Daily Archives: February 1, 2013

(ಬಾಲಗಂಗಾಧರನಾಥ) ಸ್ವಾಮಿ ಅಂಡ್ ಫ್ರೆಂಡ್ಸ್

– ಬಸವರಾಜು

68, ಸಾಮಾನ್ಯವಾಗಿ ಸ್ವಾಮೀಜಿಗಳು ಸಾಯುವ ವಯಸ್ಸಲ್ಲ. ಸ್ವಾಮೀಜಿಗಳೆಂದರೆ ಆಧ್ಯಾತ್ಮ ಅರಿತವರು, ಅಪಾರ ಅನುಭವವುಳ್ಳವರು, ಅರಿವನ್ನು ಹಂಚುವವರು ಎಂಬ ಪ್ರತೀತಿ ಇದೆ. ಇಷ್ಟೆಲ್ಲ ಅರಿವು-ಅನುಭವ ಪಡೆಯುವುದಕ್ಕೆ ಕನಿಷ್ಠ ಐವತ್ತಾದರೂ ವಯಸ್ಸಾಗಿರಬೇಕು ಎಂಬುದು ಸಾಮಾನ್ಯರ ತಿಳುವಳಿಕೆಯಾಗಿದೆ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಗಳ 68, ಸಾಯುವ ವಯಸ್ಸಾಗಿರಲಿಲ್ಲ ಎನ್ನುವುದು ಅವರ ಪಾರ್ಥಿವ ಶರೀರ ವೀಕ್ಷಿಸಲು ಬಂದ ಭಕ್ತಸಮೂಹದಿಂದ ಕೇಳಿಬರುತ್ತಿದ್ದ ಮಾತಾಗಿತ್ತು. ಏಕೆಂದರೆ, ಪಕ್ಕದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 105 ವರ್ಷ, ಉಡುಪಿಯ ವಿಶ್ವೇಶತೀರ್ಥ ಸ್ವಾಮೀಜಿಗಳ 83 ವರ್ಷ ವಯಸ್ಸು ಭಕ್ತರ ತಲೆಯಲ್ಲಿ ತೇಲುತ್ತಿತ್ತು. ಆದರೆ 68ಕ್ಕೇ ಇಹಲೋಕ ತ್ಯಜಿಸಿದ ಬಾಲಗಂಗಾಧರನಾಥ ಸ್ವಾಮಿಯವರು, ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.

bgs1ರಾಮನಗರ ತಾಲೂಕಿನ ಬಾನಂದೂರು ಗ್ರಾಮದ ಚಿಕ್ಕಲಿಂಗೇಗೌಡ-ಬೋರಮ್ಮ ದಂಪತಿಗಳ ಮಗನಾಗಿ ಜನವರಿ 18, 1945 ರಲ್ಲಿ ಹುಟ್ಟಿದ ಗಂಗಾಧರಯ್ಯ, ಬಾಲ್ಯದಲ್ಲಿಯೇ ಆಧ್ಯಾತ್ಮದ ಕಡೆಗೆ ಒಲವುಳ್ಳವರಾಗಿದ್ದರು. ಇವರ ಬುದ್ಧಿ ಮತ್ತು ಶ್ರದ್ಧೆಗೆ ಮರುಳಾದ ಅವರ ತಾತ ಅವರನ್ನು ಆಗಲೇ `ಸ್ವಾಮಿ’ ಎಂದೇ ಸಂಬೋಧಿಸುತ್ತಿದ್ದರು.

ಎಲ್ಲರಂತೆ ಓದು ವಿದ್ಯಾಭ್ಯಾಸ ಮುಗಿಸಿದ ಗಂಗಾಧರಯ್ಯ, ತಾವು ಓದಿದ ರಾಮನಗರ ಪ್ರೌಢಶಾಲೆಯಲ್ಲಿಯೇ ಕೆಲ ಕಾಲ ಗುಮಾಸ್ತರಾಗಿಯೂ ಕೆಲಸ ಮಾಡಿದರು. ಆ ನಂತರ ಬೆಂಗಳೂರಿಗೆ ಬಂದು ಬಿ.ಎಸ್ಸಿ. ಪದವಿ ಪಡೆದರು. ಅದೇ ಸಮಯಕ್ಕೆ ಸರಿಯಾಗಿ, 1968 ರಲ್ಲಿ ಬೆಳ್ಳೂರಿನ ಆದಿಚುಂಚನಗಿರಿ ಮಠದ ರಾಮಾನಂದನಾಥ ಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಮಠಕ್ಕೆ ಯೋಗ್ಯ ಅಭ್ಯರ್ಥಿಗಳು ಬೇಕು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದರು. ಅಧ್ಯಾತ್ಮದ ಒಲವುಳ್ಳ ಗಂಗಾಧರಯ್ಯ ಸಹಜವಾಗಿಯೇ ಚುಂಚನಗಿರಿ ಮಠದತ್ತ ಹೆಜ್ಜೆ ಹಾಕಿದರು, ಸನ್ಯಾಸತ್ವ ಸ್ವೀಕರಿಸಲು ಮುಂದಾದರು.

