಕಾಣುತ್ತದೆ. ನೀರು ಮಾರಾಟದ ಸರಕಾಗಿರುವಾಗ ಇಂತಹ ಆಲೋಚನೆಗಳು ಈಗ ಅಪ್ರಸ್ತುತವಾಗಿವೆ.

ದಶಕ ಹಿಂದೆ ಜಗತ್ತಿನಲ್ಲಿ ಇದ್ದ ದೊಡ್ಡ ಅಣೆಕಟ್ಟುಗಳು ಅಂದರೆ, 100 ಅಡಿ ಎತ್ತರದ 3602 ಅಣೆಕಟ್ಟುಗಳಲ್ಲಿ ಅಮೇರಿಕವನ್ನು ಹೊರತು ಪಡಿಸಿದರೆ, ಉಳಿದ ಅಣೆಕಟ್ಟುಗಳು ಕುಡಿಯುವ ನೀರಿಗಿಂತ ನೀರಾವರಿ ಯೋಜನೆಗಾಗಿ, ಮತ್ತು ಜಲವಿದ್ಯುತ್‌ಗಾಗಿ ರೂಪುಗೊಂಡಂತಹವು. ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ಭಾರತ, ಚೀನಾ, ಜಪಾನ್, ಅಮೇರಿಕ ದೇಶಗಳಲ್ಲಿ ಅಣೆಕಟ್ಟುಗಳು ಯಾವ ಉದ್ದೇಶಕ್ಕೆ ಬಳಕೆಯಾಗಿವೆ ಎಂಬ ವಿವರ ಈ ಕೆಳಗಿನಂತಿದೆ:

  1. ಭಾರತದಲ್ಲಿ 20 ನೇ ಶತಮಾನದ ಅಂತ್ಯಕ್ಕೆ ಇದ್ದ 324 ದೊಡ್ಡ ಅಣೆಕಟ್ಟುಗಳ ಪೈಕಿ ನೀರಾವರಿಗೆ 44, ಜಲವಿದ್ಯುತ್ಗಾಗಿ 22, ಪ್ರವಾಹ ನಿಯಂತ್ರಣಕ್ಕೆ 1, ಕುಡಿಯುವ ನೀರಿಗಾಗಿ 4 ಅಣೆಕಟ್ಟುಗಳಿದ್ದವು.
  2. ಚೀನಾದಲ್ಲಿರುವ 1336 ಅಣೆಕಟ್ಟುಗಳಲ್ಲಿ ನೀರಾವರಿಗೆ 84, ವಿದ್ಯುತ್ ಉತ್ಪಾದನೆಗೆ 44, ಪ್ರವಾಹ ನಿಯಂತ್ರಣಕ್ಕೆ 29, ಹಾಗೂ ಕುಡಿಯುವ ನೀರಿಗಾಗಿ 1 ಅಣೆಕಟ್ಟು ಬಳಕೆಯಾಗಿದೆ.
  3. ಜಪಾನ್ ದೇಶದಲ್ಲಿ ಇರುವ 800 ಅಣೆಕಟ್ಟುಗಳಲ್ಲಿ 43 ನೀರಾವರಿಗೆ, 45 ವಿದ್ಯುತ್ ಉತ್ಪಾದನೆಗೆ, 43 ಪ್ರವಾಹ ನಿಯಂತ್ರಣಕ್ಕೆ, ಮತ್ತು 25 ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ.
  4. ಅಮೇರಿಕಾದಲ್ಲಿರುವ 1146 ಅಣೆಕಟ್ಟುಗಳಲ್ಲಿ ನೀರಾವರಿಗೆ 29, ವಿದ್ಯುತ್ ಉತ್ಪಾದನೆಗೆ 31, ಕುಡಿಯುವ ನೀರಿಗಾಗಿ 44 ಮತ್ತು ಮನರಂಜನೆ ಹಾಗೂ ಜಲಕ್ರೀಡೆಗಾಗಿ 4 ಅಣೆಕಟ್ಟುಗಳು ಬಳಕೆಯಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ 230 ಕೋಟಿಗೂ ಅಧಿಕ ಮಂದಿ ಕುಡಿಯುವ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ. ಇವರಲ್ಲಿ 170 ಕೋಟಿ ಜನ ಗ್ರಾಮಾಂತರ ಪ್ರದೇಶದ ವಾಸಿಗಳಾಗಿದ್ದಾರೆ. ಇವರುಗಳಿಗೆ ಕುಡಿಯುವ ನೀರು ಕೊಡಲು ಜಗತ್ತಿನಾದ್ಯಂತ ಸರ್ಕಾರಗಳು ಇಂದಿಗೂ ಹೆಣಗಾಡುತ್ತಿವೆ.

