Daily Archives: October 7, 2012

ಪುಸ್ತಕ ಪರಿಚಯ : ದಿ ಗುಡ್ ಅರ್ಥ್

– ಸುಭಾಷ್ ರಾಜ್‌ಮಾನೆ

ನಿಸರ್ಗದ ಕೂಸಾದ ಮನುಷ್ಯ ಅನಾದಿಯಿಂದಲೂ ಅದರ ಮಡಿಲಲ್ಲಿಯೇ ತನ್ನ ಅಭ್ಯುದಯವನ್ನು ಕಂಡುಕೊಂಡವನು. ಅದರಲ್ಲೂ ಭೂಮಿ ಮತ್ತು ಮನುಷ್ಯ ಲೋಕದ ಒಡನಾಟ ಮಾನವನ ಚರಿತ್ರೆಯಷ್ಟೇ ಪ್ರಾಚೀನವಾದದ್ದು. ಹಾಗೆ ನೋಡಿದರೆ ಮನುಷ್ಯ ಜನಾಂಗದ ಅಸ್ತಿತ್ವ ಮುಖ್ಯವಾಗಿ ಭೂಮಿಯನ್ನೇ ಆಧರಿಸಿದೆ. ಮನುಷ್ಯ ತನಗೆ ಬೇಕಾದ ಆಹಾರ ಧಾನ್ಯಗಳನ್ನು ಮಣ್ಣಿನಿಂದ ಬೆಳೆಯಬಹುದೆಂದು ಅನ್ವೇಷಿಸಿದ ಕಾಲಘಟ್ಟವು ಕ್ರಾಂತಿಕಾರಕವಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯೇ ಸಂಪತ್ತು ಮತ್ತು ಶ್ರಮದ ಮಿಗುತಾಯಕ್ಕೂ ದಾರಿ ಮಾಡಿಕೊಟ್ಟವು. ಇವುಗಳೇ ಮುಂದೆ ಸಮಾಜ ಮತ್ತು ನಾಗರೀಕತೆಯ ಬೆಳವಣಿಗೆಗೆ ಮೂಲ ಶಕ್ತಿಗಳಾಗಿ ಪರಿಣಮಿಸಿದವು. ಅನೇಕ ಬಗೆಯ ಸಾಮಾಜಿಕ ಹಾಗೂ ಆರ್ಥಿಕ ಪಲ್ಲಟಗಳಿಗೂ ಇವು ಕಾರಣವಾದವು. ಈ ಹಿನ್ನೆಲೆಯಲ್ಲಿ ಅಮೇರಿಕದ ಪರ್ಲ್ ಎಸ್. ಬಕ್ ಅವರು ಬರೆದ ‘ದಿ ಗುಡ್ ಅರ್ತ್’ ಎಂಬ ಕಾದಂಬರಿಯು ಚೀನಾ ದೇಶದ ಒಂದು ನಿರ್ದಿಷ್ಟ ಪ್ರಾಂತದ ಬಡ ರೈತನಾದ ವಾಂಗ್‌ಲುಂಗ ಹಾಗೂ ಆತನ ಕುಟುಂಬವು ಭೂಮಿಯೊಂದಿಗೆ ಹೊಂದಿದ್ದ ಸಂಬಂಧವನ್ನು ಅದ್ಭುತವಾಗಿ ವರ್ಣಿಸುತ್ತದೆ. ಇಪ್ಪತ್ತನೆಯ ಶತಮಾನದ ಮೂವತ್ತರ ದಶಕದಲ್ಲಿ ರಚಿತವಾದ ಈ ಕೃತಿಯು ಪುಲಿಟ್ಜರ್ ಪ್ರಶಸ್ತಿ ಹಾಗೂ ನೊಬೆಲ್ ಪುರಸ್ಕಾರಕ್ಕೂ ಪಾತ್ರವಾಗಿ ಜಾಗತಿಕ ಸಾಹಿತ್ಯದಲ್ಲಿ ಶ್ರೇಷ್ಠ ಕಲಾಕೃತಿಯಾಗಿ ಜನಪ್ರಿಯವಾಯಿತು. ಅದು ಪ್ರಕಟವಾದ ಇಪ್ಪತ್ತು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಮುದ್ರಣಗಳನ್ನು ಕಂಡಿತು. ಕಳೆದ ಎಂಟು ದಶಕಗಳಿಂದ ಜಗತ್ತಿನ ನಾನಾ ಭಾಷೆಗಳಿಗೆ ಅನುವಾದಗೊಳ್ಳುತ್ತಲೆ ಸಾಗಿದೆ. ಅಭಿಜಾತ ಕೃತಿಯೊಂದು ಓದುಗರ ಮೂಲಕವೇ ಅದು ಮರು ಸೃಷ್ಟಿಯಾಗುತ್ತ ಹೋಗುತ್ತದೆ. ಆದ್ಧರಿಂದಲೆ ಈ ಕೃತಿ ಓದುಗ ವಲಯದಲ್ಲಿ ಅಪಾರವಾದ ಮೆಚ್ಚುಗೆಯನ್ನು ಪಡೆಯಿತು.

ಪರ್ಲ್ ಬಕ್ ಅವರ ತಂದೆ ತಾಯಿಗಳು ಮೂಲತಃ ಕ್ರೈಸ್ತ ಮಿಶನರಿಗಳಾಗಿದ್ದರು. ಅವರು ಚೀನಾಕ್ಕೆ ಹೋಗಿ ನೆಲೆಸಿದರು. ಪರ್ಲ್ ಬಕ್ ಅವರು ಹುಟ್ಟಿದ್ದು ಅಮೆರಿಕದಲ್ಲಿಯಾದರೂ ತಮ್ಮ ಬಾಲ್ಯ ಮತ್ತು ತಾರುಣ್ಯದ ಹೆಚ್ಚಿನ ಕಾಲವನ್ನು ಚೀನಾದಲ್ಲಿಯೇ ಕಳೆದವರು. ಆದ್ದರಿಂದ ಪರ್ಲ್ ಬಕ್ ಅವರು ತಮ್ಮ ಆರಂಭದ ಶಿಕ್ಷಣವನ್ನು ಚೀನಾದ ಷಾಂಗೈನಲ್ಲಿ ಪಡೆದರು. ಆದರೆ ಉನ್ನತ ಪದವಿಗಾಗಿ ಮತ್ತೆ ಅವರು ಅಮೆರಿಕದಲ್ಲಿ ನೆಲೆಸಬೇಕಾಯಿತು. ಆಗಲೆ ಅಮೆರಿಕದ ಅರ್ಥಶಾಸ್ತ್ರಜ್ಞ ಜಾನ್ ಎಲ್.ಬಕ್ ಅವರೊಂದಿಗೆ ವಿವಾಹವಾಗಿ ಪರ್ಲ್ ಬಕ್ ಮತ್ತೆ ಚೀನಾಗೆ ಮರಳಿದರು. ಉತ್ತರ ಚೀನಾದ ರೈತರ ಬದುಕಿನ ಸಂಕಟದ ಅನೇಕ ಮಗ್ಗಲುಗಳನ್ನು ಖುದ್ದಾಗಿ ಕಂಡವರಾಗಿದ್ದರು. ಪರ್ಲ್ ಬಕ್ ಅವರು ಮಣ್ಣಿನೊಂದಿಗೆ ಜೀವಿಸುವ ರೈತ ಕುಟುಂಬಗಳ ಪ್ರದೇಶದಲ್ಲಿಯೇ ಕೆಲವು ವರ್ಷ ನೆಲೆಸಿದ್ದರಿಂದ ‘ದಿ ಗುಡ್ ಅರ್ತ್’ ಕಾದಂಬರಿ ರೂಪ ಪಡೆಯಲು ಪ್ರೇರಣೆಯಾಯಿತೆಂಬುದನ್ನು ಅವರು ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ. ಅವರು ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದರೂ ‘ದಿ ಗುಡ್ ಅರ್ತ್’ ಅವರಿಗೆ ಬಹಳ ದೊಡ್ಡ ಹೆಸರನ್ನು ತಂದುಕೊಟ್ಟ ಕೃತಿ. ಇದು ನಾಟಕವಾಗಿ ಹಾಗೂ ಚಲನಚಿತ್ರವಾಗಿಯೂ ಲೇಖಕಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು.