ಆಗ ರಾಮಾನಂದನಾಥ ಸ್ವಾಮಿಗಳು ಗಂಗಾಧರಯ್ಯ ಹೆಸರನ್ನು ಬಾಲಗಂಗಾಧರನಾಥ ಸ್ವಾಮಿ ಎಂದು ಬದಲಿಸಿದರು. ಆನಂತರ ಬಾಲಗಂಗಾಧರನಾಥರು ವಿದ್ಯುಕ್ತವಾಗಿ ದೀಕ್ಷೆ ಪಡೆದು, ಸನ್ಯಾಸತ್ವ ಸ್ವೀಕರಿಸಿದರು. ಮಠದ ಉತ್ತರಾಧಿಕಾರಿಯಾಗಲು ಇಷ್ಟು ಸಾಲದು ಎಂದರಿತ ರಾಮಾನಂದನಾಥಸ್ವಾಮಿಗಳು, ಅದ್ವೈತ ವೇದಾಂತ ಸಂಸ್ಕೃತ ಪದವಿ ಪಡೆಯಲು ಬೆಂಗಳೂರಿನ ಕೈಲಾಸ ಮಠಕ್ಕೆ ಕಳುಹಿಸಿಕೊಟ್ಟರು. pontiffsವೇದಾಧ್ಯಯನ ಪೂರ್ಣಗೊಂಡ ನಂತರ, ಸೆಪ್ಟೆಂಬರ್ 25, 1974 ರಂದು ಬಾಲಗಂಗಾಧರನಾಥ ಸ್ವಾಮಿಯವರನ್ನು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಠಕ್ಕೆ 71 ನೇ ಪೀಠಾಧ್ಯಕ್ಷರನ್ನಾಗಿ ನೇಮಿಸಿದರು.

ಬಾಲಗಂಗಾಧರನಾಥ ಸ್ವಾಮಿಗಳು ಆದಿಚುಂಚನಗಿರಿ ಮಠಕ್ಕೆ ಪೀಠಾಧ್ಯಕ್ಷರಾದ ಕಾಲಕ್ಕೆ, ಕಾಲಭೈರವೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ನೀಡುವುದಕ್ಕೂ ಕೂಡ ಕಷ್ಟವಾಗಿತ್ತು. ಮಠ ಆರ್ಥಿಕವಾಗಿ ದುಃಸ್ಥಿತಿಯಲ್ಲಿತ್ತು. ಮಂಡ್ಯ, ಬೆಂಗಳೂರು, ತುಮಕೂರು ಜಿಲ್ಲೆಗಳ ಕೆಲವು ಒಳ ಪಂಗಡಗಳಒಕ್ಕಲಿಗ ಸಮುದಾಯಕ್ಕಷ್ಟೇ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಬಾಲಗಂಗಾಧರನಾಥ ಸ್ವಾಮಿಗಳು ತಾವೇ ಖುದ್ದಾಗಿ ನೇಗಿಲು ಹಿಡಿದು ಹೊಲ ಉಳುವ ಕಾರ್ಯಕ್ಕೆ ಕೈಹಾಕಿದರು. ಗಾಡಿ ಕಟ್ಟಿಕೊಂಡು ಊರೂರು ಸುತ್ತಿ ದವಸ ಧಾನ್ಯ, ತೆಂಗಿನಕಾಯಿ, ಹಣ ಸಂಗ್ರಹಿಸಿದರು. 9 ಸಲ ವಿಶ್ವ ಪರ್ಯಟನೆ ಕೈಗೊಂಡು ಮಠಕ್ಕೆ ಹಣದ ಹೊಳೆ ಹರಿಸಿದರು. ಆನಂತರ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ಮಠವನ್ನು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳತ್ತ ವಿಸ್ತರಿಸಿದರು. ಅನ್ನ, ಅಕ್ಷರ, ಆರೋಗ್ಯದ ಪರಿಕಲ್ಪನೆಗೆ ಜೀವ ತುಂಬಿದರು. ಮಠವನ್ನು ಹಂತ ಹಂತವಾಗಿ ಪ್ರಗತಿಯತ್ತ ಕೊಂಡೊಯ್ದರು.

