Daily Archives: September 3, 2012

ಕರಾವಳಿಯಲ್ಲಿ ಗೋಸಂರಕ್ಷಣೆ ಮತ್ತು ದೇಶಸೇವೆ

 -ಪ್ರಸಾದ್ ರಕ್ಷಿದಿ

*ಒಂದು*

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡಿನ ಒಂದು ಹಳ್ಳಿ. ಮುಖ್ಯರಸ್ತೆಯ ಬದಿಯಲ್ಲಿ ಒಂದು ಬಸ್ ಸ್ಟಾಪ್. ಕತ್ತಲಾವರಿಸುವ ಹೊತ್ತು. ತಾಲೂಕು ಕೇಂದ್ರದಿಂದ ಆ ಮಾರ್ಗವಾಗಿ ಸಾಗುವ ಆ ದಿನದ ಕೊನೆಯ ಬಸ್ ಬಂದು ನಿಲ್ಲುತ್ತದೆ. ಸುಮಾರು ಇಪ್ಪತ್ತು ವಯಸ್ಸಿನ ಕುರುಚಲು ಗಡ್ಡದ ತರುಣನೊಬ್ಬ ಕಪ್ಪು ಬಣ್ಣದ ಬ್ಯಾಗೊಂದನ್ನು ಹೆಗಲಿಗೆ ನೇತುಹಾಕಿಕೊಂಡು ಬಸ್ಸಿನಿಂದ ಇಳಿಯತ್ತಾನೆ. ಆ ಊರಿಗೆ ಅಪರಿಚಿತನಂತೆ ಕಾಣುವ ಆತ ಯಾರನ್ನೋ ಹುಡುಕುವವನಂತೆ ಅತ್ತಿತ್ತ ನೋಡುತ್ತ ಬಸ್ಸ್‌ಸ್ಟಾಪ್‌ನಲ್ಲಿ ನಿಲ್ಲುತ್ತಾನೆ. ಒಂದೆರಡು ಕ್ಷಣಗಳಲ್ಲಿ ನಾಲ್ಕಾರು ಜನರ ಗುಂಪೊಂದು ಅವನತ್ತ ಬರುತ್ತದೆ. ಅವರಲ್ಲೊಬ್ಬ ದಾಂಡಿಗನಿದ್ದಾನೆ. ಎಲ್ಲರೂ ಆಗಂತುಕ ತರುಣನನ್ನು ಸುತ್ತುವರಿದು ನಿಲ್ಲುತ್ತಾರೆ.

ದಾಂಡಿಗ: ಏಯ್ ..ಯಾರು ನೀನು..?

ತರುಣ: ನಾನು… ಇಲ್ಲಿ ..ಫ್ರೆಂಡ್ ಮನೆಗೆ ಬಂದಿದ್ದೇನೆ.

ದಾಂಡಿಗ: ಯಾರವನು ನಿನ್ನ ಗೆಳೆಯ..

ತರುಣ: ಅದು.. ಅವರು ನನ್ನ ಫ್ರೆಂಡಿನ ಫ್ರೆಂಡು. ನನ್ನನ್ನು ಕರೆದೊಯ್ಯಲು ಇಲ್ಲಿಗೆ ಈಗ ಬರ್ಬೇಕಿತ್ತು, ನಾನು ಕಾಯ್ತಿದ್ದೇನೆ.

ದಾಂಡಿಗ: ಇಲ್ಲಿ ಎಲ್ಲರೂ ಹಾಗೇ ಬರುವುದು, ನಿನ್ನ ಹೆಸರೇನು? ಯಾರವನು ನಿನ್ನ ಫ್ರೆಂಡು ಅವ್ನ ಹೆಸರೇನು?

