Daily Archives: February 26, 2013

ಕಣ್ಮರೆಯಾದ ಮಾನವೀಯ ಒಳನೋಟಗಳು ಮತ್ತು ಸಹಜ ಸೆಕ್ಯುಲರ್‌ತನ

– ಬಿ. ಶ್ರೀಪಾದ ಭಟ್

ಇಂದು ನಾನು ನನ್ನ ಮನೆ ನಂಬರನ್ನು ಒರೆಸಿದೆ
ನನ್ನ ಓಣಿಯ ಹಣೆಯ ಮೇಲಿರುವ ಐಡೆಂಟಿಟಿಯನ್ನು ತೆಗೆದು ಹಾಕಿದೆ
ಪ್ರತಿಯೊಂದು ರಸ್ತೆಯಲ್ಲಿರುವ ನಾಮ ನಿರ್ದೇಶನಗಳನ್ನು ಅಳಿಸಿ ಹಾಕಿದೆ
ಆದರೆ ನೀನು ನಿಜವಾಗಲೂ ನನ್ನನ್ನು ಭೇಟಿಯಾಗಬೇಕೆಂದರೆ
ಪ್ರತಿಯೊಂದು ದೇಶದ ಮನೆಬಾಗಿಲುಗಳನ್ನು ತಟ್ಟು
ಪ್ರತಿಯೊಂದು ನಗರ,ಪ್ರತಿಯೊಂದು ಓಣಿಗಳನ್ನು ಸಹ
ಎಲ್ಲೆಲ್ಲಿ ಮುಕ್ತವಾದ ಚೈತನ್ಯ ಬದುಕಿರುತ್ತದೆಯೋ
ಅದೇ ನನ್ನ ಮನೆ
— ಅಮೃತಾ ಪ್ರೀತಂ

ಭಯೋತ್ಪಾದನೆ, ಕೋಮುವಾದ ಇಂದಿಗೂ ನಿರಂತರವಾಗಿ ಚಾಲ್ತಿಯಲ್ಲಿರುವುದನ್ನು ಅನುಭವಿಸುತ್ತಿರುವ ನಮಗೆಲ್ಲ ಇದೆಲ್ಲಾ ವಾಸ್ತವಕ್ಕೆ ಅದೇನಾ? ಎಂದು ಅನುಮಾನ ಹುಟ್ಟುವಷ್ಟರ ಮಟ್ಟಿಗೆ ಇವೆಲ್ಲ ಸಹಜ ಘಟನೆಗಳಾಗಿ ಹೋಗಿವೆ. ಕನಿಷ್ಟ ಮಟ್ಟದಲ್ಲಾದರೂ ಜೊತೆಗಾರರಾಗಿ ಬದುಕವಂತಹ ಜನ ಸಮೂಹವನ್ನು, ನಾಗರಿಕ ಸಮಾಜವನ್ನು ಕಟ್ಟಬೇಕಾದಂತಹ ರಾಜಕೀಯ ಪ್ರಜ್ಞೆ ಮತ್ತು ಮಾನವೀಯ, ಜನಪರ ರಾಜಕೀಯ ಸಿದ್ಧಾಂತಗಳು ಸತ್ತು ಹೋಗಿರುವುದೇ ಈ ಅರಾಜಕತೆಗೆ ಮೂಲಭೂತ ಕಾರಣವೆನ್ನುವ ತರ್ಕಗಳೂ ಇಂದು ಬೆಲೆ ಕಳೆದುಕೊಂಡಿದೆ. ಏಕೆಂದರೆ ರಾಜಕೀಯದ ಹೊರತಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ನಾವೆಲ್ಲ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇವೆಯೇ? ಇಲ್ಲ. ಒಂದು ವೇಳೆ ನಿಭಾಯಿಸಿದ್ದರೆ ಇವೆಲ್ಲ ಅವೇನಾ ಎನ್ನುವ ದುಸ್ಥಿತಿಗೆ ಬಂದು ತಲುಪುತ್ತಿರಲಿಲ್ಲ. ಸ್ವಾತಂತ್ರ್ಯ ನಂತರದ ಕಳೆದ 64 ವರ್ಷಗಳಲ್ಲಿ ಎಲ್ಲಾ ಧರ್ಮದ ಮೂಲಭೂತವಾದಿಗಳ ಕ್ರೌರ್ಯವನ್ನು, ಹಿಂಸೆಯನ್ನು ಸಶಕ್ತವಾಗಿ ಎದುರಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಲು ನಾವೆಲ್ಲ ದಯನೀಯವಾಗಿ ಸೋತಿದ್ದೇವೆ. ವೈಯುಕ್ತಿಕ ನಂಬಿಕೆಗಳು ದ್ವೇಷವಾಗಿ ಪರಿವರ್ತನೆಗೊಂಡು ತದನಂತರ ಅದು ಹಿಂಸೆಯ ರೂಪ ತಾಳಿ ಸಮಾಜದ ಮೇಲೆ ಆಕ್ರಮಣ ನಡೆಸಿದಾಗ, ಈ ಹಿಂಸೆಗೆ ಮುಖಾಮುಖಿಯಾಗದೆ ನಾವೆಲ್ಲ ಮೂಕಪ್ರೇಕ್ಷಕರಾಗಬೇಕಾಗಿ ಬಂದದ್ದು ನಮ್ಮೆಲ್ಲರ ಸ್ವಯಂಕೃತ ಅಪರಾಧವಷ್ಟೇ.

ಇಲ್ಲದಿದ್ದರೆ ಪತ್ರಕರ್ತ ಸಿದ್ದಿಕಿಯನ್ನು ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧಿಸಿ ತಿಂಗಳುಗಳ ಕಾಲ ಜೈಲಿನಲ್ಲಿರಿಸಿದಾಗ, siddiqui‘ಇರಬಹುದೇನೋ, ಯಾವ ಹುತ್ತದಲ್ಲಿ ಯಾವ ಹಾವು ಯಾರಿಗೆ ಗೊತ್ತು’ ಎಂದು ಮುಗುಮ್ಮಾಗಿದ್ದ ನಾವು ಇದೇ ಸಿದ್ಧಿಕಿಯನ್ನು ಇತ್ತೀಚೆಗೆ ಅಪರಾಧಿಯಲ್ಲ, ಆತನ ಮೇಲೆ ಸುಳ್ಳು ಕೇಸುಗಳನ್ನು ಸೃಷ್ಟಿಸಲಾಗಿದೆ, ಆತನ ಮೇಲಿನ ಆರೋಪಗಳನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ತನಿಖಾ ತಂಡ ಕೋರ್ಟಗೆ ತಪ್ಪೊಪ್ಪಿಕೆಯ ಮನವಿ ಸಲ್ಲಿಸಿದಾಗ ‘ಎಂತಹ ಅನಾಹುತವಾಗಿ ಹೋಯಿತೆಂದು’ ನಾವ್ಯಾರೂ ಮರುಗಲಿಲ್ಲ, ತರುಣ ಪತ್ರಕರ್ತನೊಬ್ಬನ ಭವಿಷ್ಯವೇನು ಎಂದು ಚಿಂತಿಸಲಿಲ್ಲ. ಕನಿಷ್ಟ ಸಾರ್ವಜನಿಕವಾಗಿ ಈ ಫ್ಯಾಸಿಸ್ಟ್ ಶಕ್ತಿಗಳನ್ನು ಖಂಡಿಸಬೇಕಿತ್ತು!! ಕೆಲವು ಹಿಂದೂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳನ್ನು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಿದಾಗ ಇದು ಹೇಗೆ ಸಾಧ್ಯವೆಂದು ಅಚ್ಚರಿ ಪಡುವ ಮನಸ್ಥಿತಿಯಿಂದ, ಮುಸ್ಲಿಂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಲ್ಪಟ್ಟಾಗ ನಾನು ಹೇಳಲಿಲ್ಲವೇ ಎನ್ನುವ ಪೂರ್ವಗ್ರಹ ಪೀಡಿತ, ಕೊಳಕು, ಹಳಸಿದ ಮನಸ್ಥಿತಿಯಿಂದ ಹೊರಬರದ ಹೊರತು ವ್ಯವಸ್ಥೆಯಲ್ಲಿನ ಕ್ರೌರ್ಯಕ್ಕೆ ಪರ್ಯಾಯವಾದ ನೆಲೆಗಳು ಹುಟ್ಟಲಾರವು.

