ಆಮ್ ಆದ್ಮಿ ಪಾರ್ಟಿ ಮತ್ತು ರಾಜಕೀಯ


– ಚಿದಂಬರ ಬೈಕಂಪಾಡಿ


 

ಐದು ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶವನ್ನು ದೆಹಲಿ ಮೂಲಕ ಆಮ್ ಆದ್ಮಿ ಪಾರ್ಟಿ ರವಾನಿಸಿದೆ. ಇಂಥ ಫಲಿತಾಂಶವನ್ನು ಸ್ವತ: ಆಮ್ ಆದ್ಮಿ ಕೂಡಾ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಅಂಥ ಫಲಿತಾಂಶವನ್ನು ದಾಖಲಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಇದು ಸಾಧ್ಯವಾದದ್ದು ಹೇಗೆ ಎನ್ನುವ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ.

ಸಧ್ಯ ದೆಹಲಿಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಅಸ್ಪಷ್ಟವಾದರೂ ಕೂಲದೆಳೆ ಅಂತರದಲ್ಲಿ ಆಮ್ ಆದ್ಮಿ ಅಧಿಕಾರ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

ಆಮ್ ಆದ್ಮಿ ಜನಸಾಮಾನ್ಯರ ಶಕ್ತಿ ಕೇಂದ್ರವೆಂದು ಈಗ ಇಡೀ ದೇಶದ ಗಮನ ಸೆಳೆದಿದೆ. aam-admi-partyರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಗುರುತಿಸಿಕೊಳ್ಳುವುದು ಸಾಧ್ಯವಾಗಿರುವುದಕ್ಕೆ ದೆಹಲಿಯಲ್ಲಿ ಮೂರು ಅವಧಿಗೆ ಆಡಳಿತ ಮಾಡಿದ ಕಾಂಗ್ರೆಸ್ ಮತದಾರರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ಮನೋಭಾವ ಬೆಳೆಸಿಕೊಂಡದ್ದು. ಬಿಜೆಪಿಯನ್ನು ವಿರೋಧಿಸಿ ಎನ್ನುವ ಸಂದೇಶ ನೀಡುತ್ತಲೇ ಕಾಲ ಕಳೆದ ಕಾಂಗ್ರೆಸ್ ತನ್ನನ್ನು ಯಾಕೆ ಆಯ್ಕೆ ಮಾಡಬೇಕು ಎಂದು ಹೇಳುವುದನ್ನು ಮರೆತೇ ಬಿಟ್ಟಿತು.

ನಿರಂಕುಶ ಆಡಳಿತವನ್ನು ಸಹಿಸಿಕೊಳ್ಳುವುದಕ್ಕೂ ಮಿತಿ ಇರುತ್ತದೆ ಎನ್ನುವುದನ್ನು ಕಾಂಗ್ರೆಸ್ ಮರೆತು ತಪ್ಪೆಸಗಿತು. ಆ ತಪ್ಪನ್ನು ತನ್ನ ಅಸ್ತ್ರವಾಗಿಸಿಕೊಂಡದ್ದು ಆಮ್ ಆದ್ಮಿ. ಮತದಾರ ತನ್ನ ತೆಕ್ಕೆಯಲ್ಲೇ ಇರುತ್ತಾನೆ, ಅವನಿಗೆ ಬೇರೆ ಪಕ್ಷಗಳಿಲ್ಲ ಎನ್ನುವ ವೈಯಕ್ತಿಕ ತೀರ್ಮಾನಕ್ಕೆ ಬಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಅತ್ತ ಬಿಜೆಪಿ ಕೂಡಾ ಆಂತರಿಕ ಭಿನ್ನಮತದಿಂದ ನಲುಗಿ ಸುಧಾರಿಸಿಕೊಳ್ಳುವಷ್ಟರಲ್ಲಿ ಚುನಾವಣೆ ಕಾಲಿಟ್ಟಿತು. ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಮಾಡುವ ಸಿಂಗಲ್ ಪಾಯಿಂಟ್ ಘೋಷಣೆಯೊಂದಿಗೆ ಬಿಜೆಪಿ ಕಾಲಹರಣ ಮಾಡಿತು. ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಲು ಹೇಳಿದ ಬಿಜೆಪಿ ಆಮ್ ಆದ್ಮಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಮತ್ತು ಆನಂತರದ ಬೆಳವಣಿಗೆಗಳಲ್ಲಿ ಆಮ್ ಆದ್ಮಿಯ ಕೇಜ್ರಿವಾಲ್ ತಂಡ ಸಕ್ರಿಯವಾಗಿ ಗುರುತಿಸಿಕೊಂಡಿತು. ದೆಹಲಿ ಸುರಕ್ಷಿತ ನಗರವಲ್ಲ ಎನ್ನುವ ಭಾವನೆ ಯುವಕರಲ್ಲಿ ಮತ್ತು ಯುವತಿಯರಲ್ಲಿ ಅದರಲ್ಲೂ ಹೆಂಗಸರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಗ್ಯಾಂಗ್ ರೇಪ್ ನಂತರವೂ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಓರ್ವ ಹೆಣ್ಣಾಗಿ ಅಂತಹ ಭಯದ ವಾತಾವರಣವನ್ನು ನಿಗ್ರಹಿಸುವಂಥ ಕಾಳಜಿ ತೋರಲಿಲ್ಲ ಎನ್ನುವ ಅಪವಾದವನ್ನು ಹೊತ್ತುಕೊಳ್ಳಬೇಕಾಯಿತು. ಇದು ಕೇವಲ ಅಪವಾದವಾಗಿರದೇ ವಾಸ್ತವವಾಗಿತ್ತು.

