Daily Archives: September 29, 2012

ಖೆರ್ಲಾಂಜಿ ನರಮೇಧದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಜಾತಿಯ ಅಮಲನ್ನು ನೆತ್ತಿಗೇರಿಸಿಕೊಂಡು ಮಾನವೀಯತೆಯನ್ನ ಮರೆತವರ ಬಗ್ಗೆ ಬರೆಯಲು ಈ ನೆಲದಲ್ಲಿ ಒಬ್ಬ ವ್ಯಕ್ತಿಗೆ ಅವನ ಪೂರ್ತಾ ಆಯಸ್ಸು ಸಾಲದು. ಈ ನೆಲದಲ್ಲಿ ನಿರಂತರ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ, ವರ್ತಮಾನದ ಸಮಾಜದ ಅಸಹನೆಗೆ ಮತ್ತು ಅದರ ಜಾತೀಯ ಮನೋಭಾವಕ್ಕೆ ಹಾಳೆಯ ಮೇಲೆ ಅಕ್ಷರಗಳು ದಾಖಲಾಗಲು ಹೇಸಿಗೆ ಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭಾರತದ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ದಲಿತ ಕುಟುಂಬವೊಂದರ ಸದಸ್ಯರ ನರಮೇಧ ನಡೆದು ಇಂದಿಗೆ ಆರು ವರ್ಷ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಖೆರ್ಲಾಂಜಿ ಗ್ರಾಮದಲ್ಲಿ 2006 ರ ಸೆಪ್ಟಂಬರ್ 29 ರಂದು ನಡೆದ ಈ ಅಮಾನುಷ ಘಟನೆ ಇಡೀ ಮನುಕುಲ ನಾಚಿಕೆಯಿಂದ ಮುದುಡಿಕೊಳ್ಳುವಂತಹದ್ದು. ಇಂದಿಗೂ ಸಮಾಜದಲ್ಲಿ ಜಾತಿ ಸಂಘಟನೆಗಳು ಎಷ್ಟು ಬಲಿಷ್ಟವಾಗಿವೆ ಮತ್ತು ಕ್ರೂರವಾಗಿವೆ ಎಂಬುದಕ್ಕೆ ಮನ ಕಲಕುವ ಈ ದುರಂತ ನಮ್ಮೆದುರು ಸಾಕ್ಷಿಯಾಗಿದೆ.

ಕಳೆದ ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಾದ ಗೊಂಡಿಯ ಮತ್ತು ಚಂದ್ರಾಪುರ್ ಮತ್ತು ಭಂಡಾರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುತಿದ್ದಾಗ ಅನಿರಿಕ್ಷಿತವಾಗಿ ಈ ಹಳ್ಳಿಗೆ ಬೇಟಿ ನೀಡುವ ಸಂದರ್ಭ ಒದಗಿ ಬಂದಿತು. ನನಗೆ ಖೆರ್ಲಾಂಜಿ ಘಟನೆ ಗೊತ್ತಿತ್ತೇ ಹೊರತು, ಆ ಹಳ್ಳಿ ಭಂಡಾರ ಜಿಲ್ಲೆಯಲ್ಲಿ ಇದೆ ಎಂಬುದು ತಿಳಿದಿರಲಿಲ್ಲ.

ಜುಲೈ ಮೊದಲ ವಾರ ಭಂಡಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಬೇಟಿ ನೀಡಿ, ಅಲ್ಲಿನ ಅಧ್ಯಾಪಕರ ಜೊತೆ ಭಂಡಾರ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹಬ್ಬಲು ಕಾರಣವಾದ ಅಂಶಗಳನ್ನು ಚರ್ಚಿಸುತಿದ್ದೆ. ಅಲ್ಲಿನ ಅಧ್ಯಾಪಕ ಮಿತ್ರರು ಭಂಡಾರ ಜಿಲ್ಲೆಯ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಕುರಿತು ಮಾತನಾಡುತ್ತಾ ಖೆರ್ಲಾಂಜಿ ಘಟನೆಯನ್ನು ವಿವರಿಸಿದಾಗ, ಭಾರತದ ಕಪ್ಪು ಇತಿಹಾಸದಲ್ಲಿ ಧಾಖಲಾಗಿರುವ ಈ ನತದೃಷ್ಟ ಗ್ರಾಮ ಭಂಡಾರ ಜಿಲ್ಲೆಯಲ್ಲಿದೆ ಎಂಬುದು ನನಗೆ ತಿಳಿಯಿತು. ಕಾಂಬ್ಳೆ ಎಂಬ ಮರಾಠಿ ಉಪನ್ಯಾಸಕ ಮಿತ್ರ ತನ್ನ ಮೋಟಾರ್ ಬೈಕ್‌ನಲ್ಲಿ ಈ ಗ್ರಾಮಕ್ಕೆ ಕರೆದೊಯ್ದು ಅಂದಿನ ಕರಾಳ ಕೃತ್ಯವನ್ನು ವಿವರಿಸಿದ.

ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಗೆ ಹೊಂದಿಕೊಂಡಿಂತೆ ಇರುವ ಭಂಡಾರ ಜಿಲ್ಲೆ ಇವತ್ತಿಗೂ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಚಂದ್ರಭಾಗ ಎಂಬ ನದಿಯ ಕಾರಣ ಒಂದಿಷ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಜಿಲ್ಲಾ ಕೇಂದ್ರವಾದ ಭಂಡಾರದಿಂದ 26 ಕಿಲೋಮೀಟರ್ ದೂರವಿರುವ ಖೆರ್ಲಾಂಜಿ ಗ್ರಾಮ ಬಹುತೇಕ ಹಿಂದುಳಿದ ಜಾತಿಯ ಜನರು ವಾಸಿಸುವ ಒಂದು ಕುಗ್ರಾಮ. ಕುಣಬಿ ಎಂಬ ಹಿಂದುಳಿದ ಜನಾಂಗದ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಒಂದಿಷ್ಟು ಮಂದಿ ದಲಿತರಿದ್ದು ಅವರೆಲ್ಲಾ ವಿದ್ಯಾವಂತರಾಗಿರುವುದು ವಿಶೇಷ. ದಲಿತರ ಪಾಲಿನ ಸ್ವಾಭಿಮಾನ ಮತ್ತು ಆತ್ಮ ಸಾಕ್ಷಿಯಂತಿರುವ ಡಾ. ಅಂಬೇಡ್ಕರ್ ಇದೇ ನಾಗಪುರ ಪ್ರಾಂತ್ರಕ್ಕೆ ಸೇರಿದ ಮೂಲದವರು ಎಂಬ ಹೆಮ್ಮೆ ಈ ಭಾಗದ ದಲಿತರಿಗೆ ಇಂದಿಗೂ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಅಂಬೇಡ್ಕರ್ ರವರಿಂದ ಪ್ರೇರಿತವಾಗಿರುವ ಪ್ರತಿಯೊಂದು ದಲಿತ ಕುಟುಂಬದಲ್ಲಿ ವಿದ್ಯಾವಂತ ಯುವ ತಲೆಮಾರು ಇರುವುದು ಇಲ್ಲಿಯ ವಿಶೇಷ.

ಖೆರ್ಲಾಂಜಿ ಗ್ರಾಮದ ಬಯ್ಯಲಾಲ್ ಬೂತ್‌ಮಾಂಗೆ ಎಂಬ ದಲಿತ ಕುಟುಂಬದ ಸದಸ್ಯರೆಲ್ಲರೂ ವಿದ್ಯಾವಂತರಾಗಿದ್ದು, ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿ ಹಳ್ಳಿಯ ಜನರ ನಡುವೆ ಸ್ವಾಭಿಮಾನದ ಬದುಕನ್ನು ಕಂಡುಕೊಂಡಿದ್ದರು. ಬಯ್ಯಾಲಾಲ್‌ಗೆ ಐದು ಎಕರೆ ನೀರಾವರಿ ಭೂಮಿ ಇದ್ದ ಕಾರಣ ತಮ್ಮ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಜೊತೆಗೆ ಪತ್ನಿ ಸುರೇಖ ಕೂಡ ಪಿ.ಯು.ಸಿ. ವರೆಗೆ ಓದಿದ್ದ ಹೆಣ್ಣುಮಗಳಾಗಿದ್ದಳು. ಯಾವುದೇ ಅನ್ಯಾದ ವಿರುದ್ಧ ಸಿಡಿದೇಳುವ ಶಕ್ತಿಯನ್ನು ಈ ದಲಿತ ಕುಟುಂಬ ಹೊಂದಿರುವುದನ್ನು ಕಂಡು ಕೆಲವು ಮೇಲ್ಜಾತಿ ಜನರ ಕಣ್ಣುಗಳು ಕೆಂಪಾಗಿದ್ದವು.

ಭಂಡಾರ ಜಿಲ್ಲೆಯಲ್ಲಿ ಇನ್ನೊಂದು ಹಿಂದುಳಿತ ಜಾತಿಗೆ ಸೇರಿದ ಕುಣುಬಿ ಜನಾಂಗ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿತ್ತು. ಬಹುತೇಕ ವಿಧಾನ ಸಭಾಕ್ಷೇತ್ರಗಳು, ಗ್ರಾಮ ಪಂಚಾಯಿತು, ತಾಲ್ಲೋಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಈ ಜಾತಿಗೆ ಸೇರಿದ ಜನಪ್ರತಿನಿಧಿಗಳ ಸ್ವತ್ತಾಗಿದ್ದವು.

ಬಯ್ಯಾಲಾಲ್ ಬೂತ್‌ಮಾಂಗೆ ತನ್ನ ಜಮೀನಿಗೆ ಸಂಬಂಧಪಟ್ಟ ವಿವಾದಕ್ಕೆ ತನ್ನ ಹಳ್ಳಿಯ ಕುಣುಬಿ ಜನಾಂಗದ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ ಪರಿಣಾಮವಾಗಿ ಇತಿಹಾಸ ಕಂಡರಿಯದ ಅಮಾನವೀಯ ರೀತಿಯಲ್ಲಿ ಖೆರ್ಲಾಂಜಿಯಲ್ಲಿ ದಲಿತ ಕುಟುಂಬದ ನರಮೇಧವೊಂದು ನಡೆದು ಹೋಯಿತು.

