Daily Archives: October 14, 2012

ಸುದ್ದಿ ಚಾನಲ್‌ಗಳ ಬುದ್ಧಿಗೇಡಿತನ


– ಡಾ.ಎನ್.ಜಗದೀಶ್ ಕೊಪ್ಪ


ಸಾರ್ವಜನಿಕ ಬದುಕಿನಲ್ಲಿ ಸುದ್ದಿ ಮತ್ತು ಮಾಹಿತಿ ಪ್ರಸಾರಕ್ಕೆ ತೆರೆದುಕೊಂಡಿರುವ ನಮ್ಮ ಸುದ್ದಿ ಮಾಧ್ಯಮಗಳಿಗೆ ಒಂದು ಸಾಮಾಜಿಕ ಹೊಣೆಗಾರಿಕೆ ಇರದಿದ್ದರೆ, ಏನಾಗಬಹುದು ಎಂಬುದಕ್ಕೆ ಇತ್ತೀಚೆಗೆ ನಮ್ಮ ಕನ್ನಡ ಸುದ್ದಿ ಚಾನಲ್‌ಗಳು ಸುದ್ದಿಯ ಹೆಸರಿನಲ್ಲಿ ಕರ್ನಾಟಕದ ಜನತೆಗೆ ಲದ್ದಿಯನ್ನು ಉಣಬಡಿಸುತ್ತಿರುವುದೇ ಸಾಕ್ಷಿ.

ಈ ನಾಡಿನ ಜ್ವಲಂತ ಸಮಸ್ಯೆ ಅಥವಾ ಜೀವನ್ಮರಣದ ಪ್ರಶ್ನೆಯಂಬಂತೆ ಕಳೆದ ನಾಲ್ಕುದಿನಗಳಿಂದ ಒಬ್ಬ ಕಿರುತೆರೆ ನಟಿಯ ಸಾವು ಕುರಿತು ನಡೆಯುತ್ತಿರುವ ಚರ್ಚೆ, ಈ ಕನ್ನಡ ನೆಲದ ಭವಿಷ್ಯದ ದಿನಗಳ ಬಗ್ಗೆ ಗಾಬರಿ ಹುಟ್ಟಿಸುವಂತಿದೆ. ತನ್ನ ಅವಿವೇಕತನದ ನಿರ್ಧಾರದಿಂದ ವಂಚಕನೊಬ್ಬನ ನಾಲ್ಕನೇ ಪತ್ನಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟು ನಂತರ ಕೊಲೆಯಾದ ಈ ಕಿರುತೆರೆಯ ನಟಿಯ ಬಗ್ಗೆ ಪೈಪೋಟಿಗೆ ಬಿದ್ದಂತೆ ಕನ್ನಡ ಚಾನಲ್‌ಗಳು ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿರುವ ಬಗೆಯನ್ನು ಗಮನಿಸಿದರೆ, ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.

ಒಂದು ಜೀವದ ದುರಂತ ಸಾವಿನ ಬಗ್ಗೆ ಮರುಕ ಪಡಬೇಕಾದ್ದು ಮನುಷ್ಯನ ಸಹಜ ಗುಣ. ಆದರೆ, ಅದು ವಿವೇಕದ ಎಲ್ಲೇ ಮೀರಬಾರದು. ಆಕೆಯ ಬದುಕಿನ ವೃತ್ತಾಂತವನ್ನು ಎತ್ತಿಕೊಂಡು ಆ ಹೆಣ್ಣುಮಗಳ ಖಾಸಗಿ ಬದುಕು ಮತ್ತು ಆಕೆಯ ಕುಟುಂಬದ ಜಾತಕವನ್ನು ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲು ಮಾರುವವನು ಕಬ್ಬನ್ನು ಹಿಂಡುವಂತೆ ಹಿಂಡಿದರೆ, ಪ್ರಯೋಜನವೇನು? ಈ ಘಟನೆಯಲ್ಲಿ ಆಕೆಯ ಪಾತ್ರವೂ ಇತ್ತು ಎಂಬುದನ್ನು ಮರೆಮಾಚಿ ಆಕೆಯನ್ನು ಹುತಾತ್ಮಳಂತೆ ವರ್ಣಿಸುತ್ತಿರುವ ಚಾನಲ್‌ಗಳ ಕೃತಕ ಮಾತುಕತೆಗಳು ಅಸಹ್ಯ ಮೂಡಿಸುತ್ತವೆ.

