ಕೃಷಿಕರ ಸರ್ಕಾರ ಬರಬೇಕು

-ಆನಂದ ಪ್ರಸಾದ್

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯ ಇಂದಿಗೂ ಕೃಷಿಕ ಸಮುದಾಯವೇ ಆಗಿದೆ. ಕೃಷಿಕರ ಹಾಗೂ ಕೃಷಿ ಕಾರ್ಮಿಕರೆಲ್ಲರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ 60ರ ಆಸುಪಾಸು ಇಂದಿಗೂ ಇದೆ. ಪರಿಸ್ಥಿತಿ ಹೀಗಿರುವಾಗ ಕೃಷಿಕ ಹಾಗೂ ಕೃಷಿ ಕಾರ್ಮಿಕರೆಲ್ಲರೂ ಒಂದು ಸಮುದಾಯವಾಗಿ ತಮ್ಮದೇ ಆದ ಒಂದು ಪಕ್ಷಕ್ಕೆ ವೋಟು ಹಾಕಿದರೆ ಕೃಷಿಕರ ಸರ್ಕಾರವೊಂದನ್ನು ತರಲು ಸಾಧ್ಯವಾಗಬೇಕಲ್ಲವೆ? ಇಂಥ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಜನಪರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಾಧ್ಯವಿದೆಯಲ್ಲವೇ? ಜನ ಜಾತಿ ಆಧಾರಿತವಾಗಿ ಓಟು ಹಾಕುವ ಬದಲು ಉದ್ಯೋಗಾಧಾರಿತವಾಗಿ ಓಟು ಹಾಕಿದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಕೃಷಿಕರಿಗೆ ಬೇಕಾದ ಕ್ರಾಂತಿಕಾರಕ ನೀತಿಗಳನ್ನು ಜಾರಿಗೆ ತರಬಹುದು. ಇಂಥ ಪರಿಕಲ್ಪನೆ ಏಕೆ ದೇಶದಲ್ಲಿ ಅಥವಾ ರಾಜ್ಯದಲ್ಲಿ ಮೂಡುವುದಿಲ್ಲ?

ದೇಶವು ಸ್ವಾತಂತ್ರ್ಯ ಪಡೆದು 65 ವರ್ಷಗಳು ಕಳೆದರೂ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಮತದಾನದ ಹಕ್ಕಿರುವಾಗ ದೇಶದ ಅತ್ಯಂತ ದೊಡ್ಡ ಸಮುದಾಯವಾದ ಕೃಷಿಕರ ಸರ್ಕಾರ ಒಮ್ಮೆಯೂ ಬರಲಿಲ್ಲ. ಒಮ್ಮೆ ಇಂಥ ಸರ್ಕಾರ ಬಂದಿದ್ದರೂ ದೇಶದಲ್ಲಿ ಮಹತ್ತರ ನೀತಿಗಳ ಮಾರ್ಪಾಡು ತರಲು ಸಾಧ್ಯವಾಗುತ್ತಿತ್ತು. ಭಾರತವು ನಿಜವಾದ ಪ್ರಜಾಪ್ರಭುತ್ವ ದೇಶ ಎಂದೆನಿಕೊಳ್ಳಬೇಕಾದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಕೃಷಿಕನೇ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕು. ಹೀಗಾಗಬೇಕಾದರೆ ಕೃಷಿಕರು ಎಚ್ಚೆತ್ತುಕೊಳ್ಳಬೇಕು, ತಮ್ಮ ಮತಾಧಿಕಾರವನ್ನು ಒಂದು ಸಮುದಾಯವಾಗಿ ಒಟ್ಟಿಗೆ ತಮ್ಮದೇ ಆದ ಒಂದು ಪಕ್ಷಕ್ಕೆ ಚಲಾಯಿಸುವ ಅಗತ್ಯವನ್ನು ಮನಗಾಣಬೇಕು. ಇದಕ್ಕಾಗಿ ದೇಶಾದ್ಯಂತ ಒಂದೇ ರೈತ ಸಂಘಟನೆ ಹಾಗೂ ಒಂದೇ ರೈತ ಪಕ್ಷ ಇರಬೇಕು. ಕೃಷಿಕರ ನಡುವೆ ಜಾತಿ, ಮೇಲು ಕೀಳು, ಬಡವ ಬಲ್ಲಿದ ಮೊದಲಾದ ಭೇದಭಾವ ಬರದಂತೆ ಎಚ್ಚರ ಮೂಡಬೇಕು.