ಗಾಂಧೀಜಿ ಹತ್ಯೆಯೇ ಇಂಡಿಯಾ ದೇಶದ ಮೊಟ್ಟಮೊದಲ ಭಯೋತ್ಪಾದನೆಯ ಕೃತ್ಯ ಎಂದು ಹಿರಿಯ ಪತ್ರಕರ್ತ ಮಿತ್ರರು ಹೇಳುತ್ತಿದ್ದುದು ಅಕ್ಷರಶಃ ಸತ್ಯ. ಈ ಮೊಟ್ಟ ಮೊದಲ ಭಯೋತ್ಪಾದನೆಯನ್ನು ನಡೆಸಿದ ಸಂಘಟನೆ ಹಿಂದೂ ಮಹಾ ಸಭಾ ಮತ್ತು ಭಾರತದ ಮೊಟ್ಟ ಮೊದಲ ಭಯೋತ್ಪಾದಕ ನಾಥುರಾಮ್ ಘೋಡ್ಸೆ ತಮ್ಮ ಸಹವರ್ತಿಗಳಾಗಿದ್ದನ್ನು ಇಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಸಂಘ ಪರಿವಾಕ್ಕೆ ಅಮ್ನೇಷಿಯಾ ತಗಲಿದೆ!! ಮಾಲೇಗಾವ್ ಸ್ಪೋಟ,ಹೈದರಾಬಾದನ ಜಾಮಾ ಮಸಿದಿಯ ಸ್ಪೋಟ,ಸಂಜೋತಾ ಎಕ್ಸಪ್ರೆಸ್‌ನ ಸ್ಪೋಟಗಳು ಮತ್ತು ಅಮಾಯಕರ ಸಾವುಗಳ ಕುರಿತಾಗಿ ಈಗ ಸಂಘ ಪರಿವಾರ ಕ್ವಚಿತ್ತೂ ಮಾತನಾಡುತ್ತಿಲ್ಲ.ತಮ್ಮ ಸಹವರ್ತಿಗಳೇ ಈ ಭಯೋತ್ಪಾದನೆಯ ಆರೋಪಗಳ ಮೇಲೆ ಜೈಲಿನಲ್ಲಿರುವುದು ಸಂಘಪರಿವಾರಕ್ಕೆ ನೆನಪಿಸಿಕೊಟ್ಟಷ್ಟೂ ಅದಕ್ಕೆ ಅಮ್ನೇಷಿಯಾ ಮರುಕಳಿಸುತ್ತದೆ!!

