Daily Archives: February 6, 2013

ರಾಹುಲ್ ಗಾಂಧಿ : ಅರೆಮನಸಿನ ನಾಯಕತ್ವ ಹಾನಿಕಾರಕ

– ಆನಂದ ಪ್ರಸಾದ್

ಕಾಂಗ್ರೆಸ್ಸಿಗರ ನಿರೀಕ್ಷೆಯಂತೆ ರಾಹುಲ್ ಗಾಂಧಿಗೆ ಪಕ್ಷದಲ್ಲಿ ಉಪಾಧ್ಯಕ್ಷರ ಹುದ್ಧೆ ನೀಡಲಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ರಾಹುಲ್ ನೇತೃತ್ವದಲ್ಲಿ ಎದುರಿಸಲು ಜೈಪುರ ಚಿಂತನ ಶಿಬಿರದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಅಂತೂ ಇಂತೂ ಒಲ್ಲದ ಮನಸ್ಸಿನಿಂದ ರಾಹುಲ್ ಗಾಂಧಿ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿರುವಂತೆ ಕಂಡುಬರುತ್ತದೆ. ಇದು ಒಲ್ಲದ ಗಂಡಿಗೆ ಬಲವಂತದ ಮದುವೆ ಮಾಡಿದಂತೆ ಕಾಣುತ್ತದೆ. ಸ್ವಯಂ ಸ್ಫೂರ್ತಿ ಹಾಗೂ ಉತ್ಸಾಹ ಇಲ್ಲದಿದ್ದರೆ ನೇತೃತ್ವ ಯಶಸ್ವಿಯಾಗಲಾರದು. ಅಂಥ ಸ್ಪೂರ್ತಿ ಹಾಗೂ ಪಕ್ಷವನ್ನು ಮುನ್ನಡೆಸುವ ಉತ್ಸಾಹ ರಾಹುಲರಲ್ಲಿ ಇದುವರೆಗೆ ಕಂಡುಬಂದಿಲ್ಲ. ಅಧಿಕಾರ ಎಂಬುದು ವಿಷವಿದ್ದಂತೆ ಎಂದು ತನ್ನ ತಾಯಿ ಸೋನಿಯಾರ ಮಾತನ್ನು ಚಿಂತನ ಶಿಬಿರದ ತನ್ನ ಭಾಷಣದಲ್ಲಿ ರಾಹುಲ್ ಉಲ್ಲೇಖಿಸಿದರು. ಇದು ನಿಜವೂ ಹೌದು. ಅಧಿಕಾರವನ್ನು ಸರಿಯಾಗಿ ವಿವೇಚನೆಯಿಂದ ಬಳಸದೆ ಇದ್ದರೆ ಅದುವೇ ವಿಷವಾಗಿ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ. Sonia-Rahulಇದಕ್ಕೆ ರಾಜೀವ ಗಾಂಧಿ ಹಾಗೂ ಇಂದಿರಾ ಗಾಂಧಿಯವರೇ ಸ್ಪಷ್ಟ ನಿದರ್ಶನ. ದೇಶವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಇರುವ ಹುದ್ಧೆಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಜೀವಕ್ಕೇ ಮುಳುವಾಗಬಹುದು ಎಂಬುದು ಇವರ ವಿಷಯದಲ್ಲಿ ಸತ್ಯವೆಂದು ಕಂಡುಬರುತ್ತದೆ. ರಾಜಕೀಯವಾಗಿ ರಾಹುಲ್ ಮುಗ್ಧರು. ಹೀಗಾಗಿ ಇವರು ದಿಟ್ಟ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಹಿನ್ನಡೆ ಅನುಭವಿಸಲಿದೆ.

