Daily Archives: October 12, 2012

ಕರ್ನಾಟಕದ ತಳಸಮುದಾಯಗಳು ಏರಿದ… ಏರಬೇಕಾದ ಎತ್ತರ.


-ಡಾ.ಎಸ್.ಬಿ. ಜೋಗುರ


ದೇಶದ ಉನ್ನತ ಶಿಕ್ಷಣದ ವಲಯದಲ್ಲಿ ಎರಡು ಪ್ರಮುಖ ಸಂಗತಿಗಳು ಎರಡು ವಿಭಿನ್ನ ಕಾರಣಗಳಿಗಾಗಿ ಗಮನ ಸೆಳೆದಿವೆ. ಒಂದನೆಯದು ಉನ್ನತ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ ಮೇಲೂ 2009 ರ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ 9 ಪ್ರತಿಶತ ದಾಟಿರಲಿಲ್ಲ. ಈಚೆಗಷ್ಟೇ ಮಾಡಲಾದ ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ ಆ ಪ್ರಮಾಣ ಈಗ 19.5 ರಷ್ಟಾಗಿದೆ. ಅಂದರೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ 10 ಪ್ರತಿಶತದಷ್ಟು ಹೆಚ್ಚಳ ಸಾಧಿಸಿದ್ದು ಸಾಮಾನ್ಯವೇನಲ್ಲ. ಆದರೆ ಅದರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರಮಾಣ ಕೇವಲ 10.2 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಕೇವಲ 4.4 ಪ್ರತಿಶತದಷ್ಟಿದೆ ಎನ್ನುವುದು ಮಾತ್ರ ಆಘಾತಕಾರಿ. ಇದು ಕೇವಲ ಉನ್ನತ ಶಿಕ್ಷಣರಂಗ ಮಾತ್ರವಲ್ಲದೇ ಜೀವನದ ಹತ್ತಾರು ವಲಯಗಳಲ್ಲಿ ಇನ್ನೂ ಈ ತಳ ಸಮುದಾಯಗಳು ಹಿಂದೆಯೆ ಬಿದ್ದಿವೆ. ದೇಶ ಸ್ವಾಯತ್ತವಾಗಿ ಆರು ದಶಕಗಳು ಗತಿಸಿದ ಮೇಲೂ ಕಳೆದ ಅನೇಕ ದಶಕಗಳಿಂದಲೂ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಸೌಲಭ್ಯಗಳನ್ನು ನೀಡಿದ ಮೇಲೂ ಅವರ ಸಾಮಾಜಿಕ ಸ್ಥಿತಿಗತಿ ಮಹತ್ತರವಾದ ಪರಿವರ್ತನೆಗಳನ್ನು ಕಂಡುಕೊಂಡಿಲ್ಲ. ಅಲ್ಲಿ ಸಾಧ್ಯವಾದದ್ದು ಕೇವಲ ಸಮಾನಾಂತರ ಸಂಚಲನೆಯೆ ಹೊರತು ಲಂಬರೂಪದ ಸಂಚಲನೆ ಸಾಧ್ಯವಾಗಲಿಲ್ಲ.

ಕರ್ನಾಟಕ ರಾಜ್ಯದ ಚಿತ್ರಣವನ್ನು ಗಮನಿಸಿ ಮಾತನಾಡುವುದಾದರೆ, ದೇಶದ ಪ್ರಮುಖ ರಾಜ್ಯಗಳ ಸಾಲಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕದ ವಿಷಯವಾಗಿ ಅದು 12 ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಕೇರಳ ಮತ್ತು ಕೊನೆಯ ಸ್ಥಾನದಲ್ಲಿ ಚತ್ತೀಸಘಡ್ ರಾಜ್ಯಗಳಿವೆ. ಸದಾ ಸಮಸ್ಯೆಗಳ ರಾಜ್ಯ ಎಂದೇ ಬಿಂಬಿತವಾಗುವ ಬಿಹಾರ 20 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವವರ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ 20.8 ಪ್ರತಿಶತದಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಅದು 32.6 ಪ್ರತಿಶತದಷ್ಟಿದೆ [ಪ್ಲ್ಯಾನಿಂಗ್ ಕಮಿಷನ್-2008]. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಿತಿ ಕೊಂಚ ವಿಭಿನ್ನವಾಗಿದೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಬಡತನದ ಪ್ರಮಾಣ 31.8 ರಷ್ಟಿದ್ದರೆ ಪರಿಶಿಷ್ಟ ಪಂಗಡಗಳಲ್ಲಿ ಆ ಪ್ರಮಾಣ 23.5 ರಷ್ಟಿದೆ. 5 ವರ್ಷದ ವಯೋಮಾನದ ಕೆಳಗಿರುವ ಮಕ್ಕಳ ಮರಣ ಪ್ರಮಾಣದ ಚಿತ್ರಣವಂತೂ ದಲಿತ ಮತ್ತು ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮಿಕ್ಕ ಎಲ್ಲ ಜನಸಮುದಾಯಗಳ ರಾಜ್ಯದಲ್ಲಿ ಆ ಪ್ರಮಾಣ 54.7 ಪ್ರತಿಶತದಷ್ಟಿದ್ದರೆ ಪರಿಶಿಷ್ಟ ಜಾತಿಯವರಲ್ಲಿ ಅದು 65.4 ಪ್ರತಿಶತ ಮತ್ತು ಪರಿಶಿಷ್ಟ ಪಂಗಡದವರಲ್ಲಿ 77.9 ಪ್ರತಿಶತದಷ್ಟಿದೆ. ಮುಸ್ಲಿಂ ಸಮುದಾಯದಲ್ಲಿ ಅದು 57.2 ರಷ್ಟಿದೆ. ಇದು 5 ವರ್ಷದ ಕೆಳಗಿನ ವಯೋಮಾನದ ಮಕ್ಕಳ ಮರಣ ಪ್ರಮಾಣದ ಚಿತ್ರಣವಾದರೆ ಇದೇ ವಯೋಮಾನದಲ್ಲಿ ಬರುವ ಕಡಿಮೆ ತೂಕದ ಮಕ್ಕಳ ಪ್ರಮಾಣ ಹೀಗಿದೆ:

ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 41.7 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು ಹೆಚ್ಚೂ ಕಡಿಮೆ ಅದೇ ಪ್ರಮಾಣದಲ್ಲಿ ಅಂದರೆ 41.9 ರಷ್ಟಿದೆ. ಮುಸ್ಲಿಂರಲ್ಲಿ ಆ ಪ್ರಮಾಣ ಸ್ವಲ್ಪ ಕಡಿಮೆಯಿದ್ದು ಅದು 36.8 ರಷ್ಟಿದೆ. ಸಾಕ್ಷರತೆಯ ವಿಷಯದಲ್ಲಿ ಮಾತ್ರ ರಾಜ್ಯ ದೇಶದ ಪ್ರಮಾಣವನ್ನು ಮೀರಿರುವುದು ಹೆಮ್ಮೆಯ ಸಂಗತಿ. ದೇಶದ ಒಟ್ಟು ಸಾಕ್ಷರತೆಯ ಪ್ರಮಾಣ [2011] ರ ವೇಳೆಗೆ 74 ಪ್ರತಿಶತ ಆದರೆ ರಾಜ್ಯದ ಸಾಕ್ಷರತೆ ಮಾತ್ರ 75.6 ಪ್ರತಿಶತ. 2005-06 ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 61.1 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು 57.4 ರಷ್ಟಿದೆ. ರಾಜ್ಯದ ಮುಸ್ಲಿಂ ಸಮುದಾಯ ಮಾತ್ರ ಅದಾಗಲೇ 74.2 ರಷ್ಟು ಸಾಕ್ಷರತೆಯನ್ನು ಸಾಧಿಸಿರುವುದಿದೆ. ಈ ಪ್ರಮಾಣ ಆ ಸಂದರ್ಭದ ದೇಶದ ಮುಸ್ಲಿಂ ಸಮುದಾಯದ ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿತ್ತು. ಇದನ್ನು ಗಮನಿಸಿದರೆ ಮುಸ್ಲಿಂ ಸಮುದಾಯದಲ್ಲಿ ಈಗೀಗ ಶಿಕ್ಷಣ ಒಂದು ಸಾರ್ವತ್ರಿಕ ಹಕ್ಕಾಗಿ ಬೆಳೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಸೈಯದ್ ಅಹ್ಮದ ಖಾನ್, ಬದ್ರುದ್ದೀನ್ ತ್ಯಾಯಬ್ಜಿ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಅಹೋರಾತ್ರಿ ಶ್ರಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ದೇಶದ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ಜಾರ್ಖಂಡ, ಉತ್ತರಪ್ರದೇಶ, ಓರಿಸ್ಸಾದಂತಹ ರಾಜ್ಯಗಳನ್ನು ನೋಡಿದಾಗ ಕರ್ನಾಟಕ ತುಂಬಾ ಆಶಾದಾಯಕ ಸ್ಥಿತಿಯಲ್ಲಿದೆ. ಅದೇ ವೇಳೆಗೆ ಕೇರಳ, ಗೋವಾ, ಹಿಮಾಚಲಪ್ರದೇಶ ದಂತಹ ರಾಜ್ಯಗಳನ್ನು ನೋಡಿದಾಗ ನಿರಾಶಾದಾಯಕ ಸ್ಥಿತಿಯಿದೆ. ರಾಜ್ಯದ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಹಕ್ಕು, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗಲೂ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರಲು ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾದ ಜಾತಿಪದ್ಧತಿ ಎನ್ನುವ ಸಂಸ್ಥೆ. ಅದು ಭೌತಿಕ ಸಂಗತಿಗಳು ಕೊಡಮಾಡುವ ಅವಕಾಶಗಳನ್ನು ಸಾಮಾಜಿಕ ಸನ್ನಿವೇಶದಲ್ಲಿ ಗೌರವಿಸುವ. ಗುರುತಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಆಗಿದೆ. ಅದೇ ವೇಳೆಗೆ ತೀರಾ ರಿಮೋಟ್ ಪ್ರದೇಶಗಳಲ್ಲಿ ಬದುಕುವ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಇನ್ನೂ ಈ ಬಗೆಯ ಸೌಲಭ್ಯಗಳ ಬಗ್ಗೆ ನೂರಕ್ಕೆ ನೂರರಷ್ಟು ತಿಳುವಳಿಕೆಯಿಲ್ಲ. ಇನ್ನು ಸೌಲಭ್ಯಗಳನ್ನು ಪಡೆದು ಸುಧಾರಿತರಾದವರು ತನ್ನ ಸಮುದಾಯದಲ್ಲಿಯೆ ಹಿಂದೆ ಬಿದ್ದವರ ಕಡೆಗೆ ಹೊರಳಿ ನೋಡುವುದಿಲ್ಲ. ಬದಲಾಗಿ ಸಂಸ್ಕೃತಾನುಕರಣದ ಭರಾಟೆಯಲ್ಲಿ ಆತ ತನ್ನ ಮೂಲವನ್ನೇ ಮರೆಯುತ್ತಾನೆ.

