ಮಂಗಳೂರು ಹೋಮ್ ಸ್ಟೇ ದಾಳಿ: ಅಮಾಯಕನಿಗೆ ಶಿಕ್ಷೆ

– ರಾಜೇಶ್. ಡಿ.

ಹಾಸನದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಘೋರ, ಅಮಾನುಷ ಕೃತ್ಯದ ಆರೋಪಿಗಳ ಮೇಲೆ ಪೊಲೀಸರು ವಿವಿಧ ಕಾಯ್ದೆ ಹಾಗೂ ಸಂಹಿತೆಗಳ ಅಡಿಯಲ್ಲಿರುವ ಒಟ್ಟು ಐದು ಸೆಕ್ಷನ್‌ಗಳ ಅಡಿ ದೂರನ್ನು ದಾಖಲಿಸಿಕೊಂಡಿದ್ದಾರೆ.

ವಿಚಿತ್ರ ನೋಡಿ, ಮಂಗಳೂರಿನ ಹೋಮ್ ಸ್ಟೇ ದಾಳಿಯನ್ನು ವರದಿ ಮಾಡಿದ ನವೀನ್ ಸೂರಿಂಜೆ ವಿರುದ್ಧ ಅಲ್ಲಿಯ ಪೊಲೀಸರು  mangalore-jailಒಟ್ಟು ಹನ್ನೊಂದು ಸೆಕ್ಷನ್‌ಗಳ ಅಡಿ ಚಾರ್ಜ್‌ಷೀಟ್ ಹಾಕಿದ್ದಾರೆ. ಅವುಗಳ ಪಟ್ಟಿ ಹೀಗಿದೆ: ಅಕ್ರಮ ಕೂಟ (ಐಪಿಸಿ 143), ದೊಂಬಿ (147), ಮಾರಕಾಸ್ತ್ರಗಳಿಂದ ದೊಂಬಿ (148), ಅಕ್ರಮ ಪ್ರವೇಶ (447), ಮನೆ ಮೇಲೆ ದಾಳಿ (448), ಅಕ್ರಮವಾಗಿ ಮತ್ತೊಬ್ಬರನ್ನು ಹಿಡಿದು ನಿಲ್ಲಿಸುವುದು (341), ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ (323/324), ಬೆದರಿಕೆ (506), ಉದ್ದೇಶ ಪೂರ್ವಕ ದಾಳಿ ಮತ್ತು ಶಾಂತಿ ಭಂಗ (504), ಮಹಿಳೆ ಮೇಲೆ ದಾಳಿ (354) ಮತ್ತು ಡಕಾಯತಿ (395). ಹೋಮ್ ಸ್ಟೇ ಮೇಲೆ ದಾಳಿ ನಡೆಸಿದವರಿಗೆ ಹಾಕಿದ್ದ ಎಲ್ಲಾ ಸೆಕ್ಷನ್‌ಗಳನ್ನೂ ವರದಿಗಾರ ನವೀನ್ ಮೇಲೂ ಹಾಕಿದ್ದಾರೆ ಪೊಲೀಸರು.

