Daily Archives: February 20, 2013

ಚುನಾವಣಾ ಸಿದ್ಧತೆಗಳು, ಸ್ವಪರಿಚಯ, ಇತ್ಯಾದಿ…

ವರ್ತಮಾನ.ಕಾಮ್‌ನ ಪ್ರಿಯ ಓದುಗರೆ,

ನಿಮಗೆ ಗೊತ್ತಿರುವ ಹಾಗೆ ನಾನು ಇತ್ತೀಚೆಗೆ ಚುನಾವಣಾ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯತನಕದ ಪ್ರತಿಕ್ರಿಯೆ ಚೆನ್ನಾಗಿದೆ. ಈಗಾಗಲೇ ಸುಮಾರು 40000 ದಷ್ಟು ಪ್ಯಾಂಪ್ಲೆಟ್‌ಗಳನ್ನು ಕ್ಷೇತ್ರದಲ್ಲಿ ಹಂಚಲಾಗಿದೆ. ಒಂದು ತಂಡವನ್ನು ಕಟ್ಟುವ ಕೆಲಸ ನಡೆಯುತ್ತಿದೆ. Ravi_pamphlet_Kan_11-02_13ಚುನಾವಣಾ ಆಯೋಗದ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿ ರೂ.16 ಲಕ್ಷ. ಬಹುಶಃ ಅಷ್ಟನ್ನೂ ನಿಮ್ಮಂತಹ ಸಮಾನಮನಸ್ಕರಿಂದ, ಸ್ನೇಹಿತರಿಂದ, ಸಾರ್ವಜನಿಕರಿಂದಲೇ ಸಂಗ್ರಹಿಸುವ ಗುರಿ ಇದೆ. ಚುನಾವಣೆಗೆ ಮೊದಲು ಕ್ಷೇತ್ರದ ಬಹುತೇಕ ಮತದಾರರನ್ನು ಮುಟ್ಟುವ ವಿಶ್ವಾಸ ಇದೆ. ಈ ಚುನಾವಣೆ ಮುಂದಿನ ದಿನಗಳಲ್ಲಿನ ನಮ್ಮ ರಾಜ್ಯದ ರಾಜಕಾರಣದ ರೀತಿ-ನೀತಿಗಳನ್ನು ಬಹುಪಾಲು ನಿರ್ಧರಿಸುತ್ತದೆ ಎನ್ನುವ ನಂಬಿಕೆ ನನಗಿದೆ. ಇನ್ನು ನಾಲ್ಕೈದು ವರ್ಷಗಳ ನಂತರ ಈ ತರಹದ ರಾಜಕಾರಣ ಮತ್ತು ಚುನಾವಣೆಗಳೇ ಮುಖ್ಯವಾಹಿನಿಯಲ್ಲಿರುತ್ತವೆ ಮತ್ತು ಅದು ಪ್ರಮುಖ ಪಕ್ಷಗಳನ್ನೂ ಸರಿದಾರಿಗೆ ಬರಲು ಒತ್ತಡ ಹೇರುತ್ತದೆ. ಅದಕ್ಕಾಗಿ ಕೇವಲ ಕೆಲವರೇ ಅಲ್ಲ, ಸಮಾಜದ ಬಗ್ಗೆ ಮಾತನಾಡುವ ಮತ್ತು ಕಾಳಜಿ ಇರುವ ಎಲ್ಲರೂ ಪ್ರಯತ್ನಿಸಬೇಕಿದೆ.

ಈ ಹಿನ್ನೆಲೆಯಲ್ಲಿ ನಾನು ನನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನ ನಿಮ್ಮ ಗಮನಕ್ಕೂ ತರೋಣ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ನೀವೂ ಸಹ ಈ ಪ್ರಯತ್ನಕ್ಕೆ ಕೈಜೋಡಿಸುತ್ತೀರ ಎಂದು ಭಾವಿಸುತ್ತೇನೆ.

ರವಿ…


“There comes a time when one must take the position that is neither safe nor politic nor popular, but he must do it because conscience tells him it is right.” ― Martin Luther King Jr.