ಬಾಲಗಂಗಾಧರನಾಥ ಸ್ವಾಮಿಗಳ ಈ ಅವಿಶ್ರಾಂತ ಸೇವೆಯ ಫಲವಾಗಿ ಇಂದು ಆದಿಚುಂಚನಗಿರಿ ಮಠ- ದೇಶದ ವಿವಿಧೆಡೆ 40 ಶಾಖಾ ಮಠಗಳನ್ನು ಹೊಂದಿದೆ. adichunchanagiri460 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. 5 ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ವಿದ್ಯಾರ್ಜನೆ ನೀಡುತ್ತಿದೆ. ರಾಮನಗರ ತಾಲೂಕಿನ ಅರ್ಚಕರಹಳ್ಳಿಯಲ್ಲಿ ಅಂಧರಿಗೆ ಉಚಿತ ಶಾಲೆ ತೆರೆದಿದೆ. ಅರ್ಚಕ ವೃತ್ತಿಗೆ ಪ್ರೋತ್ಸಾಹ ನೀಡುವ ವೇದಾಗಮ ಶಾಲಾಕಾಲೇಜುಗಳನ್ನು ಶುರು ಮಾಡಿದೆ. ಮಧ್ಯಮ ವರ್ಗ ಡೊನೇಷನ್ ಕೊಟ್ಟು ಓದಿಸುವ ಉತ್ಸುಕತೆಯಿದ್ದ ಸಂದರ್ಭದಲ್ಲಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತಹ ನಾಲ್ಕು ಎಂಜಿನಿಯರಿಂಗ್, ಎರಡು ವೈದ್ಯಕೀಯ, ಎರಡು ಆಯುರ್ವೇದಿಕ್ ಕಾಲೇಜುಗಳನ್ನು ಸ್ಥಾಪಿಸಿದೆ. ನಾಲ್ಕು ಸುಸಜ್ಜಿತ ಆಸ್ಪತ್ರೆಗಳನ್ನು (ಜವರನಹಳ್ಳಿ ಕ್ರಾಸ್ ನಲ್ಲಿ ವೈದ್ಯಕೀಯ ಕಾಲೇಜಿಗಾಗಿ ಆಸ್ಪತ್ರೆ, ಬೆಂಗಳೂರಿನಲ್ಲಿ ಅತ್ಯಾಧುನಿಕ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ) ಕಟ್ಟಿಸಿ ಜನರ ಸೇವೆಗೆ ಒದಗಿಸಿದೆ. ಒಂದು ಕಾಲದಲ್ಲಿ ಪ್ರಸಾದಕ್ಕೂ ಕಷ್ಟವಿದ್ದ ಕಾಲಭೈರವೇಶ್ವರ ದೇವಸ್ಥಾನವನ್ನು 85 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಲಾಗಿದೆ.

ಚುಂಚನಗಿರಿ ಮಠ ಹೀಗೆ ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದು, AshokKheny-ambarish-balagangadharaಐಷಾರಾಮಿ ವಿದೇಶಿ ಕಾರುಗಳಲ್ಲಿ, ಹೆಲಿಕಾಪ್ಟರ್‌ನಲ್ಲಿ ಸ್ವಾಮೀಜಿಗಳು ಓಡಾಡುವಂತಾಗಿದ್ದು, ಮಠದ ಆಸ್ತಿ ಸುಮಾರು 15 ರಿಂದ 20 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದ್ದು- ಕೇವಲ ಮೂರೂವರೆ ದಶಕಗಳಲ್ಲಿ. ಬಾಲಗಂಗಾಧರನಾಥರು ಪೀಠಾಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ.

ಇಂತಹ ಸ್ವಾಮೀಜಿಗಳನ್ನು ನಾನು ಮೊದಲ ಬಾರಿಗೆ ಕಂಡಿದ್ದು 1983 ರಲ್ಲಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ. ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ. ಆ ಕಾಲೇಜು ಮಾಜಿ ಮಂತ್ರಿ ಎಚ್.ಸಿ. ಶ್ರೀಕಂಠಯ್ಯನವರ ಒಡೆತನದಲ್ಲಿತ್ತು. ಹೆಸರು ಮಾತ್ರ ಆದಿಚುಂಚನಗಿರಿ ಮಠದ್ದಾಗಿತ್ತು. ಅದೇ ಸಮಯದಲ್ಲಿ, ಕಾಲೇಜಿನ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಮತ್ತು ಶ್ರೀಕಂಠಯ್ಯನವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳು ಆಗಮಿಸುವಾಗ, ಅವರು ನಡೆದು ಬರುವ ಹಾದಿಯುದ್ದಕ್ಕೂ ಸಾಲಾಗಿ ನಿಂತ ವಿದ್ಯಾರ್ಥಿನಿಯರು ಅವರ ಪಾದಗಳ ಮೇಲೆ ಮೆಲ್ಲಗೆ ಬೀಳುವಂತೆ ಮಲ್ಲಿಗೆ ಹೂಗಳನ್ನು ಹಾಕುತ್ತಿದ್ದರು. ಪ್ರಿನ್ಸಿಪಾಲರಾದಿಯಾಗಿ ಎಲ್ಲರೂ ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು.