ನವೀನ್‌ರ ಜಾಮೀನು ಅರ್ಜಿ ಕರ್ನಾಟಕದ ಹೈಕೋರ್ಟ್ ನಲ್ಲಿ ತಿರಸ್ಕೃತಗೊಂಡಿದೆ. ಗೌರವಾನ್ವಿತ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ, “ಪ್ರಸ್ತುತ ಆರೋಪಿ ಮೇಲ್ನೋಟಕ್ಕೆ ಇತರೆ ಆರೋಪಿಗಳ ಜೊತೆ ಒಂದೇ ಉದ್ದೇಶದೊಂದಿಗೆ ಮತ್ತು ಬಹುತೇಕ ಒಟ್ಟಿಗೇ ಹೋಮ್ ಸ್ಟೇ ಪ್ರವೇಶಿಸಿದರು. ನಂತರ ಟಿ.ವಿ ಮಾಧ್ಯಮದಲ್ಲಿ ದಾಳಿಗೆ ಒಳಗಾದವರನ್ನು ಪದೇ ಪದೇ ತೋರಿಸಿ, ಅವರ ಮತ್ತು ಅವರ ಕುಟುಂಬದವರಿಗೆ ನೋವುಂಟು ಮಾಡುವಲ್ಲಿ ಇವರ ಪಾತ್ರವೂ ಇದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪೊಲೀಸರ ವರದಿ ಆಧಾರದ ಮೇಲೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನವೀನ್ ಸೂರಿಂಜೆ ಹಿನ್ನೆಲೆ ಮತ್ತು ದಾಳಿ ನಡೆಸಿದ ಸಂಘಟನೆಗೆ ಜೊತೆ ನವೀನ್ ಗೆ ಇರುವ ‘ಸಂಬಂಧ’ವನ್ನು ಪರಿಗಣನೆಗೆ ತೆಗೆದುಕೊಂಡು ಈ ಆರೋಪಗಳನ್ನು ವಿಶ್ಲೀಷಿಸುವುದಾದರೆ, ಅದು ಸಂಪೂರ್ಣ ಸುಳ್ಳು. “ಕರಾವಳಿ ಅಲೆ” ಪತ್ರಿಕೆಯಲ್ಲಿ ವರದಿಗಾರನಾಗಿದ್ದಾಗಿನ ದಿನಗಳಿಂದಲೂ ನವೀನ್ ಸೂರಿಂಜೆ ಸಂಘ ಪರಿವಾರ ಮತ್ತು ಅದರ ಇತರ ಸಂಘಟನೆಗಳ ವಿರುದ್ಧ ವರದಿ ಮಾಡಿದ್ದರು. ಇಂತಹದೇ ಕಾರಣಕ್ಕೆ ಈ ಹಿಂದೆ ನವೀನ್ ಮತ್ತು ದಿ ಹಿಂದು ಪತ್ರಿಕೆ ವರದಿಗಾರರೊಬ್ಬರ ಮೇಲೆ ಸಂಘ ಪರಿವಾರ ಪ್ರಚೋದಿತ ಹುಡುಗರು ಹಲ್ಲೆ ನಡೆಸಲು ಪ್ರಯತ್ನಿಸಿದ್ದರು ಎನ್ನುವುದು ವರದಿಯೂ ಆಗಿದೆ.

ಇವೆಲ್ಲಾ ವೈಯಕ್ತಿಕ ನೆಲೆಯಲ್ಲಿ ಗೊತ್ತಿರಬಹುದಾದ ವಿಚಾರಗಳು, ಹಾಗಾಗಿ ಅವುಗಳ ಆಧಾರದ ಮೇಲೆ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ದಾಳಿಗೆ ಒಳಗಾದ ಹುಡುಗರೇ ಈ ಬಗ್ಗೆ ಸ್ಷಷ್ಟ ಮಾತುಗಳಲ್ಲಿ ಹೇಳಿದ್ದಾರಲ್ಲ? ಅವರಿಂದ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡು ಪೊಲೀಸರು ಅವರಿಗೆ ಬೇಕಾದಂತೆ ದೂರು ಬರೆದುಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ. ದಾಳಿಗೆ ಒಳಗಾದ ಹುಡುಗರು ಪತ್ರಿಕಾ ಪ್ರಕಟಣೆ ಕೂಡಾ ನೀಡಿದ್ದಾರೆ.

ಪದೇ ಪದೇ ಅಲ್ಲಲ್ಲಿ ವರದಿಯಾಗುತ್ತಿರುವ ಮತ್ತೊಂದು ಅಂಶವೆಂದರೆ, ವಿಡಿಯೋ ಮಾಡುತ್ತಿದ್ದವರನ್ನು morning-mist-homestayನವೀನ್ ನಿರ್ದೇಶಿಸುತ್ತಿದ್ದರು ಮತ್ತು ದಾಳಿಗೆ ಒಳಗಾದ ಮಹಿಳೆಯರನ್ನು ತುಂಡು ಬಟ್ಟೆಗಳಲ್ಲಿ ಸೆರೆ ಹಿಡಿಯಲು ಆಸಕ್ತಿ ವಹಿಸಿದರು. ಲಭ್ಯವಿರುವ ವಿಡಿಯೋ ದಾಖಲೆಯಲ್ಲಿ ಈ ಬಗ್ಗೆ ಸ್ಪಷ್ಟ ದೃಶ್ಯಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಸದ್ಯ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋ ದಾಖಲೆಗಳಲ್ಲಿ ಎಲ್ಲಿಯೂ ಈ ಬಗ್ಗೆ ಸ್ಪಷ್ಟ ದೃಶ್ಯಗಳಿಲ್ಲ.

