ಸ್ಕಾರ್ಫ್ ನಿಷೇಧ – ಕೋಮುವಾದಿ ಕಾಲೇಜುಗಳ ಸಮಾನತೆಯ ನಿಯಮ

– ನವೀನ್ ಸೂರಿಂಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಬುಗಿಲೆದ್ದಿದೆ. ಪುತ್ತೂರಿನ ರಾಮಕುಂಜೇಶ್ವರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ್ದು 45 ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ತರಗತಿಗೆ ಗೈರು ಹಾಜರಾಗಿದ್ದಾರೆ. ಹಿಂದುತ್ವ ಪ್ರಚೋದಿಸುವ ಕೋಮುವಾದಿಗಳು ಶಾಲಾ ಕಾಲೇಜುಗಳಲ್ಲಿ ಸಮಾನತೆಯ ನೆಪದಲ್ಲಿ ಮುಸ್ಲಿಂ ವಿರೋಧಿಯಾಗಿ ಸ್ಕಾರ್ಫ್ ನಿಷೇಧಕ್ಕೆ ಬೆಂಬಲ ಸೂಚಿಸಿದರೆ, ಕಮ್ಯೂನಿಸ್ಟರು ಮತ್ತು ಪ್ರಗತಿಪರರು “ಸ್ಕಾರ್ಫ್ ತೊಡಲೇ ಬೇಕು ಎನ್ನುವುದು ಮೂಲಭೂತವಾದಿಗಳ ಹುನ್ನಾರವಾಗಿರುವುದರಿಂದ ವಿದ್ಯಾರ್ಥಿನಿಯರು ಸ್ಕಾರ್ಫ್ ತೊರೆಯಬೇಕು” ಎನ್ನುತ್ತಾರೆ. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಮಾ ಅತೆ ಇಸ್ಲಾಮೀ ಹಿಂದ್ ನಂತಹ ಮುಸ್ಲಿಂ ಸಂಘಟನೆಗಳು ಕಾಲೇಜಿಗೆ ತೆರಳೋ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಕಡ್ಡಾಯ ಎಂಬ ನಿಲುವಿಗೆ ಬದ್ಧವಾಗಿದೆ. ಒಟ್ಟಾರೆ ಇಷ್ಟೊಂದು ವಿಷಯಗಳ ಜಂಜಾಟದ ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿರುವವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು. ಪ್ರಗತಿಪರವಾದ ವೈಚಾರಿಕವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಧರ್ಮಾತೀತ ಮತ್ತು ಜಾತ್ಯಾತೀತ ಮನೋಭಾವನೆ ಬೆಳೆಯುವ ರೀತಿಯಲ್ಲಿ ಶಿಕ್ಷಣ ನೀಡದೆ ಏಕಾಏಕಿ ಸ್ಕಾರ್ಫ್ ನಿಷೇಧಿಸುವುದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದಂತಾಗುತ್ತದೆ.

“ಶಿಕ್ಷಣದಲ್ಲಿ ಧರ್ಮ ಬೆರೆಸಲು ಸಾಧ್ಯವಿಲ್ಲ. ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿನಿಯರು ಪ್ರತ್ಯೇಕರಾಗಿ ಕಾಣುವುದರಿಂದ ವಿದ್ಯಾರ್ಥಿಗಳಲ್ಲಿ ಅಸಮಾನ ಭಾವನೆ ಬರುತ್ತದೆ. ಸ್ಕಾರ್ಫ್ ಬೇಕು ಎನ್ನುವ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬೆಂಬಲವಿದೆ” ಎಂದು ಮಾಮೂಲಾಗಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕಾರ್ಫ್ ನಿಷೇಧ ಮಾಡಲಾಗಿದೆ. ಸ್ಕಾರ್ಫ್ ನಿಷೇಧ ಮಾಡಿರೋ ಕಾಲೇಜುಗಳು ಯಾವುದು ಮತ್ತು ಅಲ್ಲಿರುವ ಶಿಕ್ಷಣ ವ್ಯವಸ್ಥೆ ಯಾವ ತರಹದ್ದು ಎಂಬುದನ್ನು ಅವಲೋಕಿಸಿದರೆ ಸ್ಕಾರ್ಫ್‌ನ್ನು ಏಕಾಏಕಿ ನಿಷೇಧಿಸುವುದು ಸರಿಯೇ ಎಂಬುದರ ಬಗ್ಗೆ ಸರಳವಾಗಿ ನಿರ್ಣಯಕ್ಕೆ ಬರಬಹುದು.

ತರಗತಿಯಲ್ಲಿ ಮೊದಲ ಬಾರಿಗೆ ಸ್ಕಾರ್ಫ್ ನಿಷೇಧ ಮಾಡಿದ್ದು ಬಂಟ್ವಾಳದ ಎಸ್ವಿಎಸ್ ಕಾಲೇಜು. ಅಂದರೆ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು. ಹೆಸರೇ ಹೇಳುವಂತೆ ಇದೊಂದು ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿನ ಎಲ್ಲಾ ತರಗತಿ ಕೊಠಡಿಗಳಲ್ಲಿ ಹಿಂದೂ ದೇವರ ಫೋಟೋ ಇದೆ. ಸಾಲದ್ದಕ್ಕೆ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಂಡವರ ಫೋಟೋಗಳೂ ಇವೆ. ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್ ಮತ್ತು ಹಿಂದೂ ಸಂಘಟನೆಗಳಲ್ಲಿ ಮುಖ್ಯಸ್ಥರಾಗಿರುವವರೇ ಇಲ್ಲಿನ ಆಡಳಿತ ಮಂಡಳಿ ಸದಸ್ಯರು. ಇವರ್ಯಾಕೆ ಸ್ಕಾರ್ಫನ್ನು ಏಕಾಏಕಿ ನಿಷೇಧ ಮಾಡಿದರು ಎಂಬುದನ್ನು ಊಹಿಸಲು ಕಷ್ಟಸಾಧ್ಯವೇನಲ್ಲ. ಅದಕ್ಕಿಂತಲೂ ಮುಖ್ಯವಾಗಿ ಎಸ್ವಿಎಸ್ ಕಾಲೇಜಿನ ಪ್ರತೀ ತರಗತಿಯಲ್ಲಿ ಹಿಂದೂ ದೇವರ ಫೋಟೋ ಇಟ್ಟು, ವೈಚಾರಿಕ, ಸಂವಿಧಾನಿಕ ಬದ್ಧತೆಯ ಪಾಠ ನಿರೀಕ್ಷೆಯೇ ಸಾಧ್ಯವಿಲ್ಲ.

