Daily Archives: February 7, 2013

ಪಂಪ ಪ್ರಶಸ್ತಿಯ ಪಾಡು

– ಡಾ. ಎನ್. ಜಗದೀಶ್ ಕೊಪ್ಪ

ಇದು ಈ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಡಿದ ಗರವೋ, ಆವರಿಸಿಕೊಂಡ ವಿಸ್ಮೃತಿಯೋ ಯಾವುದನ್ನೂ ನಿರ್ದಿಷ್ಟವಾಗಿ ವಿವರಿಸಿ ಹೇಳಲಾಗದ ಅಸಹಾಯತೆ ನನ್ನದು.

ಕಳೆದ ಜನವರಿ ಕೊನೆಯ ವಾರ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮವನ್ನು ಸವಿದವರು ಇನ್ನೂ ಅದರ ನೆನಪಿನಲ್ಲಿ ಮುಳುಗೇಳುತ್ತಿದ್ದಾರೆ. ಇದರ ಜೊತೆಗೆ ಪಂಚನದಿಗಳ ನಾಡೆಂದು ಹೆಸರಿಗಷ್ಟೇ ಪ್ರಸಿದ್ಧಿಯಾಗಿರುವ ಬಿಜಾಪುರದಲ್ಲಿ ಇದೇ ಪೆಬ್ರವರಿ 8. 9 ಮತ್ತು 10 ರಂದು ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೆಳನವೆಂಬ ಜಾತ್ರೆಗೆ ಎಲ್ಲರೂ ಸಡಗರದಿಂದ ತಯಾರಾಗುತ್ತಿದ್ದಾರೆ. ಇಂತಹ ಹುಸಿ ಎನಿಸಬಹುದಾದ ಸಂಭ್ರಮಗಳ ನಡುವೆ ನಮ್ಮ ಸರ್ಕಾರದ ಅವಿವೇಕತನ ಮತ್ತು ಮೂರ್ಖತನಗಳ ಬಗ್ಗೆ ಈವರೆಗೆ ಯಾವೊಬ್ಬ ಸಾಹಿತಿಯೂ, ಅಥವಾ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪರಸ್ಪರ ಬೆನ್ನು ಕೆರದುಕೊಂಡು, ಕೆರೆತವನ್ನು ಇನ್ನಿಲ್ಲದಂತೆ ನೀಗಿಸಿಕೊಂಡ ಉತ್ತೋಮೋತ್ತಮರು ಚಿಂತಿಸಲಿಲ್ಲ. ಸರ್ಕಾರ ಪಂಪ ಪ್ರಶಸ್ತಿ ಪ್ರದಾನ ಮಾಡುವ ಕುರಿತು ತಾಳಿರುವ ನಿರ್ಲಕ್ಷ್ಯ ಧೋರಣೆಯನ್ನು ಯಾರೂ ಚರ್ಚಿಸಲಿಲ್ಲ.

ಕರ್ನಾಟಕ ಸರ್ಕಾರವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಕಾಳಜಿ ಮೇಲಿನ ಕಾರಣದಿಂದ ಹುಟ್ಟು ಹಾಕಿದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಎಂಬ ಸಂಸ್ಥೆ ತಾನು ಮೂಲಭೂತವಾಗಿ ಮಾಡಬೇಕಾದ ಕರ್ತವ್ಯವನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ರಾಜರೋಷವಾಗಿ ಮಾಡುತ್ತಿದೆ. G.H.nayakaಕನ್ನಡದ ಹಿರಿಯ ವಿಮರ್ಶಕ ಹಾಗೂ ನೇರನುಡಿ ಮತ್ತು ಸಜ್ಜನಿಕೆಗೆ ಹೆಸರಾದ ಪ್ರೊ. ಜಿ.ಹೆಚ್. ನಾಯಕರಿಗೆ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ “ಪಂಪ ಪ್ರಶಸ್ತಿ”ಯನ್ನು ಆರು ತಿಂಗಳ ಹಿಂದೆಯೆ ಸರ್ಕಾರ ಘೋಷಿಸಿತು. ಆದರೆ ಈವರೆಗೆ ಪ್ರಶಸ್ತಿಯನ್ನು ವಿತರಿಸದೆ, ಆದಿಕವಿ ಪಂಪ ಮತ್ತು ನಾಡಿನ ಹಿರಿಯ ವಿಮರ್ಶಕರಿಗಿಬ್ಬರಿಗೂ ಒಟ್ಟಿಗೆ ಅಪಮಾನ ಮಾಡಲಾಗಿದೆ ಎಂಬ ತಾತ್ವಿಕ ಸಿಟ್ಟು ಯಾರೊಬ್ಬರಲ್ಲಿಯೂ ಈವರೆಗೆ ಗೋಚರಿಸದಿರುವುದು ಆಶ್ಚರ್ಯವಾಗಿದೆ. ಯಾವನೋ ಒಬ್ಬ ಸಿನಿಮಾ ನಟನ ದಾಂಪತ್ಯದ ಬಿರುಕನ್ನು ಕರ್ನಾಟಕದ ಅಳಿವು ಉಳಿವಿನ ಸಮಸ್ಯೆ ಎಂಬಂತೆ ಚರ್ಚೆಯ ನೆಪದಲ್ಲಿ ಚಚ್ಚಿ ಬಿಸಾಡುತ್ತಿರುವ ದೃಶ್ಯ ಮಾಧ್ಯಮಗಳು, ಸಾಹಿತ್ಯ ಸಮ್ಮೇಳನ ಎಂದರೆ ಅಲ್ಲಿ ಬಡಿಸಲಾಗುವ ಊಟದ ವಿವರ ಎಂದು ಭಾವಿಸಿರುವ ಮುದ್ರಣ ಮಾಧ್ಯಗಳಿಗೂ ಪಂಪ ಪ್ರಶಸ್ತಿಯ ಕುರಿತಂತೆ ಯಾವುದೇ ಅರಿವಿಲ್ಲ.