ನವೀನ್ ಚಿತ್ರೀಕರಣ ವೇಳೆ ತೀವ್ರ ಆಸಕ್ತಿ ವಹಿಸಿದ್ದರೂ ಅದು ಬಹುಶಃ ಆರೋಪಿಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಉದ್ದೇಶದಿಂದಲೂ ಇರಬಹುದು. ಮೇಲಾಗಿ, ನವೀನ್ ಸೂರಿಂಜೆಯವರೇ ಹೇಳಿರುವಂತೆ ಅವರ ಜೊತೆ ಅವತ್ತು ಇದ್ದದ್ದು ಟಿ.ವಿ. 9 ಕೆಮರಾಮನ್. ತನ್ನ ಸಂಸ್ಥೆಯ ಕೆಮರಾಮನ್ ರಜೆಯಲ್ಲಿದ್ದಾಗ ಅಥವಾ ಲಭ್ಯವಿಲ್ಲದಿದ್ದಾಗ ಮತ್ತೊಂದು ಟಿವಿ ಉದ್ಯೋಗಿಯನ್ನು ಮನವಿ ಮೇರೆಗೆ ಕರೆಸಿಕೊಳ್ಳಬಹುದು. ಜೊತೆಗೆ ಆ ಕೆಮರಾಮನ್ ತಾನು ಸೆರೆಹಿಡಿಯುವ ದೃಶ್ಯಗಳು ತನ್ನ ಟಿವಿಗೂ (ಟಿವಿ-9) ಸಿಗುತ್ತವೆ ಎಂಬ ಉದ್ದೇಶದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಂಪೂರ್ಣ ಗೋಜಲು ಗೋಜಲು ಆಗಿರುವ ಸಂದರ್ಭದಲ್ಲಿ ನಿರ್ದೇಶನ ಕೊಡುವುದು, ಅದನ್ನು ಮತ್ತೊಬ್ಬರು ಪಾಲಿಸುವುದು ವಿಡಿಯೋದಲ್ಲಿ ಗೋಚರಿಸುವ ಮಟ್ಟಿಗೆ ಸ್ಟಷ್ಟವಾಗಿರಲು ಸಾಧ್ಯವಿಲ್ಲ.

ಮೇಲಾಗಿ ನವೀನ್‌ರಂತೆ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ವರದಿಗಾರರ ಕೆಲಸ, ಸೆರೆಹಿಡಿದ ದೃಶ್ಯಗಳನ್ನು Mlr-hindujagaran-attackತಮ್ಮ ಕಚೇರಿಗೆ ಕಳುಹಿಸುವುದು. ಅದನ್ನು ಹೇಗೆ ಪ್ರಸಾರ ಮಾಡುತ್ತಾರೆಂಬುದು ಕೇಂದ್ರ ಕಚೇರಿಯಲ್ಲಿರುವವರ ಕೆಲಸ. ಅವರು ಆ ದೃಶ್ಯಗಳನ್ನು ಪದೇ ಪದೇ ತೋರಿಸುತ್ತಿದ್ದರೆ, ಅದರಿಂದ ಬೇಸರವಾಗಿದ್ದರೆ, ಘನ ನ್ಯಾಯಾಧೀಶರು ಸುದ್ದಿ ಪ್ರಸಾರ ಮಾಡಿದ ಎಲ್ಲಾ ಚಾನೆಲ್‌ಗಳ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಸೂಚಿಸಬಹುದಿತ್ತಲ್ಲ?

ಪೊಲೀಸರು ದೊಂಬಿ, ಹಲ್ಲೆ, ಮಾರಕಾಸ್ತ್ರಗಳಿಂದ ಹಲ್ಲೆ, ಶಾಂತಿ ಭಂಗ ಎಂದೆಲ್ಲಾ ಪ್ರಕರಣ ದಾಖಲಿಸಿದ್ದಾರಲ್ಲವೇ, ಅದೆಲ್ಲವೂ ಆಗಿದ್ದೆಲ್ಲಿ? ನವೀನ್ ಹೋಮ್ ಸ್ಟೇ ಪ್ರವೇಶಿಸಿದ್ದು ಕೆಮರಾಮನ್ ಜೊತೆಗೆ. ಹಾಗಾದರೆ ಕೆಮರಾ – ಮಾರಕಾಸ್ತ್ರವೆ? ದಾಳಿ ಮಾಡಿದ ಹುಡುಗರ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿದು ಅವರನ್ನು ಬಂಧಿಸಲು ಸಹಕಾರಿಯಾಗಿದ್ದು ಶಾಂತಿ ಭಂಗವೇ?