ಅಸಹಜವಾಗಿ ಬೆಳೆಯುತ್ತಿರುವ ನಗರಗಳಿಂದಾಗಿ ಕುಡಿಯುವ ನೀರಿನ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಕೊಲ್ಕತ್ತಾ ನಗರದ ಜನಕ್ಕೆ ನೀರು ಒದಗಿಸಲು ಗಂಗಾ ನದಿಯ ನೀರನ್ನು ಫರಕ್ಕಾ ಜಲಾಶಯಕ್ಕೆ ತಿರುಗಿಸಿದ ಫಲವಾಗಿ ನದಿಯ ಕೆಳ ಪಾತ್ರದ ಬಂಗ್ಲಾದೇಶದ 80 ಲಕ್ಷ ಜನತೆ ಕುಡಿಯುವ ನೀರಿನಿಂದ ವಂಚಿತರಾದರು.

ಅಣೆಕಟ್ಟು ನಿರ್ಮಾಣವಾದ ನಂತರ ಕೆಳಗಿನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಅಂತರ್ಜಲ ಮಟ್ಟ ಕೂಡ ಕುಸಿಯುತ್ತದೆ ಇದರಿಂದಾಗಿ ಎಲ್ಲರೂ ನದಿಯ ನೀರನ್ನೇ ಆಶ್ರಯಿಸಬೇಕು. ನದಿ ನೀರನ್ನು ಸಂಸ್ಕರಿಸದೆ ಬಳಸಲಾಗದು.  ನೀರನ್ನು ನೇರವಾಗಿ ಜನತೆಗೆ ಸರಬರಾಜು ಮಾಡಿದ ಪರಿಣಾಮ ಬ್ರೆಜಿಲ್ ದೇಶದ ಸಾವೊ ಪ್ರಾನ್ಸಿಸ್ಕೊ ಜಲಾಶಯದ ಸಮೀಪದ ಪಟ್ಟಣಗಳಲ್ಲಿ ಮತ್ತು ಈಜಿಪ್ತ್ ನ ಅಸ್ವಾನ್ ಜಲಾಶಯದ ನೀರು ಕುಡಿದ ಸಾವಿರಾರು ಮಂದಿ ವಾಂತಿ- ಬೇಧಿಯಿಂದ ಮೃತಪಟ್ಟ ದಾಖಲೆಗಳು ಇತಿಹಾಸದಲ್ಲಿ ದಾಖಲಾಗಿವೆ.

(ಮುಂದುವರಿಯುವುದು)