‘ದಿ ಗುಡ್ ಅರ್ತ್’ ಕಾದಂಬರಿಯು ಸಾಮಾನ್ಯ ಬಡ ರೈತನಾದ  ವಾಂಗ್‍ಲುಂಗ ಎಂಬವ ಓಲನ್‌ಳನ್ನು ಮದುವೆ ಆಗುವುದರೊಂದಿಗೆ ಆರಂಭವಾಗುತ್ತದೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ವಾಂಗ್‌ಲುಂಗ ಮತ್ತು ಓಲನ್ ದುಡಿಮೆ ಮಾಡಿ ಜೀವಿಸುತ್ತಾರೆ. ಇಬ್ಬರೂ ತಮ್ಮನ್ನು ಮಣ್ಣಿಗೆ ಅಂಟಿಸಿಕೊಂಡ ಕಾಯಕ ಜೀವಿಗಳು; ಮನುಷ್ಯ ಸಂಬಂಧಕ್ಕಿಂತಲೂ ಮಣ್ಣಿನೊಂದಿಗಿನ ಅವರ ಸಂಬಂಧ ಗಾಢವಾದದ್ದು. ಹಳ್ಳಿಯಲ್ಲಿರುವ ಅವರ ಮನೆಯನ್ನು ಕಟ್ಟಿದ್ದು ತಮಗೆ ಆಹಾರ ನೀಡುವ ಅದೇ ಮಣ್ಣಿನಿಂದ. ಮನೆಯಲ್ಲಿರುವ ಮಡಕೆ ಹಾಗೂ ಆ ಹೊಲದಲ್ಲಿರುವ ದೇವರ ಮೂರ್ತಿಗಳು ನಿರ್ಮಾಣಕ್ಕೂ ಬಳಕೆಯಾಗಿದ್ದು ಅದೇ ಕಪ್ಪು ಮಣ್ಣು. ವಾಂಗ್‌ಲುಂಗ ಮತ್ತು ಅವನ ಹೆಂಡತಿ ಸುರಿಸಿದ ಬೆವರಿನ ಹನಿಗಳಿಂದ ಬಂದ ಬೆಳ್ಳಿ ನಾಣ್ಯಗಳಿಂದ ಮತ್ತಷ್ಟು ಭೂಮಿಯನ್ನು ಹತ್ತಿರದಲ್ಲೆ ಇದ್ದ ಪಟ್ಟಣದ ಶ್ರೀಮಂತ ಜಮೀನ್ದಾರರಾದ ಹುವಾಂಗ ಮನೆತನದಿಂದ ಕೊಳ್ಳುತ್ತಾರೆ. ಈ ಜಮೀನ್ದಾರರ ದೊಡ್ಡ ಮನೆಯಲ್ಲಿಯೇ ಓಲನ್ ದಾಸಿಯಾಗಿದ್ದಳು. ಈಗ ಅವರ ಒಂದಿಷ್ಟು ಭೂಮಿಗೆ ವಾಂಗ್‌ಲುಂಗ ಯಜಮಾನನಾಗಿದ್ದು ಅವರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.

ಈ ಕಾದಂಬರಿ ಒಂದು ಕಡೆ ಬಡ ರೈತ ವಾಂಗ್‌ಲುಂಗ ತನ್ನ ಹಳ್ಳಿಯಲ್ಲಿದ್ದುಕೊಂಡು ಸತತ ಪ್ರಯತ್ನ ಮತ್ತು ಸ್ವ ಪರಿಶ್ರಮದಿಂದ ಶ್ರೀಮಂತನಾಗುವುದನ್ನು ವರ್ಣಿಸುತ್ತದೆ. ಮತ್ತೊಂದು ಕಡೆ ಪಟ್ಟಣದ ಹುವಾಂಗ ಮನೆತನವು ವಿಲಾಸಿ ಜೀವನಕ್ಕೆ ಬಲಿಬಿದ್ದು ಮತ್ತು ಅಫೀಮಗೆ ದಾಸರಾಗಿ ಭೂಮಿಯನ್ನು ಕಳೆದುಕೊಳ್ಳುತ್ತ ಹೋಗುವುದನ್ನು ಕಾದಂಬರಿ ಚಿತ್ರಿಸುತ್ತದೆ. ಹಳ್ಳಿಯಲ್ಲಿ ದಿನನಿತ್ಯ ಮಣ್ಣಿನಲ್ಲಿ ದುಡಿಯುವವರ ಬದುಕಿನ ಸರಳತೆ ಹಾಗೂ ಮಾನವೀಯತೆ ಗಮನ ಸೆಳೆಯುತ್ತವೆ. ಆದರೆ ಜನರು ಹಳ್ಳಿ ಹಾಗೂ ಭೂಮಿಯ ಸಂಪರ್ಕದಿಂದ ದೂರ ಸರಿದಂತೆ ಅವರು ಲೋಲುಪತೆಯ ದಾಸರಾಗುತ್ತಾರೆ; ಅಷ್ಟೆ ಅಲ್ಲ ಜನರು ಲಂಪಟರು ಸೋಮಾರಿಗಳು ಮತ್ತು ಭ್ರಷ್ಟರಾದಂತೆ ಅವರು ದುಡಿಯುವ ಮಣ್ಣಿನಿಂದ ದೂರವಾಗುತ್ತಾರೆ. ಈ ಕಾದಂಬರಿಯ ನಿರೂಪಣೆಯ ತಂತ್ರವು ಅನೇಕ ಬಗೆಗಳಿಂದ ವಿಶಿಷ್ಟವಾಗಿದೆ. ಕೃತಿಯಲ್ಲಿ ವಾಂಗ್‌ಲುಂಗ ಮತ್ತು ಆತನ ಹಳ್ಳಿಯ ಬದುಕಿನ ಚಿತ್ರಣವು ಪ್ರತ್ಯಕ್ಷ ಸಾಕ್ಷಿಯಾಗಿ ನಿರೂಪಿತವಾಗುತ್ತ ಹೋದರೆ ಅದೇ ಪಟ್ಟಣದ ಹುವಾಂಗ ಮನೆತನದ ಅವನತಿಯ ವರ್ಣನೆಯು ಕೇವಲ ಪರೋಕ್ಷವಾಗಿ ಅವರಿವರ ಬಾಯಿಂದ ನಿರೂಪಿತವಾಗುವ ತಂತ್ರವಿದೆ.