ಪ್ರಿಯ ನಾಗರಿಕ ಬಂಧುಗಳೇ,

ನನ್ನೂರು ಬೆಂಗಳೂರಿನ ಪಕ್ಕದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದುತ್ತ ಬೆಳೆದ ನಾನು ಹೊಲಗದ್ದೆಯಲ್ಲಿ ಕೆಲಸ ಮಾಡುತ್ತ, ಹಸು ಎಮ್ಮೆಗಳನ್ನು ಮೇಯಿಸುತ್ತ, ಕತೆ ಕಾದಂಬರಿಗಳನ್ನು ಓದುತ್ತ ಬಾಲ್ಯ ಕಳೆದೆ. ನಂತರ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತು ಎಮ್.ಇ. ಪಡೆದು ಕಳೆದ ಹದಿನೈದು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದು, ನನ್ನ ಉದ್ಯೋಗ ಮತ್ತು ಚಟುವಟಿಕೆಗಳು ಕೆನಡಾ, ಇಟಲಿ, ಕೊರಿಯಾ ದೇಶಗಳಿಗೂ ನನ್ನನ್ನು ಒಯ್ದಿವೆ. ನನ್ನ ವಯಸ್ಕ ಜೀವನದ ಬಹುಪಾಲು ಭಾಗ ಹೊರದೇಶದಲ್ಲಿಯೇ ಕಳೆದಿದ್ದರೂ ಕನ್ನಡ ಮತ್ತು ಕರ್ನಾಟಕ ಯಾವಾಗಲೂ ನನ್ನ ಮನಸ್ಸು ಮತ್ತು ಕ್ರಿಯೆಯ ಭಾಗವಾಗಿತ್ತು. ಕಳೆದ ಹತ್ತು ವರ್ಷಗಳಿಂದಲೂ ನಾನು ರಾಜ್ಯದ ಅನೇಕ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಷಯಗಳಿಗೆ ಸ್ಪಂದಿಸುತ್ತ, ಅವುಗಳ ಬಗ್ಗೆ ನಿರಂತರವಾಗಿ ಬರೆಯುತ್ತಾ ಬಂದಿದ್ದೇನೆ. ಅಮೆರಿಕದಲ್ಲಿ ಇದ್ದಾಗ ಅಲ್ಲಿಯ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅದೇ ಸಮಯದಲ್ಲಿ ಕನ್ನಡದ ವಚನಗಳು, ಹಲವು ವೈಚಾರಿಕ ಲೇಖನ-ಪುಸ್ತಕಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು www.vicharamantapa.net ಎಂಬ ವೆಬ್‌ಸೈಟ್ ಆರಂಭಿಸಿದ್ದೆ. ಮತ್ತು, ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವಿಕೆಯ ಮುಂದುವರೆದ ಭಾಗವಾಗಿ 2006 ರಲ್ಲಿ “ವಿಕ್ರಾಂತ ಕರ್ನಾಟಕ” ಎಂಬ ವಾರಪತ್ರಿಕೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದೆ. ಈ ಪತ್ರಿಕೆಯು ಆ ಕಾಲಘಟ್ಟದ ಎಲ್ಲಾ ಬಗೆಯ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳಿಗೆ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದು ಇಂದಿಗೂ ನನಗೆ ಹೆಮ್ಮೆಯ ವಿಷಯ. ಆ ಪ್ರಕ್ರಿಯೆಯಲ್ಲಿ ವಿಕ್ರಾಂತ ಕರ್ನಾಟಕದೊಂದಿಗೆ ಕೆಲಸ ಮಾಡಿದ, ಅದರಲ್ಲಿ ತೊಡಗಿಕೊಂಡ ಎಲ್ಲಾ ಲೇಖಕ-ಪ್ರಗತಿಪರ ಮಿತ್ರರ ಸಹಭಾಗಿತ್ವ ಮತ್ತು ಬೆಂಬಲ ಇಂದಿಗೂ ನನ್ನಲ್ಲಿ ಆಶಾವಾದ ಮತ್ತು ಸ್ಫೂರ್ತಿಯನ್ನು ಹೆಚ್ಚಿಸುತ್ತಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ 2008 ರ ಸಮಯದಲ್ಲಿ ಕರ್ನಾಟಕದ ರಾಜಕಾರಣ ಅಧೋಗತಿಗೆ ತಲುಪಿ, ಎಲ್ಲಾ ಪ್ರಜಾವಂತರಲ್ಲಿ ಹೇಸಿಗೆ ಮತ್ತು ಸಿನಿಕತನವನ್ನು ಮೂಡಿಸಿತ್ತು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದೇ ಅಪ್ರಸ್ತುತ ಮತ್ತು ಗೇಲಿಯ ವಿಷಯವಾಗಿತ್ತು. ರಾಜಕೀಯ ರಂಗ ತನ್ನ ಕನಿಷ್ಟ ಮಟ್ಟದ ಪ್ರಬುದ್ಧತೆ, ಸೂಕ್ಷ್ಮತೆ, ಮತ್ತು ಜನಪರ ಕಾಳಜಿಗಳನ್ನು ಕಳೆದುಕೊಂಡಿತ್ತು. ರಾಜ್ಯದ ಕುಖ್ಯಾತ ಗಣಿ ಮಾಫಿಯಾದವರು, ರಿಯಲ್ ಎಸ್ಟೇಟ್ ಏಜೆಂಟರು, ಭ್ರಷ್ಟ ಮಾರ್ಗಗಳಿಂದ ಅತಿಶ್ರೀಮಂತರಾಗಿ ಹೋಗಿದ್ದ ರಾಜಕಾರಣಿಗಳು ಆಗಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಿ ರಾಜ್ಯದ ಪ್ರಜಾಪ್ರಭುತ್ವದ ನೆಲೆಯನ್ನೇ ಅಲ್ಲಾಡಿಸಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತರ ವಿರೋಧ ಇರಬೇಕು ಎಂದು ಭಾವಿಸಿ ನಾನು ರಾಜ್ಯದ ಹಲವು ಪ್ರಗತಿಪರ ಮಿತ್ರರೊಂದಿಗೆ ಮತ್ತು ಲೇಖಕರೊಂದಿಗೆ ಚರ್ಚಿಸಿ, ಅವರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಅದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ ಮೂರು ದಿನಗಳ ಕಾಲ “ಮೌಲ್ಯಾಗ್ರಹ”ದ ಹೆಸರಿನಲ್ಲಿ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆ. ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಸಮಾನ ಮನಸ್ಕರು ಆ ಪ್ರತಿಭಟನೆ ಮತ್ತು ಉಪವಾಸದಲ್ಲಿ ಪಾಲ್ಗೊಂಡಿದ್ದು ಇಲ್ಲಿ ಎಲ್ಲವೂ ಕಳೆದುಹೋಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಚುನಾವಣೆಗಾಗಿ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ, ಅಷ್ಟರಲ್ಲೇ ಗೆದ್ದು ಬಂದು ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ ರಾಜ್ಯದ ಹೆಮ್ಮೆಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಇಟ್ಟುಕೊಂಡು ಅದೇ ಮಾದರಿಯಲ್ಲಿ ಚುನಾವಣೆ ನಡೆಸಿದೆ. ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ, ಸುಮಾರು 4.25 ಲಕ್ಷವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅಷ್ಟನ್ನೇ ಚುನಾವಣಾ ಪ್ರಚಾರಕ್ಕೆ ಉಪಯೋಗಿಸಿ ಹದಿನೈದು ದಿನಗಳ ಪ್ರಚಾರ ಮಾಡಿದ್ದೆ. ಚುನಾವಣಾ ಆಯೋಗಕ್ಕೆ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಿದ ಖರ್ಚಿನ ಮಾಹಿತಿಯ ಪ್ರಕಾರ ಅತಿ ಹೆಚ್ಚು ಖರ್ಚು ಮಾಡಿದ ಅಭ್ಯರ್ಥಿ ನಾನೇ ಆಗಿದ್ದೆ. ಗೆದ್ದ ಅಭ್ಯರ್ಥಿ ತೋರಿಸಿದ ಲೆಕ್ಕ ಮೂರು ಲಕ್ಷಕ್ಕೂ ಕಡಿಮೆ.