ಎಸ್ವಿಎಸ್ ನಂತರ ಸುದ್ಧಿಯಾಗಿದ್ದು ಮೂಡಬಿದ್ರೆಯ ಜೈನ್ ಕಾಲೇಜು. ಇದೂ ಕೂಡಾ ಖಾಸಾಗಿ ಕಾಲೇಜಾಗಿದ್ದು ಒಂದು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿ ಜೈನ ಸಂಪ್ರದಾಯಗಳನ್ನು ನಾಜೂಕಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಎಲ್ಲಾ ಯತ್ನಗಳನ್ನು ಕಾಲೇಜು ಮಾಡುತ್ತದೆ. ಇಲ್ಲಿನ ಪ್ರಾರ್ಥನೆಯಿಂದ ಹಿಡಿದು ಕಾಲೇಜಿನ ಕಾರ್ಯಕ್ರಮಗಳ ಮೂಲಕ ಜೈನ ಜೀವನ ಪದ್ಧತಿಯನ್ನು ಅನುಷ್ಠಾನ ಮಾಡುವ ಯತ್ನ ನಡೆಸಲಾಗುತ್ತದೆ. ಇಲ್ಲಿನ ತರಗತಿಯ ಕೊಠಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಫೋಟೋ ಇದೆ.

ನಂತರ ಸ್ಕಾರ್ಫ್ ವಿವಾದ ತಲೆದೋರಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಇದೊಂದು ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಅಡಿಯಲ್ಲಿ ಬರೋ ಶಿಕ್ಷಣ ಸಂಸ್ಥೆ. ಇಲ್ಲಿನ ಪ್ರತೀ ಕೊಠಡಿ ಮಾತ್ರವಲ್ಲ ಒಂದು ಸೆಂಟಿ ಮೀಟರ್ ಜಾಗ ಇದ್ದರೂ ಅಲ್ಲೆಲ್ಲಾ ಶಿಲುಬೆಗಳನ್ನು ನೇತಾಡಿಸಿದ್ದಾರೆ. ಎಲ್ಲೆಲ್ಲಿ ಗೋಡೆ ಖಾಲಿ ಇದೆಯೋ ಅಲ್ಲಲ್ಲಿ “ಏ ಪರಲೋಕದಲ್ಲಿರುವ ಪ್ರಭುವೇ……” ಎಂಬ ಉದ್ಘಾರಗಳನ್ನು ಹಾಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬಾರದು ಎಂದು ಹೇಳುವ ಇಲ್ಲಿನ ಪ್ರಾಂಶುಪಾಲರು ಒರ್ವ ಪಾದ್ರಿ. ಅವರು ಪಾದ್ರಿಗಳು ತೊಡುವ ಬಿಳಿ ನಿಲುವಂಗಿ ತೊಟ್ಟೇ ಬರುತ್ತಾರೆ. ಇಲ್ಲಿನ ಶಿಕ್ಷಕಿಯರಲ್ಲಿ ಅನೇಕರು ನನ್‌ಗಳಾಗಿದ್ದು ಅವರ ಧಾರ್ಮಿಕ ತೊಡುಗೆ ಹಾಕಿಕೊಂಡೇ ಪಾಠ ಮಾಡುತ್ತಾರೆ.

ಇದೀಗ ಸ್ಕಾರ್ಫ್ ವಿವಾದ ಏರ್ಪಟ್ಟಿದ್ದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಾರ್ಗದರ್ಶಕರಾಗಿರೋ ಪುತ್ತೂರು ರಾಮಕುಂಜೇಶ್ವರ ಕಾಲೇಜಿನಲ್ಲಿ. ಹೇಳಿಕೇಳಿ ಇಲ್ಲಿನ ಹೋರ್ಡಿಂಗ್‌ನಿಂದ ಹಿಡಿದು ಎಲ್ಲಾ ತರಗತಿ ಕೊಠಡಿಗಳಲ್ಲಿ ಪೇಜಾವರ ಶ್ರೀಗಳ ಫೋಟೋ ಅಳವಡಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರ ಕೈಯ್ಯಲ್ಲಿ ಕೇಸರಿ ದಾರ ಇದೆ. ಇಲ್ಲಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಿಂದೂ ಸಂಘಟನೆಗಳಿಗೆ ಸೇರಿದವರು. ಈ ಎಲ್ಲಾ ಕಾಲೇಜು ಆಡಳಿತ ಮಂಡಳಿಯವರು ಯಾವ ರೀತಿ ಸಮಾನತೆಯ ಹರಿಕಾರರು ಎಂಬುದನ್ನು ಊಹಿಸಬಹುದು.

ಮೇಲೆ ಹೇಳಿರುವ ಕಾಲೇಜುಗಳನ್ನು ಹೊರತು ಪಡಿಸಿ ಬೇರಾವುದೇ ಕಾಲೇಜುಗಳಲ್ಲಿ ಸ್ಕಾರ್ಫ್ ಅಥವಾ ಶಿರವಸ್ತ್ರ ನಿಷೇಧ ಮಾಡಿಲ್ಲ. ಈ ಕಾಲೇಜುಗಳು ಸ್ಕಾರ್ಫ್ ನಿಷೇಧಿಸುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಅಸಂವಿಧಾನಿಕವಾಗುತ್ತದೆ.