2006 ರ ಸೆಪ್ಟಂಬರ್ 29 ರಂದು ಬಯ್ಯಾಲಾಲ್ ತನ್ನ ಜಮೀನಿಗೆ ಹೋದ ಸಂದರ್ಭದಲ್ಲಿ ನೇರವಾಗಿ ಅವನ ಮನೆಗೆ ನುಗ್ಗಿದ ಕುಣಬಿ ಜನಾಂಗದ ಸದಸ್ಯರು ಪತ್ನಿ ಸುರೇಖ ಮತ್ತು ಮಗಳು 19 ವರ್ಷದ ಪ್ರಿಯಾಂಕಳನ್ನು ಮನೆಯಿಂದ ಹೊರೆಗೆ ಎಳೆದು ತಂದು ಅವರನ್ನು ನಗ್ನಗೊಳಿಸಿ ಖೆರ್ಲಾಂಜಿ ಹಳ್ಳಿಯ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದನ್ನು ತಡೆಯಲು ಬಂದ ಇಬ್ಬರು ಗಂಡು ಮಕ್ಕಳಾದ ಕಿಶನ್ ಮತ್ತು ಸುಧೀರ್  ಅವರನ್ನು ಸಹ ಅರನಗ್ನಗೊಳಿಸಿ, ಥಳಿಸಿ ಮರೆವಣಿಗೆಯಲ್ಲಿ ಕೊಂಡೊಯ್ದರು. ಊರಿನ ಮಧ್ಯಭಾಗಕ್ಕೆ ಈ ಅಮಾಯಕರನ್ನು ಕರೆತಂದ ಜನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಜೀವ ಹೋಗುವವರೆಗೂ ತುಳಿದರು. ಕ್ಷಣದಲ್ಲಿ ಜಾತಿಯ ದೆವ್ವ ಮೆಟ್ಟಿದವರಂತೆ ವರ್ತಿಸುತಿದ್ದ ಕುಣಬಿ ಜನಾಂಗದ ಈ ಅಮಾನುಷ ಕೃತ್ಯವನ್ನು ತಡೆಯುವ ಶಕ್ತಿ ಆ ಹಳ್ಳಿಯಲ್ಲಿ ಯಾರಿಗೂ ಇರಲಿಲ್ಲ. ಎಲ್ಲರೂ ಮೌನವಾಗಿ ಈ ನರಮೇಧಕ್ಕೆ ಸಾಕ್ಷಿಯಾದರು. ಒಬ್ಬ ಮಗನ (ಸುಧೀರ್) ಶವವನ್ನು ಊರಾಚೆಗಿನ ಕಾಲುವೆಗೆ ತೆಗೆದುಕೊಂಡು ಹೋಗಿ ಬಿಸಾಡಿದರು. ಈ ಘಟನೆಯ ವೇಳೆ ಬಯ್ಯಾಲಾಲ್ ಮನೆಯಲ್ಲಿ ಇಲ್ಲದ ಕಾರಣ ಅವನ ಜೀವ ಮಾತ್ರ ಉಳಿಯಿತು. (ಅಲ್ಲಿ ಸಂಗ್ರಹಿಸಿಕೊಂಡು ಬಂದ ಚಿತ್ರಗಳೇ ಘಟನೆಯ ಭೀಕರತೆಯನ್ನು ಹೇಳುತ್ತವೆ.)

ದುರಂತವೆಂದರೆ, ಇಡೀ ಭಾರತವೇ ನಾಚಿ ತಲೆ ತಗ್ಗಿಸುವಂತಹ ಈ ಘಟನೆ ನಡೆದರೂ ಇದು ಯಾವುದೇ ಪತ್ರಿಕೆಯಲ್ಲಿ, ಅಥವಾ ದೃಶ್ಯ ಮಾಧ್ಯದಲ್ಲಿ ಮೊದಲ ನಾಲ್ಕು ದಿನಗಳ ಕಾಲ ಸುದಿಯಾಗಲಿಲ್ಲ. ನಾಗಪುರದ ಟೈಮ್ಸ್ ಆಪ್ ಇಂಡಿಯಾದ ಪ್ರತಿನಿಧಿ ಸಬ್ರಿನಾ ಬರ್‌ವಾಲ್ಟರ್ ಎಂಬುವರು ಈ ಹಳ್ಳಿಗೆ ತೆರಳಿ, ಅಲ್ಲಿನ ಕೆಲವು ದಲಿತ ಯುವಕರು ತೆಗೆದಿದ್ದ ಛಾಯಾ ಚಿತ್ರಗಳನ್ನು ಸಂಗ್ರಹಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ಧಿಮಾಡಿದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತು. ನಂತರ ನಾಗಪುರದಲ್ಲಿ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಹಿಂಸೆಗೆ ಇಳಿದಾಗ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ ಘಟನೆಯನ್ನು ಸಿ.ಬಿ.ಐ. ಗೆ ವಹಿಸಿತು. ನಂತರ ರಾಷ್ಟ್ರ ಮಟ್ಟದಲ್ಲಿ ಅನೇಕ ಸ್ವತಂತ್ರ ತನಿಖಾ ಆಯೋಗಗಳು ಖೇರ್ಲಾಂಜಿ ಗ್ರಾಮಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದವು. ಘಟನೆಯ ಹಿಂದೆ ಕುಣಭಿ ಜಾತಿಗೆ ಸೇರಿದ್ದ ಸ್ಥಳಿಯ ಬಿ.ಜೆ.ಪಿ. ಶಾಸಕ ಕುರ್ಡೆಯ ಕೈವಾಡವಿದೆ ಎಂದು ಸಹ ಅನೇಕ ಸಂಘಟನೆಗಳು ಆರೋಪಿಸಿದ್ದವು.