2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ವಿನಾಕಾರಣ ಸಾವಿರಾರು ಮುಸ್ಲಿಮರನ್ನು ನಿರಾಳವಾಗಿ ಹತ್ಯೆ ಮಾಡಿದ್ದನ್ನು, ಆ ಕ್ರೌರ್ಯದ ಮನೋಸ್ಥಿತಿಯನ್ನು, ಈ ಹಿಂಸಾಚಾರದ ರೂವಾರಿಯೆಂದು ಆರೋಪಿತವಾಗಿರುವ ಫ್ಯಾಸಿಸ್ಟ್ ಮುಖ್ಯಂತ್ರಿ ನರೇಂದ್ರ ಮೋದಿ ಇವರನ್ನೆಲ್ಲ ಭಾರತದ ಮಧ್ಯಮ ವರ್ಗ ಇನ್ನಾದರೂ ಬಹಿರಂಗವಾಗಿ ಖಂಡಿಸಲಾರರೇಕೆ? sangh_parivarತನ್ನ ಕೈಗೆ ಅಂಟಿಕೊಂಡಿರುವ ಆ ರಕ್ತದ ಕಲೆ ಮತ್ತು ತನಗಂಟಿದ ಕಳಂಕ ಸಾಬೀತಾದರೆ ಮೋದಿ ಶಿಕ್ಷೆಗೆ ಒಳಗಾಗಲೇ ಬೇಕೆಂದು ಮಧ್ಯಮ ವರ್ಗ ಆಗ್ರಹಿಸಿ ಸರದಿ ಉಪವಾಸಕ್ಕೆ ತೊಡಗಲಾರರೇಕೆ? ಮುಸ್ಲಿಂ ಮೌಲ್ವಿಗಳನ್ನು, ಜಮಾತೆಗಳನ್ನು ಶಿಲಾಯುಗದವರೆಂದು ಖಂಡಿಸುವ ನಮ್ಮ ಮಧ್ಯಮವರ್ಗ ಅಷ್ಟೇ ನೈತಿಕತೆಯಿಂದ, ಮುಕ್ತ ಮನಸ್ಸಿನಿಂದ ಸಂಘ ಪರಿವಾರದ ಹಿಂದೂ ಫೆನಟಿಸಂ ಮತ್ತು ಕ್ಯಾಸ್ಟಿಸಂ ವಿರುದ್ಧ ಸಾರ್ವಜನಿಕವಾಗಿ ಹೋರಾಡುತ್ತಿಲ್ಲವೇಕೆ? ಕೇವಲ ಟಿವಿಗಳ ಮೂಲಕ ತಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಿಕೊಳ್ಳಬಯಸುವ ಇಂಡಿಯಾದ ಮಧ್ಯಮವರ್ಗಕ್ಕೆ ಈ ದೃಶ್ಯ ಮಾಧ್ಯಮವನ್ನು ಹೊರತುಪಡಿಸಿಯೂ ಅನೇಕ ಬಗೆಯ ಜ್ಞಾನದ ಮಾರ್ಗಗಳಿವೆ ಎಂದೇಕೆ ಅರಿವಾಗುತ್ತಿಲ್ಲ? ಇತರೇ ಜ್ಞಾನದ ಮಾರ್ಗಗಳನ್ನು ಮುಕ್ತ ಮನಸ್ಸಿನಿಂದ ನೋಡಿದ್ದರೆ ಈ ತ್ರಿಶೂಲಧಾರಿ ಸಂಘಪರಿವಾರದ ಲುಂಪೆನ್ ಗುಂಪನ್ನು ಮಧ್ಯಮವರ್ಗ ತೀವ್ರವಾಗಿ ಖಂಡಿಸುತ್ತಿತ್ತು. ಈ ಒಳನೋಟ ದಕ್ಕಿದ್ದರೆ ತನ್ನ ಧರ್ಮದ ಮತಾಂಧರಿಂದ ಹಲ್ಲೆಗೊಳಗಾದ ತಸ್ಲೀಮಾಳಿಗೆ ಆಸರೆ ಕೊಡಲು ಮುಂದಾದ ಸಂಘಪರಿವಾರದ ವರ್ತನೆಯ ಹಿಂದಿನ ಗುಪ್ತ ಕಾರ್ಯಸೂಚಿಗಳ ಕುರಿತಾಗಿ ಅರಿವಾಗುತ್ತಿತ್ತು.

