Daily Archives: September 23, 2012

ಕಥೆ : ಹಂಬಲದ ಹೂ… ಮೋಹದ ಮುಳ್ಳು


-ಡಾ.ಎಸ್.ಬಿ. ಜೋಗುರ


 
ಅವರಪ್ಪ ನೆಟ್ಟ ಆಲದ ಮರವೀಗ ಜೋರದಾರ್ ಇಮಾಮಸಾಬನ ಡೀಪೂದೊಳಗ ವಡಗಟಕಿ ಆಗಿ ಒಂದರ ಮ್ಯಾಲೊಂದು ಗದ್ದ ಹೇರಕೊಂಡು ಗುಡ್ಡದಂಗ ಬಿದ್ದಕೊಂಡಿತ್ತು. ಮಣಕ್ಕ ನೂರು ರೂಪಾಯಿದಂಗ ಮಾರಾಟ ಆಗಿ, ಊರ ಮಂದಿ ಒಲಿ ಪುಟುವಿಗೆ ಆಸರಾಗಿತ್ತು. ಖುದ್ದಾಗಿ ಕಟಬಿಟಿ ಮಾಡಿ ಉರುಳಿಬಿದ್ದ ಗಿಡದ ಬಡ್ಯಾಗ ಬೀಜಾ ಹಾಕೂ ಹಿಕಮತ್ತು ಗುರಸಿದ್ದನ ಮೂರೂ ಮಕ್ಕಳಿಗಿರಲಿಲ್ಲ. ಅವರಪ್ಪನ ಗೋರಿ ಮ್ಯಾಲಿನ ಹೂವಿನ ಹಾರ ಬಾಡೂ ಮೊದಲೇ ಕಡದು ಗುಡ್ಡಾ ಹಾಕ್ತೀವಿ ಅನ್ನೂವಂಗ ನಿಂತ ಬೈಟಕ್ ಮ್ಯಾಲ ಆಸ್ತಿ ಪಾಲ ಮಾಡ್ಕೊಂಡು ಮೆರಿಯಾಕ ಸುರು ಮಾಡದರು. ಗುರಸಿದ್ದಗ ಒಬ್ಬಳೇ ಮಗಳು. ಅಣ್ಣತಮ್ಮದೇರ ಜೋಡಿ ಜಗಳಾಡಿ ಪಾಲ ಕೇಳೂದು ಚಂದಲ್ಲ ಅಂತ ಅಕಿ ಆಸ್ತಿ ಬಗ್ಗೆ ಮಾತೇ ಆಡಿರಲಿಲ್ಲ. ಅಕಿದೇ ಸುಟ್ಟರ ಸುಡಲಾರದಷ್ಟು ಆಸ್ತಿ ಇತ್ತು. ಅಕಿ ಗಂಡ ಸಿದ್ರಾಮಪ್ಪ ‘ಹುಚಗೊಟ್ಟಿಯಂಗ ಮಾಡಬ್ಯಾಡ ಅದು ನಿಮ್ಮಪ್ಪನ ಆಸ್ತಿ. ಕೈದೆಸಿರಿ ಅವರು ನಿನಗ ಅದರಾಗ ಪಾಲ ಕೊಡಬೇಕು’ ಅಂತ ಚಾವಿ ಕೊಟ್ಟ ಮ್ಯಾಲೂ ಶಿವನಿಂಗವ್ವ ಗಂಡನ ಮಾತ ಕಿವ್ಯಾಗ ಹಾಕೊಳಿಲ್ಲ. ಅವಳ ಅತ್ತಿ ತಾಯವ್ವ ‘ನಿನ್ನ ಅಣ್ಣತಮ್ಮದೇರು ಬಾಳ ಜಾಬಾದಿ ಅದಾರ, ನಾಳೆ ನೀ ತವರಮನಿಗಿ ಹೋದರ ಅವರೇನು ಬಾ ಅನ್ನೂ ಪೈಕಿ ಅಲ್ಲ. ಸುಮ್ಮ ಒಂದಿಟು ಹೊಲಾ ಮನಿ ಬರತೈ,ತಿ ತಗೊಂಡು ಕುಂದ್ರು’ ಅಂತ ಹೇಳದ ಮ್ಯಾಲೂ ಶಿವನಿಂಗವ್ವ ಅದರ ಬಗ್ಗೆ ಆಸೆನೇ ಮಾಡಿರಲಿಲ್ಲ. ಇಕಾಡಿ ಗುರಸಿದ್ದನ ಮಕ್ಕಳಾದ ಚನಮಲ್ಲ, ಶಿವಶಂಕರ, ಕಲ್ಲಪ್ಪ ಆಸ್ತಿ ಪಾಲು ಮಾಡೂ ಮುಂದ ತಂಗಿ ಶಿವನಿಂಗವ್ವಳ ನೆನಪು ಸೈತ ಮಾಡಿರಲಿಲ್ಲ. ಚನಮಲ್ಲನ ಹೆಂಡತಿ ಸುಭದ್ರವ್ವ ಗಂಡನ ಮುಂದ ‘ನಿಮಗ ಇರೂದೇ ಒಬ್ಬಾಕಿ ತಂಗಿ, ಅಕ್ಕ-ತಂಗಿದೇರಿಗಿ ಕೊಟ್ಟರ ಅದೇನು ಕಡಿಮಿ ಆಗೂವಂಗಿಲ್ಲ. ಅಕಿಗೊಂದೆರಡು ಎಕರೆ ಕೊಡ್ರಿ’ ಅಂದದ್ದೇ ಕಿರಿ ಸೊಸಿ ಪಾರವ್ವ ‘ಕೊಡೂದಿದ್ರ ನಿನ್ನ ಗಂಡನ ಪಾಲದಾಗ ಕೊಡು ನಾವಂತೂ ಕೊಡಲ್ಲ. ಅಕಿಗೇನು ಕಮ್ಮಿ ಐತಾ? ನೂರಾರು ಎಕರೆ ಜಮೀನು ಇದ್ದಕಿ. ನಮಗ ಮಕ್ಕಳು ಮರಿ ಅದಾವ, ಅಕಿಗಿ ಮಕ್ಕಳೂ ಇಲ್ಲ ಮರೀನೂ ಇಲ್ಲ’ ಅಂತ ಮಣ್ಣ ಕೊಟ್ಟು ಬಂದ ಮಂದಿ ಮುಂದೇ ವಡವಡ ಒದರಾಡಿ ಅಕಿ ಖರೆನೆ ಸಣ್ಣ ಸೊಸಿ ಆಗಿದ್ದಳು. ಊರಾನ ಹಿರೇರ ಮುಂದ ಹ್ಯಾಂಗ ಮಾತಾಡಬೇಕು ಅನ್ನೂ ಖಬರ್ ಸೈತಾ ಇಲ್ಲ ಅಕಿಗಿ ಅಂತ ಒಣ್ಯಾಗಿನ ಮಂದಿ ಮಾತಾಡೂದು ಅಕಿ ಕಿವಿಗಿ ಬಿದ್ದರೂ ಅವಳೇನು ತಲಿ ಕೆಡಿಸಿಕೊಂಡಿರಲಿಲ್ಲ. ಗುರುಸಿದ್ದನ ಮೂರೂ ಮಕ್ಕಳ ಹೊಟ್ಟೀಲೇ ಮೂರು, ನಾಕು ಮಕ್ಕಳು. ಹಿರಿ ಮಗ ಚನಮಲ್ಲನ ಮಕ್ಕಳು ಕೈಗಿ ಬಂದಂಗ ಆಗಿದ್ದರು. ಈ ಚನ್ನಮಲ್ಲಗ ಒಟ್ಟ ಐದು ಮಕ್ಕಳು. ಮೂರು ಗಂಡು, ಎರಡು ಹೆಣ್ಣು. ಅವನ ಬೆನ್ನ ಮ್ಯಾಲ ಶಿವಶಂಕರಪ್ಪ, ಆಂವಗೂ ನಾಕು