Daily Archives: February 3, 2013

ಜೈಪುರ ಸಮ್ಮೇಳನದಲ್ಲಿ ಭ್ರಷ್ಟಾಚಾರದ ಹಣೆಪಟ್ಟಿ

– ಮಹಾದೇವ ಹಡಪದ

ಪರಂಪರೆಯಲ್ಲಿ ಕೆಟ್ಟದ್ದೂ ಒಳ್ಳೆಯದೂ ಇದ್ದೇ ಇರುತ್ತದೆ. ಒಳ್ಳೆಯದರ ನಡೆಯಲ್ಲಿ ಮಾನವೀಯ ಮೌಲ್ಯಗಳು ಜಾಗ ಮಾಡಿಕೊಂಡಿರುತ್ತವೆ. ಕೆಟ್ಟದರ ನಡೆಯು ಮಾತ್ರ ಬಹಬೇಗ ವಿಸ್ತಾರಗೊಳ್ಳುವ, ವಿಕಾರಗಳನ್ನು ಹೆರುವ ಶಕ್ತಿಯುಳ್ಳದ್ದಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಾವಧಿಯ ಆಯಸ್ಸು ಅಲ್ಪಾವಧಿಯದ್ದಾಗಿರುವ ಕಾರಣ ಈ ಎರಡು ಸಮಾಜ ವಿಜ್ಞಾನಗಳನ್ನು ಸಮತೂಕದಲ್ಲಿಟ್ಟು ಆಡಳಿತದ ಹೊರೆ ಹೊರುವ ಸಮಾನತೆಯ ಆಶಯ ಮತ್ತೆಮತ್ತೆ ವ್ಯವಸ್ಥೆಯಿಂದ ನುಣುಚಿಕೊಳ್ಳುತ್ತಲೇ ಇರುತ್ತದೆ. ಕೆಟ್ಟ ಪರಂಪರೆಯು ರಿವೈವಲೈಜ್ ಆಗುವಷ್ಟು ಒಳ್ಳೆಯ ನಡೆ ಬಹಳ ದಿನ ಬದುಕಲಾರದು.

ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಈ ನೆಲದ ಗುಣದಲ್ಲಿದೆ (ಪರಧರ್ಮ ಸಹಿಷ್ಣುತೆ…) ಎಂದು ಹೇಳುವ ಆಧ್ಯಾತ್ಮವಾದಿಗಳ ಅತ್ಯುತ್ಸಾಹದ ಮಾತುಗಾರಿಕೆಯಲ್ಲಿ ಎಲ್ಲಿಯತನಕ ವಾಸ್ತವದ ಅರಿವಾಗುವುದಿಲ್ಲವೋ ಅಲ್ಲಿಯತನಕ ಭಾರತದಲ್ಲಿನ ಸಮಾಜ ವ್ಯವಸ್ಥೆಯ ಮೂಲಬೇರಿನಲ್ಲಿ ಕವಲೊಡೆದ ಕೆಟ್ಟ ಪರಂಪರೆ ತನ್ನ ಪಥ ಬದಲಿಸಲಾರದು. ಒಬ್ಬರನ್ನೊಬ್ಬರು ಅನುಮಾನಿಸುತ್ತ, ಅಪಮಾನಿಸುತ್ತ, ದೂಷಿಸುತ್ತ ತಿರಸ್ಕರಿಸುವ ಚಾಳಿ ಬೆಳೆದು ಬಂದಂತೆಲ್ಲ ಅಸ್ಪೃಶ್ಯತೆಯ ಕಾಂಡ ಗಟ್ಟಿಗೊಳ್ಳುತ್ತಲೇ ಬಂದಿತು. ನಿಜವಾಗಿಯೂ ಈ ಹೂತು ಹೋದ ಮರದ ನೀಚತನದ ಬುಡಕ್ಕೆ ಕೈ ಹಾಕಿ ಇಡೀ ಗಿಡವನ್ನೇ ಅಲ್ಲಾಡಿಸಲು ಹವಣಿಸಿದವರು Young_Ambedkarಬಾಬಾಸಾಹೇಬರು, ಆ ಪ್ರಯುಕ್ತವಾಗಿ ಒಂದಷ್ಟು ಎಲೆ-ಹಣ್ಣು-ಕಾಯಿ-ಬೇರುಗಳಲ್ಲಿ ಉಸಿರಾಡುವ ಜಾಗಗಳು ಸಿಕ್ಕವು. ಅಷ್ಟಕ್ಕೆ ತೃಪ್ತರಾಗದ ವೈಚಾರಿಕರು ವೈಜ್ಞಾನಿಕವಾಗಿ ಸಂಸ್ಕೃತಿಯ ಒಳ-ಹೊರಗನ್ನು ಕೆಣಕತೊಡಗಿದರು. ಆಗ ಕೈಕಾಲಿಗೆಲ್ಲ ತೊಡರಿದ ಹಿಂದೂ ಎಂದು ಗುರುತಿಸಲ್ಪಟ್ಟ ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕು ಬೀಳತೊಡಗಿತು. ಹಳೆಯ ದಫ್ತರಿನಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದಿರುವ ಸಮಾಜ ವಿಜ್ಞಾನದ ನ್ಯೂನ್ಯತೆಗಳು ಪಟಪಟನೆ ಅನಾವರಣಗೊಳ್ಳತೊಡಗಿದವು.

