ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


ಉತ್ತರ ಕರ್ನಾಟಕದ ಸಜ್ಜನ ರಾಜಕಾರಣಿ ಮತ್ತು ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾದ ಹುಬ್ಬಳ್ಳಿಯ ಶಾಸಕ ಜಗದೀಶ್ ಶೆಟ್ಟರ್ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಹಾಗೂ ನಾಲ್ಕು ವರ್ಷಗಳ ಅವಧಿಯ ಬಿ.ಜೆ.ಪಿ. ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಇನ್ನೊಂದು ವರ್ಷದ ಅವಧಿಯಲ್ಲಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಆದರೆ, ಸಧ್ಯದ ಬಿ.ಜೆ.ಪಿ. ಪಕ್ಷದ ಆಂತರೀಕ ಗೊಂದಲಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಶೆಟ್ಟರ್ ಪಾಲಿಗೆ ಮುಳ್ಳಿನ ಹಾಸಿಗೆಯಾಗುವ ಲಕ್ಷಣಗಳು ಕಾಣತೊಡಗಿವೆ.

ಆರ್.ಎಸ್.ಎಸ್. ಸಂಘಟನೆಯ ನಿಷ್ಟಾವಂತ ಅನುಯಾಯಿಯಾಗಿ, ಬಿ.ಜೆ.ಪಿ. ಕಾರ್ಯಕರ್ತನಾಗಿ ಮೂರು ದಶಕಗಳ ಕಾಲ ದುಡಿದು, 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್, ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಣಿಸಿ, ವಿಧಾನಸಭೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಮೃದು ಹೃದಯದ ಹಾಗೂ ಮಿತವಾದ ಮಾತಿಗೆ ಹೆಸರಾದವರು. ಬಿ.ಜೆ.ಪಿ. ಪಕ್ಷದಲ್ಲಿ ಇರುವ ಹಲವು ಸಜ್ಜನ ರಾಜಕಾರಣಿಗಳಲ್ಲಿ ಇವರೂ ಒಬ್ಬರು.

ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ, ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ, ವಿಧಾನಸಭೆಯ ಅದ್ಯಕ್ಷರಾಗಿ,ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣಾಭಿವೃದ್ಧಿಯ ಸಚಿವರಾಗಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೆಟ್ಟರ್ ಈಗ ಮುಖ್ಯಮಂತ್ರಿಯಾಗದ್ದಾರೆ. ಆದರೆ, ಅವರ ಮುಂದಿನ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ.

ಎಡ ಮತ್ತು ಬಲಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು. ಜೊತೆಗೆ ತಲೆಯ ಮೇಲೆ ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪನವರ ಭಯ ಮತ್ತು ಅತಂತ್ರತೆಯ ತೂಗುಕತ್ತಿ,  ಇವುಗಳ ನಡುವೆ ಕಳಸವಿಟ್ಟಂತೆ ಸಚಿವ ಸ್ಥಾನ ಸಿಗದ ಶಾಸಕರ ಅಸಹನೆ, ಅಸಹಕಾರ; ಇವುಗಳನ್ನು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಜಗದೀಶ್ ಶೆಟ್ಟರ್ ಪಾಲಿಗೆ ಸುಲಭದ ಸಂಗತಿಯಲ್ಲ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ಸರ್ಕಾರದ ಹಗರಣಗಳು, ಸಚಿವರ ನಡುವಳಿಕೆಗಳು, ಪಕ್ಷದ ನಾಯಕರ ಜಾತಿ ಸಂಘರ್ಷ ಇವುಗಳಿಂದ ಜನಸಾಮಾನ್ಯರಷ್ಟೇ ಅಲ್ಲ, ಸ್ವತಃ ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿ.ಜೆ.ಪಿ. ಸರ್ಕಾರದಿಂದಾಗಲಿ, ಅಥವಾ ನೂತನ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಪವಾಡಗಳನ್ನು ಯಾರೊಬ್ಬರು ನಿರಿಕ್ಷಿಸಿಲ್ಲ.