ಮಕ್ಕಳು, ಎರಡು ಗಂಡು, ಎರಡು ಹೆಣ್ಣು. ಕಡಿಯುವ ಕಲ್ಲಪ್ಪ ಅಂವಗೂ ಮೂರು ಮಕ್ಕಳು. ಮೂರೂ ಗಂಡು ಹುಡುಗರು. ಕಲ್ಲಪ್ಪನ ಬೆನ್ನ ಮ್ಯಾಲ ತಂಗಿ ಗೋಲಗೇರಿ ಶಿವನಿಂಗವ್ವ. ಗುರಸಿದ್ದಪ್ಪ ಒಳಗಿನ ಸಂಬಂಧದೊಳಗೇ ಮಗಳ ಮದುವಿ ಮಾಡಿ ಕೊಟ್ಟಿದ್ದ. ಶಿವನಿಂಗವ್ವಳ ಮಾವ ಗುರಸಿದ್ದನ ಸೋದರಮಾವನೇ ಆಗಬೇಕು. ಶಿವನಿಂಗವ್ವಗ ಮಕ್ಕಳಾಗಿರಲಿಲ್ಲ. ಅವರೂ ಮನಾರ ತೋರಸಿದ್ರು, ದೇವರು ದಿಂಡರು ಅಂತ ರಗಡ ಮಾಡಿದ್ದರು ಆದರೂ ಮಕ್ಕಳಾಗಿರಲಿಲ್ಲ. ಸಿದ್ರಾಮಪ್ಪ ತನ್ನ ತಮ್ಮನ ಮಗ ರಮೇಶನನ್ನೇ ದತ್ತಕ ತಗೊಂಡಿದ್ದ. ಸಿದ್ರಾಮಗ ನೂರಾರು ಎಕರೆ ಜಮೀನಿತ್ತು. ಅನಾಮತ್ತಾಗಿ ನೂರಾರು ಚೀಲ ಕಾಳುಕಡಿ ಬರೂವಂಗಿತ್ತು. ಹಿಂಗಾಗಿ ಇನ್ನೊಬ್ಬರ ಆಸ್ತಿಗಿ ಆಸೆ ಪಡೊ ಮನಸ್ಯಾ ಅಂವಲ್ಲ. ತನ್ನ ಹೆಂಡತಿ ಅಣ್ಣತಮ್ಮದೇರು ಅಪ್ಪನ್ನ ಹೂತು ಬಂದದ್ದೇ ಆಸ್ತಿ ಸಲಾಗಿ ನ್ಯಾಯಾ ತಕ್ಕೊಂಡು ಕುಂತಿದ್ದು ನೋಡಿ ಅಂವಗ ಬಾಳ ಖಜೀಲಿ ಅನಿಸಿತ್ತು. ಅದಕ್ಕೇ ಒಂದು ಮಾತ ಆ ಕುರಸಾಲ್ಯಾಗೋಳಿಗಿ ಬಿಡಬ್ಯಾಡ ನೀನೂ ಪಾಲು ಕೇಳು ಅಂತ ಬೆನ್ನ ಹತ್ತಿದ್ದ. ಅವರೇ ಜಗಳಾಡೂದು ನೋಡಿ ಹಾಳಾಗಿ ಹೋಗಲಿ ಅಂತ ಸುಮ್ಮ ಉಳದಿದ್ದ. ಓಣ್ಯಾನ ಹಿರೇರಿಗಿ ಇವರಿಗಿ ಆಸ್ತಿ ಪಾಲು ಮಾಡಿ ಕೊಡೂ ಮಟಾ ಸಾಕುಬೇಕಾಗಿ ಹೊಯಿತು. ಹೊಲದಾಗಿನ ಬಾಂದಾ ಮ್ಯಾಲ ಇರೋ ಗಿಡದ ಟೊಂಗೆ ಸೈತಾ ಪಾಲ ಆಗಬೇಕು ಅಂತ ಅವರು ಜಗಳಾಡೂದು ನೋಡಿ ಇದೇನು ಬಗೆ ಹರಿಯೋ ಮಾತಲ್ಲ ಅಂತ ಹಿರೇರು ಎಲ್ಲಾ ಕೈಚೆಲ್ಲಿದ್ದರು. ಚನ್ನಮಲ್ಲಗ ಮತ್ತೀಗ ಬಿಟ್ಟರ ಮುಂದ ಆಗೂವಂಗಿಲ್ಲ ಅಂತ ಗೊತ್ತಿತ್ತು. ‘ನೀವೆಲ್ಲಾ ಹಿರೇರು ಹ್ಯಾಂಗ ಹೇಳ್ತೀರಿ ಹಂಗ’ ಅಂತ ಅಂದ ಮ್ಯಾಲ ಬೆಳ್ಳ ಬೆಳತನ ಕುಂತು ಪಾಲು ಮಾಡಿ ಬಗಿಹರಿಸಿದ್ದಿತ್ತು. ಇನ್ನೇನು ಎಲ್ಲಾ ಮುಗೀತು ಅನ್ನೂದರೊಳಗ ಕಲ್ಲಪ್ಪ ಅಂಗಳದಾಗಿನ ಎರಡು ಹಗೆ ಯಾರಿಗೆ ಹೋಗಬೇಕು? ಅನ್ನೋ ಪ್ರಶ್ನೆ ಎತ್ತಿದ್ದ. ಹಗೆಯೊಳಗ ಜ್ವಾಳಾ ಹಾಕೂದು ಬಿಟ್ಟೇ ಇಪ್ಪತ್ತು ವರ್ಷ ಆಗಿತ್ತು. ಹಿಂಗಾಗಿ ಆ ಹಿರೇರಿಗೂ ಆ ಹಗೆ ದ್ಯಾಸಕ್ಕ ಬಂದಿರಲಿಲ್ಲ. ಗುರಸಿದ್ದಗ ಮೂರು ಗಂಡು ಮಕ್ಕಳು. ಹಗೆ ನೋಡದರ ಎರಡು ಅದಾವ,  ಹ್ಯಾಂಗ ಪಾಲು ಮಾಡೂದು ಅನ್ನೂದು ಅವರಿಗಿ ತಿಳಿಲಾರದಂಗ ಆಯಿತು. ಶಿವಶಂಕರಪ್ಪ ಬಾಳ ದೊಡ್ಡ ಮನಸ ಮಾಡಿ ನನಗೇನು ಹಗೆ ಬ್ಯಾಡ ಅವರಿಬ್ಬರಿಗೇ ಹಂಚರಿ. ಅದರ ಬದಲೀ ದೊಡ್ಯಾಗಿರೋ ಪಾಯಿಖಾನಿ ಮಾತ್ರ ನನ್ನ  ಪಾಲಿಗಿ ಇರಲಿ ಅಂದದ್ದೇ ಅವರಿಗೂ ಅದೇ ಚುಲೋ ಅನಸ್ತು. ಅಷ್ಟಕ್ಕೂ ತಮ್ಮ ಮನ್ಯಾಗ ಯಾರೂ ಆ ಪಾಯಿಖಾನಿ ಸಮೀಪ ಹೋಗುವಂಗಿಲ್ಲ. ಏನಿದ್ದರೂ ಎಲ್ಲರೂ ಬಯಲಕಡಿಗೇ ನಡೆಯವ್ರು ಅಂತ ಶಿವಶಂಕರಪ್ಪನ ಕರಾರಿಗೆ ಹುಂ ಅಂದರು. ಆ ಹಿರೆರಿಗೆಲ್ಲಾ ಈ ಹಗೆ ಹಂಚಕೊಂಡಿದ್ದೇ ಬಾಳ ಖುಷಿ ಕೊಟ್ಟಿತ್ತು. ಗುರಸಿದ್ದಪ್ಪ ಸತ್ತು ಒಂದು ದಿನ ಕಳಿಯೊದರೊಳಗ ಮೂರೂ ಮಕ್ಕಳು ಬ್ಯಾರಿ ಆಗಿದ್ದರು.