ಬದುಕಿನ ಕೌಶಲಗಳು ಕುಲ ಕಸಬುಗಳಾಗಿ, ಜಾತಿಗಳಾಗಿ, ಪಂಗಡಗಳಾಗಿ, ಒಳಪಂಗಡಗಳಾಗಿ, ಬಣ-ಬಳ್ಳಿ-ಕುಲಗೋತ್ರಗಳಾಗಿ ಒಂದರ ಒಳಗೊಂದು ಬೆಸೆದುಕೊಂಡ ಹೆಣಿಗೆಗಳಾಗಿ ವರ್ಣಾಶ್ರಮವನ್ನು ಸಾಕಿಕೊಂಡು ಬಂದಿರುವುದನ್ನು ಕಾಣುವಂತಾಯಿತು. ಹುಲಿ ಸವಾರಿ ಮಾಡುವವ, ನಾಯಿಯನ್ನು ಪಳಗಿಸಿ ಬೇಟೆಗೆ ಬಳಸಿದವ, ಕುರಿಗಳ ಸಾಕಿ, ದನಗಳ ಮೇಯಿಸಿ, ಹೊಲಗದ್ದೆಗಳ ಉತ್ತಿಬಿತ್ತಿ ಬೆಳೆದವ, ಹಾವಿನ ಹಾಸಿಗೆಯಲ್ಲಿ ಮಲಗಿದವ. ಹೀಗೆ ಕೂಡು ಬಾಳಿನ ಸಮುದಾಯ ಪ್ರಜ್ಞೆಗೆ ನೆರಳಾದವರು ಜನಾಂಗಗಳಿಗೆ ನಾಯಕರಾಗಿ, ಸತ್ತ ಮೇಲೆ ದೇವರಾಗಿ ಕಂಕಣ ಗೋತ್ರಗಳನ್ನು ಬೆಳೆಸಿದ್ದರು. ಈ ಎಲ್ಲ ತಿಳವಳಿಕೆಯನ್ನು ಪ್ರಕೃತಿಯಿಂದ ಕಲಿತ ಕೆಲವೇ ಜನರು ಒಟ್ಟು ಸಮುದಾಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ವರ್ಣವ್ಯವಸ್ಥೆಯನ್ನು ಸೃಷ್ಟಿಸಿದರು. ಅಂಕೆಗೆ ಒಳಪಟ್ಟವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎನ್ನುವುದು ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು ಎಂಬಂತೆ ಮಹಾನ್ ಪರಂಪರೆಯಲ್ಲಿ ಸೇರಿಕೊಂಡಿತು.

ಈಗ ಕೆಟ್ಟ ಪರಂಪರೆ ವಿಲಕ್ಷಣ ರೂಪಗಳು ಮತ್ತೆ ಹೊಸ ಅವತಾರಗಳಲ್ಲಿ ಜೀವಂತಗೊಳ್ಳುತ್ತಿರುವ ಅನುಮಾನಗಳು ಗಟ್ಟಿಗೊಳ್ಳುತ್ತಿವೆ. ದಲಿತ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕುರಿತಾಗಿ ಎಲ್ಲಿಲ್ಲದ ಅಸಮಾಧಾನಗಳು ಹೊಗೆಯಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದು ಕಾಲಕ್ಕೆ ಅಸ್ಪೃಶ್ಯರು, ಬಹಿಷ್ಕೃತರು, ನೀಚರು, ಲಂಪಟರು, ಅಪನಂಬಿಕಸ್ಥರು, ಕೊಳಕರು, ಗುನ್ಹೇಗಾರರು, ಜಾತಿಹೀನರು ಎಂದು ದೂಷಿಸಲ್ಪಟ್ಟವರನ್ನು ಇಂದಿನ ಪರಿಭಾಷೆಯಲ್ಲಿ ಭ್ರಷ್ಟರು ಭ್ರಷ್ಟಾಚಾರದ ಕಾರಣಕರ್ತರೆಂದು ಕರೆಯಲು ಆರಂಭಿಸಿರುವುದು ಕೂಡ ರಿವೈವಲಿಜಂನ ಲಕ್ಷಣದಂತೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭ್ರಷ್ಟರನ್ನು ಪರಿಶಿಷ್ಟ ಜಾತಿ, ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಲ್ಲಿ ಕಾಣಬಹುದು ಎಂಬಂತಹ ಹೇಳಿಕೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು.

