Daily Archives: October 22, 2012

ಯಡಿಯೂರಪ್ಪ ಮತ್ತು ಅವರ ಮನಸ್ಥಿತಿ?


-ಚಿದಂಬರ ಬೈಕಂಪಾಡಿ


 

ಅಧಿಕಾರ ಅನುಭವಿಸುತ್ತಿದ್ದ ವ್ಯಕ್ತಿ ಏಕಾಏಕಿ ಅಧಿಕಾರವಿಲ್ಲದೇ ಹೋದಾಗ ಮನಸ್ಸು ಏನೆಲ್ಲಾ ಮಾಡಬಹುದು, ಯಾವ ರೀತಿಯ ವರ್ತನೆ ಕಾಣಬಹುದು ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಂತ ತಾಜಾ ಉದಾಹರಣೆಗೆ ಬೇರೆ ಯಾರನ್ನು ಹೋಲಿಸಬಹುದು? ಖಂಡಿತಕ್ಕೂ ಸಾಧ್ಯವೇ ಇಲ್ಲ ಮತ್ತೊಬ್ಬರನ್ನು ಹೋಲಿಸಲು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿಂದೆ ಮಂತ್ರಿಯಾಗಿದ್ದಾಗ, ಸ್ಪೀಕರ್ ಆಗಿದ್ದಾಗ ಅವರ ಮುಖದಲ್ಲಿ ಇದ್ದ ಕಳೆಗೂ ಈಗ ಮುಖ್ಯಮಂತ್ರಿಯಾದ ಮೇಲೆ ಅವರ ಮುಖದಲ್ಲಿ ರಾರಾಜಿಸುತ್ತಿರುವ ಕಳೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಡಿಯೂರಪ್ಪ ಅವರ ಈಗಿನ ಮುಖದ ಕಳೆಯನ್ನು ಅವಲೋಕಿಸಿದರೆ ಅಲ್ಲಿ ಕಾಣಿಸುವುದು ಹತಾಶೆ, ರೋಷ, ಸಿಟ್ಟು. ಈಗ ಅವರ ನಗುವಿನಲ್ಲಿ ಆಕರ್ಷಣೆಯಿಲ್ಲ, ಮಾತಿನಲ್ಲಿ ಮಾಧುರ್ಯವಿಲ್ಲ. ಅದೇ ಜಗದೀಶ್ ಶೆಟ್ಟರ್ ಅವರ ಮುಖದಲ್ಲಿ ಮಂದಹಾಸ. ಸಂತೃಪ್ತಿಯಿದೆ. ಇದು ಅಧಿಕಾರ ಇದ್ದಾಗ ಮತ್ತು ಅಧಿಕಾರ ಇಲ್ಲದಿದ್ದಾಗ ಮನುಷ್ಯನ ಮೇಲೆ, ಅವನ ಮನಸ್ಸಿನ ಮೇಲೆ ಉಂಟಾಗುವ ಸ್ಥೂಲಪರಿಣಾಮಗಳು.

ಯಡಿಯೂರಪ್ಪ ಈಗ ಅಧಿಕಾರ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ಅವರಲ್ಲೀಗ ಕಾಯುವ ತಾಳ್ಮೆಯಾಗಲೀ, ಮನಸ್ಸಿನಲ್ಲಾಗುತ್ತಿರುವ ಪ್ರಕ್ಷುಬ್ಧತೆಯನ್ನು ಅದುಮಿಟ್ಟುಕೊಳ್ಳುವ ಸಹನೆಯಾಗಲೀ ಇಲ್ಲ. ಪ್ರತಿಯೊಂದು ಕ್ಷಣವೂ ಅಸಹನೀಯ ಎನ್ನುವ ಸ್ಥಿತಿ, ಚಡಪಡಿಕೆ. ಇದು ಅಸಹಜವೇನಲ್ಲ.