ವಾಂಗ್‌ಲುಂಗನಿಗೆ ತನ್ನ ಭೂಮಿಯ ಬಗೆಗಿನ ಅದಮ್ಯವಾದ ಪ್ರೀತಿ ಹಾಗೂ ಸೆಳೆತ ಎಷ್ಟೊಂದು ಗಾಢವಾದದ್ದೆಂಬುದು ಅನಾವೃಷ್ಟಿಯಿಂದ ಉಂಟಾದ ತೀವ್ರ ಬರಗಾಲದ ಸಂದರ್ಭದಲ್ಲಿ ವ್ಯಕ್ತಗೊಳ್ಳುತ್ತದೆ. ತಿನ್ನಲು ಏನೂ ಇಲ್ಲದಿರುವ ಸ್ಥಿತಿಯುಂಟಾಗಿ ಪಟ್ಟಣದಿಂದ ಬಂದ ಯಾರೊ ಒಬ್ಬ ಭೂಮಿಯನ್ನು ಬೆಳ್ಳಿ ನಾಣ್ಯ ಕೊಟ್ಟು ಕೊಳ್ಳುತ್ತೇನೆಂದಾಗಲೂ ವಾಂಗ್‌ಲುಂಗ ತನ್ನ ದೇಹದ ಚರ್ಮವನ್ನಾದರೂ ಕತ್ತರಿಸಿಕೊಟ್ಟಾನು; ಆದರೆ ಭೂಮಿಯನ್ನು ಮಾತ್ರ ಮಾರಲಾರ. ಮನೆಯವರೆಲ್ಲ ಹೊಟ್ಟೆಗಿಲ್ಲದೇ ಸಾಯುವಂತಾದಾಗ ತನ್ನ ಭೂಮಿಯಲ್ಲಿ ದುಡಿದ ಎತ್ತನ್ನೆ ಕಡಿದು ತಿನ್ನುವ ಸಂದರ್ಭದಲ್ಲಿ ವಾಂಗ್‌ಲುಂಗ ಮುಮ್ಮಲ ಮರಗುತ್ತಾನೆ. ಆತನ ಹೆಂಡತಿ ಮಕ್ಕಳೆಲ್ಲ ಎತ್ತಿನ ಮಾಂಸವನ್ನು ತಿಂದು ಹಸಿವನ್ನು ಇಂಗಿಸಿಕೊಂಡರೂ ವಾಂಗ್‌ಲುಂಗ ಮಾತ್ರ ಅದನ್ನು ಮುಟ್ಟುವುದಿಲ್ಲ.

ಹಸಿವಿನಿಂದ ತತ್ತರಿಸಿಹೋಗುವ ವಾಂಗ್‌ಲುಂಗ ಮತ್ತು ಆತನ ಮಕ್ಕಳು ಭೂತಾಯಿಯ ಮಣ್ಣನ್ನು ತಿನ್ನುವ ನಿರೂಪಣೆಯು ಹೀಗಿದೆ: ಈಗ ತನ್ನ ಹೊಲದ ಮಣ್ಣನ್ನು ಸ್ವಲ್ಪ ಅಗೆದು ತೆಗೆದು ಅದಕ್ಕಾಗಿ ಸ್ವತಃ ತಾನು ಆಸೆ ಪಡದೆಯೇ ತನ್ನ ಮಕ್ಕಳಿಗೆ ಕೊಡುವುದು ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನಗಳಿಂದೀಚೆಗೆ ಹಾಗೆ ಮಣ್ಣನ್ನು ತೆಗೆದು ನೀರಿನಲ್ಲಿ ಕಲೆಸಿ ಭೂಮಿ ತಾಯಿಯ ಪ್ರಸಾದವೆನ್ನುತ್ತ ಅವರು ತಿನ್ನುತ್ತಿದ್ದರು. ಯಾಕೆಂದರೆ ಜೀವವನ್ನು ಉಳಿಸಿಕೊಳ್ಳಲು ಅದರಿಂದ ಸಾಧ್ಯವಾಗದೆ ಹೋದರೂ ಅದರಲ್ಲಿ ಸ್ವಲ್ಪವಾದರೂ ಪೋಷಕಾಂಶಗಳಿದ್ದವು. ನಯವಾಗಿ ಹಿಟ್ಟಿನಂತೆ ಅರೆದು ಕೊಟ್ಟರೆ ಮಕ್ಕಳ ಹಸಿವನ್ನು ಅದು ತಾತ್ಕಾಲಿಕವಾಗಿ ಶಮನ ಮಾಡುತ್ತಿತ್ತು. ಅವರ ಜೋತುಬಿದ್ದ ಹೊಟ್ಟೆಯೊಳಗೆ ಒಂದಷ್ಟು ಏನನ್ನೋ ಹಾಕಿದಂತಾಗುತ್ತಿತ್ತು. (ಪುಟ-81) ಇದು ದೇವನೂರು ಮಹಾದೇವರ ‘ಒಡಲಾಳ’ ಕೃತಿಯಲ್ಲಿ ಕದ್ದು ತರಲಾಗಿದ್ದ ಮೂಟೆ ಕಡಲೇಕಾಯಿಯನ್ನು ಸಾಕವ್ವನ ಮನೆಯವರೆಲ್ಲ ರಾತ್ರಿಯೆಲ್ಲ ಒಲೆಯ ಮುಂದೆ ಕುಳಿತು ತಿನ್ನುತ್ತಿದ್ದ ಸನ್ನಿವೇಶಕ್ಕಿಂತಲೂ ಭೀಕರವಾಗಿದೆ. ಈ ಪ್ರಸಂಗಗಳ ಚಿತ್ರಣಗಳಲ್ಲಿ ಭಿನ್ನತೆಯಿದೆ ನಿಜ. ಆದರೆ ಹಸಿವಿನ ಅಗಾಧತೆ ಮತ್ತು ತಡೆಯಲಾಗದ ಒಡಲಾಳದ ಸಂಕಟದಲ್ಲಿ ಯಾವ ವ್ಯತ್ಯಾಸವಿದೆ?