ಆ ನಂತರ ನನ್ನ ಗಮನಕ್ಕೆ ಬಂದ ಸಂಗತಿ ಎಂದರೆ, ಆದಿಚುಂಚನಗಿರಿ ಕಾಲೇಜಿನ ಜಾಗ ಒಕ್ಕಲಿಗರ ಸಂಘಕ್ಕೆ ಸೇರಿತ್ತು. ಅದನ್ನು ಶ್ರೀಕಂಠಯ್ಯನವರು ತಮ್ಮ ಅಧಿಕಾರ ಬಳಸಿ, ಶಿಕ್ಷಣ ಸಂಸ್ಥೆಗೆ ಬಳಸಿಕೊಂಡಿದ್ದರು. ತಂಟೆ ತಕರಾರುಗಳು ಬರಬಾರದೆಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಎಂದು ಹೆಸರಿಟ್ಟಿದ್ದರು. ಆಶ್ಚರ್ಯವೆಂದರೆ, ಚುಂಚನಗಿರಿ ಮಠಕ್ಕೂ ಈ ಶಿಕ್ಷಣ ಸಂಸ್ಥೆಗೂ ಯಾವುದೇ ಸಂಬಂಧವಿರಲಿಲ್ಲ. ಆಗತಾನೆ ಬೆಳೆಯುತ್ತಿದ್ದ ಸ್ವಾಮೀಜಿಗೆ ಅಧಿಕಾರಸ್ಥ ರಾಜಕಾರಣಿಯ ಸ್ನೇಹ-ಸಂಪರ್ಕದ ಅಗತ್ಯವಿತ್ತು, ರಾಜಕಾರಣಿ ಶ್ರೀಕಂಠಯ್ಯನವರಿಗೆ ಸ್ವಾಮೀಜಿಯ ಬೆಂಬಲ ಬೇಕಾಗಿತ್ತು. ಹೀಗಾಗಿ ಅವರಿಬ್ಬರೂ ಒಂದಾಗಿದ್ದರು. ಬಹುಸಂಖ್ಯಾತ ಒಕ್ಕಲಿಗರು ಸುಮ್ಮನಾಗಿದ್ದರು. ಆದರೆ 2011 ರಲ್ಲಿ, ಮಾಜಿ ಮಂತ್ರಿ ಎಚ್.ಸಿ. ಶ್ರೀಕಂಠಯ್ಯನವರು ಇಹಲೋಕ ತ್ಯಜಿಸಿದಾಗ, ಬಾಲಗಂಗಾಧರನಾಥ ಸ್ವಾಮೀಜಿಗಳು ಚನ್ನರಾಯಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು ಮಠದ ವಶಕ್ಕೆ ತೆಗೆದುಕೊಂಡರು. ಶ್ರೀಕಂಠಯ್ಯನವರ ಮಗ ವಿಜಯಕುಮಾರ್‌ರನ್ನು ನಾಮಕಾವಾಸ್ತೆ ಕಾರ್ಯದರ್ಶಿಯನ್ನಾಗಿ ನೇಮಿಸಿದರು.

ಇರಲಿ, ಮಂತ್ರಿ ಶ್ರೀಕಂಠಯ್ಯನವರು ಮತ್ತು ಬಾಲಗಂಗಾಧರನಾಥ ಸ್ವಾಮಿಗಳು ಪರಸ್ಪರ ಸ್ನೇಹ-ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಒಕ್ಕಲಿಗರಿಗೂ ಚುಂಚನಗಿರಿ ಮಠಕ್ಕೂ ಯಾವುದೇ ವೃತಾನೇಮಗಳಿರಲಿಲ್ಲ. ಯಾರ ಮನೆಯಲ್ಲೂ ಸ್ವಾಮೀಜಿಯ ಫೋಟೋ ಇಟ್ಟು ಪೂಜಿಸುತ್ತಿರಲಿಲ್ಲ. ಮಠಕ್ಕೆ ನಡೆದುಕೊಳ್ಳುವ ರೂಢಿಯೂ ಇರಲಿಲ್ಲ.

ಆದರೆ ಶ್ರೀಕಂಠಯ್ಯನವರು ಸ್ವಾಮೀಜಿಗಳಿಗೆ ಹತ್ತಿರವಾಗಿದ್ದನ್ನು, ಲಾಭ ಪಡೆದಿದ್ದನ್ನು ನೋಡಿದ ಹಾಸನ ಜಿಲ್ಲೆಯ swamy with gowdaಮತ್ತೊಬ್ಬ ರಾಜಕಾರಣಿ ಜಿ. ಪುಟ್ಟಸ್ವಾಮಿಗೌಡರೂ ಮಠಕ್ಕೆ ಹೋಗಿಬರುತ್ತ ಸ್ವಾಮೀಜಿಗಳಿಗೆ ಹತ್ತಿರವಾದರು. ಪುಟ್ಟಸ್ವಾಮಿಗೌಡರು ಆಗ ಹಾಸನ ಜಿಲ್ಲೆಯ ಪ್ರಮುಖ ರಾಜಕಾರಣಿಯಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬದ್ಧದ್ವೇಷಿಯಾಗಿದ್ದರು. ದೈತ್ಯ ದೇವೇಗೌಡರನ್ನು ಎದುರಿಸಲು ಕಾಂಗ್ರೆಸ್ ಪಕ್ಸ ಸೇರಿದ್ದರು, ಶ್ರೀಕಂಠಯ್ಯನವರೊಂದಿಗೆ ನೆಂಟಸ್ತನ ಬೆಳೆಸಿದ್ದರು.