ಹಾಗಾಗಿಯೆ ಚಿಂತಕ ಪೆರಿಯಾರ್ ಹೀಗೆ ಹೇಳುತ್ತಾರೆ. ‘ಒಬ್ಬ ಬ್ರಾಹ್ಮಣ ನೂರು ಪ್ರತಿಶತ ಬ್ರಾಹ್ಮಣ. ಆದರೆ ಒಬ್ಬ ಶೂದ್ರ ಸಂಸ್ಕೃತಾನುಕರಣಕ್ಕೆ ಸಿಲುಕಿದರೆ ಆತ ನೂರಾ ಹತ್ತು ಪ್ರತಿಶತ ಬ್ರಾಹ್ಮಣ’ ಎನ್ನುವ ಮಾತು ನಿಜವೆನಿಸುತ್ತದೆ. ಸುಧಾರಿತ ದಲಿತ ಜನಸಮೂಹ ತಮ್ಮೊಂದಿಗೆ ತನ್ನ ಜನರನ್ನು ಕರೆದೊಯ್ಯುವ ಕೆಲಸ ಮಾಡಬೇಕಿದೆ. ಇವತ್ತಿಗೂ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅವರ ಮೇಲೆ ನಡೆಯುವ ದೌರ್ಜನ್ಯಗಳು, ಅವರು ಬದುಕಿರುವ ರೀತಿ ಅವರ ಮನೆಗಳ ರಚನೆಯನ್ನು ನೋಡಿದರೆ ಅವರಿಗೆ ಯಾವ ಸೌಲಭ್ಯಗಳೂ ಸರಿಯಾಗಿ ದೊರೆತಿಲ್ಲ ಎನಿಸುತ್ತದೆ. ಗುಲ್ಬರ್ಗಾ ಜಿಲ್ಲೆಯ ಕೆಲ ಪರಿಶಿಷ್ಟ ಪಂಗಡಗಳು ಬಡತನಕ್ಕೆ ಹೆದರಿ ತಮ್ಮ ಕರಳು ಕುಡಿಗಳನ್ನೇ ಮಾರಾಟ ಮಾಡುವ ಧಾರುಣ ಘಟನೆಗಳು ದಂತಕಥೆಗಳಿಗಿಂತಲೂ ಭಯಂಕರವಾಗಿವೆ.