ಸಿ.ಬಿ.ಐ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿತು. 2008ರಲ್ಲಿ ಭಂಡಾರ ಜಿಲ್ಲಾ ನ್ಯಾಯಾಲಯ 24 ಬಂಧಿತ ಆರೋಪಿಗಳಲ್ಲಿ ಎಂಟು ಮಂದಿಗೆ ಗಲ್ಲು ಶಿಕ್ಷೆ ಮತ್ತು ಆರು ಮಂದಿಗೆ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಉಳಿದವರನ್ನು ಸಾಕ್ಷಾಧಾರಗಳ ಕೊರತೆಯ ಮೇಲೆ ಖುಲಾಸೆಗೊಳಿಸಿತು. ಆರೋಪಿಗಳು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ನಾಗಪುರದ ವಿಭಾಗೀಯ ಹೈಕೋರ್ಟ್ ಪೀಠದ ಮೆಟ್ಟಿಲೇರಿದಾಗ, ವಿಭಾಗೀಯ ಪೀಠ ಭಂಡಾರದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು 2008ರ ಜುಲೈನಲ್ಲಿಎತ್ತಿ ಹಿಡಿಯಿತು. ಮತ್ತೇ ಅರೋಪಿಗಳು ಮುಂಬೈ ಹೈಕೋರ್ಟ್ ನ್ಯಾಯಾಲಯದ ಕದತಟ್ಟಿದರು. ಮುಂಬೈ ಉಚ್ಛ ನ್ಯಾಯಾಲಯ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಎಂಟು ಮಂದಿ ಆರೋಪಿಗಳಲ್ಲಿ ಆರುಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಕೇವಲ ಇಬ್ಬರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸಿತು. ಈ ಕುರಿತು ಈಗ ನರಮೇಧದಲ್ಲಿ ಉಳಿದ ದಲಿತ ಬಯ್ಯಾಲಾಲ್ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಜೊತೆಗೆ ಜೀವ ಭಯದಿಂದ ತನ್ನೂರಾದ ಖೆರ್ಲಾಂಜಿಯನ್ನು ತೊರೆದಿದ್ದಾನೆ. ಇವನಿಗೆ ಮಹಾರಾಷ್ಟ್ರ ದ ದಲಿತ ಚಿಂತಕ ಹಾಗೂ ಲೇಖಕ ಆನಂದ್ ತೇಲ್ತುಬ್ಡೆ ಆಸರೆಯಾಗಿ ನಿಂತು ಹೋರಾಟ ನಡೆಸುತಿದ್ದಾರೆ.

ಜಾತಿಪದ್ಧತಿಯ ವಿನಾಶಕ್ಕೆ ಹನ್ನೊಂದನೇ ಶತಮಾನದ ಬಸವಣ್ಣ ನಿಂದ ಹಿಡಿದು 20ನೇ ಶತಮಾನದ ಗಾಂಧಿ, ಅಂಬೇಡ್ಕರ್, ಲೋಹಿಯಾ ವರೆಗೆ ಅನೇಕ ಮಹನೀಯರು ಜೀವನ ಪೂರ್ತಿ ಹೊರಾಡಿದರೂ ಅದು ಹಲವು ರೂಪಗಳಲ್ಲಿ ಮೈದಾಳುತ್ತ್ತಾ ಮನುಕುಲಕ್ಕೆ ಸವಾಲಾಗುತ್ತಾ ನಿಂತಿರುವುದಕ್ಕೆ ಈ ಖೆರ್ಲಾಂಜಿ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಿನ ದಶಕದಲ್ಲಿ ಜಾತಿ ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಮಾಂಸ, ಮಜ್ಜೆ ಮತ್ತು ರಕ್ತವಾಗಿ ಎಲ್ಲಾ ಅಧಿಕಾರಸ್ಥ ಜನಗಳ ಮತ್ತು ಜನಪ್ರತಿನಿಧಿಗಳ ನರನಾಡಿಗಳಲ್ಲಿ ಹರಿಯುತ್ತಿರುವುದನ್ನು ಗಮನಿಸಿದರೆ, ಭವಿಷ್ಯ ಭಾರತದ ಬಗ್ಗೆ ಯಾವ ಆಶಯ ಮತ್ತು ಕನಸುಗಳು ಪಜ್ಞಾವಂತರ ಎದೆಯಲ್ಲಿ ಈಗ ಹಸಿರಾಗಿ ಉಳಿದಿಲ್ಲ. ಉಳಿಯುವ ಸಾಧ್ಯತೆಗಳು ಕೂಡ ಇಲ್ಲ.

ಸಿರಿಗೆರೆ ಶ್ರೀ ವಿಚಾರ : ಹೇಳದೇ ಉಳಿದುಕೊಂಡ ವಿಷಯಗಳು

-ಜಿ.ಮಹಂತೇಶ್

ನಿವೃತ್ತಿ ಹಿಂತೆಗೆತ ನಿರ್ಧಾರ :

ಸಿರಿಗೆರೆ ಶ್ರೀಗಳು ಪೀಠದಿಂದ ಸ್ವಯಂ ನಿವೃತ್ತಿ ಘೋಷಿಸಿದ ದಿನವೇ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡ ಪ್ರಸಂಗ, ಬಿಟ್ಟ ಬಾಣವನ್ನು ಮತ್ತದೇ ಸಿರಿಗೆರೆ ಬತ್ತಳಿಕೆಯೊಳಗೆ ಮರಳಿದಂತಿದೆ. ತುಂಬಿದ ಸಭೆಯಲ್ಲಿ ಶ್ರೀಗಳು ಒಂದಷ್ಟು ಹೊತ್ತು ಭಾವುಕರಾದ ಹಿನ್ನೆಲೆಯಲ್ಲಿ ಅಲ್ಲಿ ಕಣ್ಣೀರ ಸಾಗರವೇ ಹರಿದಿತ್ತು. ಇನ್ನೇನು ಇಡೀ ಸಾಗರ ಉಕ್ಕಿ ಹರಿಯಲಿದೆ ಎಂದು ಭಾವಿಸುತ್ತಿದ್ದಂತೆ, ಇಡೀ ಸಾಗರವನ್ನೇ ತನ್ನೊಳಗೆ ಇಂಗಿಸಿಕೊಂಡಿರುವುದು ಸಿರಿಗೆರೆ ಮಣ್ಣಿನ ವೈಶಿಷ್ಟ್ಯ.

ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸ್ವಯಂ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಜನಪ್ರಿಯ ಪತ್ರಿಕೆಯೊಂದು, ಇದನ್ನೇ ಮಾದರಿಯಾಗಿಟ್ಟುಕೊಂಡು 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳೇಕೆ ನಿರ್ಧಾರ ಪ್ರಕಟಿಸಬಾರದು ಎಂದು ಜನಮತ ನಡೆಸಿತ್ತು. 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳ ಪಟ್ಟಿಯಲ್ಲಿ ಸಿರಿಗೆರೆ ಮಠದ ಆದ್ಯ  ಭಕ್ಕರಲ್ಲೊಬ್ಬರಾಗಿರುವ ಡಾ.ಶಾಮನೂರು ಶಿವಶಂಕರಪ್ಪ,  ಯಡಿಯೂರಪ್ಪ ಅವರಂಥ ‘ಧೀಮಂತ’ ರಾಜಕಾರಣಿಗಳ್ಯಾರು ಜನಮತವನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.

ಸ್ವಯಂ ನಿವೃತ್ತಿ ಘೋಷಣೆ ಮತ್ತು ಭಕ್ತರು ಹಾಕಿದ ಒತ್ತಡದಿಂದ ನಿವೃತ್ತಿಯಿಂದ ಹಿಂದೆ ಸರಿದ (ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ) ಈ ಪ್ರಸಂಗದ ಮೂಲಕ ಸಿರಿಗೆರೆ ಸಾಮ್ರಾಜ್ಯದಲ್ಲಿ ಮತ್ತೊಮ್ಮೆ ವಿಜೃಂಭಿಸಿದ್ದು ಮತ್ತದೇ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪರಿಚಿತರೊಬ್ಬರು ಇನ್ನೊಂದು ಸುದ್ದಿಯತ್ತ ಗಮನ ಸೆಳೆದರು.  ’ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಘೋಷಿಸುವ ಮೊದಲೇ,  ಅಂದರೆ ಅದಕ್ಕೆ ಒಂದೆರಡು ದಿನಗಳ ಹಿಂದೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು  “ವಿಜಯ ವಾಣಿ” ಪತ್ರಿಕೆಯಲ್ಲಿ  ಹಿಂದಿನ ದೊಡ್ಡ ಗುರುಗಳು 60ನೇ ವಯಸ್ಸಿಗೇ ನಿವೃತ್ತಿಯಾದ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದರು.  ಬಹುಶಃ ಅವರ ಬರಹದಿಂದ ಕ್ರುದ್ಧರಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಹೊಂದುವ ಹಂಬಲವನ್ನು ವ್ಯಕ್ತಪಡಿಸಿರಬಹುದು,’ ಎಂದು.

ಚನ್ನಗಿರಿ ತಾಲೂಕಿನ ಸಾಣೆಹಳ್ಳಿಯ ಈ ಮಠ, ಸಿರಿಗೆರೆಯ ಶಾಖಾ ಮಠ. ಪಂಡಿತಾರಾಧ್ಯರು, ಡಾ.ಶಿವಮೂರ್ತಿ ಶಿವಾಚಾರ್ಯರಂತಲ್ಲ. ಒಂದಷ್ಟು ಸ್ವಾಮೀಜಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಮಾಮೂಲಿ ಸಾಣೆಹಳ್ಳಿಯನ್ನು ರಂಗಕರ್ಮಿಗಳ ಹಳ್ಳಿಯನ್ನಾಗಿಸಿದ್ದು ಇವರ ವಿಶೇಷ. ಸಿ.ಜಿ.ಕೃಷ್ಣಸ್ವಾಮಿ ಅವರಂಥ ರಂಗಕರ್ಮಿಯಿಂದ ನಿಜವಾದ ಅರ್ಥದಲ್ಲಿ ಕೆಲಸ ತೆಗೆಸಿದ್ದ ಪಂಡಿತಾರಾಧ್ಯರು, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಥವಾ ಸಿರಿಗೆರೆ ಪ್ರಧಾನ ಮಠದ ಸಾಂಸ್ಕೃತಿಕ ಮುಖ ಎಂದರೇ ತಪ್ಪೇನಿಲ್ಲ. ಇವರ ಜೊತೆಗಿನ ಒಡನಾಟದಿಂದಾಗಿಯೇ ಹಲವಾರು ಪ್ರಗತಿಪರರು ಸಿರಿಗೆರೆ ಮಠದ ಬಗ್ಗೆ ಮತ್ತು  ಡಾ.ಶಿವಮೂರ್ತಿ ಶಿವಾಚಾರ್ಯರ ಪಾಳೇಗಾರಿಕೆ ಮತ್ತು ಪ್ರತಿಗಾಮಿ ನಿಲುವುಗಳ ಬಗ್ಗೆ, ಅವರು ನಡೆಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಿನ್ನಾಭಿಪ್ರಾಯ ತೋರಿಸದೆ ಇರುತ್ತಾರೆ.