ಆಶ್ಚರ್ಯವೆಂದರೆ, 1983 ರಿಂದ 1989 ರವರೆಗೆ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಒಕ್ಕಲಿಗ ಸಮುದಾಯದ ನಾಯಕನೆನ್ನಿಸಿಕೊಂಡಿದ್ದ ಎಚ್.ಡಿ.ದೇವೇಗೌಡರು ಚುಂಚನಗಿರಿ ಮಠದತ್ತ ಕಾಲಿಟ್ಟಿದ್ದಾಗಲಿ, ಸ್ವಾಮೀಜಿಯ ಸ್ನೇಹ ಸಂಪಾದಿಸಿದ್ದಾಗಲಿ ಇಲ್ಲ. ಆದರೆ 1989 ರಲ್ಲಿ ಜನತಾ ಪರಿವಾರ ಸರ್ಕಾರ ಪತನಗೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಒಕ್ಕಲಿಗ ಜಾತಿಯ ರಾಜಕಾರಣಿಗಳು ಮಠದತ್ತ ಕಾಲಿಡುವುದು ಹೆಚ್ಚಾಯಿತು. ರಾಜಕಾರಣಿಗಳೊಂದಿಗೆ ಸ್ವಾಮೀಜಿಗಳ ಸ್ನೇಹ ದಿನದಿಂದ ದಿನಕ್ಕೆ ವೃದ್ಧಿಸತೊಡಗಿತು.

ಇದನ್ನರಿತ ದೇವೇಗೌಡರು, 1994 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಮಠಕ್ಕೆ ಕಾಲಿಟ್ಟು, ಸ್ವಾಮೀಜಿಗಳ ಕಾಲಿಗೆ ಬಿದ್ದರು. ಆ ಚುನಾವಣೆಯಲ್ಲಿ ಜನಾಭಿಪ್ರಾಯ ಕೂಡ ಜನತಾ ಪಕ್ಷದ ಪರವಾಗಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಲಿ ಎಂಬುದು ಇಡೀ ರಾಜ್ಯದ ಜನರ ಆಶಯವಾಗಿತ್ತು. ಪರಿಸ್ಥಿತಿ ದೇವೇಗೌಡರ ಪರವಾಗಿದ್ದರೂ, ರಾಜ್ಯದಾದ್ಯಂತ ರ್ಯಾಲಿ (Rally) ಮಾಡಿ, ಅಂತಿಮವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರೀ ಬಹಿರಂಗ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಆದರೆ ದೇವೇಗೌಡರು ಆ ರಾಜಕೀಯ ಸಮಾವೇಶಕ್ಕೆ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಕರೆಸುವ ಮೂಲಕ ಒಕ್ಕಲಿಗ ಜಾತಿಯ ಸಮಾವೇಶವನ್ನಾಗಿ ಪರಿವರ್ತಿಸಿದರು. ಹಾಗೆಯೇ ಇಡೀ ಒಕ್ಕಲಿಗ ಸಮುದಾಯ ಒಂದಾಗಿ ದೇವೇಗೌಡರ ಬೆಂಬಲಕ್ಕೆ ನಿಲ್ಲುವಂತೆ ಸ್ವಾಮೀಜಿ ಕರೆ ಕೊಡುವಂತೆ ನೋಡಿಕೊಂಡರು. ಆನಂತರ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದರು.

ಒಂದು ಜಾತಿಗೆ ಸೇರಿದ ಧಾರ್ಮಿಕ ಮಠವನ್ನು ಮತ್ತು ಸರ್ವಸಂಗ ಪರಿತ್ಯಾಗಿಯಂತಹ ಸ್ವಾಮೀಜಿಯನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬಹುದು, ಲಾಭ ಪಡೆಯಬಹುದು ಎಂಬುದು ಎಲ್ಲರಿಗೂ ನಿಚ್ಚಳವಾಗಿ ಕಾಣತೊಡಗಿತು. ಆಗ ಬಾಲಗಂಗಾಧರನಾಥ ಸ್ವಾಮೀಜಿಯ ಶಕ್ತಿ ಏನೆಂಬುದು ಎಲ್ಲರ ಅರಿವಿಗೂ ಬಂತು. ಮಾಧ್ಯಮಗಳ ಪರ-ವಿರೋಧದ ಪ್ರಚಾರವೂ ಜೋರಾಯಿತು. yeddy-ashok-katta-balagangadharಒಕ್ಕಲಿಗ ಜಾತಿಗೆ ಸೇರಿದ ಹಿರಿ-ಮರಿ ರಾಜಕಾರಣಿಗಳು ಮಠಕ್ಕೆ ಹೋಗುವುದು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಹೆಚ್ಚಾಯಿತು. ಹಾಗೆಯೇ ಸ್ವಾಮೀಜಿಗಳೂ ತಮ್ಮ ಈ ಶಕ್ತಿ ಮತ್ತು ಸಂಪರ್ಕವನ್ನು ಮಠದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಬಗ್ಗೆ ಯೋಚಿಸಿದರು. ಬೆಳ್ಳೂರಿನ ಚುಂಚನಗಿರಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಮಠ ದೇಶದಾದ್ಯಂತ 40 ಶಾಖಾ ಮಠಗಳನ್ನು, ಹತ್ತಾರು ಮರಿಸ್ವಾಮಿಗಳನ್ನು ಹೊಂದುವಂತಾಯಿತು. ಹಾಗೆಯೇ 460 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಭೌಮತೆಯನ್ನು ಸ್ಥಾಪಿಸಿತು. ಆರ್ಥಿಕವಾಗಿ ಹಿಂದುಳಿದಿದ್ದ ಮಠ ಸಮೃದ್ಧಿಯತ್ತ ದಾಪುಗಾಲು ಹಾಕುವಂತಾಯಿತು. ಮೇಲ್ಜಾತಿಯ ಸ್ವಾಮೀಜಿಗಳಾದ ವಿಶ್ವೇಶತೀರ್ಥ, ಶಿವಕುಮಾರಸ್ವಾಮಿಗಳ ಸರಿಸಮಕ್ಕೆ ವೇದಿಕೆಯನ್ನಲಂಕರಿಸುವ ಮಟ್ಟಕ್ಕೆ ಬಾಲಗಂಗಾಧರನಾಥರು ಬೆಳೆದು ನಿಂತರು. ಇದನ್ನು ನೋಡಿದ ಮುಖ್ಯಮಂತ್ರಿ ದೇವೇಗೌಡರು ಇದೇ ಆದಿಚುಂಚನಗಿರಿ ಸ್ವಾಮೀಜಿಯನ್ನು ಪಕ್ಕಕ್ಕೆ ಸರಿಸಿ, ಕಂಗೇರಿಯಲ್ಲಿ ಮತ್ತೊಂದು ವಿಶ್ವಒಕ್ಕಲಿಗ ಮಠವನ್ನು ಸ್ಥಾಪಿಸಿ, ಚಂದ್ರಶೇಖರಸ್ವಾಮಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದ್ದೂ ಆಯಿತು.

