Daily Archives: October 25, 2012

ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್

– ತೇಜ ಸಚಿನ್ ಪೂಜಾರಿ

“ಅಸೋಸಿಯೇಶನ್” (association) ಎಂಬುವುದು ಹಲವು ಸಾಧ್ಯತೆಗಳು ಹಾಗೂ ಅರ್ಥಪರಂಪರೆಗಳಯಳ್ಳ ಪರಿಣಾಮಕಾರಿಯಾದ ಒಂದು ಕ್ರಿಯೆಯಾಗಿದೆ. ಒಂದು ನಿರ್ದಿಷ್ಟ ಆಸ್ಮಿತೆ ಆಥವಾ ಸಂಸ್ಥೆಗೆ ಸ್ವೀಕರಣೆ ಯಾ ನಿರಾಕರಣೆಯ ಗುಣವನ್ನು ದಯಪಾಲಿಸುವ ತಾಕತ್ತು “ಅಸೋಸಿಯೇಶನ್”ಗೆ ಇರುತ್ತದೆ. ಐತಿಹಾಸಿಕ ನೆಲೆಯಲ್ಲಿ ವಿಶ್ಲೇಷಿಸಿದಾಗ “ಕೂಡಾಟ ಅಥವಾ ಸಹಚರ್ಯ” ಅನ್ನೋದು ನ್ಯಾಯಬದ್ಧತೆಯನ್ನು ಗಳಿಸುವ ಒಂದು ತಂತ್ರವಾಗಿ ಬಳಕೆಯಾಗಿರುವುದು ಕಂಡುಬರುತ್ತದೆ. ವಿಶೇಷವಾಗಿ ಪ್ರಭುತ್ವವು ವ್ಯಾಪಕ ನೆಲೆಯಲ್ಲಿ ಇಂತಹ ತಂತ್ರದ ಮೊರೆ ಹೊಕ್ಕಿರುವ ಸಂಗತಿ ತಿಳಿಯುತ್ತದೆ. ಆಳುವ ವರ್ಗಗಳು ತಮ್ಮ ಆಡಳಿತೆಗೆ ಹಾಗೂ ನಿರಂಕುಶತೆಗೆ ಒಂದು ಜನಪ್ರಿಯ ನೆಲೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಧರ್ಮ ಹಾಗೂ ಸಾಹಿತ್ಯದ ಜೊತೆಗೆ “ಅಸೋಸಿಯೇಟ್” ಆದದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಧರ್ಮ ಹಾಗೂ ಸಾಹಿತ್ಯ ಇವೆರಡೂ ಜನಾದರಣೀಯ ನೆಲೆಯನ್ನು ಹೊಂದಿರುವುದು ಇಂತಹ ಪ್ರವೃತ್ತಿಗಳಿಗೆ ಮುಖ್ಯ ಕಾರಣ.

“ಡಿಸೊಸಿಯೇಷನ್” (dissociation) ಕೂಡಾ ಅಷ್ಟೇ ಪ್ರಭಾವಶಾಲಿಯಾದದ್ದು. ಇಲ್ಲಿ ಅದಕ್ಕೆ ನೇತ್ಯಾತ್ಮಕ ನೆಲೆಯಿದೆ. ಅದು ಒಂದು ಬಗೆಯ ಟೀಕೆ ಅಥವಾ ಬಂಡಾಯ, ಸ್ವತಂತ್ರತೆ ಯಾ ದಿಟ್ಟತೆಯನ್ನು ಪ್ರತಿನಿಧಿಸುತ್ತದೆ. ಈ ಹಿನ್ನಲೆಯಲ್ಲಿ ಅದು “ರಿಜೆಕ್ಷನ್” ಕೂಡ ಆಗಿದೆ. ಕನ್ನಡ ಪರಂಪರೆಯಲ್ಲಿಯೇ ಇದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಪ್ರಭುತ್ವದ ಪರಿಧಿಯೊಳಗಿದ್ದುಕೊಂಡೇ “ಓಲಗಿಸಿ ಬಾಳ್ವುದೇ ಕಷ್ಟಂ ಇಳಾಧಿನಾಥರಂ” ಎಂಬ ನಿರಾಕರಣೆಯ ನೆಲೆಯನ್ನು ಪಂಪ ಪ್ರತಿಪಾದಿಸುತ್ತಾನೆ. ಮುಂದೆ ಬಂದ ಬಸವಣ್ಣ, ಅಕ್ಕ ಮೊದಲಾದ ಪ್ರತಿಭೆಗಳಲ್ಲಿ ಇಂತಹ ಪ್ರವೃತ್ತಿಗಳು ಇನ್ನಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ.

“ಡಿಸೊಸಿಯೇಷನ್” ಒಂದು ಮೂರ್ತ ರೂಪವನ್ನು ಪಡಕೊಂಡಿದ್ದು ಆಧುನಿಕ ಬದುಕಿನಲ್ಲಿಯೇ ಆಗಿದೆ. ಬೌಧ್ಧಿಕ ಪರಿಕರಗಳ ಅಭೂತಪೂರ್ವ ಬೆಳವಣಿಗೆ ಅಂತಹ ಪ್ರವೃತ್ತಿಯ ಅವಶ್ಯಕತೆ ಹಾಗೂ ಸಾಧ್ಯತೆಗಳನ್ನು ವ್ಯಾಪಕವಾಗಿ ವಿಸ್ತರಿಸಿದೆ. ಒಂದು ವ್ಯವಸ್ಥೆಯನ್ನು ಪ್ರತಿನಿಧಿಸುವ ಯಾವುದೇ ಆಸ್ಮಿತೆ ಆಥವಾ ಸಂಸ್ಥೆಯ ಹೊರಗಿದ್ದುಕೊಂಡು ಸುಧಾರಣೆ ಯಾ ಪರ್ಯಾಯ ನಿರ್ಮಾಣದ ಯತ್ನವು ಅಂತಹ “ಡಿಸೊಸಿಯೇಷನ್” ಪ್ರಕ್ರಿಯೆಯ ಒಂದು ಸಾಮಾನ್ಯ ಮಾದರಿಯಾಗಿದೆ. ಅದರ ಹತ್ತು ಹಲವು ಗಂಭೀರ ಮಾದರಿಗಳು ನಮ್ಮ ಮುಂದಿವೆ. ಖ್ಯಾತ ಸಾಹಿತಿ ಸಾತ್ರೆ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನೇ ಸ್ವೀಕರಿಸಲು ಒಪ್ಪಲಿಲ್ಲ. ಇತಿಹಾಸ ತಜ್ಞೆ ರೊಮಿಲಾ ಥಾಪರ್ ಹಲವು ಬಾರಿ ಭಾರತ ಸರಕಾರ ನೀಡುವ ಪದ್ಮ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ. ನಮ್ಮವರೇ ಆದ ಅರುಂಧತಿ ರಾಯ್ ಕೂಡ ಇಂತಹದ್ದೇ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಒಮ್ಮೆ, “If protesting against having a nuclear bomb implanted in my brain is anti-Hindu and anti-national, then I secede. I hereby declare myself an independent, mobile republic. I am a citizen of the earth. I own no territory. I have no flag.” ಅಂದಿದ್ದರು.