ಒಂದು ವೇಳೆ ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗದೇ ಇರುತ್ತಿದ್ದರೆ ಕೂಡಾ ಇದೇ ಮನಸ್ಥಿತಿಯಿರುತ್ತಿತ್ತು. ನೀವು ಎರಡು ದಶಕಗಳಷ್ಟು ಹಿಂದಕ್ಕೆ ಹೋದರೆ ದೇವೇಗೌಡರ ಮನಸ್ಥಿತಿ ಹೇಗಿತ್ತು ಎನ್ನುವುದು ಮನವರಿಕೆಯಾಗುತ್ತದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಆ ಒಂದು ದಿನದ ಬೆಳವಣಿಗೆ ದೇವೇಗೌಡರನ್ನು ಅದೆಷ್ಟು ಹಿಂಸಿಸಿರಬಹುದು ಎನ್ನುವುದನ್ನು ಯೋಚಿಸಿ (ದೇವೇಗೌಡರು ತಮ್ಮ ಆತ್ಮಚರಿತ್ರೆಯಲ್ಲಿ ಖಂಡಿತಕ್ಕೂ ಇದನ್ನು ಬರೆದೇ ಬರೆಯುತ್ತಾರೆ). 1983ರಲ್ಲಿ ಅದೆಂಥಾ ನಾಟಕೀಯ ಬೆಳವಣಿಗೆ ನಡೆದುಹೋಯಿತು. ಬಂಗಾರಪ್ಪ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್, ಸಿದ್ಧರಾಮಯ್ಯ, ಎ.ಲಕ್ಷ್ಮೀಸಾಗರ್, ಸಿ.ಭೈರೇಗೌಡ, ಡಾ.ಜೀವರಾಜ್ ಆಳ್ವ, ಪಿ.ಜಿ.ಆರ್.ಸಿಂಧ್ಯಾ ಹೀಗೆ ಅನೇಕ ಮಂದಿ ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಅಧಿಕಾರವನ್ನು ಕರ್ನಾಟಕಕ್ಕೆ ತರಲು ಸಮರ್ಥರಾದರು. ಆಗ ಕಾಂಗ್ರೆಸ್ ಪಕ್ಷ 82 ಸ್ಥಾನಗಳಿಸಿದ್ದರೆ, ಜನತಾ ಪಕ್ಷ ಮತ್ತು ಕ್ರಾಂತಿರಂಗ ಒಗ್ಗೂಡಿ 95 ಸ್ಥಾನಗಳಲ್ಲಿ ಗೆದ್ದಿದ್ದವು. ಬಿಜೆಪಿ ಆಗ 18 ಸ್ಥಾನಗಳಲ್ಲಿ ಜಯದಾಖಲಿಸಿತ್ತು, ಇದು ಬಿಜೆಪಿಯ ಮಹಾನ್ ಸಾಧನೆಯಾಗಿತ್ತು ಕೂಡಾ. ಈಗಿನ ಯಡಿಯೂರಪ್ಪ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು ಆಗ. ರಾಮಕೃಷ್ಣ ಹೆಗಡೆ ಅವರು ಶಾಸಕಾಂಗ ಪಕ್ಷದ ನಾಯಕರಾಗುವಲ್ಲಿ ಚಾಣಾಕ್ಷತೆ ಮೆರೆದರು. ಕಾಂಗ್ರೆಸ್ ಪಕ್ಷ ತ್ಯಜಿಸಿ ಕ್ರಾಂತಿರಂಗದ ಬಾವುಟ ಹಾರಿಸಿದ್ದ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಹೆಗಡೆ ಮುಂದೆ ಅವರ ಚತುರತೆ ವಿಫಲವಾಯಿತು. ಈ ಸಂದರ್ಭದಲ್ಲಿ ದೇವೇಗೌಡ, ಬಂಗಾರಪ್ಪ, ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ದಕ್ಕದಿದ್ದಾಗ ಬಂಗಾರಪ್ಪ ಅವರ ಮನಸ್ಥಿತಿ ಹೇಗಿರಬಹುದು ಯೋಚಿಸಿ?