ಆದರೂ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಭಾವವೇನೂ ಕಡಿಮೆಯಾಗಲಿಲ್ಲ. ಅಷ್ಟೇ ಅಲ್ಲ, ಅವಕಾಶವಾದಿ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಭಟ್ಟಂಗಿ ದಲ್ಲಾಳಿಗಳು, ಹುಸಿ ಹೋರಾಟಗಾರರು, ಅಸಾಹಿತಿಗಳು, ಅಡ್ಡದಾರಿಯಲ್ಲಿ ಅತಿಶ್ರೀಮಂತರಾದ ರಿಯಲ್ ಎಸ್ಟೇಟ್ ಕುಳಗಳು ಬಾಲಗಂಗಾಧರನಾಥ ಸ್ವಾಮೀಜಿಗಳ ಕೃಪಾಶೀರ್ವಾದಕ್ಕಾಗಿ ಕಾತರಿಸತೊಡಗಿದರು. ಅವರಿಗೆ ಇವರು, ಇವರಿಗೆ ಅವರು ಪರಸ್ಪರ ನೆರವಾಗಿ ಇಬ್ಬರೂ ಅಭಿವೃದ್ಧಿ ಹೊಂದಿದರು. vokkaliga-meet-hinduತದನಂತರ ಇದು ಇದೇ ರೀತಿಯ ಎಲ್ಲ ಜಾತಿಯ ಜನಗಳಿಗೂ ವಿಸ್ತರಣೆಯಾಯಿತು. ಸ್ವಾಮೀಜಿಯವರ ಸಾವಿನಿಂದ ತುಂಬಲಾರದ ನಷ್ಟ ಅಂತ ಏನಾದರೂ ಆಗಿದ್ದರೆ ಅದು ಈ ಕ್ರೀಮಿ ಲೇಯರ್‌ಗೆ.

ಆ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಯವರಿಗೆ ಮಾದರಿಯಾಗಿದ್ದು, ಕಣ್ಣೆದುರಿಗಿದ್ದದ್ದು ಸಮೃದ್ಧವಾಗಿ ಬೆಳೆದು ನಿಂತಿದ್ದ ಮೇಲ್ಜಾತಿಯ ಬ್ರಾಹ್ಮಣ ಮತ್ತು ಲಿಂಗಾಯತ ಮಠಗಳು. ಆ ಮಠಗಳು, ಸ್ವಾಮೀಜಿಗಳು ಏನು ಮಾಡುತ್ತಿದ್ದರೋ ಅದನ್ನೇ ಬಾಲಗಂಗಾಧರನಾಥರೂ ಮಾಡಿದರು, ಚುಂಚನಗಿರಿ ಕ್ಷೇತ್ರವನ್ನು ಒಕ್ಕಲಿಗರ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮವಾಗಿ ಎಲ್ಲ ರೀತಿಯಿಂದಲೂ ಹಿಂದುಳಿದಿದ್ದ ಕೆಳಜಾತಿಯ ಜನರಲ್ಲಿ ಅಸೂಯೆ ಹುಟ್ಟಿತು. ತಮ್ಮ ಜಾತಿಗೂ ಒಂದು ಮಠ, ಒಬ್ಬ ಸ್ವಾಮೀಜಿ ಬೇಕೆಂಬ ಬೇಡಿಕೆ ಬೇರುಬಿಡತೊಡಗಿತು. ಇದರ ಫಲವಾಗಿ ಇವತ್ತು ಒಂದೊಂದು ಜಾತಿಗೂ ಒಬ್ಬರಲ್ಲ ಹತ್ತಾರು ಸ್ವಾಮೀಜಿಗಳು, ಮಠಗಳು ಹುಟ್ಟಿಕೊಳ್ಳುವಂತಾಯಿತು. ಕರ್ನಾಟಕ ಕಾವಿಮಯವಾಯಿತು.