ಇಲ್ಲಿ “ಡಿಸೊಸಿಯೇಷನ್” ಎಂಬುವುದು ವಾಸ್ಥವದ ಪೂರ್ಣ ನಿರಾಕರಣೆ ಅನ್ನೋ ಅರ್ಥವನ್ನು ನೀಡುವುದಿಲ್ಲ. ಅರುಂಧತಿ ರಾಯ್ ಸೇರಿದಂತೆ ಎಲ್ಲಾ “ಹೊರಗಿನವರು” ಸಮಷ್ಟಿಯ ವಾಸ್ತವ ಬದುಕಿನ ಶ್ರೇಯಸ್ಸಿಗೆ ದುಡಿದಿದ್ದಾರೆ. ಬಡವರ, ದೀನ-ದಲಿತರ ಹಾಗೂ ಪರಿಸರದ ಕರಿತಾದ ನಿಷ್ಕಾಮ ಕಾಳಜಿಗಳನ್ನು ಹೊಂದಿರುವವರೇ ಆಗಿದ್ದಾರೆ. ಇಲ್ಲಿ ಅವರ “ಡಿಸೊಸಿಯೇಷನ್” ಅನ್ನೋದು ವ್ಯವಸ್ಥೆಯ ವೈಪಲ್ಯ, ಅಸಮರ್ಥತೆ ಹಾಗೂ ಧಾರ್ಷ್ಯತೆಗೆ ರೂಪುಗೊಂಡ ಒಂದು ಪ್ರತಿಭಟನೆಯಾಗಿದೆ.

ಇದೇ ಹಿನ್ನೆಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರು “ಆಳ್ವಾಸ್ ನುಡಿಸಿರಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ವರ್ತಮಾನ.ಕಾಮ್‌ನಲ್ಲಿ ಪ್ರಸ್ತಾಪವಾಗಿರುವ ವಿಷಯವನ್ನು ಅರ್ಥೈಸುವುದು ಸೂಕ್ತ. ಅನಂತಮೂರ್ತಿಯವರ ಒಟ್ಟು ವ್ಯಕ್ತಿತ್ವವನ್ನು ಕುರಿತಂತೆ ಹಲವು ಟೀಕೆಗಳಿವೆ. ಆದಾಗ್ಯೂ ಅವರು ಕನ್ನಡದ ಸೃಜನಶೀಲತೆ, ಸಾಕ್ಷಿಪ್ರಜ್ಞೆ ಹಾಗೂ ಜೀವಪರ ಧೋರಣೆಯ ಓರ್ವ ಸಮರ್ಥ ಪ್ರತಿನಿಧಿ ಎಂಬ ವಿಚಾರ ನಿರ್ವಿವಾದ. ಅವರೇ ರಚಿಸಿದ ಸಾಹಿತ್ಯ ಅವರಿಗೆ ಅಂತಹ ಒಂದು ಹೊಣೆಗಾರಿಕೆಯನ್ನು ನೀಡಿದೆ. ಅವರ ಪ್ರಾತಿನಿಧಿಕ ವ್ಯಕ್ತಿತ್ವಕ್ಕೆ ಜನಾದರಣೀಯ ನೆಲೆಯೂ ಇದೆ. ಇದು ಅನಂತಮೂರ್ತಿಯವರ ನಡೆ ನುಡಿಗಳನ್ನು ಸಾರ್ವಜನೀಕರಣ ಗೊಳಿಸುತ್ತದೆ. ಹೀಗಾಗಿ ಯಾವುದೇ ಆಸ್ಮಿತೆ ಆಥವಾ ಸಂಸ್ಥೆಗೆ ಸ್ವೀಕರಣೆ ಯಾ ನಿರಾಕರಣೆಯ ಸ್ವರೂಪವನ್ನು ನೀಡುವ ಶಕ್ತಿ ಅವರ “ಅಸೋಸಿಯೇಶನ್”ಗೆ ಇದೆ. ಇದು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

ಕರಾವಳಿ ಕರ್ನಾಟಕದ, ವಿಶೇಷವಾಗಿ, ತುಳು ಪ್ರಾಂತ್ಯದಲ್ಲಿ ಹಲವು ಆಯಾಮಗಳುಳ್ಳ “ಯಜಮಾನಿಕೆ”ಯೊಂದು ರೂಪುಗೊಳ್ಲುತ್ತಿದೆ. ಅದರ ಸ್ವರೂಪವನ್ನು ಇಲ್ಲಿಯೇ ವರ್ತಮಾನ.ಕಾಮ್‌ನಲ್ಲಿ ಪ್ರಕಟಗೊಂಡಿರುವ ಹಲವಾರು ಲೇಖನಗಳಲ್ಲಿ ನವೀನ್ ಸೂರಿಂಜೆ ನೀಡಿದ್ದಾರೆ. ಕಲ್ಲಡ್ಕ, ಉಳ್ಳಾಲ, ಉಡುಪಿ, ಧರ್ಮಸ್ಥಳ, ಮೂಡಬಿದಿರೆ ಮೊದಲಾದ ಕಡೆಗಳಲ್ಲಿ ಕ್ರಿಯಾಶೀಲವಾಗಿರುವ ಅದು ನಿಧಾನವಾಗಿ ಉಳಿದೆಡೆಗಳಿಗೆ ಹಬ್ಬುತ್ತಿದೆ. ಇಂತಹ ಯಜಮಾನಿಕೆಯ ಅತೀರೇಕದ ಅಭಿವ್ಯಕ್ತಿಗಳೇ ಸಮಾಜೋತ್ಸವ, ಮೋರಲ್ ಪೋಲೀಸಿಂಗ್, ಕೋಮುಗಲಭೆ ಇತ್ಯಾದಿಗಳು. ಧರ್ಮ, ಶಿಕ್ಷಣ ಹಾಗೂ ಕಲೆ- ಈ ಮೂರನ್ನೂ ವ್ಯಾಪಿಸಿರುವ ಈ ಕೃತ್ರಿಮ ಯಜಮಾನಿಕೆಯನ್ನು ಎದುರಿಸುವ ಪ್ರಕ್ರಿಯೆಯಲ್ಲಿ ಅದಕ್ಕೆ ಪರ್ಯಾಯವಾದ ಸಾಂಸ್ಕ್ರತಿಕ ನೆಲೆಯೊಂದನ್ನು ಕಟ್ಟುವ ಅನಿವಾರ್ಯತೆಯಿದೆ. ಇಲ್ಲಿ ಜೀವಪರ ನಿಲುವನ್ನು ಪ್ರತಿಪಾದಿಸುವ ಯು.ಆರ್. ಅನಂತಮೂರ್ತಿಯಂತಹ ಸಾಂಸ್ಕೃತಿಕ ಚೇತನಗಳ ಪಾತ್ರ ಹಿರಿದಾದದ್ದಾಗಿದೆ. ಈ ಹಿನ್ನೆಲೆಯಲ್ಲಿ, ಏಕಕಾಲಕ್ಕೆ ಕೃತ್ರಿಮ ಯಜಮಾನಿಕೆಯ ಜೊತೆಗೆ ಸಹಚರ್ಯ ಹಾಗೂ ಪರ್ಯಾಯ ನಿರ್ಮಾಣ ಯತ್ನ- ಇವೆರಡೂ ಪರಸ್ಪರ ವ್ಯೆರುಧ್ಯವಾಗಬಲ್ಲವು. ಅಲ್ಲದೆ ಅಂತಹ “ಅಸೋಸಿಯೇಶನ್” ಜೀವವಿರೋಧಿ ಯಜಮಾನಿಕೆಗೆ ಜನಮಾಸದಲ್ಲಿ ನ್ಯಾಯಬದ್ಧತೆಯನ್ನು ಒದಗಿಸಿ ಕೊಡುವ ಅಪಾಯವೂ ಇದೆ. ಇದರ ಪೂರ್ಣ ಅರಿವು ಅನಂತಮೂರ್ತಿಯವರಿಗಿದೆ. ಹೀಗಾಗಿಯೇ ಹಲವು ಸಂಧರ್ಭಗಳಲ್ಲಿ ಅವರು “ವೇದಿಕೆ ಹಂಚಿಕೊಳ್ಳುವುದಿಲ್ಲ” “ಆ ಚಾನೆಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ” ಮೊದಲಾದ ಮಾತುಗಳನ್ನು ಆಡಿರುತ್ತಾರೆ.