ಕೃಷಿಕ ಹಾಗೂ ಕೃಷಿ ಕಾರ್ಮಿಕರು ಒಗ್ಗಟ್ಟಿನ ಸಂಘಟನೆ ರೂಪಿಸಿದರೆ ನಿಜವಾದ ಅರ್ಥದಲ್ಲಿ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಯಶಸ್ವಿಯಾಗಬಹುದು. ಈಗ ಕೃಷಿಕರು ಒಂದು ಸಮುದಾಯವಾಗಿ ಓಟು ಹಾಕುವುದನ್ನು ಕಲಿತಿಲ್ಲ. ಕೃಷಿಕರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಬೇರೆ ಬೇರೆ ರಾಜಕೀಯ ಪಕ್ಷಗಳ ರೈತ ಘಟಕಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹೀಗಾಗಿ ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾದರೂ ಅವರ ಮಾತಿಗೆ, ಅವರ ಬೇಡಿಕೆಗಳಿಗೆ, ಅವರ ಹಿತಾಸಕ್ತಿ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವ್ಯಂಗ್ಯ ಹಾಗೂ ನಮ್ಮ ನಾಗರೀಕತೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಬೃಹತ್ ಬಂಡವಾಳಗಾರರ ಲಾಭ ಹೆಚ್ಚಿಸುವ ರೀತಿ ರೂಪುಗೊಳ್ಳುತ್ತವೆಯೇ ಹೊರತು ಕೃಷಿಕರ ಉತ್ಪನ್ನಗಳಿಗೆ ಅವರ ಶ್ರಮಕ್ಕೆ ತಕ್ಕ ದರ ದೊರಕಿಸುವಂತೆ ರೂಪುಗೊಳ್ಳುವುದಿಲ್ಲ.

ಕೃಷಿಕರ ಬಳಿ ತಮ್ಮದೇ ಆದ ಮಾಧ್ಯಮಗಳಿಲ್ಲ, ತಮ್ಮದೇ ಆದ ಟಿವಿ ಚಾನೆಲ್ ಇಲ್ಲ. ಹೀಗಾಗಿ ಕೃಷಿಕರ ನಡುವೆ ಎಚ್ಚರ, ಜಾಗೃತಿ ತಿಳುವಳಿಕೆ ಮೂಡುತ್ತಿಲ್ಲ. ಇರುವ ಮಾಧ್ಯಮಗಳು, ಟಿವಿ ವಾಹಿನಿಗಳು ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾಗಿದ್ದರೂ ಕೃಷಿಕರಿಗೆ ಮೂರು ಕಾಸಿನ ಆದ್ಯತೆಯನ್ನೂ ನೀಡುತ್ತಿಲ್ಲ. ಇದನ್ನು ತಪ್ಪಿಸಬೇಕಾದರೆ ಕೃಷಿಕರು ದೇಶಾದ್ಯಂತ ಒಂದು ಘಟಕವಾಗಿ ಒಗ್ಗಟ್ಟಾಗಬೇಕು. ತಮ್ಮದೇ ಆದ ಒಂದು ಸಣ್ಣ ಕರಪತ್ರದಂಥ ಹೆಚ್ಚು ವೆಚ್ಚವಿಲ್ಲದ ಪತ್ರಿಕೆಯನ್ನು ತರಬೇಕು. ಅದನ್ನು ದೇಶದ ಎಲ್ಲ ಭಾಷೆಗಳಲ್ಲೂ ಪ್ರಕಟವಾಗುವಂತೆ ಮಾಡಿ ದೇಶದ ಪ್ರತಿ ಕೃಷಿಕನಿಗೂ ಅದು ತಲುಪುವಂತೆ ಮಾಡಬೇಕು. ದೇಶದ ಪ್ರತಿಯೊಬ್ಬ ಕೃಷಿಕನೂ ಅದಕ್ಕೆ ಚಂದಾದಾರನಾಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಕೃಷಿಕರ ನಡುವೆ ಒಗ್ಗಟ್ಟು, ಅರಿವು ಬೆಳೆದು ಅವರದೇ ಆದ ಒಂದು ಸರ್ಕಾರ ತರಲು ಸಾಧ್ಯವಿದೆ. ಹೀಗಾದರೆ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು, ಟಿವಿ ವಾಹಿನಿಗಳ ಹಾಗೂ ಜಾಹೀರಾತುಗಾರರ ಹಂಗಿಲ್ಲದೆ ಜಾಗೃತಿ ಮೂಡಿಸಲು ಸಾಧ್ಯ.