***

ಇರೋ ಒಂದು ಮನಿ ಮೂರು ಪಾಲದೊಳಗ ಹಂಚಿಕಿ ಆಗಿ ದನಾ ಕಟ್ಟೊ ಅಂಗಳ ಸೈತಾ ಅಂದಗೇಡಿಯಾಗಿತ್ತು. ಅಂಗಳದ ನಟ್ಟ ನಡುವ ಇರೋ ಎರಡೂ ಹಗೆದಮ್ಯಾಲ ಒಂದೊಂದು ಕೋಲಿ ಎದ್ವು. ಚನ್ನಮಲ್ಲನ ಇಸ್ಪೀಟ್ ಆಡೂ ಚಟಕ್ಕ ಪಾಲಾದ ಆಸ್ತಿ ತಿಂಗಳೊಪ್ಪತ್ತಿನೊಳಗ ನಿಖಾಲಿಯಾದಂಗ ಆಗಿತ್ತು. ಶಿವಶಂಕರಪ್ಪ ಆರಕ್ಕೇರಲಾರದೇ. ಮೂರಕ್ಕಿಳಿಯಲಾರದೇ ಇದ್ದಿದ್ದರೊಳಗೇ ಹತ್ಯಾಗಿ ಸಂಸಾರ ಮಾಡಕೊಂಡು ಹೊಂಟಿದ್ದ. ಕಲ್ಲಪ್ಪ ಮೊದಲೇ ರಿಕಾಮಿ, ಕೈಗಿ ಆಸ್ತಿ ಬಂದ ಮ್ಯಾಲ ಕೆಟ್ಟ ಕುಡುಕ ಆಗಿ ಒಂದೊಂದು ಗೊತ್ತಿಗಿ ಹಚ್ಚತಾ ನಡದಿದ್ದ. ಮಕ್ಕಳು ಇನ್ನೂ ಸಣ್ಣವರು. ಪಾರವ್ವ ಗಂಡಗ ಈ ಚಟಾ ಚಲೋ ಅಲ್ಲ ಅಂತ ಎಟ್ಟು ಹೇಳದರೂ ಕೇಳಲಿಲ್ಲ. ಮಕ್ಕಳ ಮುಂದಿನ ಬದುಕು ಹ್ಯಾಂಗ ಅನ್ನೂದು ಒಂಚೂರೂ ಯೋಚನೆ ಮಾಡಲಾರದೇ ಹ್ಯಾಂಗ ಬೇಕು ಹಂಗ ಕುಡದು ಹಿರೇರ ಆಸ್ತಿನೆಲ್ಲಾ ಕಲ್ಲಪ್ಪ ಗೊತ್ತಿಗಿ ಹಚ್ಚಿದ್ದ. ಅವರಪ್ಪ ಇರೋ ಕಾಲಕ್ಕ ಎರಡೂ ಹಗೆದೊಳಗ ನೂರಾರು ಚೀಲ ಜೋಳ ತುಂಬಿ ತುಳಕತ್ತಿದ್ವು. ಅವು ಅಂತಿಂಥಾ ಹಗೆ ಅಲ್ಲ ಗುಂಡಕ ಕರಿ ಕಲ್ಲಿಂದ ಸುತ್ತಲೂ ಬಾವಿ ಕಟ್ಟದಂಗ ಮಜಭೂತಾಗಿ ಕಟ್ಟಿದ್ದರು. ಇಪ್ಪತ್ತು ಅಡಿ ಉದ್ದ ಹತ್ತಡಿ ಅಗಲ ಇಂಥಾ ಹಗೆಯೊಳಗ ಕೈಹಾಕದರ ಸಾಕು ಸಿಗುವಂಗ ಜೋಳಾ ತುಂಬಿರತಿದ್ದರು. ಅದರಲ್ಲಿ ವರ್ಷಗಟ್ಟಲೆ ಹಾಕಿಟ್ಟ ಜ್ವಾಳ ತಾಜಾ ಇರತಿದ್ವು. ಕಾಲ ಸರದಂಗ ಒಳಗ ಹಾಕಿರೋ ಜ್ವಾಳಾ ಮುಗ್ಗ ಆಗಲಿಕ್ಕ ಶುರು ಆದಿಂದ ಗುರಸಿದ್ದ ಅಲ್ಲಿ ಜ್ವಾಳಾ ಹಾಕೂದನ್ನ ಬಿಟ್ಟಿದ್ದ. ಆ ಹಗೆಯೊಳಗ ಇಳಿಯೂದೇ ಒಂದು ದೊಡ್ದ ಸಾಹಸ. ದಮ್ಮಿನವರು ಒಳಗ ಇಳಿದರ ಮ್ಯಾಲಿನ ಉಸಿರ ಮ್ಯಾಲ ಕೆಳಗಿನ ಉಸಿರು ಕೆಳಗ ಆಗಿ ಜೀವ ಕಲಾಸೇ.. ಹಂಗಾಗೇ ಒಳಗ ಇಳಿಯೂದಿದ್ರ ಗುರಸಿದ್ದಪ್ಪ ಕುರಿ ತುಳಜಪ್ಪನನ್ನೇ ಕರಸತ್ತಿದ್ದ. ಹಗೆದ ಬಾಯಿ ಮ್ಯಾಲಿರೋ ಪಾಟೀಗಲ್ಲಿಗೆ ಸುತ್ತಾಲಕೂ ಮೆತ್ತಿದ ಕರ್ಲಮಣ್ಣು ತಗದು ಹಗೂರಕ ಆ ಪಾಟೀಗಲ್ಲು ಮ್ಯಾಲ ಎತ್ತಿದ್ದೇ ಬುಶ್..! ಅಂತ ಬಿಸಿಬಿಸಿ ಹವಾ ಹೊರಗ ಬರತ್ತಿತ್ತು. ಹಗೆಯೊಳಗಿನ ಜ್ವಾಳಾ ತಗದು ಚೀಲಕ್ಕ ತುಂಬ್ತಾ ಹೋದಂಗ ಹಗೆ ಖಾಲಿಯಾಗ್ತಾ ಬರತ್ತಿತ್ತು. ಹಗೆ ತಳಕ್ಕ ಹತ್ತದಾಗ ಒಳಗ ಇಣುಕಿ ನೋಡೂದು ಸೈತಾ ಭಯ ಹುಟ್ಟಸತ್ತಿತ್ತು. ಅಂತದರೊಳಗೂ ಆ ಕುರಿ ತುಳಜಪ್ಪ ಕೆಳಗ ಕುಂತು ಬಕಿಟ್ ತುಂಬಿ ತುಂಬಿ ಕೊಡತ್ತಿದ್ದ. ಮೊದಲೇ ಕರಿಮೈ. ಒಳಗಿನ ಝಳಕ ಮೈ ಅನೂದು ಬೆವರತಾ ಬೆವರಿ, ಒಂದು ಸವನ ಮಿರಿಮಿರಿ ಮಿಂಚತಿತ್ತು. ಒಂಥರಾ ಕುಮುಸುಗಟ್ಟಿದ ವಾಸನೆನೂ ಮೂಗಿಗಿ ಹೊಡೀತಿತ್ತು. ಹಂಗ ಇಡೀ ದಿನ ಎರಡೂ ಹಗೆಯೊಳಗಿಂದ ಜ್ವಾಳಾ ತಗಿಯೂದೇ ಒಂದು ಕಸರತ್ತು ಆಗಿರತಿತ್ತು. ಈಗ ಆ ಪರಿ ಜೋಳಾನೂ ಬೆಳಿಯುವಂಗಿಲ್ಲ ಹಂಗೇ ಆ ತರದ ಹಗೆಗಳೂ ಇಲ್ಲ. ಗುರಸಿದ್ದನ ಕಾಲಕ್ಕ ಬಾಳ ದೊಡ್ಡದು ಅಂತ ಗುರತಿಸಿಕೊಂಡಿದ್ದ ಮನಿ ಮೂರು ಪಾಲು ಆದ ಮ್ಯಾಲ, ಮನಿಯೊಳಗೂ ಮಕ್ಕಳು ಮೊಮ್ಮಕ್ಕಳು ಅಂತ ಬಂದ ಮ್ಯಾಲ ಇರೋ ಆ ಮನಿ ಸಾಕಾಗಲಿಲ್ಲ. ಹಂಗಂತ ಬ್ಯಾರೇ ಜಾಗಾ ತಗೊಂಡು ಮನಿ ಕಟ್ಟಿಸೂವಷ್ಟು ಶಾಣೆರೂ ಅವರಲ್ಲ. ಅಲ್ಲಿದಲ್ಲೇ ಇಟ್ಟು ಮಲ್ಲಿ ಮನಿ ಸಾರಸದ್ಲು ಅನ್ನೂವಂಗ ಅಂಗಳದೊಳಗ ಇರೋ ಎರಡೂ ಹಗೆ ಮ್ಯಾಲೇ ಎರಡು ಕೋಲಿ ಎಬ್ಬಿಸಿ ಸಂಸಾರ ನಡಸದ ಗುರಸಿದ್ದನ ಮಕ್ಕಳು ಅಲ್ಲೊಂದು ಅಂಗಳ ಇತ್ತು, ಎರಡು ಹಗೆ ಇದ್ವು ಅಂತ ಹೇಳಾಕ ಯಾವ ಗುರುತನ್ನೂ ಬಿಟ್ಟಿರಲಿಲ್ಲ. ಎರಡೂ ಕೈ ಬೀಸತಾ ತಿರುಗಾಡಲಿಕ್ಕ ಬರಲಾರದಷ್ಟು ಅಟಕ ಮಾಡಿ ಇಟ್ಟಿದ್ದರು. ಗುರಸಿದ್ದನ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಒಬ್ಬರಿಗೊಬ್ಬರು ತಾಳಿಲ್ಲ ಮೇಳಿಲ್ಲ ಎನ್ನುವಂಗ ಮುಖಾ ಹೊಳ್ಳಸಕೊಂಡು ತಿರಗಾಡತಿದ್ದರು. ಕಿರಿ ಸೊಸಿ ಪಾರವ್ವ ಈ ಮನಿಯೊಳಗ ತನಗಾಗಲೀ ತನ್ನ ಮಕ್ಕಳಿಗಾಗಲೀ ಸುಖಾ ಇಲ್ಲ ಅಂತ ರಾಗಾ ತಗದಳು. ಗಂಡಗ ಬಂದಷ್ಟು ಬಂತು ಇದನ್ನು ಮಾರಿ ನಡೀರಿ, ಬ್ಯಾರೆ ಕಡಿ ಜಾಗಾ ತಗೊಂಡು ಮನಿ ಕಟ್ಟಸಮ್ಮು ಅನ್ನೂ ಮಾತ ಶುರು ಮಾಡದಳು. ಮಾರಿದ ರೊಕ್ಕದಳಗೇ ತನಗೂ ಒಂದಷ್ಟು ದಿನ ಮಜಾ ಹೊಡಿಲಾಕ ಆಯಿತು ಅಂತ ಹೇಳಿ ಹೆಂಡ್ತಿ ಪಾರವ್ವ ಹಂಗ ಹೇಳಿದ್ದೇ ಅಡೂಡಿ ಮಾಡಿ ಗಂಡ ಕಲ್ಲಪ್ಪ ತನ್ನ ಪಾಲಿನ ಮನೀನ್ನ ಒಬ್ಬ ಮಾರವಾಡಿಗೆ ಮಾರಿಬಿಟ್ಟ. ಹೆಂಡತಿ ಪಾರವ್ವ ಅಕಿನ ತವರು ಮನಿಗಿ ಹೋಗಿ ಕುಂತಳು. ಗಂಡ ಕಲ್ಲಪ್ಪ ಕಿಸೆಯೊಳಗಿನ ದುಡ್ದ ಖಾಲಿಯಾಗೂಮಟ ಕುಡಕೊಂತ ತಿರಗದ. ಕಿಸೆಯೊಳಗಿನ ರೊಕ್ಕ ಖಾಲಿಯಾದ ಮ್ಯಾಲ ಹೆಂಡತಿ ಊರಾಗ ಹೋಗಿ ಬಿದ್ದಕೊಂಡ. ಅಕಿ ಮನಿ ಮಾರಿದ್ದ ರೊಕ್ಕಾ ಒಯದು ಅಕಿ ಅಪ್ಪನ ಕೈಯಾಗ ಕೊಟ್ಟು ಗಂಡ ಕಲ್ಲಪ್ಪನ ಮಂಗ್ಯಾ ಮಾಡಿದ್ದಳು. ಈ ಕಲ್ಲ ದಿನ್ನಾ ಕುಡಿಯಾಕ ಇಪ್ಪತ್ತು ರೂಪಾಯಿ ಸಲಾಗಿ ಹೆಂಡತೀಗಿ ಜೀ ಅನ್ನಾಕ ಶುರು ಮಾಡತು.