ಇಲ್ಲಿ ಮತ್ತೊಂದು ಸಾಧ್ಯತೆಯಿದೆ. ಅದು “ಪಾಲ್ಗೊಂಡು” ಪರ್ಯಾಯ ಚಿಂತನೆಯನ್ನು ಪ್ರತಿಪಾದಿಸುವ ನೆಲೆ. ಇದು ಸಹಚರ್ಯವಲ್ಲ. ಬದಲಿಗೆ “ಡಿಸೊಸಿಯೇಷನ್” ಪ್ರಕ್ರಿಯೆಯದ್ದೇ ಇನ್ನೊಂದು ಆಯಾಮ. ಭೈರಪ್ಪನವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ವಹಿಸಿದ್ದ ಸಂಧರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಡಾ.ಕೆ. ಚಿನ್ನಪ್ಪ ಗೌಡರು ಅಂತಹ ನೆಲೆಯೊಂದನ್ನು ಅಭಿವ್ಯಕ್ತಿಸಿದ್ದರು. ಹಾಗೆಯೇ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬರಗೂರು, ವೈದೇಹಿ ಮೊದಲಾದ ಗಣ್ಯರು ಕೂಡ ಯಾವುದೇ ನೆಲೆಯಲ್ಲಿ ಕೃತ್ರಿಮ ಯಜಮಾನಿಕೆಯನ್ನು ಒಪ್ಪಿಕೊಳ್ಳುವ ವರ್ತನೆಯನ್ನು ತೋರಿಲ್ಲ. ದಸರಾ ಹಬ್ಬವನ್ನು ಉಧ್ಘಾಟಿಸುತ್ತಲೆ ಬರಗೂರು ರಾಮಚಂದ್ರಪ್ಪನವರು ಅದರ ಮೂಲಸೆಲೆಯಾದ ಪ್ರಭುತ್ವ ಅಥವಾ ಶಸ್ತ್ರ ಸಂಸ್ಕ್ರತಿಯನ್ನು “ರಿಜೆಕ್ಟ್” ಮಾಡಿದ್ದು ಕೂಡ ಇಲ್ಲಿ ಉಲ್ಲೇಖನೀಯ.

ಬೌಧ್ಧಿಕತೆಯು ತನ್ನ ಅಭಿವ್ಯಕ್ತಿಗೆ ಹಲವು ಸಾಧ್ಯತೆಗಳನ್ನು ರೂಪಿಸಿಕೊಂಡಿದೆ. ಯು.ಆರ್. ಅನಂತಮೂರ್ತಿಯವರು ಪ್ರಾಜ್ಞರು. ಜೀವಪರ ಧೋರಣೆಯುಳ್ಳವರು. ತನ್ನ ಹಾದಿಯ ಕುರಿತಂತೆ ಸ್ಪಷ್ಟವಾದ ಯೋಚನೆಗಳನ್ನು ಹೊಂದಿದ್ದಾರೆ. ಹೀಗಿರುವಾಗ ಸಮಷ್ಟಿಯ ಹಿತಕ್ಕೆ ಪೂರಕವಾದಂತಹ ನಿಲುವನ್ನು ಕೈಗೊಳ್ಳುತ್ತಾರೆ ಅನ್ನೋ ಸಹಜ ವಿಶ್ವಾಸ ಅವರ ಓದುಗ ಬಳಗಕ್ಕಿದೆ.

ಹಾಗೆಯೇ ಇಂತಹ ಒಂದು ಚರ್ಚೆಯನ್ನು ಹುಟ್ಟು ಹಾಕಿದ, ಮಂಗಳೂರಿನಲ್ಲಿ ನಡೆಯುತ್ತಿರುವ ಮಾತನಾಡಲಾಗದ ಟೀಕಿಸಲಾಗದ ವಿಷಯ-ವಿಚಾರಗಳನ್ನು ದಿಟ್ಟತೆಯಿಂದ ಸಾರ್ವಜನಿಕ ವೇದಿಕೆಗೆ ತರುತ್ತಿರುವ ಪತ್ರಕರ್ತ ನವೀನ್ ಸೂರಿಂಜೆಯವರಿಗೆ ಕೃತಜ್ಞತೆಗಳೂ ಸಹ.

ಪ್ರಜಾ ಸಮರ-7 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನಾ ಚಾತುರ್ಯದಿಂದ 1978ರ ಸೆಪ್ಟಂಬರ್ ವೇಳೆಗೆ ಆಂಧ್ರದಲ್ಲಿ ಯುವಶಕ್ತಿ ಧ್ರುವೀಕರಣಗೊಂಡಿತ್ತು. ಈ ಕಾರಣದಿಂದಾಗಿ ಕ್ರಾಂತಿಯ ಯುವ ಶಕ್ತಿ ಏನೆಂಬುದನ್ನು ಜನಸಾಮಾನ್ಯರ ಕಷ್ಟಕೋಟಲೆಗಳಿಗೆ ಕಣ್ಮುಚ್ಚಿ ಕುಳಿತಿದ್ದ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆಗೆ ತೋರಿಸಲು ಮುಂದಾಯಿತು. ಪ್ರಥಮವಾಗಿ 1972 ರಲ್ಲಿ ಇಬ್ಬರು ರೈತರನ್ನು ನೇಣಿಗೇರಿಸಲು ಕಾರಣನಾದ ಆದಿಲಾಬಾದ್ ಜಿಲ್ಲೆಯ ಜಮೀನ್ದಾರ ಮತ್ತು ಒಂದು ಬಾರಿ ಶಾಸಕನಾಗಿದ್ದ 65 ವರ್ಷದ ಪಿತಾಂಬರರಾವ್ ಎಂಬುವನ ವಿರುದ್ಧ ಸಂಘಟನೆಯ ಕಾರ್ಯಕರ್ತರು ಕಾರ್ಯಾಚರಣೆಗೆ ಇಳಿದರು. ಈ ಮುನ್ನ ಎರಡು ವರ್ಷದ ಹಿಂದೆ ನಕ್ಸಲಿಯರಿಂದ ಈ ಜಮೀನ್ದಾರ ಪಿತಾಂಬರರಾವ್ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ.

1976 ರಲ್ಲೇ ಈತನನ್ನು ಮುಗಿಸಲು ತೀರ್ಮಾನಿಸಿದ್ದ ನಕ್ಸಲಿಯರು ಸೆಪ್ಟಂಬರ್ 25 ರಂದು ಸಂಜೆ ಅವನ ಸ್ವಂತ ಊರಾದ ಅದಿಲಾಬಾದ್ ಜಿಲ್ಲೆಯ ತಪ್ಪಲಪುರದಲ್ಲಿ ಅವನ ಬಂಗಲೆಯ ಎದುರು ಕತ್ತಲಲ್ಲಿ ಕಾದು ಕುಳಿತಿದ್ದರು. ಮೊದಲೇ ತೀರ್ಮಾನಿಸಿದಂತೆ ಒಂದು ತಂಡ ಅವನ ಮನೆಯ ಬಳಿ ಕಾದು ಕುಳಿತು, ಅವನ ಕುಟುಂಬದ ಚಲನವಲನ ಗಮನಿಸುವುದು, ಇನ್ನೊಂದು ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮನೆಯ ಮೇಲೆ ದಾಳಿ ಮಾಡುವುದು ಎಂದು ನಿರ್ಧರಿಸಲಾಗಿತ್ತು.

ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ರೆಡ್ಡಿಗಳಷ್ಟೇ ಮತ್ತೊಂದು ಬಲಿಷ್ಟ ಸಮುದಾಯವಾದ ವೆಲಮ ಜಾತಿಗೆ ಸೇರಿದ ಪಿತಾಂಬರರಾವ್ ತನ್ನ ಕ್ರೌರ್ಯ ಮತ್ತು ದರ್ಪದಿಂದ  ಸುತ್ತ ಮುತ್ತಲಿನ ಹಳ್ಳಿಗಳಿಗೆ ಸಿಂಹಸ್ವಪ್ನವಾಗಿದ್ದ. ವೆಲಮ ಜಾತಿಯ ಬಗ್ಗೆ ಆಂಧ್ರದಲ್ಲಿ ಒಂದು ಹಾಸ್ಯದ ಮಾತೊಂದು ಈಗಲೂ ಚಾಲ್ತಿಯಲ್ಲಿದೆ.  ಯಾರಾದರೂ ವೆಲಮ ಜಾತಿಗೆ ಸೇರಿದ ವ್ಯಕ್ತಿಯ ಮುಕುಳಿಗೆ ಬೆಂಕಿ ಹಚ್ಚಿದರೆ, ಅವನು ಬೆಂಕಿ ಆರಿಸಿಕೊಳ್ಳುವ ಬದಲು ಇನ್ನೊಬ್ಬರು ಬಂದು ಆರಿಸಲಿ ಎಂದು ಕಾಯುತ್ತಾನೆ ಎಂದು. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರನ್ನು ಆಶ್ರಯಿಸಿ ಶೋಷಿಸುವುದನ್ನು ವೃತ್ತಿಯಾಗಿಸಿಕೊಂಡಿದ್ದ ಪಿತಾಂಬರರಾವ್‌ನನ್ನು ಮುಗಿಸುವುದು ನಕ್ಸಲಿಯರ ಮೊದಲ ಆದ್ಯತೆಯಾಗಿತ್ತು. ಏಕೆಂದರೆ ಈತ 1972 ರಲ್ಲಿ ನಡೆದ ಇಬ್ಬರು ಜಮೀನ್ದಾರರ ಕೊಲೆಗೆ ಸಂಬಂಧಿಸಿದಂತೆ ಭೂಮಯ್ಯ ಮತ್ತು ಕ್ರಿಸ್ತಗೌಡ ಎಂಬ ಇಬ್ಬರು ಅಮಾಯಕ ಸಣ್ಣ ರೈತರನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದ. ಪಿತಾಂಬರರಾವ್ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಜಮೀನನ್ನು ವಾಪಸ್ ಪಡೆಯಲು ಈ ರೈತರು ನಕ್ಸಲಿಯರ ಮೊರೆ ಹೋಗಿದ್ದರು. ಇದು ಪಿತಾಂಬರರಾವ್‌ನ ಸಿಟ್ಟಿಗೆ ಕಾರಣವಾಗಿತ್ತು. ಈ ನತದೃಷ್ಟ ರೈತರ ಬಿಡುಗಡೆಗಾಗಿ ಮಾನವ ಹಕ್ಕು ಸಂಘಟನೆಗಳು ಸತತ ಕಾನೂನು ಹೋರಾಟ ನಡೆಸಿದವು. ಆದರೆ, ಪಿತಾಂಬರರಾವ್ ಚಿತಾವಣೆಯಿಂದಾಗಿ ಸೃಷ್ಟಿಯಾದ ನಕಲಿ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಆಂಧ್ರ ಹೈಕೋರ್ಟ್ ರೈತರಿಗೆ 1974ರಲ್ಲಿ ಗಲ್ಲು ಶಿಕ್ಷೆ ವಿಧಿಸಿತು. 1975 ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಂಧ್ರ ಸರ್ಕಾರ ಡಿಸಂಬರ್ ಒಂದರಂದು ಈ ಇಬ್ಬರು ರೈತರನ್ನು ಮುಷಿರಾಬಾದ್ ಸೆರೆಮನೆಯಲ್ಲಿ ನೇಣಿಗೇರಿಸಿತು. ಭಾರತದಲ್ಲಿ ಸ್ವಾತಂತ್ರ್ಯಾನಂತರ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 1948 ರಲ್ಲಿ ನಾಥುರಾಮ್ ಗೂಡ್ಸೆಯನ್ನು ಗಲ್ಲಿಗೇರಿಸಿದ ಘಟನೆಯನ್ನು ಹೊರತುಪಡಿಸಿದರೆ, ಪ್ರಪ್ರಥಮವಾಗಿ ಈ ಅಮಾಯಕ ರೈತರು ತಮ್ಮದಲ್ಲದ ತಪ್ಪಿಗೆ ನೇಣುಗಂಬದಲ್ಲಿ ಸಾವು ಕಂಡರು.

ಈ ಘಟನೆ ನಕ್ಸಲ್ ಸಂಘಟನೆಯ ಯುವಕರ ಸಿಟ್ಟಿಗೆ ಮೂಲಕಾರಣವಾಗಿತ್ತು. ಅಂದು ಸಂಜೆ ಮಬ್ಬುಗತ್ತಲಲ್ಲಿ ಪಿತಾಂಬರರಾವ್‌ನ ಬಲಿಗಾಗಿ ಕಾಯುತಿದ್ದ ಯುವಕರಲ್ಲಿ ಒಬ್ಬಾತ ವಿಜ್ಞಾನ ಪದವೀಧರನಾಗಿದ್ದು ಶಿಕ್ಷಕನಾಗಿ ಕೆಲಸ ನಿರ್ವಹಿಸುತಿದ್ದ. ದೈತ್ಯಾಕಾರದ ಭೀಮನಂತೆ ಗೋಚರಿಸುತಿದ್ದ ಇನ್ನೊಬ್ಬ ಯುವಕ ಗೆರಿಲ್ಲಾ ಯುದ್ಧತಂತ್ರದಲ್ಲಿ ಪಳಗಿದವನಾಗಿದ್ದ. ಆದರೆ ಆ ದಿನ ಸಂಜೆ ಅವರ ಕಾರ್ಯತಂತ್ರ ಯಶಸ್ವಿಯಾಗಲಿಲ್ಲ. ಇವರುಗಳು  ಮನೆಯ ಮುಂದೆ ಕತ್ತಲಲ್ಲಿ ಕಾದು ಕುಳಿತಿರುವುದನ್ನು ಪಿತಾಂಬರರಾವ್ ಮನೆಯ ಆಳು ಗಮನಿಸಿದ ಕೂಡಲೇ ಕೂಗತೊಡಗಿದ. ಕೆಲವು ಯುವಕರು ನೆಗೆದು ಅವನನ್ನು ಹಿಡಿದು ಬಾಯಿ ಮುಚ್ಚಿಸುವುದರಲ್ಲಿ ಆತ ಜೋರಾಗಿ ಅರಚಾಡಿದ ಫಲವಾಗಿ ಇತರೆ ಆಳುಗಳು ಓಡೋಡಿ ಬಂದರು. ಅಷ್ಟರಲ್ಲಿ ನಕ್ಸಲ್ ಯುವಕರು ತಮ್ಮ ಬಳಿ ಇದ್ದ ಕಚ್ಛಾ ಬಾಂಬ್‌ಗಳನ್ನು ಪಿತಾಂಬರರಾವ್ ಮನೆಯ ಮೇಲೆ ಎಸೆದು ಕತ್ತಲಲ್ಲಿ ಪರಾರಿಯಾದರು