ತರಗತಿಯಲ್ಲಿ ಸ್ಕಾರ್ಫ್ ಏಕಾಏಕಿ ನಿಷೇದಿಸಿದರೆ ಮೂಲಭೂತವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸ್ಕಾರ್ಫ್ ನಿಷೇಧ ಮೂಲಭೂತವಾದಿಗಳಿಗೆ ಲಾಭವೇ ಹೊರತು ನಷ್ಠವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ. ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಕಟ್. ಮೂಲಭೂತವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಇನ್ನು ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಬೇರೆ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ತೊಕ್ಕೊಟ್ಟಿನ ಹಿರಾ ದಂತಹ ಮುಸ್ಲಿಂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೇರೆ ಸಮುದಾಯದ ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ. ಇಂತಹ ಕಾಲೇಜಿನಲ್ಲಿ ಬುರ್ಕಾ ಕಡ್ಡಾಯ. ಇಲ್ಲಿ ಯುವಕರಿಗೆ ಪ್ರವೇಶ ಇಲ್ಲ. ಇಲ್ಲಿ ಕಲಿತ ವಿದ್ಯಾರ್ಥಿನಿಯರು ಅದೆಷ್ಟು ಸಂಕುಚಿತವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ ಎಂಬುದೇ ದುರಂತ. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಬ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಅಥವಾ ಸ್ಕಾರ್ಫ್ ಬೇಕೇ ಬೇಡವೇ ಎಂಬ ಒಂದೇ ಪ್ರಶ್ನೆ ಕೇಳುವುದಾದರೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಯಾವುದೇ ವ್ಯಕ್ತಿಯ ಬಟ್ಟೆಯನ್ನು ಯಾವುದೋ ಒಂದು ಧರ್ಮ ಅಥವಾ ವ್ಯಕ್ತಿ ನಿರ್ಧಾರ ಮಾಡುವುದೇ ಅಸಂವಿಧಾನಿಕ. ವಿದ್ಯಾರ್ಥಿನಿಯರಲ್ಲಿ ಸ್ಕಾರ್ಫ್ ಹಾಕಲೇ ಬೇಕು ಎಂಬ ಹಠದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದೆ ಎಂಬ ವಾದ ಸತ್ಯವಾದರೂ ಅಂತಹ ಮೂಲಭೂತವಾದಿತನವನ್ನು ಹೋಗಲಾಡಿಸುವ ಬಗ್ಗೆ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಸಮಾನತೆ ಎಂದರೆ ಯೂನಿಫಾರಂ ಹಾಕುವುದಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದೂ ಅಲ್ಲ. ಅದೊಂದು ಮನಸ್ಥಿತಿ. ವಿದ್ಯಾರ್ಥಿಗಳಲ್ಲಿ ಅಂತಹ ಸಮಾನತೆಯ ಮನಸ್ಥಿತಿಯನ್ನು ಬೆಳೆಸಲು ಸ್ಕಾರ್ಫ್ ನಿಷೇಧಿಸಿರುವ ಈ ಕಾಲೇಜುಗಳು ಏನು ಕೆಲಸ ಮಾಡಿವೆ?

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ, ಧರ್ಮಾಧಿಕಾರಿಗಳ ಫೋಟೋ, ಶಿಲುಬೆಗಳನ್ನು ಕಿತ್ತು ತೆಗೆಯಲಿ. ಶಿಕ್ಷಕರು ಶಿಕ್ಷಕರಂತೆಯೇ ತರಗತಿಗೆ ಬಂದು ಪಾಠ ಮಾಡಲಿ. ವೈಚಾರಿಕವಾದ, ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇದೆ ಎನ್ನಬಹುದು.

10 comments

 1. ಸಮಾಜದಲ್ಲಿ ಹತ್ತಾರು ವಿಕೃತ ಅಸಮಾನತೆಗಳನ್ನು ಇಟ್ಟುಕೊಂಡು ಕೇವಲ ಶಾಲೆಯಲ್ಲಿ ಸಮಾನತೆಗಾಗಿ ಸಮವಸ್ತ್ರ ಬೇಕೆಂದು ಪ್ರತಿಪಾದಿಸುವುದು ಅವಿವೇಕ ಹಾಗೂ ಮೂರ್ಖತನ. ಕೆಲವು ವರ್ಷಗಳ ಹಿಂದೆ ಕಾಲೇಜುಗಳಲ್ಲಿ ಸಮವಸ್ತ್ರ ಇರಲೇ ಇಲ್ಲ. ಕಾಲೇಜುಗಳಲ್ಲಿ ಸಮವಸ್ತ್ರದ ಅಗತ್ಯ ಇಲ್ಲ. ಸಭ್ಯ ಉಡುಪುಗಳನ್ನು ಧರಿಸಬೇಕು ಎಂಬ ನಿಯಮ ಇದ್ದರೆ ಧಾರಾಳ ಸಾಕು. ಮೂಲಭೂತವಾದ ದಕ್ಷಿಣ ಕನ್ನಡದ ಕೆಲವು ಶಾಲೆ ಕಾಲೇಜುಗಳಲ್ಲಿ ಯಾವ ರೀತಿ ವಿಕೃತ ನರ್ತನ ಮಾಡುತ್ತಿದೆ ಎಂಬುದು ಲೇಖನದಿಂದ ತಿಳಿದುಬರುತ್ತದೆ.

 2. Illi bere dhrmada hulukannu torisutta tavu udaravadigalu endu torisikolluva manobhavashte kelasa maduttiruvudu. Shoshane nedeyuttiruvudu innondu dharnadinda embudannu torisalu horatiruva shikshana samstegalu eno sadhane maduva reetiyalli matte vidhyartiniyarannu shoshisuttide. illi shikshana doreyabekadaddu mukya mattu adaridinda arivu belesabekadadu mukaya.