ಪ್ರಾಣಿ ಬಲಿ ನಿಷೇಧ :

ಅಷ್ಟೇ ಅಲ್ಲ. ಮೌಢ್ಯತೆ, ಪ್ರಾಣಿ ಬಲಿ ವಿರುದ್ಧ ದೊಡ್ಡ ದನಿಯಲ್ಲದಿದ್ದರೂ ಸಣ್ಣ ದನಿಯನ್ನು ಪಂಡಿತಾರಾಧ್ಯರು ಎತ್ತಿದ್ದಾರೆ. ಇದಕ್ಕೆ ಅವರನ್ನ ಅಭಿನಂದಿಸಲೇಬೇಕು. ದಾವಣಗೆರೆಯಲ್ಲಿ ಲಾಗಾಯ್ತಿನಿಂದಲೂ ನಡೆಯುತ್ತಿರುವ ದುರ್ಗಾಂಬಿಕಾ ಜಾತ್ರಾ ಮಹೋತ್ಸವದಲ್ಲಿ ಕೋಣ ಬಲಿ ಕೊಡುವುದರ ವಿರುದ್ಧ ದನಿ ಎತ್ತುವ ಮೂಲಕ ಪ್ರಥಮ ಬಾರಿಗೆ ದನಿ ಎತ್ತಿ, ಕಳಕಳಿ ವ್ಯಕ್ತಪಡಿಸಿದ್ದರು. ಆದರೆ, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯರು ಇವರಿಗೆ ಬೆಂಬಲಿಸಿದ್ದರ ಬಗ್ಗೆ ಎಲ್ಲಿಯೂ ಕೇಳಿ ಬರಲಿಲ್ಲ. ಕನಿಷ್ಠ ಉಸಿರೆತ್ತಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಅಂದ ಹಾಗೇ, ದುರ್ಗಾಂಬಿಕೆಗೆ ಕೋಣ ಬಲಿ ಕೊಡುವ ಪದ್ಧತಿ ಇವತ್ತು ನೆನ್ನೆಯದಲ್ಲ. ತಲ ತಲಾಂತರಗಳಿಂದಲೂ ನಡೆದು ಬರುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಕೂಡ ಸಿರಿಗೆರೆಯ ಡಾ.ಶಿವಮೂರ್ತಿ ಶ್ರೀಗಳಾಗಲೀ, ಪಂಡಿತಾರಾಧ್ಯ ಶ್ರೀಗಳಾಗಲೀ ತುಂಬಾ ಮೊದಲೇ ಕೋಣ ಬಲಿಯನ್ನ ನಿಷೇಧಿಸಲು ಅರಿವು ಮೂಡಿಸಬಹುದಿತ್ತು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಶ್ರೀಗಳು, 60ರ ಇಳಿ ವಯಸ್ಸಿನಲ್ಲಿ ಅದೂ ದಿಢೀರ್ ಎಂದು ಕೋಣ ಬಲಿ ನಿಷೇಧಿಸುವುದರ ಬಗ್ಗೆ ದನಿ ಎತ್ತಿದ್ದರ ಹಿಂದೆ ಒಂದಷ್ಟು ಪ್ರಶ್ನೆಗಳಿವೆ. ಇಲ್ಲಿ ಪ್ರಶ್ನೆಗಳಿರುವುದು ಕೋಣ ಬಲಿ ವಿರುದ್ಧ ದನಿ ಎತ್ತಿದ್ದಕ್ಕಲ್ಲ. ದನಿ ಎತ್ತಿರುವ ಕಾಲಘಟ್ಟದ ಬಗ್ಗೆ.

ಇದೇ ದುರ್ಗಾಂಬಿಕ ಜಾತ್ರಾ ಮಹೋತ್ಸವ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಸ್ಥಳೀಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೂ ಈ ವಿಚಾರ ಗೊತ್ತಿಲ್ಲವೆಂದೇನಿಲ್ಲ. ಕೋಣ ಬಲಿ ನಿಷೇಧಿಸುವ ಬಗ್ಗೆ ನಿಜಕ್ಕೂ ಶ್ರೀಗಳಲ್ಲಿ ಇಚ್ಛಾಶಕ್ತಿ ಇದ್ದಿದ್ದರೇ ತಮ್ಮ ಮಾತುಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿರುವ ಶಾಮನೂರು ಶಿವಶಂಕರಪ್ಪನವರಿಗೆ ಈ ಬಗ್ಗೆ ತಾಕೀತು ಮಾಡಬಹುದಿತ್ತಲ್ಲ?