ದೇವೇಗೌಡರೂ ಉನ್ನತ ಹುದ್ದೆಯ ಅವಕಾಶ ವಂಚಿತರಾದರು, ಜೊತೆಗೆ ಬೊಮ್ಮಾಯಿ ಕೂಡಾ. ಆದರೆ ಆಕಸ್ಮಿಕವಾಗಿ ಮತ್ತು ಅನಾಯಾಸವಾಗಿ ಮುಖ್ಯಮಂತ್ರಿ ಹುದ್ದೆ ದಕ್ಕಿಸಿಕೊಂಡ ಚತುರ ರಾಜಕಾರಣಿ ಹೆಗೆಡೆಯವರ ಆ ಸಂದರ್ಭದ ಮನಸ್ಥಿತಿ ಅದೆಷ್ಟು ಉಲ್ಲಸಿತವಾಗಿರಬೇಕಲ್ಲವೇ? ಯಾವ ಅಧಿಕಾರದ ಬೆನ್ನುಹತ್ತಿ ಕಾಂಗ್ರೆಸ್ ತೊರೆದರೋ ಬಂಗಾರಪ್ಪ ಮತ್ತೆ ಕಾಂಗ್ರೆಸ್ ಮನೆ ಸೇರಿಕೊಂಡರು ಅದೇ ಅಧಿಕಾರದ ನಿರೀಕ್ಷೆಯಲ್ಲಿ. 1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಅಥವಾ ಕ್ರಾಂತಿರಂಗ ಕಾಂಗ್ರೆಸ್ ಹಿಮ್ಮೆಟ್ಟಿಸಿ ಅಧಿಕಾರದ ಗದ್ದುಗೆ ಏರುತ್ತೇವೆ ಎನ್ನುವ ನೂರಕ್ಕೆ ನೂರು ವಿಶ್ವಾಸ ಹೊಂದಿರಲಿಲ್ಲವಾದ ಕಾರಣವೇ ಮುಖ್ಯಮಂತ್ರಿ ಹುದ್ದೆ ಯಾರಿಗೆ ಎನ್ನುವುದನ್ನು ತೀರ್ಮಾನಿಸಿಕೊಂಡಿರಲಿಲ್ಲ. ಅಲಿಖಿತ ಒಪ್ಪಂದವೆಂದರೆ ಬಂಗಾರಪ್ಪ ಅವರಿಗೇ ಪಟ್ಟ ಎನ್ನುವುದು. ಆದರೆ ರಾಮಕೃಷ್ಣ ಹೆಗಡೆ ಅವರು ಶಾಸಕರನ್ನು ಮ್ಯಾನೇಜ್ ಮಾಡಿದ ಕಾರಣ ಬಂಗಾರಪ್ಪ ಅವಕಾಶ ಮಿಸ್ ಮಾಡಿಕೊಂಡರು.

1983ರಲ್ಲಿ ಬಹಳವಾಗಿ ನೊಂದುಕೊಂಡವರು ಬಂಗಾರಪ್ಪ ಮತ್ತು ದೇವೇಗೌಡರು. ಖುಷಿಯಿಂದ ಬೀಗಿದವರು ರಾಮಕೃಷ್ಣ ಹೆಗಡೆ. ಈಗ ಯಡಿಯೂರಪ್ಪ ತೋರುವ ಅಸಹನೆ, ಸಿಟ್ಟು ಆಗ ಬಂಗಾರಪ್ಪ ಅವರಲ್ಲಿತ್ತು. ರಾಮಕೃಷ್ಣ ಹೆಗಡೆಯವರನ್ನು ಕಡುವೈರಿಯೆಂದೇ ಭಾವಿಸಿದ್ದರು ಬಂಗಾರಪ್ಪ. ಆದರೆ ದೇವೇಗೌಡರಲ್ಲಿ ಅಸಹನೆಯಿತ್ತಾದರೂ ಮತ್ತೊಂದು ಅವಕಾಶಕ್ಕಾಗಿ ಕಾಯುವ ತಾಳ್ಮೆಯಿತ್ತು. ಇದೇ ಮನಸ್ಥಿತಿ ಬೊಮ್ಮಾಯಿ ಅವರಿಗೂ ಆಗ.