 3. ಸಾರ್. ಸರಿಯಾಗಿ ಹೇಳಿದ್ದಿರಾ. ಮೊದಲು ಈ ಜನ ತಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆತರಲ್ಲಿ ಮತ್ತು ಕಾಲೇಜಿನ ಗೋಡೆಗಳಲ್ಲಿ ಮಹಾನುಭವರ ಪೋಟೋಗಳನ್ನು ತೆಗೆದು ಬೇರೆಯವರಿಗೆ ಬುದ್ಧಿ ಹೇಳಲಿ.ಮುಸ್ಲಿಂ ಹೆಣ್ಣು ಮಕ್ಕಳು ಕಾಲೇಜಿಗೆ ಬರುವುದು ಅನೇಕ ಕಷ್ಷಗಳ ಮಧ್ಯೆ ಜೊತೆಗೆ ಇಂತಹ ಘಟನೆಗಳು ಅವರನ್ನು ಮತ್ತಷ್ಟು ಅಕ್ಷರ ವಂಚಿತರನ್ನಾಗಿ ಮಾಡುತ್ತವೆ. ಲೇಖನ ತುಂಬಾ ಉತ್ತಮವಾಗಿದೆ.

 4. ಮೊಟ್ಟ ಮೊದಲು ತಿಳಿದುಕೊಳ್ಳಿ ಇದೇನು ಸರ್ಕಾರೀ ಕಾಲೇಜ್ ಅಲ್ಲ. ಅಷ್ಟಕ್ಕೂ ಅಲ್ಲಿನ ನಿಯಮಗಳಿಗೆ ಬದ್ದರದವರು ಓದಬಹುದು. ಇಷ್ಟವಿಲ್ಲದಿದ್ದರೆ ಬಿಡಬಹುದು. ಯಾರ ಒತ್ತಾಯವೂ ಇಲ್ಲ. ಸಮಸ್ಯೆಯ ಏಕಮುಖ ವಿಶ್ಲೇಷಣೆ ಖಂಡಿತ ಪರಿಹಾರ ಅಲ್ಲ.

 5. “ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ…” ಎಂದಿದ್ದಾರೆ ಲೇಖಕರು. ಸ್ಕಾರ್ಫ್​ ಅನ್ನೋದು ಹುಡುಗಿಯರಿಗೆ ಸುರಕ್ಷತೆ ನೀಡುತ್ತದೆಯೆ? ಒಂದು ವೇಳೆ ಹೌದು ಅಂತಾದ್ರೆ ಎಲ್ಲ ಹುಡುಗಿಯರೂ (ಹಿಂದೂ ಕ್ರಿಶ್ಚಿಯನ್​ ಸೇರಿದ ಹಾಗೆ)ಸ್ಕಾರ್ಫ್​ ಧರಿಸಿ ಶಾಲೆಗೆ ಹೋಗೋದು ಒಳ್ಳೆಯದು.

  ಪ್ರಶ್ನೆ ಇರೋದು ಮೂಲಭೂತವಾದಿಗಳದ್ದು; ಇಲ್ಲಿ ಸ್ಕಾರ್ಫ್ ಕೇವಲ ಧಾರ್ಮಿಕ ಮತ್ತು ಮಹಿಳೆಯರನ್ನ ಮುಷ್ಠಿಯಲ್ಲಿಟ್ಕೋಬೇಕು ಅನ್ನುವ ಪುರುಷ ಪುಂಗವರ ಅಧಿಕಾರ ಚಲಾವಣೆಯ ಸಂಕೇತವಷ್ಟೇ. ಶಾಲೆಯಲ್ಲಿ ಅದನ್ನು ನಿಷೇಧ ಮಾಡಿದಾಕ್ಷಣ ಅವರ ಧರ್ಮಕ್ಕಾಗಲೀ, ಹೆಣ್ಣುಮಕ್ಕಳ ಸುರಕ್ಷತೆಗಾಗಲೀ ಯಾವ ಚ್ಯುತಿಯೂ ಬರೋದಿಲ್ಲ. ಉಳಿದ ಧರ್ಮದ ಹೆಣ್ಣುಮಕ್ಕಳು ಅಂಥದ್ದನ್ನು ಧರಿಸದೆ ಕಾಲೇಜಿಗೆ ಬೆಳಿಗ್ಗೆ ಹೋಗಿ ಸಂಜೆ ವಾಪಸ್​ಬರೋದಿಲ್ವೇ?
  ಎಲ್ಲ ಧರ್ಮದ ಮಕ್ಕಳನ್ನೂ ಸೇರಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕೊಡ್ತಾ ಇರೋ ಶಾಲೆಗಳ ಬಗ್ಗೆ ವೃಥಾ ಆರೋಪ ಸರಿಯಲ್ಲ. ಲೇಖಕರು ಹೇಳುವ ಹಾಗೆ ಶಾಲೆಗಳಲ್ಲಿ (ಅಂದ್ರೆ ಗೋಡೆಗಳಲ್ಲಿ )ಕೇಸರಿಕರಣ ಅಥ್ವಾ ಕ್ರಿಶ್ವಿಯನೀಕರಣ ನಡೆದಿದ್ರೆ ಅಂಥ ಶಾಲೆಗಳಿಗೆ ಈ ಮುಸ್ಲಿಂ ಹೆಣ್ಣುಮಕ್ಕಳನ್ನ ಕಳಿಸದೇ ಇರೋಕೆ ಅವರ ಹೆತ್ತವರಿಗೆ ಸ್ವಾತಂತ್ರ್ಯ ಇದೆಯಲ್ವೆ?
  ನಮ್ಮ ದೇಶದಲ್ಲಿ ಕೆಲವರಿಗೆ ಮುಸ್ಲಿಂಮರ ಬಗ್ಗೆ ಅತಿಯಾದ ಕಾಳಜಿ ಪ್ರದರ್ಶಿಸಿ ಜಾತ್ಯಾತೀತ ಅನಿಸಿಕೊಳ್ಳುವ ಹುಕಿಯಿದೆ. ಲೇಖಕರು ಅದೇ ಸಾಲಿಗೆ ಸೇರಿರುವ ಹಾಗಿದೆ.
  ಕೊನೆಯದಾಗಿ ಒಂದು ಪ್ರಶ್ನೆ; ಮಠ-ಚರ್ಚ್​ಗಳು ನಡೆಸುವ ಶಾಲೆಗಳ ಹಾಗೆ ಮುಸ್ಲಿಂ ಶಾಲೆಗಳಲ್ಲಿ ಯಾಕೆ ಅನ್ಯಧರ್ಮೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡೋದಿಲ್ಲ? ತಾವೊಂದು ಬೇರೆ ಜನಾಂಗ ಅನ್ನೋ ರೀತಿಯ ವರ್ತನೆಯನ್ನ ಶಿಕ್ಷಣದಲ್ಲೂ ಯಾಕೆ ಪ್ರತಿಪಾದಿಸ್ತಾರೆ? ಸ್ಕಾರ್ಫ್ ವಿರೋಧಿ ಶಾಲೆಗಳ ಐಬುಗಳನ್ನ ಒಂದೊಂದಾಗಿ ಪಟ್ಟಿ ಮಾಡಿರೋ ಲೇಖಕರು ಇದ್ರ ಬಗ್ಗೆ ಯಾಕೆ ದಿಟ್ಟ ಮತ್ತು ಸ್ಪಷ್ಟ ದನಿ ಎತ್ತೋದಿಲ್ಲ? ಇಷ್ಟಕ್ಕೂ ಇಲ್ಲಿ ಶಾಲೆಯೊಳಗೆ ಸ್ಕಾರ್ಫ್​ ನಿಷೇಧ ಮಾಡಲಾಗಿದೆ ಅಷ್ಟೇ, ಮುಸ್ಲಿಂ ಅಥವಾ ಅನ್ಯ ಧರ್ಮದ ವಿದ್ಯಾರ್ಥಿಗಳನ್ನಲ್ಲ. ವೃಥಾ ರಾಜಕೀಯ ವಿದ್ಯಾರ್ಥಿಗಳನ್ನ ಮತ್ತಷ್ಟು ಡಿವೈಡ್​ ಮಾಡುತ್ತೆ. ಹಾಗಾಗಬಾರದು ಅನ್ನೋದು ಎಲ್ಲರ ಕಾಳಜಿಯಾಗಬೇಕು.
  ಗಮನಕ್ಕೆ: ಹಿಂದೂ ಆಗಿರುವ ನಾನು ಪ್ರೌಢಶಿಕ್ಷಣದವರೆಗೆ ಕಲಿತದ್ದು ಕ್ರಿಶ್ಚಿಯನ್​ ಸ್ಕೂಲ್​ನಲ್ಲಿ. ಅಲ್ಲಿ ಸಾಕಷ್ಟು ಮುಸ್ಲಿಂ ವಿದ್ಯಾರ್ಥಿಗಳೂ ಇದ್ರು. ಆದ್ರೆ ಯಾರೂ ಟೋಪಿಯನ್ನಾಗಲೀ, ಸ್ಕಾರ್ಫ್-ಬುರ್ಖಾಗಳನ್ನಾಗ್ಲೀ ಹಾಕೊಂಡು ಬರ್ತಿರ್ಲಿಲ್ಲ. ಮತ್ತು ಆ ಕಾರಣಕ್ಕೆ ಓದಿನಲ್ಲಿ ಯಾರೂ ಹಿಂದುಳೀಲಿಲ್ಲ.

