ಟಿ.ಆರ್.ಪಿ. ಎಂಬ ಭೂತ ರಾಷ್ಟ್ರಹಿತಕ್ಕೆ ಮಾರಕ

-ಆನಂದ ಪ್ರಸಾದ್

ಟಿವಿ ವಾಹಿನಿಗಳ ವೀಕ್ಷಕರು ಯಾವ ವಾಹಿನಿಗಳನ್ನು ಹಾಗೂ ಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂದು ಸಮೀಕ್ಷೆ ನಡೆಸಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿ.ಆರ್.ಪಿ.) ನಿರ್ಣಯಿಸುವ ಈಗಿನ ವಿಧಾನ ಜನಹಿತಕ್ಕೆ ಹಾಗೂ ರಾಷ್ಟ್ರಹಿತಕ್ಕೆ ಮಾರಕವಾಗಿದೆ. ಈಗಿನ ವಿಧಾನದಲ್ಲಿ ಆಯ್ದ ಕೆಲವು ನಗರಗಳ ಕೆಲವು ಮನೆಗಳಲ್ಲಿ ಪೀಪಲ್ ಮೀಟರ್ ಎಂಬ ಉಪಕರಣವನ್ನು ಅಳವಡಿಸಿ ಅದು ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ನಿರ್ಣಯಿಸಿ ವಾರಕ್ಕೊಮ್ಮೆ ಟಿ.ಆರ್.ಪಿ. ಪ್ರಕಟಿಸುತ್ತದೆ. ಇದು ಅತ್ಯಂತ ಅವೈಜ್ಞಾನಿಕ ವಿಧಾನವಾಗಿದ್ದು ಶೇಕಡಾ 60ರಷ್ಟಿರುವ ಗ್ರಾಮೀಣ ಜನರ ಟಿವಿ ವೀಕ್ಷಣೆಯ ಪ್ರವೃತ್ತಿಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿಯೇ ಅತ್ಯಂತ ಬೇಜವಾಬ್ದಾರಿಯುತ, ಕ್ಷುಲ್ಲಕ ಕಾರ್ಯಕ್ರಮಗಳು ಜಾಹೀರಾತುಗಳಿಗೋಸ್ಕರವಾಗಿಯೇ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುತ್ತವೆ. ಜನಹಿತ, ಮಾಧ್ಯಮ ಧರ್ಮ, ಪತ್ರಿಕಾಧರ್ಮವೆಂಬುದು ಟಿವಿ ವಾಹಿನಿಗಳ ಮಟ್ಟಿಗೆ ಗತಕಾಲದ ಅಪ್ರಸ್ತುತ ವಿಷಯವಾಗಿದೆ. ಜಾಹೀರಾತುಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿರುವ ಟಿವಿ ವಾಹಿನಿಗಳ ಈ ರೋಗಕ್ಕೆ ಮದ್ದೇ ಇಲ್ಲವೇ? ಪ್ರಸ್ತುತ ಇರುವ ಟಿ.ಆರ್.ಪಿ. ವಿಧಾನದಲ್ಲಿ ಈ ರೋಗಕ್ಕೆ ಮದ್ದು ಇಲ್ಲ.