ಕಳೆದ ಮೂರು ತಿಂಗಳ ಹಿಂದೆಯೆ ಜಿ.ಹೆಚ್. ನಾಯಕರು ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರೊ. ಬರಗೂರು ರಾಮಚಂದ್ರಪ್ಪ ಸಹ ಸರ್ಕಾರದ ನಿಧಾನ ಗತಿಯ ಧೋರಣೆ ಬಗ್ಗೆ ಪತ್ರಿಕೆಗಳಲ್ಲಿ ಪ್ರತಿಕ್ರಿಯಿಸಿದ್ದರು. pampaಆದರೆ ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವ ಗುರಿ ಒಂದನ್ನು ಹೊರತು ಪಡಿಸಿ ಜಗತ್ತಿನ ಯಾವ ಗೊಡವೆಗಳು ನಮಗೆ ಬೇಡ ಎಂಬಂತಿರುವ ನಮ್ಮ ಜನಪ್ರತಿನಿಧಿಗಳಿಗೆ ಇಂತಹ ಮಾರ್ಮಿಕವಾದ ಮಾತುಗಳು ಹೇಗೆ ತಾನೆ ತಲುಪಲು ಸಾಧ್ಯ?

ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೆಶಕ ಸ್ಥಾನದಲ್ಲಿ ಕುಳಿತಿರುವ ಮನು ಬಳಿಗಾರ್ ಓರ್ವ ಅಧಿಕಾರಿಯಷ್ಟೇ ಅಲ್ಲ, ಜೊತೆಗೆ ಸ್ವತಃ ಒಬ್ಬ ಲೇಖಕ. ಅವರಿಗಾದರೂ ಸಾಹಿತ್ಯ ಲೋಕದ ಈ ಸೂಕ್ಷ್ಮತೆಯ ವ್ಯವಹಾರಗಳು ಅರ್ಥವಾಗಬಾರದೆ? ಇಲಾಖೆಯ ವತಿಯಿಂದ ಆರ್ಥಿಕ ನೆರವು ಪಡೆದ ಸಂಘಟನೆಗಳು ಏರ್ಪಡಿಸುವ ಸನ್ಮಾನ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳಿಗೆ ನಡುಬಗ್ಗಿಸಿ ಕೊರಳು ಒಡ್ಡುವುದೆ ಕಾಯಕ ಎಂದು ಈ ನಿರ್ದೆಶಕರು ಭಾವಿಸಿದಂತಿದೆ. ಅಧಿಕಾರಿಗಳು ಸಾಹಿತಿಯಾಗಿ, ಸಾಹಿತಿಗಳು ರಾಜಕಾರಣಿಗಳಾಗಿ ಪರಿವರ್ತನೆಯಾಗುತ್ತಿರುವ ಈ ಪರ್ವ ಕಾಲದಲ್ಲಿ ಕನ್ನಡ ಸಾಂಸ್ಕೃತಿಕ ಲೋಕದ ದುರಂತಗಳ ಬಗ್ಗೆ ಯಾರಲ್ಲಿ ಪ್ರಶ್ನಿಸುವುದು?

ಸರ್ಕಾರಕ್ಕೆ ಮತ್ತು ಸಂಸ್ಕೃತಿ ಇಲಾಖೆಗೆ ನನ್ನ ಪ್ರಶ್ನೆ ಇಷ್ಟೇ: “ನಿಮಗೆ ನಿಗದಿ ಪಡಿಸಿದ ದಿನಾಂಕದಂದು ಪ್ರಶಸ್ತಿ ವಿತರಣೆ ಮಾಡುವ ಯೋಗ್ಯತೆ ಮತ್ತು ಸಾಮರ್ಥ್ಯವಿಲ್ಲವೆಂದ ಮೇಲೆ ಪ್ರಶಸ್ತಿಯನ್ನು ಏಕೆ ಘೋಷಣೆ ಮಾಡುತ್ತೀರಿ?”

“ಪಂಪ ಪ್ರಶಸ್ತಿ” ಎನ್ನುವುದು ಆರು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ನೀಡುವ ವೃದ್ಧಾಪ್ಯ ವೇತನ ಅಥವಾ ವಿಧವಾ ವೇತನದಂತಹ ಮಾಸಾಶನಗಳಲ್ಲ. ಪಂಪ ಪ್ರಶಸ್ತಿಗೆ ಅದರದೇ ಘನತೆ, ಗೌರವ ಇದೆ. ನಿಮಗೆ ಘನತೆ, ಗೌರವಗಳು ಇಲ್ಲದಿದ್ದರೆ ಚಿಂತೆ ಇಲ್ಲ. (ಅವುಗಳು ಇವೆ ಎಂದು ನನಗನಿಸಿಲ್ಲ.) ಆದರೆ ಪ್ರಶಸ್ತಿಯನ್ನು ಅಪಮೌಲ್ಯಗೊಳಿಸಬೇಡಿ.