ಆಮ್ ಆದ್ಮಿ ಪಕ್ಷ ವ್ಯವಸ್ಥೆ ಬದಲಾವಣೆಯ ಹರಿಕಾರ ಆಗಲಿ

– ಆನಂದ ಪ್ರಸಾದ್

ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದುದನ್ನು ನೋಡಿ ಪರಂಪರಾಗತ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಈ ಪಕ್ಷವೆಲ್ಲಿಯಾದರೂ ಇದೇ ರೀತಿ ದೇಶಾದ್ಯಂತ ಬೆಳೆದರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಗಾಬರಿಯಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆಯನ್ನು ಅದು ದುರ್ಬಲವಾಗಿದ್ದರೂ ತರಾತುರಿಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದ್ದಾರೆ. ಈ ತರಾತುರಿಗೆ ಕಾರಣ ಅಣ್ಣಾ ಹಜಾರೆಯವರ anna-hazareಉಪವಾಸ ಸತ್ಯಾಗ್ರಹವೇನೂ ಅಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹ ಇದಕ್ಕೆ ಕಾರಣವೆಂದಾದರೆ ಈ ಮಸೂದೆ ಎರಡು ವರ್ಷಗಳ ಹಿಂದೆಯೇ ಪಾಸಾಗಬೇಕಿತ್ತು. ಎರಡು ವರ್ಷಗಳ ಹಿಂದೆ ಉಪವಾಸ ಸತ್ಯಾಗ್ರಹ ಮಾಡಿದ ನಂತರ ಅಣ್ಣಾ ಹಜಾರೆಯವರೂ ಉಪವಾಸ ಕುಳಿತುಕೊಳ್ಳದೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಮಸೂದೆಯನ್ನು ಪಾಸು ಮಾಡುವಂತೆ ಉಪವಾಸ ಕುಳಿತುಕೊಂಡದ್ದು ಕಾಕತಾಳೀಯ ಇರಲಾರದು. ಅಣ್ಣಾ ಹಜಾರೆಯವರ ರಾಜಕೀಯ ನಿಲುವು ನೋಡಿದಾಗ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಸಿದ್ಧಾಂತಗಳಿಗೆ ಹತ್ತಿರವಿರುವುದು ಕಂಡುಬರುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ದೇಶಾದ್ಯಂತ ಎದ್ದ ಜನಜಾಗೃತಿಯ ಫಲ ಬಿಜೆಪಿ ಪಕ್ಷಕ್ಕೆ ದೊರಕಲಿ ಎಂಬ ಒಳ ಆಶಯ ಅಣ್ಣಾ ಅವರಲ್ಲಿ ಹಾಗೂ ಅವರ ಸಂಗಡಿಗರಾದ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿಯೇ ಅರವಿಂದ ಕೇಜ್ರಿವಾಲ್ ಪ್ರತ್ಯೇಕ ಪಕ್ಷ ಸ್ಥಾಪಿಸಿ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡಾಗ ಅದನ್ನು ಬೆಂಬಲಿಸಲು ಹಜಾರೆ ನಿರಾಕರಿಸಿದುದು ಹಾಗೂ ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎಂದಿರುವಾಗ ಭ್ರಷ್ಟಾಚಾರ ವಿರೋಧಿ ಹೋರಾಟದ ಸಮಯದಲ್ಲಿ ಸಂಗ್ರಹವಾದ ನಿಧಿಯನ್ನು ಕೇಜ್ರಿವಾಲ್ ಚುನಾವಣೆಗೆ ಬಳಸುತ್ತಿದ್ದಾರೆಯೋ ಎಂಬ ಗೊಂದಲವನ್ನು ಸೃಷ್ಟಿಸಿ ಜನತೆಯಲ್ಲಿ anna-kejriwalಕೇಜ್ರಿವಾಲ್ ಹಾಗೂ ಸಂಗಡಿಗರ ಬಗ್ಗೆ ಅಪನಂಬಿಕೆಯನ್ನು ಹುಟ್ಟು ಹಾಕಿದ್ದು ಕೂಡ ಇದೇ ಉದ್ಧೇಶದಿಂದ ಇರಬಹುದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದ ಫಲ ಆಮ್ ಆದ್ಮಿ ಪಕ್ಷವು ಎಲ್ಲಿ ತನ್ನಿಂದ ಕಿತ್ತುಕೊಳ್ಳುವುದೋ ಎಂಬ ಭೀತಿಯಿಂದಲೇ ಬಿಜೆಪಿಯವರು ಅಣ್ಣಾ ಹಜಾರೆಗೆ ಕೇಜ್ರಿವಾಲ್ ಬೆನ್ನಿಗೆ ಚೂರಿ ಹಾಕಿದರು, ವಿಶ್ವಾಸ ದ್ರೋಹ ಮಾಡಿದರು ಎಂಬಂಥ ಅಪ್ರಪ್ರಚಾರದಲ್ಲಿ ತೊಡಗಿದರು. ಈ ಎಲ್ಲಾ ಅಪಪ್ರಚಾರದ ಹೊರತಾಗಿಯೂ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿತು.

ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಭಾರತದ ಪಾಲಿಗೆ ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂದು ದೇಶಕ್ಕೆ ಪರ್ಯಾಯ ರಾಜಕೀಯದ ಅಗತ್ಯವಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರದೇ ಹೋದರೆ ಭಾರತದಲ್ಲಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಪಕ್ಷಗಳಿಗೆ ಕ್ರಾಂತಿಕಾರಕ ಬದಲಾವಣೆ ತರುವುದು ಬೇಡವಾಗಿದೆ. ಅಂಥ ಬದಲಾವಣೆ ತರುವ ಮನಸ್ಸಿದ್ದರೆ ಈಗ ಇರುವ ಲೋಕಸಭೆ ಹಾಗೂ ರಾಜ್ಯಸಭೆಗಳೇ ಸೂಕ್ತ ಕಾನೂನುಗಳನ್ನು ಈಗಲೇ ಮಾಡುವುದು ಸಾಧ್ಯವಿದೆ. ಅದನ್ನೆಂದಾದರೋ ಅವುಗಳು ಮಾಡಿವೆಯೇ? ಇಲ್ಲ. ಪ್ರತಿಯೊಂದು ವಿಷಯಕ್ಕೂ ಜನರು ನಿರಂತರ ಒತ್ತಡ ಹಾಕಿದರೆ ಮಾತ್ರ ಕಾನೂನು ಮಾಡುವುದು ಎಂದಾದರೆ ಜನಪ್ರತಿನಿಧಿಗಳ ಅಗತ್ಯ ಏನು? aam-admi-partyರಾಜಪ್ರಭುತ್ವವನ್ನೇ ಮುಂದುವರಿಸಬಹುದಿತ್ತಲ್ಲವೇ? ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಾ ಬಂದಿದೆ. ದೇಶಕ್ಕೆ ಇಂದು ಪ್ರಾಮಾಣಿಕ, ಜವಾಬ್ದಾರಿಯುತ, ಉದಾರವಾದಿ ನಾಯಕತ್ವದ ಅಗತ್ಯ ಇದೆ. ಇದನ್ನು ಆಮ್ ಆದ್ಮಿ ಪಕ್ಷವು ನೀಡುವ ಹಾಗೂ ಉಳಿದೆಲ್ಲ ಪಕ್ಷಗಳಿಗಿಂತ ತಾನು ಭಿನ್ನ ಎಂದು ತೋರಿಸುವ ಅಗತ್ಯ ಇದೆ. ಆಮ್ ಆದ್ಮಿ ಪಕ್ಷದ ಇದುವರೆಗಿನ ನಿಲುವನ್ನು ನೋಡಿದರೆ ಅದು ಉಳಿದ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಿಕೊಂಡಿದೆ. ಪಕ್ಷ ಕಟ್ಟಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನರ ದೇಣಿಗೆಯಿಂದಲೇ ಪ್ರಾಮಾಣಿಕವಾಗಿ ಪಡೆದು ಅದನ್ನು ತನ್ನ ವೆಬ್ ಸೈಟಿನಲ್ಲಿ ಹಾಕಿ ಪಾರದರ್ಶಕತೆಯನ್ನು ಮೆರೆದಿದೆ. ಮತಗಳಿಗಾಗಿ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಮತದಾರರಿಗೆ ಒಡ್ಡಿಲ್ಲ. ಜಾತಿ ಹಾಗೂ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಅಧಿಕಾರವು ತನ್ನ ಕೈಗೆಟಕುವ ಹತ್ತಿರ ಇದ್ದರೂ ಉನ್ನತ ನೈತಿಕ ಧೈರ್ಯವನ್ನು ತೋರಿಸಿ ಅನೈತಿಕ ರಾಜಕೀಯ ಮಾಡುವುದಿಲ್ಲ ಎಂದು ನಡೆದಂತೆ ನುಡಿದಿದೆ. ದೆಹಲಿ ಚುನಾವಣೆಗೂ ಮೊದಲು ಪೂರ್ಣ ಬಹುಮತ ಪಡೆಯದೇ ಇದ್ದ ಪಕ್ಷದಲ್ಲಿ ತಾನು ಯಾರಿಗೂ ಬೆಂಬಲ ಕೊಡುವುದಿಲ್ಲ ಹಾಗೂ ಯಾರಿಂದಲೂ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಬಾಹ್ಯ ಬೆಂಬಲ ಕೊಡಲು ಮುಂದೆ ಬಂದಿದ್ದರೂ ಸರಕಾರ ರಚಿಸಬೇಕೋ ಬೇಡವೋ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಮಾಡಿದರೂ ಟೀಕೆ ತಪ್ಪಿದ್ದಲ್ಲ, ಸರ್ಕಾರ ಮಾಡದಿದ್ದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಟೀಕೆಯೂ ತಪ್ಪಿದ್ದಲ್ಲ. ಇದೀಗ ಈ ಕುರಿತು ದೆಹಲಿಯ ಜನತೆಯನ್ನೇ ಕೇಳಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ದಿಟ್ಟ ನಿಲುವು ತೆಗೆದುಕೊಂಡಿರುವುದು ಅತ್ಯಂತ ಪಕ್ವ, ಪ್ರಬುದ್ಧ ನಿಲುವು ಎಂದೇ ಹೇಳಬೇಕಾಗುತ್ತದೆ. ಇದರಿಂದಾಗಿಯೂ ಇದು ಉಳಿದ ಪಕ್ಷಗಳಿಗಿಂತ ಸಂಪೂರ್ಣ ಭಿನ್ನ ಎಂದು ಕಂಡುಬರುತ್ತದೆ. ಪರಿವರ್ತನೆಯ ಹಾದಿಯಲ್ಲಿ ಒಮ್ಮೆ ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಾವಣೆ ಆಗುವಾಗ ಇದು ಅನಿವಾರ್ಯ. ಉದಾಹರಣೆಗೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾವಣೆ ಹೊಂದುವಾಗ ಗೊಂದಲ, ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ವಿಚಲಿತರಾಗಬೇಕಾಗಿಲ್ಲ. ಊಳಿಗಮಾನ್ಯ ವ್ಯವಸ್ಥೆಯಿಂದ ಸಮತಾವಾದಿ ವ್ಯವಸ್ಥೆಗೆ ರಷ್ಯ ಬದಲಾಗುವ ವೇಳೆಯಲ್ಲಿ ಕೆಲವು ವರ್ಷಗಳವರೆಗೆ ಅರಾಜಕ ಪರಿಸ್ಥಿತಿ ಇತ್ತು. ಹೀಗೆಯೇ ಇದೀಗ ದೆಹಲಿಯಲ್ಲಿ ಪಾರಂಪರಿಕ ಭ್ರಷ್ಟ ಪಕ್ಷಗಳ ವ್ಯವಸ್ಥೆಯಿಂದ ನೈತಿಕ ಹಾಗೂ ಮೌಲ್ಯಾಧಾರಿತ ವ್ಯವಸ್ಥೆಗೆ ಬದಲಾಗುವ ಈ ಸಂಧಿ ಕಾಲದಲ್ಲಿ ದೆಹಲಿಯಲ್ಲಿ ಸ್ವಲ್ಪ ಸಮಯ ರಾಷ್ಟ್ರಪತಿ ಆಳ್ವಿಕೆ ಬಂದರೆ ಅದನ್ನು ಜನತೆಯ ಮೇಲಿನ ಹೊರೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದರೆ ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಎಂದರೆ ಅರಾಜಕ ಪರಿಸ್ಥಿತಿಯೇನೂ ಉಂಟಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸ್ವಲ್ಪ ವಿಳಂಬ ಆಗಬಹುದು ಅಷ್ಟೇ.