ಹೀಗಾಗಬೇಕಾದರೆ ದೇಶದ ಪ್ರತಿ ಕೃಷಿಕನೂ ಸದಸ್ಯನಾಗಿರುವ ಒಂದೇ ರೈತ ಸಂಘಟನೆ ರೂಪುಗೊಳ್ಳಬೇಕು. ಸಂಘಟನೆಯ ಮೂಲಕ ಸಂದೇಶಗಳು ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳ ಹಂಗಿಲ್ಲದೆ ಒಬ್ಬರಿಂದೊಬ್ಬರಿಗೆ ರವಾನೆಯಾಗಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳು ಇಲ್ಲದೆ ಇದ್ದ ಕಾಲದಲ್ಲಿ ನಾಯಕರ ಸಂದೇಶಗಳು ಹೀಗೆ ರವಾನೆಯಾಗುತ್ತಾ ಇದ್ದವು ಹಾಗೂ ಇಡೀ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಗಾಂಧೀಜಿಯವರ ‘ಹರಿಜನ’, ‘ಯಂಗ್ ಇಂಡಿಯಾ’ದಂಥ ಸಣ್ಣ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಂದೇಶಗಳು ಇಡೀ ದೇಶದಲ್ಲಿ ಜನರಿಂದ ಜನರಿಗೆ ದಾಟಿ ದೇಶವ್ಯಾಪಿಯಾಗಿ ಪ್ರಸಾರವಾಗುತ್ತಿದ್ದವು. ಇಂದಿನ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕಾದರೆ ಹಿಂದೆ ಯಶಸ್ವಿಯಾದ ಇಂಥದೇ ಸೂತ್ರಗಳನ್ನು ರೈತ ಸಂಘಟನೆಗಳು ದೇಶಾದ್ಯಂತ ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ.

ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಜನಸ್ನೇಹಿಯಾದ ಗಣಿಗಾರಿಕೆ ನೀತಿ ತಂದು ದೇಶದ ನೈಸರ್ಗಿಕ ಸಂಪತ್ತಿನ ಲೂಟಿ ತಡೆದು ಅದರ ಪ್ರಯೋಜನ ಎಲ್ಲರಿಗೂ ಲಭ್ಯವಾಗುವಂತೆ ನೀತಿ ರೂಪಿಸಬಹುದು. ಕೃಷಿಕರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ನಿಗದಿ ನೀತಿ ಜಾರಿಗೆ ತರಬಹುದು. ಬಂಡವಾಳಶಾಹಿ ಲಾಭಕೋರ ನೀತಿಯನ್ನು ಹತ್ತಿಕ್ಕಿ ಜನಪರ ನೀತಿಯನ್ನು ಜಾರಿಗೆ ತರಬಹುದು. ಉದಾಹರಣೆಗೆ ಇಂದು ಔಷಧ ಕಂಪನಿಗಳು ಕೆಲವು ಔಷಧಿಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುವ ನೀತಿ ಅನುಸರಿಸುತ್ತಿವೆ. ಕೃಷಿಕರ ಸರ್ಕಾರವೊಂದು ಬಂದರೆ ಇಂಥ ಅನ್ಯಾಯ ಹಾಗೂ ಅಧರ್ಮಗಳನ್ನು ತಡೆಯಲು ಸಾಧ್ಯವಿದೆ. ಇಂಥ ಬಂಡವಾಳಶಾಹಿ ಲಾಭಕೋರತನ, ಅಧರ್ಮ ಹಾಗೂ ಅನ್ಯಾಯಗಳು ಸರ್ಕಾರದ ಅಸಮರ್ಪಕ ನೀತಿಗಳ ಫಲವಾಗಿಯೇ ರೂಪುಗೊಂಡು ಬೆಳೆದಿವೆ. ಕೃಷಿಕರ ಸರ್ಕಾರ ಬಂದರೆ ವಿಷಕಾರಿ ಕೀಟನಾಶಕಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸಲು ಸಾಧ್ಯ. ಬಂಡವಾಳಗಾರರ ಹಿತ ಕಾಯುವ ಇಂದಿನ ಸರ್ಕಾರಗಳಿಂದ ಇಂಥ ದಿಟ್ಟ ನಿರ್ಧಾರ ರೂಪುಗೊಳ್ಳಲು ಸಾಧ್ಯವಿಲ್ಲ.

ದೇಶದಲ್ಲಿ ಹಲವಾರು ಜನಸ್ನೇಹಿ ಸುಧಾರಣೆಗಳು, ಕಾನೂನುಗಳು ಬರಬೇಕಾದ ಅಗತ್ಯವಿದ್ದು ಅವನ್ನು ಇಂದು ಅಧಿಕಾರದಲ್ಲಿರುವ ಅಥವಾ ಮುಂದೆ ಬರುವ ಬಂಡವಾಳಗಾರರ ಬೆಂಬಲದ ಯಾವುದೇ ಸರ್ಕಾರಗಳೂ ತರುವ ಸಂಭವ ಇಲ್ಲ. ಇಂಥವುಗಳನ್ನು ತರಬೇಕಾದರೆ ಕೃಷಿಕರ ಸರ್ಕಾರ ದೇಶದಲ್ಲಿ ರೂಪುಗೊಳ್ಳಬೇಕಾಗಿರುವುದು ಅಗತ್ಯ. ಇದೇ ರೀತಿ ವಿದೇಶಗಳಲ್ಲಿ ನಮ್ಮ ದೇಶದ್ರೋಹಿ ಭ್ರಷ್ಟ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಇಟ್ಟಿರುವ ಕಪ್ಪು ಹಣ ವಾಪಸು ತರುವ ಬಗ್ಗೆ ಹಾಗೂ ವಿದೇಶಗಳಿಗೆ ಕಪ್ಪು ಹಣದ ಹರಿವನ್ನು ನಿಯಂತ್ರಿಸುವ ಸೂಕ್ತ ಕಾನೂನು ತರುವುದು, ಚುನಾವಣಾ ಸುಧಾರಣೆಗಳನ್ನು ತರುವುದು, ನ್ಯಾಯಾಂಗಕ್ಕೆ ಸೂಕ್ತ ಸುಧಾರಣೆಗಳನ್ನು ತರುವುದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಸ್ವತಂತ್ರ ಲೋಕಪಾಲ್ ವ್ಯವಸ್ಥೆ ತರುವುದು, ನಿಷ್ಪಕ್ಷಪಾತ ತನಿಖೆ ನಡೆಸಲು ಸ್ವತಂತ್ರ ರಾಷ್ಟ್ರೀಯ ತನಿಖಾ ಸಂಸ್ಥೆಯ ಸ್ಥಾಪನೆ ಮೊದಲಾದ ಮಹತ್ವದ ಕೆಲಸಗಳನ್ನು ಮಾಡಲು ಜನಪರವಾದ ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅಗತ್ಯ ಇದೆ. ಈಗ ಅಸ್ತಿತ್ವದಲ್ಲಿರುವ ಭ್ರಷ್ಟ ರಾಜಕಾರಣಿಗಳ ಹಾಗೂ ಬಂಡವಾಳಗಾರರ, ಲೂಟಿಕೋರರ ಸರ್ಕಾರದಿಂದಾಗಲಿ ಅಥವಾ ಇನ್ನು ಮುಂದೆ ಬರುವ ಇಂಥದೇ ಇನ್ನೊಂದು ಪಕ್ಷದ ಸರ್ಕಾರದಿಂದಾಗಲೀ ಯಾವುದೇ ಸುಧಾರಣೆಗಳು ಸಾಧ್ಯವಾಗುವ ಸಂಭವ ಕಾಣುವುದಿಲ್ಲ.