  1. PRAJE yavaru innomme matthomme odikondu comment haki ಸ್ಕಾರ್ಫ್ ನಿಷೇಧ ಮೂಲಭೂತವಾದಿಗಳಿಗೆ ಲಾಭವೇ ಹೊರತು ನಷ್ಠವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ. ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಕಟ್. ಮೂಲಭೂತವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಇನ್ನು ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಬೇರೆ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ಮುಸ್ಲಿಂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೇರೆ ಸಮುದಾಯದ ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ. ಇಂತಹ ಕಾಲೇಜಿನಲ್ಲಿ ಬುರ್ಕಾ ಕಡ್ಡಾಯ. ಇಲ್ಲಿ ಯುವಕರಿಗೆ ಪ್ರವೇಶ ಇಲ್ಲ. ಇಲ್ಲಿ ಕಲಿತ ವಿದ್ಯಾರ್ಥಿನಿಯರು ಅದೆಷ್ಟು ಸಂಕುಚಿತವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ ಎಂಬುದೇ ದುರಂತ. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಬ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

   1. ಲೇಖನವನ್ನ ಪೂರ್ತಿ ಓದಿದ ಬಳಿಕವೇ ಕಮೆಂಟಿಸಿದ್ದೇನೆ. ಇದು ತಮ್ಮ ಆಶಯದ ಬಗ್ಗೆ ಗೌರವ ಇಟ್ಟುಕೊಂಡೇ ನೀಡಿರುವ ಪ್ರತಿಕ್ರಿಯೆ.
    ನನ್ನ ಪ್ರಶ್ನೆ ಇರೋದು ಇಷ್ಟೇ; `…ಒಪ್ಪಲು ಸಾಧ್ಯವೇ ಇಲ್ಲ` ಅಂದಿದ್ದೀರಿ. ಅಂಥವರನ್ನ ಒಪ್ಪಿಸಬೇಕಾದ ಅಗತ್ಯ ಇಲ್ಲವೇ?(ಬಂಟ್ವಾಳದ ಶಾಲೆಯಲ್ಲಿ ಈ ಹಿಂದೆ ತಿಳಿಹೇಳಿದ ಬಳಿಕ ಮುಸ್ಲಿಂ ವಿದ್ಯಾರ್ಥಿನಿ ಮನೆಯವರು ಬುರ್ಖಾ ಇಲ್ಲದೆ ಕಾಲೇಜಿಗೆ ಕಳಿಸಲು ಒಪ್ಪಿರುವುದು ನಿಮಗೆ ಗೊತ್ತಿರಬಹುದು)‘ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ ಫೊಟೋ, ಶಿಲುಬೆಗಳನ್ನ ಕಿತ್ತು ತೆಗೆಯಲಿ…’ ಅಂದಿದ್ದೀರಿ. ನಿಜಕ್ಕೂ ಒಪ್ಪತಕ್ಕ ಮಾತು. ಸಂವಿಧಾನದ ಆಶಯಕ್ಕೆ ಸರಿಯಾದ ಪಾಠ ಮಾಡಲಿ ಅಂದಿದ್ದೀರಿ. ಅದಕ್ಕೂ ನೋ ಒಬ್ಜೆಕ್ಷನ್.
    ಆದರೆ ಮುಸ್ಲಿಂ ಶಾಲೆಗಳಲ್ಲಿ ಅನ್ಯಧರ್ಮೀಯ ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಬಾರದು. ಬುರ್ಖಾ ಕಡ್ಡಾಯ ಮಾಡಬೇಕು ಅಂತ ಸಂವಿಧಾನ ಹೇಳುತ್ತದೆಯೇ? ದಯವಿಟ್ಟು ತಿಳಿಸಿ, ನಾನು ನಿಮ್ಮಷ್ಟು ತಿಳಿದವನಲ್ಲ. ಸಂವಿಧಾನ ಹಾಗೆ ಹೇಳಿಲ್ಲ ಅಂತಾದ್ರೆ ಆ ಅಸಂವಿಧಾನಿಕ ವರ್ತನೆ ಸರಿಯಾಗಬೇಕು ಅಂತ ತಮಗೆ ಯಾಕೆ ಅನ್ನಿಸೋದಿಲ್ಲ? ಆ ಬಗ್ಗೆ ನಿಮ್ಮ ‘ಉಗ್ರ ವಿರೋಧ’ ಯಾಕಿಲ್ಲ? ಮುಸ್ಲಿಂ ಶಾಲೆಗಳ ವಿಷಯ ಹೇಳುವಾಗ ಯಾಕೆ ತಮ್ಮದು ಅಳುಬುರುಕ ದನಿ? (ಇಲ್ಲಿ ಕಲಿತ ವಿದ್ಯಾರ್ಥಿನಿಯರು… ಎಂಬುದೇ ದುರಂತ)
    ಬುರ್ಖಾ ಅಥವಾ ಸ್ಕಾರ್ಫ್‌‌ಗೆ ಸಂಬಂಧಿಸಿದ ಒಂದಿಷ್ಟು ಮಾಹಿತಿ ತಮ್ಮ ಗಮನಕ್ಕೆ; ಇಸ್ಲಾಂ ಬಾಹುಳ್ಯದ ರಾಷ್ಟ್ರಗಳಾದ ಟುನಿಸೀಯಾ ಮತ್ತು ಟರ್ಕಿಯಲ್ಲಿ ಮಹಿಳೆಯರು ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಕಾರ್ಫ್ ಧರಸಿ ಬರೋದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂಡೋನೇಷ್ಯಾ, ಕುವೈಟ್, ಲೆಬನಾನ್, ಮಲೇಷ್ಯಾ, ಸಿರಿಯಾ ದೇಶಗಳಲ್ಲಿ ಸ್ಕಾರ್ಫ್‌ ಧರಿಸುವಿಕೆ ಮಹಿಳೆಯರ ಇಚ್ಛೆಗೆ ಬಿಟ್ಟದ್ದು. ನಮ್ಮ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲೂ ಬುರ್ಖಾ ಧರಿಸುವಿಕೆ ಕಡ್ಡಾಯವಲ್ಲ.(ಒಂದು ಸಮೀಕ್ಷೆ ಪ್ರಕಾರ ಬಹುತೇಕರು ಬುರ್ಖಾ/ ಸ್ಕಾರ್ಫ್‌ ಧರಿಸೋದಿಲ್ಲ. ಹೆಚ್ಚಂದ್ರೆ ದುಪಟ್ಟಾವನ್ನ ತಲೆಯ ಮೇಲೆ ಹಾಕಿಕೊಳ್ತಾರೆ, ಅಷ್ಟೇ)