ಆಮ್ ಆದ್ಮಿ ಪಕ್ಷವು ಭಾರತಾದ್ಯಂತ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಾದ ಅಗತ್ಯ ಇಂದು ಇದೆ. ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜೊತೆ ಈ ನಿಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಲೋಕಪಾಲ್ ಸಂಸ್ಥೆಯ ಸ್ಥಾಪನೆ ಆಗುವ ಕಾರಣ ಪಕ್ಷದ ಬೆಳವಣಿಗೆ ದೆಹಲಿಗೆ ಸೀಮಿತ ಆಗಲಾರದು. ಉನ್ನತ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಪರ್ಯಾಯ ರಾಷ್ಟ್ರೀಯ ಪಕ್ಷವೊಂದರ ಅಗತ್ಯ ಇಂದು ಈ ದೇಶಕ್ಕೆ ಇದೆ. ಅದನ್ನು ಆಮ್ ಆದ್ಮಿ ಪಕ್ಷವು ತುಂಬುವ ಸಂಭವ ಇದೆ ಮತ್ತು ಇದನ್ನು ದೇಶಾದ್ಯಂತ ಬೆಳೆಸಲು ಸಮಾಜದ ಎಲ್ಲಾ ವರ್ಗಗಳ ಜನ ಮುಂದೆ ಬಂದರೆ ಇದು ಅಸಾಧ್ಯವೇನೂ ಅಲ್ಲ. ಇದು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೇಜ್ರಿವಾಲರು ಅಣ್ಣಾ ಹಜಾರೆಯವರನ್ನು ಗುರುವೆಂದು ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ ಮತ್ತು ಅವರು ಅಣ್ಣಾ ಅವರ ಬೆಂಬಲ ಇಲ್ಲದೆಯೂ ತನ್ನ ಸ್ವಂತ ಪ್ರತಿಭೆಯಿಂದಲೇ ಬೆಳೆಯಬಲ್ಲರು. arvind-kejriwal-campaigningಗುರು-ಶಿಷ್ಯ ಎಂಬ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. ಅಣ್ಣಾ ಹಜಾರೆಯವರು ವೈಜ್ಞಾನಿಕ ಮನೋಭಾವ ಇಲ್ಲದ ಹಳೆಯ ತಲೆಮಾರಿನ ವ್ಯಕ್ತಿ ಆದ ಕಾರಣ ಅವರ ಬೆಂಬಲ ಇಂದಿನ ತಲೆಮಾರಿನ ಪ್ರಜಾಪ್ರಭುತ್ವ, ಸಮಾನತೆ, ವೈಚಾರಿಕ ಮನೋಭಾವ, ಉದಾರವಾದಿ ವ್ಯಕ್ತಿತ್ವ ಹೊಂದಿರುವ ಕೇಜ್ರಿವಾಲ್ ಹಾಗೂ ಸಂಗಡಿಗರಿಗೆ ದೊರೆಯಲಾರದು. ಹೀಗಾಗಿ ಅವರು ಅಣ್ಣಾ ಅವರನ್ನು ಗುರು ಎಂದು ಹೇಳಿಕೊಳ್ಳುವುದು, ಅವರ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದು ವ್ಯರ್ಥ. ಹಾದಿಗಳು ಬೇರೆ ಬೇರೆಯಾದ ಕಾರಣ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆಯುವುದು ಉತ್ತಮ ಹಾಗೂ ಅಂಥ ಪ್ರತಿಭೆ ಹಾಗೂ ಮುನ್ನೋಟ ಅವರಲ್ಲಿ ಇದೆ. ಯಾವುದೇ ಕಾರಣಕ್ಕೂ ಕೇಜ್ರಿವಾಲ್ ಹಿಂಜರಿಯಬೇಕಾದ ಅಗತ್ಯ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳಲ್ಲಿಯೂ ಸನಾತನವಾದಿ, ಪುರೋಹಿತಶಾಹಿ, ಯಥಾಸ್ಥಿತಿವಾದಿ, ಪಟ್ಟಭದ್ರ ಹಿತಾಸಕ್ತಿಗಳು ನೆಲೆಯೂರಿರುವ ಕಾರಣ ಭಾರತವು ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ಭಾರತವನ್ನು ಮುನ್ನಡೆಸಲು ಆಧುನಿಕ ನಿಲುವಿನ ಪ್ರತಿಭಾವಂತರು ಕೇಜ್ರಿವಾಲ್ ಹಾಗೂ ಸಂಗಡಿಗರ ಜೊತೆ ರಾಜಕೀಯಕ್ಕೆ ಇಳಿಯಬೇಕಾದ ಅಗತ್ಯ ಇದೆ.

ಕೇಜ್ರಿವಾಲ್ ಅವರಲ್ಲಿ ಇರುವ ದೃಢತೆ, ಚಿಂತನೆ ನೋಡುವಾಗ ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಅವರ ಹೋಲಿಕೆ ಕಂಡುಬರುತ್ತದೆ. ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಇದ್ದರೆ ಜನ ಜಾತಿ, ಮತ, ಧರ್ಮ ಭೇದ ಮರೆತು; ಕೆಳವರ್ಗ, ಮಧ್ಯಮ ವರ್ಗ, ಶ್ರೀಮಂತ ವರ್ಗ ಎಂಬ ಭೇದವಿಲ್ಲದೆ ಬೆಂಬಲಿಸುತ್ತಾರೆ ಮತ್ತು ಮೆಚ್ಚುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಇದಕ್ಕೊಂದು ಉತ್ತಮ ಉದಾಹರಣೆ. ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ, ಜವಾಬ್ದಾರಿಯುತ ಜನರನ್ನು ಗುರುತಿಸಿ ಬೆಳೆಸುವ ಕಾರ್ಯ ಮಾಡಬೇಕು. ಪಕ್ಷದಲ್ಲಿ ಎರಡನೆಯ ಹಾಗೂ ಮೂರನೆಯ ಪೀಳಿಗೆಯ ನಾಯಕರನ್ನು ತಯಾರು ಮಾಡಬೇಕು. ಕೇಜ್ರಿವಾಲ್ ನಂತರ ಯಾರು ಎಂಬ ಪ್ರಶ್ನೆ ಎಂದೂ ಬರಬಾರದು. ವಂಶಪಾರಂಪರ್ಯ ರಾಜಕೀಯಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ನಿಯಮವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸಲು ಅಗತ್ಯವಾಗಿ ಬೇಕಾಗಿತ್ತು. ಒಬ್ಬನೇ ವ್ಯಕ್ತಿ ನಿರಂತರವಾಗಿ ಪದೇ ಪದೇ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗಬಾರದು. ಹೀಗೆ ಒಬ್ಬನೇ ಮತ್ತೆ ಮತ್ತೆ ಮುಖ್ಯ ಮಂತ್ರಿ ಅಥವಾ ಪ್ರಧಾನ ಮಂತ್ರಿ ಆಗುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು. ಉದಾಹರಣೆಗೆ ಜೀವಂತ ಇರುವವರೆಗೋ ನೆಹರೂ ಅವರೇ ಪ್ರಧಾನ ಮಂತ್ರಿ ಆಗಿದ್ದದ್ದು, ಇಂದಿರಾ ಗಾಂಧಿಯೂ ಜೀವಂತ ಇದ್ದಷ್ಟು ದಿನ ಕಾಂಗ್ರೆಸ್ಸಿನಿಂದ ಪ್ರಧಾನ ಮಂತ್ರಿಯಾಗಿದ್ದದ್ದು. ಇದು ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವದ ಇನ್ನೊಂದು ಅವತಾರವಷ್ಟೇ. ಈ ರೋಗ ಕಾಂಗ್ರೆಸ್ಸಿಗೆ ಮಾತ್ರ ಸೀಮಿತವಲ್ಲ ಬಿಜೆಪಿ, ಸಮಾಜವಾದಿ, ಅಣ್ಣಾಡಿಎಂಕೆ, ಡಿಎಂಕೆ, ಟಿಡಿಪಿ, ಬಿಜು ಜನತಾದಳ, ಜಾತ್ಯಾತೀತ ಜನತಾದಳ ಹೀಗೆ ಎಲ್ಲ ಪಕ್ಷಗಳನ್ನೂ ಆವರಿಸಿಕೊಂಡಿದೆ. ಬಿಜೆಪಿಯಲ್ಲಿಯೂ ನರೇಂದ್ರ ಮೋದಿಯೇ ನಾಲ್ಕನೆಯ ಸಲ ಮುಖ್ಯಮಂತ್ರಿಯಾಗಿರುವುದು ಕೂಡ ನೈಜ ಪ್ರಜಾಪ್ರಭುತ್ವವಲ್ಲ. ಅದೇ ರೀತಿ ಎಡ ಪಕ್ಷಗಳಲ್ಲಿ ಜ್ಯೋತಿ ಬಸು ಐದು ಸಲ ಮುಖ್ಯಮಂತ್ರಿ ಆಗಿದ್ದು ಕೂಡ. ಒಬ್ಬನೇ ಸಾಯುವವರೆಗೆ ಅಧಿಕಾರಕ್ಕೆ ಅಂಟಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಯೋಗ್ಯವಲ್ಲ. ಹೆಚ್ಚೆಂದರೆ ಒಬ್ಬನಿಗೆ ಎರಡು ಅವಕಾಶಗಳಷ್ಟೇ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಲು ಇರಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಒಬ್ಬನೇ ಅಧಿಕಾರ ಸ್ಥಾನಕ್ಕೆ ಏರುವುದು ಕೂಡ ರಾಜಪ್ರಭುತ್ವದ ಮುಂದುವರಿಕೆಯಾಗುತ್ತದೆ. ಇದು ಸರ್ವಾಧಿಕಾರಿ ಹಾಗೂ ವಂಶವಾಹೀ ಅಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಒಬ್ಬನೇ ಒಂದು ಪಕ್ಷದಿಂದ ಎರಡಕ್ಕಿಂತ ಹೆಚ್ಚು ಬಾರಿ ಮುಖ್ಯ ಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗದಂತೆ ಪಕ್ಷಗಳು ನಿಯಮ ರೂಪಿಸುವ ಅಗತ್ಯ ಇದೆ. ಅದೇ ರೀತಿ ಪಕ್ಷದ ಅಧ್ಯಕ್ಷರ ವಿಚಾರದಲ್ಲಿಯೂ ಕೂಡ ನಿಯಮ ಮಾಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ಬೆಳೆಯಲು ಸಾಧ್ಯ.