ಬರಗಾಲದ ಅನಿವಾರ್ಯತೆಯಿಂದಾಗಿ ವಾಂಗ್‌ಲುಂಗ ತನ್ನ ವಯಸ್ಸಾದ ತಂದೆ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ದಕ್ಷಿಣದ ಕಿಯಾಂಗ್ಸ್ ನಗರಕ್ಕೆ ಹೋಗುತ್ತಾನೆ. ಅಲ್ಲಿ ಹೆಂಡತಿ ಮಕ್ಕಳು ಭಿಕ್ಷೆ ಬೇಡಿಕೊಂಡು ಬದುಕುತ್ತಾರೆ. ಆದರೆ ವಾಂಗ್‌ಲುಂಗನಿಗೆ ದುಡಿಯದೆ ಬೇಡಿ ತಿನ್ನುವುದು ಅಪರಾಧವೆನ್ನಿಸುತ್ತದೆ. ತಾನು ಮಾತ್ರ ಸೈಕಲ್ ರಿಕ್ಷಾವನ್ನು ತಳ್ಳಿ ಬದುಕಲು ನಿರ್ಧರಿಸುತ್ತಾನೆ. ಆಗ ಮತ್ತೆ ಮತ್ತೆ ಆತನಿಗೆ ತನ್ನ ಭೂಮಿಯ ನೆನಪು ಕಾಡುತ್ತದೆ. ಅವನಿಗೆ ನಗರ ಜೀವನ ಹಿಂಸೆಯಾಗಿ ಮತ್ತು ಬಹಳ ದೊಡ್ಡ ಭ್ರಷ್ಟತೆಯ ಕೂಪವಾಗಿ ಗೋಚರಿಸುತ್ತದೆ. ನಗರದ ಜನರು ಬದುಕುವ ಸಲುವಾಗಿ ಮತ್ತು ವ್ಯವಹಾರಕ್ಕಾಗಿ ಎಂತಹ ಕೃತ್ಯವನ್ನಾದರೂ ಮಾಡಲು ಹೇಸುವುದಿಲ್ಲ ಎಂಬುದನ್ನು ವಾಂಗ್‌ಲುಂಗ ಕಂಡುಕೊಳ್ಳುತ್ತಾನೆ. ಆತನ ಪ್ರಾಮಾಣಿಕತೆಯನ್ನು ಅಲ್ಲಿಯ ಜನರು ಆತನನ್ನು ಹಳ್ಳಿಯ ಗಮಾರನೆಂದು ಗೇಲಿ ಮಾಡುತ್ತಾರೆ. ಆತನ ಮಗನೊಬ್ಬ ಹಂದಿಯ ಮಾಂಸವನ್ನು ಕದ್ದು ತಂದಾಗ ಅವನಿಗೆ ಹೊಡೆಯುತ್ತಾನೆ; ತನ್ನ ಮಕ್ಕಳು ದಾರಿ ತಪ್ಪುವುದನ್ನು ಸಹಿಸಿಕೊಳ್ಳುವುದಿಲ್ಲ. ಅಷ್ಟೆ ಅಲ್ಲ ಆ ರಾತ್ರಿ ಕದ್ದು ತಂದಿದ್ದ ಹಂದಿ ಮಾಂಸವನ್ನು ಹೆಂಡತಿ ಮಕ್ಕಳೆಲ್ಲ ತಿನ್ನುತಾರೆ. ಆದರೆ ವಾಂಗ್‌ಲುಂಗ ತಾನು ಉಪವಾಸ ಮಲಗುತ್ತಾನೆ ಹೊರತು ಅದನ್ನು ಮುಟ್ಟಲಾರ. ಆದ್ದರಿಂದ ಇಡೀ ಕಾದಂಬರಿಯಲ್ಲಿ ವಾಂಗ್‌ಲುಂಗ ಎಂತಹ ವಿಷಮ ಸ್ಥಿತಿಯಲ್ಲೂ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳದ ವ್ಯಕ್ತಿಯಾಗಿ ಕಾಣುತ್ತಾನೆ.

ಇಡೀ ಕಾದಂಬರಿಯಲ್ಲಿ ಓದುಗರ ಹೃದಯಕ್ಕೆ ತಟ್ಟುವ ಪಾತ್ರವೆಂದರೆ ಓಲನ್‌ಳದ್ದು. ಆಕೆಯ ಅವಿಶ್ರಾಂತವಾದ ಮನೆ ಹಾಗೂ ಭೂಮಿಯಲ್ಲಿನ ದುಡಿಮೆ ವಾಂಗ್‌ಲುಂಗನ ಏಳ್ಗೆಗೆ ಕಾರಣವಾದರೂ ಓಲನ್‌ಗೆ ಮಾತ್ರ ಯಾವುದೆ ಬಗೆಯ ಸಮಾನತೆ ಇಲ್ಲದಿರುವುದನ್ನು ಕಾಣಬಹುದು. ಅವಳು ಬದುಕಿದ್ದೆ ತನ್ನ ಗಂಡ ಮಕ್ಕಳು ಮತ್ತು ಮಾವ ಇವರ ಸೇವೆಗಾಗಿ. ತನ್ನ ಗಂಡ ವಾಂಗ್‌ಲುಂಗ ಮಧ್ಯೆ ವಯಸ್ಕನಾಗಿದ್ದಾಗ ಮತ್ತು ಊರಿನಲ್ಲೆ ಶ್ರೀಮಂತನಾಗಿದ್ದರಿಂದ ಪಟ್ಟಣದ ಸುಂದರ ಮೋಹಕ ಹೆಣ್ಣಿನ ಪ್ರೇಮಪಾಶದಲ್ಲಿ ಬಿದ್ದು ಆಕೆಯನ್ನು ತನ್ನ ಮನೆಯಲ್ಲೆ ತಂದು ಇಟ್ಟುಕೊಳ್ಳುತ್ತಾನೆ. ಆಗಲೂ ಓಲನ್‌ಗೆ ಧ್ವನಿ ಎತ್ತರಿಸಿ ಮಾತನಾಡುವ ಯಾವ ಹಕ್ಕು ಕೂಡ ಅವಳಿಗಿಲ್ಲ. ಅದು ಪುರುಷ ಪ್ರಧಾನ ಸಮಾಜವು ಹೆಣ್ಣಿನ ಧ್ವನಿಯನ್ನು ಕಿತ್ತುಕೊಂಡ ಕಾಲವಾಗಿತ್ತು. ಇಲ್ಲಿ ಓಲನ್ ಮಾತನಾಡಿದ್ದು ತೀರ ಕಡಿಮೆ; ಆಕೆಯ ಮೌನವು ಕಾದಂಬರಿಯೆಲ್ಲ ಆವರಿಸಿದಂತೆ ಭಾಸವಾಗುತ್ತದೆ. ಇದು ಹೆಣ್ಣಿಗೆ ಯಾವ ಸ್ಥಾನ ಮಾನಗಳಿಲ್ಲದಿರುವುದರ ಸಾಂಕೇತಿಕತೆಯೂ ಆಗಿದೆ.