ಟಿವಿ ವಾಹಿನಿಗಳನ್ನು ಜನಪರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಬದಲಾಯಿಸಬೇಕಾದರೆ ಟಿ.ಆರ್.ಪಿ. ನಿರ್ಣಯಿಸುವ ಈಗಿನ ವಿಧಾನವನ್ನು ಸಂಪೂರ್ಣ ಬದಲಾಯಿಸಬೇಕಾದ ಅಗತ್ಯ ಇದೆ. ಇಂದು ಹಲವಾರು ವಾಹಿನಿಗಳು ಲಭ್ಯವಾಗುವ ಕೇಬಲ್ ಹಾಗೂ ಡಿಟಿಎಚ್ ಪ್ರಸಾರ ವ್ಯವಸ್ಥೆ tv-mediaಬಂದಿರುವ ಕಾರಣ ಜಾಹೀರಾತುಗಳನ್ನು ನೋಡಬೇಕಾದ ಅನಿವಾರ್ಯತೆ ವೀಕ್ಷಕರಿಗೆ ಇಲ್ಲ. ಜಾಹೀರಾತು ಬಂದ ಕೂಡಲೇ ಜಾಹೀರಾತು ಪ್ರಸಾರ ಆಗುತ್ತಿರದ ಬೇರೆ ವಾಹಿನಿಗಳಿಗೆ ವೀಕ್ಷಕರು ಬದಲಾಯಿಸುವುದು ಸಾಮಾನ್ಯ. ಇದನ್ನು ಮನಗಂಡ ಟಿವಿ ವಾಹಿನಿಗಳು ಒಂದೇ ಸಮಯದಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ತಂತ್ರ ಅನುಸರಿಸಿದರೂ ಬೇರೆ ಭಾಷೆಗಳ ವಾಹಿನಿಗಳಿಗೆ ಬದಲಾಯಿಸುವ ಪ್ರವೃತ್ತಿಯನ್ನೂ ವೀಕ್ಷಕರು ಬೆಳೆಸಿಕೊಂಡಿದ್ದಾರೆ. ಕೆಲವು ವೀಕ್ಷಕರು ಜಾಹೀರಾತು ಪ್ರಸಾರವಾಗುವ ಸಮಯದಲ್ಲಿ ಟಿವಿಯ ಬುಡದಲ್ಲಿ ಕೂರುವ ಬದಲು ಬೇರೆ ಕೆಲಸ ಇದ್ದರೆ ಅದನ್ನು ಮಾಡಲು ತೆರಳುತ್ತಾರೆ. ಜಾಹೀರಾತು ಮುಗಿದ ನಂತರ ಮತ್ತೆ ಟಿವಿ ನೋಡಲು ಬರುತ್ತಾರೆ. ವಾಹಿನಿ ಬದಲಾಯಿಸದವರು ಅಥವಾ ಬೇರೆ ಕೆಲಸಗಳಿಗೆ ಹೋಗದವರು ಜಾಹೀರಾತು ಬಂದ ಕೂಡಲೇ ಪರಸ್ಪರ ಹರಟೆ ಹೊಡೆಯಲು ತೊಡಗುತ್ತಾರೆ. ಹೀಗಾಗಿ ಜಾಹೀರಾತುಗಳನ್ನು ನೋಡುವವರು ಬಹಳ ಕಡಿಮೆ ಇರಬಹುದು. ಈ ಕಾರಣದಿಂದ ಟಿ.ಆರ್.ಪಿ. ಎಂಬ ವೀಕ್ಷಕರ ಟಿವಿ ವೀಕ್ಷಣೆಯ ಪ್ರವೃತ್ತಿಯ ಮಾನದಂಡವನ್ನು ನಿರ್ಣಯಿಸುವ ವಿಧಾನ ಅಪ್ರಸ್ತುತ ಹಾಗೂ ಅನವಶ್ಯಕ. ಈ ವಿಧಾನವನ್ನೇ ತೊಡೆದುಹಾಕಬೇಕಾದ ಅಗತ್ಯ ಇದೆ.

ಯಾವ ರೀತಿ ಪತ್ರಿಕೆಗಳ ಪ್ರಸರಣ ಸಂಖ್ಯೆಯನ್ನು ಆರು ತಿಂಗಳಿಗೊಮ್ಮೆ ಲೆಕ್ಕ ಹಾಕಿ ಅಂಕೆ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆಯೋ ಅದೇ ರೀತಿ ಟಿವಿ ವಾಹಿನಿಗಳ ವೀಕ್ಷಕರ ಅಂಕೆ ಸಂಖ್ಯೆಗಳನ್ನು ಮೂರು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವುದರಿಂದ ಟಿ.ಆರ್.ಪಿ.ಗಾಗಿ ಟಿವಿ ವಾಹಿನಿಗಳ ನಡುವೆ ನಡೆಯುವ ಅನಾರೋಗ್ಯಕರ ಪೈಪೋಟಿಯನ್ನು ಕಡಿಮೆ ಮಾಡಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶ ಹೀಗೆ ಎರಡೂ ಪ್ರದೇಶಗಳ ಜನತೆಯ ಟಿವಿ ವೀಕ್ಷಣೆಯ ಪ್ರವೃತ್ತಿಯ ಸಮೀಕ್ಷೆ ನಡೆಸಿ ಯಾವ ವಾಹಿನಿಯನ್ನು ಜನ ಸಾಮಾನ್ಯವಾಗಿ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಹೆಚ್ಚು ಜನ ಯಾವ ರೀತಿಯ ಕಾರ್ಯಕ್ರಮಗಳನ್ನು ನೋಡುತ್ತಾರೆ ನಿರ್ಧರಿಸಿ ಅದಕ್ಕನುಗುಣವಾಗಿ ಜಾಹೀರಾತುಗಳ ದರವನ್ನು ಹಾಗೂ ಅವುಗಳ ಹಂಚಿಕೆಯನ್ನು ಮಾಡುವುದರಿಂದ ತೀರಾ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಿ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರ ಸೂಕ್ತ ಸಂಸ್ಥೆಗಳನ್ನು ಗುರುತಿಸಿ ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕಾದ ಅಗತ್ಯ ಇದೆ.