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ, ಅವುಗಳನ್ನ ಕಸಾಯಿಖಾನೆಗೆ ಅಟ್ಟಿ ಇಲ್ಲಿನ ಜನ ದೂರದ ನಗರಗಳಿಗೆ ವಲಸೆ ಹೋಗುತಿದ್ದಾರೆ. ಮೂರು ವರ್ಷದ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಉತ್ತರ ಕರ್ನಾಟಕದ ಜನರಿಗೆ ಈವರೆಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಗುರಿ ಹಾಕಿಕೊಂಡಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗಳಲ್ಲಿ ಈವರೆಗೆ ಸಿದ್ಧವಾಗಿರುವ 33 ಸಾವಿರ ಮನೆಗಳು ಧಾನಿಗಳು ಕಟ್ಟಿಸಿಕೊಟ್ಟ ಮನೆಗಳು ಮಾತ್ರ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಭೂ ಹಗರಣ, ಸಚಿವರ ಮಿತಿ ಮೀರಿದ ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಹಗರಣ, ಇವುಗಳ ಫಲವಾಗಿ ಸಚಿವ ಸಂಪುಟ ಸದಸ್ಯರ ಸರತಿಯ ರಾಜಿನಾಮೆ ಇವೆಲ್ಲವೂ ಶಿಸ್ತಿಗೆ ಹೆಸರಾದ ಬಿ.ಜೆ.ಪಿ. ಪಕ್ಷದ ಮುಖಕ್ಕೆ ರಾಷ್ಟ್ರ ಮಟ್ಟದಲ್ಲಿ ಕಪ್ಪು ಮಸಿ ಬಳಿದಿವೆ. ಈಗ ಇವುಗಳ ಜೊತೆಗೆ ಜಾತಿ ರಾಜಕಾರಣ ಹೊಸದಾಗಿ ಸೇರ್ಪಡೆಯಾಗಿದ್ದು, ಇಂತಹ ಬೆಳವಣಿಗೆಗಳು ಪ್ರಜ್ಞಾವಂತರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ಮೂಡಿಸಿವೆ.

ಅತ್ಯಂತ ಸಜ್ಜನಿಕೆ ಸ್ವಭಾವದ ಜಗದೀಶ್‌ ಶೆಟ್ಟರಿಗೆ ಅವರ ಗುಣವೇ ಅವರ ಪಾಲಿಗೆ ಮಾರಕವಾಗುವ ಸಂಭವವಿದೆ. ಇಲ್ಲಿಯವರೆಗೆ, ಯಡಿಯೂರಪ್ಪನವರನ್ನು ಓಲೈಕೆ ಮಾಡಿಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿದ, ಅಸಮರ್ಥ ಸಚಿವರುಗಳೆಲ್ಲಾ ಈಗಿನ ಶೆಟ್ಟರ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವುದು ನಿರಾಶೆಯ ಸಂಗತಿ.

ಈವರೆಗೆ ಹೆಚ್ಚುವರಿಯಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗದ, ರಾಜ್ಯದ ರಸ್ತೆಗಳನ್ನು ದುರಸ್ತಿ ಮಾಡಲಾಗದ, ಗ್ರಾಮೀಣ ಜನತೆಗೆ ಕುಡಿಯುವ ನೀರು ಒದಗಿಸಲಾಗದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಬಿ.ಜೆ.ಪಿ. ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದ ಜನತೆ ಜಗದೀಶ್ ಶೆಟ್ಟರ್‌ರಿಂದ ಏನು ನಿರಿಕ್ಷಿಸಲು ಸಾಧ್ಯ?

ಉಳಿದ ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವ ಮಾತು ಕೇವಲ ಅವರ ಆವೇಶದ ಮಾತಾಗಬಹುದು. ಏಕೆಂದರೆ, ಹನ್ನೊಂದು ತಿಂಗಳ ಕಾಲ ಯಾವುದೇ ಹಗರಣಗಳಿಗೆ ಎಡೆ ಮಾಡಿಕೊಡದಂತೆ ಆಡಳಿತ ನಡೆಸಿದ ಸದಾನಂದ ಗೌಡರಿಗೆ ಪಕ್ಷ ನೀಡಿರುವ ಬಳುವಳಿ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

ಆಡಳಿತ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷದ ಅವಧಿ ಅಗತ್ಯವಿರುವಾಗ, ಸಮರ್ಥ ಆಡಳಿತವನ್ನು ಜಗದೀಶ್ ಶೆಟ್ಟರ್ ಮತ್ತು ಅವರ ಮಂತ್ರ ಮಂಡಲದಿಂದ  ಬಯಸಲು ಸಾಧ್ಯವಿಲ್ಲ. ಯಡಿಯೂರಪ್ಪನಂತಹ ಮೋಹಿನಿ ಭಸ್ಮಾಸುರನ ಮನಸ್ಸಿರುವ ವ್ಯಕ್ತಿಯಿಂದ ಆಯ್ಕೆಯಾಗಿರುವ ಜಗದೀಶ್‌ ಶೆಟ್ಟರ್ ಈವರಗೆ ತಾವು ಕಾಪಾಡಿಕೊಂಡು ಬಂದಿದ್ದ ತಮ್ಮ ವರ್ಚಸ್ಸನು ಹಾಗೇ ಉಳಿಸಿಕೊಂಡರೆ ಸಾಕು ಅದು ಅವರ ಪಾಲಿಗೆ ದೊಡ್ಡ ಸಾಧನೆಯಾಗಬಲ್ಲದು. ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ, ’ರೈಟ್ ಪರ್ಸನ್ ಇನ್ ದ ರಾಂಗ್ ಪ್ಲೇಸ್’ ಎಂದು. ಅದೇ ಸ್ಥಿತಿ ಈಗ ಶೆಟ್ಟರಿಗೆ ಎದುರಾಗಿದೆ.

3 thoughts on “ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಸವಾಲುಗಳು

  1. anand prasad

    ಹಿಂದಿದ್ದ ಎಲ್ಲ ಕಳಂಕಿತ ಸಚಿವರು ಶೆಟ್ಟರ್ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದಿರುವಾಗ ಸ್ವಚ್ಛ ಆಡಳಿತ ನೀಡುವುದು ಅಸಂಭವ. ಬಹಳ ಸ್ವಚ್ಛ ಆಡಳಿತ ನೀಡಿದ್ದೇನೆ ಎಂದು ಬೊಬ್ಬೆ ಹಾಕುತ್ತಿರುವ ಸದಾನಂದ ಗೌಡರಿಗೆ ಸ್ವಚ್ಛ ಆಡಳಿತ ನೀಡಲು ಸಹಾಯಕವಾಗಬಲ್ಲ ಒಬ್ಬ ಉತ್ತಮ ಲೋಕಾಯುಕ್ತರ ನೇಮಕ ಮಾಡುವ ದಿಟ್ಟತನ ಇರಲಿಲ್ಲ. ಲೋಕಾಯುಕ್ತರ ನೇಮಕಕ್ಕೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಹೈಕೋರ್ಟ್ ನೀಡಿದ ಮೇಲೂ ಸದಾನಂದ ಗೌಡರು ಅದನ್ನು ಗೌರವಿಸದೆ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶಿಸುತ್ತೇನೆ ಎಂದು ಹೋಗಿರುವುದು ಜನತೆಗೆ ಬಗೆದಿರುವ ದ್ರೋಹವೂ ಹೌದು. ಇಂಥ ಪರಿಸ್ಥಿತಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವುದು ವಿಪರ್ಯಾಸ. ಲೋಕಾಯುಕ್ತಕ್ಕೆ ಒಬ್ಬ ಉತ್ತಮ ನಿಷ್ಪಕ್ಷಪಾತ ವ್ಯಕ್ತಿಯನ್ನು ನೇಮಕ ಮಾಡಿದ್ದಿದ್ದರೆ ಅವರು ಕಳಂಕಿತ ಸಚಿವರಿಗೆ ಸೂಕ್ತ ಬಿಸಿ ಮುಟ್ಟಿಸುತ್ತಿದ್ದರು. ಆಗ ಸ್ವಚ್ಛ ಆಡಳಿತ ನೀಡಲು ಸ್ವಲ್ಪವಾದರೂ ಸಹಾಯ ಆಗುತ್ತಿತ್ತು.

    Reply
  2. prakashchandra

    INNELLI SWAMY SWATCHA ADALITHA..? IRUVASHTU DINA HECHU-KADIMEYAAGADANTHE ECHARAVAAGI IRABEKAADA SHETTAR RAAJYADA ABHIVRUDDHIGE SHRAMISUVUDU ASAADHYADA MAATHU.

    Reply
  3. Mathihalli Madan Mohan

    t is going to be very difficult for Shettar to govern. Heis caught between and devil and deep sea, of the Yeddyurappa group on oneside, the Sadananda Gowda group of vokkalinga legislators on the other. Besides Ananthkumar is breathing down on his neck.
    Firstly it is difficult for shettar to have any control over his colleagues. The Yeddyruppa faction has already taste how they could work with impunity and openly defy the Chief Minister. Since all of them know that it is Yeddyurappa who could call the tune, they would prefer to be more loyal to the latter than the Chief Minsiter. Puttaswamy the new entrant to the cabinet and close confidant of the Yeddyurappa has already made it clear where his loyalties are. Yeddyurappa group has lot of vested interest in ensuring that Shettar is a failure so that when the time comes next the seat may be kept warm for the mentor to adorn. Shettar is doomed to fail. The dies are cast

    Reply

Leave a Reply

Your email address will not be published. Required fields are marked *