ಕಳೆದ ಶತಮಾನದ ಆರಂಭದ ದಶಕದ ಚೀನಾ ಸಮಾಜದಲ್ಲಿ ಹೆಣ್ಣಿಗೆ ಯಾವುದೇ ಬಗೆಯ ಸ್ವಾತಂತ್ರ್ಯ ಇಲ್ಲದಿರುವುದನ್ನು ಈ ಕಾದಂಬರಿಯು ತೆರೆದಿಡುತ್ತದೆ. ಹೆಣ್ಣು ಮಕ್ಕಳಾಗುವುದು ಅಪಶಕುನವೆಂದು ತಿಳಿಯಲಾಗಿದ್ದ ಮೌಢ್ಯತೆಯ ಕಾಲವಾಗಿತ್ತು. ತಿನ್ನಲು ಏನೂ ಸಿಗದಿದ್ದ ತೀವ್ರ ಬರಗಾಲದ ಸಂದರ್ಭದಲ್ಲಿ ಬಡವರು ತಮ್ಮ ಹೆಣ್ಣು ಮಕ್ಕಳನ್ನು ಮಾರುವ ಅನಾಗರಿಕ ಪದ್ಧತಿಯೂ ಆಗ ರೂಢಿಯಲ್ಲಿತ್ತು. ಬಾಲ್ಯದಲ್ಲಿ ಹೆಣ್ಣು ಮಕ್ಕಳ ಕಾಲುಗಳನ್ನು ಬಟ್ಟೆಯಿಂದ ಕಟ್ಟುವ ಮತ್ತೊಂದು ಬಗೆಯ ರೂಢಿಯು ಇತ್ತು. ಯಾಕೆಂದರೆ ಹುಡುಗಿಯ ಪಾದಗಳು ದುಂಡಾಗಿ ಸುಂದರವಾಗಿ ಕೋಮಲವಾಗಿದ್ದರೆ ಮದುವೆಯಾಗುವ ಹೀನ ಪದ್ಧತಿ ಜಾರಿಯಲ್ಲಿತ್ತು. ಬರಗಾಲದ ಸಂದರ್ಭದಲ್ಲಿ ನಗರದಲ್ಲಿದ್ದುಕೊಂಡು ಹೊಟ್ಟೆ ತುಂಬಿಸಿಕೊಳ್ಳುಲು ತೊಳಲಾಡುವಾಗ ಓಲನ್ ತನ್ನ ಚಿಕ್ಕ ಹೆಣ್ಣುಮಗುವನ್ನು ಜಮೀನ್ದಾರಿ ವರ್ಗಕ್ಕೆ ಮಾರುವ ಸೂಚನೆಯನ್ನು ನೀಡಿದಾದ ವಾಂಗ್‌ಲುಂಗ ಅದನ್ನು ವಿರೋಧಿಸುತ್ತಾನೆ. ತಮ್ಮ ಹಳ್ಳಿಯನ್ನು ತೊರೆದು ದೇಶಾಂತರ ಹೊರಡುವ ಸಂದರ್ಭದಲ್ಲಿ ಓಲನ್ ಹೆಣ್ಣು ಮಗುವಿಗೆ ಜನ್ಮ ನೀಡಿ ತನ್ನ ಕೈಯಾರೆ ತನ್ನ ಅಮಾಯಕ ಶಿಶುವನ್ನು ಸಾಯಿಸುವುದು ಕ್ರೌರ್ಯವಲ್ಲವೇ? ರಕ್ಷಣೆ ಮಾಡಬೇಕಿದ್ದ ತಾಯಿಯೇ ತನ್ನ ಮಗುವನ್ನು ಹತ್ಯೆ ಮಾಡುವುದು ಅಮಾನುಷವಲ್ಲವೆ?

ಇವರಂತೆಯೆ ದೇಶಾಂತರ ಹೋಗಿದ್ದ ಓಲನ್‌ಳ ತಂದೆ ತಾಯಿಗಳು ತಮ್ಮ ಬಡತನ ಮತ್ತು ಹಸಿವನ್ನು ನೀಗಿಸಿಕೊಳ್ಳಲು ಓಲನ್ ಶ್ರೀಮಂತ ಜಮೀನ್ದಾರಿ ಹುವಾಂಗ ಮನೆತನಕ್ಕೆ ಮಾರಲ್ಪಟ್ಟ ಹೆಣ್ಣು ಮಾತ್ರವಲ್ಲ; ಆಕೆ ದಾಸಿಯಾಗಿ ಮತ್ತು ಗುಲಾಮಳಾಗಿ ಅತಿ ಹೆಚ್ಚು ದಮನಿತಳೂ ಹಾಗೂ ಶೋಷಿತಳೂ ಆಗಿದ್ದವಳು. ಆಕೆ ವಾಂಗ್‌ಲುಂಗನ ಹೆಂಡತಿಯಾಗಿ ಬಂದಾಗಲೂ ಒಂದು ರೀತಿಯಲ್ಲಿ ಗುಲಾಮಳಂತೆಯೇ ದುಡಿಯುತ್ತಾಳೆ. ಅವಳ ಬದುಕಿನಲ್ಲಿ ಯಾವ ವಿಶೇಷ ಬದಲಾವಣೆಗಳು ಘಟಿಸುವುದಿಲ್ಲ. ಓಲನ್ ಗುಲಾಮಗಿರಿಯಿಂದ ಬಿಡುಗಡೆಯಾಗಿ ವೈವಾಹಿಕ ಸಂಸ್ಥೆಗೆ ಅಡಿಯಿಟ್ಟರೂ ಕೂಡ ಆಕೆಯ ಶೋಷಣೆ ಮಾತ್ರ ಅಹ್ಯಾಹತವಾಗಿ ಮುಂದುವರೆಯುತ್ತದೆ. ಓಲನ್ ತುಂಬು ಗರ್ಭಿಣಿಯಾಗಿದ್ದಾಗಲೂ ದಿನವೆಲ್ಲ ಮಣ್ಣಿನಲ್ಲಿ ದುಡಿದು ಸಂಜೆ ಮನೆಗೆ ಹೋಗಿ ಯಾರ ಸಹಾಯವೂ ಇಲ್ಲದೆ ಮಗುವಿಗೆ ಜನ್ಮ ನೀಡಿ ಅಡಿಗೆಯನ್ನು ಮಾಡಿ ಗಂಡನಿಗೆ ಬಡಿಸುತ್ತಾಳೆ. ಮತ್ತೆ ಬೆಳಿಗ್ಗೆ ಎದ್ದು ಮೂಕ ಪ್ರಾಣಿಯಂತೆ ಹೊಲದಲ್ಲಿ ತನ್ನ ಪಾಡಿಗೆ ತಾನು ಕಾರ್ಯನಿರತಳಾಗುತ್ತಾಳೆ. ಆಕೆಯಲ್ಲಿರುವ ತಾಯ್ತನದ ನೈಜ ಅಕ್ಕರೆ ಹಾಗೂ ಪಾಲನೆಯ ಸಾಮರ್ಥ್ಯವನ್ನು ಕಾಣಲಾಗದ ವಾಂಗ್‌ಲುಂಗ ಕೂಡ ಕುರುಡನಾಗುತ್ತಾನೆ.