ಕೋಣ ಬಲಿ ಬಗ್ಗೆ ಪ್ರಸ್ತಾಪವಾಗಿರುವ ಕಾರಣದಿಂದಾಗಿ  ನರ ಬಲಿಯನ್ನೂ ಪ್ರಸ್ತಾಪಿಸುವುದು ಉಚಿತ ಎನ್ನಿಸುತ್ತದೆ. ರಾಣೆಬೆನ್ನೂರು ತಾಲೂಕಿನ ತಿರುಮಲದೇವರಕೊಪ್ಪ ಎನ್ನುವ ಸಣ್ಣ ಊರಿನಲ್ಲಿ ಸಿರಿಗೆರೆ ಮಠಕ್ಕೆ ನಡೆದುಕೊಳ್ಳುವ ಭಕ್ತನಿಂದ ದಲಿತ ಸಮುದಾಯಕ್ಕೆ ಸೇರಿರುವ ಯುವಕನನ್ನು ವಾಸ್ತು ಬದಲಿಸುವ ನೆಪದಲ್ಲಿ ಬಲಿ ತೆಗೆದುಕೊಂಡಿದ್ದರೂ (ಹಾವೇರಿ ಪೊಲೀಸರು ಈ ಪ್ರಕರಣವನ್ನ ನರಬಲಿ ಎಂದು ಕರೆಯದೇ ಅನೈತಿಕ ಸಂಬಂಧ ಎಂದು ಹಣೆಪಟ್ಟಿ ಕಟ್ಟಿ ಸಹಜ ಕೊಲೆ ಪ್ರಕರಣ ಎಂದು ಮುಚ್ಚಿ ಹಾಕಿದೆ) ಪಂಡಿತಾರಾಧ್ಯ ಶ್ರೀಗಳು ಮತ್ತು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಮ್ಮ ಭಕ್ತರಿಗೆ ಇದರ ಬಗ್ಗೆ ನಿಜವಾದ ಅರ್ಥದಲ್ಲಿ ಜಾಗೃತಿ ಮೂಡಿಸಬಹುದಿತ್ತಲ್ಲ?

ಇವರಿಬ್ಬರಷ್ಟೇ ಅಲ್ಲ. ವಿವಿಧ ಕೋಮುಗಳಿಗೆ ಸೇರಿರುವ ಯಾವ ಮಠಾಧೀಶರೂ ನರಬಲಿ ಪ್ರಕರಣವನ್ನು ಇವತ್ತಿಗೂ ಗಂಭಿರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಷಾದ ಎನಿಸದಿರದು. ಇರಲಿ, ಸಿರಿಗೆರೆ ಮಠದಿಂದಲೇ ಯಾಕೆ ಇಂಥ ಕೆಲಸ ಆಗಬೇಕಿದೆ ಎಂದರೇ, ಈ ಮಠಕ್ಕಿರುವ ಭಕ್ತ ವೃಂದ, ಅಪಾರ ಪ್ರಮಾಣದಲ್ಲಿದೆ. ಸಹಜವಾಗಿ ಆಯಾ ಸಮುದಾಯದ ಮಂದಿ, ತಮ್ಮ ಸಮುದಾಯದ ಮಠಾಧೀಶರು ಹೇಳುವ ಮಾತುಗಳನ್ನ ಅಕ್ಷರಶಃ ಪಾಲಿಸುತ್ತಾರೆ ಎನ್ನುವ ನಂಬಿಕೆಯಿಂದ.

ಶಿಕ್ಷಣ ವ್ಯಾಪಾರೀಕರಣ, ಅನುಭವ ಮಂಟಪ :

ಇನ್ನು, ಸಿರಿಗೆರೆ ಶ್ರೀಗಳ ಬಗ್ಗೆ ಅಪಸ್ವರ ಎತ್ತಿದ್ದಕ್ಕೆ ಒಂದಷ್ಟು ಮಂದಿ ತಗಾದೆ ತೆಗೆದರು. ಅವರ ಮುಖ್ಯ ತಗಾದೆಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸಿರಿಗೆರೆ ಮಠ ಮಾಡಿರುವ ಕೆಲಸವನ್ನು ನೆನೆಯದಿರುವುದಕ್ಕೆ. ನಿಜಕ್ಕೂ ಹೇಳುವುದಾದರೇ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡಿರುವ ಮಠಗಳಲ್ಲಿ ಸಿರಿಗೆರೆ ಮಠವೂ ಒಂದು ಎಂಬುದನ್ನ ತಗಾದೆ ಎತ್ತಿರುವವರು ಗಮನಿಸಬೇಕು.

ನಿಮಗೆ ಅನುಭವ ಮಂಟಪದ ಹೆಸರು ಗೊತ್ತಿರಬೇಕಲ್ಲ. 12ನೇ ಶತಮಾನದಲ್ಲಿ ನಿಜವಾದ ಕ್ರಾಂತಿ ಸಂಭವಿಸಿದ್ದೇ ಈ ಅನುಭವ ಮಂಟಪದ ಮೂಲಕ. ದಾವಣಗೆರೆ ನಗರದಲ್ಲಿ “ಅನುಭವ ಮಂಟಪ”ದ ಹೆಸರಿನಲ್ಲಿ ಶಾಲಾ ಕಾಲೇಜು ನಡೆಸುತ್ತಿರುವ ಸಿರಿಗೆರೆ ಮಠ, ಡೊನೇಷನ್ ಹೆಸರಿನಲ್ಲಿ ಪೋಷಕರನ್ನು ಸುಲಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅಷ್ಟು ಸುಲಭವಾಗಿ ಇಲ್ಲಿ ಪ್ರವೇಶ ದೊರೆಯುವುದಿಲ್ಲ. ಸರ್ಕಾರ ಡೊನೇಷನ್ ನಿಷೇಧಿಸಿದ್ದರೂ “ಅನುಭವ ಮಂಟಪ” ಶಾಲೆ ಮಾತ್ರ ಬೋಧನಾಶುಲ್ಕಕ್ಕೆ ಹೊರತಾದ ಡೊನೇಷನ್ ತೆಗೆದುಕೊಳ್ಳುವುದರಿಂದ ಹಿಂದೆ ಸರಿದ ಹಾಗೆ ಕಾಣುವುದಿಲ್ಲ.