ಮತ್ತೆ 1985ರಲ್ಲಿ ಎಸ್.ಬಂಗಾರಪ್ಪ ಕಾಂಗ್ರೆಸ್ ಮೂಲಕ ಕಣಕ್ಕಿಳಿದು ಗೆದ್ದರಾದರೂ ರಾಮಕೃಷ್ಣ ಹೆಗಡೆಯವರು ಕರ್ನಾಟಕವನ್ನು ಆವರಿಸಿಕೊಂಡುಬಿಟ್ಟಿದ್ದರು, ಸ್ವಂತ ಬಲದಲ್ಲಿ ಅಧಿಕಾರಕ್ಕೇರಿದರು. ಎರಡನೇ ಅವಧಿಗೂ ರಾಮಕೃಷ್ಣ ಹೆಗಡೆಯವರೇ ಮುಖ್ಯಮಂತ್ರಿಯಾದಾಗ ಕೊತ ಕೊತನೆ ಕುದಿದವರು ಎಚ್.ಡಿ.ದೇವೇಗೌಡರು. ನೀರಾವರಿ ಇಲಾಖೆಗೆ ನೀಡಿದ ಅನುದಾನ ಸಾಕಾಗುವುದಿಲ್ಲವೆಂದು ಪ್ರತಿಭಟಿಸಿ ರಾಮಕೃಷ್ಣ ಹೆಗಡೆ ಅವರ ಸಂಪುಟದಿಂದ ಹೊರಬರುವ ನಿರ್ಧಾರಕ್ಕೆ ಅಂಟಿಕೊಂಡು ರಾಜೀನಾಮೆ ಕೊಟ್ಟಿದ್ದರು.

ಮೂರನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ದೇವೇಗೌಡರನ್ನು ದೂರಸರಿಸಿದ ಹೆಗಡೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ರಂಪಾಟವೇ ನಡೆದುಹೋಯಿತು. ಪಕ್ಷದೊಳಗೆ ಭಿನ್ನಮತ, ಹೊಡೆದಾಟ, ಚಪ್ಪಲಿ ತೂರಾಟ ಘಟಿಸಿದವು. ಈ ಸನ್ನಿವೇಷ ಕೂಡಾ ದೇವೇಗೌಡರ ರಾಜಕೀಯ ಬದುಕಿನಲ್ಲಿ ಮಹತ್ವದ ಕ್ಷಣ. ಮುಂದೆ ಗೌಡರನ್ನೇ ಪಕ್ಷದಿಂದ ದೂರಸರಿಸಿದ್ದ ಹೆಗಡೆ ಉರುಳಿಸಿದ ದಾಳಗಳಿಂದಾಗಿ ದೇವೇಗೌಡರು ಏಕಾಂಗಿಯಾಗಿ ಹೋಗಿದ್ದರು. ಆದಿನಗಳು ಹೇಗಿರಬಹುದು? ಅವರ ಅಂದಿನ ಮನಸ್ಥಿತಿ, ಅಸಹಾಯಕತೆ, ಆಕ್ರೋಶ ಅವರು ಮಾತ್ರ ಹೇಳಿಕೊಳ್ಳಬಲ್ಲರು.