ತಮ್ಮ ಮೊದಲ ಯತ್ನದಲ್ಲಿ ಸೋಲು ಕಂಡರೂ ವಿಚಲಿತರಾಗದ ನಕ್ಸಲ್ ಯುವಕರು ಎರಡು ವರ್ಷದ ನಂತರ ಅಂದರೆ, 1978 ನವಂಬರ್ ಏಳರಂದು ಮತ್ತೇ ಪಿತಾಂಬರರಾವ್ ಮನೆಯೆದರು ಶಸ್ತ್ರ ಸಜ್ಜಿತರಾಗಿ ಹಾಜರಾದರು. ಆದಿನ ಮನೆಯ ಗೇಟಿನ ಬಳಿ ಗ್ರಾಮಸ್ಥರ ಜೊತೆ ಮಾತನಾಡುತ್ತಾ ನಿಂತಿದ್ದ ಆತನ ಇಬ್ಬರು ವಯಸ್ಕ ಪುತ್ರರು ಹಾಗೂ ರಕ್ಷಣೆಗೆ ನೇಮಕಗೊಂಡಿದ್ದ ಓರ್ವ ಪೊಲೀಸ್ ಪೇದೆ ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾದರು.

ನಂತರ ಬಾಂಬುಗಳ ಸುರಿಮಳೆಗಯ್ಯುತ್ತಾ ವಿಶಾಲವಾದ ಅರಮನೆಯಂತಹ ಬಂಗಲೆಯ ಒಳ ಹೊಕ್ಕು ಜಮೀನ್ದಾರನಿಗೆ ಹುಡುಕಾಡಿದರು. ಆ ದಿನ ಅವನ ಅದೃಷ್ಟ ಚೆನ್ನಾಗಿದ್ದ ಕಾರಣ ಆತ ಮನೆಯಲ್ಲಿ ಇರಲಿಲ್ಲ. ದಾಳಿಗೆ ಪ್ರತಿರೋಧ ತೋರಿದ ಹತ್ತಕ್ಕೂ ಹೆಚ್ಚು ಸೇವಕರು ಬಾಂಬ್ ಮತ್ತು ಗುಂಡಿನ ದಾಳಿಗೆ ಬಲಿಯಾದರು. ತಪ್ಪಲಪುರದಿಂದ ನೆರೆಯ ಗ್ರಾಮಕ್ಕೆ ಹೊರಟ ನಕ್ಸಲ್ ಯುವಕರ ತಂಡ ಪಿತಾಂಬರರಾವ್‌ಗೆ ಗುಮಾಸ್ತನಾಗಿದ್ದುಕೊಂಡು ಆತನ ಎಲ್ಲಾ ಅಕ್ರಮಗಳಿಗೆ ಸೂತ್ರಧಾರನಾಗಿದ್ದ ವ್ಯಕ್ತಿಯ ಮನೆ ಹೊಕ್ಕು ಅವನ ಬಳಿ ಇದ್ದ ಪಿತಾಂಬರರಾವ್‌ನ ಎಲ್ಲಾ ಭೂದಾಖಲೆಗಳನ್ನು ಸುಟ್ಟುಹಾಕಿ ಗುಮಾಸ್ತನನ್ನು ನಡುರಸ್ತೆಗೆ ಕರೆತಂದು ಗಂಟಲು ಸೀಳಿ ಕೊಂದು ಹಾಕಿತು. ಇಷ್ಟಕ್ಕೂ ತೃಪ್ತಿಯಾಗದ ಯುವಕರು ರೈತರ ವಿರುದ್ದ ಸುಳ್ಳು ಸಾಕ್ಷಿ ಹೇಳಿ ಗಲ್ಲು ಶಿಕ್ಷೆ ನೀಡಲು ಕಾರಣನಾದ ವ್ಯಕ್ತಿಯನ್ನು ಅದೇ ಹಳ್ಳಿಯಲ್ಲಿ ಅರಸುತ್ತಾ ಹೊರಟಿತು. ನಕ್ಸಲರು ತನ್ನನ್ನು ಅರಸುತ್ತಾ ಬರುತ್ತಿರುವ ಸುದ್ಧಿ ಕೇಳಿ ಓಡಿ ಹೋಗುತಿದ್ದ ಆತನ ಮೇಲೆ ಗುಂಡು ಹಾರಿಸಿದರು. ಅದೃಷ್ಟವಶಾತ್ ಕತ್ತಲೆಯಲ್ಲಿ ಗುಂಡು ತಗುಲದೇ ಅಪಾಯದಿಂದ ಪಾರಾಗಿ ತಲೆಮರೆಸಿಕೊಂಡ. ನಂತರದ ದಿನಗಳಲ್ಲಿ ನಕ್ಸಲ್ ನಾಯಕರ ಎದುರು ಹಾಜರಾಗಿ ಕ್ಷಮೆ ಕೋರಿ ಜೀವಧಾನಕ್ಕಾಗಿ ಬೇಡಿಕೊಂಡ. ಜನತಾ ನ್ಯಾಯಾಲಯದಲ್ಲಿ ಅವನನ್ನು ಕ್ಷಮಿಸಿದ ನಾಯಕರು ಅವನಿಂದ ಪಿತಾಂಬರರಾವ್ ರೈತರಿಂದ ಕಸಿದುಕೊಂಡಿದ್ದ ಜಮೀನುಗಳ ಎಲ್ಲಾ ಮಾಹಿತಿ ಪಡೆದರು.

1978ರ ನವಂಬರ್ ತಿಂಗಳಿನಲ್ಲಿ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ  ಕರೀಂ ನಗರ, ಪೂರ್ವಗೋದಾವರಿ, ವಾರಂಗಲ್, ಶ್ರೀಕಾಕುಳಂ ಜಿಲ್ಲೆಗಳ ಜಮೀನ್ದಾರರ ಎದೆಯಲ್ಲಿ ಜೀವ ಭಯದ ಬೀಜವನ್ನು ಬಿತ್ತಿತು. ಜೊತೆಗೆ ಸಣ್ಣ ರೈತರು ಕೂಲಿಕಾರ್ಮಿಕರು ಮತ್ತು ಆದಿವಾಸಿಗಳಿಗೆ ಇನ್ನಿಲ್ಲದ ಆತ್ಮಬಲವನ್ನು ತಂದುಕೊಟ್ಟಿತು.