2008-09 ರ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 71.5 ಪ್ರತಿಶತ ಪರಿಶಿಷ್ಟ ಜಾತಿಯ ಜನರಿಗೆ ಶೌಚಾಲಯಗಳ ಸೌಲಭ್ಯವಿಲ್ಲ. ಗಂಡು-ಹೆಣ್ಣು ಇಬ್ಬರೂ ಕೈಯಲ್ಲಿ ತಂಬಿಗೆ ಹಿಡಿದು ಬಯಲು ಕಡಿಗೆ ನಡೆಯುವ ಪರಿಸ್ಥಿತಿಯಿದೆ. ಹಗಲು ಹೊತ್ತಿನಲ್ಲಿ ಶೌಚಕ್ಕೆ ತೆರಳದ ಸ್ಥಿತಿಯೂ ಇಲ್ಲದಿಲ್ಲ. ಹಾಗೆಯೆ ಸುಮಾರು 70 ಪ್ರತಿಶತ ಪ.ಪಂಗಡದ ಜನರಿಗೆ ಶೌಚಾಲಯಗಳಿಲ್ಲ. ಆದರೆ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಕೇವಲ 35.4 ಪ್ರತಿಶತ ಜನಸಮೂಹಕ್ಕೆ ಶೌಚಾಲಯಗಳಿಲ್ಲ. ಇದು ಇಡೀ ದೇಶದಲ್ಲಿರುವ 49.2 ಪ್ರತಿಶತ ಶೌಚಾಲಯಗಳ ಪ್ರಮಾಣವನ್ನು ಮೀರಿದುದಾಗಿದೆ. ಇದೇ ರೀತಿಯಲ್ಲಿ ಆಸ್ಪತ್ರೆಗಳಿಲ್ಲದಿರುವ, ಶಾಲೆಗಳಿಲ್ಲದಿರುವ, ಕುಡಿಯಲು ಶುದ್ಧವಾದ ನೀರಿಲ್ಲದ, ಸುರಕ್ಷಿತವಾದ ಮನೆಗಳಿಲ್ಲದ, ವಿದ್ಯುತ್ ಸೌಕರ್ಯವಿಲ್ಲದ ಇನ್ನೂ ಅನೇಕ ಕೊರತೆಗಳ ನಡುವೆ ಈ ಸಮುದಾಯಗಳು ಬದುಕಬೇಕಿದೆ.

ನಮ್ಮ ದೇಶದ ಧಾರ್ಮಿಕ ಸಮೂಹಗಳ ಪಾಲಲ್ಲಿ ಮುಸ್ಲಿಂ ಸಮುದಾಯವೇ ಸುಮಾರು 12 ಪ್ರತಿಶತದಷ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಮುಸ್ಲಿಂರ ಸ್ಥಿತಿಗತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕಿಂತಲೂ ಚೆನ್ನಾಗಿವೆ. ಅವರಲ್ಲಿಯ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ, ಮನೆಗಳ ರಚನೆ, ಸಾಕ್ಷರತೆ ಮುಂತಾದ ವಿಷಯಗಳಲ್ಲಿ ಅವರು ಮಿಕ್ಕವರಿಗಿಂತಲೂ ಸುಧಾರಿತ ಸ್ಥಿತಿಯಲ್ಲಿದ್ದಾರೆ. ದೇಶದ ಮಿಕ್ಕ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ರಾಜ್ಯದ ಸ್ಥಿತಿ ಚೆನ್ನಾಗಿದೆ. 2000 ಸಂದರ್ಭದಲ್ಲಿಯೂ ಅದು ತನ್ನ ಸ್ಥಾನವನ್ನು 12 ಕ್ಕೆ ಸೀಮಿತಗೊಳಿಸಿಕೊಂಡಿದ್ದರೆ 2007-08 ರ ಸಂದರ್ಭದಲ್ಲಿಯೂ ಅದು ಆ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಮಾನವ ಅಭಿವೃದ್ಧಿ ಎನ್ನುವುದು ಭೌತಿಕ ಸಂಗತಿಗಳಿಂದ ಅಳೆಯಬಹುದಾದರೂ ಸಾಮಾಜಿಕ ಬದುಕಿನ ಭಾಗವಾಗಿರುವ ಮಾನಸಿಕ ಅಂಶಗಳನ್ನು ನಿರ್ಲಕ್ಷಿಸಿ ಮಾನವ ಅಭಿವೃದ್ಧಿಯನ್ನು ಸಾಧಿಸಲಾಗದು. ಶೋಷಿತ ಸಮುದಾಯದ ಒಬ್ಬ ವ್ಯಕ್ತಿ ಅನುಭವಿಸಿದ. ಅನುಭವಿಸುವ ಸೌಲಭ್ಯಗಳನ್ನು ಕಂಡು ಅವನೊಂದಿಗೆ ಬದುಕುವ ಇತರರು ಕರಬುವಂತಾಗಬಾರದು. ಮೂದಲಿಕೆಯ ಮಾತುಗಳು ಮತ್ತು ಮಾನಸಿಕ ಕಿರಕಿರಿಯ ನಡುವೆ ದೊರೆಯಬಹುದಾದ ಯಾವ ಸೌಲಭ್ಯಗಳೂ ನೆಮ್ಮದಿಯನ್ನು ಒದಗಿಸಲಾರವು. ಶೋಷಿತರ, ದಮನಿತರ ಬಗೆಗೆ ಪೂರಕ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುವ ಮೂಲಕ ತಳ ಸಮುದಾಯಗಳನ್ನು ಎತ್ತರಿಸಬೇಕಿದೆ.