ಇತಿಹಾಸದ ಕರಾಳಪುಟಗಳಲ್ಲಿ ಇತರ ಸಮುದಾಯಗಳ ನೆನಪು ಬರೀ ಕಹಿಯಾಗಿ ಉಳಿದಿದೆ. ಹಾಗೆಂದ ಮಾತ್ರಕ್ಕೆ ಇದು ಭ್ರಷ್ಟಾಚಾರದ ಸಮರ್ಥನೆ ಮಾಡುವುದಾಗುವುದಿಲ್ಲ. ಆ ನೆನಪುಗಳಿಂದ ಬಿಡಿಸಿಕೊಳ್ಳಲು ವಾಮಮಾರ್ಗ ಹಿಡಿಯುವ ಇರಾದೆ ಯಾವ ಹಿಂದುಳಿದ ವರ್ಗಗಳ ಹಿತಾಸಕ್ತಿಯಾಗಿರುವುದಿಲ್ಲ ಅನ್ನುವುದನ್ನು ಸಮಾಜವಿಜ್ಞಾನಿಗಳು ಅರಿತುಕೊಂಡಿದ್ದಿದ್ದರೆ ಈ ತೆರನಾದ ದೂಷಣೆಯನ್ನು ಮಾಡುತ್ತಿರಲಿಲ್ಲ. ಇಲ್ಲಿಯತನಕವೂ ಬದುಕುವ ಹಕ್ಕಿಗಾಗಿ ಹೋರಾಟದ ಮುಖಾಂತರ ನ್ಯಾಯ ದೊರಕಿಸಿಕೊಂಡ ಸಮುದಾಯಗಳು ಈಗ ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟಾಚಾರದ ಪೋಷಕರಾಗಿ ಕಾಣಿಸಿಬಿಟ್ಟರೇ? ಕಾನೂನಿನ ಮುಖೇನ, ನೈತಿಕ ಪ್ರಜ್ಞೆಯನ್ನು ಬೆಳೆಸಿದ ಅಂಬೇಡ್ಕರ್ ಅವರ ಚಿಂತನೆಗಳು ನಿಮ್ಮ ರಾಜಕೀಯ, ಸಾಮಾಜಿಕ ಧೃವೀಕರಣದಿಂದ ಕೊನೆಗೊಳ್ಳಲಾರವು. ಹಿಂದುಳಿದ ವರ್ಗದ ಒಬ್ಬನೇ ಒಬ್ಬ ಸಮಾಜ ವಿಜ್ಞಾನಿಗೂ ಅನ್ನಿಸದ ಅಂಶ ನಿಮ್ಮ ಗಮನಕ್ಕೆ ಬಂದಿದೆ ಅಂದರೆ ಅದರರ್ಥ ನೀವು ಪರಂಪರೆಯನ್ನು ಹೇಗಿತ್ತೋ ಹಾಗೆ ಉಳಿಸಿಕೊಳ್ಳಲು ಹೇಳಿದ ಮಾತಿದು ಅನಿಸುತ್ತಿದೆ.