ಇದು ಸಾಲದು ಎಂಬಂತೆ, ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಬಜೆಟ್‌ನಲ್ಲಿ ಮಠಗಳಿಗೆ ಹಣ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿಯಾಡಿತು. ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪನವರು ಮಠಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿ ಹೊಸ ಇತಿಹಾಸವನ್ನೇ ಬರೆದರು. ಸಾರ್ವಜನಿಕರ ತೆರಿಗೆಯ ಹಣವನ್ನು ಹೀಗೆ ಅವರ ಅನುಕೂಲಕ್ಕೆ ಹಂಚಿದ್ದು ಮಹಾಪರಾಧ ಎಂದು ಮುಖ್ಯಮಂತ್ರಿಗಳಿಗೂ ಅನ್ನಿಸಲಿಲ್ಲ, ಪಡೆದ ಸ್ವಾಮೀಜಿಗಳಿಗೂ ಅನ್ನಿಸಲಿಲ್ಲ.

ಇವತ್ತು ಆದಿಚುಂಚನಗಿರಿ ಮಠ ಸಮೃದ್ಧವಾಗಿ ಬೆಳೆದು ನಿಂತಿರಬಹುದು, ಅತಿಶ್ರೀಮಂತ ಮಠಗಳಲ್ಲಿ ಒಂದಾಗಿರಬಹುದು. ಇದರ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರಾಮಾಣಿಕ ಶ್ರಮವಿರಬಹುದು. ಇದು ಒಕ್ಕಲಿಗ ಸಮುದಾಯದಲ್ಲಿ ಹೆಮ್ಮೆಯ ವಿಷಯವಾಗಿರಬಹುದು. ಮಠ ಮತ್ತು ಸ್ವಾಮೀಜಿಯಿಂದ ಕೆಲವರಿಗೆ ಅನುಕೂಲವಾಗಿರಬಹುದು. ಈ ಅನುಕೂಲ ಎನ್ನುವುದೇ ಇವತ್ತಿನ ಸಂದರ್ಭದಲ್ಲಿ ಬಹು ದೊಡ್ಡ ಕಾಣಿಕೆಯಾಗಿ ಕಾಣಬಹುದು. ಮಾಧ್ಯಮಗಳ ಹೊಗಳಿಕೆಗೆ ಪಾತ್ರವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲೂಬಹುದು. ಆ ಮೂಲಕ ಬಾಲಗಂಗಾಧರನಾಥ ಸ್ವಾಮೀಜಿಯವರ ಸೇವೆ, ಸಾಧನೆ, ಸಾರ್ಥಕ ಬದುಕು ಇನ್ನೊಂದಿಷ್ಟು ಸ್ವಾಮೀಜಿಗಳಿಗೆ ಮಾದರಿಯಾಗಲೂಬಹುದು.

ಆದರೆ ಅವರ ಸಾವಿನ ನಂತರ, ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮಠ ಮುಂದುವರೆಯುವುದೆ? ಜಾತಿರಾಜಕಾರಣದ ಶಕ್ತಿಕೇಂದ್ರವಾಗುಳಿಯುವುದೆ? ಇಲ್ಲ, ಎಲ್ಲ ಜಾತಿಯ ಜನರನ್ನು ಒಳಗೊಳ್ಳುವ ಅಪ್ಪಟ ಧಾರ್ಮಿಕ ಕ್ಷೇತ್ರವಾಗಲಿದೆಯೆ? ಜಾತಿ ಮತ್ತು ಮತಗಳನ್ನು ಮೀರಿ, ಪ್ರಜಾಪ್ರಭುತ್ವವಾದಕ್ಕೆ ಪೂರಕವಾಗಿ ಕೆಲಸ ಮಾಡಲಿದೆಯೇ?