    ವಿಪರ್ಯಾಸ ನೋಡಿ; 80ರ ದಶಕದವರೆಗೂ ಬುರ್ಖಾ ಅನ್ನೋದನ್ನೇ ಮರೆತ ಹಾಗಿದ್ದ ಈಜಿಪ್ಟ್‌ನಲ್ಲಿ ಇವತ್ತು 90 ಪ್ರತಿಶತ ಮಹಿಳೆಯರು ಬುರ್ಖಾದೊಳಗೆ ತೂರಿಕೊಳ್ಳುವಂತಾಗಿದೆ. ಆಫಘಾನಿಸ್ತಾನದ ಕತೆ ನಿಮಗೆ ಗೊತ್ತೇ ಇದೆ. ಇದೆಲ್ಲ ಆಗಿರೋದು ತಾಲಿಬಾನೀಕರಣದ ಪ್ರಭಾವದಿಂದ. ಇತ್ತೀಚೆಗೆ ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲೂ ಅದ್ರ ಹವಾ ಕಾಣಿಸೋಕೆ ಶುರುವಾಗಿದೆ.
    ಈಗ ಹೇಳಿ, ನಮ್ಮ ದೇಶ ಯಾವ ಕಡೆ ಸಾಗಬೇಕು? ಮೂಲಭೂತವಾದಿಗಳ ಮಾತಿಗೆ ಮನ್ನಣೆ ಕೊಡುತ್ತಾ ಅವ್ರನ್ನ ಓಲೈಸಿಕೊಂಡು ಇರಬೇಕಾ? ಅಥವಾ ಸಮಾನತೆ ಮತ್ತು ಮುಕ್ತತೆಯ ಕಡೆ ಮುನ್ನಡೀಬೇಕಾ?
    ಇಷ್ಟಕ್ಕೂ ಮೂಲಭೂತವಾದ ಎಲ್ಲ ಧರ್ಮಗಳಲ್ಲೂ ಇದೆ. ಆದ್ರೆ ಅದರ ವ್ಯಾಪ್ತಿ ಎಷ್ಟರ ಮಟ್ಟಿಗಿದೆ ಅನ್ನೋದಷ್ಟೇ ಪ್ರಶ್ನೆ. ನಮ್ಮದೇ ಉದಾಹರಣೆ ತಗೊಳ್ಳೋದಾದ್ರೆ, `ಆನುದೇವಾ ಹೊರಗಣವನು` ಕೃತಿಯ ಬಗ್ಗೆ ಒಂದು ಸಮುದಾಯದವರು ಬೀದಿಗಳಿದು ಹೋರಾಟ ಮಾಡಿದ್ರು. ಒತ್ತಡಕ್ಕೆ ಮಣಿದ ಸರ್ಕಾರ ಅದನ್ನ ಮುಟ್ಟುಗೋಲು ಹಾಕಿಕೊಳ್ತು. ಆದ್ರೆ ಆ ಸಂದರ್ಭ ಯಾವ ಮಠಾಧೀಶರೂ ಬಂಜಗೆರೆಯವರ ತಲೆ ತೆಗೆಯಿರಿ ಅಂತ ಆದೇಶ ಹೊರಡಿಸಲಿಲ್ಲ. ಅವರನ್ನ ಗಡೀಪಾರು ಮಾಡಿ ಅನ್ನಲಿಲ್ಲ. ಆದ್ರೆ ಸಲ್ಮಾನ್​ ರಶ್ದಿ ವಿಷ್ಯದಲ್ಲಿ ಏನಾಗಿದೆ? ಬಂಜಗೆರೆಯವರ ಪರ ಕೇಳಿ ಬಂದಷ್ಟು ದನಿ ರಾಷ್ಟ್ರಮಟ್ಟದಲ್ಲಿ ಸಲ್ಮಾನ್​ ರಶ್ದಿಯವರ ಬಗ್ಗೆ ಯಾಕೆ ಕೇಳಿ ಬರುವುದಿಲ್ಲ? ಕೇಸರೀಕರಣ ಇತ್ಯಾದಿಗಳ ಬಗ್ಗೆ ಉದ್ದುದ್ದ ಮಾತನಾಡುವ ಜಾವೇದ್​ ಅಖ್ತರ್​ರಂಥ ಚಿತ್ರಸಾಹಿತಿಗಳು ಯಾಕೆ ತಮ್ಮ ಸಮುದಾಯದ ಅಸಹ್ಯಗಳ ಬಗ್ಗೆ ತುಟಿ ಬಿಚ್ಚೋದಿಲ್ಲ? ಹೀಗೆ ಓಟ್​ಬ್ಯಾಂಕ್ ಗಮನದಲ್ಲಿಟ್ಟುಕೊಂಡ ಆಳುವ ಪಡೆ ಸಮುದಾಯಗಳ ಒತ್ತಡಗಳಿಗೆ ಮಣಿಯುತ್ತಾ ಹೋದ್ರೆ ಸಂವಿಧಾನದ ಆಶಯಗಳಿಗೆ ಬೆಲೆ ಸಿಗೋದಾದ್ರೂ ಹೇಗೆ? ಹಿಂದೂ ಮೂಲಭೂತವಾದಿಗಳನ್ನ ಹದ್ದುಬಸ್ತಿನಲ್ಲಿಡ್ಬೇಕು ಸರಿ; ಆದ್ರೆ ಮುಸ್ಲಿಂ ಮೂಲಭೂತವಾದಿಗಳನ್ನ ಸರಿದಾರಿಗೆ ತರೋ ಕೆಲಸ ಆಗೋದು ಬೇಡವಾ?
    ಫ್ರಾನ್ಸ್‌, ಬೆಲ್ಜಿಯಂ ಮತ್ತು ಇಟಲಿಯಲ್ಲಿ ಬುರ್ಖಾ ಸೇರಿದ ಹಾಗೆ ಎಲ್ಲ ಬಗೆಯ ಧಾರ್ಮಿಕ ಧಿರಿಸುಗಳನ್ನೂ ಶಾಲೆ ಕಾಲೇಜುಗಳಲ್ಲಿ ನಿಷೇಧ ಮಾಡಿದ್ದಾರೆ. ಒಂದ್ವೇಳೆ ನಮ್ಮ ದೇಶವೇನಾದ್ರೂ ಅಂಥ ಕ್ರಮ ಕೈಗೊಂಡ್ರೆ ಅದ್ರಲ್ಲೂ ಬುರ್ಖಾ ಬ್ಯಾನ್ ಮಾಡಿದ್ರೆ ಅದಕ್ಕೆ ತಮ್ಮಂಥವರ ಪ್ರತಿಕ್ರಿಯೆ ಹೇಗಿರುತ್ತೆ?
    ಕಡೆಯದಾಗಿ, ಹೆತ್ತವರ ಮತ್ತು ಶಾಲಾ ಆಡಳಿತ ಮಂಡಳಿಗಳ ಸ್ವಪ್ರತಿಷ್ಠೆ ಮಧ್ಯೆ ವಿದ್ಯಾರ್ಥಿನಿಯರ ಬದುಕು ಹಾಳಾಗಬೇಕಿಲ್ಲ. ಅದಕ್ಕೆ ತುಂಬ ಸಿಂಪಲ್ ಆದ ಸೊಲ್ಯೂಷನ್ ಇದೆ. ಸ್ಕಾರ್ಫ್‌ ನಿಷೇಧ ಇರೋದು ಕೇವಲ ಶಾಲಾ ಆವರಣದಲ್ಲಿ ಮಾತ್ರ. ಮನೆಯಿಂದ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್‌ ಧರಿಸಿಕೊಂಡೇ ಬರಲಿ. ಶಾಲೆ ಆವರಣ ಪ್ರವೇಶಿಸಿದ ತಕ್ಷಣ ಅದನ್ನ ತೆಗೆದು ಮಡಚಿ ತಮ್ಮ ಸ್ಕೂಲ್‌ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲಿ. ಸಂಜೆ ಕಾಲೇಜು ಮುಗಿಸಿ ತೆರಳುವಾಗ ಮತ್ತೆ ಇದೇ ಮಾದರಿ ಅನುಸರಿಸಲಿ.
    ಅದನ್ನು ಬಿಟ್ಟು ಪರಸ್ಪರ ಹಗ್ಗ ಜಗ್ಗಾಟ ಮಾಡ್ತಾ ಕುಳಿತರೆ ಸಮಸ್ಯೆ ಮತ್ತಷ್ಷು ಕಗ್ಗಂಟಾಗುತ್ತೆ.