ಲೋಕಪಾಲ್ ಸಂಸ್ಥೆ ಸ್ಥಾಪನೆ ಆಗುವ ಕಾರಣ ಭ್ರಷ್ಟಾಚಾರ ಸ್ವಲ್ಪ ನಿಯಂತ್ರಣಕ್ಕೆ ಬರಬಹುದು ಆದರೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಅಧಿಕಾರಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವವರೆಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಆದರೆ ಭ್ರಷ್ಟಾಚಾರ ನಿಯಂತ್ರಣ ಆಗಿದೆಯೇ? corruption-india-democracyಇಲ್ಲವೆಂದೇ ಹೇಳಬೇಕಾಗುತ್ತದೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರುವ ‘ಲಂಚ ಪ್ರಪಂಚ’ ಎಂಬ ಅಂಕಣದಲ್ಲಿ ಪ್ರಕಟವಾಗುವ ಬರಹಗಳನ್ನು ನೋಡಿದರೆ ಲೋಕಾಯುಕ್ತ ಸಂಸ್ಥೆ ನಿಷ್ಪ್ರಯೋಜಕ ಎಂಬ ಭಾವನೆ ಬರುವುದಿಲ್ಲವೇ? ಎಲ್ಲಿಯವರೆಗೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನರು ಅಧಿಕಾರ ಸ್ಥಾನಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವು ದಿಲ್ಲವೋ ಅಲ್ಲಿಯವರೆಗೆ ನೂರು ಲೋಕಾಯುಕ್ತಗಳು, ನೂರು ಲೋಕಪಾಲಗಳು ಬಂದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವ ಲಕ್ಷಣ ಕಾಣುವುದಿಲ್ಲ. ಬಿಜೆಪಿ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಕಾಂಗ್ರೆಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಜೆಡಿಎಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ. ಕ್ರಾಂತಿಕಾರಕ ಪ್ರಜಾಸತ್ತಾತ್ಮಕ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ತರದಿದ್ದರೆ ಹೀಗೇ ಆಗುವುದು, ಯಾರು ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಬದಲಾವಣೆ ಆಗುವುದಿಲ್ಲ. ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ, ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಮತದಾನದಲ್ಲಿ ‘ಯಾರಿಗೂ ಇಲ್ಲ’ (NOTA) ಎಂಬ ಮತ ನೀಡುವ ಅವಕಾಶ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿಯ ಮತಗಳಿಗಿಂತ ಹೆಚ್ಚಾದರೆ ಅಲ್ಲಿ ಪುನಃ ಮತದಾನ ನಡೆಸುವ ವ್ಯವಸ್ಥೆ ಮೊದಲಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕ್ರಾಂತಿಕಾರಕ ಚಿಂತನೆಗಳನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಬೇರೆ ಯಾವ ರಾಜಕೀಯ ಪಕ್ಷಗಳಲ್ಲಿಯೂ ಇಂಥ ಕ್ರಾಂತಿಕಾರಕ ಚಿಂತನೆ ಕಂಡುಬರುವುದಿಲ್ಲ. ಈ ನಿಟ್ಟಿನಿಂದಲೂ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸುವ ಅಗತ್ಯ ಇದೆ.

12 thoughts on “ಆಮ್ ಆದ್ಮಿ ಪಕ್ಷ ವ್ಯವಸ್ಥೆ ಬದಲಾವಣೆಯ ಹರಿಕಾರ ಆಗಲಿ

  1. Srinivasamurthy

    ಗುರು-ಶಿಷ್ಯ ಎಂಬ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. ಎಂದಿರೋದು ನೀವು ಗುರು ಕಲ್ಪನೆಯನ್ನೇ ಗುಜರಿಗೆ ಸೇರಿಸಲು ಹೊರಟಿದ್ದೀರಿ ಎಂಬುವುದು ತಿಳಿಯುತ್ತದೆ. ನೀವು ಯಾರ ಆದರ್ಶಗಳನ್ನು ನಂಬಿರುತ್ತೀರೋ ಅವರೇ ನಿಮ್ಮಯ ಗುರುಗಳೆಂದು ಒಪ್ಪಿಕೊಳ್ಳುವ ಸವ್ಜನ್ಯವನ್ನು ತೋರಿಸುವುದನ್ನು ಕಲಿಯಿರಿ. ಹೀಗೆ ವ್ಯವಸ್ತೆಯನ್ನು ಅಡ್ಡ ತಂದು ಹೀಗೆ ಹೇಳುವುದು ಸರಿಯಾದ ನಿಲುವಲ್ಲ.
    ಆಮ್ ಆದ್ಮಿ ಬಗೆಗೆ ಅತಿಯಾದ ಶರಣಾಗತಿ ಈ ಲೇಕನದಲ್ಲಿ ವ್ಯಕ್ತವಾಗಿದೆ. ಇದೂ ಕೂಡ ಒಳ್ಳೆಯದಲ್ಲ. ಒಂದು ಮಗುವಿನ ವರ್ತನೆಯನ್ನು ಅಳೆಯಬೇಕೆಂದರೆ ಹಲವಾರು ವರ್ಶಗಳೇ ಬೇಕಾಗುತ್ತದೆ. ಇನ್ನು ರಾಜಕೀಯ ಪಕ್ಶವನ್ನು ಹೀಗೆ ಹುಟ್ಟಿದ ಇಶ್ಟೇ ದಿನಗಳಲ್ಲಿ ಹೀಗೆ ಅದನ್ನು ಅಳೆದು ಅದರ ಗುಣಮಟ್ಟ ಸರಿಯಾಗಿದೆ ಎಂಬುವುದು ಮುಂದರಿಯದೆ ನಿಮ್ಮದೇ ಲೋಕದಲ್ಲಿ ತೇಲುತ್ತಾ ಬರೆದ ಊಹಿತ ಲೇಕನವಾಗಿದೆ ಅನಿಸುತ್ತಿದೆ.
    ಇದೇ ತಾಣದ ಒಂದು ಲೇಕನದಲ್ಲಿ ಹಿಂದು ಪತ್ರಿಕೆಯಲ್ಲಿ ಕಂಚಿ.ಶ್ರೀ ಯವರ ತೀರ್ಪಿನ ಕುರಿತು ಪ್ರಕಟಗೊಂಡ ಜಾಹಿರಾತನ್ನು ಉದಹರಿಸುತ್ತಾ ಆ ಪತ್ರಿಕೆಯ ವಿಶ್ವಾಸಾರ್ಹತೆಯ ಬಗ್ಗೆ ತುಸು ಕಳವಳವನ್ನು ವ್ಯಕ್ತಪಡಿಸಿದ ಸಂಗತಿ ನನಗೆ ನೆನಪಿದೆ. ಹಾಗೆಯೇ ನೀವು ಬರೆದಿರುವ ಈ ಲೇಕನದ ಕುರಿತು ನೀವೆ ಕಳವಳಪಡುವ ದಿನಗಳು ಬಂದರೆ ನಿಮ್ಮಲ್ಲಿ ಯಾವ ಉತ್ತರವಿರುತ್ತದೆ?