 ***

ಕಲ್ಲಪ್ಪನ ಕಡಿಂದ ಮನಿ ಖರೀದಿ ಮಾಡಿದ ಮಾರವಾಡಿ ಅದಕ್ಕ ಸುಣ್ಣ ಬಣ್ಣ ಹಚ್ಚಿಸಿ ಬಾಡಿಗಿಗೆ ಕೊಟ್ಟಿದ್ದ. ಹಗೆದ ಮ್ಯಾಲಿನ ಕೋಲಿಯೊಳಗ ಬ್ಯಾಕೋಡದ ನಾಲ್ಕು ಕಾಲೇಜ್ ಹುಡುಗರು ಬಾಡಿಗೆಗಿದ್ದರು. ಅವರೆಲ್ಲಾ ಬಿ.ಎ. ಮೊದಲ ವರ್ಷದಲ್ಲಿ ಓದತಿದ್ದರು. ಅವರು ಬಾಡಿಗೆಯಿರೋ ಆ ಕೋಲಿ ಹಗೆದ ಮ್ಯಾಲ ಕಟ್ಯಾರಂತ ಅವರಿಗಿ ಗೊತ್ತಿರಲಿಲ್ಲ. ಅವತ್ತೊಂದಿನ ರಾತ್ರಿ ಹಗೆಯೊಳಗ ಕೊರಕ್.. ಕೊರಕ್ ಅಂತ ಏನೋ ಕೊರಿಯೋ ಅವಾಜ್ ಬಂದಂಗ ಆಯಿತು. ಅದರ ಮ್ಯಾಲ ತಲಿ ಇಟ್ಟು ಮಲಗಿರೋ ರವಿಕುಮಾರಗೆ ಆ ಅವಾಜ್ ಮತ್ತಷ್ಟು ಜಾಸ್ತಿ ಆಗ್ತಾನೇ ಹೋಯಿತು. ನೆಲಕ್ಕೆ ಕಿವಿ ಹಚ್ಚದರ ಸಾಕು ಆ ಸದ್ದು ಜೋರಾಗಿ ಕೇಳುತ್ತಿತ್ತು. ಬೆಳಿಗ್ಗೆ ಎದ್ದಕೂಡಲೇ ಆ ವಿಷಯವನ್ನು ತನ್ನ ರೂಮ್‌ಮೇಟ್ಸ್ ಮುಂದೆ ಹೇಳಿದ. ಅವರಾರೂ ಅದನ್ನು ನಂಬಲಿಲ್ಲ. ನಿನಗೆ ಕನಸು ಬಿದ್ದಿರಬೇಕು ಅಂತ ಜೋಕ್ ಮಾಡದರು. ಆಗ ರವಿಕುಮಾರ ಈ ದಿನ ಆ ಜಾಗದಲ್ಲಿ ನೀನು ಮಲಗು ಅಂತ ತನ್ನನ್ನು ಜೋಕ್ ಮಾಡಿದ ಪ್ರದೀಪನಿಗೆ ಹೇಳಿದ. ಅದೇನು ಮಹಾ..! ಮಲಗ್ತೀನಿ ಬಿಡ ಅಂದ. ಮಲಗಿದ. ಮಧ್ಯರಾತ್ರಿಯ ಹೊತ್ತಲ್ಲಿ ಆ ಅವಾಜ್ ಹಿಂದಿನ ದಿನಕ್ಕಿಂತಲೂ ಜೋರಾಗಿ ಶುರುವಾಯಿತು. ಪ್ರದೀಪ ತಟ್ಟನೇ ಎದ್ದು ಕುಳಿತ. ಲೈಟ್ ಆನ್ ಮಾಡಿದ. ರವಿಕುಮಾರನನ್ನು ಎಬ್ಬಿಸಿದ. ಆತ ಕಣ್ಣುಜ್ಜುತ್ತಲೇ ‘ಏನೋ..?’ ಎಂದ.
‘ನೀ ಹೇಳಿದ್ದು ಖರೆ.. ಬಾಳ ಜೋರ್ ಅವಾಜ್ ಬರತೈತಿ’
‘ಆಯಿತು ಈಗ ಮಲಗು ಮುಂಜಾನೆ ನೋಡಮ್ಮು’

ಪ್ರದೀಪನಿಗೆ ನಿದ್ದೆ ಬೀಳಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಮಾಲಿಕರ ಮುಂದೆ ಆ ವಿಷಯ ಹೇಳಿದ. ಅದಕ್ಕವರು ‘ಅಲ್ಲಿ ಮೊದಲು ಬಕಾರ ಇತ್ತು. ಬಹುಷ: ಇಲಿ ಗಿಲಿ ಇರಬೇಕು ಅಷ್ಟೆ.. ಹೆದರಬ್ಯಾಡಿರಿ’ ಅಂದ. ಆ ದಿನದ ರಾತ್ರಿ ಆ ಕೊರೆಯುವ ಅವಾಜು ಸಹಿಸಲಿಕ್ಕಾಗಲೇ ಇಲ್ಲ. ರವಿಕುಮಾರ ಮತ್ತು ಪ್ರದೀಪ ಇಬ್ಬರೂ ಎದ್ದು ಕುಳಿತರು. ನೋಡೊಣ ಏನಾದರೂ ಇದೆ ಎಂದು ಹಗೆಯ ಮೇಲಿನ ಪಾಟೀಗಲ್ಲಿನ ಸುತ್ತಲೂ ಮೆತ್ತಲಾದ ಮಣ್ಣನ್ನು ಮೆಲ್ಲಗೆ ಕೊರೆಯತೊಡಗಿದರು. ಅವರು ಕೊರೀಲಿಕ್ಕ ಶುರು ಮಾಡಿದ್ದೇ ಒಳಗಿನ ಅವಾಜ್ ಬಂದ್ ಆಯಿತು. ಆಗ ಇವರೂ ಕೊರೆಯುವದನ್ನು ನಿಲ್ಲಿಸಿಬಿಟ್ಟರು. ತುಸು ಹೊತ್ನಲ್ಲಿ ಮತ್ತೆ ಕೊರಕ್..ಕೊರಕ್..ಅನ್ನೋ ಸದ್ದು.. ಇವತ್ತು ಬೇಡ ಇನ್ನೊಂದು ದಿನ ನೋಡೊಣ ಈಗ ಮಲಕೋ ಅಂತ ಪ್ರದೀಪ ಹೇಳಿದ್ದೇ ರವಿಕುಮಾರ ಮತ್ತು ಸತೀಶ ಲೈಟ್ ಆಫ್ ಮಾಡಿ ಮಲಗಿಬಿಟ್ಟರು. ಅವರಿಗೆ ಆ ಕೊರೆತದ್ದೇ ಒಂದು ದೊಡ್ಡ ಕಿರಕಿರಿಯಾಗಿತ್ತು. ಅವತ್ತು ಸಾಯಂಕಾಲ ಶಿವಶಂಕರಪ್ಪ ರವಿಕುಮಾರನ್ನ ಕಂಡದ್ದೇ,
‘ಏನೋ ತಮ್ಮಾ, ರಾತ್ರಿ ಕೋಲಿಯೊಳಗ ಲೈಟ್ ಹತ್ತದಂಗಿತ್ತು’
‘ಅದೇನಂತೀರಿ, ಅಲ್ಲೇನೋ ಮೊದಲು ಹಗೆ ಇತ್ತಂತಲ್ಲ..? ರಾತ್ರಿ ಇಡೀ ನಿದ್ದೆಯಿಲ್ಲ. ಒಳಗ ಏನೋ ಕೊರಕ್.. ಕೊರಕ್.. ಅಂತ ಕೊರದಂಗ ಕೇಳಸತೈತಿ’
‘ಓ ಅದಾ..? ಬಹುಷ: ಅಲ್ಲಿ ಹೆಗ್ಗಣ ಇರಬೇಕು ತಳದಾಗ ಇರೋ ಜ್ವಾಳದ ನಾತಕ್ಕ ಬಂದಿರತಾವ’
‘ಆ ಹಗೆ ಯಾಕ ಮುಚ್ಚದರಿ..?’
‘ಮತ್ತೇನು ಮಾಡೂದು.. ನಮ್ಮಪ್ಪ ಹೋದ ಮ್ಯಾಲ ಒಕ್ಕಲತನಾನೇ ಮುರದು ಹೋಯಿತು..’
‘ಹಗೆ ಅಂದ್ರ ಬಾಳ ದೊಡ್ಡದಿತ್ತಾ..?’
‘ಹೌದು, ಕಮ್ಮೀತಕಮ್ಮಿ ಅಂದ್ರೂ ನೂರು ಚೀಲ ಜ್ವಾಳಾ ಹಿಡಿತಿದ್ವು.’
‘ಅಂತಾ ಹಗೆ ಎಷ್ಟಿದ್ವು..?’
‘ಎರಡೇ. ಒಂದು ನಮ್ಮಣ್ಣನ ಪಾಲಿಗಿ ಬಂದೈತಿ, ಇನ್ನೊಂದು ನಮ್ಮ ತಮ್ಮ ಕಲ್ಲಪ್ಪನ ಪಾಲಿಗಿ ಬಂದಿತ್ತು. ನೀವು ಈಗ ಬಾಡಿಗೆ ಇರೋದು ನಮ್ಮ ತಮ್ಮನ ಮನೀನೇ. ಅಂವಾ ಹೆಂಡತಿ ಮಾತ ಕೇಳಿ ಮಾರಕೊಂಡು ಹೋಗ್ಯಾನ.’
‘ಏನೇ ಹೇಳ್ರಿ ನಿಮ್ಮ ಆ ಹಗೆದಿಂದ ನಮ್ಮ ನಿದ್ದಿ ಹಾಳಾಗಕತೈತಿ..’ ಅನ್ಕೊಂತ ರವಿಕುಮಾರ ಕೈಯಾಗ ಬಾಲ್ದಿ ಹಿಡಕೊಂಡು ಬಾವಿಕಡೆ ನಡೆದ.