ರಾಜೀವ ಗಾಂಧಿಯವರೂ ಅನುಭವವಿಲ್ಲದೆ ಏಕಾಏಕಿ ಪ್ರಧಾನಮಂತ್ರಿಯಂಥ ಉನ್ನತ ಹುದ್ಧೆಯನ್ನು ಏರಿದವರು. ಅವರು ಆರಂಭದಲ್ಲಿ ದೇಶಕ್ಕೆ ಒಳಿತನ್ನು ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯನ್ನು ಹೊಂದಿದ್ದರು. ಆದರೆ ಅವರಿಗೆ ಸಲಹೆಗಳನ್ನು ನೀಡುವವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣರಾದರು. ಉದಾಹರಣೆಗೆ ಶಾಬಾನು ಪ್ರಕರಣದಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ತೆಗೆದುಕೊಂಡ ನಿರ್ಧಾರ, ಅಯೋಧ್ಯೆಯ ವಿವಾದಿತ ಕಟ್ಟಡದ ಬೀಗ ತೆಗೆಸಿ ಹಿಂದೂಗಳನ್ನು ಓಲೈಸಲು ತೆಗೆದುಕೊಂಡ ನಿರ್ಧಾರ ಇಂಥ ನಿರ್ಧಾರಗಳು ಅಡ್ಡಹಾದಿಯ ರಾಜಕೀಯ ನಿರ್ಧಾರಗಳಾಗಿದ್ದು ಇದು ಅವರ ಸುತ್ತ ಇದ್ದ ಕುಟಿಲ ಸಲಹೆಗಾರರು ನೀಡಿದ ಸಲಹೆಗಳ ಕಾರಣದಿಂದ ತೆಗೆದುಕೊಂಡವು ಎಂಬುದರಲ್ಲಿ ಸಂದೇಹವಿಲ್ಲ. ನೇರ ಹಾದಿಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡು ಜನಪರ, ಅಭಿವೃದ್ಧಿಪರ ರಾಜಕೀಯಕ್ಕೆ ಒತ್ತು ಕೊಟ್ಟಿದ್ದರೆ ಓಲೈಕೆ ರಾಜಕೀಯ ಮಾಡುವ ಅಗತ್ಯವೇ ಕಾಂಗ್ರೆಸ್ಸಿಗೆ ಬರುತ್ತಿರಲಿಲ್ಲ. ಇಂಥ ಸರಳ ವಿಷಯಗಳೂ ಕಾಂಗ್ರೆಸ್ಸಿಗರಿಗೆ ಅರ್ಥವಾಗದಿರುವ ಕಾರಣ ಅವರು ಜಾತಿ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕೀಯ, ಬಹುಸಂಖ್ಯಾತರ ಓಲೈಕೆ ರಾಜಕೀಯ ಹೀಗೆ ನಾನಾ ವಿಧದ ಕುಟಿಲ ತಂತ್ರಗಳ ಮೊರೆ ಹೋಗುವ ಕೆಟ್ಟ ಪ್ರವೃತ್ತಿ ಬೆಳೆದಿದೆ. ಇದರಿಂದ ಹೊರಬರದ ಹೊರತು ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ.