    Reply
  2. Ananda Prasad

    ಗುರು-ಶಿಷ್ಯ ಎಂಬ ಪರಿಕಲ್ಪನೆಯಲ್ಲಿ ಗುಲಾಮಗಿರಿಯ ಲಕ್ಷಣಗಳು ಇವೆ. ಹಾಗಾಗಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಒಳ್ಳೆಯದಲ್ಲ. ಇದೇ ರೀತಿಯ ಇನ್ನೊಂದು ಪರಿಕಲ್ಪನೆ ಎಂಬುದು ಒಡೆಯ-ಸೇವಕ ಎಂಬುದು. ಇಲ್ಲಿಯೂ ಗುಲಾಮಗಿರಿಯ ಲಕ್ಷಣಗಳಿವೆ. ಇದು ಪ್ರಧಾನವಾಗಿ ಊಳಿಗಮಾನ್ಯ ಹಾಗೂ ಪುರೋಹಿತಶಾಹೀ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ನಾವು ಸ್ವತಂತ್ರವಾಗಿ ಚಿಂತಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಯಾವ ಗುರುವಿನ ಅಗತ್ಯವೂ ಇಲ್ಲ.

    ಆಮ್ ಆದ್ಮಿ ಪಕ್ಷದ ಬಗ್ಗೆ ಅತಿಯಾದ ಶರಣಾಗತಿಯಾಗುವ ಪ್ರಶ್ನೆಯೇ ಇಲ್ಲ. ಈವರೆಗಿನ ಅದರ ಬೆಳವಣಿಗೆ ಹಾಗೂ ನಡವಳಿಕೆಗಳನ್ನು ಆಧರಿಸಿ ನೋಡುವುದಾದರೆ ಅದು ನಿಸ್ಸಂದೇಹವಾಗಿ ಉಳಿದ ಪಕ್ಷಗಳಿಗಿಂತ ಬಹಳ ಮೇಲೆ ನಿಲ್ಲುತ್ತದೆ. ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತೇ ಇದೆ. ಅದೇ ರೀತಿ ಆಮ್ ಆದ್ಮಿ ಪಕ್ಷದ ಉದಯ, ಅದರ ಧ್ಯೆಯೋದ್ಧೇಶ ನೋಡಿದರೆ ಇದು ಭಿನ್ನವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿವೆ. ಒಂದು ವೇಳೆ ಇದು ಉಳಿದ ಪಕ್ಷಗಳಿಗಿಂತ ಭಿನ್ನವಲ್ಲ ಎಂದು ಮುಂದೆ ಕಂಡುಬಂದರೆ ಅದನ್ನು ಟೀಕಿಸಲು ಹಿಂಜರಿಯುದಿಲ್ಲ. ಈಗ ಇರುವ ರಾಜಕೀಯ ಪಕ್ಷಗಳು ಯಥಾಸ್ಥಿತಿಯನ್ನು ಮುಂದುವರಿಸುವುದನ್ನು ಬಿಟ್ಟರೆ ಬಹಳ ಉತ್ತಮ ಕೆಲಸವೇನೂ ಮಾಡುತ್ತಿಲ್ಲವಾದ ಕಾರಣ ಹೊಸ ಪಕ್ಷಕ್ಕೆ ಒಂದು ಅವಕಾಶ ಕೊಟ್ಟು ನೋಡಿದರೆ ಹಾಗೂ ಬದಲಾವಣೆಯ ಸಾಧ್ಯತೆ ಇದೆಯೇ ಎಂದು ಪ್ರಯೋಗ ಮಾಡಿ ನೋಡುವುದರಲ್ಲಿ ಯಾವುದೇ ನಷ್ಟವಿಲ್ಲ.

    Reply
  3. Ananda Prasad

    ‘ಬೆಳೆಯುವ ಸಿರಿ ಮೊಳಕೆಯಲ್ಲಿ’ಯೇ ತಿಳಿಯುತ್ತದೆ. ಇದು ಆಮ್ ಆದ್ಮಿ ಪಕ್ಷದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಹೇಗೆಂದರೆ ಬಹುಮತಕ್ಕೆ ಹತ್ತಿರ ಸ್ಥಾನ ಬಂದಾಗ ಸಾಮಾನ್ಯ ಪಕ್ಷಗಳು ಏನು ಮಾಡುತ್ತವೆ ಎಂದರೆ ದುಂಬಾಲು ಬಿದ್ದು ಹೇಗಾದರೂ ಮಾಡಿ ಇತರ ಪಕ್ಷಗಳ ಸಹಾಯ ಪಡೆದು (ಅದು ಕುದುರೆ ವ್ಯಾಪಾರದಿಂದಲೂ ಇರಬಹುದು ಅಥವಾ ಯಾವುದಾದರೂ ಆಪರೇಶನ್ ಕಾರ್ಯಾಚರಣೆಗಳಿಂದಲೂ ಇರಬಹುದು) ಅಥವಾ ಇತರ ಪಕ್ಷಗಳ ಷರತ್ತಿಗೆ ಮಣಿದು ಸರ್ಕಾರ ರಚಿಸಲು ಎಲ್ಲಿಲ್ಲದ ಆತುರ ತೋರುತ್ತವೆ. ಇದಕ್ಕೆ ತದ್ವಿರುದ್ಧವಾಗಿ ಆಮ್ ಆದ್ಮಿ ಪಕ್ಷ ಇಂಥ ಯಾವುದೇ ಅನೈತಿಕತೆಯನ್ನು ತೋರಲಿಲ್ಲ ಬದಲಿಗೆ ನಿಷ್ಯರ್ತ ಬಾಹ್ಯ ಬೆಂಬಲ ಕೊಡುತ್ತೇವೆ ಎಂದು ಬಂದವರಿಗೂ ಷರತ್ತುಗಳನ್ನು ಹಾಕಿದೆ. ಇದು ಅಧಿಕಾರ ದಾಹ ಇಲ್ಲದವರು, ಬದಲಾವಣೆಯ ಬಗ್ಗೆ ಪ್ರಾಮಾಣಿಕ ತುಡಿತ ಇರುವವರು ಮಾತ್ರ ಇಂಥ ನೈತಿಕ ಸ್ಥೈರ್ಯ ತೋರಲು ಸಾಧ್ಯ. ಇಷ್ಟು ಮಾತ್ರವಲ್ಲ ಬಹುಮತ ಇಲ್ಲದ ಸಂದರ್ಭಗಳಲ್ಲಿ ಹೆಚ್ಚು ಸ್ಥಾನ ಪಡೆದ ಪಕ್ಷಗಳು ಇತರ ಪಕ್ಷಗಳನ್ನು ಒಡೆಯಲು ತಂತ್ರ ಮಾಡುತ್ತವೆ. ಇಂಥ ಯಾವ ತಂತ್ರಗಳಿಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಬಗ್ಗಲಿಲ್ಲ. ಸಾಮಾನ್ಯ ಅಧಿಕಾರದಾಹಿಗಳಾದರೆ ಇಂಥ ಆಮಿಷಕ್ಕೆ ಮರುಳಾಗಿ ಪಕ್ಷವನ್ನು ಒಡೆದೇ ಬಿಡುತ್ತಿದ್ದರು.