>ಆಂಧ್ರದಲ್ಲಿ ಶ್ರೀಕಾಕುಳಂ ಜಿಲ್ಲೆಯಲ್ಲಿ 60 ರ ದಶಕದಲ್ಲಿ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಉಂಟುಮಾಡಿದ್ದ ಸಂಚಲನವನ್ನು ಮತ್ತೇ ಅದಿಲಾಬಾದ್ ಜಿಲ್ಲೆಯಲ್ಲಿ ಪಿತಾಂಬರರಾವ್ ಕುಟುಂಬವನ್ನು ಬಲಿತೆಗೆದುಕೊಳ್ಳುವುದರ ಮೂಲಕ (ಘಟನೆಯಲ್ಲಿ ಬದುಕುಳಿದಿದ್ದ ಪಿತಾಂಬರರಾವ್ 1980ರಲ್ಲಿ ವೃದ್ಧಾಪ್ಯದಿಂದ ಸಾವನ್ನಪ್ಪಿದ) ಸೃಷ್ಟಿ ಮಾಡಿದ ಯುವಕ ಮತ್ತು ವಿಜ್ಞಾನ ಪದವೀಧರ ಶಿಕ್ಷಕ ಯಾರೆಂದರೆ, ನಲ್ಲ ಆದಿರೆಡ್ಡಿ ಅಲಿಯಾಸ್ ಕಾಮ್ರೇಡ್ ಶ್ಯಾಮ್. ಈತ ಆ ಸಂದರ್ಭದಲ್ಲಿ ಕರೀಮ್ ನಗರ ಜಿಲ್ಲೆಯ ಸಂಘಟನಾ ನಾಯಕನಾಗಿ ಕಾರ್ಯನಿರ್ವಹಿಸುತಿದ್ದ. ಈತನ ಜೊತೆ ಇದ್ದವರು ಸಂತೋಷ್ ರೆಡ್ಡಿ ಅಲಿಯಾಸ್ ಮಹೇಶ್ ಮತ್ತು ಶೀಲಂನಾಗೇಶ್ ಅಲಿಯಾಸ್ ಮುರುಳಿ ಎಂಬ ಇಬ್ಬರು ಯುವನಾಯಕರು.

ಈ ಮೂವರು ನತದೃಷ್ಟರು ಘಟನೆ ನಡೆದ 21 ವರ್ಷಗಳ ನಂತರ 1999 ಡಿಸಂಬರ್ ಎರಡರಂದು ಬೆಂಗಳೂರಿನ ಗಾಂಧಿನಗರದ ಹೋಟೆಲ್ ಒಂದರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾದರು. ಅಂದು ರಾತ್ರಿಯೇ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಂಧ್ರಕ್ಕೆ ಕೊಂಡೊಯ್ದ ಪೊಲೀಸರು ಮರುದಿನ ಬೆಳಗಿನ ಜಾವ ಹೈದರಾಬಾದ್ ನಗರಕ್ಕೆ ಕರೆತಂದರು. ನಂತರ ವಿಚಾರಣೆಯ ನೆಪದಲ್ಲಿ ಕೊಯ್ಯೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮೂವರನ್ನು ಗುಂಡಿಟ್ಟು ಕೊಲ್ಲುವುದರ ಮೂಲಕ ಎನ್ ಕೌಂಟರ್ ಹಣೆಪಟ್ಟಿ ಹಚ್ಚಿದರು. ಬೆಂಗಳೂರಿನಲ್ಲಿ ಆಶ್ರಯ ಕೊಡುತ್ತೀನಿ ಎಂದು ನಂಬಿಸಿ ಕರೆ ತಂದಿದ್ದ ಪೊಲೀಸ್ ಮಾಹಿತಿದಾರನೊಬ್ಬನ ಸಂಚಿಗೆ ಈ ಮೂವರು ನಕ್ಸಲ್ ನಾಯಕರು ಬಲಿಯಾಗಿದ್ದರು. ಇವರ ಪೈಕಿ ತಪ್ಪಲಪುರದ ಪಿತಾಂಬರರಾವ್ ಮನೆ ಮೇಲಿನ ದಾಳಿಯಲ್ಲಿ ಭಾಗವಹಿಸಿ, ಪೊಲೀಸರ ಸಂಚಿನಿಂದ ತಪ್ಪಿಸಿಕೊಂಡು ಬದುಕುಳಿದ ಇನ್ನೋರ್ವ ನಾಯಕನೆಂದರೆ, ವೆಲಮ  ಜಾತಿಗೆ ಸೇರಿದ

ಕಳೆದ ವರ್ಷ ನವಂಬರ್‌ನಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಧ್ಯ ಮತ್ತು ಪೂರ್ವ ಭಾರತದ ಹಿರಿಯ ನಾಯಕ ಕಿಷನ್‌ಜಿ ಪೊಲೀಸರ ಗುಂಡಿಗೆ ಬಲಿಯಾದ. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಿಪುಣರಾಗಿದ್ದ ಮತ್ತೊಬ್ಬ ಹಿರಿಯ ನಾಯಕ ಆರ್.ಕೆ. (ರಾಮಕೃಷ್ಣ) ಈ ವರ್ಷದ ಮೇ ತಿಂಗಳಿನಲ್ಲಿ ಕೊಲ್ಕತ್ತ ಪೊಲೀಸರಿಂದ ಬಂಧನಕ್ಕೆ ಒಳಗಾದರು. ನಕ್ಸಲ್ ಹೋರಾಟದ ಅನಿರೀಕ್ಷಿತ ಹಿನ್ನಡೆಯ ನಡುವೆಯೂ ದೇಶದ 11 ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯೋಜಿಸಿರುವ 75 ಸಾವಿರ ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಶಸಸ್ತ್ರ ಮೀಸಲು ಪಡೆಯ ಸೈನಿಕರ ಪ್ರತಿರೋಧದ ನಡುವೆ ಆಂಧ್ರ ಮೂಲದ ಗಣಪತಿ ನಕ್ಸಲ್ ಹೋರಾಟವನ್ನು ಈಗ ಮುನ್ನಡೆಸುತಿದ್ದಾರೆ.

1970 ದಶಕದ ಅದಿಲಾಬಾದ್ ಜಿಲ್ಲೆಯ ಸಾಮಾಜಿಕ ಕ್ರಾಂತಿಯ ಹೋರಾಟ ನೆರೆಯ ಕರೀಂನಗರದ ಜಿಲ್ಲೆಗೂ ವಿಸ್ತರಿಸಿ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರಿಗೆ ಯಶಸ್ಸು ತಂದುಕೊಡುವುದರ ಜೊತೆಗೆ ಮಾನಸಿಕವಾಗಿ ಸ್ಥೈರ್ಯವನ್ನು ತುಂಬಿಕೊಟ್ಟಿತು. ಕರೀಂನಗರದ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿ ಅದಿಲಾಬಾದ್ ಜಿಲ್ಲೆಗಿಂತ ಭಿನ್ನವಾಗಿರಲಿಲ್ಲ. ಇಲ್ಲಿ ಶ್ರೀಮಂತ ಜಮೀನ್ದಾರರ ಎದುರು ದಲಿತರು ಚಪ್ಪಲಿಯನ್ನು ಧರಿಸಿ ಓಡಾಡುವಂತಿರಲಿಲ್ಲ, ಅಲ್ಲದೇ ಭೂಮಿಯ ಮೇಲಿನ ಹಕ್ಕನ್ನು ಹೊಂದುವಂತಿರಲಿಲ್ಲ. ಆದರೆ, 1977ರಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ಪ್ರೇರಿತನಾಗಿದ್ದ ದಲಿತ ಕೂಲಿಕಾರ್ಮಿಕ ಲಕ್ಷ್ಮೀರಾಜು ಎಂಬಾತ ತನ್ನ ಹಳ್ಳಿಯಲ್ಲಿ ಚಪ್ಪಲಿ ತೊಟ್ಟು ಓಡಾಡತೊಡಗಿದ. ದಸರಾ ಸಮಯದಲ್ಲಿ ಜಮೀನ್ದಾರರು ಸಾಮಾಜಿಕವಾಗಿ ನಿಷೇದ ಹೇರಿದ್ದ ದಲಿತರೇ ಅಭಿನಯಿಸಿ ಪ್ರದರ್ಶಿಸುತ್ತಿದ್ದ ದಕ್ಕಮ್ಮ ಎಂಬ ನಾಟಕವನ್ನು ದಲಿತ ಯುವಕರೊಂದಿಗೆ ಕರೀಂನಗರ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಪ್ರದರ್ಶಿಸತೊಡಗಿದ.