ಜನಸಾಮಾನ್ಯರ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿತ್ತು, ಅದನ್ನು ಗುರುತಿಸಿ ತಮ್ಮ ಪಕ್ಷದ ಘೋಷಣೆಯನ್ನಾಗಿ arvind-kejriwal-campaigningಮಾಡಿಕೊಂಡವರು ಕೇಜ್ರಿವಾಲ್. ಮಧ್ಯಮ ಮತ್ತು ಕೆಳಸ್ಥರದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಕೇಜ್ರಿವಾಲ್ ಅವರ ಸಮಸ್ಯೆಗಳಿಗೆ ಧ್ವನಿಯಾದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದು ಮುಖ್ಯವೆನಿಸಲಿಲ್ಲವೋ ಆ ಸಂಗತಿಗಳೇ ಆಮ್ ಆದ್ಮಿಗೆ ಮುಖ್ಯವೆನಿಸಿದವು. ಐಟಿ, ಬಿಟಿ ಯುವಕ, ಯುವತಿಯರು ಆಮ್ ಆದ್ಮಿಯತ್ತ ಮುಖಮಾಡಲು ಕೇಜ್ರಿವಾಲ್ ಅವರ ಶ್ರಮವೂ ಕಾರಣ. ಹೈಫೈ ರಾಜಕಾರಣಕ್ಕಿಳಿಯದೇ ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವ ಸರಳ ಗುಣಕ್ಕೆ ದಿಲ್ಲಿಯ ಜನ ಮತ ಹಾಕಿದರು. ಕೈಯಲ್ಲಿದ್ದ ಅಧಿಕಾರವನ್ನು ಪೊರಕೆಗೆ ಕೊಡಬೇಕೆನ್ನುವ ತೀರ್ಮಾನವನ್ನೇನೂ ಅವರು ಮಾಡಿರಲಿಲ್ಲ, ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವ ನಂಬಿಕೆಯಲ್ಲೇ ಮತ ಹಾಕಿದರು. ಅದು ಈ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕಲ್ಪನೆ ಆಮ್ ಆದ್ಮಿ ಪಕ್ಷಕ್ಕೂ ಪೂರ್ಣವಾಗಿ ಹೊಳೆದಿರಲಿಲ್ಲ.

ಒಂದು ವೇಳೆ ಅಣ್ಣಾ ಹಜಾರೆ ಆಮ್ ಆದ್ಮಿಯಲ್ಲಿ ಸಕ್ರಿಯರಾಗಿದಿದ್ದರೆ ದಿಲ್ಲಿ ಗದ್ದುಗೆ ಅನಾಯಾಸವಾಗಿ ಆಮ್ ಆದ್ಮಿ ವಶಕ್ಕೆ ಬರುತ್ತಿತ್ತು ಅನ್ನಿಸುತ್ತಿದೆ ಈಗ. ಸ್ವತಃ ಅಣ್ಣಾ ಹಜಾರೆಗೂ ಅನ್ನಿಸಿರಬಹುದು. ಹಾಗೆಂದು ಇಂಥ ಬೆಳವಣಿಗೆ ಎಲ್ಲ ಕಾಲದಲ್ಲೂ ಘಟಿಸುವುದಿಲ್ಲ.

ಅಸ್ಸಾಂ ವಿದ್ಯಾರ್ಥಿಗಳು ಹುಟ್ಟು ಹಾಕಿದ್ದ ಅಸ್ಸಾಂ ಗಣಸಂಗ್ರಾಮ ಪರಿಷತ್ ಪ್ರಫುಲ್ಲ ಕುಮಾರ್ ಮೊಹಂತ ಅವರ ಸಾರಥ್ಯದಲ್ಲಿ ಆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಇಂಥ ಸಾಧನೆ ಮಾಡಿದೆ.

ರಾಜಕೀಯದಲ್ಲಿ ಅಂತಿಮವಾಗಿ ಗೆಲ್ಲುವುದು ಅಧಿಕಾರವೇ. ಅಂಥ ಅಧಿಕಾರದ ಹಗ್ಗ ಹಿಡಿಯುವ ಸನಿಹಕ್ಕೆ ಬಂದಿರುವ ಆಮ್ ಆದ್ಮಿ ಇದೇ ಟ್ರೆಂಡ್ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡುವುದು ಈ ಕ್ಷಣಕ್ಕೆ ಸಾಧ್ಯವಿಲ್ಲ. ಒಂದು ಸಂಘಟನೆಗೆ ಸಂಘಟನೆಯ ಗುಣಗಳಿರುತ್ತವೆಯೇ ಹೊರತು ರಾಜಕೀಯ ಪಕ್ಷದ ಉಸಿರಿರುವುದಿಲ್ಲ. ಆಮ್ ಆದ್ಮಿಯೊಳಗೂ ರಾಜಕೀಯದ ಉಸಿರಿಲ್ಲ, ಕವಚ ಮಾತ್ರ ಇದೆ.

Leave a Reply

Your email address will not be published.