ಕತ್ತಲ ಆಗತಾ ಇದ್ದಂಗ ರವಿಕುಮಾರ ಮತ್ತು ಪ್ರದೀಪಗೆ ಆ ಕೊರೆತದ ಕಿರಿಕಿರಿದೇ ಒಂದು ತಲೆನೋವು. ಇವತ್ತು ಆಗಿದ್ದು ಆಗಲಿ ಅದೇನು ಅಂತ ನೋಡೇ ಬಿಡೂದು ಅಂತ ಕೋಲ್ಯಾಗಿರೋ ಸಣ್ಣ ಬ್ಯಾಟರಿಗಿ ಶೆಲ್ ಹಾಕಿಸಿ ಇಟಗೊಂಡಿದ್ದರು. ರಾತ್ರಿ ಬಾರಾ ಸುಮಾರ ಮತ್ತ ಶುರು ಆಯಿತು.. ದಿನದಿಂದ ದಿನಕ್ಕ ಆ ಆವಾಜ್ ಬಾಳ ಜೋರ್ ಆಗಾಕತ್ತು. ಹಗೆದ ಬಾಯಿಗಿ ಮುಚ್ಚಿರೋ ಪಾಟಿಗಲ್ಲಿನ ಸುತ್ತಲೂ ಈ ಮೂರೂ ಹುಡುಗರು ಕೂಡಿ ಹಗೂರಕ ಹಡ್ಡಾಕ ಶುರುಮಾಡದರು. ಆ ಮಣ್ಣೆಲ್ಲಾ ಅಲ್ಲೇ ಬಾಜೂಕ ಹಾಕರಿ ಮತ್ತ ಅದು ಹ್ಯಾಂಗಿತ್ತು ಹಂಗ ಮಾಡಾಕ ಬೇಕಾಗತೈತಿ ಅಂತ ಪ್ರದೀಪ ಮೆಲ್ಲಗೆ ಹೇಳದ. ಹಗೆಕ ಮುಚ್ಚಿರೋ ಪಾಟಿಕಲ್ಲಿನ ಬಾಯಿ ಸಡ್ಲ್ ಆಗಿದ್ದೇ ಗಬ್ಬಂತ್ ವಾಸನೆ ಬರಾಕ್ ಶುರು ಆಯಿತು. ರವಿಕುಮಾರ ಮೂಗು ಮುಚ್ಚಿ ಒಂದೇ ಸವನೇ ಬಚ್ಚಲಿಗೆ ಓಡಿ ಹೋದ. ಸತೀಶ ಅನ್ನೋ ಹುಡುಗ ಮೂಗು,ಬಾಯಿಗೆ ಬಟ್ಟೆ ಕಟ್ಟಿಕೊಂಡ. ಬಹುಷ: ಒಳಗ ಇಲಿನೋ..ಹೆಗ್ಗಣೋ ಸತ್ತಿರಬೇಕು ಅಂತ ಲೆಕ್ಕಾ ಹಾಕಿ ಹಗೂರಕ ಮೂವರೂ ಕೂಡಿ ಪಾಟೀಕಲ್ಲು ಎತ್ತಿದರು. ಅಲ್ಲೇ ಮಗ್ಗಲದಾಗ ಸರಿಸಿ ಇಟ್ಟರು. ಇಡೀ ರೂಮಲ್ಲಿ ಒಂಥರಾ ಹೊಲಸು ವಾಸನೆ. ರವಿಕುಮಾರ ಮೂಗು-ಬಾಯಿಗೆ ಕರವಸ್ತ್ರ ಬಿಗಿದು ಬ್ಯಾಟರಿ ಕೈಗೆತ್ತಿಕೊಂಡ. ಹಗೆಯೊಳಗೆ ಟಾರ್ಚ್ ಹಿಡಿದ ಏನೋ ಒಂದು ಪುಟ್ಟ ಜೀವಿ ಬುದಂಗನೇ ಓಡಿ ಹೋದಂತಾಯಿತು. ಆತ ಬೆಚ್ಚಿ ಬಿದ್ದ. ರವಿಕುಮಾರನ ಕಣ್ಣುಗಳು ಅಗಲವಾಗಿದ್ದವು..ಪ್ರದೀಪ ಮತ್ತು ಸತೀಶನ ಬಾಯಿಂದ ಮಾತೇ ಹೊರಡುತ್ತಿಲ್ಲ. ಹೌದು. ಅದೊಂದು ಶವ…! ಕೊಳೆತ ಶವ..ಹುಳಗಳು ಮುಕುರಿವೆ.. ಸಣ್ಣ ಬಾಲಕನ ಶವ. ದಿಕ್ಕೇ ತೋಚಲಿಲ್ಲ. ರಾತ್ರೋರಾತ್ರಿ ಅವರು ಅಲ್ಲಿಂದ ಫೇರಿಯಾದರು..

***

ಬೆಳ್ಳಂಬೆಳಿಗ್ಗೆ ಗುರುಸಿದ್ದನ ಮನೆಯ ಮುಂದೆ ಪೋಲೀಸ್ ವ್ಯಾನೊಂದು ಬಂದು ನಿಂತಿತ್ತು. ನೆರೆದ ಜನರೆಲ್ಲಾ ತಮತಮಗಷ್ಟೇ ಕೇಳುವಂತೆ ಮಾತಾಡುತ್ತಿದ್ದರು. ಆ ರೂಮಲ್ಲಿ ಬಾಡಿಗೆಯಿದ್ದ ಹುಡುಗರೂ ಅಲ್ಲೇ ಇದ್ದಾರೆ. ಅವರು ರಾತ್ರಿ ನೇರವಾಗಿ ಪೋಲಿಸರ ಬಳಿಗೆ ತೆರಳಿ ಸುದ್ದಿ ಮುಟ್ಟಿಸಿದ್ದರು. ಚನಮಲ್ಲ , ಶಿವಶಂಕರಪ್ಪ ಮತ್ತು ಅವರ ಮನೆಯ ಹೆಣ್ಣುಮಕ್ಕಳೆಲ್ಲಾ ಅಲ್ಲೇ ಒಂದೆಡೆ ಕುಳಿತಿದ್ದರು. ಎಲ್ಲರ ಮೂಗುಗಳು ಮುಚ್ಚಿವೆ. ಆ ಶವ ಅದಾಗಲೇ ಮುಕ್ಕಾಲು ಭಾಗ ಕೊಳೆತು ಹೋಗಿತ್ತು. ಘಟನೆ ನಡೆದು ತುಂಬಾ ದಿನವಂತೂ ಆಗಿಲ್ಲ ಎನ್ನುವದು ಪೋಲಿಸರಿಗೆ ಖಾತ್ರಿಯಾಗಿತ್ತು. ಆ ಶವದ ಬಟ್ಟೆ, ಉಡುದಾರದ ಚೈನು, ಕೊರಳಲ್ಲಿಯ ತಾಯತ ಅವೆಲ್ಲವನ್ನು ಆ ಮನೆಯವರಿಗೆ ತೋರಿಸಿದಾಗ ಚನಮಲ್ಲನ ಹೆಂಡತಿ ಸುಭದ್ರಾ ‘ಇದು ನಿಮ್ಮ ತಂಗಿ ಶಿವನಿಂಗವ್ವಳ ಮಗ ರಮೇಶನೇ..’ ಅಂತ ಜೋರಾಗಿ ಅಳಲಿಕ್ಕೆ ಶುರುಮಾಡಿದಳು. ಕಳೆದ ಒಂದು ತಿಂಗಳಿಂದಲೂ ತನ್ನ ಮಗ ಕಳಕೊಂಡಿದ್ದಾನೆ. ನಿಮ್ಮೂರ ಜಾತ್ರೆಯೊಳಗೇ ಕಳಕೊಂಡಾನ ಹುಡುಕಿಕೊಡ್ರಿ ಅಂತ ಅತ್ತು..ಕರದು ಮಾಡಿ ಹೋಗಿದ್ದಲು. ಮೊನ್ನೆಯಷ್ಟೇ ಪೋಲಿಸ್ ಶ್ಟೇಷನ್‌ಗೆ ಕಂಪ್ಲೇಂಟ್ ಕೂಡಾ ಕೊಟ್ಟಿದ್ದಳು. ಈಗೇನಾದರೂ ಅಕಿಗೆ ವಿಷಯ ತಿಳಿದರೆ ಗತಿ ಏನು.? ಅಂತೆಲ್ಲಾ ಯೋಚನೆ ಮಾಡಿ ಒಂದೇ ಸವನೇ ಎಲ್ಲರೂ ಗೋಳಾಡತೊಡಗಿದರು. ಚನಮಲ್ಲಗೆ ಆ ಪಾರಿ, ಯಾಕ ಗಡಿಬಿಡಿ ಮಾಡಿ ಮನಿ ಮಾರಿಸಿದ್ದಳು ಅಂತ ಈಗ ತಿಳಿಯಾಕ ಶುರು ಆಗಿತ್ತು. ಅವನು ಪೋಲಿಸರ ಎದುರಲ್ಲಿ ಆ ಮನೆಯೊಳಗೆ ಮುಂಚೆ ಇದ್ದದ್ದು ಯಾರು. ಈಗ ಅವರೆಲ್ಲಿ.? ಎನ್ನುವದರ ಬಗ್ಗೆ ಮಾಹಿತಿ ಕೊಟ್ಟಿದ್ದ. ಒಂದು ತಾಸಿನೊಳಗ ಪೋಲಿಸರು ಅಕಿನ್ನ ಮತ್ತ ಅಕಿನ ಗಂಡ ಕಲ್ಲಪ್ಪನ್ನ ಪೋಲಿಸ್ ಸ್ಟೇಷನ್ನಿಗೆ ಎಳಕೊಂಡು ಬಂದರು. ಮೊದಮೊದಲ ತಾ ಏನೂ ಮಾಡಿಲ್ಲ ಅನ್ಕೋಂತೇ ಇದ್ದ ಪಾರವ್ವ ದಢೂತಿ ಪೋಲಿಸಮ್ಮನ ಒದೆತ ಮುಕುಳಿಮ್ಯಾಲ ಬಿದ್ದಿದ್ದೇ ಕತಿ ಮಾಡಿ ಹೇಳಾಕ ಶುರು ಮಾಡಿದಳು. ಗಂಡ ಕಲ್ಲಪ್ಪಂತೂ ಪೋಲಿಸರ ಹೊಡತ ತಾಳಲಾರದೇ ಎಲ್ಲಾ ಹೇಳಿಬಿಟ್ಟಿದ್ದ. ಅವರಿಬ್ಬರೂ ತಾವೇ ಆ ಹುಡುಗಗ ವಿಷ ಹಾಕಿ ಸಾಯಿಸಿದ್ದು ಅಂತ ಒಪ್ಪಿಕೊಂಡ ಮ್ಯಾಲ ರಾತ್ರೋರಾತ್ರಿ ಪೋಲಿಸರಮಟ ಬಂದು ಸುದ್ದಿ ಮುಟ್ಟಿಸಿದ ಆ ಹುಡುಗರಿಗಿ ಧೈರ್ಯ ಬಂದಿತ್ತು. ಶಿವನಿಂಗವ್ವ ಹೊರಗಿನ ಹೆಣಮಗಳಲ್ಲ. ಖಾಸಾ ಪಾರವ್ವಳ ಗಂಡನ ತಂಗಿ, ಅಂದರೆ ನಾದಿನಿ. ಮೊದಲೇ ಅಕಿಗಿ ಮಕ್ಕಳಿಲ್ಲ ಅಂತ ಚಿಂತಿ. ಕೊರಗಿ ಕೊರಗಿ ಸಾಯ್‌ತಾಳ ಅನ್ನೂವಂಗ ಆಗಿದ್ದ ಹೆಣಮಗಳಿಗಿ ಮತ್ತ ಬದುಕಿನ ಮ್ಯಾಲ ಆಸೆ ತಂದಿಟ್ಟಿದ್ದು ಆ ದತ್ತಕ ಮಗ ರಮೇಶ. ಆ ರಮೇಶನೂ ಬ್ಯಾರೇ ಯಾರೂ ಅಲ್ಲ. ಶಿವನಿಂಗವ್ವಳ ಮೈದುನನ ಮಗ. ಮನ್ಯಾಂದು ಮನ್ಯಾಗೇ ಉಳದಂಗ ಅಗ್ತಾವ ಅಂತ ಹೇಳಿ ಗಂಡ ಸಿದ್ರಾಮ ಮತ್ತು ಶಿವನಿಂಗವ್ವ ಬಾಳ ಯೋಚನೆ ಮಾಡಿ ಆ ಹುಡುಗನ್ನ ದತ್ತಕ ತಗೊಂಡಿದ್ದರು. ಮಲಕಣ್ಣ ದೇವರ ಜಾತ್ರಿ ದಿನ ಕಳಕೊಂಡ ಹುಡುಗ ಹಿಂಗ ತನದೇ ಸಂಬಂಧಿಗಳ ಮನಿಯೊಳಗಿನ ಹಗೆಯೊಳಗ ಹೆಣಾ ಹಾಗಿ ಬಯಲಾಗ್ತದ ಅಂತ ಯಾರಿಗೂ ಕನಸ ಮನಸಿನೊಳಗೂ ಇರಲಿಲ್ಲ. ಪೋಲಿಸರ ಮುಂದ ಪಾರವ್ವ ಮತ್ತ ಅಕಿನ ಗಂಡ ಕಲ್ಲಪ್ಪ ಯಾಕ ಹಿಂಗ ಮಾಡದರು ಅನ್ನಲಿಕ್ಕ ಖರೆ ಖರೆ ಕತೀನೇ ಹೇಳಿದ್ರು.