ರಾಹುಲ ಗಾಂಧಿಯವರಿಗೆ ಆಡಳಿತಾತ್ಮಕ ಅನುಭವ ಹೆಚ್ಚೇನೂ ಇಲ್ಲದಿರುವ ಕಾರಣ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವ ಕಡಿಮೆ.rahul-hubli ಕಾಂಗ್ರೆಸ್ ಪಕ್ಷದ ಪ್ರಧಾನ ಸಮಸ್ಯೆಯೇ ಭ್ರಷ್ಟಾಚಾರದ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಇರುವುದು. ಪಕ್ಷದಲ್ಲಿ ಹಲವು ಭ್ರಷ್ಟರು ಭದ್ರವಾಗಿ ಬೇರೂರಿದ್ದು ಇವರೆಲ್ಲಾ ಭ್ರಷ್ಟಾಚಾರದ ವಿರುದ್ಧ ಪಕ್ಷ ದಿಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಪಕ್ಷದ ಉನ್ನತ ನಾಯಕತ್ವವನ್ನು ದಾರಿ ತಪ್ಪಿಸುತ್ತಿರುವಂತೆ ಕಾಣುತ್ತದೆ. ಪಕ್ಷದ ಒಳಗೆಯೇ ಇರುವ ಭ್ರಷ್ಟರ ವಿರುದ್ಧ ರಾಹುಲ ಗಾಂಧಿ ಕ್ರಮ ಕೈಗೊಳ್ಳುವ ಧೈರ್ಯ ತೋರಿಸಿದರೆ ಪಕ್ಷದ ಬಗ್ಗೆ ಜನತೆಯಲ್ಲಿ ಒಳ್ಳೆಯ ಅಭಿಪ್ರಾಯ ಮೂಡಬಹುದು. ಇಲ್ಲದೆ ಹೋದರೆ ಪಕ್ಷವು ಜನತೆಯ ವಿಶ್ವಾಸ ಗಳಿಸಿಕೊಳ್ಳುವುದು ಮರೀಚಿಕೆಯಾಗಬಹುದು. ರಾಹುಲ ಗಾಂಧಿ ಪೂರ್ಣ ಮನಸ್ಸಿನಿಂದ ಪಕ್ಷವನ್ನು ಮುನ್ನಡೆಸುವ ಇಚ್ಚಾಶಕ್ತಿ ತೋರಿಸದೆ ಹೋದರೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಾಮಾಣಿಕರೂ, ಚಿಂತನಶೀಲರೂ, ಸಂವೇದನಾಶೀಲರೂ ಆದ ಲೇಖಕರು ಅಥವಾ ವಿಜ್ಞಾನಿಗಳ ಸಲಹೆ ಪಡೆಯುವುದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬಚಾವಾಗಬಹುದು.

ಕಾಂಗ್ರೆಸ್ ಪಕ್ಷದ ಬಗ್ಗೆ ನಮಗೆ ಎಷ್ಟೇ ಭಿನ್ನಾಭಿಪ್ರಾಯ, ಅಸಹನೆ, ತಿರಸ್ಕರ ಇದ್ದರೂ ಇದು ದೇಶವ್ಯಾಪಿ ಸಂಘಟನೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾರಣ ಪಕ್ಷದ ನಾಯಕತ್ವವನ್ನು ಸಾಧ್ಯವಾದಷ್ಟೂ ಸರಿದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವ ಅಗತ್ಯ ಇದೆ. ಇಲ್ಲದೆ ಹೋದರೆ ದೇಶದಲ್ಲಿ ಮೂಲಭೂತವಾದಿಗಳ ಕೈ ಮೇಲಾಗುವ ಸಾಧ್ಯತೆ ಕಂಡುಬರುತ್ತದೆ. ಹೀಗಾಗಿ ಪಕ್ಷವು ಒಂದು ಕುಟುಂಬದ ಹಿಡಿತದಲ್ಲಿ ಇದ್ದರೂ ದೇಶದಲ್ಲಿ ಗಾಂಧಿ, ನೆಹರೂ ಅವರು ಹೊಂದಿದ್ದ ಪ್ರಗತಿಪರ ಚಿಂತನೆಗಳು ಪಕ್ಷದಲ್ಲಿ ಅಲ್ಪ ಮಟ್ಟದಲ್ಲಾದರೂ ಉಳಿದುಕೊಂಡಿವೆ ಬೇರೆ ಪ್ರಗತಿಪರ ಚಿಂತನೆಯ ರಾಜಕೀಯ ಪಕ್ಷಗಳು ಬೆಳೆಯುವ ಸಂಭಾವ್ಯತೆ ದೇಶದಲ್ಲಿ ಕಡಿಮೆ ಇರುವ ಕಾರಣ ಕಾಂಗ್ರೆಸ್ ಪಕ್ಷವನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಬೇಕಾದ ಅಗತ್ಯ ಇಂದು ಇದೆ.