ಮದನಘಟ್ಟವನ್ನು ಕಾಡುತ್ತಿದ್ದ ಭಾನಾಮತಿ

ತುಮಕೂರು ಬಳಿ ಮದನಘಟ್ಟ ಎಂಬ ಗ್ರಾಮ. ಆ ಗ್ರಾಮದಲ್ಲಿ ಕೆಲ ತಿಂಗಳಿಂದ ಭಾನಾಮತಿ ಕಾಟ. ಒಂದು ಕಡೆ ಸಣ್ಣ ಬೆಂಕಿಯೊಂದಿಗೆ ಪ್ರಾರಂಭವಾದ ಈ ಸಮಸ್ಯೆ ಇಡೀ ಊರನ್ನೇ ಸಂಕಷ್ಟಕ್ಕೆ ಸಿಲುಕಿಸಿತು. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಮೂಲ್ಯ ಆಸ್ತಿಪಾಸ್ತಿ ಹಾಳು ಮಾಡತೊಡಗಿತು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಕಾವಲು ಕಾಯಲು ಸಾದ್ಯವೇ? ಅದೂ ಭಾನಾಮತಿ ಎಂಬ ಅತಿಮಾನವ ಶಕ್ತಿಯ ಕಾಟ ತಡೆಯಲು ಸಾಧ್ಯವೇ?

ಒಂದು ದಿನ ಒಂದು ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ಮತ್ತೊಂದು ದಿನ ಒಬ್ಬರ ತೋಟದಲ್ಲಿದ್ದ ತೆಂಗಿನ ಮರಗಳನ್ನು ಸುಟ್ಟು ಹಾಕಿತು. ಮತ್ತೊಂದು ದಿನ ಇನ್ನೊಬ್ಬರ ಮನೆಯಲ್ಲಿನ ಬಟ್ಟೆಗಳನ್ನು ಸುಟ್ಟು ಹಾಕಿತು. ಯಾವಾಗ ಎಲ್ಲಿ ಬೆಂಕಿ ದಿಢೀರ್ ಹೊತ್ತಿಕೊಳ್ಳುತ್ತದೋ ಊರಿನ ಒಬ್ಬರಿಗೂ ಸುಳಿವು ಸಿಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಹೊತ್ತಿಕೊಳ್ಳುವ ಬೆಂಕಿಗೆ ಆಸ್ತಿಪಾಸ್ತಿ ನಷ್ಟವಾಗಿ ಇಡೀ ಊರು ಸಂಕಷ್ಟದಲ್ಲಿತ್ತು. ಊರ ದೇವರು ಮುನಿದಿರಬಹುದು ಎಂದು ಊರ ದೇವರ ಆಚರಣೆ ಮಾಡಿದರು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ಇತರೆ ದೇವರ ಪೂಜೆ ಪುನಸ್ಕಾರ, ಶಾಂತಿ ಇತ್ಯಾದಿ ಆಚರಣೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು. ಲಕ್ಷಾಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿತ್ತು. ಕೊನೆಗೆ ಊರೇ ಖಾಲಿ ಮಾಡುವ ನಿರ್ಧಾರಕ್ಕೂ ಬಂದರು.

ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಈ ಊರಿನ ಬಗ್ಗೆ ನಿಗಾ ಇಟ್ಟರು. ಆದರೂ ಸುಳಿವು ಸಿಗಲಿಲ್ಲ. ಒಟ್ಟಿನಲ್ಲಿ ಆಡಳಿತಕ್ಕೂ, ಊರಿಗೂ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಅದೊಂದು ದಿನ ನನ್ನ ಗೆಳೆಯ ಪತ್ರಕರ್ತರೊಬ್ಬರು ಈ ವಿಷಯ ನನಗೆ ತಿಳಿಸಿ ಈ ಸಮಸ್ಯೆ ಪರಿಹರಿಸುವಂತೆ ಕೋರಿದರು. ನಾನು ಒಪ್ಪಿ ಅಲ್ಲಿಗೆ ಹೊರಟೆ.

ನಾನು ಆ ಗ್ರಾಮ ಪ್ರವೇಶಿಸುವಷ್ಟರಲ್ಲಿ ತಹಸೀಲ್ದಾರರು, ಇಂಟೆಲಿಜೆನ್ಸ್ ಪೊಲೀಸರು ಅಲ್ಲಿ ನೆರೆದಿದ್ದರು. ಊರ ಮಂದಿಗೂ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯಬಹುದೆಂಬ ಕುತೂಹಲ.