ಆಕೆಯೇನು ಅವಿದ್ಯಾವಂತೆಯಾಗಿರಲಿಲ್ಲ, ಇಂಜಿನಿಯರಿಂಗ್ ಪದವಿ ಮುಗಿಸಿ, ಕಿರುತೆರೆಯಲ್ಲಿ ಹತ್ತು ವರ್ಷಗಳ ಕಾಲ ದುಡಿದು ನೆಲೆ ಕಂಡುಕೊಂಡಿದ್ದ ಹೆಣ್ಣು ಮಗಳಾಗಿದ್ದಳು. ತಾನು ಯಾರನ್ನು ಮದುವೆಯಾಗಬೇಕು ಎಂಬುದರ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಾರದ ಅಸಹಾಯಕಳಾಗಿರಲಿಲ್ಲ. ಹಳ್ಳಿಗಾಡಿನ ಏಳನೇ ತರಗತಿ ಓದಿದ ಹುಡುಗಿಯರು ಪೋಷಕರನ್ನು ಧಿಕ್ಕರಿಸಿ ತಾನು ಮೆಚ್ಚಿದ ಹುಡುಗನ ಜೊತೆ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಅಪಾರ ಸಹೃದಯರ ಗೆಳೆತನ ಸಂಪಾದಿಸಿದ್ದ ಈ ನಟಿಗೆ ಅದು ಏಕೆ ಸಾಧ್ಯವಾಗಲಿಲ್ಲ? ಇದು ಇಲ್ಲಿಗೆ ಮುಗಿಯಬಹುದಾದ ಮಾತು.

ನಡೆದಿರುವ ದುರಂತದ ಘಟನೆಯ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡು, ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗ ಆಕೆಯ ಬೆಡ್ ರೂಂ ರಹಸ್ಯ, ಮತ್ತು ಆಕೆಯ ಗಂಡನ ಪುರುಷತ್ವದ ಬಗೆಗಿನ ಸಂದೇಹವನ್ನು ಈ ಚಾನಲ್‌ಗಳು ಚುಯಿಂಗ್ ಗಂ ನಂತೆ  ಬಹಿರಂಗವಾಗಿ ಅಗಿಯುತ್ತಿರುವುದೇಕೆ?

ಇದೀಷ್ಟೇ ಆಗಿದ್ದರೇ ಸಹಿಸಬಹುದಿತ್ತು ಆದರೆ, ಕಳೆದ ಎರಡು ತಿಂಗಳಿಂದ ಕಪಟ ಸನ್ಯಾಸಿ ಎಂದು ಜಗಜ್ಜಾಹೀರಾಗಿರುವ ನಿತ್ಯಾನಂದನ ಪರ ವಿರೋಧ ಕುರಿತು ಚಾನಲ್‌ಗಳಲ್ಲಿ ನಡೆಯುತ್ತಿರುವ ವಾಗ್ವಾದಗಳು ನ್ಯಾಯಾಲಯದಲ್ಲಿನ ವಕೀಲರ ವಾದಗಳನ್ನು ನಾಚಿಸುವಂತಿವೆ. ಆರತಿರಾವ್ ಎಂಬಾಕೆ ಸಾಮಾನ್ಯ ಹೆಣ್ಣು ಮಗಳೇಲ್ಲ, ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆರು ವರ್ಷ ದುಡಿದು ಅನುಭವಗಳಿಸಿದಾಕೆ. ಆತನ ಜೊತೆ ಪಲ್ಲಂಗ ಹಂಚಿಕೊಂಡಾಗ ಈಕೆಯ ವಿವೇಕ ಅಥವಾ ಪ್ರಜ್ಞೆ ಯಾವ ಕಾಡಿನಲ್ಲಿ ಅನಾಥವಾಗಿ ಅಲೆಯುತ್ತಿತ್ತು. ಈಗ ದುರಂತ ನಾಯಕಿಯಂತೆ ಕ್ಯಾಮರಾ ಮುಂದೆ ಕಣ್ಣೀರು ಹರಿಸುವುದು, ಅದಕ್ಕೆ ನಿರೂಪಕ ಉಪ್ಪು, ಖಾರ, ಮಸಾಲೆ ಬೆರಸಿ, ವರ್ಣಿಸುವುದು ಇದೆಲ್ಲಾ ಒಂದು ಚಾನಲ್ ಕಥೆಯಾದರೆ, ನಿತ್ಯಾನಂದನ ಪರ ತೊಡೆ ತಟ್ಟಿ ನಿಂತಿರುವ ಮತ್ತೊಂದು ಚಾನಲ್ ಇದೇ ಆರತಿಯನ್ನು ವೇಶೈಯಂತೆ ಬಿಂಬಿಸುತ್ತಿದೆ. ಆಕೆಯ ವೈದ್ಯಕೀಯ ವರದಿಗಳ ಬಗ್ಗೆ ತೀರ್ಪು ನೀಡಲು ಇವರಿಗೆ ಅಷ್ಟೋಂದು ಕಾಳಜಿ ಏಕೆ? ಇವುಗಳನ್ನು ಗಮನಿಸಿದರೇ, ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ.