 6. ವಿದ್ಯಾರ್ಥಿಯರಿಗೆ ಶಿರವಸ್ಥ ಬೇಕೇ ಬೇಡವೇ ಎಂಬ ಒಂದು ಪ್ರಶ್ನೆ ಕೇಳುವುದಾದರೆ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ ಯಾವುದೆ ವ್ಯಕ್ತಿಯ ಬಟ್ಟೆಯನ್ನು ಯಾವುದೋ ಒಂದು ಧರ್ಮ ಅಥವಾ ವ್ಯಕ್ತಿ ನಿರ್ದಾರ ಮಾಡುವುದು ಅಸಂವಿದಾನಿಕ…..ಎಂದು ಬರೆದಿದ್ದಿರಿ ಹಾಗಾದರೆ ಇದೆ ಬಟ್ಟೆಯ ವಿಷಯಕ್ಕೆ ಬೆಂಗಳೂರಿನ ಕೆಲವೋದು ಪ್ರತಿಷ್ತಿತ ಕಾಲೇಜುಗಳು ವಿದ್ಯಾಥ್ರಿನಿಯರಿಗೆ ಜೀನ್ನ್ ಮತ್ತು ಟೀ ಶರ್ಟ್ಸ ನಿಷೇದ ಹೇರಿದ್ದವು ಇದರ ಬಗ್ಗೆ ಯಾವ ಜ್ಯಾತ್ಯಾತೀತ ವ್ಯಕ್ತಿಯೂ ಕೂಡ ದ್ವನಿಯೆತ್ತಲಿಲ್ಲ ಯಾಕೆ ಅಲ್ಲಿ ಮುಸ್ಲಿಂ ಕ್ರಿಷ್ತಿಯನ್ ಹಿಂದು ಯುವತಿಯರು ಇರಲ್ಲಿಲ್ವ ಅವರಿಗೆ ಅವರು ಇಷ್ತಪಡುವ ಡ್ರೆಸ್ ಹಾಕಿಕೊಳ್ಳುವ ಸ್ವಾತಂತ್ರ ಇರಲಿಲ್ವಾ….?ಇದು ಅಸಂವಿದಾನಿಕವಲ್ವ……? ನಿಜ ಇಲ್ಲಿಯ ಪರಿಸ್ತಿತಿ ಮತ್ತು ಅಲ್ಲಿಯ ಪರಿಸ್ತಿತಿ ವಿಭಿನ್ನವಾದುದ್ದು ಆದರೂ ಸಂವಿದಾನ ಅಸಂವಿದಾನದ ಮಾತು ಬಂದಾಗ..! ಬೆಂಗಳೂರಿನ ಕಾಲೇಜುಗಳಲ್ಲಿರುವ ಡ್ರೆಸ್ ವಿಷಯಕ್ಕೆ ನೀವು ಸಮಾನತೆ ಎಂದು ಒಪ್ಪುವುದಾದರೆ ಈಗ ನೀವು ಮಾತನಾಡುತ್ತಿರುವ ಕಾಲೇಜಿನ ವಿಷಯಕ್ಕು ಸಮಾನತೆ ಎಂದು ಒಪ್ಪಬೇಕಾಗುತ್ತದೆ ಸಂವಿದಾನ ಎಲ್ಲರಿಗೂ ಒಂದೇ ಆಗಿರಬೇಕು….ಇಲ್ಲಿ ಸಮಾನತೆ ಎಂದರೆ ಏನು? ತಮಗೆ ಇಷ್ತ ಬಂದ ಡ್ರೆಸ್ ಹಾಕಿಕೊಂಡು ಕಾಲೇಜಿಗೆ ಹೋಗುವುದೋ ಅಥವಾ ಕಾಲೇಜಿನಲ್ಲಿ ಒಂದೇ ತೆರನಾದ ಡ್ರೆಸ್ ಕೋಡ್ ಹಾಕಿಕೊಳ್ಳುವುದೋ…?.ಆದರೆ ಹೀಗ ಹಾಗಿರುವುದೇನು ಸ್ಕಾರ್ಷ್ ವಿಷಯಕ್ಕೆ ಮಾತ್ರ ಜ್ಯಾತ್ಯಾತೀತ ಮುಖವಾಡ.?