ಪಾರವ್ವಗ ಮೂರು ಗಂಡು ಹುಡುಗರು. ಎರಡನೇ ಮಗ ಶಿವಪುತ್ರ ಹುಟ್ಟಿದ ದಿನದಿಂದಲೇ ನಾದನಿ ಶಿವನಿಂಗವ್ವ ನಿನ್ನ ಮಗನ್ನೇ ದತ್ತಕ ತಗೋಂತೀನಿ ಅಂತ ಅನಕೊಂಡು ಬಂದಿದ್ದಲು. ಪಾರವ್ವಗ ಶಿವಪುತ್ರನ ಮ್ಯಾಲ ಮತ್ತೂ ಒಂದು ಗಂಡೇ ಆಯಿತು. ಅವಾಗ ಪಾರವ್ವಗೂ ತನ್ನ ಮಗಾ ಗೋಲಗೇರಿ ಶಿವನಿಂಗವ್ವಳ ಮನಿಗಿ ದತ್ತಕ ಹೋದರ ಅವನಿಗಿ ಮುಂದ ಸುಖಾ ಆಗತೈತಿ. ಚುಲೋ ಆಸ್ತಿ ಇದ್ದ ಮನಿತನ ಅಂತೆಲ್ಲಾ ಲೆಕ್ಕಾ ಹಾಕಿದ್ದಲು. ಗಂಡ ಕುಡಿಲಾಕ ಶುರು ಮಾಡಿ ಒಂದೊಂದು ಆಸ್ತಿ ಮೂರಾಬಟ್ಟೆ ಮಾಡಾಕ ಶುರು ಮಾಡಿಂದ ಪಾರವ್ವಗ ಶಿವನಿಂಗವ್ವಳ ಆಸ್ತಿ ಮ್ಯಾಲ ಆಸೆ ಮೂಡಾಕತ್ತತು. ನೀ ಕುಡದು ಸಾಯಿ ಅಷ್ಟರೊಳಗ ನಿನ್ನ ತಂಗಿಗಿ ನನ್ನ ಮಗನ್ನ ದತ್ತಕ ತಗೊ ಅಂತ ಹೇಳು ಅಂತಾ ಇದ್ದಂಗೇ ಶಿವನಿಂಗವ್ವಳ ಗಂಡ ಸಿದ್ರಾಮ ತನ್ನ ತಮ್ಮನ ಮಗನ್ನೇ ದತ್ತಕ ತಗೊಂಡರಾಯಿತು ಅಂತ ತೀರ್ಮಾನಿಸಿದ್ದ. ಈ ಸುದ್ದಿ ಕೇಳಿ ಪಾರವ್ವಗ ಬಾಳ ತಾಪ ಆಗಿತ್ತು. ಅವತ್ತಿನಿಂದ ಒಳಗೊಳಗ ಶಿವನಿಂಗವ್ವಳ ಮ್ಯಾಲ ಕತ್ತಿ ಮಸಿಯಾಕ ಸುರು ಮಾಡಿದ್ದಲು. ಅದೇ ವ್ಯಾಳೆದೊಳಗ ಆ ಹುಡುಗ ಮಲಕಣ್ಣದೇವರ ಜಾತ್ರಿಗಿ ಬಂದಿತ್ತು. ಮನ್ಯಾನ ಮಂದಿ ಎಲ್ಲರೂ ತೇರ ನೋಡಾಕ ಹೋಗಿದ್ದರು. ಕುಡುಕ ಕಲ್ಲಪ್ಪ ಮೊದಲೇ ಮನ್ಯಾಗ ಎಲ್ಲಾ ಪ್ಲ್ಯಾನ್ ಮಾಡಕೊಂಡಿದ್ದ. ಪಾರವ್ವ ಆ ರಮೇಶನನ್ನ ಕರದು ಬಾ ನಿನಗ ಜಾತ್ರಿಗಿ ಆಟಗಿ ಸಾಮಾನ ಇಸಗುಟತೀನಿ ಅಂತ ಸೀದಾ ಮನಿಗಿ ಕರಕೊಂಡು ಬಂದು, ಬುಂದೆ ಲಾಡೂದೊಳಗ ವಿಷ ಹಾಕಿ ಆ ಹುಡುಗಗ ತಿನ್ನಾಕ ಕೊಟ್ಟಿದ್ದೇ ಅದು ತಿರುಗಿ ಬಿತ್ತು. ಹಂಗೇ ಅದನ್ನ ಹಗೆದೊಳಗ ಹಾಕಿ ಮ್ಯಾಲ ಪಾಟೀಗಲ್ಲನ್ನು ಮುಚ್ಚಿ ಅದು ಹ್ಯಾಂಗಿತ್ತು ಹಂಗ ಮಾಡಿ ಮತ್ತ ತೇರ ನೋಡಾಕ ನಿಂತಗೊಂಡಿದ್ದರು.

ರಮೇಶನ ಅವ್ವ ಶಿವನಿಂಗವ್ವ ಇಡೀ ದಿನ ಹೌಹಾರಿ ತನ್ನ ಮಗ ಎಲ್ಲಿ ಕಳಕೊಂಡ ಅಂತ ಹೇಳಿ ಅಳ್ಕೊಂತ ಕರಕೊಂತ ಊರಿಗಿ ಹೋಗಿದ್ದಲು. ಈ ಬದಿ ಚನಮಲ್ಲ.. ಶಿವಶಂಕರಪ್ಪ ಅವನ ಮಕ್ಕಳು ಎಲ್ಲಾರೂ ರಮೇಶನ್ನ ಹುಡುಕಿದ್ದೇ ಹುಡಿಕಿದ್ದು. ಎಲ್ಲೂ ಸುಳಿವು ಸಿಗಲಿಲ್ಲ. ಒಂದೆರಡು ದಿನ ಬಿಟ್ಟು ಶಿವನಿಂಗವ್ವ ಪೋಲಿಸರಿಗೆ ಪಿರ್ಯಾದು ನೀಡಿದ್ದಳು. ಆಗಲೇ ಈ ಪಾರವ್ವಗ ಮನಿ ಮಾರೂ ಐಡಿಯಾ ಮೂಡಿದ್ದು. ಮನಿ ತಗೊಳೋ ಶೇಡಜಿ ಅದನ್ನ ಮಾಲಿಡೋ ಗೋಡೌನ ಮಾಡ್ತೀನಿ ಅಂತ ಹೇಳಿದ್ದಿತ್ತು. ಹಿಂಗ ಬಾಡಿಗಿ ಕೊಡ್ತಾನ ಅಂತ ಅಕಿಗಿ ಅನಿಸಿರಲಿಲ್ಲ. ಬಾಡಗಿ ಕೊಟ್ಟರೂ ಬಾಡಿಗೆಗೆ ಇದ್ದವರು ಹಗೆ ಹಡ್ಡತಾರ ಅಂತ ಅವಳಿಗಾದರೂ ಎಲ್ಲಿ ಗೊತ್ತು..? ತಿಳಿದೋ.. ತಿಳಿಯದೆಯೋ ಮಾಡಿದ ತಪ್ಪಿಗೆ ಪಾರವ್ವ ಮತ್ತ ಗಂಡ ಕಲ್ಲಪ್ಪ ಇಬ್ಬರಿಗೂ ಹದಿನಾಲ್ಕು ವರ್ಷ ಜೈಲು ಶಿಕ್ಷೆಯಾಗಿತ್ತು.

***

ಶಿವನಿಂಗವ್ವ ಆಕೆಯ ಗಂಡ ಸಿದ್ರಾಮಪ್ಪ ತಿಂಗಳೊಪ್ಪತ್ತು ಯೋಚನೆ ಮಾಡಿ, ಒಂದು ತೀರ್ಮಾನಕ್ಕೆ ಬಂದಿದ್ದರು. ಅಪ್ಪ -ಅವ್ವ ಸುಮಾರ ಇದ್ದರ ಮಕ್ಕಳೇನು ಮಾಡಬೇಕು, ಅದೂ ಅಲ್ಲದೇ ಕಳ್ಳುಬಳ್ಳಿ ಸಂಬಂಧ ಬಿಡಲಿಕ್ಕೆ ಆಗತೈತೇನು, ಎಂದೆಲ್ಲಾ ಯೋಚನೆ ಮಾಡಿ ಅವರ ಮೂವರೂ ಮಕ್ಕಳನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳುವದೆಂದು ನಿರ್ಧರಿಸಿದ್ದರು. ಆ ಹುಡಗರೆಲ್ಲರೂ ದೊಡ್ಡವರಾದ ಮ್ಯಾಲೂ ತಮ್ಮ ಅತ್ತೆಯನ್ನು ಅವ್ವ ಅಂತ ಕರಿಯೂದು ಕೇಳಿ ಊರವರಿಗೆಲ್ಲಾ ಅಚ್ಚರಿಯೂ ಆಗ್ತಿತ್ತು. ಖುಷಿನೂ ಆಗಿತ್ತು.