ಈ ಮನಸ್ಥಿತಿಯಿಂದ ಹೊರಬರಬೇಕಾದರೆ ದೇವೇಗೌಡರು ಮುಖ್ಯಮಂತ್ರಿಯಾಗಬೇಕಾಯಿತು. ಅದೇ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಮಾಡುತ್ತಿದ್ದ ಪ್ರಚಾರ ಭಾಷಣದಲ್ಲಿ ‘ನೀವು ನನ್ನ ಕೈಗೆ 28 ಸಂಸದರನ್ನು ಆರಿಸಿಕೊಡಿ, ನೀವು ಹೇಳಿದವರನ್ನೇ ಪ್ರಧಾನಿ ಮಾಡಿಸುತ್ತೇನೆ’ ಎಂದು ಹೇಳಿಕೊಂಡು ರಾಜ್ಯ ಸುತ್ತಾಡಿದರು. 1996ರಲ್ಲಿ ಪಿ.ವಿ.ನರಸಿಂಹರಾವ್ ಸೋತು ಸಂಯುಕ್ತರಂಗ ಗರಿಷ್ಠ ಸ್ಥಾನಗಳನ್ನು ಗೆದ್ದಾಗ ಪ್ರಧಾನಿಯಾಗುವ ಅದೃಷ್ಟ ದೇವೇಗೌಡರಿಗೇ ಒಲಿಯಿತು. ಇಂಥ ಹುದ್ದೆಯನ್ನು ನಿರೀಕ್ಷೆ ಮಾಡಿರದಿದ್ದ ದೇವೇಗೌಡರು ತಮ್ಮ ನಿರೀಕ್ಷೆಗೆ ತಕ್ಕ ಪ್ರಧಾನಿ ಆಯ್ಕೆಯಲ್ಲಿ ಮುಖ್ಯಪಾತ್ರ ವಹಿಸಲು ಹೋಗಿ ತಾವೇ ಪ್ರಧಾನಿಯಾದರು. ಹೇಗೆ ರಾಮಕೃಷ್ಣ ಹೆಗಡೆ ಸರ್ವಸಮ್ಮತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲು ಸಾರಥ್ಯ ವಹಿಸಿ ತಾವೇ ಮುಖ್ಯಮಂತ್ರಿಯಾದರೋ ಹಾಗೆಯೇ ದೇವೇಗೌಡರು ಕೂಡಾ ಸಂಯುಕ್ತರಂಗ ಸಭೆಯಲ್ಲಿ ಅನಿರೀಕ್ಷಿತವಾಗಿ ಪ್ರಧಾನಿಯಾದರು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿರಬಹುದು? ಅಂತೆಯೇ ಹನ್ನೊಂದು ತಿಂಗಳುಗಳ ಕಾಲ ಪ್ರಧಾನಿಯಾಗಿ ನಿರ್ಗಮಿಸುವ ಸನ್ನಿವೇಶದ ಮನಸ್ಥಿತಿ ಹೇಗಿರಬಹುದು?

ಹಿಂದುಳಿದವರಿಗೆ ಹೊಸ ಬದುಕುಕೊಟ್ಟ ಡಿ.ದೇವರಾಜ ಅರಸು ಇಂದಿರಾ ಗಾಂಧಿಯವರಿಂದ ದೂರವಾಗಿ ತಾವೇ ಅರಸು ಕಾಂಗ್ರೆಸ್ ಪಕ್ಷ ಕಟ್ಟಿದರು. ಈ ನಾಡಿನ ಜನರಿಗಾಗಿ ಕೆಲಸ ಮಾಡಿದ್ದೇನೆ, ಅವರು ಕೈಹಿಡಿಯುತ್ತಾರೆ ಅಂದುಕೊಂಡಿದ್ದ ಅರಸು ಹೀನಾಯವಾಗಿ ಸೋತು ಮತ್ತೆ ರಾಜಕೀಯದತ್ತ ಮುಖಮಾಡದೆ ಸ್ಮಶಾನಕ್ಕೆ ನಿರ್ಗಮಿಸಿದರಲ್ಲಾ ಅವರ ಅಂದಿನ ಮನಸ್ಥಿತಿ ಹೇಗಿರಬೇಡ? ಪ್ರತೀ ವರ್ಷ ಅರಸು ಅವರ ಸ್ಮರಣೆ ಮಾಡುವ ನಾಡಿನ ಜನರ ಮನಸ್ಥಿತಿಯಲ್ಲವೇ ಅವರನ್ನು ಅಧಿಕಾರದಿಂದ ದೂರಕ್ಕೆ ತಳ್ಳಿದ್ದು?