ದಕ್ಷಿಣ ಕನ್ನಡ ಜಿಲ್ಲಾಡಳಿತದ ಜವಾಬ್ದಾರಿ ಹೊತ್ತಿರುವ ರಾಜಕಾರಣಿಯೊಂದಿಗೆ ಇತ್ತೀಚೆಗೆ ಈ ಪ್ರಸಂಗದ ಬಗ್ಗೆ ಕೆಲ ಪತ್ರಕರ್ತರು ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ, ಆ ರಾಜಕಾರಣಿಗೆ ನವೀನ್ ವಿರುದ್ಧ ದಾಖಲಾಗಿರುವ ಗಂಭೀರ ಸೆಕ್ಷನ್‌ಗಳ ಬಗ್ಗೆ ಗೊತ್ತಿಲ್ಲದ್ದು ಸ್ಪಷ್ಟವಾಯಿತು. ನವೀನ್ ಮೇಲೆ ಹಾಕಿರುವ ಸೆಕ್ಷನ್‌ಗಳ ಪಟ್ಟಿ ಕೊಟ್ಟಾಗ ಅವರು ಕೂಡಾ ಅಚ್ಚರಿ ವ್ಯಕ್ತಪಡಿಸಿದರು. ನಂತರ ಮಾತನಾಡುತ್ತ, “ನನ್ನ ಗ್ರಹಿಕೆ ಪ್ರಕಾರ, ಪೊಲೀಸರಿಗೆ ಆ ವರದಿಗಾರನ ಬಗ್ಗೆ ಯಾವುದೋ ಕಾರಣಗಳಿಗೆ ಸಿಟ್ಟು ಇತ್ತು. ಹಾಗಾಗಿಯೇ ಅವರ ವಿರುದ್ಧ ಇಂತಹ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿರುವ ಸಾಧ್ಯತೆ ಇದೆ. ಪೊಲೀಸರು ಮನಸ್ಸು ಮಾಡಿದರೆ, ಹೀಗೆ ಏನು ಬೇಕಾದರೂ ಮಾಡಿಯಾರು. ಅವರು ಆ ವಿಚಾರದಲ್ಲಿ ಸಮರ್ಥರು,” ಎಂದು ಹೇಳಿ ತಮ್ಮ naveen-soorinjeಆಪ್ತರಿಗೆ ಆದ ಇಂತಹದೇ ಅನುಭವವನ್ನು ಹಂಚಿಕೊಂಡರು.

ಆದರೆ ಆ ರಾಜಕಾರಣಿಗೆ ಗೊತ್ತಿರಲಿ, ಪೊಲೀಸರು ಸೇಡು ತೀರಿಸಿಕೊಳ್ಳುತ್ತಾರೆ ಎಂದು ಅವರ ಮೇಲೆ ಹೇಳುವುದರಿಂದ ಏನೂ ಲಾಭವಿಲ್ಲ. ಪೊಲೀಸರು ಅಂತಹದೊಂದು ತಪ್ಪೆಸಗಿದರೆ, ಮಾನ ಹೋಗುವುದು ಆಡಳಿತ ವ್ಯವಸ್ಥೆಯದು, ಅರ್ಥಾತ್ ಸರ್ಕಾರದ್ದು!

ಪೊಲೀಸರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಾವು ಹೊರಿಸಿರುವ ಎಲ್ಲಾ ಆರೋಪಗಳಿಗೆ ಸಾಕ್ಷಿ ಒದಗಿಸಲಾಗದೆ ಆರೋಪಿ ನವೀನ್ ಖುಲಾಸೆ ಆಗಬಹುದು. ಆದರೆ ಏನು ಪ್ರಯೋಜನ? ಈಗಾಗಲೆ ನವೀನ್‌ಗೆ ಶಿಕ್ಷೆ ಆಗಿದೆಯಲ್ಲ? ನವೆಂಬರ್ ಎರಡರಿಂದ ಅವರು ಬಂದೀಖಾನೆಯಲ್ಲಿಯೇ ಇದ್ದಾರೆ. ಪೊಲೀಸರ ಕುತ್ಸಿತ ಬುದ್ಧಿಗೆ ಅಮಾಯಕ ಬಲಿಯಾಗಬೇಕೆ?

One thought on “ಮಂಗಳೂರು ಹೋಮ್ ಸ್ಟೇ ದಾಳಿ: ಅಮಾಯಕನಿಗೆ ಶಿಕ್ಷೆ

Leave a Reply

Your email address will not be published. Required fields are marked *