    Reply
  4. Srinivasamurthy

    “ನಾವು ಸ್ವತಂತ್ರವಾಗಿ ಚಿಂತಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಯಾವ ಗುರುವಿನ ಅಗತ್ಯವೂ ಇಲ್ಲ.”
    ಈ ನಿಲುವು ತಪ್ಪಿನಿಂದ ಕೂಡಿದ ನಿಲುವು ಆಗಿದೆ. ಗುರು ಶಿಶ್ಯ ಸಂಬಂದವನ್ನು ಯಾವುದೇ ಕಾರಣಕ್ಕೂ ಗುಲಾಮಿ ಕಲ್ಪನೆಗೆ ಅನ್ವೈಕೆ ಮಾಡಲಾಗದು. ನೀವು ಒಂದು ವ್ಯವಸ್ತೆಯಲ್ಲಿ ಇರಬೇಕೆಂದರೆ ಮತ್ತೊಬ್ಬರ ನೆರವು ಬೇಕಾಗುತ್ತದೆ. ಆ ನೆರವನ್ನು ನೀಡಿದವರು ನಿಮ್ಮ ಗುರುಗಳಾಗುತ್ತಾರೆ. ನೀವು ಅವರನ್ನು ಗುರುವೆಂದು ಅಂದುಕೊಳ್ಳದಿರಬಹುದು. ಆದರೆ ನಿಮ್ಮ ಮತ್ತು ಅವರ ನಡುವೆ ತುಸು ಬೌದಿಕ ಬಿನ್ನತೆಗಳ ಹೊರತಾಗಿಯೂ ವಿದೇಯತೆ ಹಾಗೂ ಗವ್ರವ ಇರುತ್ತದೆ. ಆ ಸಂಬಂದವನ್ನೇ ಗುರು-ಶಿಶ್ಯ ಎಂದು ಕರೆಯಲಾಗುತ್ತದೆ ಅಶ್ಟೆ.
    ಒಂದೇ ತೆರನ ಆದರ್ಶಗಳ ಅಡಿಯಲ್ಲಿ ಬದುಕುವುದೂ ಕೂಡ ಗುಲಾಮಿಯ ಸಂಕೇತ. ಈ ಆದರ್ಶವನ್ನು ಹಿಡಿದು ಬಾಳುವವರೂ ಕೂಡ ಬೌದಿಕ ಗುಲಾಮಿಗಳು. ನೀವು ಮಾರ್ಕ್ಸ್…ತೆರನ ವ್ಯಕ್ತಿಗಳ ಚಿಂತನೆಯನ್ನು ಲೇಕನಕ್ಕೆ ಬಳಸುವುದನ್ನು ನಿಲ್ಲಿಸಿ ನಿಮ್ಮದೇ ಆಲೋಚನೆಗಳ ಲೇಕನವನ್ನು ಬರೆಯಿರಿ. ಆಗ
    “ನಾವು ಸ್ವತಂತ್ರವಾಗಿ ಚಿಂತಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಯಾವ ಗುರುವಿನ ಅಗತ್ಯವೂ ಇಲ್ಲ.” ಎಂಬ ಈ ನಿಮ್ಮ ನಿಲುವನ್ನು ಒಪ್ಪಬಹುದು.
    ಗುರು
    ಈ ಕಲ್ಪನೆಯನ್ನು ಕೇವಲ ಮೂರ್ತ ನಮೂನೆಯಲ್ಲಿ ನೋಡುವುದನ್ನು ಬಿಟ್ಟು ಅಮೂರ್ತ ನಮೂನೆಗೂ ವಿಸ್ತರಿಸಿಕೊಳ್ಳಬೇಕು. ಆಗ ಮಾತ್ರ ನಿಮಗೆ
    ಗುರು-ಶಿಶ್ಯ
    ಈ ಕಲ್ಪನೆಯು ಗುಲಾಮಿ ಕಲ್ಪನೆಯಲ್ಲವೆಂದು ತಿಳಿಯುತ್ತದೆ.
    ಪ್ರಜಾಪ್ರಬುತ್ವನೋ/ರಾಜಪ್ರಬುತ್ವನೋ/ಕಮ್ಯುನಿಸ್ಟೋ … ಇನ್ ಯಾವೇ ವ್ಯವಸ್ತೆಯಾಗಿದ್ದರೂ ಸರಿಯೆ ಮೂರ್ತ/ಅಮೂರ್ತ ನಮೂನೆಯ ಗುರು ಇರಲೇಬೇಕು. ಇಲ್ಲದಿದ್ದರೆ ಅದು ಅವನತಿಯ ಸಂಕೇತ ಎಂಬುವುದನ್ನು ತಾವು ತಿಳಿಯಲೇಬೇಕಾಗಿದೆ.