ನಾನು ಊರನ್ನು ಆಮೂಲಾಗ್ರವಾಗಿ ಪರಿಶೀಲಿಸುತ್ತಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾಗಲೇ ನಮ್ಮ ಕಣ್ಣ ಮುಂದೆ ಮನೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು!

ಬೆಂಕಿ ಅಲ್ಲಿದ್ದ ತೆಂಗಿನಕಾಯಿ ರಾಶಿಯ ಮೇಲೆ ಹೊತ್ತಿಕೊಂಡಿತ್ತು. ಅದನ್ನು ನೋಡಿ ಎಲ್ಲರೂ ಅದನ್ನು ಆರಿಸುವ ಉಮೇದಿನಲ್ಲಿ ನೀರು ತೆಗೆದುಕೊಂಡು ಬಂದರು.

ನಾನು ಎಲ್ಲರನ್ನೂ ದೂರ ನಿಲ್ಲಿಸಿ, ಬೆಂಕಿಯನ್ನು ವಿವರವಾಗಿ ಪರಿಶೀಲಿಸಿದೆ. ಅಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿತ್ತು. ಅಲ್ಲದೆ ಬಟ್ಟೆಯೊಂದರ ಮೇಲಿಂದ ಬೆಂಕಿ ಹರಡಿತ್ತು. ಅಂದರೆ ಸೀಮೆಎಣ್ಣೆ ಬಟ್ಟೆಗೆ ಹಚ್ಚಿ ಬೆಂಕಿ ಸೃಷ್ಟಿಸಲಾಗಿದೆ ಎಂಬ ನಿರ್ಧಾರಕ್ಕೆ ಬಂದೆ. ಹಾಗೆಯೇ ಸುತ್ತಲೂ ಪರಿಶೀಲಿಸಿದಾಗ ಮನೆಯ ಹೊರಗಡೆ ಬೆಂಕಿ ಕಡ್ಡಿ ಹೊತ್ತಿಸಿ ಎಸೆದ ಬೆಂಕಿ ಕಡ್ಡಿಗಳಿದ್ದವು. ಅಲ್ಲಿಗೆ ಬೆಂಕಿಯ ಮೂಲ ಮನುಷ್ಯರೇ ಹೊರತು ಅತಿಮಾನವ ಶಕ್ತಿಗಳದ್ದಲ್ಲ ಎಂಬ ಖಚಿತ ತೀರ್ಮಾನಕ್ಕೆ ಬಂದೆ.

ಇನ್ನು ಆ ಬೆಂಕಿ ಹೊತ್ತಿರುವ ಕೆಲಸ ಮಾಡುತ್ತಿದ್ದವರು ಯಾರು ಎಂದು ಪತ್ತೆ ಮಾಡುವುದು ಮುಂದಿನ ಜವಾಬ್ದಾರಿ. ಗ್ರಾಮದ ಎಲ್ಲ ಜನರನ್ನೂ ಸಭೆ ಸೇರಿಸಿ ಪ್ರತಿಯೊಬ್ಬರನ್ನೂ ಮಾತನಾಡಿಸಿದೆ. ಯಾರ ಮೇಲೂ ಅನುಮಾನ ಬರಲಿಲ್ಲ. ಆದರೆ ಗ್ರಾಮಸ್ಥರಲ್ಲಿ ಕೊಂಚ ಹಿಂಜರಿಕೆ ಸೃಷ್ಟಿ ಮಾಡುವ ದೃಷ್ಟಿಯಿಂದ ಕೆಲವು ಪವಾಡಗಳ ಚಮತ್ಕಾರ ಪ್ರದರ್ಶಿಸಿದೆ. ವಶೀಕರಣ ವಿದ್ಯೆಯನ್ನು ಪ್ರದರ್ಶಿಸಿ ಅದರ ಮೂಲಕ ಸತ್ಯ ಬಯಲಿಗೆ ಎಳೆಯಬಹುದು ಎಂದು ಅವರಿಗೆ ಸೂಚ್ಯವಾಗಿ ವಿವರಿಸಿದೆ. ಆದರೂ ಭಾನಾಮತಿಯ ಹಿಂದಿನ ಶಕ್ತಿಗಳು ಯಾವುವು ಎಂದು ಗೊತ್ತಾಗಲಿಲ್ಲ.