ತರುಣ: (ಗಾಬರಿಯಾಗಿದ್ದಾನೆ) ಅವ್ನ ಹೆಸರು ಕೃಷ್ಣ ಅಲ್ಲ ಹಾಗೇನೋ ಹೆಸರು..ಸರೀ ಗೊತ್ತಿಲ್ಲ,,

ಇನ್ನೊಬ್ಬ: (ದಾಂಡಿಗನನ್ನುದ್ದೇಶಿಸಿ) ಅಣ್ಣ ..ಪಾಪ ಇವನಿಗೆ ಫ್ರೆಂಡಿನ ಹೆಸರೂ ಗೊತ್ತಿಲ್ಲ… ಪಾಪ ತೊಟ್ಟಿಲ ಮಗು…!

ತರುಣ: ಸ್ವಲ್ಪ ನಿಲ್ಲಿ ಅವರೇ ಬರಬಹುದು ಈಗ, ನಾನು ರೀಸರ್ಚ್ ಸ್ಟೂಡೆಂಟು..

ದಾಂಡಿಗ: ಅವರು ಅಂದ್ರೆ ಯಾರೂ .. ನಿನ್ನ ತಂಡದವರೋ.. ಎಲ್ಲ ಕಳ್ಳರು, ದೇಶದ್ರೋಹಿಗಳು. ಎಲ್ಲಿ ನಿನ್ನ ಚೀಲ ತೆಗಿ.. ಯಾರವ ನಿನ್ನ ಫ್ರೆಂಡು ಬೇಗ ಬೊಗಳು..

ತರುಣ: (ಇನ್ನೂ ಗಾಬರಿಯಿಂದ) ನಿಲ್ಲಿ ಫೋನ್ ಮಾಡ್ತೇನೆ.. ಅಯ್ಯೊ ಇಲ್ಲಿ ರೇಂಜಿಲ್ಲ… (ಅಷ್ಟರಲ್ಲಿ ಒಬ್ಬ ಮೊಬೈಲ್ ಕಿತ್ತುಕೊಳ್ಳುತ್ತಾನೆ, ತರುಣ ಪ್ರತಿಭಟಿಸುತ್ತಿದ್ದಂತೆ ಎಲ್ಲರೂ ಸೇರಿ ಅವನಿಗೆ ಹೊಡೆಯತ್ತಾರೆ. ತರುಣ ಕುಸಿದು ಬಸ್ಟಾಪಿನಲ್ಲಿ ಕೂರುತ್ತಾನೆ, ಕತ್ತಲಾಗಿದೆ. ಅಷ್ಟರಲ್ಲಿ ಸ್ಕೂಟರೊಂದು ಬರುತ್ತದೆ. ಅದರಲ್ಲಿ ಬಂದ ವ್ಯಕ್ತಿ ಯಾರನ್ನೋ ಹುಡುಕುತ್ತಾನೆ.)

ಗುಂಪಿನವನೊಬ್ಬ: (ಸ್ಕೂಟರಿನವನ ಗುರುತು ಹಿಡಿದು) ಏನು ಕೇಶವಣ್ಣ?

ಕೇಶವ: ನನ್ನ ಫ್ರೆಂಡೊಬ್ಬರು ಅವರ ಕಡೆಯ ಸ್ಟೂಡೆಂಟ್ ಒಬ್ಬರನ್ನು ಕಳಿಸ್ತೇನೆ ಅಂತ ಹೇಳಿದ್ರು ,ಬಸ್ ಹೋಗಿರ್ಬೇಕು. ನಾನು ಬರುವಾಗ ಸ್ವಲ್ಪ ತಡವಾಯ್ತು..

ಮತ್ತೊಬ್ಬ: ಇಲ್ಲಿ ಒಬ್ಬ ಇದ್ದಾನೆ ಇವನೋ ನೋಡಿ.

ಕೇಶವ:  (ಕೇಶವ ತರುಣನನ್ನು ನೋಡುತ್ತಾನೆ, ಅವನ ಬಟ್ಟೆ ಹರಿದಿದೆ ಮುಖಕ್ಕೆಲ್ಲ ಪೆಟ್ಟಾಗಿದೆ.) ಅಯ್ಯಯ್ಯೋ ಹೌದು ಇವರೇ… ಇದೆಲ್ಲ ಏನು..