 

 

3 comments

  1. ನಿಮ್ಮ ಆಶಯ ಒಳ್ಳೆಯದೇ,ಆದರೆ Practically ಅಸಾಧ್ಯವಾದದ್ದು.ಸದ್ಯ ರಾಜ್ಯದೊಳಗೆ ರೈತ ಸಂಘಟನೆಗಳು ಒಂದಾಗಿಲ್ಲ.ಇನ್ನು ರೈತ-ದಲಿತ ಚಳುವಳಿಯ ಇತಿಹಾಸ ನೋಡಿದರೆ ಜಾತಿ ಎಲ್ಲ ಬಿಟ್ಟು ಈ ಜನಗಳು ಒಂದಾಗುವುದು ಕನಸೇ ಸರಿ

  2. ಒಟ್ಟು ಆಶಯ ಒಳ್ಳೆದಿದೆ. ಆದರೆ ಈಗಿರುವ ರಾಜಕಾರಣಿಗಳು ಯಾರು ಕೃಷಿಕರಲ್ಲ ಹೇಳಿ ? ಎಲ್ಲಾ ಶಾಸಕರು, ಸಚಿವರುಗಳು ಎಕರೆಗಟ್ಟಲೆ ಕೃಷಿ ಭೂಮಿ ಹೊಂದಿದ್ದಾರೆ. ಅವರೆಲ್ಲಾ “ನಾವು ಕೂಡಾ ಕೃಷಿಕರು” ಎಂದರೆ ಕೃಷಿಕರ ಪಕ್ಷಕ್ಕೆ ಸೇರಿಸಿಕೊಳ್ಳದಿರೊದಕ್ಕೆ ಏನು ಕಾರಣ ಕೊಡಬಹುದು ? ಮತ್ತದೇ ಕೃಷಿಕ ರಾಜಕಾರಣಿಗಳಿಂದ ಕೃಷಿಕ ಪರವಾದ ನೀತಿ ನಿರೀಕ್ಷೆ ಸಾಧುವೇ ? ಸಾಧ್ಯವೇ ? ಎಲ್ಲಾ ಕೃಷಿ ಸಂಘಟನೆಗಳು ಒಟ್ಟಾಗಿ ಒಂದೇ ಕೃಷಿಕ ಸಂಘಟನೆ ಕಟ್ಟಬೇಕು ಎಂದರೆ ಮತ್ತೆ ಅದರ ನಾಯಕತ್ವ ವಹಿಸಿಕೊಳ್ಳುವುದು ನೂರಾರು ಎಕರೆ ಹೊಂದಿರುವ ಕೃಷಿಕ. ಅಥರ್ಾತ್ ಕೃಷಿ ಉಧ್ಯಮಿ. ಅವರೆಲ್ಲಾ ದೊಡ್ಡ ದೊಡ್ಡ ಹಿಡುವಳಿದಾರರ ಹಿತ ಕಾಯ್ತಾರೆಯೇ ಹೊರತು ಸಣ್ಣ ಹಿಡುವಳಿದಾರರ ಹಿತವನ್ನಲ್ಲ. ಕೃಷಿ ಕಾಮರ್ಿಕರ ಹಿತವನ್ನಂತೂ ಅಲ್ಲವೇ ಅಲ್ಲ. ನಮ್ಮ ರೈತ ಸಂಘದಂತೆ.