ವಾಂಗ್‌ಲುಂಗ ಶ್ರೀಮಂತನಾದ ಹಾಗೆ ಆತನ ಮಾನವೀಯತೆ ವೃದ್ದಿಸುತ್ತ ಹೋದರೂ ಓಲನ್‌ಳ ಹೊಟ್ಟೆಯಲ್ಲಿ ಬೆಳೆದ ಗೆಡ್ಡೆಗೆ ಚಿಕಿತ್ಸೆ ಮಾಡಿಸದ ಕಲ್ಲು ಹೃದಯದವನೇಕೆ ಆಗುತ್ತಾನೆ? ತನ್ನ ಮೋಜಿಗಾಗಿ ಇಟ್ಟುಕೊಂಡ ಹೆಣ್ಣಿಗಾಗಿ ಸಾವಿರಾರು ಬೆಳ್ಳಿ ನಾಣ್ಯಗಳನ್ನು ದುಂದು ಮಾಡುವ ವಾಂಗ್‌ಲುಂಗ ತನ್ನ ಹೆಂಡತಿಯ ಜೀವವನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನು ಮಾಡದ ಹೃದಯಹೀನ ಮನಸ್ಸಿನವನಾದದ್ದೇಕೆ? ಪ್ರೆಂಚ್ ಚಿಂತಕಿ ಸಿಮೋನ್‌ದ ಬೊವಾ ತನ್ನ ಪ್ರಸಿದ್ಧ ಕೃತಿಯಾದ ‘ದಿ ಸೆಕೆಂಡ್ ಸೆಕ್ಸ್’ದಲ್ಲಿ ಯಾರೂ ಹೆಣ್ಣಾಗಿ ಹುಟ್ಟುವುದಿಲ್ಲ; ನಂತರ ರೂಪಿತವಾಗುತ್ತಾಳಷ್ಟೆ ಎಂದು ಹೇಳುವ ಮಾತು ಜಗತ್ತಿನ ಎಲ್ಲ ಸಮಾಜಗಳ ಹೆಣ್ಣಿಗೂ ಅನ್ವಯವಾಗುತ್ತದೆ.

ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಕಥಾ ಚೌಕಟ್ಟು ಹೆಚ್ಚಾಗಿ ‘ದಿ ಗುಡ್ ಅರ್ತ್’ ಕೃತಿಯ ಚೌಕಟ್ಟನ್ನೆ ಅನೇಕ ಬಗೆಗಳಲ್ಲಿ ಹೋಲುತ್ತದೆ. ಕಾರಂತರೆ ಒಂದು ಕಡೆ ಹೇಳಿಕೊಂಡಿರುವಂತೆ ಈ ಕೃತಿಯ ಮೊದಲ ಭಾಗವನ್ನು ಓದಿ ಅದನ್ನು ತುಂಬ ಮೆಚ್ಚಿಕೊಂಡು  ಕನ್ನಡದಲ್ಲೂ ಅಂತಹ ಕಾದಂಬರಿಯನ್ನು ಬರೆಯಲು ನಿರ್ಧರಿಸಿದೆ ಎಂದಿದ್ದಾರೆ. ಆದ್ದರಿಂದ ನಲವತ್ತರ ದಶಕದಲ್ಲಿ ಬಂದ ‘ಮರಳಿ ಮಣ್ಣಿಗೆ’ ಕೃತಿಯು  ‘ದಿ ಗುಡ್ ಅರ್ತ್’ ದಂತೆಯೇ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ ವೈದಿಕ ರಾಮೈತಾಳರ ಮೂರು ತಲೆಮಾರಿನ ಕೌಟುಂಬಿಕ ಬದುಕಿನ ವಿನ್ಯಾಸಗಳನ್ನು ದಾಖಲಿಸುತ್ತದೆ. ‘ದಿ ಗುಡ್ ಅರ್ತ್’ ಕೃತಿಯ ಕೊನೆಯಲ್ಲಿ ನಗರದಲ್ಲಿ ವಾಸವಾಗಿರುವ ವಾಂಗ್‌ಲುಂಗನ ಹಿರಿಯ ಮಗ ತನ್ನ ತಂದೆಯ ಭೂಮಿಯನ್ನು ಮಾರುವುದರ ಆಲೋಚನೆಯಲ್ಲಿರುದು ಹಾಗೂ ವೃದ್ದನಾದ ವಾಂಗ್‌ಲುಂಗ ಅದನ್ನು ಪ್ರತಿಭಟಿಸುವುದರೊಂದಿಗೆ ಮುಗಿಯುತ್ತದೆ. ಅದೇ ‘ಮರಳಿ ಮಣ್ಣಿಗೆ’ ಕೃತಿಯಲ್ಲಿ ರಾಮೈತಾಳರ ಮೊಮ್ಮಗ ರಾಮ ನಗರದಿಂದ ತನ್ನ ಊರಿಗೆ ಮರಳುವುದರೊಂದಿಗೆ ಕೊನೆಯಾಗುತ್ತದೆ. ಈ ಎರಡೂ ಕೃತಿಗಳಲ್ಲಿ ಎಷ್ಷೇ ಸಾಮ್ಯತೆಗಳಿದ್ದರೂ ಬರಹಗಾರರ ಧೋರಣೆ ನಿರೂಪಣೆಯ ಶೈಲಿ ಪಾತ್ರ ಚಿತ್ರಣ ಹಾಗೂ ಭಾಷೆಯ ಬಳಕೆಗಳಿಂದ ಸಾಹಿತ್ಯ ಕೃತಿಗಳು ಭಿನ್ನವಾಗಿಯೇ ನಿಲ್ಲುತ್ತವೆ.

