ಸಣ್ಣಕತೆ : ತಬ್ಬಲಿ


-ಚಿದಂಬರ ಬೈಕಂಪಾಡಿ


 

‘ತಂದೆ ಇನ್ನಿಲ್ಲ. ನಿನ್ನನ್ನು ನೋಡ್ಬೇಕು ಅಂತಿದ್ರು, ಹೊರಟಿದ್ದಾನೆ, ಬರ್ತಾ ಇದ್ದಾನೆ ಅಂದೆ. ಎಲ್ಲಿಗೆ ಬಂದ್ದಾನಂತೆ, ಇನ್ನೂ ಎಷ್ಟು ಹೊತ್ತಿಗೆ ಬರ್ತಾನೆ ಅಂತ ಕೇಳ್ತಿದ್ರು. ಸ್ವಲ್ಪ ಹೊತ್ತಲ್ಲಿ ಮೌನವಾದರು, ಬೇಗ ಹೊರಡು.’ ಹೀಗೆಂದು ತಂಗಿ ಹೇಳಿದಾಗ ರಾತ್ರಿ ಹನ್ನೊಂದು ಗಂಟೆ. ಜನ ತಣ್ಣಗೆ ನಿದ್ದೆ ಮಾಡುತ್ತಿದ್ದ ಹೊತ್ತಲ್ಲಿ ತಂದೆ ತಮ್ಮ ಪಯಣ ಮುಗಿಸಿ ಮತ್ತೆಂದೂ ಬಾರದ ಲೋಕಕ್ಕೆ ಹೊರಟುಹೋಗಿದ್ದರು.

ತಂದೆಯ ಸಾವು ಅನಿರೀಕ್ಷಿತವೇನಾಗಿರಲಿಲ್ಲ. ಆಸ್ಪತ್ರೆಗೆ ಸೇರಿಸಿರುವುದು ಗೊತ್ತಿತ್ತು. ಹಾಗೆಂದು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ನರಳಿದವರಲ್ಲ. ತುಸು ಮೈಗೆ ಹಿತವಿಲ್ಲದಿದ್ದರೂ ಆಸ್ಪತ್ರೆಗೆ ಹೋಗಿ ಬರುವ ಅಭ್ಯಾಸ. ವೈದ್ಯರು ನಾಡಿ ಮುಟ್ಟಿ ಹೇಳುತ್ತಿದ್ದ ಮಾತಿಗೆ ಮತ್ತೆ ಲವಲವಿಕೆಗೆ ಮರಳುತ್ತಿದ್ದರು. ಹಾಗೆಯೇ ಅಂದುಕೊಂಡಿದ್ದೆ. ಆದರೆ ನನ್ನ ಊಹೆ ಈ ಸಲ ಸುಳ್ಳಾಯಿತು.