ದಾಂಡಿಗ: ಏನಿಲ್ಲ ಕೇಶವಣ್ಣ, ಅವ ಕೇಳಿದ್ದಕ್ಕೆ ಒಂದಕ್ಕೂ ಸರಿಯಾಗಿ ಉತ್ತರ ಕೊಡ್ಲಿಲ್ಲ.. ಕಳ್ಳ ಕಳ್ಳನ ಹಾಗೆ ಆಡಿದ, ಹುಡುಗ್ರು ಒಂದೆರಡು ಏಟು ಕೊಟ್ಟರು ಅಷ್ಟೆ.. ನಮಗೇನುಗೊತ್ತು? ಅವನಿಗೆ ಬಾಯಿರಲಿಲ್ಲವೋ..

ತರುಣ: ನೋಡಿ ನನಗೆ ಸರಿಯಾಗಿ ಮಾತಾಡೋಕೆ ಇವರು..

ದಾಂಡಿಗ: ಹ್ಞೂಂ  ಸಾಕು.. ಇನ್ನೀಗ ಹೊರಡಿ..

ಕೇಶವ: (ತರುಣನಿಗೆ ಸುಮ್ಮನಿರುವಂತೆ ಕಣ್ಣಲ್ಲೇ ಸೂಚಿಸುತ್ತಾನೆ). ತಪ್ಪೆಲ್ಲಾ ನನ್ನದೇ. ನಾನು ಸರಿಯಾದ ಸಮಯಕ್ಕೆ ಬರ್ಬೇಕಿತ್ತು.. ಆದರೂ ನೀವು.. ಹೀಗೆ..

ದಾಂಡಿಗ : ಕೇಶವಣ್ಣ ನೀವು ಬೇಸರ ಮಾಡುವುದು ಬೇಡ..ನಿಮ್ಮ ಫ್ರೆಂಡಿಗೆ ಹೇಳಿ. ಅಂದ ಹಾಗೆ ಎಚ್ಚರ….. ಹ್ಞಾಂ.  ಇದನ್ನೇ ಒಂದು ದೊಡ್ಡ ವಿಷಯ ಅಂತ ಸುದ್ದಿ ಮಾಡ್ಬೇಡಿ. ದೇಶರಕ್ಷಣೆ ಅಂದರೆ ಸುಲಭದ ಮಾತಲ್ಲ…  ಹ್ಞೂಂ.. ಎಲ್ಲ ಹೊರಡಿ….

***

*ಎರಡು*

ರೈತರೊಬ್ಬರ ಮನೆ ಹಸುವೊಂದನ್ನು ಕೊಳ್ಳಲು ಗಿರಾಕಿಯೊಬ್ಬ ಬಂದಿದ್ದಾನೆ. ಹಸುವನ್ನು ನೋಡಿ ಮಾತಾಡಿ ವ್ಯಾಪಾರ ಕುದುರಿದೆ. ರೈತರು ಹಸುವನ್ನು ಎಂಟು ಸಾವಿರಕ್ಕಿಂತ ಕಡಿಮೆಗೆ ಕೊಡಲು ಒಪ್ಪುತ್ತಿಲ್ಲ.

ಗಿರಾಕಿ: ನೀವು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ನನಗೆ ಮನೆ ತಲಪುವಾಗ ಅದಕ್ಕೆ ಹತ್ತು ಸಾವಿರ ಬೀಳುತ್ತೆ.

ರೈತ:  ನೋಡಿ ನನಗೆ ಮಾರಬೇಕೆಂದೇನೂ ಇರಲಿಲ್ಲ. ನೋಡಿಕೊಳ್ಳಲು ಜನ ಇಲ್ಲ ಕೊಟ್ಟಿಗೆಯಲ್ಲಿ ಜಾಗ ಇಲ್ಲ.  ಅದಕ್ಕೆ ಕೊಡ್ತಾ ಇದ್ದೇನೆ. ಇಲ್ಲದಿದ್ದರೆ ಇಂಥಾ ಹಸುವನ್ನು ಹತ್ತು ಸಾವಿರಕ್ಕೆ ಕಮ್ಮಿ ನಾನು ಬಿಡುವವನೇ ಅಲ್ಲ.. ನಿಮಗೆ ಇಲ್ಲಿಂದ ಹದಿನೈದು ಕಿ.ಮೀ. ದೂರ ಇರವುದು. ಅದಕ್ಕೆಷ್ಟು ಖರ್ಚು ಬಂದೀತು?