ಕರ್ನಾಟಕದ ಇಂದಿನ ರಾಜಕಾರಣದ ಬಗ್ಗೆ ನಿಮಗೆ ವಿಶೇಷವಾಗಿ ಹೇಳುವಂತಹುದೇನಿಲ್ಲ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕ ಇಂದಿಗಿಂತ ನೆನ್ನೆಯೇ ವಾಸಿ ಎನ್ನುವ ಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ. ನಮ್ಮ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳು ಅಧೋಗತಿಯಲ್ಲಿಯೇ ಸಾಗುತ್ತಿವೆ. ಐದು ವರ್ಷದ ಹಿಂದಿನ ಸಂದರ್ಭಕ್ಕಿಂತ ಕರ್ನಾಟಕ ಈಗ ಇನ್ನೂ ಕೆಟ್ಟಿದೆ. ಇನ್ನು ಎರಡು-ಮೂರು ತಿಂಗಳಿನಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಾದರೂ ಈಗಿನ ಹಾಲಿ ವಿಧಾನಸಭಾ ಸದಸ್ಯರಿಗಿಂತ ಉತ್ತಮವಾದವರು ಆರಿಸಿಬರುತ್ತಾರೆ ಎನ್ನುವ ವಿಶ್ವಾಸ ಯಾರಲ್ಲಿಯೂ ಇಲ್ಲವಾಗಿದೆ.