ನವೀನ್ ಸೂರಿಂಜೆ ಮೇಲಿನ ಆರೋಪಗಳನ್ನು ಕೈಬಿಡಲು ಸರ್ಕಾರದ ನಿರ್ಧಾರ

ಸ್ನೇಹಿತರೆ,

ನಮ್ಮ ಹಲವು ಓದುಗರಿಗೆ ಮತ್ತು ವರ್ತಮಾನ.ಕಾಮ್‌ನ ಫೇಸ್‌ಬುಕ್ ವಲಯದವರಿಗೆ (http://www.facebook.com/vartamaana) ಈ ವಿಷಯ ನೆನ್ನೆಯೇ ಗೊತ್ತಾಗಿತ್ತು. ನೆನ್ನೆ (31/1/13) ನಡೆದ ರಾಜ್ಯ ಸಚಿವ-ಸಂಪುಟದ ಸಭೆಯಲ್ಲಿ ನವೀನ್ ಸೂರಿಂಜೆಯವರ ವಿರುದ್ಧ  ಹೂಡಲಾಗಿದ್ದ ಆರೋಪಗಳನ್ನು ಹಿಂದೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ರಾಜ್ಯದ ಪತ್ರಕರ್ತರು, ಲೇಖಕರು, ಪ್ರಗತಿಪರ ಹೋರಾಟಗಾರರು ಜನವರಿ 5 ರಿಂದ 7 ರವರೆಗೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದ ಎರಡನೇ ದಿನದ ಸಂಜೆ ಗೃಹಸಚಿವ ಆರ್.ಅಶೋಕ್ ಸ್ಥಳಕ್ಕೆ ಆಗಮಿಸಿ ನವೀನ್ ಸೂರಿಂಜೆಯವರ ಮೇಲಿನ ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದದ್ದು ನಿಮಗೆ ತಿಳಿದಿರುವಂತಹುದೆ. ಆದರೆ, ಈ ಪ್ರಕ್ರಿಯೆ ಸಂಪುಟದ ಮುಂದೆ ಬರಲು ಮೂರು-ನಾಲ್ಕು ವಾರಗಳ ಸುದೀರ್ಘ ಸಮಯವನ್ನೇ ತೆಗೆದುಕೊಂಡಿತು. naveen-soorinjeಹಲವು ಸಂದರ್ಭಗಳಲ್ಲಿ ಅದೃಷ್ಟವೂ (ಸಮಯ) ನಮ್ಮ ಕಡೆ ಇರಲಿಲ್ಲ.  ಮಧ್ಯೆಮಧ್ಯೆ ಬಂದ  ದೀರ್ಘ ರಜೆಗಳು, ಅಧಿಕಾರಶಾಹಿಯ ನಿಧಾನಗತಿ,  ಸಂಬಂಧಪಟ್ಟ ಅಧಿಕಾರಿಗಳು ರಜೆ ಮೇಲೆ ಹೋಗಿದ್ದು, ಹೀಗೇ ಏನೇನೊ ಆಗಿ ನಮ್ಮೆಲ್ಲರ ತಾಳ್ಮೆ ಮತ್ತು ಪ್ರಯತ್ನವನ್ನೇ ಪ್ರಶ್ನಿಸಿಕೊಳ್ಳುವಂತೆ ಆಗಿಬಿಟ್ಟಿತ್ತು. ಆದರೂ ಹತ್ತಾರು ಜನರ ಎಡಬಿಡದ ಪ್ರಯತ್ನಗಳಿಂದ ಸೂರಿಂಜೆ ಪ್ರಕರಣದ ಕಡತ ಎಲ್ಲಾ ಅಧಿಕಾರಶಾಹಿಯ ಹಂತಗಳನ್ನು ದಾಟಿ ನೆನ್ನೆ ಸಂಪುಟ-ಸಭೆಯ ಮುಂದೆ ಬಂದಿತು. ಸರ್ಕಾರದ ಹಲವು ಸಚಿವರ ಪ್ರಯತ್ನದ ಫಲವಾಗಿ ಪ್ರಕರಣ ಹಿಂದೆಗೆದುಕೊಳ್ಳಬೇಕೆಂಬ ತೀರ್ಮಾನವೂ ಆಯಿತು.

ಆದರೆ, ನವೀನ್ ಸೂರಿಂಜೆ ತಕ್ಷಣವೇ ಬಿಡುಗಡೆ ಆಗುವುದಿಲ್ಲ. ಕಾನೂನು ಪ್ರಕ್ರಿಯೆಗಳು ಮುಗಿಯಲು ಇನ್ನೂ ಒಂದು ವಾರ ಹಿಡಿಯಬಹುದು. ಬಹುಶಃ ಮುಂದಿನ ವಾರದಲ್ಲಿ ನವೀನ್ ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ.

ಈ ಇಷ್ಟೂ ದಿನಗಳಲ್ಲಿ ಹಲವಾರು ಜನ ನೇರವಾಗಿ ಕೆಲಸ ಮಾಡಿದ್ದರೆ, ಮತ್ತೂ ಹಲವರು ಪರೋಕ್ಷವಾಗಿ ಸಹಾಯಹಸ್ತ ಚಾಚಿದ್ದರು. ಈ ಒಂದು ತಿಂಗಳಿನಲ್ಲಿ ಸಂಬಂಧಪಟ್ಟವರು ಪರಸ್ಪರ ಕರೆ ಮಾಡಿರುವ ಮತ್ತು ಸಂದೇಶಗಳನ್ನು ಕಳುಹಿಸಿರುವ ಸಂಖ್ಯೆ ಲೆಕ್ಕವಿಲ್ಲದಷ್ಟು. ಮಾಡುವ ಕೆಲಸ ಇನ್ನೂ ಇದೆ. ಆದರೆ ಒಂದು ಪ್ರಮುಖ ಘಟ್ಟ ದಾಟಿಯಾಗಿದೆ.

ಮತ್ತೊಮ್ಮೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ  ಈ ತಾರ್ಕಿಕ ಹಂತ ಮುಟ್ಟಿಸಲು ನೆರವಾದ ಎಲ್ಲರಿಗೂ, ಶರಣು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಇದು ನೆನ್ನೆಯ ಸಚಿವ ಸಂಪುಟದ ತೀರ್ಮಾನದ ಬಗ್ಗೆ ಇಂದು ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

ವಿಜಯ ಕರ್ನಾಟಕ:
vijaykarnataka_020113

ಪ್ರಜಾವಾಣಿ:
prajavani_020113

The Hindu:
hindu_010213