ಇಂದು ನೂರಾರು ಖಾಸಗಿ ಟಿವಿ ವಾಹಿನಿಗಳು ಪ್ರಸಾರವಾಗುತ್ತಿದ್ದರೂ ಇವುಗಳು ಶೇಕಡಾ  60 ರಷ್ಟಿರುವ ಗ್ರಾಮೀಣ ಜನರ ಬದುಕಿನ ಬಗ್ಗೆಯಾಗಲೀ, ಕೃಷಿಯ ಬಗ್ಗೆಯಾಗಲೀ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಂಡುಬರುವುದಿಲ್ಲ. ಖಾಸಗಿ ಟಿವಿ ವಾಹಿನಿಗಳಲ್ಲಿ ಈ ಟಿವಿ ಕನ್ನಡ ಮಾತ್ರ ಬೆಳಗಿನ 6:30 ರಿಂದ 7 ರವರೆಗೆ ಕೃಷಿ ಸಂಬಂಧಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆಯಾದರೂ ಅದನ್ನು ನೋಡುವ ಕೃಷಿಕರು ಬಹಳ ಕಡಿಮೆ ಏಕೆಂದರೆ ಪ್ರಸಾರದ ಸಮಯ ಕೃಷಿಕರಿಗೆ ಅನುಕೂಲಕರವಾಗಿಲ್ಲ. ಆ ಹೊತ್ತಿಗೆ ಒಂದೋ ಅವರು ಎದ್ದಿರುವುದಿಲ್ಲ ಅಥವಾ ಎದ್ದಿರುವವರು ಕೃಷಿ/ಹೈನುಗಾರಿಕೆ ಸಂಬಂಧಿ ಕೆಲಸಗಳಲ್ಲಿ ತೊಡಗಿರುತ್ತಾರೆ.

ಟಿವಿ ವಾಹಿನಿಗಳು ದೇಶದಲ್ಲಿ ಜನಜಾಗೃತಿಯನ್ನು ರೂಪಿಸುವ ಅಗಾಧ ಸಾಮರ್ಥ್ಯ ಹೊಂದಿದ್ದರೂ ಟಿ.ಆರ್.ಪಿ. ಎಂಬ ಭೂತ ಅವುಗಳ ಕಾರ್ಯಕ್ರಮಗಳನ್ನು ನಿರ್ಧರಿಸುತ್ತಿರುವುದರಿಂದ ಅವುಗಳ ನೈಜ ಸಾಮರ್ಥ್ಯದ ಶೇಕಡಾ 5 ರಷ್ಟೂ ಜನಹಿತ ಸಾಧನೆ ಹಾಗೂ ದೇಶಹಿತ ಸಾಧನೆಗಾಗಿ ಬಳಕೆಯಾಗುತ್ತಿಲ್ಲ. ಇದನ್ನು ಬದಲಿಸಬೇಕಾದರೆ ಟಿ.ಆರ್.ಪಿ. ಎಂಬ ಭೂತವನ್ನು ನಿವಾರಿಸಬೇಕಾದ ಅಗತ್ಯ ಇದೆ.

Leave a Reply

Your email address will not be published.