ನಂತರ ಊರಿನಲ್ಲೆಲ್ಲ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸುತ್ತಾಡಿ ಬೆಂಕಿ ಹೊತ್ತಿರುವುದರಲ್ಲಿ ಏನಾದರೂ ಸಾಮ್ಯತೆ ಇದೆಯೇ ಎಂದು ಪರಿಶೀಲಿಸಿದೆ. ಅಂತಹ ಯಾವುದೇ ಸಂಗತಿ ಬಯಲಿಗೆ ಬರಲಿಲ್ಲ.

ಆದರೆ ಈ ಪ್ರಕ್ರಿಯೆಯಲ್ಲಿ ಒಬ್ಬ ಹುಡುಗಿ ನನ್ನನ್ನು ಎಲ್ಲ ಕಡೆಗೂ ಅನುಸರಿಸಿ ಬರುತ್ತಿರುವುದು ಗೊತ್ತಾಯಿತು.

ನಾನು ಆಕೆಯನ್ನು ಹಿಡಿದು ಪ್ರಶ್ನಿಸಿದೆ. ಭಾನಾಮತಿ ಕೈವಾಡ ಹೊರಗೆ ಬಂದಿತು. ನನ್ನನ್ನು ಅನುಸರಿಸಿ ಬರುತ್ತಿದ್ದ ಹುಡುಗಿಗೂ ಈ ಪ್ರಕರಣಗಳಿಗೂ ಸಂಬಂಧವಿತ್ತು. ಆ ಹುಡುಗಿ ಮತ್ತು ಯುವಕನೊಬ್ಬ ಸೇರಿ ಅವರ ಕುಟುಂಬದ ಸಮಸ್ಯೆಯನ್ನು ಇಡೀ ಊರಿನ ಸಮಸ್ಯೆಯನ್ನಾಗಿಸಿದ್ದರು. ಅವರ ಕುಟುಂಬದಲ್ಲಿ ಏನೋ ಒಂದು ಸಮಸ್ಯೆಯಿತ್ತು. ಅದನ್ನು ತಪ್ಪಿಸಲು ಅವರು ಭಾನಾಮತಿಯ ಆಟ ಹೂಡಿದ್ದರು.

ನಾನು ಆ ಯುವಕನನ್ನು ಹಿಡಿದು ಪ್ರತ್ಯೇಕವಾಗಿ ಪೊಲೀಸರ ಸಮ್ಮುಖದಲ್ಲಿ ಮಾತನಾಡಿದೆ. ಇನ್ನು ಮುಂದೆ ಭಾನಾಮತಿಯ ಆಟ ಹೂಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಲಾಯಿತು.

ಊರ ಮಂದಿ ಮನುಷ್ಯರಿಂದಲೇ ಅದೂ ತಮ್ಮ ಊರಿನವರಿಂದಲೇ ಈ ಕೃತ್ಯ ನಡೆಯಿತು ಎಂದು ಹೇಳಿದರೆ ನಂಬಲೇ ಸಿದ್ಧರಿಲ್ಲ. ತೋಟ, ಮನೆ ನಷ್ಟ ಮಾಡಿಕೊಂಡವರು ಉಗ್ರಾವತಾರ ತಾಳಿದ್ದರು. ’ಅವರು ಯಾರೆಂದು ತೋರಿಸಿ ಸರ್. ಅವರನ್ನು ಇಂದು ನಾವು ಸುಮ್ಮನೆ ಬಿಡುವುದಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು, ತಹಸೀಲ್ದಾರರು ಇದನ್ನು ಬಹಿರಂಗಗೊಳಿಸುವುದು ಒಳ್ಳೆಯದಲ್ಲ ಎಂದು ಯೋಚಿಸಿ ಅದರ ಹಿಂದಿನ ಕರ್ತೃವನ್ನು ಎಚ್ಚರಿಕೆ ನೀಡಿ ಬಿಟ್ಟುಕೊಟ್ಟೆವು.