ಗಿರಾಕಿ: ಸ್ವಾಮಿ ನಿಮಗೆ ಗೊತ್ತಿದ್ದೂ ಕೇಳುತ್ತೀರಿ ಈಗ ಹಸು ಸಾಗಣೆಗೆ ಕಷ್ಟ ಎಷ್ಟುಂಟು, ಪಂಚಾಯಿತಿಯಿಂದ ಒಪ್ಪಿಗೆ ಪತ್ರಬೇಕು, ಗೋಸಂರಕ್ಷಣೆಯವರನ್ನು ಕಾಣಬೇಕು, ಅವರು ಒಪ್ಪಬೇಕು. ಆಮೇಲೆ ವಾಹನದವರು, ಅವರಂತೂ ದನ ಸಾಗಿಸುವುದು ಅಂದರೆ ಸುಲಭದಲ್ಲಿ ಬರುವುದೇ ಇಲ್ಲ. ಇನ್ನು ಹೆಚ್ಚಿನ ಬಾಡಿಗೆ ವಾಹನಗಳೆಲ್ಲ ಇರುವುದು ಬ್ಯಾರಿಗಳದ್ದು, ಅವರಂತೂ ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಹೆಚ್ಚಿಗೆ ಬಾಡಿಗೆ ಕೊಡುತ್ತೇನೆಂದರೂ ಹಸು ಸಾಗಿಸಲು ಬರುವುದಿಲ್ಲ. ಹಾಗಾಗಿ ಬಹಳ ಕಷ್ಟ.. ಸ್ವಾಮಿ

ರೈತ: ಅದಕ್ಕೆಲ್ಲ ನೀವು ಹೆದರ ಬೇಕಾಗಿಲ್ಲ, ನಿಮ್ಮ ಮನೆವರೆಗೆ ನಾನೇ ಬರುತ್ತೇನೆ, ಯಾರು ಏನು ಮಾಡ್ತಾರೆ?

ಗಿರಾಕಿ: ನೀವು ದೊಡ್ಡವರು, ನಿಮ್ಮನ್ನು ಹೇಗೆ ನಾನು ಕರೆಯಲಿ? ಆದರೆ ನೀವೇ ಜೊತೆಯಲ್ಲಿ ಬಂದರೆ ಒಳ್ಳೆಯದೇ ಆಯ್ತ..

ರೈತ: ಸರಿ ಹಾಗಾದರೆ ಹಸುವಿಗೆ ಹತ್ತು ಸಾವಿರ ಕೊಡ್ತೀರೋ?

ಗಿರಾಕಿ: ಸ್ವಾಮೀ ನೀವೇ ಮನೆವರೆಗೆ ಸಾಗಿಸಿಕೊಟ್ಟರೆ ಐನೂರು ಹೆಚ್ಚಿಗೆ ಸೇರಿಸಿ ಕೊಡ್ತೇನೆ. ಹೇಗೂ ಅವರಿವರಿಗೆ ಕೊಡುವ ಹಣ..

(ಪಂಚಾಯತ್ ಪರವಾನಿಗೆಯನ್ನು ಪಡೆದು ರೈತರು ಬಾಡಿಗೆ ವಾಹನ ಮಾತಾಡಿ ಸ್ವತಃ ಹಸುವಿನೊಂದಿಗೆ ಪ್ರಯಾಣಮಾಡಿ ಹದಿನೈದು ಕಿ.ಮೀ. ದೂರದ ಗಿರಾಕಿಯ ಮನೆಗೆ ತಲಪಿಸಿ ಬಂದರು.)