ವೀರೇಂದ್ರ ಪಾಟಿಲ್ ಮುಖ್ಯಮಂತ್ರಿಯಾಗಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ದೇಹಾರೋಗ್ಯ ವಿಚಾರಣೆಗೆಂದು ಬಂದಿದ್ದ ರಾಜೀವ್ ಗಾಂಧಿ ಅವರು ದೆಹಲಿಗೆ ವಾಪಸಾಗುವ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಟೀಲ್ ಅವರನ್ನು ಕೆಳಗಿಳಿಸುವ ನಿರ್ಧಾರ ಪ್ರಕಟಿಸಿದರು. ಇದನ್ನು ಕೇಳಿ ಕುಸಿದ ಪಾಟೀಲ್ ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಾಣಾಕ್ಷ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದವರು. ಆದರೆ ದೇವೇಗೌಡರು ಪ್ರಾಬಲ್ಯಕ್ಕೆ ಬಂದಮೇಲೆ ಅವರ ರಾಜಕೀಯ ಮಂಕಾಯಿತು, ಮಾತ್ರವಲ್ಲಾ ಪಕ್ಷದಿಂದಲೇ ಹೊರದಬ್ಬಿಸಿಕೊಂಡರು. ಆಗ ಅವರ ಮನಸ್ಥಿತಿ ಹೇಗಿರಬಹುದು?

ಬಿಜೆಪಿಯ ಹಿರಿಯ ಜೀವ ಎಲ್.ಕೆ.ಅಡ್ವಾಣಿ ಅವರ ಮನಸ್ಸಿನ ವೇದನೆ, ತೊಳಲಾಟ ಅದೆಷ್ಟಿರಬಹುದು? ಅವರು ಉಪಪ್ರಧಾನಿಯಾಗಿದ್ದವರು. ಅವರಿಗೆ ಅಧಿಕಾರದ ಆಸೆ ಇಲ್ಲವೆಂದು ಹೇಳಿದರೆ ಅದು ಆತ್ಮವಂಚನೆಯಾಗುತ್ತದೆ. ಈಕ್ಷಣದಲ್ಲೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಅವರು ಮುಕ್ತರಾಗಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಲು ತುಡಿಯುತ್ತಿರುವುದು ಅವರ ಕಾರ್ಯವೈಖರಿಯಿಂದಲೇ ಅರ್ಥವಾಗುತ್ತದೆ.

ಹೀಗೆ ಅಧಿಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಮನುಷ್ಯನ ಮನಸ್ಸಿನಲ್ಲಿ ತಾಕಲಾಟಗಳು ಇದ್ದೇ ಇರುತ್ತವೆ. ಅಧಿಕಾರವಿದ್ದಾಗ ತಾನಾಗಿಯೇ ಬರುವ ವರ್ಚಸ್ಸು ಅಧಿಕಾರದಿಂದ ನಿರ್ಗಮಿಸುವಾಗ ಕಳೆಗುಂದುತ್ತದೆ. ನಿಮ್ಮ ಕೈಯಲ್ಲಿರುವ ಅಧಿಕಾರ ಕಳಚಿಬಿದ್ದರೆ ನಿಮಗಾಗುವ ಮನಸ್ಥಿತಿಯನ್ನು ಊಹಿಸಿಕೊಂಡರೆ ಯಡಿಯೂರಪ್ಪ ಅವರ ಮನಸ್ಥಿತಿಯನ್ನೂ ಊಹಿಸಿಕೊಳ್ಳಬಲ್ಲಿರಿ, ಅರ್ಥಮಾಡಿಕೊಳ್ಳಬಲ್ಲಿರಿ.

ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರ ಶಾಶ್ವತವಲ್ಲ ಮತ್ತು ಅದು ನಮ್ಮ ಖಾಸಗಿ ಆಸ್ತಿಯಲ್ಲ ಎನ್ನುವ ಪ್ರಬುದ್ಧತೆಯನ್ನು ನಮ್ಮ ರಾಜಕಾರಣಿಗಳು ಪಡೆದುಕೊಂದರೆ ಈ ಮಾನಸಿಕ ಅಸ್ವಸ್ಥತೆಯನ್ನು ಸ್ವಲ್ಪಮಟ್ಟಿಗೆ ಘನತೆಯಿಂದ ನಿಭಾಯಿಸಬಹುದು.