“ಕೊಲೆ, ಅನೈತಿಕ ಸಂಬಂಧ, ಇವುಗಳ ವಿಚಾರಣೆಗೆ ಪೊಲೀಸರು, ನ್ಯಾಯಲಯ, ವಕೀಲರು ಏಕೆ ಬೇಕು? ನಾವಿದ್ದೀವೆ,” ಎಂಬಂತಿದೆ ಇತ್ತಿಚೆಗಿನ ಕನ್ನಡದ ಚಾನಲ್‌ಗಳ ಸಂಸ್ಕೃತಿ. ಇವುಗಳೆಲ್ಲವನ್ನು ಮೀರಿದ, ಆದ್ಯತೆಯ ಮೇಲೆ ಚರ್ಚಿಸಬೇಕಾದ ವಿಷಯಗಳು ಕರ್ನಾಟಕದಲ್ಲಿ ತುಂಬಿ ತುಳುಕುತ್ತಿವೆ ಆದರೆ, ಗ್ರಹಿಸುವ ಹೃದಯಗಳು ಇರಬೇಕು. ಪ್ರತಿ ನಿತ್ಯ ನಡೆಯುವ ರೈತರ ಆತ್ಮಹತ್ಯೆ, ಕುಸಿಯುತ್ತಿರುವ ಬೇಸಾಯದ ಬಗೆಗಿನ ರೈತನ ಕಾಳಜಿ, ಬರದಿಂದ ತತ್ತರಿಸುತ್ತಿರುವ ಗ್ರಾಮೀಣ ಜನತೆ, ಮೇವಿಲ್ಲದೆ ಕಟುಕರ ಮನೆಗೆ ಸಾಗುತ್ತಿರುವ ಜಾನುವಾರುಗಳು, ನಾಗಾಲೋಟದಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಗರಗಳಲ್ಲಿ ತತ್ತರಿಸಿ ಹೋಗಿರುವ ಬಡವರು ಇವರೆಲ್ಲಾ ಗಂಭೀರವಾಗಿ ಏಕೆ ಚರ್ಚೆಯಾಗುತ್ತಿಲ್ಲ?

ಒಂದು ಕೆ.ಜಿ. ಅಕ್ಕಿ ಬೆಲೆ ಮತ್ತು ಸಕ್ಕರೆಯ ಬೆಲೆ ನಲವತ್ತು ರೂಪಾಯಿ ಆಗಿದೆ. ಬಡವರು ಅಕ್ಕಿ ತಿನ್ನಬೇಕೊ? ಸಕ್ಕರೆ ತಿನ್ನಬೇಕೊ? ಭಾರತದ 118 ಕೋಟಿ ಜನರಲ್ಲಿ 92 ಕೋಟಿ ಮೊಬೈಲ್ ಚಂದಾದಾರರಿದ್ದಾರೆ. ಸರಾಸರಿ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆ ನೂರು ರೂ ಖರ್ಚು ಮಾಡುತ್ತಿದ್ದಾನೆ ಎಂದು ಲೆಕ್ಕ ಹಾಕಿದರೂ ತಿಂಗಳಿಗೆ 92 ಸಾವಿರ ಕೋಟಿ ರೂಗಳು ಅರ್ಥವಿಲ್ಲದ ಖಾಲಿ ಶಬ್ಧಗಳಾಗಿರುವ ಮಾತಿಗೆ ವ್ಯಯ ಮಾಡುತ್ತಿದ್ದೇವೆ. ಇದು ನಾಚಿಕೇಗೇಡಿನ ಸಂಗತಿ ಎಂದು ನಮಗೆ ಅನಿಸುವುದಿಲ್ಲ. ದಶಕದ ಹಿಂದೆ ಈ ಮೊಬೈಲ್ ಇಲ್ಲದಿದ್ದಾಗಲೂ ಜನ ಬದುಕಿದ್ದರಲ್ಲವೆ? ಈ ಹಣ ಯಾರನ್ನು ಉದ್ದಾರ ಮಾಡುತ್ತಿದೆ ಎಂಬುದರ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ಹೇಳಬೇಕಾದವರು ಯಾರು? ದೃಶ್ಯ  ಮಾಧ್ಯಮಗಳೇಕೆ ಮೌನವಾಗಿವೆ. ನಮ್ಮನ್ನಾಳುವವರು ಯಾವ ವಿಷಯದಲ್ಲಿ ಮುಳುಗಿದ್ದಾರೆ? ಈ ರಾಜ್ಯದಲ್ಲಿ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದು ಯಾರಿಗಾದರೂ ಅನಿಸುತ್ತಾ? ಇಂತಹ ಗಂಭೀರ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ? ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅನಾವರಣಗೊಳಿಸಲು ಒಬ್ಬ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್‌ನಿಂದ ಸಾಧ್ಯವಾಯಿತು. ದೇಶದೆಲ್ಲೆಡೆ ಒಂದೇ ಸಮನೇ ಘರ್ಜಿಸುತ್ತಿರುವ ನೂರಕ್ಕೂ ಹೆಚ್ಚಿನ ಸುದ್ದಿ ಚಾನಲ್‌ಗಳು ಏನು ಮಾಡುತ್ತಿದ್ದವು?

ಘಟಿಸಿ ಹೋದ ವಿಷಯಗಳನ್ನು ತೆಗೆದುಕೊಂಡು ಮಸಾಲೆ ಹಾಕಿ ರುಬ್ಬುವುದಕ್ಕೆ ಇಂತಹ ಸುದ್ದಿ ಚಾನಲ್‌ಗಳು ಕನ್ನಡದ ಜನತೆಗೆ ಅವಶ್ಯಕತೆ ಇಲ್ಲ. ಸಮಸ್ಯೆಯ ಆಳಕ್ಕೆ ಇಳಿಯುವ , ಅವುಗಳನ್ನು ಹುಡುಕಿಕೊಂಡು ಹೋಗಿ ಜನತೆಯ ಮುಂದಿಡುವ ಮನಸ್ಸುಗಳು ಈಗ ಬೇಕಾಗಿವೆ. ಮಂಡ್ಯ ಜಿಲ್ಲೆಯ ಆಡು ಭಾಷೆಯಲ್ಲಿ ಒಂದು ಮಾತಿದೆ. “ಬಾಳೆ ಗಿಡ ಕಡಿಯೊದ್ರಲ್ಲಿ ನನ್ನ ಗಂಡ ಶೂರ ಧೀರ” ಅಂತಾ. ನಮಗೆ ಬಾಳೇ ಗಿಡ ಕಡಿಯುವವರು ಬೇಕಾಗಿಲ್ಲ. ಈ ನೆಲದಲ್ಲಿ ಎಲ್ಲೆಂದರಲ್ಲಿ ಬೆಳೆದು ತಾಂಡವವಾಡುತ್ತಿರು ಮುಳ್ಳಿನ ಗಿಡಗಳು ಮತ್ತು ಕಳೆಗಳನ್ನು ಕಿತ್ತು ಹಾಕಿ ನೆಲವನ್ನು ಹಸನು ಮಾಡುವ ಅಪ್ಪಟ ಮನುಷ್ಯರು ಬೇಕಾಗಿದ್ದಾರೆ.

ನನ್ನ ಕಥೆಗಾರ ಮಿತ್ರ ಕೇಶವ ಮಳಗಿ ಹೇಳಿದ ಒಂದು ಅತ್ಯಂತ ಮೌಲ್ಯಯುತ ಮಾತು ನೆನಪಾಗುತ್ತಿದೆ: “ಗಂಟಲು ಹರಿದುಕೊಳ್ಳುವ, ಘೋಷಣೆ ಕೂಗುತ್ತಿರುವ ಈ ದಿನಗಳಲ್ಲಿ ಅಂತರಂಗದ ಪಿಸು ಮಾತಿಗೆ ಕಿವಿ ಕೊಡುವವರು ಕಡಿಮೆಯಾಗುತಿದ್ದಾರೆ.” ಒಂದೇ ಸಮನೆ ಸುದ್ದಿಯ ಹೆಸರಿನಲ್ಲಿ ವಿವೇಚನೆಯಿಲ್ಲದೆ ಗಂಟಲು ಹರಿದುಕೊಳ್ಳುತಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ನಮ್ಮನ್ನು (ಅಂದರೇ ದೃಶ್ಯ ಮಾಧ್ಯಮದ ಒಂದು ಭಾಗವಾಗಿರುವ ನನ್ನನ್ನೂ ಒಳಗೊಂಡಂತೆ) ಪತ್ರಕರ್ತರು ಎಂದು ಕರೆಯುವುದಿಲ್ಲ, ಬದಲಾಗಿ ಬಫೂನುಗಳು ಎಂದು ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಮ ತನ್ನ ವಚನವೊಂದರಲ್ಲಿ ನಮ್ಮನ್ನು ಹೀಗೆ ಎಚ್ಚರಿಸಿದ್ದಾನೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ-ಮೂರು ಲೋಕವೆಲ್ಲವೂ
ಬರಸೂರೆವೋಯಿತ್ತು ಗುಹೇಶ್ವರಾ.

(ವ್ಯಂಗ್ಯಚಿತ್ರ ಕೃಪೆ : ಪ್ರಕಾಶ್ ಶೆಟ್ಟಿ, ಪ್ರಜಾವಾಣಿ.)