“ಮುಂಗಾರು” ಅಂದ್ರೆ ಇಷ್ಟೇ ಅಲ್ಲ… ಬೈಕಂಪಾಡಿಯವರ ಪ್ರತಿಕ್ರಿಯೆ


-ಚಿದಂಬರ ಬೈಕಂಪಾಡಿ


 

‘ಇದು ಮುಂಗಾರು’ ಪುಸ್ತಕದ ಕುರಿತು ಶಿವರಾಮ್ ಕೆಳಗೋಟೆಯವರು ಸುದೀರ್ಘವಾಗಿ ಮತ್ತು ಎಳೆ ಎಳೆಯಾಗಿ ಬರೆಯುತ್ತಾ ‘ಮುಂಗಾರು ಅಂದ್ರೆ ಇಷ್ಟೇನಾ?’ ಎನ್ನುವ ಶೀರ್ಷಿಕೆಯಲ್ಲಿ ಮತ್ತಷ್ಟು ಬರೆಯಲು ಕಾರಣರಾಗಿದ್ದಾರೆ, ಅವರಿಗೆ ವಂದನೆಗಳು.

ಮುಂಗಾರು ಅಂದ್ರೆ ಇಷ್ಟೇನೇ? ಎನ್ನುವ ತೀರ್ಮಾನವನ್ನು ಆ ಪತ್ರಿಕೆಯಲ್ಲಿ ಕೊನೆತನಕವೂ ದುಡಿದವನಾಗಿ ಕೊಡಲಾರೆ. ಯಾಕೆಂದರೆ ಮುಂಗಾರು ಪತ್ರಿಕೆ ಹುಟ್ಟು ಹಾಕಿದ ವಡ್ಡರ್ಸೆ ರಘುರಾಮ ಶೆಟ್ಟರನ್ನು, ಅವರ ಪತ್ರಿಕೋದ್ಯಮದ ಆಳವನ್ನು ಕೇವಲ ಐದಾರು ವರ್ಷದ ಅವರೊಂದಿಗಿನ ಒಡನಾಟವನ್ನು ಆಧಾರವಾಗಿಟ್ಟುಕೊಂಡು ತೀರ್ಮಾನ ಕೊಡುವುದು ನನ್ನಂಥ ಕಿರಿಯನಿಗೆ ಹೇಳಿಸಿದ್ದಲ್ಲ. ವಡ್ಡರ್ಸೆಯವರೇ ತಮ್ಮ ಪತ್ರಿಕೋದ್ಯಮದ ಪೂರ್ಣ ವರಸೆಯನ್ನು ಪ್ರಯೋಗಿಸಿರಲಿಲ್ಲ. ಅದಕ್ಕೆ ಕಾರಣ ಕರಾವಳಿ ಭಾಗದ ಓದುಗರ ವಿಶ್ವಾಸವನ್ನು ಸಂಪಾದಿಸುವ ಪ್ರಯೋಗವೇ ಪೂರ್ಣವಾಗಿರಲಿಲ್ಲ. ಮೊದಲ ಸಂಚಿಕೆಯ ಮುಖಪುಟದಲ್ಲಿ ವೈದಿಕರ ಕೈಯಿಂದ ತೀರ್ಥದ ಚೊಂಬು (ಚೆಂಬು) ಬೀಳುತ್ತಿರುವ ಕಾರ್ಟೂನ್ ವ್ಯಾಪಕ ಟೀಕೆಗೆ ಗುರಿಯಾಯಿತು. ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಸಂಪ್ರದಾಯವನ್ನು ವಿರೋಧಿಸಿ, ನಂಬಿಕೆಗೆ ಅಪಚಾರ ಮಾಡುವ ಮೊದಲ ಯತ್ನವನ್ನು ಪತ್ರಿಕೆ ಮಾಡುತ್ತಿದೆ ಎನ್ನುವ ಆಕ್ರೋಷ ಒಂದು ವರ್ಗದಿಂದ ವ್ಯಕ್ತವಾಯಿತು. ಪತ್ರಿಕೆಯನ್ನು ಮುದ್ರಿಸಿ ಓದುಗರ ಕೈಗೆ ಒಪ್ಪಿಸುವ ಮುನ್ನಾದಿನ ಹೋಮ, ಹವನ, ಆರಾಧನೆ ಮಾಡಬೇಕು ಎನ್ನುವ ಒತ್ತಡ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿದ್ದವರಿಂದಲೇ ಬಂದಾಗ ಶೆಟ್ಟರು ಸುತಾರಾಂ ಒಪ್ಪಲಿಲ್ಲ ಮತ್ತು ತಾವು ಅಂದುಕೊಂಡಂತೆಯೇ ತಮ್ಮ ನಂಬಿಕೆಗೆ ಅನುಗುಣವಾಗಿಯೇ ಮುದ್ರಣ ಕಾರ್ಯಕ್ಕೆ ಚಾಲನೆ ಕೊಟ್ಟು ಸಂಪ್ರದಾಯವನ್ನು ನಂಬಿಕೊಂಡು ಬಂದಿದ್ದ ನಿರ್ದೇಶಕರಲ್ಲೇ ಅಸಮಾಧಾನ ಹೊಗೆಯಾಡಲು ಕಾರಣವಾಯಿತು. ಮೊದಲ ಸಂಚಿಕೆಯಿಂದಲೇ ಓದುಗ ವಲಯದಿಂದ ವಿರೋಧದ ಧ್ವನಿ ಹೊರಹೊಮ್ಮಿದ್ದು ಮಾತ್ರವಲ್ಲಾ ನಂತರ ದಿನಗಳಲ್ಲಿ ತಪ್ಪು ಹುಡುಕುವುದಕ್ಕಾಗಿಯೇ ಪತ್ರಿಕೆಯನ್ನು ಓದುವವರ ಸಂಖ್ಯೆಯೂ ಬೆಳೆಯುತ್ತಿದ್ದರೆ ಬಹುಶಃ ಶೆಟ್ರು ಸೋಲುತ್ತಿರಲಿಲ್ಲ. ಓದುವವರಿಗೆ ಪತ್ರಿಕೆ ಮುಟ್ಟಿಸಲು ಮುಂದಾದ ಏಜೆಂಟರಿಗೆ ಕಡಿವಾಣ ಹಾಕುವ ಕೆಲಸ ನಡೆಯಿತು. ಆದ್ದರಿಂದ ವಡ್ಡರ್ಸೆಯವರು ಪತ್ರಿಕೋದ್ಯಮದ ಅಖಾಡಕ್ಕೆ ತಮ್ಮದೇ ಆದ ವರಸೆ, ಪಟ್ಟುಗಳೊಂದಿಗೆ ಇಳಿಯುತ್ತಿದ್ದಂತೆಯೇ ಅವರನ್ನು ಆವರಿಸಿಕೊಂಡ ಮತ್ತು ಇಂಥ ಅಗೋಚರ ವರಸೆಗಳನ್ನು ಕಲ್ಪನೆ ಮಾಡಿಕೊಳ್ಳದಿದ್ದ ಕಾರಣಕ್ಕೆ ವಡ್ಡರ್ಸೆಯವರು ಒಂದು ರೀತಿಯಲ್ಲಿ ಆರಂಭದಲ್ಲೇ ಹಿನ್ನಡೆಗೆ ಕಾರಣರಾದರು. ಆದರೂ, ಅವರು ಬರೆಯುತ್ತಿದ್ದ ಸಂಪಾದಕೀಯ, “ನಮ್ಮವರು” ಅಂಕಣಗಳು ಓದುಗರ ವರ್ಗವನ್ನು ನಿರ್ಮಿಸಿಕೊಂಡವು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ವಡ್ಡರ್ಸೆಯವರ ರಾಜಕೀಯ ನಿಲುವು, ಅವರ ವಿಚಾರಧಾರೆಗಳ ಬಗ್ಗೆ ಪುಸ್ತಕದಲ್ಲಿ ವಿವರಗಳಿಲ್ಲ ಎನ್ನುವ ಕೊರತೆಯನ್ನು ಶಿವರಾಮ್ ಎತ್ತಿದ್ದಾರೆ. ಇಂಥ ಮಾಹಿತಿಗಳನ್ನು ಸಹಜವಾಗಿಯೇ ಹೊಸ ಓದುಗರು ನಿರೀಕ್ಷೆ ಮಾಡುತ್ತಾರೆ. ವಡ್ಡರ್ಸೆಯವರ ಸೈದ್ಧಾಂತಿಕ ನಿಲುವು-ಒಲವುಗಳನ್ನು ವಿವರವಾಗಿ ಚರ್ಚೆ ಮಾಡಲು ನಾನು ಅಸಮರ್ಥ ಆ ಕಾಲಕ್ಕೆ, ಈಗಲೂ ಅದೇ ನಿಲುವು. ವಡ್ಡರ್ಸೆಯವರ ಲೋಹಿಯ, ಅಂಬೇಡ್ಕರ್, ಶೂದ್ರರ ಮೇಲೆ ಅವರಿಗಿದ್ದ ಕಾಳಜಿಯನ್ನೇ ಬಂಡವಾಳ ಮಾಡಿಕೊಂಡು ಅವರು ಪುಳಕವಾಗುವ ಹಾಗೆ ಮಾತನಾಡಿ ಕಾರ್ಯಸಾಧನೆ ಮಾಡಿಕೊಂಡವರ ನಡುವೆಯೂ ಶೆಟ್ಟರ ಕೋಪಕ್ಕೆ ಗುರಿಯಾಗಿ ಅವಮಾನ ಸಹಿಸಿಕೊಂಡು ಅವರ ವಿಶ್ವಾಸ ಸಂಪಾದಿಸಿದ ಹಿನ್ನೆಲೆಯನ್ನು ಅರ್ಥಮಾಡಿಕೊಂಡರೆ ಬಹುಶ: ಅವರು ಓದುಗರಿಗೂ ಅರ್ಥವಾಗುತ್ತಾರೆ ಎನ್ನುವ ಉದ್ದೇಶಕ್ಕೆ ನಾನೇ ಮಿತಿ ಹಾಕಿಕೊಂಡಿದ್ದೇನೆ ಹೊರತು ಅನ್ಯ ಕಾರಣಗಳಿಲ್ಲ.

