ಜಿ.ಎಸ್. ಶಿವರುದ್ರಪ್ಪನವರ “ಹೊಸ ಹುಟ್ಟು” ಕವಿತೆ

ಹೊಸ ಹುಟ್ಟು

– ಜಿ.ಎಸ್. ಶಿವರುದ್ರಪ್ಪ

“ಎತ್ತಿಕೋ ನನ್ನನ್ನುGSS
ಬಿಡು ಮೊದಲು ನಿನ್ನರಮನೆಯ ತಿಳಿಗೊಳದಲ್ಲಿ
ಆಮೇಲೆ ಹೊಳೆಯಲ್ಲಿ
ಮತ್ತೆ ನಾ ಬೆಳೆದ ಮೇಲೆ ಕಡಲಿಗೆ
ಏನು ಯಾಕೆ ಎಂದು ಸಂಶಯ ಬೇಡ
ಅರ್ಥವಾಗುತ್ತದೆ ಎಲ್ಲವೂ ಕೊನೆಗೆ.”

ಬೊಗಸೆಗೆ ಬಂದ ಪುಟ್ಟ ಮೀನನ್ನು
ದಿಟ್ಟಿಸಿದ ಮನು
ಅದು ಬಿಡುಗಣ್ಗಳಲ್ಲಿ ಬಿಂಬಿಸುತಿತ್ತು
ಬೆಳಗಿನ ಬಾನು
ಅರುಣೋದಯದ ಪ್ರಶಾಂತ ಮೌನದಲಿ
ಮರ್‍ಮರಿಸುತ್ತಾ ಹರಡಿತ್ತು ನದಿ
ತನ್ನ ಪಾಡಿಗೆ ತಾನು.

ಏನಾಶ್ಚರ್ಯ !
ಅರ್ಘ್ಯವೆನೆತ್ತಿದ ಕೈಗೆ ಮೀನು ಬರುವುದು ಏನು !
ವಿಚಿತ್ರವಾಗಿದೆ ಎಲ್ಲ
ನಂಬುವುದು ಒಳ್ಳೆಯದು ! ಅನುಮಾನ
ಒಳ್ಳೆಯದಲ್ಲ.

ಬೆಳೆಯಿತು ಮೀನು ದಿನದಿಂದ ದಿನಕ್ಕೆ
ಮೊದಲು ಅರಮನೆಯ ಉದ್ಯಾನದಲ್ಲಿರುವ
ಕೊಳದಲ್ಲಿ
ಆಮೇಲೆ ಹೊಳೆಯಲ್ಲಿ
ಮತ್ತೆ ಬ್ರಹ್ಮಾಂಡವಾಗಿ ಕಡಲಲ್ಲಿ
ಈಜಿತ್ತು ಅಲೆಗಳ ಸೀಳಿ
ಬಡಬಾಗ್ನಿಯುರಿಸುತ್ತ ತನ್ನ ಕಣ್ಣಲ್ಲಿ.

ನೋಡುತ್ತ ದಡದಲ್ಲಿ ನಿಂತ ಮನುವಿಗೆ
ಹೇಳಿತು ಮತ್ತೆ ;
“ಕೇಳು, ನಾನು ಹೇಳುವುದನ್ನು
ಸರಿಯಾಗಿ ಹೇಳು
ನೀನು ಈ ಯುಗದ ಮನು; ನಾಳಿನ ಜಗದ
ಭಾರವನು ಹೆಗಲಲ್ಲಿ ಹೊತ್ತವನು;
ಈ ಕಾಲ ಮುಗಿತಾಯಕ್ಕೆ ಬಂದಿದೆ
ಬದಲಾಗುವುದು ಅಗತ್ಯ
ಚಕ್ರ ತಿರುಗುವುದಕ್ಕೆ:

ಈಗ ಮೂಲಜಲ ಬಗ್ಗಡವಾಗಿ ಕೆಸರು
ಒಳಗೂ ಹೊರಗೂ: ಕೊಳೆತು ನಾರಿದೆ ತೀರ್ಥ
ದೇವಾಲಯದ ಮೂರ್ತಿಗಳು ಭಗ್ನ ; ತಕ್ಕಡಿ-
ಯೆಲ್ಲ ತಲೆಕೆಳಗು. ತಿನ್ನುವನ್ನದ ತುಂಬ
ಕಲ್ಲು; ಎಲ್ಲೆಂದರಲ್ಲಿ ಬೆಳೆದು ದಂಡಕಾರಣ್ಯ
ಹದ್ದು-ನರಿ-ತೋಳ ರಾಕ್ಷಸ ರಾಜ್ಯ.

ದಾರಿ ಒಂದೇ: ಇರುವೆಲ್ಲವನ್ನೂ ಕೊಚ್ಚಿ
ಮತ್ತೆ ಕಟ್ಟಬೇಕಾಗಿದೆ ಹೊಸ ಜಗತ್ತ,
ನೀನೋ ಅದಕ್ಕೆ ಬರಿ ನಿಮಿತ್ತ.
ಕಟ್ಟು ಹಡಗೊಂದನು, ಶೇಖರಿಸು ಒಂದು ಕಡೆ
ನಾಳೆ ಬಿತ್ತಲು ತಕ್ಕ ಬೀಜಗಳನ್ನು
ನೀನು, ನಿನ್ನ ಪರಿವಾರ, ಮತ್ತೆ ಒಂದಷ್ಟು
ಉತ್ತಮದ ತಳಿಯನ್ನು.
ಬರುತ್ತದೆ ನಾಳೆ ಜಲಪ್ರಳಯ; ಕೊಚ್ಚುತ್ತದೆ
ಇರುವುದೆಲ್ಲವನೂ ನಿಶ್ಯೇಷವಾಗಿ
ನಾ ಹಿಡಿದು ರಕ್ಷಿಸುತ್ತೇನೆ ನೀ ಕೂತ
ಹಡಗನು ಹೊಸ ಹುಟ್ಟಿಗಾಗಿ.”

“ನಾನೊಲ್ಲೆ”
ಕೈ ಮುಗಿದು ಹೇಳಿದನು ಮನು, “ನಾನೊಲ್ಲೆ
ಇರುವ ಈ ಎಲ್ಲವನೂ ನಿರ್ನಾಮಗೊಳಿಸಿ
ನಾಳಿನ ದಿವಸ ನಾನು ನನ್ನ ಪರಿವಾರ
ಉಳಿದು ಬದುಕುವ ಭಾಗ್ಯ ನನಗೆ ಬೇಡ
ನೀ ವರ್ಣಿಸಿದ ವಾಸ್ತವಂಶದ ಒಂದಂಶ
ನಾನೂ ಕೂಡ.
ಕೊಚ್ಚಲಿ ಬಿಡು ನನ್ನನ್ನೂ ಸೇರಿಸಿಕೊಂಡು
ಈ ಮಹಾ ಪ್ರವಾಹ
ನನಗಿಲ್ಲ ನಾನೊಬ್ಬನೇ ಬದುಕುವ ದಾಹ
ನಾಳೆ ಬೆಳೆದೀತು ಹೊಸ ಮಣ್ಣಿನಲ್ಲಿ ಬೇರೂರಿ
ನನ್ನಲ್ಲಿರುವ ಒಳಿತೇನಾದರೂ
ಕೊಂಬೆ-ರೆಂಬೆಗೆ ಪುಟಿದು ಹೊಸ ಹೂವು-ಚಿಗುರು.”

Leave a Reply

Your email address will not be published.