Daily Archives: February 16, 2013

ಬದಲಾಗುತ್ತಿರುವ ಭ್ರಷ್ಟಾಚಾರದ ವಾಖ್ಯಾನಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಜಾಗತೀಕರಣದ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ ಅಟ್ಟಕ್ಕೇರಿಸಿದವರ ಮುಖವಾಡಗಳು ಇತ್ತೀಚೆಗೆ ಒಂದೊಂದಾಗಿ ಕಳಚಿ ಬೀಳುತ್ತಿವೆ. ಭಾರತದಲ್ಲಿ ಅನಾವರಣಗೊಳ್ಳತ್ತಿರುವ ಭ್ರಷ್ಟಾಚಾರದ ಪ್ರಕರಣಗಳು ನಾವು ಈವರೆಗೆ ಕಾಣದೆ ಉಳಿದಿದ್ದ ಜಾಗತೀಕರಣದ ಮತ್ತೊಂದು ಕರಾಳ ಮುಖವನ್ನು ನಮ್ಮೆದುರು ಪ್ರದರ್ಶನಕ್ಕಿಟ್ಟಿವೆ. ಇವುಗಳ ಜೊತೆಯಲ್ಲಿಯೆ ಭ್ರಷ್ಟಾಚಾರ ಕುರಿತಂತೆ ನಮ್ಮ ವಾಖ್ಯಾನಗಳು ಕೂಡ ಬದಲಾಗುತ್ತಿವೆ. ಈ ವಾಖ್ಯಾನ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕಾದ ಸಾಂಸ್ಕೃತಿಕ ಜಗತ್ತು ಗರಬಡಿದಂತೆ ನಿಸ್ತೇಜನಗೊಂಡಿದೆ. ಇದರ ಹಲವು ವಾರಸುದಾರರು, ಭ್ರಷ್ಟರಾಜಕಾರಣಿಗಳ ಮತ್ತು ಅಧಿಕಾರಿಗಳ ಆಸ್ಥಾನದಲ್ಲಿ ವಿದ್ವಾಂಸರಾಗಿ ಪ್ರತಿಷ್ಟಾಪನೆಗೊಂಡು, ವಿದೂಷಕರಾಗಿ ನಾಡಿನ ಜನಕ್ಕೆ ಮನರಂಜನೆ ಒದಗಿಸುತ್ತಿದ್ದಾರೆ.

ಇತ್ತೀಚೆಗೆ ಬೆಳಕಿಗೆ ಬಂದ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾರತದ ವಾಯುಪಡೆಯ helicopterಮಾಜಿ ಮುಖ್ಯಸ್ಥನೊಬ್ಬನ ಹೆಸರು ನೇರವಾಗಿ ಪ್ರಸ್ತಾಪವಾಗಿದೆ. ಇಟಲಿ ಮೂಲದ ವೆಸ್ಟ್ ಲ್ಯಾಂಡ್ ಕಂಪನಿಯ ಈ ವ್ಯವಹಾರ ನಿಜಕ್ಕೂ ಬೆಚ್ಚಿ ಬೀಳಿಸುವಂತಹದ್ದು. ಈಗಾಗಲೆ ತನಿಖೆಯಾಗಿ ಮಣ್ಣು ಸೇರಿದ ಬೋಫೋರ್ಸ್ ಪಿರಂಗಿ ಹಗರಣದಲ್ಲಿ ಕೂಡ ಇದೇ ಇಟಲಿ ಮೂಲದ ಕ್ವಟ್ರಾಚಿ ಎಂಬಾತ ಸೂತ್ರಧಾರನಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.

ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನೀಡಲಾದ ಲಂಚವನ್ನು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ “ಇದೊಂದು ಉದ್ಯಮದ ಭಾಗ,” ಎಂದು ಬಣ್ಣಿಸುವುದರ ಮೂಲಕ ಜಾಗತೀಕರಣದ ವಾಹಕಗಳಾದ ಬಹುರಾಷ್ಟ್ರೀಯ ಕಂಪನಿಗಳ ಕರಾಳ ಮುಖವನ್ನು ಅನಾವರಣಗೊಳಿಸಿ, ಭ್ರಷ್ಟಾಚಾರಕ್ಕೆ ಹೊಸವಾಖ್ಯಾನ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯ ದೈತ್ಯ ಕಂಪನಿಯಾದ ವಾಲ್‌ಮಾರ್ಟ್ ಈ ಭ್ರಷ್ಟಾಚಾರವನ್ನು “ಲಾಬಿ” ಎಂದು ಹೆಸರಿಸಿದೆ. ಅಮೇರಿಕಾ ಮೂಲದ ಈ ಬಹುರಾಷ್ಟ್ರೀಯ ಕಂಪನಿ ಅಲ್ಲಿನ ಸಂಸತ್ತಿಗೆ ಸಲ್ಲಿಸಿರುವ ವಿವರಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಳಗೊಂಡಂತೆ ಹಲವು ರಾಷ್ಟ್ರಗಳಲ್ಲಿ ಲಂಚಕ್ಕಾಗಿ 25 ದಶಲಕ್ಷ ಡಾಲರ್ ಹಣ ವಿನಿಯೋಗಿಸಿರುವುದಾಗಿ ಹೇಳಿಕೊಂಡಿದೆ.Wal-Mart ಭಾರತದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೋಜು ಮಸ್ತಿಗಾಗಿ ವರ್ಷವೊಂದಕ್ಕೆ 11,500 ಡಾಲರ್ ಖರ್ಚುಮಾಡಲಾಗಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದೆ.

ಇಪ್ಪತ್ತೊಂದನೇ ಶತಮಾನದ ಮಹಾನ್ ಪ್ರವಾದಿಗಳಂತೆ ಮಾತನಾಡುತ್ತಿರುವ ರಾಜಕಾರಣಿಗಳು ಮತ್ತು ಕಂಪನಿಯ ವಕ್ತಾರರ ಪ್ರಕಾರ ಲಂಚವೆಂಬುದು ಉದ್ಯಮದ ಒಂದು ಭಾಗವಾದರೆ, ವೇಶ್ಯಾವೃತ್ತಿ ಕೂಡ ವೃತ್ತಿಯ ಒಂದು ಭಾಗವಾಗುತ್ತದೆ. ತಲೆಹೊಡೆಯುವುದು, ಕೊಲೆ ಮಾಡುವುದು ದರೋಡೆಕಾರನ ವೃತ್ತಿಯ ಒಂದು ಭಾಗವಾಗುತ್ತದೆ. ಹಣ, ಹೆಂಡ ಮತ್ತು ಹೆಣ್ಣು, ಈ ಮೂರು ಅಂಶಗಳು ಆಧುನಿಕ ಜಗತ್ತು ಮತ್ತು ಸಮಾಜವನ್ನು ಮಲೀನಗೊಳಿಸುತ್ತಿರುವ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನಬಳಕೆಯ ನಡುವೆ ಇರುವ ಮಾತುಗಳಿಗೆ ಹೊಸ ಅರ್ಥವನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಇತ್ತೀಚೆಗೆ ಕಡು ಭ್ರಷ್ಟಾಚಾರ ಕುರಿತು ಮಾತನಾಡುವುದು ಅಥವಾ ವ್ಯಾಖ್ಯಾನಿಸುವುದು ಕೂಡ ಸಿನಿಕತನದ ಒಂದು ಭಾಗವೇನೊ ಎಂಬಂತಾಗಿದೆ.

ಭ್ರಷ್ಟಾಚಾರದ ಹಗರಣಗಳು ಭಾರತೀಯರಿಗೆ ಹೊಸದೇನಲ್ಲ. ಅವರು ಈಗಾಗಲೇ ಅವುಗಳ ಬಗ್ಗೆ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹಳ್ಳ ಹಿಡಿದ ಲಾಲು ಪ್ರಸಾದ್ ಅವರ ಮೇವು ಖರೀದಿ ಹಗರಣ, ಜಯಲಲಿತ, ಮಾಯಾವತಿ, ಮುಲಾಯಂಸಿಂಗ್ ಯಾದವ್ ಮತ್ತು ಯಡಿಯೂರಪ್ಪ ಇವರ ಅಕ್ರಮ ಆಸ್ತಿ ಹಗರಣ, ಬೊಫೋರ್ಸ್ ಪಿರಂಗಿ ಖರೀದಿ ಹಗರಣ, ಮೋಬೈಲ್ ತರಾಂಗಾಂತರ ಹಂಚಿಕೆ ಹಗರಣ, ಗಣಿ ವಿವಾದ, ಇತ್ತೀಚೆಗಿನ ಹೆಲಿಕಾಪ್ಟರ್ ಹಗರಣ, ಇವೆಲ್ಲವೂ ಸಮಯಕ್ಕೆ ತಕ್ಕಂತೆ ರಾಜಕೀಯ ಚದುರಂಗದಾಟದಲ್ಲಿ ಬಳಕೆಯಾಗುವ ರಾಜ, ರಾಣಿ, ಮಂತ್ರಿ, ಕುದುರೆ, ಸಿಪಾಯಿಗಳೆಂಬ ಆಟದ ಕಾಯಿಗಳು. ಇದನ್ನು ನೋಡುವ ಮತ್ತು ಫಲಿತಾಂಶಕ್ಕಾಗಿ ಕಾಯುವ ನಾವುಗಳು ಮಾತ್ರ ನಿಜವಾದ ಅರ್ಥದಲ್ಲಿ ಮೂರ್ಖರು.