ತಂದೆಯ ಸಾವಿನಿಂದ ಎಲ್ಲರಂತೆಯೇ ವಿಚಲಿತನಾದೆ. ಬೇರೆಯವರು ತಂದೆ ತೀರಿಕೊಂಡರು ಅಂದಾಗ ಅವರ ವಯಸ್ಸು ಕೇಳುತ್ತಿದ್ದೆ. ಇಳಿವಯಸ್ಸಿನವರಾಗಿದ್ದರೆ ಬೇಸರವಾಗುತ್ತಿರಲ್ಲಿಲ್ಲ. ಆದರೂ ತಂದೆ ಮತ್ತೆ ಎಂದೆಂದಿಗೂ ನೋಡಲು ಸಿಗುವುದಿಲ್ಲವಲ್ಲ ಎನ್ನುವ ನೋವು ಕಾಡತೊಡಗಿತು. ರಾತ್ರಿಯೆಲ್ಲ ನಿದ್ದೆ ಹತ್ತಲ್ಲಿಲ್ಲ. ಮಗ್ಗುಲು ಬದಲಿಸಿದರೂ ತಂದೆಯ ಕೃಶ ಶರೀರ ಕಣ್ಣಿಗೆ ಕಟ್ಟುತ್ತಿತ್ತು. ಅವರ ಮೊಂಡುತನ, ಛಲ, ಹಠಮಾರಿತನ, ಸಿಟ್ಟು ಸಿನಿಮಾದ ರೀಲುಗಳಂತೆ ಸುರುಳಿಬಿಚ್ಚಿಕೊಂಡು ಓಡುತ್ತಿದ್ದವು. ದೂರದ ಊರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದಿದ್ದಾಗ ಬೇಡ ಅಂದಿರಲಿಲ್ಲ. ತಾನು ಕೊನೆಯುಸಿರೆಳೆದರೆ ಮುಖ ನೋಡಲು ಬರಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಅವರನ್ನು ಕಾಡಿರಲಿಲ್ಲ. ಆದರೆ ಜನ್ಮಕೊಟ್ಟ ತಂದೆಯ ಮುಖವನ್ನು ಕೊನೆಯ ಬಾರಿ ನೋಡಲೇ ಬೇಕೆಂದು ಬೆಳ್ಳಂಬೆಳಗ್ಗೆ ಹೊರಟು ನಿಂತೆ. ಬಸ್‌ನಲ್ಲಿ ಹೊರಟರೆ ಸಂಜೆಯ ಹೊತ್ತಿಗೆ ಮನೆ ತಲಪುತ್ತೇನೆ. ಅಲ್ಲಿಯ ತನಕ ಹೆಣ ಇಟ್ಟುಕೊಂಡು ಕಾಯುವಂತೆ ಮಾಡುವುದು ಸರಿಯಲ್ಲವೆಂದು ಕಾರು ಮಾಡಿಕೊಂಡು ಹೊರಟೆ. ನನ್ನ ಮೌನಮುಖವನ್ನು ಕಾರಿನ ಚಾಲಕ ಗಮನಿಸದಿದ್ದರೂ ವೇಗವಾಗಿ ಓಡಿಸುತ್ತಿದ್ದ. ಅದರಿಂದ ನನಗೂ ಲಾಭವೇ ಅಂದುಕೊಂಡು ಸುಮ್ಮನಾದೆ.

ತಂದೆಯ ಬಗ್ಗೆ ನನಗೆ ಅಪಾರವಾದ ಪ್ರೀತಿ ಇರದಿದ್ದರೂ ಅವರ ಹಠಮಾರಿತನವನ್ನು ಪ್ರೀತಿಸಿದ್ದೆ. ತನ್ನ ತಂದೆಯೊಂದಿಗೆ ಚಿಕ್ಕಂದಿನಲ್ಲಿ ಜಗಳಮಾಡಿಕೊಂಡು ಪಾಲಿನ ಆಸ್ತಿಗೂ ಕೈಚಾಚದೆ ಮನೆಯಿಂದ ಹೊರಬಿದ್ದಿದ್ದುದನ್ನು ಆಗಾಗ ಹೇಳುತ್ತಿದ್ದರು. ಯಾರ ಮಾತನ್ನೂ ಕೇಳುವ ಮನಸ್ಥಿತಿ ಅವರದಾಗಿರಲಿಲ್ಲ. ತಾನು ಹೇಳಿದ್ದೇ ಆಗಬೇಕು ಎನ್ನುವ ಹಠವನ್ನು ಚೆನ್ನಾಗಿ ತಿಳಿದಿದ್ದೆ. ಅವರ ಹಠಮಾರಿತನದಿಂದಾಗಿ ಕಷ್ಟಗಳನ್ನು ಎದುರಿಸಿದರು. ಅವರ ಕಷ್ಟಗಳಿಗೆ ಹೆಗಲು ಕೊಟ್ಟವಳು ಅಮ್ಮ. ಗಂಡನ ಹಠಮಾರಿ ತನದಿಂದಾಗಿಯೇ ಕಷ್ಟಗಳಿಗೆ ಗುರಿಯಾಗುತ್ತಿದ್ದೇನೆ ಎನ್ನುವ ಅರಿವಿದ್ದರೂ ಏನೂ ಮಾಡಲಾಗದ ಸ್ಥಿತಿ ಆಕೆಯದು. ಸಿಡುಕಿನ ಪತಿಯೊಂದಿಗೆ ಆರುದಶಕಗಳ ಕಾಲ ಸಂಸಾರ ಮಾಡಿರುವ ಅಮ್ಮ ಅದೆಷ್ಟು ಗೋಳಾಡುತ್ತಿದ್ದಾಳೋ ಎನ್ನುವ ಚಿಂತೆ ಕಾಡಿತು. ಎಲ್ಲ ಹೆಂಡತಿಯರು ಗಂಡ ಇಹಲೋಕ ತ್ಯಜಿಸಿದಾಗ ಪಡುವ ಸಂಕಟವನ್ನು ಆಕೆಯೂ ಪಡುತ್ತಿದ್ದಾಳೆ ಬಿಡು ಅಂದಿತು ಮನಸು.