ಎರಡು ವರ್ಷದ ಹಿಂದೆ ಅಮೆರಿಕದಿಂದ ವಾಪಸ್ಸಾದ ನಾನು ಅಂದಿನಿಂದ ನನ್ನದೇ ನೆಲೆಯಲ್ಲಿ, ಸಮಾನಮನಸ್ಕರೊಡನೆ ಹಲವು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯವರೆಗೆ ನನ್ನ ಲೇಖನ, ಅನುವಾದಗಳ ನಾಲ್ಕು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದೇನೆ, ಮತ್ತು ವರ್ಷದ ಹಿಂದೆ “ಭೂಮಿ ಹುಟ್ಟಿದ್ದೆ ಹೇಗೆ?” ಎಂಬ ಕನ್ನಡ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸುವ www.vartamaana.com ಎನ್ನುವ ವೆಬ್‌ಸೈಟ್ ಅನ್ನು ನಡೆಸುತ್ತಿದ್ದೇನೆ. ಈ ವೆಬ್‌ಸೈಟ್‌ಗೆ ರಾಜ್ಯದ ಹಲವು ಸಮಾನಮನಸ್ಕ ಮತ್ತು ಪ್ರಗತಿಪರ ಲೇಖಕರು ಬರೆಯುವ ಮೂಲಕ ಕೈಜೋಡಿಸಿದ್ದಾರೆ.