‘ದಿ ಗುಡ್ ಅರ್ತ್’ ಕೃತಿಯು ಆಕರ್ಷಕವಾದ ನಿರೂಪಣೆಯ ಶೈಲಿ ಹಾಗೂ ಕೆಲವೇ ಮಾತುಗಳ ಮೂಲಕ ಅಸಾಧರಣವಾದ ಅನೇಕ ಧ್ವನಿ ಸಾಧ್ಯತೆಗಳನ್ನು ಹೊಮ್ಮಿಸುವುದರಿಂದ ತುಂಬ ಮುಖ್ಯವಾಗುತ್ತದೆ. ಈ ಕೃತಿ ಅದರಲ್ಲೂ ಹೆಣ್ಣನ್ನು ದಮನಿಸಿದ ಪುರುಷ ಪ್ರಾಧಾನ್ಯವನ್ನು ಪ್ರತಿರೋಧಿಸುವ ಅನೇಕ ಸೂಕ್ಷ್ಮ ಎಳೆಗಳನ್ನು ಹೊಂದಿರುವುದರಿಂದ ಸ್ತ್ರೀವಾದಿ ಚಿಂತನೆಯ ನೆಲೆಯಿಂದ ಅಧ್ಯಯನ ಮಾಡುವವರಿಗೆ ತುಂಬ ಮಹತ್ವದ ಕೃತಿಯಾಗಿದೆ. ಆದರೆ ಕಾರಂತರು ‘ಮರಳಿ ಮಣ್ಣಿಗೆ’ಯ ನಿರೂಪಣೆಯ ಶೈಲಿ ಹಾಗೂ ತಂತ್ರಗಳನ್ನು ಕುರಿತು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದ ಎರಡೂ ಕೃತಿಗಳು ತುಂಬ ಮಹತ್ವದವುಗಳಾದರೂ ‘ದಿ ಗುಡ್ ಅರ್ತ್’ ಕೃತಿಯು ಕಲಾತ್ಮಕತೆಯ ದೃಷ್ಟಿಯಿಂದ ಹೆಚ್ಚು ಯಶಸ್ವಿಯಾದ ಕೃತಿಯಾಗಿದೆ.

ಕನ್ನಡಕ್ಕೆ ಸಂಬಂಧಿಸಿದಂತೆ ಇದು ಅನುವಾದಗಳ ಸಮೃದ್ದ ಕಾಲವೂ ಆಗಿದೆ. ಕಳೆದ ಹಲವು ವರ್ಷಗಳಿಂದ ಭಾರತದ ವಿವಿಧ ಭಾಷೆಗಳ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳ ಸಾಹಿತ್ಯ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ‘ಅನುವಾದ’ವನ್ನು ಕುರಿತು ಎಷ್ಟೇ ತಕರಾರುಗಳಿದ್ದರೂ ಜಗತ್ತಿನ ಅತ್ಯುತ್ತಮ ಸಾಹಿತ್ಯ ಕಲಾಕೃತಿಗಳು ಕನ್ನಡ ಭಾಷೆಯಲ್ಲಿ ಒಡಮೂಡಿದಾಗ ಕನ್ನಡದ ಕಸುವು ವಿಸ್ತರಿಸಿದಂತೆಯೇ ಆಗುತ್ತದೆ. ‘ದಿ ಗುಡ್ ಅರ್ತ್’ ಕಾದಂಬರಿ ಮಲೆಯಾಳಿಯಲ್ಲಿ ಅರ್ಧ ಶತಮಾನದ ಹಿಂದೆಯೆ ಬಂದಿದೆ. ಈ ಕಾದಂಬರಿ ಈಗ ಪಾರ್ವತಿ ಜಿ. ಐತಾಳ್ ಅವರಿಂದ ಕನ್ನಡದಲ್ಲಿ ಓದಲು ಸಿಗುವಂತಾಗಿದೆ. ಕುಂದಾಪುರದ ಭಂಡಾರ್ಕರ್‍ಸ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿರುವ ಅವರು ಮಲೆಯಾಳಿ, ಹಿಂದಿ, ಇಂಗ್ಲಿಷ್‌ಗಳಲ್ಲಿನ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ದಿ ಗುಡ್ ಅರ್ತ್’ ಕಾದಂಬರಿ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದ ಮಾಡಿರುವುದರಿಂದ ಇದರ ಓದು ಅತ್ಯಂತ ಸರಾಗ ಮತ್ತು ಆಪ್ತವಾಗುವಂತೆ ಮಾಡಿದೆ. ಆದ್ದರಿಂದ ಇದು ಕನ್ನಡದ್ದೆ ಒಂದು ಮುಖ್ಯ ಕೃತಿ ಅನ್ನಿಸುವಂತಿದೆ.


ಕೃತಿ: ದಿ ಗುಡ್ ಅರ್ತ್
ಮೂಲ: ಪರ್ಲ್ ಎಸ್. ಬಕ್
ಅನುವಾದ: ಪಾರ್ವತಿ ಜಿ. ಐತಾಳ್
ಪ್ರಕಾಶನ: ಅಂಕಿತ ಪ್ರಕಾಶನ, ಬೆಂಗಳೂರು
ಪುಟ: 310 ಬೆಲೆ: ರೂ.195

ಇಂಧನ ಸ್ವಾವಲಂಬನೆಗೆ ಹೊಂಗೆ ಮರ

– ಆನಂದ ಪ್ರಸಾದ್

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್ನು ಕೊಡಲು ಆರಂಭಿಸುತ್ತದೆ.  ಹತ್ತು ವರ್ಷಗಳ ನಂತರ ಒಂದು ಮರವು 10ರಿಂದ 100 ಕೆಜಿ ಬೀಜವನ್ನು ಕೊಡಬಲ್ಲದು. ಈ ಮರದ ಬೇರುಗಳು 10 ಮೀಟರ್ ಅಳಕ್ಕೂ ಇಳಿದು ನೀರನ್ನು ಪಡೆಯಬಲ್ಲುದಾದುದರಿಂದ ಒಣಪ್ರದೇಶಗಳಲ್ಲೂ ಬೆಳೆಯಬಲ್ಲದು. ಉತ್ತಮವಾಗಿ ಬೆಳವಣಿಗೆಯಾದ  ಹತ್ತು ಹೊಂಗೆ ಮರಗಳಿಂದ ನೆಟ್ಟ ಹತ್ತು ವರ್ಷದ ನಂತರ ವಾರ್ಷಿಕ 400 ಲೀಟರ್ ಎಣ್ಣೆ, 1200 ಕೆಜಿ ಹಿಂಡಿ, 2500 ಕೆಜಿ ಸಾವಯವ ಬಯೋಮಾಸ್ ಗೊಬ್ಬರ ದೊರಕಬಲ್ಲದು. ಒಂದು ಗ್ರಾಮದಲ್ಲಿ ಕೃಷಿಗೆ ಬಳಸದ ಒಣ ಪ್ರದೇಶ/ಬೀಳು ಭೂಮಿಯಲ್ಲಿ ಹೊಂಗೆ ಮರಗಳನ್ನು ಬೆಳೆಸಿ ಅದರಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯವಾಗಿಯೇ ತೆಗೆದು ಡೀಸೆಲ್ ಜನರೇಟರ್ ಬಳಸಿ ವಿದ್ಯುತ್ ತಯಾರಿಸಿ ಗ್ರಾಮೀಣ ನೀರಾವರಿ, ಮನೆ ಉಪಯೋಗಕ್ಕೆ ವಿದ್ಯುತ್ ಪಡೆಯಲು ಸಾಧ್ಯವಿದೆ ಅಥವಾ ಗ್ರಾಮೀಣರು ಹೊಂದಿರುವ ಡೀಸೆಲ್ ವಾಹನಗಳಿಗೆ ಇಂಧನವಾಗಿ ಬಳಸಬಹುದು, ಟ್ರಾಕ್ಟರ್ ಇತ್ಯಾದಿಗಳಲ್ಲೂ ಇಂಧನವಾಗಿ ಬಳಸಿ ಸ್ವಾವಲಂಬನೆಯನ್ನು ಸಾಧಿಸಬಹುದು.