ವಡ್ಡರ್ಸೆಯವರ ವೈಚಾರಿಕ ನಿಲುವುಗಳು ಆಳ ಅಧ್ಯಯನದ ಮೂಲಕವೇ ಬರಹದ ರೂಪ ಪಡೆಯಬೇಕಲ್ಲದೆ ಅವರೊಂದಿಗೆ ಕೆಲಸ ಮಾಡಿದಾಕ್ಷಣವೇ ಅವರ ವಿಚಾರಧಾರೆಗಳನ್ನು ಆವಾಹಿಸಿಕೊಂಡಿದ್ದೇನೆ ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟರೆ ನನಗೂ, ಅವರನ್ನು ಹೊಗಳಿಯೇ ಕಾಲ ಕಳೆದವರಿಗೂ ಯಾವ ವ್ಯತ್ಯಾಸವಿರುತ್ತದೆ? ಆದ್ದರಿಂದ ಓದುಗ ಬಯಸುವ ವಡ್ಡರ್ಸೆ ವಿಚಾರಧಾರೆಗಳನ್ನು ಅಂಥ ಶಕ್ತಿಶಾಲಿ ವಿಚಾರವಂತರೇ ಕೊಟ್ಟರೆ ಸರಿಯಾದ ನ್ಯಾಯ ಸಿಗುತ್ತದೆ ಎನ್ನುವುದು ನನ್ನ ತಿಳುವಳಿಕೆ.

ಬಹು ಮುಖ್ಯವಾಗಿ ‘ಇದು ಮುಂಗಾರು’ ಪುಸ್ತಕ ಒಂದು ಅನುಭವ ಕಥನವೇ ಹೊರತು ವೈಚಾರಿಕತೆಯ ಹೂರಣವಲ್ಲ. ಅಲ್ಲಿ ಪ್ರಸ್ತಾಪಿಸಿರುವ ಸಂಗತಿಗಳಿಗೆ ಬಹಳ ಮಿತಿಯಿದೆ. ಇದನ್ನು ಇತಿಹಾಸವೆಂದು ಅತ್ಯಂತ ನಿರೀಕ್ಷೆ ಇಟ್ಟುಕೊಂಡು ಓದಿದಾಗ ಭ್ರಮನಿರಸನವಾಗಬೇಕು ಎನ್ನುವುದು ನನ್ನ ಕಾಳಜಿಯಾಗಿರಲಿಲ್ಲ. ಎಲ್ಲೂ ನಾನು ಈ ಪುಸ್ತಕವೇ ವಡ್ಡರ್ಸೆಯವರ ಮುಂಗಾರುವಿನ ಪೂರ್ಣ ರೂಪ ಎನ್ನುವ ಪ್ರಸ್ತಾಪ ಮಾಡಿಲ್ಲ. ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು ಮಾತ್ರ ದಾಖಲಿಸಿದ್ದೇನೆ.