ಈಗ ಊರು ಭಾನಾಮತಿಯ ಕಾಟವಿಲ್ಲದೆ ನೆಮ್ಮದಿಯಾಗಿದೆ.

ಹುಲಿಕಲ್ ನಟರಾಜ್   

ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

KGF ನ ಸಂತ್ರಸ್ತರಿಗಾಗಿ ಇಲ್ಲಿಯವರೆಗೆ ರೂ.31,500 ಸಂಗ್ರಹ

ಗೆಳೆಯರೆ,

ಈ ಮನವಿಗೆ ಸ್ಪಂದಿಸಿದ, ಅಲ್ಲಲಿ ಪ್ರಚಾರ ಕೊಟ್ಟ, ಹಣಸಹಾಯ ಕಳುಹಿಸಿದ ಎಲ್ಲರಿಗೂ ನಮ್ಮ ಧನ್ಯತಾಪೂರ್ವಕ ಕೃತಜ್ಞತೆಗಳು. ಇಲ್ಲಿಯವರೆಗೆ ಒಟ್ಟು ರೂ.31500 ಸಂಗ್ರಹವಾಗಿದೆ. ಇನ್ನೂ ಕೆಲವರು ಇಂದೂ ಸಹ ಸಹಾಯ ಮಾಡಲಿದ್ದಾರೆ. ಹಾಗಾಗಿ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗಬಹುದು.

ಇಂತಹ ಒಂದು ಕಾರ್ಯದ ಹಿಂದಿದ್ದ ಗೆಳೆಯರು ಇದೇ ಭಾನುವಾರ KGF‌ ಗೆ ಹೋಗಿ ಇದನ್ನು ಯೋಗ್ಯ ರೀತಿಯಲ್ಲಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಇನ್ನಷ್ಟು ವಿವರಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ.

ಮತ್ತೊಮ್ಮೆ, ಎಲ್ಲರಿಗೂ ನಮ್ಮ ಧನ್ಯವಾದಗಳು.

ಹಣಸಹಾಯ ಮಾಡಿದವರ ವಿವರ:

ವರ್ತಮಾನ ಬಳಗ 5000
ರಾಮಕೃಷ್ಣ ಎಂ. 10000
ಮಾನಸ ನಾಗರಾಜ್ 500
ಅನಾಮಧೇಯ-1 1000
ಎಸ್.ವಿಜಯ, ಮೈಸೂರು 1000
ಸ್ವರ್ಣಕುಮಾರ್ ಬಿ.ಎ. 1500
ಬಿ. ಶ್ರೀಪಾದ ಭಟ್ 2000
ಅನಾಮಧೇಯ -2 500
ಅಕ್ಷತಾ, ಶಿವಮೊಗ್ಗ 1000
ಸಂದೀಪ್ / ರಾಘವೇಂದ್ರ ಸಿ.ವಿ. 2000
ಪಿ.ರಂಗನಾಥ 2000
ತ್ರಿವೇಣಿ ಟಿ.ಸಿ. 1000
ಅವಿನಾಶ ಕನ್ನಮ್ಮನವರ 500
ಸತೀಶ್ ಗೌಡ ಬಿ.ಎಚ್. 500
ಆರ್.ಕೆ.ಕೀರ್ತಿ 1000
ಬಿ. ಸಣ್ಣೀರಪ್ಪ (ಕ.ರ.ವೇ.) 500
ಸಿ.ವಿ. ದೇವರಾಜ್ (ಕ.ರ.ವೇ.) 1000
ನಂದಿನಿ ಎ.ಡಿ. 500
ಒಟ್ಟು 31500