ಅಣ್ಣ ಬಸವಣ್ಣನ ಆಶಯಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುವ ಮಠಗಳಲ್ಲಿ ಸಿರಿಗೆರೆ ಮಠ ಅಗ್ರಗಣ್ಯ. ಇಂಥ ಮಠ, ಮೇಲಿನ ಮಾತುಗಳೆಲ್ಲ ನಿಜವೇ ಆದರೆ, ಶಿಕ್ಷಣವನ್ನು  ವ್ಯಾಪಾರೀಕರಣ ಮಾಡಿರುವುದು, ಅದರಲ್ಲೂ ಶಾಲೆ, ಕಾಲೇಜಿಗೆ ಅನುಭವ ಮಂಟಪ ಹೆಸರಿಟ್ಟು, ಡೊನೇಷನ್ ಹೆಸರಿನಲ್ಲಿ ವಸೂಲಿಗಿಳಿದಿರುವುದು ನಿಜಕ್ಕೂ ದುರದೃಷ್ಟಕರ. ಶಿಕ್ಷಣವನ್ನು ಅಕ್ಷರಶಃ ವ್ಯಾಪಾರೀಕರಣ ದೂಡಿರುವ ಸಿರಿಗೆರೆ ಮಠ, ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ನಿಜ ಶರಣರು ಅರಿಯಬೇಕಿದೆ. ಎಲ್ಲಿಯ ಬಸವ ಕಲ್ಯಾಣದ ಅನುಭವ ಮಂಟಪ? ಎಲ್ಲಿಯ ಸಿರಿಗೆರೆಯ ಅನುಭವ ಮಂಟಪ?

ಇನ್ನು, ಸಿರಿಗೆರೆ ಮಠದ ಆಶ್ರಯದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನೇಮಕಾತಿಯಲ್ಲೂ ಹಣದ ಚೀಲ ತಂದವರಿಗಷ್ಟೇ ಇಲ್ಲಿ ಮನ್ನಣೆ ಎನ್ನುವ ವಾತಾವರಣ ಇದೆ ಎನ್ನುವ ಮಾತಿದೆ. ಯಾರೂ ಇದನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಮಠ ಕಳಿಸುವ ಪಟ್ಟಿಯನ್ನೇ ಸರ್ಕಾರ ಮಾನ್ಯ ಮಾಡಬೇಕು. ಅಂಥದ್ದೊಂದು ಅಘೋಷಿತ, ಅಲಿಖಿತ ಆಜ್ಞೆ. ಹಾಗೆಯೇ, ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಕನಿಷ್ಠ ಆರೇಳು ಲಕ್ಷ ರೂಪಾಯಿ ಕೊಟ್ಟವರಿಗಷ್ಟೇ ಮಠದ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದಂತೆ. ಆಕಸ್ಮಾತ್ ಹಣ ಇಲ್ಲದಿದ್ದರೇ, ಶ್ರೀಗಳು ತೋರಿಸುವ ಕನ್ಯೆಯನ್ನು ವಿವಾಹ ಆಗುವ ಮೂಲಕ ಅದನ್ನು ಸರಿದೂಗಿಸಬೇಕಂತೆ. ಈ ಮಾತುಗಳು ಕಪೋಲ ಕಲ್ಪಿತವಲ್ಲ, ಬದಲಿಗೆ  ಮಠದಲ್ಲಿ ಕೇಳಿ ಬರುವ ಪ್ರಚಲಿತ ಮಾತುಗಳು. ಇವೆಲ್ಲ ಹಿಂದಿನ ಹಿರಿಯ ಸ್ವಾಮಿಗಳನ್ನು ನೋಡಿ ಬೆಳೆದ ಈ ಮಠಕ್ಕೆ ನಡೆದುಕೊಳ್ಳುವ ಹಳೆತಲೆಮಾರಿನ ಪ್ರಾಮಾಣಿಕ ಭಕ್ತರಿಗೆ ಇರಿಸುಮುರಿಸು ಮಾಡಿದೆ ಎನ್ನುವ ಮಾತಿದೆ.

ಇವು, ಸಿರಿಗೆರೆ ಶ್ರೀಗಳು ಮತ್ತು ಶಾಖಾ ಮಠಗಳ ಶ್ರೀಗಳ ಬಗ್ಗೆ ಇರುವ ಆಕ್ಷೇಪಗಳು. ಇಂಥ ಮಠಗಳ ಪಾಲಿಗೆ ಅಣ್ಣ ಬಸವಣ್ಣ ಕೇವಲ ಒಂದು ಸರಕಷ್ಟೇ.

ಈಗ ನೀವೇ ಹೇಳಿ, ಬಸವಣ್ಣನ ಆಶಯಗಳಿಗೂ, ಸಿರಿಗೆರೆ ಮಠದ ಆಶಯಗಳ ಮಧ್ಯೆ ಏನಾದರೂ ಸಾಮ್ಯತೆಗಳಿವೆಯಾ? ಬಸವಣ್ಣನ ಆಶಯಗಳಿಗೆ ಪೂರಕವಾಗಿ ಸಿರಿಗೆರೆ ಮಠ ಯಾವತ್ತೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಇದರಿಂದ ಸ್ಪಷ್ಟ ಅಗಬಹುದೇನೋ?