    1. ನಿಮ್ಮ ಅಭಿಪ್ರಾಯ ಸರಿಯಾದದ್ದೇ. ಪಕ್ಷ ರಾಜಕಾರಣಿಗಳು ಇಂದು ಎಕರೆಗಟ್ಟಲೆ ಕೃಷಿ ಜಮೀನು ಹೊಂದಿದ್ದಾರೆ ಎಂಬುದು ನಿಜ. ಇಂಥವರನ್ನು ಕೃಷಿಕರ ಪಕ್ಷ ಅಥವಾ ಸಂಘಟನೆಗಳಿಗೆ ಸೇರಿಸಲು ಸಾಧ್ಯವಾಗದಂತೆ ನಿಯಮಗಳನ್ನು ತರಬಹುದು. ಕೃಷಿ ಉದ್ಯಮಿಗಳನ್ನೂ ಸಂಘಟನೆಗಳಿಗೆ ಸೇರಿಸಲಾಗದಂತೆ ನಿಯಮಗಳನ್ನು ತರಬಹುದು. ಸಣ್ಣ ಕೃಷಿಕರು ಮತ್ತು ಮಧ್ಯಮ ಕೃಷಿಕರು ನೇತೃತ್ವ ವಹಿಸಿಕೊಳ್ಳುವ ಕಡ್ಡಾಯ ಸಂವಿಧಾನ ಅಥವಾ ನಿಯಮವನ್ನು ಸಂಘಟನೆ ಅಥವಾ ಪಕ್ಷಗಳಿಗೆ ತರಬೇಕು. ಕೃಷಿ ಕಾರ್ಮಿಕರ ಹಿತವನ್ನು ಕಾಯಲು ರೈತ ಸಂಘಗಳು ವಿಫಲವಾಗಿವೆ ಎಂಬುದು ನಿಜ. ಕೃಷಿಕರು ಒಂದು ಘಟಕವಾಗಿ ಓಟು ಮಾಡಿದರೆ ಅವರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ ೫೦ ದಾಟುವುದರಿಂದ ಬಹುಮತ ಪಡೆಯಲು ಸಾಧ್ಯ ಎಂಬ ಕಲ್ಪನೆಯನ್ನು ಸೂಚಿಸುವುದು ನನ್ನ ಉದ್ಧೇಶವಾಗಿತ್ತು. ಅದು ವಾಸ್ತವವಾಗಿ ಕಾರ್ಯಸಾಧ್ಯವಾಗಲಿಕ್ಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಅಂಥ ಅವಕಾಶ ಇದೆ, ಆದರೂ ಅದನ್ನು ಬಳಸಿಕೊಳ್ಳುವ ತಿಳುವಳಿಕೆ ನಮಗೆ ಇಲ್ಲ. ಜಾತಿ ಅಥವಾ ಧರ್ಮದ ಆಧಾರದಲ್ಲಿ ವೋಟು ಹಾಕುವ ಮೂರ್ಖತನ ನಾವೇ ಮಾಡುತ್ತಿದ್ದರೆ ದೇಶದಲ್ಲಿ ಬದಲಾವಣೆ ತರುವುದು ಎಂದಿಗೂ ಸಾಧ್ಯವಾಗಲಿಕ್ಕಿಲ್ಲ.

Leave a Reply

Your email address will not be published.