***

 *ಮೂರು*

(ಸಂಜೆ ರೈತರ ಮನೆಯ ಲ್ಯಾಂಡ್ ಫೋನು ರಿಂಗಾಯಿತು..ರೈತರು ಫೋನೆತ್ತಿದರು..)

ಹಲೋ.. ನಮಸ್ಕಾರ ನಾನು ಗೋರಕ್ಷಕದಳದ ಅಧ್ಯಕ್ಷ ಮಾತಾಡ್ತಾ ಇರೋದು…

ರೈತ: ನಮಸ್ಕಾರ…

ಗೋರಕ್ಷಕ : ಏನಿಲ್ಲಾ ಹೀಗೇ.. ನೀವು ನಿನ್ನೆ ಒಂದು ಹಸು ಮಾರಾಟ ಮಾಡಿದ್ರಂತೆ..

ರೈತ: ಮಾರಾಟ ಹೌದು ಅದು ನಿಜವಾದ ಅರ್ಥದಲ್ಲಿ ಮಾರಾಟ ಅಲ್ಲ.. ತುಂಬಾ ಕಡಿಮೆಗೆ ಕೊಟ್ಟೆ.. ಸಾಕುವುದಕ್ಕೆ ಕಷ್ಟ ಆಗ್ತಿತ್ತು. ಹಾಲು ಸ್ವಲ್ಪ ಕಡಿಮೆ ಆಗ್ತಾ ಇತ್ತು.

ಗೋರಕ್ಷಕ: ನೀವು ಕಡಿಮೆಗೆ ಕೊಡುವುದಾಗಿದ್ರೆ ಅದರ ಬದಲಿಗೆ ಮಠಕ್ಕೋ ಗೋಶಾಲೆಗೋ ಕೊಡಬಹುದಾಗಿತ್ತು. ನಿಮಗೇನು ಅದು ದೊಡ್ಡ ಹಣ ಅಲ್ಲ, ಅಲ್ಲದೇ ಪುಣ್ಯದ ಕೆಲಸ, ನೀವೇ ಹೋಗಿ ಗಿರಾಕಿಯ ಮನೆಗೆ ತಲುಪಿಸಿ ಬಂದಿರಂತೆ?

ರೈತ:  ಹೌದು  ಅವರಿಗೆ ಸಾಗಿಸಲು ಧೈರ್ಯವೇ ಇಲ್ಲ. ಹಾಗಾಗಿ ನಾನೇ ಹೋಗಬೇಕಾಯ್ತು.

ಗೋಕರಕ್ಷಕ: ನಿಮ್ಮ ಮುನ್ನೆಚ್ಚರಿಕೆ ಮೆಚ್ಚುವಂಥಾದ್ದೇ.. ಇರಲಿ … ಅಲ್ಲ ಕೆಲವುಸಾರಿ ಹೆಸರು ಸುಳ್ಳುಹೇಳಿಕೊಂಡು ಬ್ಯಾರಿಗಳು ವ್ಯಾಪಾರಕ್ಕೆ ಬರ್ತಾರೆ. ಅಲ್ಲ ನೀವು ಅಂತವರಿಗೆಲ್ಲ ಕೊಡುವವರಲ್ಲ ನಮಗೆ ಗೊತ್ತು. ಆದರೂ ಎಚ್ಚರಿಕೆಗೆ ಹೇಳಿದ್ದು.

ರೈತ: ಅದು ಹಾಗಲ್ಲ, ಈಗ ವಾಹನದವರೂ ಸಾಗಿಸಲು ಒಪ್ಪುತ್ತಿಲ್ಲ.

ಗೋರಕ್ಷಕ: ಹೌದು ಈಗ ನಾವು ಎಚ್ಚರಗೊಂಡಿದ್ದೇವೆ. ನಮ್ಮ ಕಣ್ಣು ತಪ್ಪಿಸುವುದು ಸುಲಭವಲ್ಲ. ಈಗ ನೀವೇ ಹೋದಿರಲ್ಲ ಆ ವ್ಯಾನಿನವನೂ ನನಗೆ ಮುಂಚಿತವಾಗಿ ಫೋನ್ ಮಾಡಿ ಒಪ್ಪಿಗೆ ಪಡೆದಿದ್ದ, ನೀವು ಎಂಟು ಸಾವಿರದ ಐನೂರಕ್ಕೆ ಕೊಟ್ಟದ್ದಲ್ಲವೋ ಹಸುವನ್ನು ..ಹ..ಹಹ್ಹ…ಹ್ಹಾ…

ರೈತ: ನಿಮಗೆ ಎಲ್ಲ ವಿವರ ಗೊತ್ತುಂಟು…

ಗೋರಕ್ಷಕ: ನಾವು ಹಾಗೇ ಸ್ವಾಮಿ, ರಕ್ಷಣೆ ಅಂದರೆ ಸುಲಭದ ಮಾತೇ..? ಅದಿರಲಿ, ನಾನೀಗ ಫೋನ್ ಮಾಡಿದ್ದು ಯಾಕಂದ್ರೆ ನಿಮ್ಮಲ್ಲಿ ಇನ್ನೂ ಒಂದೆರಡು ಮುದಿ ಹಸುಗಳು ಇದೆಯಲ್ಲ, ನಾವೀಗ ನಮ್ಮ ತಾಲೂಕಿನಿಂದ ಎಲ್ಲ ಮುದಿ ಜಾನುವಾರನ್ನೂ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ಈಗಾಗಲೇ ನಮ್ಮ ಕರಾವಳಿಯ ಗೋಶಾಲೆಗಳೆಲ್ಲ ಭರ್ತಿಯಾಗಿವೆ, ಹಾಗಾಗಿ ನಾವೀಗ ಘಟ್ಟದ ಮೇಲಿನ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ನೋಡಿ ರಾಮಣ್ಣ ಗೌಡ್ರಲ್ಲಿ ಎರಡು ಉಂಟು, ಪಟೇಲ್ರು ಒಂದು ಹೋರಿ ಕೊಡುತ್ತಿದ್ದಾರೆ, ಸೀನಪ್ಪಣ್ಣನಲ್ಲಿಂದ ಮೂರು ಹೀಗೆ.. ನೀವೇ ವಿಚಾರಿಸಿಕೊಳ್ಳಿ.. ಘಟ್ಟದ ಗೋಶಾಲೆ ಆದ್ರಿಂದ ಸ್ವಲ್ಪ ಸಾಗಾಣಿಕೆ ಖರ್ಚು ನೀವೂ ಕೊಡ್ಬೇಕು. ಒಂದು ಜಾನುವಾರಿಗೆ ಐನೂರು ಕೊಡಿ ಸಾಕು. ಇಲ್ಲೇ ಆಗಿದ್ರೆ ನಾವೇ ಕೈಯಿಂದ ಹಾಕ್ತಿದ್ದೆವು. ಮುಂದಿನ ವಾರ ಲಾರಿ ಬರುವ ಮುಂಚೆ ಫೋನ್ ಮಾಡ್ತೇನೆ. ಇನ್ನು ಯಾವುದನ್ನೂ ಮಾರುವ ಯೋಚನೆ ಇಲ್ವಲ್ಲ ನಿಮಗೆ.. ಹಾಗೆ  ..ಮಾರಿದರೂ ನಮ್ಮ ಹುಡುಗರೇ ಸಾಗಿಸಬೇಕಲ್ಲಾ… ಹಹ್ಹಹ್ಹಾ…… ನಿಮ್ಮಲ್ಲಿಂದ ಎರಡು ಹಸು ಅಂತ ಬರ್ಕೊಂಡಿದ್ದೇನೆ…