ಮತ್ತೊಂದು ಕಡೆ ಈ ಮುಸ್ಲಿಂ ಮೂಲಭೂತವಾದಿಗಳ, ಈ ಪಾಪ್ಯುಲರ್ ಫ್ರಂಟ್‌ಗಳ, ಜಮಾತೆಗಳ ಧಾರ್ಮಿಕ ಮೂಲಭೂತವಾದ ಮತ್ತದರ ದುಷ್ಪರಿಣಾಮಗಳ ಕುರಿತಾಗಿ ನೇರವಾಗಿ ಖಂಡಿಸದೆ ಅದೇಕೆ ಅನೇಕ ಎಡಪಂಥೀಯ ಚಿಂತಕರು ಅದು ಹಾಗೇ, ಅದು ಹೀಗೆ ಎಂದು ಉಗ್ಗುತ್ತ ತಲೆಮರೆಸಿಕೊಳ್ಳುತ್ತಾರೆ? ಇನ್ನಾದರೂ ಈ ಎಡಪಂಥೀಯರು ತಾನು ಮುಸ್ಲಿಂ ಮೂಲಭೂತವಾದವನ್ನು ಖಂಡಿಸಿದರೆ ತಾನು ಸ್ವಧರ್ಮನಿಷ್ಟನಾಗಿಬಿಡುತ್ತೇನಲ್ಲ, ನನ್ನ ಸಿದ್ಧಾಂತಗಳ ಗತಿಯೇನು? ಎಂಬ ಹುಂಬ ಮತ್ತು ಚಲನರಹಿತ ಮನಸ್ಥಿತಿಯಿಂದ ಹೊರ ಬಂದು ವರ್ತಿಸತೊಡಗಿದಾಲೇ ಹೊಸಬೆಳಕು ಮೂಡುತ್ತದೆ. ಆಗ ಈ ಕೋಮುವಾದಿ ಮಧ್ಯಮವರ್ಗವನ್ನು ಈ ಹಿಂದೂತ್ವದ ಕಬಂಧಬಾಹುಗಳಿಂದ ಹೊರತರಬಹುದು. ಈ ಇಂಡಿಯ ಮುಜಾಹಿದ್ದಿನ್‌ಗಳು, ಲಷ್ಕರ್ ಎ ತೊಯ್ಬಾಗಳು ಯಾವುದೂ ಗೊತ್ತಿಲ್ಲದ, ಗೊತ್ತಿದ್ದರೂ ಅದರ ಸಹವಾಸ ಅವರಿಗೆ ಬೇಕಿಲ್ಲದ, Ghetto ಗಳಲ್ಲಿ ಅತಂತ್ರರಾಗಿ ಬದುಕುತ್ತಿರುವ ಇಂಡಿಯಾದ ಮುಸ್ಲಿಂರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ಇಂಡಿಯಾದ ಮಧ್ಯಮವರ್ಗ ಮತ್ತು ಎಡಪಂಥೀಯ ಚಿಂತಕರು ಅತ್ಯಂತ ಪ್ರಮುಖ ಪಾತ್ರ ವಹಿಸಲೇಬೇಕಾಗಿದೆ. ಈ ಮಧ್ಯಮವರ್ಗ ಮೋದೀಕರಣ, ಹಿಂದುತ್ವದ ಪ್ರಭಾವದಿಂದ ಕಳಚಿಕೊಂಡಾಗಲಷ್ಟೇ ಇದು ಸಾಧ್ಯ. ಆಗಲೇ ಎಲ್ಲಾ ಧರ್ಮಗಳ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ನೈತಿಕತೆಯ ಬಲ ದೊರಕುತ್ತದೆ. ಇಲ್ಲದಿದ್ದಲ್ಲಿ ಕ್ಷುಲ್ಲಕ, ಸ್ವಾರ್ಥ ರಾಜಕಾರಣ ಮತ್ತು ಮೂಲಭೂತವಾದಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ನಿರಂತರವಾಗಿ ಪರಿಸ್ಥಿಯ ದುರ್ಲಾಭ ಪಡೆದುಕೊಳ್ಳುತ್ತಲೇ ಇರುತ್ತವೆ.