    Reply
  5. Ananda Prasad

    ಹಿಂದಿನ ಜ್ಞಾನದ ಆಧಾರದಲ್ಲಿ ಮುಂದಿನ ಜ್ಞಾನ ಅಥವಾ ಅನ್ವೇಷಣೆ ರೂಪುಗೊಳ್ಳುತ್ತದೆ. ಒಬ್ಬ ವಿಜ್ಞಾನಿ ಅಥವಾ ಚಿಂತಕನ ಅನ್ವೇಷಣೆ ಅಥವಾ ತತ್ವಗಳು ಹಿಂದಿನ ಹಲವರ ಜ್ಞಾನದ ಮೇಲೆ ರೂಪುಗೊಂಡಿರುತ್ತವೆ ಮತ್ತು ಅದರ ಮುಂದುವರಿಕೆಯೂ ಆಗಿರುತ್ತವೆ. ಹಾಗೆಂದು ಅವರನ್ನೆಲ್ಲಾ ಗುರುಗಳೆಂದು ಕರೆಯಬೇಕಾಗಿಲ್ಲ ಮತ್ತು ಯಾರೂ ಹಾಗೆ ಕರೆಯುವುದೂ ಇಲ್ಲ. ಇಲ್ಲಿ ನಾನು ಬರೆದದ್ದು ನನ್ನದೇ ಆಲೋಚನೆಗಳೇ ಹೊರತು ಯಾರದೇ ಆಲೋಚನೆಗಳ ನಕಲು ಅಲ್ಲ. ನನ್ನ ಆಲೋಚನೆಗಳು ರೂಪುಗೊಳ್ಳುವಲ್ಲಿ ಹಿಂದಿನ ಹಲವರ ಆಲೋಚನೆಗಳ ಪ್ರಭಾವ ಇರಬಹುದು, ಅದನ್ನು ಬೌದ್ಧಿಕ ಗುಲಾಮಗಿರಿ ಎನ್ನಲಾಗದು. ಗುಲಾಮಗಿರಿ ಯಾವಾಗ ಆಗುತ್ತದೆ ಎಂದರೆ ಹಿಂದಿನವರ ತಪ್ಪು ಆಲೋಚನೆಗಳನ್ನು ಇಂದು ಕೂಡ ಸರಿ ಎಂದು ಒಪ್ಪಿಕೊಂಡಾಗ ಮತ್ತು ಅದೇ ಇಂದಿಗೂ ಅನ್ವಯವಾಗಬೇಕು ಎಂದು ರಚ್ಚೆ ಹಿಡಿದಾಗ ಅದು ಬೌದ್ಧಿಕ ಗುಲಾಮಗಿರಿ ಆದೀತು. ಅಂಥ ಗುಲಾಮಗಿರಿಗೆ ವೈಜ್ಞಾನಿಕ ಮನೋಭಾವದಲ್ಲಿ ಸ್ಥಾನವಿಲ್ಲ. ನಮ್ಮ ಬಹುತೇಕ ಸನಾತನವಾದಿಗಳು ಹೀಗೆ ಹಿಂದಿನ ಜ್ಞಾನವೇ ಶ್ರೇಷ್ಠ ಹಾಗೂ ಅದುವೇ ಇಂದಿಗೂ ಅನ್ವಯವಾಗಬೇಕು ಎಂದು ರಚ್ಚೆ ಹಿಡಿಯುತ್ತಾರೆ. ಅದು ನಿಜವಾಗಿ ಗುಲಾಮಗಿರಿ. ಇಂಥ ರಚ್ಚೆ ಹಿಡಿಯುವುದರಲ್ಲಿ ಪ್ರತಿಗಾಮಿಗಳು ಎತ್ತಿದ ಕೈ.

    Reply
  6. ಜೆ.ವಿ.ಕಾರ್ಲೊ, ಹಾಸನ

    ಆಮ್ ಆದ್ಮಿ ಪಕ್ಷದ ನಡವಳಿಕೆಗಳು ಎಲ್ಲರಲ್ಲೂ ಕಸಿವಿಸಿಕೆ ಮೂಡಿಸಿರುವುದು ಸ್ಪಷ್ಟ! ಆ ಪಕ್ಷ, ಈ ಪಕ್ಷ ಅಂತಲ್ಲ, ಅವಕಾಶ ಸಿಕ್ಕರೆ ಪ್ರತಿಯೊಬ್ಬ ಭಾರತೀಯನೂ ಭ್ರಷ್ಟ ಎಂಬ ಸಿನಿಕತನ ತುಂಬಿರುವಾಗ, ಆಮ್ ಆದ್ಮಿ ಪಕ್ಷ ಮುತ್ತೈದೆಯಂತೆ ಕೊಸರಾಡುವುದು, ಅದು ಯಾವಾಗ ಹಾದರದಲ್ಲಿ ತೊಡಗುವುದು ಎಂದು ಕಾದಿರುವವರ ಸಂಖ್ಯೆಯೇ ಹೆಚ್ಚಾಗಿರುವಂತೆ ಕಾಣಿಸುತ್ತದೆ!

    Reply
  7. Srini

    Finally true colors of AAP is out…be joining hands with a party whom voters had rejected outright, AK has shows how shrewd and opportunist politician he is. He just started scored a self goal.

    Reply
  8. Ananda Prasad

    ಆಮ್ ಆದ್ಮಿ ಪಕ್ಷವು ಸರಿಯಾದ ಹಾಗೂ ವಿವೇಕಯುತವಾದ ಹೆಜ್ಜೆಯನ್ನೇ ಇಟ್ಟಿದೆ. ಇದು ಪಕ್ಷದ ಉಳಿವು ಹಾಗೂ ಬೆಳವಣಿಗೆಗೆ ಅನಿವಾರ್ಯವಾಗಿತ್ತು. ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಆಮ್ ಆದ್ಮಿ ದುಂಬಾಲು ಬಿದ್ದು ಪಡೆದುಕೊಂಡಿಲ್ಲ ಮಾತ್ರವಲ್ಲ ಅದು ಯಾವುದೇ ಶರತ್ತುಗಳಿಗೆ ಮಣಿದು ಕೂಡ ಬೆಂಬಲ ಪಡೆದದ್ದಲ್ಲ. ಬೇಷರತ್ ಬಾಹ್ಯ ಬೆಂಬಲ ನೀಡುತ್ತೇನೆ ಎಂದು ಕಾಂಗ್ರೆಸ್ ಪಕ್ಷವು ಹೇಳಿರುವ ಹಿನ್ನೆಲೆಯಲ್ಲಿ ಈಗ ಆಮ್ ಆದ್ಮಿ ಪಕ್ಷವು ಸರಕಾರ ರಚಿಸದೇ ಇದ್ದರೆ ಎರಡು ಪ್ರಮುಖ ವಿಷಯಗಳಲ್ಲಿ ಜನರಿಂದ ಟೀಕೆಗೆ ಒಳಗಾಗಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇತ್ತು. ಒಂದು ಜವಾಬ್ದಾರಿಯಿಂದ ನುಣುಚಿಕೊಂಡು ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ಪಲಾಯನ ಮಾಡಿದ ಬಗ್ಗೆ ಟೀಕೆ ವ್ಯಕ್ತವಾಗುತ್ತಿತ್ತು. ಎರಡನೆಯದು ನಾವು ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿದರೂ ಸರ್ಕಾರ ರಚಿಸದೇ ಜನರ ಮೇಲೆ ಮರುಚುನಾವಣೆ ಹೇರಿದ ಅಪವಾದಕ್ಕೆ ಆಮ್ ಆದ್ಮಿ ಪಕ್ಷ ಗುರಿಯಾಗುತ್ತಿತ್ತು. ಇವುಗಳಿಂದ ತಪ್ಪಿಸಿಕೊಳ್ಳಲು ಜನರ ಅಭಿಪ್ರಾಯ ಪಡೆಯಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದ್ದು ಅತ್ಯಂತ ವಿವೇಚನಾಯುಕ್ತ ನಡೆ ಹಾಗೂ ರಾಜಕೀಯ ಮುತ್ಸದ್ಧಿತನದ ಸಂಕೇತ. ಈಗ ಕಾಂಗ್ರೆಸ್ ಮಧ್ಯದಲ್ಲಿ ತನ್ನ ಬೆಂಬಲ ಹಿಂಪಡೆದು ಸರ್ಕಾರ ಕೆಡವಿದರೆ ಅದರ ಅನುಕಂಪದ ಲಾಭ ಆಮ್ ಆದ್ಮಿ ಪಕ್ಷಕ್ಕೆ ದೊರಕುವುದು ಸ್ಪಷ್ಟ ಹಾಗೂ ಇದು ಮುಂದೆ ನಡೆಯುವ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಇನ್ನಷ್ಟು ಬಲಿಷ್ಠ ವಾಗಿ ಹೊರಹೊಮ್ಮಲು ಅನುಕೂಲ ಮಾಡಲಿದೆ. ಜನರ ಅಭಿಪ್ರಾಯದ ವಾಸನೆಯನ್ನು ಅರವಿಂದ್ ಕೇಜ್ರಿವಾಲ್ ಸೂಕ್ಷ್ಮವಾಗಿ ಸ್ವಲ್ಪ ವಿಳಂಬವಾದರೂ ಪಡೆದುಕೊಳ್ಳುವ ವಿವೇಕ ತೋರಿದ್ದಾರೆ. ಜನಾಭಿಪ್ರಾಯವನ್ನು ಕಡೆಗಣಿಸಿ ಸರ್ಕಾರ ರಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ಆಮ್ ಆದ್ಮಿ ಪಕ್ಷ ಕುಳಿತರೆ ಅದರಿಂದ ಬಿಜೆಪಿ ಪಕ್ಷಕ್ಕೆ ಮರುಚುನಾವಣೆಯಲ್ಲಿ ಲಾಭವಾಗುವ ಸಂಭವ ಹೆಚ್ಚಿದೆ ಏಕೆಂದರೆ ಕಾಂಗ್ರೆಸ್ ತಾನಾಗಿಯೇ ಬೆಂಬಲ ಕೊಡಲು ಮುಂದೆ ಬಂದಿರುವಾಗ ಸರಕಾರ ರಚಿಸದಿದ್ದರೆ ಜವಾಬ್ದಾರಿಯನ್ನು ಇವರು ನಿಭಾಯಿಸುವವರಲ್ಲ ಎಂಬ ಸಂದೇಶ ಜನತೆಗೆ ಹೋಗುವ ಅಪಾಯ ಇತ್ತು. ಈ ಅಪಾಯದ ವಾಸನೆಯನ್ನು ಆಮ್ ಆದ್ಮಿ ಪಕ್ಷವು ಸರಿಯಾಗಿಯೇ ಗ್ರಹಿಸಿದೆ ಹಾಗೂ ಸರಕಾರ ರಚಿಸುವುದು ಅದಕ್ಕೆ ಅನಿವಾರ್ಯವಾಗಿತ್ತು, ಇದು ಅದರ ಆಯ್ಕೆಯಂತೂ ಆಗಿರಲಿಲ್ಲ.