ತಮ್ಮ ಮಕ್ಕಳಿಗೆಂದು ಆಸ್ತಿಮಾಡಿಟ್ಟು ಕೊನೆಯುಸಿರೆಳೆಯುವ ತಂದೆಯಂತವರಲ್ಲ ನನ್ನ ತಂದೆ. ಓದಿಸಿ ಬೆಳೆಸಿದ್ದೇ ನನ್ನ ಕೊಡುಗೆ. ನನ್ನಿಂದ ಏನನ್ನೂ ಕೇಳಬೇಡಿ ಎನ್ನುತ್ತಿದ್ದರು. ಹಾಗೆಯೇ ಮಾಡಿದರೂ ಕೂಡಾ. ತಂಗಿಗೆ ವರನನ್ನು ಹುಡುಕಿದ ಮೇಲೆ ‘ನನ್ನ ಕೆಲಸ ಮುಗಿಯಿತು, ಇನ್ನೇನಿದ್ದರೂ ನೀನು, ನಿನ್ನ ಅಣ್ಣನ ಜವಾಬ್ದಾರಿ’ ಅಂದಿದ್ದರು. ಈ ಮಾತು ಕೇಳಿ ಸಿಟ್ಟು ನೆತ್ತಿಗೇರಿ ಕೆರಳಿದ್ದೆ. ಹಣ ಹೊಂದಿಸಿಕೊಂಡಿಲ್ಲವೆಂದಾದರೆ ಮದುವೆ ಮಾಡಲು ಹೊರಟದ್ದೇಕೆ? ಅಂತಲೂ ಕೇಳಿದ್ದೆ. ಆಗಲೂ ಅವರು ಹೇಳಿದ ಮಾತು ‘ನೀವು ಇರೋದು ಯಾಕೆ? ತಂಗಿಗೆ ಮದುವೆ ಮಾಡಿಸಲಾಗದ ಹೇಡಿಗಳೇ ನೀವು?’ ಕೇಳಿದ್ದರು.

ಈ ಲೋಕದಲ್ಲಿ ಇಂಥವರೂ ಇದ್ದಾರೆಯೇ?. ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ತಂದೆಯರನ್ನು ನೋಡಿದ್ದೆ. ಆದರೆ ವರನನ್ನು ಹುಡುಕಿದಾಕ್ಷಣವೇ ಜವಾಬ್ದಾರಿ ಮುಗಿಯೆತೆಂದು ಕೈ ಎತ್ತಿದಾಗ ಮಾನಸಿಕವಾಗಿ ತಂದೆಯ ಮೇಲೆ ಸಿಟ್ಟುಗೊಂಡಿದ್ದೆ. ತಂಗಿಯ ಮದುವೆ ಮುಗಿದ ಮೇಲೆ ಅವಳ ಬಾಣಂತನದ ಬಗ್ಗೆಯಾಗಲೀ, ತವರಿನಿಂದ ಆಕೆಯನ್ನು ಕಳುಹಿಸಿಕೊಡುವಾಗ ಮಾಡಬೇಕಾದ ಉಪಚಾರದ ಬಗ್ಗೆಯಾಗಲೀ ತಲೆಕೆಡಿಸಿಕೊಂಡವರೇ ಅಲ್ಲ. ಅದೇನಿದ್ದರೂ ನಿನ್ನದು, ನಿನ್ನ ಅಣ್ಣನ ಜವಾಬ್ದಾರಿಯೆಂದು ಹೇಳಿ ಸುಮ್ಮನಾಗಿದ್ದರು. ಅಣ್ಣಾ ಮದುವೆಯಾಗುವಾಗಲೂ ಹಣಕಾಸಿನ ನೆರವು ಕೊಟ್ಟವರೇ ಅಲ್ಲ. ಅಷ್ಟಕ್ಕೂ ಅವರು ಸಂಪಾದಿಸಿ ಉಳಿಸಿದ್ದರಲ್ಲವೇ ಆ ಚಿಂತೆ. ಇದ್ದಿದ್ದರೆ ಕೊಡುತ್ತಿದ್ದರು. ಆದರೆ ಇರದೇ ಇದ್ದಾಗ ಕೊಡುವುದಾದರೂ ಎಲ್ಲಿಂದ?

ಅಣ್ಣಾ ತನ್ನ ಮದುವೆಯ ಪ್ರಸ್ತಾಪ ಮಾಡಿದಾಗ ‘ನನ್ನನ್ನು ಹಣಕ್ಕೆ ಪೀಡಿಸಬೇಡ. ವರದಕ್ಷಿಣೆ ತೆಗೆದುಕೋ ಅಂತೇನೂ ಹೇಳುವುದಿಲ್ಲ. ನಿನಗೆ ತಾಕತ್ತಿದ್ದರೆ ಹಣ ಹೊಂದಿಸಿಕೊಂಡು ಮದುವೆಯಾಗು, ಇಲ್ಲವೇ ವರದಕ್ಷಿಣೆ ಎಷ್ಟು ಬೇಕು ತೆಗೆದುಕೋ’ ಅಂದಿದ್ದೆ. ಆಗ ತಂದೆ ನನಗೆ ಸಪೋರ್ಟ್ ಮಾಡಿದ್ದರು. ‘ನಿನ್ನ ಸಾಮರ್ಥ್ಯ ನೋಡಿಕೊಂಡು ಖರ್ಚು ಮಾಡು’ ಎಂದಷ್ಟೇ ಹೇಳಿ ಅಣ್ಣನ ಸಿಟ್ಟಿಗೂ ಕಾರಣರಾಗಿದ್ದರು. ಅಣ್ಣ ಮದುವೆಯಾದ. ತಂದೆಯಾಗಿ ಮದುವೆಯ ಸಂದರ್ಭದಲ್ಲಿ ಓಡಾಡಿಕೊಂಡು ಕೆಲಸ ಮಾಡಿದ್ದರು. ನನ್ನಿಂದ ಬಿಡಿಗಾಸೂ ಇಲ್ಲದೆ ಮದುವೆಯಾದೆ ಭೇಷ್ ಅಂದಿದ್ದರು.

ಹಾಗೆಂದು ಮಕ್ಕಳ ಮೇಲೆ ಅವರಿಗೆ ಅಪಾರ ಪ್ರೀತಿ. ಬಹಳ ದಿನಗಳ ಕಾಲ ನೋಡದಿದ್ದರೆ ಚಡಪಡಿಸುತ್ತಿದ್ದರು. ಕ್ಷಣ ನೋಡಿದ ಮೇಲೆ ಸುಮ್ಮನಾಗುತ್ತಿದ್ದರು. ಮಕ್ಕಳೊಂದಿಗೆ ಕುಳಿತು ಮಾತನಾಡುವ ತಂದೆಯಂದಿರನ್ನು ನೋಡಿದ್ದೇನೆ. ಆದರೆ ಇವರು ಮಾತ್ರ ಭಿನ್ನ. ದೂರದಿಂದ ಕರೆಸಿಕೊಂಡು ಒಂದೆರಡು ಶಬ್ಧ ಮಾತನಾಡಿ ಸುಮ್ಮನಾಗುತ್ತಿದ್ದರು. ಈ ವರ್ತನೆಯಿಂದ ಸಿಟ್ಟು ಬರುತ್ತಿತ್ತು. ನೂರಾರು ಕಿ.ಮೀ ನಿದ್ದೆಗೆಟ್ಟು ಪ್ರಯಾಣಿಸಿ ಹೋದರೇ ಒಂದೆರಡು ನಿಮಿಷ ಮಾತನಾಡಿ ಸುಮ್ಮನಾಗುತ್ತಾರಲ್ಲಾ, ಇದಕ್ಕೆ ಯಾಕೆ ಅಷ್ಟು ದೂರದಿಂದ ಖರ್ಚು ಮಾಡಿಕೊಂಡು ಬರಬೇಕು ಅನ್ನಿಸುತ್ತಿತ್ತು. ಅವರ ಸ್ವಭಾವವೇ ಹಾಗೆ, ಅವರು ಬದಲಾಗುವುದಿಲ್ಲ, ಬದಲಾಯಿಸುವುದು ಸಾಧ್ಯವೂ ಇಲ್ಲವೆಂದು ನಾನೂ ಸುಮ್ಮನಾಗುತ್ತಿದ್ದೆ.

ನನ್ನ ಬದುಕನ್ನು ಅವರು ನಿರ್ಧರಿಸಿದ ಕಾರಣ ಅವರ ಮೇಲೆ ಅಗಾಧವಾದ ಸಿಟ್ಟಿತ್ತು. ಎಸ್ಎಸ್ಎಲ್‌ಸಿ ಮುಗಿಸಿದಾಗ ಪಿಯುಸಿ ಮಾಡಿ, ಡಿಗ್ರಿ ಮಾಡಿ, ಸ್ನಾತಕೋತ್ತರ ಪದವಿ ಮಾಡಿ ಉಪನ್ಯಾಸಕನಾಗಬೇಕು ಎನ್ನುವ ಕನಸು ಕಂಡಿದ್ದೆ. ‘ನಿನ್ನನ್ನು ಕಾಲೇಜು ಓದಿಸಲು ನನ್ನನ್ನಿ ಹಣವಿಲ್ಲ. ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರಿಕೋ’ ಅಂದವರೇ ಅವರ ಹಠದಂತೆಯೇ ಡಿಪ್ಲೊಮಾಗೆ ಸೇರಿಸಿದರು. ಅಲ್ಲಿ ಪಾಸಾದ ಮೇಲೆ ನನ್ನ ಹಾದಿ ಹಿಡಿದೆ. ಡಿಪ್ಲೊಮಾ ಮಾಡಿದವನು ಬದುಕಲು ಆಯ್ಕೆ ಮಾಡಿಕೊಂಡದ್ದು ಪತ್ರಿಕೋದ್ಯಮವನ್ನು. ನನ್ನ ನಿರ್ಧಾರದಿಂದ ಅವರಿಗೆ ಬೇಸರವಾಗಿರಲಿಲ್ಲ. ‘ಏನಾದರೂ ಮಾಡಿಕೋ, ನಿನ್ನಿಷ್ಟ’ ಅಂದಿದ್ದರು. ಆದರೆ ಉಪನ್ಯಾಸಕನಾಗಬೇಕೆಂದುಕೊಂಡಿದ್ದ ಕನಸನ್ನು ಸಾಯಿಸಿದ ತಂದೆಯ ಮೇಲಿನ ಸಿಟ್ಟು ಮಾತ್ರ ಹಾಗೆಯೇ ಉಳಿಯಿತು. ಶಾಲೆಗೆ ಕಟ್ಟಲು ಫೀಸ್ ಕೇಳಿದರೆ, ಪುಸ್ತಕ ಕೊಳ್ಳಲು ಹಣ ಕೇಳಿದರೆ ಸಿಡುಕುತ್ತಲೇ ಕೊಡುತ್ತಿದ್ದರು. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ತಾವೇ ಖುದ್ದು ಹೋಗಿ ಫಲಿತಾಂಶ ನೋಡಿಕೊಂಡು ನಾನು ಹೇಳುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ನಾನು ಉತ್ತಮ ಅಂಕ ತೆಗೆದಾಗಲೆಲ್ಲಾ ನನಗಿಂತಲೂ ಖುಷಿಪಟ್ಟುಕೊಳ್ಳುತ್ತಿದ್ದರು. ಹಣಕೊಡಲು ಹಿಂದೆ ಮುಂದೆ ನೋಡುತ್ತಿದ್ದರೂ ಫಲಿತಾಂಶ ಬಂದಾಗ ಮಾತ್ರ ತಾವೇ ಓದಿ ಪರೀಕ್ಷೆ ಬರೆದಷ್ಟು ಸಂಭ್ರಮಪಡುತ್ತಿದ್ದರು. ಮಕ್ಕಳ ಯಶೋಗಾಥೆಯನ್ನು ಇತರರೊಂದಿಗೆ ಹಂಚಿಕೊಂಡು ಖುಷಿಪಡುತ್ತಿದ್ದರು.

ನಾನು ವಯಸ್ಸಿಗೆ ಬಂದಾಗ ‘ನೀನು ಯಾವಾಗ ಮದುವೆಯಾಗುತ್ತೀ’ ಎನ್ನುವ ಪ್ರಶ್ನೆಯನ್ನು ನೇರವಾಗಿ ಕೇಳುತ್ತಿದ್ದರು. ‘ನೀವು ಹಣಕೊಟ್ಟರೆ ಮದುವೆಯಾಗುತ್ತೇನೆ. ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುವುದಿಲ್ಲ’ ಅಂದಾಗ ‘ನಾನು ಹಣಕೊಟ್ಟರೆ ಮಾತ್ರ ಮದುವೆಯಾಗುತ್ತೀಯೋ, ಏನಾದರೂ ಮಾಡಿಕೋ’ ಎಂದು ಸುಮ್ಮನಾಗಿದ್ದರು.

ನಾನು ಮದುವೆಗೆ ಸಮ್ಮತಿಸಿದಾಗ ವರದಕ್ಷಿಣೆ ಬಗ್ಗೆ ಚಕಾರ ಎತ್ತಬಾರದು ಎನ್ನುವ ತಾಕೀತು ಮಾಡಿದ್ದೆ. ಆಗ ಅವರಿಂದ ಬಂದ ಪ್ರಶ್ನೆ ‘ಖರ್ಚಿಗೇನು ಮಾಡುತ್ತೀ’. ‘ಹಣಕೊಡುವವರು ನೀವಲ್ಲ ತಾನೇ, ಆ ಚಿಂತೆ ನಿಮಗೆ ಯಾಕೆ ಬೇಕು? ಸ್ವಂತ ಮಗಳ ಮದುವೆಗೇ ಒಂದು ರೂಪಾಯಿ ಕೊಡದವರು ನನಗೆ ಎಲ್ಲಿಂದ ಕೊಡುತ್ತೀರೀ?’. ನನ್ನ ಈ ಪ್ರಶ್ನೆ ಅವರನ್ನು ಕೆರಳಿಸಿತ್ತು. ‘ನಿನ್ನನ್ನು ಸಾಕಿ, ಬೆಳೆಸಿ, ಓದಿಸಿದ್ದು ಯಾರು?’ ಗುಡುಗಿದ್ದರು. ನನ್ನ ಮದುವೆ ಮುಗಿದ ಮೇಲೆ ‘ಇನ್ನು ನನ್ನ ಜವಾಬ್ದಾರಿ ಮುಗಿಯಿತು, ಇನ್ನು ನೀವು ಏನಾದರೂ ಮಾಡಿಕೊಳ್ಳಿ’ ಎಂದಿದ್ದರು. ಆಗಲೂ ಅವರ ಈ ಮಾತಿಗೆ ಸಿಟ್ಟಿನಿಂದ ಒದರಿದ್ದೆ.

‘ಇನ್ನೂ ಎಷ್ಟು ಹೊತ್ತಾಗುತ್ತೆ ಮನೆ ತಲುಪಲು?’ ತಂಗಿ ಫೋನ್ ಮಾಡಿ ಕೇಳಿದಾಗ ತಂದೆಯನ್ನು ನೋಡಲು ಇನ್ನೂ ಮೂರು ಗಂಟೆಯಾದರೂ ಪ್ರಯಾಣಿಸಬೇಕಿತ್ತು. ‘ತಡ ಮಾಡುವಂತಿಲ್ಲವೆಂದು ತಕರಾರು ಮಾಡಿದರೆ ಶವಸಂಸ್ಕಾರ ಮಾಡಿ. ನನ್ನನ್ನು ಕಾಯಬೇಡಿ’ ಅಂದೆ ನೋವಿನಿಂದ. ‘ರಾಹುಕಾಲ ಕಳೆದ ಮೇಲೆ 1.30ಕ್ಕೆ ಅಂತಿಮ ಸಂಸ್ಕಾರವಂತೆ, ಬೇಗ ಬಾ’ ಅಂದಳು. ಅವಳು ಹೇಳುವ ಸಮಯದೊಳಗೆ ತಲಪುವುದು ಖಾತ್ರಿಯಾಯಿತು. ಹಠಮಾರಿ ತಂದೆ ಮಗನ ಮುಖ ನೋಡಲೆಂದೇ ರಾಹುಕಾಲದ ಗೆರೆ ಹಾಕಿರಬೇಕು ಅನ್ನಿಸಿತು. ತನ್ನ ಮಗ ಕೊನೆಯ ಬಾರಿ ಮುಖ ನೋಡಲೆಂದು ಈ ಅವಕಾಶವನ್ನಾದರೂ ಮಾಡಿಕೊಟ್ಟನಲ್ಲಾ ಅಂದುಕೊಂಡೆ.

ಅಂದುಕೊಂಡಂತೆಯೇ ರಾಹುಕಾಲ ಮುಗಿಯುವ ಮೊದಲೇ ನಾನು ಮನೆ ತಲುಪಿದೆ. ನೆಂಟರಿಷ್ಟರು, ನೆರೆಕರೆಯವರು ಮನೆ ಮುಂದೆ ಜಮಾಯಿಸಿದ್ದರು. ಕಾರಿನಿಂದ ಇಳಿದಾಗ ಅಣ್ಣಾ ಬಿಕ್ಕಿ ಬಿಕ್ಕಿ ಅಳತೊಡಗಿದ. ಮೆಲ್ಲಗೆ ಅಂಗಳ ದಾಟಿದೆ. ತಂದೆ ಮಲಗಿದ್ದರು. ತಾಯಿ ಪಕ್ಕದಲ್ಲಿ ಕುಳಿತು ಅಳುತ್ತಿದ್ದರು. ಹಠ ಮಾರಿ, ಮಕ್ಕಳ ಮುಂದೆ ಮುಖದಲ್ಲಿ ನಗೆ ಮೂಡಿಸಲು ಹಿಂದೇಟು ಹಾಕುತ್ತಿದ್ದ ತಂದೆ ನಗುಮುಖದೊಂದಿಗೆ ಮಲಗಿದ್ದರು. ಇಂಥ ಸಂತೃಪ್ತ ಮುಖವನ್ನು ಕಂಡವನೇ ಅಲ್ಲದ ನನಗೆ ಅಳುವನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ, ಅತ್ತುಬಿಟ್ಟೆ ಮಗನಾಗಿ.

One thought on “ಸಣ್ಣಕತೆ : ತಬ್ಬಲಿ

  1. farooq ullal

    ಪ್ರಿಯರೆ,
    ಹಲವು ವರ್ಷಗಳ ಬಳಿಕ ಚಿದಂಬರರ ಕತೆ ಓದಿದೆ. ಅವರ “ತಂದೆ”ಯನ್ನು ನೋಡುತ್ತಾ ನೋಡುತ್ತಾ ಹೋದಂತೆ ನನ್ನ ಅಪ್ಪನ ನೆನಪೂ ಬಂತು! ನೇರಾನೇರ ಬದುಕನ್ನು ತೆರೆದಿಡುವ ಕಪ್ಪು -ಬಿಳುಪು ಪಾಕ ಮನತಣಿಸಿತು. …..

    Reply

Leave a Reply

Your email address will not be published. Required fields are marked *