ಇದೆಲ್ಲದರ ಜೊತೆಗೆ, ನಾನು ಪ್ರತಿಪಾದಿಸುವಂತಹ ಆಂತರಿಕ ಪ್ರಜಾಪ್ರಭುತ್ವ, ಸ್ವಚ್ಛ ಹಣ, ಸೈದ್ಧಾಂತಿಕ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿನಿಧಿಸುವ “ಲೋಕಸತ್ತಾ ಪಕ್ಷ“ದ ಸದಸ್ಯನಾಗಿ ಈಗ ಸಕ್ರಿಯನಾಗಿದ್ದೇನೆ. ಈ ಚಟುವಟಿಕೆಯ ಮುಂದುವರಿಕೆಯಾಗಿ ಈ ಬಾರಿಯೂ ಚುನಾವಣಾ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ, ಕಳೆದ ಬಾರಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ನಾನು ಅಮೆರಿಕದಲ್ಲಿದ್ದೆ ಮತ್ತು ನನ್ನೂರಿನ ಆನೇಕಲ್ ಕ್ಷೇತ್ರ ಮೀಸಲು ಕ್ಷೇತ್ರವಾದ ಕಾರಣ, ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ. ಈಗ ಅಮೆರಿಕದಿಂದ ಬಂದ ಎರಡು ವರ್ಷಗಳಿಂದಲೂ BTM_Layout_Const_Mapಬಿಟಿಎಮ್ ಬಡಾವಣೆಯಲ್ಲಿ ನೆಲೆಸಿದ್ದೇನೆ, ಹಾಗಾಗಿ ಈ ಬಾರಿ ಬಿಟಿಎಮ್‌ನಿಂದ ಸ್ಪರ್ಧಿಸುವುದು ಸಮಂಜಸ ಎಂದು ಭಾವಿಸಿ ಇಲ್ಲಿಂದ “ಲೋಕಸತ್ತಾ ಪಕ್ಷ”ದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಬೆಂಗಳೂರು ನಗರದ ಬಿಟಿಎಂ ಲೇಔಟ್, ಕೋರಮಂಗಲ, ಮಡಿವಾಳ, ಜಕ್ಕಸಂದ್ರ, ಆಡುಗೋಡಿ, ಈಜಿಪುರ, ಸುದ್ದುಗುಂಟೆಪಾಳ್ಯ, ಮತ್ತು ಲಕ್ಕಸಂದ್ರ ವಾರ್ಡುಗಳು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಮತ್ತು ಈ ಬಾರಿಯದು ಸಾಂಕೇತಿಕವಲ್ಲ. ನಾನು ನಂಬಿದ ಸಿದ್ಧಾಂತಗಳ ಮತ್ತು ಮೌಲ್ಯಗಳ ಅಡಿಯಲ್ಲಿ ಎಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೇನೆ ಎಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ. ಜೊತೆಗೆ ಈಗಾಗಲೆ ನಮ್ಮ ಪಕ್ಷದ ವತಿಯಿಂದ ಬೆಂಗಳೂರಿನ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ತೀರ್ಮಾನವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಇದು ಸಾಂಘಿಕ ಪ್ರಯತ್ನವೂ ಹೌದು.

ಈ ಹಿನ್ನೆಲೆಯಲ್ಲಿ ನಿಮ್ಮ ಬೆಂಬಲ, ಸಹಾಯ, ಮತ್ತು ಸಹಕಾರವನ್ನು ಕೋರಬಯಸುತ್ತೇನೆ. ಸಾರ್ವಜನಿಕರ ಬೆಂಬಲದಿಂದಲೇ ಚುನಾವಣೆ ನಡೆಸುವ ಆದರ್ಶ ಮಾದರಿಗೆ ತಮ್ಮ ಹೃತ್ಪೂರ್ವಕ ಬೆಂಬಲ ನಿಡಬೇಕೆಂದು ವಿನಂತಿಸುತ್ತೇನೆ. ನಾವು ಸಂಗ್ರಹಿಸುವ ಹಣದ ಪ್ರತಿಯೊಂದು ವಿವರವನ್ನೂ ಲೆಕ್ಕ ಇಡಲಾಗುತ್ತದೆ ಮತ್ತು ಈ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಹಾಗೆಯೇ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡುವ ಪ್ರತಿಯೊಂದು ವಿವರವೂ ಅಲ್ಲಿ ದಾಖಲಾಗುತ್ತದೆ. ತಾವು ಧನಸಹಾಯ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಬೇಕೆಂದು ಪ್ರಾರ್ಥಿಸುತ್ತೇನೆ. ಇದರ ಜೊತೆಗೆ, ನೀವೂ ಸಹ ಬಂದು ನಮ್ಮ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಾಧ್ಯವಾದರೆ, ನನ್ನ ಮತ್ತು ನಮ್ಮ ತಂಡದ ಹುಮ್ಮಸ್ಸು ಮತ್ತು ಕಾರ್ಯಕ್ಷಮತೆ ನೂರ್ಮಡಿಯಾಗುತ್ತದೆ.

ಹಣವನ್ನು ‘Loksatta Party‘ ಹೆಸರಿಗೆ ಚೆಕ್ ಬರೆದು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: (ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಇರುತ್ತದೆ)

ರವಿ ಕೃಷ್ಣಾರೆಡ್ಡಿ
ನಂ.400, 23ನೇ ಮುಖ್ಯರಸ್ತೆ,
ಬಿಟಿಎಮ್ ಲೇಔಟ್ 2ನೇ ಹಂತ,
ಬೆಂಗಳೂರು – 560076

ನಿಮ್ಮ ವಿಶ್ವಾಸಿ,
ರವಿ…