ದೆಹಲಿ ಮೂಲದ ನೀರಾ ರಾಡಿಯ ಎಂಬ ಅಸಾಮಾನ್ಯರಿಗಷ್ಟೇ ಗೊತ್ತಿದ್ದ ಮಹಿಳೆ ಅಕ್ರಮ ವ್ಯವಹಾರಗಳಿಗೆ ದಲ್ಲಾಳಿಯಾಗಿದ್ದು, nira raadiaತನ್ನ ವೃತ್ತಿಯನ್ನು ಲಾಬಿ ಎಂದು ಕರೆದುಕೊಂಡಿದ್ದಾಳೆ. ದೆಹಲಿಯ ಪ್ರತಿಷ್ಟಿತರಲ್ಲಿ ಮುಖ್ಯಳಾಗಿರುವ ಈಕೆ ಈಗ ಸಾವಿರಾರು ಕೋಟಿ ರೂಪಾಯಿಗಳ ಒಡತಿ. ದೆಹಲಿ ಹೊರವಲಯದ ತೋಟದ ಮನೆಯಲ್ಲಿ ರಾಜಕಾರಣಿಗಳು, ಕಂಪನಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ನಿತ್ಯ ಪಾರ್ಟಿ ಏರ್ಪಡಿಸುವ ಇವಳನ್ನು ನಮ್ಮ ಪರಮ ಪೂಜ್ಯ ಶ್ರಿ.ಶ್ರೀ.ಶ್ರೀ. (ಇನ್ನೊಂದಷ್ಟು ಶ್ರೀಗಳನ್ನು ಸೇರಿಸಿಕೊಳ್ಳಿ) ಪೇಜಾವರ ಸ್ವಾಮಿಗಳು ತನ್ನ ಪರಮಶಿಷ್ಯೆ ಎಂದು ಘೊಷಿಸಿಕೊಂಡಿದ್ದಾರೆ. ಇವಳು ಸಂಪಾದಿಸಿದ ಪಾಪದ ಹಣವನ್ನು ಯಾವ ಆತ್ಮ ಸಾಕ್ಷಿಯೂ ಇಲ್ಲದೆ ದೇಣಿಗೆಯಾಗಿ ಸ್ವೀಕರಿಸಿದ್ದಾರೆ. ನಮ್ಮ ಯಡಿಯೂರಪ್ಪ ತಾನು ತಿಂದ ಎಂಜಲನ್ನು ನಮ್ಮ ಮಠಾಧೀಶರ ಬಾಯಿಗೆ ಒರೆಸಲಿಲ್ಲವೆ?ಅದೇ ರೀತಿ ನೀರಾ ರಾಡಿಯ ಕೂಡ ತಾನು ಬೆಳೆಯುತ್ತಿರುವ ಪಾಪದ ಫಸಲನ್ನು ಮಠಗಳಿಗೂ ಹಂಚುತ್ತಿದ್ದಾಳೆ. ದುರಂತದ ಸಂಗತಿಯೆಂದರೆ, ವರ್ತಮಾನದ ಸಮಾಜಕ್ಕೆ ಆವರಿಸಿಕೊಳ್ಳತ್ತಿರುವ ವೈಚಾರಿಕತೆಯ ಶೂನ್ಯತೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಸಾಮಾಜಿಕ ಅನಿಷ್ಟಗಳಿಗೆ ನಾವೀಗ ಸಾಕ್ಷಿಯಾಗಬೇಕಾಗಿದೆ.