    Reply
  9. Srini

    Whole people opinion poll is a gimmick…are public fools? They too time to strike a deal with Congress. It is highly undemocratic to join hands with a party which was kicked out by delhi public. Virtually, congress is back in delhi.

    Reply
  10. Ananda Prasad

    ಕಾಂಗ್ರೆಸ್ಸಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ನನಗನಿಸುವಂತೆ ಆಮ್ ಆದ್ಮಿ ಪಕ್ಷ ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಕಾಂಗ್ರೆಸ್ ತಾನಾಗಿಯೇ ಬಂದು ಬೆಂಬಲ ಸೂಚಿಸಿ ಇಕ್ಕಟ್ಟಿಗೆ ಸಿಕ್ಕಿಸದಿದ್ದರೆ ಆಮ್ ಆದ್ಮಿ ಪಕ್ಷ ಸರಕಾರ ರಚಿಸುವ ಯೋಚನೆಗೇ ಹೋಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.

    Reply
  11. Srini

    Isn’t it the same AK who swore in his kids that he won’t form any government with Congress support? He just stuck a deal with congress now…Shame on this kind of opportunist politics. Now when he don’t deliver (which is for sure as most of his promises aren’t practical), he has someone to blame…God bless this country!!!

    Reply
  12. Ananda Prasad

    ಕಾಂಗ್ರೆಸ್ಸಿನೊಂದಿಗೆ ಆಮ್ ಆದ್ಮಿ ಪಕ್ಷ ಯಾವುದೇ ಒಪ್ಪಂದ ಮಾಡಿರುವಂತೆ ಕಂಡುಬರುತ್ತಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸನ್ನು ಟೀಕಿಸುವುದನ್ನು ಮುಂದುವರಿಸುವುದು ಖಚಿತ ಮತ್ತು ಅದು ಕಾಂಗ್ರೆಸ್ಸಿನ ಭ್ರಷ್ಟಾಚಾರಗಳನ್ನೂ, ಇತರ ಪಕ್ಷಗಳ ಭ್ರಷ್ಟಾಚಾರಗಳನ್ನೂ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದು ಕೂಡ ಖಚಿತ. ಈ ಹಂತದಲ್ಲಿ ಕಾಂಗ್ರೆಸ್ ಬೆಂಬಲವನ್ನು ಹಿಂತೆಗೆದುಕೊಳ್ಳಬಹುದು. ಈಡೇರಿಸಲಾಗದ ಆಶ್ವಾಸನೆಗಳನ್ನು ಆಮ್ ಆದ್ಮಿ ಪಕ್ಷ ನೀಡಿರಲಾರದು. ಐಐಟಿ ಖರಗ್ಪುರದ ಪದವೀಧರ ಪ್ರತಿಭಾನ್ವಿತರಾದ ಕೇಜ್ರಿವಾಲ್ ಸ್ಪಷ್ಟ ಚಿಂತನೆ ಇಲ್ಲದೆ ಆಶ್ವಾಸನೆಗಳನ್ನು ನೀಡಿರಲಾರರು ಎಂದು ನನ್ನ ಅನಿಸಿಕೆ. ಒಂದು ವೇಳೆ ಅಂಥ ಆಶ್ವಾಸನೆ ನೀಡಿದ್ದರೂ ಅವರು ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಆಡಳಿತ ನೀಡಿದರೆ ಅದು ಅಂಥ ದೊಡ್ಡ ತಪ್ಪು ಆಗಲಾರದು. ಎರಡು ಬಲಿಷ್ಠ ರಾಷ್ಟ್ರೀಯ ಪಕ್ಷಗಳ ಅಗಾಧ ಹಣಬಲದ ನಡುವೆ ಸೆಣಸಿ ಪಕ್ಷವನ್ನು ಕಟ್ಟುವ ಹಂತದಲ್ಲಿ ಇದು ಹೊಸ ಪಕ್ಷದ ಕಡೆಗೆ ಜನರನ್ನು ಸೆಳೆಯಲು ಅನಿವಾರ್ಯವೂ ಆಗಿರಬಹುದು. ಅಷ್ಟಕ್ಕೂ ಬಿಜೆಪಿಯಂತೆ ಧರ್ಮ, ದೇವರ ಹೆಸರಿನಲ್ಲಿ ಜನರನ್ನು ಕೆರಳಿಸಿ ಪಕ್ಷ ಕಟ್ಟುವುದಕ್ಕಿಂತ ಇದು ಎಷ್ಟೋ ಮೇಲು ಎಂದು ನನ್ನ ಭಾವನೆ.

    Reply

Leave a Reply

Your email address will not be published. Required fields are marked *