ವಡ್ಡರ್ಸೆಯವರು ವಿಧಾನ ಸೌಧಕ್ಕೆ ಬರುತ್ತಿದ್ದಾಗ ಸಿಗುತ್ತಿದ್ದ ಗೌರವ, ಬೀದರ್ ಸಾಹಿತ್ಯ ಸಮ್ಮೇಳನದಲ್ಲಿ ರೂಮಿನ ವ್ಯವಸ್ಥೆ ಮಾಡಲು ರಾಜ್ಯಸಭಾ ಸದಸ್ಯರು ಮುತುವರ್ಜಿ ವಹಿಸಿದ್ದು ಇತ್ಯಾದಿ ಸಾಮಾನ್ಯ ಸಂಗತಿಗಳು ಮುಂಗಾರುವಿನ ಚರಿತ್ರೆಯಾಗಿ ಬಿಡುವ ಅಪಾಯಗಳಿವೆ ಎನ್ನುವ ಆತಂಕವನ್ನು ಶಿವರಾಮ್ ವ್ಯಕ್ತಪಡಿಸಿದ್ದಾರೆ. ಇಂಥ ಅನೇಕ ಸಣ್ಣ ವಿಚಾರಗಳು ನನ್ನ ಪುಸ್ತಕದಲ್ಲಿ ಧಾರಾಳವಾಗಿ ಸ್ಥಾನ ಪಡೆದಿವೆ. ಆದರೆ ಇವುಗಳು ಮುಂಗಾರು ಪತ್ರಿಕೆಯ ಚರಿತ್ರೆಯಲ್ಲ. ಅವು ಚರಿತ್ರೆಯಾಗಬೇಕು ಎನ್ನುವ ಹಂಬಲದಿಂದ ದಾಖಲಿಸಿದವೂ ಅಲ್ಲ. ತಮ್ಮ ದೊಡ್ಡತನದ ನಡುವೆಯೂ ನನ್ನಂಥ ದಡ್ದನಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಕಾಳಜಿ ಹಾಗೂ ಅವರ ಮಾತಿಗೆ, ನಡೆಗೆ ಸಿಗುತ್ತಿದ್ದ ಗೌರವ ಈಗ ಎಷ್ಟು ಜನರಿಗೆ ಸಿಗುತ್ತಿದೆ? ಈಗ ಸಿಗುವ ಮನ್ನಣೆಯನ್ನು ಅವಲೋಕಿಸಿದರೆ ಹಿಂದೆ ಒಬ್ಬ ಸಂಪಾದಕ ಕಿರಿಯರ ಬಗ್ಗೆ ವಹಿಸುತ್ತಿದ್ದ ಕಾಳಜಿ, ಈಗಿನ ವಾಸ್ತವ ಸ್ಥಿತಿ ಅರಿವಾಗಲೆಂಬ ವೈಯಕ್ತಿಕ ಆಸಕ್ತಿಯಿಂದ ಮಾತ್ರ ಉಲ್ಲೇಖಿತವಾದವು, ಇದು ಮತ್ತೆ ನನ್ನ ಮಿತಿಯೂ ಹೌದು.

ಓದುಗರ ಒಡೆತನದ ಪತ್ರಿಕೆ, ಶೇರು ಸಂಗ್ರಹದ ಕುರಿತು ಮಾಹಿತಿ ಬೇಕಿತ್ತು ಎನ್ನುವ ಅಂಶದ ಕುರಿತು. ಕಂಪೆನಿಯ ಹೂಡಿಕೆಯ ವಿವರಗಳು ಪುಸ್ತಕದಲ್ಲಿಲ್ಲ, ಯಾಕೆಂದರೆ ನನ್ನ ಉದ್ದೇಶ ಓದುಗರ ಒಡೆತನದ ಪತ್ರಿಕೆಯ ಆರ್ಥಿಕ ಸಾಮರ್ಥ್ಯವನ್ನು ಚರ್ಚಿಸುವುದಾಗಿರಲಿಲ್ಲ. ಕೇವಲ ಸಿರಿವಂತರಿಂದ ಬಂಡವಾಳ ಹೂಡಿಕೆ ಮಾಡಿಸಿ ದೊಡ್ಡ ಮಟ್ಟದ ಪತ್ರಿಕೆ ತರುವ ಬದಲು ಒಂದು ಸಾವಿರ ಮುಖಬೆಲೆಯ ಒಂದು ಶೇರನ್ನು ಖರೀದಿಸಿದರೆ ಅವನೂ ಮಾಲೀಕನಾಗುತ್ತಾನೆ. ಕೇವಲ ಐದು ಹತ್ತು ಮಂದಿ ಶ್ರೀಮಂತ ಕುಳಗಳಿಂದ ಬಂಡವಾಳ ಹಾಕಿಸಿದರೆ ಆ ಪತ್ರಿಕೆ ಅವರ ಧ್ವನಿಯಾಗಿಬಿಡುವ ಅಪಾಯವಿದೆ ಎನ್ನುವ ಕಾರಣಕ್ಕೆ ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ಕಟ್ಟಲು ಶೆಟ್ಟರು ಮುಂದಾಗಿದ್ದರು. ಪತ್ರಿಕೆಯ ಹಿಡಿತ ಶೇರುದಾರರ ಕೈಯಲ್ಲಿರಬೇಕು ಎಂಬುದು ಅವರ ಆಶಯವಾಗಿತ್ತು.

‘ಮುಂಗಾರು’ ಕರಾವಳಿಯ ಬದಲು ಬೇರೆ ಎಲ್ಲಿರಬೇಕಿತ್ತು? ಎನ್ನುವ ಪ್ರಶ್ನೆಯ ಬಗ್ಗೆ. ಕರಾವಳಿಯ ಬದಲು ಎಲ್ಲಿರುತ್ತಿದ್ದರೆ ಯಶಸ್ವಿಯಾಗುತ್ತಿತ್ತು ಎನ್ನುವುದನ್ನು ಲೇಖಕರು ಹೇಳಿಲ್ಲ ಎನ್ನುವ ಪ್ರಸ್ತಾಪ ಮಾಡಲಾಗಿದೆ. ಮುಂಗಾರು ಪ್ರವೇಶಕ್ಕೆ ಮುನ್ನದ ಪುಟ 12 ರಲ್ಲಿ ಮೂರನೆಯ ಪ್ಯಾರದ ಕೊನೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ‘ಬೆಂಗಳೂರು ಅಥವಾ ಮೈಸೂರಲ್ಲಿ ಮುಂಗಾರು ಜನ್ಮ ತಳೆಯುತ್ತಿದ್ದರೆ…’ ಎನ್ನುವ ಮಾತಿದೆ. ಆದರೆ ಕೆಂಡಸಂಪಿಗೆಯಲ್ಲಿ ಸರಣಿ ಬರೆಯುವಾಗ ಕೊನೆಯ ಕಂತಿನಲ್ಲಿ ಇದನ್ನು ಉಲ್ಲೇಖಿಸಿದ್ದೇನೆ (ಕೆಂಡಸಂಪಿಗೆಯನ್ನು ಪರಿಶೀಲಿಸಬಹುದು). ಆದರೆ ಅದನ್ನು ಪುಸ್ತಕ ರೂಪ ಪಡೆಯುವಾಗ ಬದಲಾವಣೆ ಮಾಡಲಾಗಿದೆ.

ಕೊನೆಯದಾಗಿ ‘ಇದು ಮುಂಗಾರು’ ವಡ್ಡರ್ಸೆಯವರ ಪತ್ರಿಕೋದ್ಯಮ, ಮುಂಗಾರು ಪತ್ರಿಕೆಯ ಅಧ್ಯಯನ, ವಿಚಾರಧಾರೆಗಳ ಮಂಥನದ ನಂತರದ ತಿರುಳಲ್ಲ ಎನ್ನುವುದನ್ನು ಪ್ರಾಮಾಣಿಕತೆಯಿಂದ ಹೇಳಿಕೊಳ್ಳುತ್ತೇನೆ. ತಿಳಿದವರು ಮತ್ತು ಆಳ ಅಧ್ಯಯನ ಮಾಡಿ ಬರೆಯಲು ಸಮರ್ಥರಾದವರಿಗೆ ಪ್ರೇರಣೆ ಕೊಟ್ಟರೆ ನನ್ನ ಶ್ರಮ ಸಾರ್ಥಕ. ಇದು ನನ್ನ ಅನುಭವ ಕಥನವೇ ಹೊರತು ಪತ್ರಿಕೋದ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಗೈಡ್ ಅಲ್ಲ. ಇದು ಸುದ್ದಿ ಎಂದು ತಿಳಿಸಿ ಹೇಳುವಂಥ ಕೃತಿಯೂ ಇದಲ್ಲ.

ವಡ್ಡರ್ಸೆಯವರ ಬಗ್ಗೆ ಬರೆಯಲು ಯಾರಿಗೆ ನೈತಿಕತೆ ಇದೆ-ಇಲ್ಲ ಎನ್ನುವ ತೀರ್ಮಾನವನ್ನು ಕೊಡುವಷ್ಟು ಸಮರ್ಥನಲ್ಲ. ಆದರೆ ಪ್ರತಿಕ್ರಿಯೆಯೊಂದರಲ್ಲಿ ನೈತಿಕತೆಯ ಉಲ್ಲೇಖ ಯಾಕೆ ಆಯಿತು ಎನ್ನುವುದೇ ಅಚ್ಚರಿ. ಮುಂಗಾರು ಪತ್ರಿಕೆಯಲ್ಲಿ ಕೊನೆತನಕ ಇದ್ದವರು ಯಾರು? ಅರ್ಧದಲ್ಲಿ ಬಿಟ್ಟವರು ಯಾರು? ಎನ್ನುವ ಸಾಮಾನ್ಯ ಮಾಹಿತಿ ಪಡೆದುಕೊಂಡೇ ಪ್ರತಿಕ್ರಿಯೆ ಕೊಟ್ಟರೆ ತಪ್ಪು ಸಂದೇಶಗಳು ರವಾನೆಯಾಗುವುದನ್ನು ತಡೆಯಬಹುದಲ್ಲವೇ? ಇಲ್ಲವಾದರೆ ಮುಂದೊಂದು ದಿನ ಮುಂಗಾರು ಚರಿತ್ರೆ ಬರೆಯುವ ಸಾಹಸಕ್ಕೆ ಮುಂದಾದರೆ ತಪ್ಪು ಮಾಹಿತಿಗಳೇ ಚರಿತ್ರೆಯ ಹಾದಿ ತಪ್ಪಿಸಬಹುದಲ್ಲವೇ?

‘ಇದು ಮುಂಗಾರು’ ಪುಸ್ತಕ ನಿಮ್ಮನ್ನು ನಿರಾಸೆಗೊಳಿಸಿದ್ದರೆ ಕ್ಷಮೆಯಿರಲಿ. ಉತ್ತಮ ಕೃತಿ ಮೂಡಿಬರಲು ನಿಮಗಾದ ನಿರಾಸೆ ಪ್ರೇರಣೆಯಾಗಲಿ.

One thought on ““ಮುಂಗಾರು” ಅಂದ್ರೆ ಇಷ್ಟೇ ಅಲ್ಲ… ಬೈಕಂಪಾಡಿಯವರ ಪ್ರತಿಕ್ರಿಯೆ

  1. anand prasad

    ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಂತ್ರಿಗಳು ತಮ್ಮ ಕಛೇರಿಯನ್ನು ವಹಿಸಿಕೊಳ್ಳುವಾಗ ಹೋಮ, ಹವನ, ಆರಾಧನೆ ಮಾಡುವುದು ಆರಂಭವಾಗಿದೆ. ಇದನ್ನು ಟಿವಿ ವಾಹಿನಿಗಳಲ್ಲಿ ತೋರಿಸುವುದೂ ಹೆಚ್ಚಾಗಿದೆ. ಇಂಥ ಅಸಂಬದ್ಧಗಳು, ಪ್ರತಿಗಾಮಿ ನಿಲುವುಗಳನ್ನು ನೋಡಿದರೆ ಕರ್ನಾಟಕವು ಎಷ್ಟು ಹಿಂದಕ್ಕೆ ಹೋಗಿದೆ, ಹೋಗುತ್ತಾ ಇದೆ ಎಂಬುದು ಗೊತ್ತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ವಡ್ಡರ್ಸೆಯಂಥವರು, ಲಂಕೇಶರಂಥವರ ಕೊರತೆ ಎದ್ದು ಕಾಣುತ್ತದೆ.

    Reply

Leave a Reply to anand prasad Cancel reply

Your email address will not be published. Required fields are marked *