ಕಾಂಗ್ರೆಸ್ ಸೇವಾದಳವನ್ನು ಬೇರುಮಟ್ಟದಿಂದ ಬೆಳೆಸಿ ದೇಶದ ಚಿಂತನೆ ನಡೆಸುವ ಪ್ರವೃತ್ತಿಯನ್ನು ಕಾರ್ಯಕರ್ತರಲ್ಲಿ ಬೆಳೆಸಬೇಕಾದ ಅಗತ್ಯ ಇದೆ. rahul_priyanka_soniaಇಲ್ಲದೆ ಹೋದರೆ ಮೂಲಭೂತವಾದಿ ದೇಶಭಕ್ತರ ಕೈ ಮೇಲಾಗುವ ಸಂಭವ ಇದೆ. ಕಾಂಗ್ರೆಸ್ಸಿನ ಉನ್ನತ ನಾಯಕತ್ವ ಜನರ ಜೊತೆ ನೇರ ಸಂಪರ್ಕ ಹೊಂದಲು ಸೂಕ್ತ ವೆಬ್‌ಸೈಟನ್ನು ರೂಪಿಸಬೇಕಾದ ಅಗತ್ಯ ಇಂದಿನ ಇಂಟರ್ನೆಟ್ ಯುಗದಲ್ಲಿ ಅತ್ಯಂತ ಅಗತ್ಯವಿದೆ. ಮಧ್ಯಮವರ್ಗದ ಹಾಗೂ ಯುವಜನರ ಅಭಿಪ್ರಾಯ ತಿಳಿದುಕೊಳ್ಳಲು ಇದು ಅತೀ ಅಗತ್ಯ. ಮಧ್ಯಮವರ್ಗದ ಯುವಜನತೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತೀವ್ರವಾದ ಬೇಸರ ಹಾಗೂ ಸಿಟ್ಟು ಇರುವುದು ಇಂಟರ್ನೆಟ್ ಜಗತ್ತನ್ನು ಅವಲೋಕಿಸಿದರೆ ತಿಳಿಯುತ್ತದೆ. ಇಂಟರ್ನೆಟ್ಟಿನಲ್ಲಿ ಕಾಂಗ್ರೆಸ್ ಬಗ್ಗೆ ಯಾವುದೇ ಲೇಖನ ಪ್ರಕಟವಾದರೂ ತೀಕ್ಷ್ಣವಾದ ವಿರೋಧ ಅಭಿಪ್ರಾಯ ಮಧ್ಯಮವರ್ಗದ ಯುವಜನತೆಯಿಂದ ಪ್ರಕಟವಾಗುವುದು ಕಂಡುಬರುತ್ತದೆ. ಪಕ್ಷವು ತನ್ನನ್ನು ತಾನು ತಿದ್ದಿಕೊಳ್ಳಬೇಕಾದ ತುರ್ತು ಅಗತ್ಯ ಇದೆ ಎಂಬುದು ಇದರಿಂದ ಕಂಡುಬರುತ್ತದೆ. ರಾಹುಲ ಗಾಂಧಿ ಮಧ್ಯ ವಯಸ್ಸಿನ ಯುವ ಎಂದು ಹೇಳಬಹುದಾದ ರಾಜಕಾರಣಿಯಾದರೂ ಅಧುನಿಕ ತಂತ್ರಜ್ಞಾನವನ್ನು ಅದರಲ್ಲೂ ಇಂಟರ್ನೆಟ್ ಜಗತ್ತಿನಲ್ಲಿ ತನ್ನದೇ ಆದ ಅಸ್ತಿತ್ವವನ್ನು ತೋರಿಸುವ ಯಾವುದೇ ವ್ಯವಸ್ಥೆ ಹೊಂದಿಲ್ಲ. ಒಬ್ಬ ನಾಯಕನಾದವನು ಇಂಥ ನಿರ್ಲಕ್ಷ್ಯ ತೋರಿದರೆ ಆತನು ಜನಪರವಾಗಿ ಬೆಳೆಯುವ ಸಾಧ್ಯತೆ ಇಲ್ಲ.