ಹೊಂಗೆ ಮರವು ಬರನಿರೋಧಕವಾಗಿದ್ದು ವ್ಯವಸಾಯಕ್ಕೆ ಬಳಸದ ಒಣ ಬೀಳು ಭೂಮಿಯಲ್ಲೂ ಬೆಳೆಯಬಲ್ಲುದಾದುದರಿಂದ ಇದನ್ನು ಅಂಥ ಪ್ರದೇಶಗಳಲ್ಲಿ ಬೆಳೆಸಿ ರೈತರು ತಮ್ಮ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಇದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿ ಬೆಳೆಯುವುದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ ಉಂಟಾಗುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಹೊಂಗೆಯ ಎಣ್ಣೆಯನ್ನೇ ಡೀಸೆಲ್ ವಾಹನಗಳಲ್ಲಿ, ಪಂಪುಗಳಲ್ಲಿ, ವಿದ್ಯುಜ್ಜನಕ, ಟ್ರ್ಯಾಕ್ಟರ್‌ಗಳಲ್ಲಿ ಬಳಸುವುದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಅನ್ನು ಪಳೆಯುಳಿಕೆ ಇಂಧನ ಉಪಯೋಗಿಸಿದಾಗ ಆಗುವಂತೆ ಹೆಚ್ಚುವರಿಯಾಗಿ ಸೇರಿಸುವುದನ್ನು ನಿವಾರಿಸಿದಂತೆ ಆಗುತ್ತದೆ. ಕರ್ನಾಟಕದಲ್ಲಿ ವ್ಯವಸಾಯಕ್ಕೆ ಬಳಸದ ಲಕ್ಷಾಂತರ ಎಕರೆಗಳ ಪಾಳು ಭೂಮಿ ಇದೆ. ಇಲ್ಲೆಲ್ಲಾ ಹೊಂಗೆಯನ್ನು ಬೆಳೆಸಿ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಹೊಂಗೆ ಮರವು ಲೆಗ್ಯೂಮ್ ಜಾತಿಗೆ ಸೇರಿದ ಮರವಾದುದರಿಂದ ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಗಂಟುಗಳು ಇರುವ ಕಾರಣ ನೆಲದ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕ. ಇದರ ಬೇರುಗಳು ಇತರ ಬೆಳೆಗಳೊಂದಿಗೆ ಸ್ಪರ್ಧಿಸುವುದಿಲ್ಲವಾದ ಕಾರಣ ಇದನ್ನು ಹೊಲಗಳ ಬದಿಯಲ್ಲಿಯೂ ಬೆಳೆಸಬಹುದು. ಈ ಮರವು 100 ವರ್ಷಗಳವರೆಗೆ ಬದುಕುವುದರಿಂದ ದೀರ್ಘ ಕಾಲ ಫಸಲನ್ನು ಪಡೆಯಬಹುದು.  ಕೃಷಿಕರಿಗೆ ಇಂಧನ ಸ್ವಾವಲಂಬನೆಗೆ ಸಹಾಯಕವಾಗಬಲ್ಲ ಹೊಂಗೆ ಮರವನ್ನು ರಾಜ್ಯದ ಎಲ್ಲೆಡೆ ಬೆಳೆಸುವ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೊಂಗೆ ಮರದ ಹೆಚ್ಚು ಇಳುವರಿ ಕೊಡುವ ಬೀಜ ಹಾಗೂ ಸಸಿಗಳನ್ನು ಒದಗಿಸಲು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಮುಖ್ಯ ಪಾತ್ರ ವಹಿಸಬಹುದಾಗಿದೆ.

ದಾಂಡೇಲಿಯ ಫೆರ್ರೋಅಲ್ಲೋಯ್ ಕಾರ್ಖಾನೆಯ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಐದು ಡೀಸೆಲ್ ವಿದ್ದ್ಯುಜ್ಜನಕಗಳನ್ನು ಹೊಂಗೆ ಎಣ್ಣೆಯಿಂದಲೇ ನಡೆಯುವಂತೆ ಬದಲಾಯಿಸಿ 2001ರಲ್ಲಿ 7,60,000 ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ. ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರ ಹೊಂಗೆ ಎಣ್ಣೆಯನ್ನು ಇಂಧನವಾಗಿ ಬಳಸುವ ಕುರಿತಾದ ಪ್ರಯೋಗಗಳಿಂದ ಪ್ರೇರಿತವಾಗಿತ್ತು. ಇವರೇ ಕಗ್ಗನಹಳ್ಳಿಯಲ್ಲಿ 63 ಕೆ.ವಿ.ಎ. ಸಾಮರ್ಥ್ಯದ ಎರಡು ವಿದ್ದ್ಯುಜ್ಜನಕಗಳನ್ನು ಸ್ಥಳೀಯವಾಗಿ ಬೆಳೆದ ಹೊಂಗೆ ಬೀಜದ ಎಣ್ಣೆಯಿಂದಲೇ ನಡೆಸಿ 440 ವೋಲ್ಟಿನ ಪ್ರತ್ಯೇಕ ಗ್ರಿಡ್ದನ್ನು ಸ್ಥಾಪಿಸಿ 40 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಬೋರುವೆಲ್ಲುಗಳನ್ನು ಕೊರೆಯಿಸಿ ಇದೇ ವಿದ್ಯುತ್ತಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿ ತೋರಿಸಿದ್ದಾರೆ. ಇಂಥ ಪ್ರಯೋಗಗಳನ್ನು ರಾಜ್ಯದ ಎಲ್ಲೆಡೆ ಮಾಡಬೇಕಾದ ಅಗತ್ಯ ಇದೆ. ಇದರಿಂದ ವಿದ್ಯುತ್ತಿಗೆ ಕೃಷಿ ವಲಯದಿಂದ ಇರುವ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ.