ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

[ಸ್ನೇಹಿತರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಹುಟ್ಟಿ, ಇಲ್ಲಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದು, ವಿಶ್ವಮಾನವನಾಗಿ ಬೆಳೆದ  ಜಿಮ್ ಕಾರ್ಬೆಟ್‌ ಎಂಬ ಅಸಾಮಾನ್ಯ ಮನುಷ್ಯನ ಕುರಿತು ಜಗದೀಶ್ ಕೊಪ್ಪರವರು ಕಳೆದ 29 ವಾರಗಳಿಂದ ನಮಗೆ ಬಹಳ ಆಪ್ತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುತ್ತ ಬಂದ ಲೇಖನ ಸರಣಿಯ ಕೊನೆಯ ಕಂತು ಇದು. ಕನ್ನಡದಲ್ಲಿ ಜಿಮ್ ಕಾರ್ಬೆಟ್ ಬಗ್ಗೆ ಇಷ್ಟು ವಿಷದವಾಗಿ  ಬರೆದಿರುವ ಇನ್ನೊಂದು ಕೃತಿ ಇಲ್ಲ. ಹಾಗಾಗಿಯೇ ಇದು ಸಹಜವಾಗಿ ವಿಶಿಷ್ಟವಾದದ್ದು. ಆದಷ್ಟು ಬೇಗ ಇದು ಪುಸ್ತಕವಾಗಿ “ವರ್ತಮಾನ.ಕಾಮ್” ಮತ್ತು ಕನ್ನಡದ ಅಂತರ್ಜಾಲದ ಹೊರಗಿರುವ ಕನ್ನಡ ಓದುಗರಿಗೂ ತಲುಪಲಿ ಎಂದು ಬಯಸುತ್ತೇನೆ. ಇದನ್ನು ವರ್ತಮಾನ.ಕಾಮ್‌ನಲ್ಲಿ ಸರಣಿ ರೂಪದಲ್ಲಿ ಬರೆದಿದ್ದಕ್ಕೆ ಮತ್ತು ವರ್ತಮಾನ.ಕಾಮ್‌ನ ಆರಂಭದ ದಿನಗಳಿಂದಲೂ ನಮ್ಮ ಜೊತೆಗಿದ್ದು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತ ಇರುವ ಶ್ರೀ ಕೊಪ್ಪರವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸಬಯಸುತ್ತೇನೆ. -ರವಿ ಕೃಷ್ಣಾರೆಡ್ಡಿ]

ಕೀನ್ಯಾದ ನೈರಿ ಪಟ್ಟಣದ ಸಮೀಪ ಪರ್ವತದ ತಪ್ಪಲಿನಲ್ಲಿ ಇದ್ದ ಔಟ್ ಸ್ಪಾನ್ ಹೆಸರಿನ ಹೊಟೇಲ್‌ನ ವಿಶೇಷ ಕಾಟೇಜ್‌ನಲ್ಲಿ ಉಳಿದುಕೊಂಡ ಬಳಿಕ, ಕಾರ್ಬೆಟ್ ಮತ್ತು ಸಹೋದರಿ ಮ್ಯಾಗಿಯ ಅಲೆದಾಟದ ಬದುಕಿಗೆ ಅಂತಿಮ ತೆರೆಬಿದ್ದಿತು. ಸುಂದರ ಹೂದೋಟ ಮತ್ತು ಹಿಮ ಪರ್ವತದ ಹಿನ್ನಲೆಯಿದ್ದ ಈ ಹೋಟೆಲ್ ಇಬ್ಬರ ಮನಸಿಗೆ ಹಿಡಿಸಿತು. ನೈನಿತಾಲ್ ಗಿರಿಧಾಮದ ವಾತಾವರಣವನ್ನು ಅವರು ಅಲ್ಲಿ ಕಂಡುಕೊಂಡರು.

ಭಾರತದಿಂದ ಕೀನ್ಯಾಕ್ಕೆ ಬಂದ ಮೇಲೆ ವೃದ್ಧಾಪ್ಯದ ವಯಸ್ಸಿನ ಕಾರಣದಿಂದ ಕಾರ್ಬೆಟ್ ಆರೋಗ್ಯದಲ್ಲಿ ಏರು ಪೇರು ಕಾಣತೊಡಗಿತು. ಮಲೇರಿಯಾ ರೋಗದಿಂದ ಚೇತರಿಸಿಕೊಂಡ ನಂತರವೂ ಕಾರ್ಬೆಟ್‌ನ ಎದೆಯಲ್ಲಿ ಕಫ ಕಟ್ಟಿಕೊಂಡು ತೊಂದರೆ ಕೊಡತೊಡಗಿತು. ಆತನ ನಡಿಗೆಯಲ್ಲಿ ಮೊದಲಿನ ವೇಗ ಇರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ. ಬೇಸರವಾದಾಗ ಅರಣ್ಯಕ್ಕೆ ಹೋಗಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದ. ಉಳಿದ ವೇಳೆ ಅಕ್ಕ ತಮ್ಮ ಇಬ್ಬರೂ ತಮ್ಮ ಕಾಟೇಜ್ ವರಾಂಡದಲ್ಲಿ ಕೂರುತ್ತಿದ್ದರು, ಇಲ್ಲವೇ ಸಣ್ಣ ವಾಕ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ  ಕಾರ್ಬೆಟ್ ಒಬ್ಬನೇ ಕೀನ್ಯಾದ ಉತ್ತರ ಭಾಗದಲ್ಲಿದ್ದ ಕಡಲತೀರಕ್ಕೆ ಹೋಗಿ ಅಲ್ಲಿ ಮಲಿಂಡಿ ಎಂಬ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡು ಮೀನು ಶಿಕಾರಿ ಮಾಡುತ್ತಿದ್ದ. ಇಷ್ಟೆಲ್ಲಾ ಹವ್ಯಾಸಗಳ ನಡುವೆ ಅವನಿಗೆ ಭಾರತದಲ್ಲಿದ್ದಂತೆ ಸಾಮಾಜಿಕ ಬದುಕನ್ನು ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ಕೊರತೆ ಸದಾ ಕಾರ್ಬೆಟ್‌ನನ್ನು ಕಾಡುತಿತ್ತು.

ಕೀನ್ಯಾದ ಅರಣ್ಯಕ್ಕೆ ಭೇಟಿ ನೀಡಲು ವಿಶ್ವಾದ್ಯಂತ ಪ್ರವಾಸಿಗರು ಬರುತ್ತಿದ್ದದನ್ನು ಗಮನಿಸಿದ ಜಿಮ್ ಕಾರ್ಬೆಟ್ ತನ್ನ ಗೆಳೆಯ ಇಬ್ಬೊಟ್‌ಸನ್  ಹಾಗೂ ಮತ್ತೊಬ್ಬ ಗೆಳೆಯನ ಜೊತೆಗೂಡಿ ಅರಣ್ಯ ಸಫಾರಿಗಾಗಿ ಪ್ರವಾಸಿ ಸಂಸ್ಥೆಯನ್ನು 1948 ರಲ್ಲಿ ಹುಟ್ಟು ಹಾಕಿದ. ಪ್ರವಾಸಿಗರು ನೇರವಾಗಿ ಅರಣ್ಯಕ್ಕೆ ನುಸುಳಿ ಅಲ್ಲಿನ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡುವುದರ ಜೊತೆಗೆ ಕೆಲವೊಮ್ಮೆ ತಾವೇ ಅಪಾಯದ ಸ್ಥಿತಿಗೆ ಸಿಲುಕಿಕೊಳ್ಳತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿದ ಪ್ರವಾಸಿ ಸಂಸ್ಥೆ “ಸಫಾರಿ ಲ್ಯಾಂಡ್” ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು. ಇದರಿಂದ ಬಂದ ಲಾಭದಿಂದ ಕಾರ್ಬೆಟ್ ಒಂದು ಐಷಾರಾಮಿ ಕಾರು ಖರೀದಿಸಿದ. ಅವನ ಓಡಾಟದ ಖರ್ಚಿಗೆ ತಾನು ಬರೆದಿದ್ದ ಕೃತಿಗಳಿಂದ ಆ ಕಾಲಕ್ಕೆ ಲಕ್ಷ ರೂಪಾಯಿಗೂ ಮೀರಿ ಬರುತ್ತಿದ್ದ ಲೇಖಕನ ಸಂಭಾವನೆ ಹಣವನ್ನು ವಿನಿಯೋಗಿಸುತ್ತಿದ್ದ.

1950 ರ ವೇಳೆಗೆ ಕೀನ್ಯಾದಲ್ಲೂ ಕೂಡ ಬ್ರಿಟಿಷರಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಹಿಂಸಾತ್ಮಕ ಹೋರಾಟಗಳು ಆರಂಭಗೊಂಡವು. ಕೀನ್ಯಾದಲ್ಲಿ ಇದ್ದ ಯುರೋಪಿಯನ್ನರ ಕೃಷಿ ತೋಟಗಳು, ಕಾಫಿ, ಚಹಾ ಎಸ್ಟೇಟ್‌ಗಳು ದಾಳಿಗೆ ತುತ್ತಾದವು. ಬ್ರಿಟಿಷರ ಬಳಿ ಕೆಲಸ ಮಾಡುತ್ತಿದ್ದ ಆಫ್ರಿಕನ್ನರು ಹಿಂಸೆಯ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಕಾರ್ಬೆಟ್ ಮತ್ತು ಮ್ಯಾಗಿ ಇವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಎರಡೂ ವೃದ್ಧ ಜೀವಗಳು ಸಾವಿನ ಭಯದಿಂದ ತತ್ತರಿಸಿ ಹೋದವು. ಕಿಕಿಯೂ ಎಂಬ ಬುಡಕಟ್ಟು ಜನಾಂಗ ಪ್ರಾರಂಭಿಸಿದ ಈ ಹೋರಾಟಕ್ಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಪ್ರೇರಣೆಯಾಗಿತ್ತು. ಕಾರ್ಬೆಟ್ ಮತ್ತು ಮ್ಯಾಗಿ ಇಬ್ಬರೂ ಸ್ವಲ್ಪ ಕಾಲ ಕೀನ್ಯಾ ತೊರೆದು ಇಂಗ್ಲೆಂಡ್‌ಗೆ ಬಂದು ವಾಸವಾಗಿದ್ದರು. ಭಾರತದಲ್ಲಿ ಪರಿಚಯವಾಗಿ ಇಂಗ್ಲೆಂಡ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವನ ಅನೇಕ ಅಧಿಕಾರಿ ಮಿತ್ರರು ನೆರವಾದರು.

1951 ರಿಂದ 1953ರ ನಡುವೆ ಕೀನ್ಯಾದಲ್ಲಿ ಹೋರಾಟ ತೀವ್ರವಾದಾಗಲೆಲ್ಲಾ ಇಂಗ್ಲೆಂಡ್‌ಗೆ ಬಂದು ಅಕ್ಕ ತಮ್ಮ ವಾಸಿಸುತ್ತಿದ್ದರು. ಈ ನಡುವೆ ಕಾರ್ಬೆಟ್‌ಗೆ ಭಾರತದ ನೆನಪು ಕಾಡತೊಡಗಿತು. ಅವನ ಸೇವಕರು, ಅವನ ಹಳ್ಳಿಯ ಜನ, ಕುಮಾವನ್ ಪ್ರಾಂತ್ಯದ ಘರ್ವಾಲ್ ಬುಡಕಟ್ಟು ಜನಾಂಗದ ಅನೇಕ ಹಳ್ಳಿಯ ರೈತರು ಅವನ ಸ್ಮೃತಿಯಲ್ಲಿ ಬರತೊಡಗಿದರು. ಇದರ ಪ್ರಭಾವದಿಂದ ಅವನು 1952 ರಲ್ಲಿ “ಮೈ ಇಂಡಿಯ” ಎಂಬ ಕೃತಿಯನ್ನು ಬರೆಯಲು ಸಾಧ್ಯವಾಯಿತು. ಇದನ್ನೂ ಕೂಡ ಆಕ್ಸಫರ್ಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿಯಲ್ಲಿ ಜಿಮ್ ಕಾರ್ಬೆಟ್ ಭಾರತದ ಬಗ್ಗೆ, ಇಲ್ಲಿನ ಜನರ ಔದಾರ್ಯದ ಬಗ್ಗೆ, ಶ್ರೀಮಂತ ಜಮೀನ್ದಾರರು, ಮತ್ತು ಹಣದ ಲೇವಾದೇವಿದಾರರ ಕೌರ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಹಳ್ಳಿಗಳ ಸಾಮಾನ್ಯ ಜನ ಕಾರ್ಬೆಟ್‌ನ ಈ ಕೃತಿಯಲ್ಲಿ ನಾಯಕರಂತೆ ವಿಜೃಂಭಿಸಿದ್ದಾರೆ. ಈ ಕೃತಿ ಕೂಡ ವಿಶ್ವ ಪ್ರಸಿದ್ಧಿ ಪಡೆಯಿತು. “ಮೈ ಇಂಡಿಯ” ಕೃತಿಯ ಮೂಲಕ  ಕಾರ್ಬೆಟ್, ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯರ ಬಗ್ಗೆ ಇದ್ದ ಕೆಟ್ಟ ಭಾವನೆಗಳನ್ನು ಹೋಗಲಾಡಿಸಿದ. ಅಷ್ಟೇ ಅಲ್ಲ, ಭಾರತದ ಬಹು ಸಂಸ್ಕೃತಿಯ ನಡುವೆ ಇಲ್ಲಿ ಮುಗ್ಧ ಜನ ಸರಳವಾಗಿ ಬದುಕುವ ಕಲೆಯನ್ನ, ಅವರ ಔದಾರ್ಯವನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಕಾರ್ಬೆಟ್ ಕಟ್ಟಿಕೊಟ್ಟಿರುವುದು ವಿಶೇಷ. ಇದು ಅವನ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಈ ಕೃತಿಯ ನಂತರ ಕಾರ್ಬೆಟ್ ನೈನಿತಾಲ್ ಮತ್ತು ಕಲಾದೊಂಗಿ, ಚೋಟಿಹಲ್ದಾನಿ ಹಳ್ಳಿಗಳಲ್ಲಿ ಕಳೆದ ತನ್ನ ಬಾಲ್ಯವನ್ನು ಮತ್ತು ಅರಣ್ಯ ಮತ್ತು ಪರಿಸರಕ್ಕೆ ತನಗೆ ಪ್ರೇರಣೆಯಾದ ಬಗೆಯನ್ನು ವಿವರಿಸುವ “ಜಂಗಲ್ ಲೋರ್” ಕೃತಿಯನ್ನು ಬರೆದ. ಕಾರ್ಬೆಟ್‌ನ ಕೃತಿಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಶಿಕಾರಿಯ ಅನುಭವಗಳನ್ನೆಲ್ಲ ದಾಖಲಿಸಿದ. ಇಂತಹ ಕೃತಿಗಳಲ್ಲಿ “ಟೆಂಪಲ್ ಟೈಗರ್” ಪ್ರಮುಖವಾದುದು.

ಜಿಮ್ ಕಾರ್ಬೆಟ್ ಬರೆದ ಕೊನೆಯ ಪುಸ್ತಕವೆಂದರೆ, “ಟ್ರೀ ಟಾಪ್” ಎನ್ನುವ ಪುಟ್ಟ ಕೃತಿ. ಈಗಿನ ಇಂಗ್ಲೆಂಡಿನ ಎಲಿಜಬತ್ ರಾಣಿ (ಕಳೆದ ಜೂನ್‌ನಲ್ಲಿ ಈ ರಾಣಿಯ ಪಟ್ಟಾಭಿಷೇಕದ 60 ನೇ ವರ್ಷದ ಆಚರಣೆಯನ್ನು ಇಂಗ್ಲೆಂಡ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು) ಈಕೆ ತನ್ನ 22 ನೇ ವಯಸ್ಸಿನಲ್ಲಿ ತನ್ನ ಪತಿ ರಾಜಕುಮಾರ ಪಿಲಿಪ್ ಜೊತೆ 1952ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದಾಗ ಒಂದು ರಾತ್ರಿ ಮರದ ಮೇಲೆ ನಿರ್ಮಿಸುವ ಮಚ್ಚಾನಿನ ಮೇಲೆ ಕುಳಿತು ವನ್ಯ ಮೃಗಗಳನ್ನು ವೀಕ್ಷಿಸಬೇಕು ಎಂದು ಅಪೇಕ್ಷೆಪಟ್ಟಳು. ಅವಳ ಆಸೆಯಂತೆ ಕೀನ್ಯಾದ ಅರಣ್ಯದ ನಡುವೆ ಮರಗಳ ಮೇಲೆ 50 ಅಡಿ ಉದ್ದ ಮತ್ತು 20 ಅಡಿ ಅಗಲದ ವಿಶಾಲವಾದ ವೇದಿಕೆ ನಿರ್ಮಿಸಿ, ರಾಣಿ ಮತ್ತು ಅವಳ ಪರಿವಾರದ ನಲವತ್ತು ಸದಸ್ಯರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಲಾಗಿತ್ತು. ರಾಣಿ ಕುಟುಂಬದ ಸುರಕ್ಷತೆ ಮತ್ತು ಉಸ್ತುವಾರಿಯನ್ನು ಕಾರ್ಬೆಟ್ ಹೊತ್ತಿದ್ದ. ಇಡೀ ರಾತ್ರಿ ರಾಣಿ ಕುಟುಂಬಕ್ಕೆ ಪ್ರಾಣಿಗಳ ಚಲನ ವಲನ, ಅವುಗಳ ಜೀವನ ವೈಖರಿ ಎಲ್ಲವನ್ನು ವಿವರಿಸಿದ. ನೀರಿನ ಹೊಂಡವಿದ್ದ ಸಮೀಪ ವೇದಿಕೆ ನಿರ್ಮಿಸಿದ್ದರಿಂದ ರಾತ್ರಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ನೋಡುವ ಅವಕಾಶ ರಾಣಿಗೆ ದೊರೆಯಿತು. ಇದು ಆಕೆಯ ಪಾಲಿಗೆ ಅತ್ಯಂತ ಸ್ಮರಣೀಯವಾದ ದಿನ. ಈ ಅನುಭವಗಳನ್ನು ಕುರಿತು. ಸುಮಾರು ನಲವತ್ತು ಪುಟಗಳಿರುವ ಕೃತಿ ಕಾರ್ಬೆಟ್ ಪಾಲಿಗೆ ಕೊನೆಯ ಕೃತಿಯಾಯಿತು.

1953ರ ವೇಳೆಗೆ ಸತತ ಅನಾರೋಗ್ಯದಿಂದ ಬಳಲಿದ ಕಾರ್ಬೆಟ್ ಕ್ಷಯ ರೋಗಕ್ಕೆ ಬಲಿಯಾಗಿ ನರಳತೊಡಗಿದ. ಅಂತಿಮವಾಗಿ 1955ರ ಏಪ್ರಿಲ್ 18 ರಂದು ಹೃದಯಾಘಾತಕ್ಕೆ ತುತ್ತಾಗಿ ಮರು ದಿನ 19ರಂದು ನೈರಿ ಆಸ್ಪತ್ರೆಯಲ್ಲಿ ತನ್ನ ಅಕ್ಕ ಮ್ಯಾಗಿಯ ತೊಡೆಯ ಮೇಲೆ ತಲೆ ಇಟ್ಟು ತನ್ನ 79 ವರ್ಷದ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದ. ಸಾಯುವ ಮುನ್ನ ಕಾರ್ಬೆಟ್ ತನ್ನ ಅಕ್ಕನಿಗೆ ಹೇಳಿದ ಕೊನೆಯ ಮಾತುಗಳಿವು: “ಧೈರ್ಯವಾಗಿರು, ಇತರರು ಸುಖದಿಂದ ಬಾಳುವೆ ಮಾಡಲು, ಜಗತ್ತು ಸದಾ ಸಂತೋಷದಿಂದ ಇರುವಂತೆ ನೋಡಿಕೊ.” ಯುರೋಪ್ ಮೂಲದ ಕುಟುಂಬದಿಂದ ಭಾರತದಲ್ಲಿ ಹುಟ್ಟಿ, ನಂತರ ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪಿದ ಕಾರ್ಬೆಟ್, ಒಂದರ್ಥದಲ್ಲಿ ಯುರೋಪ್, ಏಷ್ಯಾ, ಮತ್ತು ಆಫ್ರಿಕಾ ಖಂಡಗಳನ್ನು ತನ್ನ ಬದುಕಿನ ಮೂಲಕ ಬೆಸೆದು, ವಿಶ್ವಮಾನವನಾಗಿ, ಜಗತ್ತಿನಲ್ಲಿ ಚಿರಸ್ಥಾಯಿಯಾದ. ಜಿಮ್ ಕಾರ್ಬೆಟ್‌ನ ಶವವನ್ನು ನೃತಿ ಪಟ್ಟಣದ ಚರ್ಚ್‌ಗೆ ತಂದು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಕ್ರೈಸ್ತರ ರುಧ್ರಭೂಮಿಯಲ್ಲಿ ಹೂಳಲಾಯಿತು.

ಜಿಮ್ ಕಾರ್ಬೆಟ್‌ನ ಸಾವಿನ ಸುದ್ಧಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ, ಶ್ರದ್ಧಾಂಜಲಿಯ ಲೇಖನ ಬರೆದವು. ಟೈಮ್ಸ್ ನಿಯತಕಾಲಿಕೆ ತನ್ನ ಮೇ ತಿಂಗಳ ಸಂಚಿಕೆಯನ್ನು ಕಾರ್ಬೆಟ್‌ಗಾಗಿ ಮೀಸಲಿಟ್ಟು, ಅವನ ಒಡನಾಡಿಗಳಿಂದ ಲೇಖನಗಳನ್ನು ಬರೆಸಿ ಅವನನ್ನು ಹಾಡಿ ಹೊಗಳಿತು. ಕಾರ್ಬೆಟ್ ನಿಧನದ ನಂತರ ಅವನ ಆಸೆಯಂತೆ ಸಹೋದರಿ ಮ್ಯಾಗಿ ಭಾರತದ ಚೋಟಿ ಹಲ್ದಾನಿಯ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತಾ ಬಂದಳು. 1957ರಲ್ಲಿ ಆಕೆಯ ನಿಧನಾನಂತರ ಭಾರತ ಸರ್ಕಾರ, ಅಲ್ಲಿನ ಭೂಮಿ ಮತ್ತು ನಿವೇಶನವನ್ನು ಕಾರ್ಬೆಟ್‌ನ ಕೊನೆಯ ಆಸೆಯಂತೆ ರೈತರ ಹೆಸರಿಗೆ ವರ್ಗಾಯಿಸಿತು. ಅವನು ವಾಸವಾಗಿದ್ದ ಚೋಟಿ ಹಲ್ದಾನಿಯ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡಿ, ಹಳ್ಳಿಯ ಜನರ ಉಸ್ತುವಾರಿಗೆ ವಹಿಸಿತು. ಇದಲ್ಲದೆ, ಹಿಂದೊಮ್ಮೆ ಜಿಮ್ ಕಾರ್ಬೆಟ್ ಆಸಕ್ತಿ ವಹಿಸಿ ಅಭಯಾರಣ್ಯ ಮಾಡಿದ್ದ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ ಅಧಿಕೃತವಾಗಿ “ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್” ಎಂದು ಘೋಷಿಸಿ ಕಾರ್ಬೆಟ್‌ಗೆ ಗೌರವ ಸೂಚಿಸಿತು.

ಇಂದು ಕೂಡ ಕಲದೊಂಗಿ ಮತ್ತು ಚೋಟಹಲ್ದಾನಿ ಹಳ್ಳಿಗಳ ಜನರ ಪಾಲಿಗೆ ದಂತ ಕಥೆಯಾಗಿರುವ, ತಮ್ಮ ಬದುಕಿಗೆ ಭೂಮಿ ಮತ್ತು ಮನೆ ನಿರ್ಮಿಸಿಕೊಟ್ಟು ದೈವವಾಗಿರುವ ಕಾರ್ಬೆಟ್ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಈ ತಲೆಮಾರು ಕಾರ್ಬೆಟ್‌ನನ್ನು ನೋಡದಿದ್ದರೂ, ಬಾಯಿಂದ ಬಾಯಿಗೆ, ಎದೆಯಿಂದ ಎದೆಗೆ ಹರಿದು ಬಂದ ಅವನ ಗುಣವನ್ನು ಕಾಪಿಟ್ಟುಕೊಂಡು ಬಂದಿದೆ. ಹಾಗಾಗಿ ರಾಮನಗರ್, ಕಲದೊಂಗಿ, ಚೋಟಿ ಹಲ್ದಾನಿ ಹಳ್ಳಿಗಳಲ್ಲಿ, ಕಾರ್ಬೆಟ್ ಹೆಸರಿನ ಟೈಲರಿಂಗ್ ಶಾಪ್, ಸೇವಿಂಗ್ ಶಾಪ್, ಹೊಟೇಲ್, ಮೊಬೈಲ್ ಶಾಪ್ ಮತ್ತು ಬಡಾವಣೆಗಳನ್ನು ಕಾಣಬಹುದು. ಆದರೆ. ನೈನಿತಾಲ್ ಗಿರಿಧಾಮದಲ್ಲಿ ಜಿಮ್ ಕಾರ್ಬೆಟ್ ಹೆಸರು ಹೇಳಿದರೆ, ಹಾಗಂದರೇನು ಎಂದು ಪ್ರಶ್ನಿಸುವ ಜನರಿದ್ದಾರೆ. ಸ್ವತಃ ಕಾರ್ಬೆಟ್‌ನ ತಂದೆ ಕ್ರಿಸ್ಟೊಪರ್ ಹಾಗೂ ಕಾರ್ಬೆಟ್ ನಾಲ್ಕು ದಶಕಗಳ ಕಾಲ ಅಲ್ಲಿನ ಪುರಸಭೆಯ ಪ್ರತಿನಿಧಿಗಳಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರೂ ಕೂಡ ಈ ಕುರಿತು ಒಂದು ಸಣ್ಣ ದಾಖಲೆಯಿಲ್ಲ. ಇವತ್ತಿಗೂ ಉತ್ತರ ಭಾರತದ ಜನ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಆದರೆ, ನೈನಿತಾಲ್ ಜನಕ್ಕೆ ಈ ಬಗ್ಗೆ  ಇತಿಹಾಸದ ಪ್ರಜ್ಞೆಯೇ ಇಲ್ಲ. ಇದು ನಿಜಕ್ಕೂ ನೋವಿನ ಸಂಗತಿ.

(ಮುಗಿಯಿತು.)

1 thought on “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)

Leave a Reply

Your email address will not be published.