 7. ಪ್ರಜೆ ಯವರ ಮಾತನ್ನು ನಾನು ಪುಷ್ಟಿಕರಿಸುತ್ತೇನೆ. ತುಂಡು ಬಟ್ಟೆಯುಟ್ಟ ಹುಡುಗಿಯ ಮೇಲೆ ಲೈಂಗಿಕ ಹಲ್ಲೆಯದಾಗ ಹುಡುಗಿಯದೆ ತಪ್ಪು ಅನ್ನುವವರಿಗೂ . ಮೂಲಭೂತ ವಾದಿಗಳಿಗಾಗಿ ಸ್ಕಾರ್ಫ್ ಹಾಕಿಕೊಂಡು ಶಾಲೆಗೇ ಬನ್ನಿ ಅನ್ನುವವರಿಗೂ ಏನು ವ್ಯತ್ಯಾಸ ಕಾಣಿಸುತ್ತಿಲ್ಲ. ನವೀನ ಸ್ಕಾರ್ಫ್ ಇಲ್ಲದೆ ಶಾಲೆಗೇ ತೆರಳಲು ಅಡ್ಡಿಪಡಿಸುವ ಮುಸ್ಲಿಂ ಮೂಲಭೂತ ವಾದಿಗಳಿಗೆ , ಮುಸ್ಲಿಂ ಕಾಲೇಜ್ ಗಳಲ್ಲಿ ಬುರ್ಖಾ ಕಡ್ಡಾಯದ ಬಗ್ಗೆ ಒಂದೇ ಒಂದು ವಿರೋಧ ತೋರಿಸಿಲ್ಲ. ಕಪಟ ಜ್ಯಾತ್ಯಾತಿತೆಯ ಪ್ರತಿನಿಧಿಯಾಗಿದ್ದಾರೆ ಅಷ್ಟೇ

Leave a Reply

Your email address will not be published.