ಹಿಂದುಳಿದ ವರ್ಗಗಳವರಲ್ಲಿ ಬೆಳೆದುಬಂದ ಸಮಾಜವಿಜ್ಞಾನದಲ್ಲಿ ಆತ್ಮವಿಮರ್ಶೆಗೆ ಬಹುಮುಖ್ಯಸ್ಥಾನವನ್ನು ನೀಡಲಾಗಿದೆ. ತೀಕ್ಷ್ಣವಾಗಿ ತಿರಸ್ಕರಿಸುವ ಮತ್ತು ಸ್ವೀಕರಿಸುವ ಎರಡು ಸಮತೂಕದ ಗುಣಗಳ ನಡುವೆ ಭಾರತದಲ್ಲಿ ಅಂಬೇಡ್ಕರವಾದ ರಾಜಕೀವಾಗಿ, ಸಾಂಸ್ಕೃತಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನೆಲೆಯಾಗಿರುವಂಥದ್ದು. ಹಾಗಾಗಿ ಇಲ್ಲಿನ ಚಾಟಿಯೇಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ರೀತಿಯಲ್ಲಿ ನಿಮಗೆ ಗೋಚರಿಸುತ್ತವೆ. ಅಭಿಪ್ರಾಯಗಳನ್ನು ರೂಪಿಸುತ್ತಲೇ ಸಮಾಜ ವ್ಯವಸ್ಥೆಯನ್ನು ಕಟ್ಟುವ ಕ್ರಮ ವೇದಕಾಲೀನ ಕ್ರಿಯೆ, ಅದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಹುಸಂಖ್ಯಾತರ ಭಾವನೆಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತೀರಿ. ಇಂದು ನಾಳೆ ಹೀಗೆ ಮುಂದಿನ ಭವಿಷ್ಯದಲ್ಲಿ ಹಿಂದಿನ ಸಮಾಜದ ಪರಿಕಲ್ಪನೆಯೇ ಸರಿಯೆಂದು ಸಮರ್ಥಿಸುವುದಕ್ಕೂ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತೀರಿ. ಇದೆಲ್ಲದಕ್ಕು ಬೆನ್ನೆಲುಬಾಗಿ ನಿಮ್ಮ ಸೈದ್ಧಾಂತಿಕ ಹಿನ್ನೆಲೆಗಳು, ಚರ್ಚೆಗಳು ಬೆಳೆದು ಬರುತ್ತಿರುವುದು ವಿಪರ್ಯಾಸ.

ಜನಪರವಾಗಿದ್ದದ್ದು ಜನಪ್ರಿಯವಾಗುತ್ತಿದ್ದಂತೆ ಸಮಷ್ಠಿ ಪ್ರಜ್ಞೆಯ ಆಶಯಗಳನ್ನು ಕೊಂದುಕೊಳ್ಳುತ್ತದೆ. Nandy_ashisನೊಂದವರ ಪರವಾಗಿದ್ದ ಮಾತು ಮೌನವಾಗಿ ಕೇಸರಿಮಯವಾಗಿರುವ ಸಂಶೋಧಕ ಮಹಾಶಯರ ಮುದಿತಲೆಗಳ ಕೀಟಲೆಗಳನ್ನು ಕರ್ನಾಟಕದಲ್ಲಂತೂ ಕಾಣುತ್ತಿದ್ದೇವೆ. ಅವರಿಗೆ ಇತಿಹಾಸವನ್ನು ತಿದ್ದುವ ಹಟದಲ್ಲಿ ಮನುಷ್ಯತ್ವದ ನೆಲೆಗಳೂ ಕಾಣದಾಗಿವೆ. ಅಂಥದೇ ರೀತಿಯಲ್ಲಿ ಇಂಥ ಹೇಳಿಕೆಗಳನ್ನು ಸೈದ್ಧಾಂತಿಕವಾಗಿ ಸಮರ್ಥಿಸಿಕೊಳ್ಳುವ ಕುರುಡು ಅಭಿಮಾನಗಳೂ ಅಲ್ಲಲ್ಲಿ ಭ್ರಷ್ಟಾಚಾರವನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಇತ್ಯಾದಿಯಾಗಿ ಹೇಳುತ್ತ ಸನಾತನ ಸಂಸ್ಕೃತಿಯನ್ನು ಪುನಃ ವೇದಕಾಲದ ನೈತಿಕ ನೆಲೆಗಟ್ಟಿನ ಮೂಲಕ ನೋಡುತ್ತಿರುವುದು ಇನ್ನೂ ದುರಂತ. ಖಾಸಗಿಯಾಗಿದ್ದ ಬದುಕುವ ಸ್ವಾತಂತ್ರ್ಯದಲ್ಲಿ ಏಕಾಕಿ ಪ್ರವೇಶಿಸಿ ನೀವು ಹೀಗೆ ಬದುಕಬೇಕು, ಇಂಥದನ್ನೆ ನೀವು ಆಯ್ದುಕೊಳ್ಳಬೇಕು, ಇದನ್ನೆ ತಿನ್ನಬೇಕು, ಹೀಗೆ ಉಡಬೇಕು-ಉಳಿಸಬೇಕು ಎಂಬಿತ್ಯಾದಿಯಾಗಿ… ತಾವಂದುಕೊಂಡಂತೆ ಸಮಾಜವನ್ನು ರೂಪಿಸುತ್ತಿರುವ ಕಾರ್ಪೋರೇಟ್ ಜಗತ್ತಿನ ಇಂದಿನ ಆರ್ಥಿಕ ನೀತಿಗಳು ಮನುಷ್ಯನ ಸಂವೇದನೆಯನ್ನು ಹತ್ತಿಕ್ಕುತ್ತಿರುವ ಈ ಹೊತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದೆಲ್ಲ ಬೊಬ್ಬಿಡುವ ಇವರು ಆಳವಾದ ಸಾಮಾಜಿಕ ಏರುಪೇರುಗಳಿಗೆ ಆಹಾರವನ್ನು ಒದಗಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಯಾವ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿದೆ ಅನ್ನುವುದು ಸ್ಪಷ್ಟವಾಗಿದೆ.