ನಮಸ್ಕಾರ…

***

*ನಾಲ್ಕು*

ಮುಂದಿನ ಒಂದು ವಾರದಲ್ಲಿ ರೈತರ ಮನೆಯಂಗಳದಲ್ಲಿ ಗೋರಕ್ಷಕದಳದವರ ಲಾರಿಬಂದು ನಿಂತಿತು. ರೈತರು ಎರಡು ಮುದಿಹಸುಗಳನ್ನೂ ಲಾರಿಗೆ ಹತ್ತಿಸಿ ಒಂದುಸಾವಿರ ರೂಪಾಯಿ ಸಾಗಾಣಿಕೆ ಖರ್ಚು ನೀಡಿದರು. ಲಾರಿ ಡ್ರೈವರ್ ಹದಿನೈದು ವರ್ಷಗಳ ಹಿಂದೆ ಅವರದೇ ಊರಿನಲ್ಲಿ ಕೂಲಿ ಮಾಡುತ್ತಿದ್ದ ತನಿಯಪ್ಪನ ಮಗ ಸುಂದರ. ಅವನೇ ಗುರುತು ಹಿಡಿದು ರೈತರನ್ನು ಮಾತಾಡಿಸಿದ. ಲಾರಿಯಲ್ಲಿ ಆಗಲೇ ನಾಲ್ಕೈದು ಜಾನುವಾರುಗಳಿದ್ದವು. ಎಲ್ಲವನ್ನೂ ತುಂಬಿಕೊಂಡು ಲಾರಿ ಮುಖ್ಯ ರಸ್ತೆಯನ್ನು ಹಾದು ಹೈವೇಯತ್ತ ಚಲಿಸಿತು. ನಾಲ್ಕಾರು ಜನ ರೈತರು ಪುಣ್ಯ ಕಟ್ಟಿಕೊಂಡೆವೆಂದೋ ಮುದಿ ಹಸುಗಳನ್ನು ವಿಲೇವಾರಿಯಾದವೆಂದೋ ಹಗುರಾದರು.

ತಿಂಗಳ ನಂತರ ಪೇಟೆಯ ಹೋಟೆಲಿನಲ್ಲಿ ಕಾಫಿ ಕುಡಿಯುವಾಗ ರೈತರಿಗೆ ಲಾರಿ ಚಾಲಕ ಸುಂದರ ಕಾಣಸಿಕ್ಕಿದ. ತಮ್ಮೂರ ಹುಡುಗನೆಂಬ ಪ್ರೀತಿಯಿಂದ ರೈತರು ಮಾತಾಡಿಸಿದರು. ಅವತ್ತು ಯಾವ ಗೋಶಾಲೆಗೆ ಹಸುಗಳನ್ನು ಬಿಟ್ಟಿರಿ ಎಂದು ವಿಚಾರಿಸಿದರು. ಅದಕ್ಕೆ ಸುಂದರ ಕೊಟ್ಟ ಉತ್ತರ ಹೀಗಿತ್ತು. “ಅದು ನಾನು ಖಾಯಂ ಓಡಿಸುವ ಲಾರಿ ಅಲ್ಲಣ್ಣ.. ನಾನು ಅವತ್ತು ಟೆಂಪರರಿ, ಕೇರಳ ಗಡಿವರೆಗೆ ಮಾತ್ರ ನಾನು ಓಡಿಸಿದೆ. ನಂತರ ಡ್ರೈವರ್ ಬದಲಾದರು.ನನಗೆ ಒಂದು ಸಾವಿರ ಕೊಟ್ಟರು. ನಾನು ಬಸ್ಸಿನಲ್ಲಿ ವಾಪಸ್ ಬಂದೆ. ಯಾರಿಗೂ ಹೇಳ್ಬೇಡಿ.. ಬಡವ ಬದುಕ್ಬೇಕು…”

*** 

[ಇದು ಕತೆಯಲ್ಲ, ನಾಟಕದ ದೃಶ್ಯಗಳೂ. ಅಲ್ಲ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ನಡೆಯತ್ತಿರುವ ನಿಜ ಘಟನೆಗಳನ್ನು ಆಧರಿಸಿದ ಸಂಗತಿಗಳು.]