ಕೊಂಡಪಲ್ಲಿಯವರ ಯೋಜನೆಗಳಲ್ಲಿ ಒಂದಾದ ಹಳ್ಳಿಗಳತ್ತ ಪಯಣಿಸಿ ಕಾರ್ಯಕ್ರಮದ ಅನ್ವಯ ನಗರಗಳಿಂದ ಬಂದಿದ್ದ ವಿದ್ಯಾರ್ಥಿಗಳು ಈತನಿಗೆ ಬೆನ್ನೆಲುಬಾಗಿ ನಿಂತರು. ತಮ್ಮ ರಜಾದಿನಗಳಲ್ಲಿ ಹಳ್ಳಿಗಳಿಗೆ ಬರುತಿದ್ದ ಈ ವಿದ್ಯಾರ್ಥಿಗಳು ದಲಿತರು, ಆದಿವಾಸಿಗಳು ಮತ್ತು ಇತರೆ ಹಿಂದುಳಿದ ಜನಾಂಗದ ಜನರಿಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಜಾಗೃತಿ ಮೂಡಿಸುತಿದ್ದರು. ಇದರ ಜೊತೆ ಜೊತೆಯಲ್ಲಿ ಗುಡ್ಡಗಾಡು ಪ್ರದೇಶದ ಭೂಮಿ ಅಥವಾ ಪಾಳು ಬಿದ್ದಿರುವ ಸರ್ಕಾರಿ ಭೂಮಿಯಲ್ಲಿ ಬೇಸಾಯ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಇದರಿಂದ ಪ್ರೇರಿತರಾದ ದಲಿತ ಲಕ್ಷ್ಮೀರಾಜು ಮತ್ತು ಆದಿವಾಸಿ ಯುವಕ ಪೋಸೆಟ್ಟ ಈ ಇಬ್ಬರೂ ತಮ್ಮ ಹಳ್ಳಿಗಳಲ್ಲಿ ಪಾಳು ಬಿದ್ದಿದ್ದ ಸರ್ಕಾರಿ ಭೂಮಿಗೆ ಬೇಲಿ ಹಾಕಿ ಉಳುಮೆ ಮಾಡತೊಡಗಿದರು. ಇಂತಹ ಬೆಳವಣಿಗೆ ವೆಲಮ ಜಾತಿಗೆ ಸೇರಿದ ಜಮೀನ್ದಾರರಿಗೆ ಸಹಜವಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮ್ಮ ಗೂಂಡಾ ಪಡೆಯ ಸದಸ್ಯರ ಮೂಲಕ ಇಬ್ಬರನ್ನೂ ಹತ್ಯೆ ಮಾಡಿಸುವುದರ ಮೂಲಕ ಪರೋಕ್ಷವಾಗಿ ಕರೀಂನಗರ ಜಿಲ್ಲೆಗೆ ಕಮ್ಯೂನಿಷ್ಟರಿಗೆ ಹೋರಾಟಕ್ಕಾಗಿ ಆಹ್ವಾನವಿತ್ತರು.

ಲಕ್ಷ್ಮೀರಾಜು ಮತ್ತು ಪೋಸೆಟ್ಟಿ ಹತ್ಯೆಗೆ ಪ್ರತಿಯಾಗಿ ಕಮ್ಯೂನಿಷ್ಟ್ ಕಾರ್ಯಕರ್ತರು ಈ ಬಾರಿ ನೇರವಾಗಿ ಕಾರ್ಯಾಚರಣೆಗೆ ಇಳಿಯುವ ಬದಲು ಜಮೀನ್ದಾರರಿಗೆ ಪಾಠ ಕಲಿಸಲು ಬೇರೋಂದು ಮಾರ್ಗೋಪಾಯವನ್ನು ಕಂಡುಕೊಂಡಿದ್ದರು. ಜಿಲ್ಲೆಯಾದ್ಯಂತ ಯಾವೊಬ್ಬ ದಲಿತನೂ ಜಮೀನ್ದಾರರ ಭೂಮಿಯಲ್ಲಿ ಜೀತದಾಳಾಗಿ ದುಡಿಯದಂತೆ ಕರೆನೀಡಿದರು. ಅಲ್ಲದೇ ಜೀತದಾಳುಗಳಾಗಿ ದುಡಿಯುತ್ತಿರುವವರು ದೊರೆಗಳ ಮನೆಯಿಂದ ಹೊರಬಂದರೆ ಅಂತಹವರಿಗೆ ಎರಡು ಎಕರೆ ಭೂಮಿ ಒದಗಿಸಿಕೊಡುವುದಾಗಿ ಕರೆನೀಡಿದರು. ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಜಿಲ್ಲೆಯಾದ್ಯಂತ ಒಂದು ಲಕ್ಷ ದಲಿತರು ಮತ್ತು ಭೂರಹಿತ ಕೂಲಿಕಾರ್ಮಿಕರು ಕಮ್ಯೂನಿಷ್ಟ್ ಕಾರ್ಯಕರ್ತರ ಬಳಿ ಅರ್ಜಿ ಹಿಡಿದು ಬಂದರು. ಇವರನ್ನು ಒಗ್ಗೂಡಿಸಿದ ಕಾರ್ಯಕರ್ತರು ಸುಮಾರು 150ಕ್ಕೂ ಹೆಚ್ಚು ಹಳ್ಳಿಗಳ ಒಂದೂವರೆ ಲಕ್ಷ ಜನರನ್ನು ಒಂದುಗೂಡಿಸಿ ಜಾಗ್ತಿಯಾಳ್ ಎಂಬ ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಸಿ, ಕರೀಂನಗರ ಜಿಲ್ಲೆಯಲ್ಲಿ ಜಮೀನ್ದಾರರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಒಂದು ತಿಂಗಳ ಒಳಗಾಗಿ ಸರ್ಕಾರದ ವಶಕ್ಕೆ ಒಪ್ಪಿಸಬೇಕು, ಈ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಭೂರಹಿತ ಕೂಲಿಕಾರ್ಮಿಕರು ಮತ್ತು ದಲಿತರಿಗೆ ಹಂಚಬೇಕೆಂದು ಗಡುವು ನೀಡಿದರು.

ಜೊತೆಗೆ ಸರ್ಕಾರಿ ಅಧಿಕಾರಿಗಳಿಗೆ, ಜಮೀನ್ದಾರರಿಗೆ ಮತ್ತು ಅವರಿಗೆ ಬೆಂಗಾವಲಾಗಿ ನಿಂತ ಪೊಲೀಸರಿಗೆ ಜಿಲ್ಲೆಯಾದ್ಯಂತ ವಿನೂತನ ಬಹಿಷ್ಕಾರ ಹಾಕಲಾಯಿತು. ಯಾವೊಬ್ಬ ದಲಿತ, ಕ್ಷೌರಿಕ, ಅಗಸ, ಚಮ್ಮಾರ, ಕಂಬಾರ, ಬಡಗಿ ಇವರುಗಳ ಸೇವೆಯನ್ನು ಬಂದ್ ಮಾಡಲಾಯಿತು. ಈ ಮೊದಲೇ ಜಾಗ್ತಿಯಾಳ್ ಪಟ್ಟಣದಲ್ಲಿ ಜರುಗಿದ ಸಮಾವೇಶದಿಂದ ನಡುಗಿಹೋಗಿದ್ದ ಜಮೀನ್ದಾರರು ಬಹಿಷ್ಕಾರ ಮತ್ತು ಜೀವಭಯದಿಂದ ತಮ್ಮ ಬಳಿ ಇದ್ದ ಅಕ್ರಮ ಜಮೀನುಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಿದರು. ಈ ಜಮೀನನ್ನು ಕಮ್ಯೂನಿಷ್ಟ್ ಕಾರ್ಯಕರ್ತರು ಭೂಮಿಯ ಲಭ್ಯತೆಯ ಅನುಸಾರ ಎಲ್ಲರಿಗೂ ಸಮನಾಗಿ ಹಂಚಿದರು. ಹೋರಾಟಕ್ಕೆ ಯಾವ ಪ್ರತಿಕ್ರಿಯೆ ನೀಡದೆ ತಣ್ಣಗಿದ್ದ ಜಿಲ್ಲಾಡಳಿತ ನಂತರದ ದಿನಗಳಲ್ಲಿ ನಾಲ್ಕು ಸಾವಿರ ದಲಿತರು ಮತ್ತು ಕೂಲಿಕಾರ್ಮಿಕರ ಮೇಲೆ ಮೊಕದ್ದಮೆ ದಾಖಲಿಸಿ, ಈ ಪ್ರದೇಶವನ್ನು ಗಲಭೆ ಪೀಡಿತ ಪ್ರದೇಶವೆಂದು ಘೋಷಿಸಿತು. ಭಾರತದ ಸಾಮಾಜಿಕ ಹೋರಾಟದಲ್ಲಿ ಪ್ರಥಮಬಾರಿಗೆ ಮೇಲ್ವರ್ಗದ ಜನಕ್ಕೆ ಬಹಿಷ್ಕಾರ ಹಾಕಿದ “ಜಾಗ್ತಿಯಾಳ್ ಯಾತ್ರ” ಎಂದು ಆಂಧ್ರ ಪ್ರದೇಶದ ಇತಿಹಾಸದಲ್ಲಿ ದಾಖಲಾಗಿರುವ ಈ ಹೋರಾಟದ ನೇತೃತ್ವವನ್ನು  ಕೊಂಡಪಲ್ಲಿ ಸೀತಾರಾಮಯ್ಯನವರ ಚಿಂತನೆಯ ಮೂಸೆಯಲ್ಲಿ ಬೆಳೆದು ನೆಚ್ಚಿನ ಯುವಕರಾಗಿದ್ದ ಗಣಪತಿ ಮತ್ತು ಮಲ್ಲೋಜ ಕೋಟೇಶ್ವರರಾವ್ ಅಲಿಯಾಸ್ ಕಿಷನ್‌ಜಿ ವಹಿಸಿಕೊಂಡಿದ್ದರು.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಒರಿಸ್ಸಾ, ಛತ್ತೀಸ್‌ಘಡ, ಮಧ್ಯಪ್ರದೇಶ ರಾಜ್ಯಗಳ 16 ಸಾವಿರ ಹಳ್ಳಿಗಳ ಆದಿವಾಸಿಗಳು ಮತ್ತು ದಲಿತರ ಪಾಲಿಗೆ ಆರಾಧ್ಯ ದೈವನಾಗಿದ್ದ ಕಿಷನ್‌ಜಿ ಕಳೆದ ವರ್ಷ ನವಂಬರ್ 25ರಂದು ಪಶ್ಚಿಮ ಬಂಗಾಳದ ಪೊಲೀಸರು ಮಿಡ್ನಾಪುರ ಅರಣ್ಯ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದ. (ಈ ನಕ್ಸಲ್ ಕಥನಕ್ಕೆ ಪ್ರೇರಣೆಯಾದ ವ್ಯಕ್ತಿ ಕಿಷನ್‌ಜಿ.) ಇದಕ್ಕೂ ಮುನ್ನ ಕೊಲ್ಕತ್ತ ನಗರದಲ್ಲಿ ಬಂಧಿಸಲ್ಪಟ್ಟ ಮಾವೋವಾದಿ ಕಾರ್ಯಕರ್ತನೊಬ್ಬನ ಲ್ಯಾಪ್‌ಟ್ಯಾಪ್‌ನಲ್ಲಿ ದೊರೆತ ಸುಳಿವಿನ ಆಧಾರದ ಮೇಲೆ ಮೊಬೈಲ್ ಸಿಮ್ ಕಾರ್ಡ್‌ನ ಸಂಪರ್ಕ ಜಾಲವನ್ನು ಹಿಂಬಾಲಿಸಿ ಕಿಷನ್‌ಜಿಯನ್ನು ಸರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. 36 ವರ್ಷಗಳ ಹಿಂದೆ ಕರೀಂನಗರ ಜಿಲ್ಲೆಯ ಪೆದ್ದಂಪಲ್ಲಿ ಗ್ರಾಮದಿಂದ ಬಂದು ನಕ್ಸಲ್ ಹೋರಾಟಕ್ಕೆ ಧುಮುಕಿದ ನಂತರ ಈತ ಒಮ್ಮೆಯೂ ತಾನು ಹುಟ್ಟಿ ಬೆಳೆದ ಕುಟುಂಬದತ್ತ ತಲೆ ಹಾಕಿರಲಿಲ್ಲ. ಹೆತ್ತ ತಾಯಿಯ ಮುಖ ನೋಡಿರಲಿಲ್ಲ. ಕೊಲ್ಕತ್ತ ನಗರದ ಆಸ್ಪತ್ರೆಯಲ್ಲಿ ಹೆಣವಾಗಿ ಮಲಗಿದ್ದ ಕಿಷನ್‌ಜಿ ಶವವನ್ನು ಅವನ ತಾಯಿ ಮತ್ತು ಅಣ್ಣನ ಮಗಳು ಆಂಧ್ರದಿಂದ ಬಂದು ಗುರುತಿಸಿದರು. (ಕೊಲ್ಕತ್ತ ನಗರದಲ್ಲಿ ಅವನ ಹಿತೈಷಿಗಳು ಆಸ್ಪತ್ರೆಯ ಶವಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಸಂದರ್ಭದ ಹಾಜರಿದ್ದು ತೆಗೆದ ಚಿತ್ರ ಇದು.) ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕಿಷನ್‌ಜಿ ಶವವನ್ನು ಅವನ ಕುಟುಂಬಕ್ಕೆ ಒಪ್ಪಿಸಿ, ಆಂಧ್ರದ ಕರೀಂನಗರ ಜಿಲ್ಲೆಯ ಆತನ ಹುಟ್ಟಿದೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ವಾಹನ ಸೌಕರ್ಯವನ್ನು ಸಹ ಒದಗಿಸಿಕೊಟ್ಟಿತು. ಡಿಸಂಬರ್ ಮೊದಲವಾರ ಕಿಷನ್ ಜಿ ಹುಟ್ಟೂರಾದ ಪೆದ್ದಂಪಲ್ಲಿ ಗ್ರಾಮದಲ್ಲಿ ಸಾವಿರಾರು ಅಭಿಮಾನಿಗಳ ನಡುವೆ ಅಂತ್ಯಕ್ರಿಯೆ ನೆರವೇರಿತು.

(ಮುಂದುವರಿಯುವುದು)