ದೇಶದಲ್ಲಿ ಮೂಲಭೂತವಾದ ಹೆಚ್ಚುತ್ತಾ ಇದೆ. ಇದಕ್ಕೆ ಕಾರಣ ಪ್ರಗತಿಪರ ರಾಜಕೀಯ ಶಕ್ತಿಗಳು ಮೂಲಭೂತವಾದಿಗಳೊಂದಿಗೆ ರಾಜಿಯಾಗಿರುವುದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ದೊಡ್ಡ ಬಾಯಿಯ ಮೂಲಭೂತವಾದಿಗಳು ಮೇಲುಗೈ ಪಡೆಯುತ್ತಿದ್ದಾರೆ. ಅರಾಜಕ ಪರಿಸ್ಥಿತಿಗಳಲ್ಲಿ ಸರ್ವಾಧಿಕಾರಿ ಮನೋಭಾವದ ಮೂಲಭೂತವಾದ ಬೇಗನೆ ಮೇಲುಗೈ ಪಡೆಯುತ್ತದೆ. ಕಾಂಗ್ರೆಸ್ ಪಕ್ಷವು ದಿಟ್ಟ ಹಾಗೂ ಚಿಂತನಶೀಲ ನಾಯಕತ್ವವಿಲ್ಲದೆ ಅರಾಜಕ ಪರಿಸ್ಥಿತಿಯನ್ನು ತಲುಪಿದೆ. ಇದರ ಜೊತೆಗೆ ಭ್ರಷ್ಟಾಚಾರವನ್ನು ನಿಯಂತ್ರಿಸದ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿ ಪರ್ಯಾಯ ಧಾರ್ಮಿಕ ಮೂಲಭೂತವಾದಿಗಳು ಮಾತ್ರ ಎಂಬ ಸ್ಥಿತಿ ಇರುವುದು ದೇಶಕ್ಕೆ ಒಳ್ಳೆಯದಲ್ಲ. ಒಮ್ಮೆ ದೇಶವು ಹುಸಿ ದೇಶಭಕ್ತರ ಮೂಲಭೂತವಾದಕ್ಕೆ ಸಿಲುಕಿದರೆ ಅದರಿಂದ ಹೊರಬರುವುದು ಅತ್ಯಂತ ಕಠಿಣ ಆಗಲಿದೆ. ಪಾಕಿಸ್ತಾನವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಹೀಗಾಗಿ ದೇಶವು ಮೂಲಭೂತವಾದಿಗಳ ತೆಕ್ಕೆಗೆ ಬೀಳದಂತೆ ದೇಶವ್ಯಾಪಿ ಜಾಗೃತಿ ಮೂಡಿಸಬೇಕಾದ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಆದರೆ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಕಾರಣ ಮುಂಬರುವ ದಿನಗಳು ಭಾರತದ ಪಾಲಿಗೆ ಇನ್ನಷ್ಟು ಕರಾಳವಾಗುವ ಸಂಭವವೇ ಕಂಡುಬರುತ್ತಿದೆ. ಹುಸಿ ದೇಶಭಕ್ತರ ಅಟ್ಟಹಾಸ ಮೇರೆ ಮೀರುತ್ತಿದೆ. ಇಂಥ ಹುಸಿ ದೇಶಭಕ್ತರ ಕೈಯಿಂದ ದೇಶವನ್ನು ರಕ್ಷಿಸಲು ಮಾಧ್ಯಮಗಳು ಮುಂದಾಗಬೇಕಾದ ಅಗತ್ಯ ಇದೆ.