ಪ್ರಿಯ ಆಶೀಶ್ ನಂದಿಯವರೇ, ನೀವು ಆಡಿರುವ ಮಾತುಗಳನ್ನು ಮುಂದಿನ ಪೀಳಿಗೆಯ ನಿಮ್ಮ ಮೊಮ್ಮಗ ಸಮರ್ಥಿಸಿಳ್ಳುತ್ತಾನೆಂಬ ಅರ್ಥದಲ್ಲಿ ನಿಮ್ಮ ಹಿಂಬಾಲಕರು ಆತ್ಮವಿಮರ್ಶೆಯ ಮಾತುಗಳನ್ನಾಡುತ್ತಿದ್ದಾರೆ. ಭ್ರಷ್ಟಾಚಾರ ಇಂದು ಜಾತಿಗಳನ್ನೂ ಮೀರಿದ ವ್ಯಾಪ್ತಿಯನ್ನು ಹೊಂದಿರುವುದರ ಅರಿವು ಇದ್ದೂ ದಲಿತ ಹಿಂದುಳಿದ ವರ್ಗಗಳ ಹಣೆಗೆ ಕಟ್ಟುತ್ತಿರುವ ನೀವೂ ಸಹಿತ ಕೆಳವರ್ಗಗಳ ಮೇಲೆ ಆರೋಪ ಮಾಡುವ ಮೂಲಕ ಮೇಲ್ವರ್ಗದ ಕೆಟ್ಟಪರಂಪರೆಗಳನ್ನು ಪೋಷಿಸಿದ್ದೀರಿ. ಈಗ ನೀವು ಏನೇ ಸಮಜಾಯಿಷಿ ಕೊಟ್ಟರೂ, ಯಾವುದೇ ಪುರಾವೆಗಳನ್ನು ಒದಗಿಸಿದರೂ ನನಗೆ ಮಾತ್ರ ನೀವು ಪುನರುತ್ಥಾನವಾದಿಗಳ ಹಾಗೆ ಕಾಣಿಸುತ್ತಿದ್ದೀರಿ.


 

ಪೂರಕ ಓದಿಗೆ:

ಆಶೀಶ್ ನಂದಿಯವರ ಜೈಪುರ ಭಾಷಣ:


Ashis Nandy’s full statement on what he really meant:

This is not what I meant or what I wanted to say. This is what I actually transpired.

I endorsed the statement of Tarun Tejpal, Editor of Tehelka, that corruption in India is an equalising force. I do believe that a zero corruption society in India will be a despotic society.

I also said that if people like me or Richard Sorabjee want to be corrupt, I shall possibly send his son to Harvard giving him a fellowship and he can send my daughter to Oxford. No one will think it to be corruption. Indeed, it will look like supporting talent.

But when Dalits, tribals and the OBCs are corrupt, it looks very corrupt indeed.

However, this second corruption equalizes. It gives them access to their entitlements. And so, as long as this equation persists, I have hope for the Republic.

I hope this will be the end of the matter. I am sorry if some have misunderstood me. Though there was no reason to do so. As should be clear from this statement, there was neither any intention nor any attempt to hurt any community. If anyone is genuinely hurt, even if through misunderstanding, I am sorry about that, too.

Ashis Nandy