Daily Archives: October 17, 2012

ಹುಡುಗಿ ಅಪರಾತ್ರಿ ಅಲೆದಾಟಕ್ಕೆ ಹೋದರೆ ಏನಾಗುತ್ತೆ?

– ಬಿ.ಎನ್. ಪಲ್ಲವಿ

ಕನ್ನಡದ ಅಗ್ರಮಾನ್ಯ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯಲ್ಲಿ ಇಂದು ಒಂದು ಕಾರ್ಟೂನ್ ಪ್ರಕಟವಾಗಿದೆ. ಪ್ರಕಾಶ್ ಶೆಟ್ಟಿಯವರ ಕಾರ್ಟೂನ್ ಹೀಗಿದೆ – ‘ಹುಡುಗಿಯರು ಅಪರಾತ್ರಿಗೆ ಅಲೆದಾಟಕ್ಕೆ ಹೋದರೆ ಏನಾಗುತ್ತದೆ ಎಂಬುದರ ಬಗ್ಗೆಯೂ ಇಲ್ಲಿ ಪಾಠ ಕಲಿಸುತ್ತಾರೆ ಅಂದಾಗಾಯ್ತು!’ ಎಂದು ದಿನಪತ್ರಿಕೆ ಕೈಯಲ್ಲಿ ಹಿಡಿದ ಪ್ರಜೆ ಮಾತನಾಡುತ್ತಾನೆ. ಪಕ್ಕದಲ್ಲೇ ಒಬ್ಬ ಪೊಲೀಸ್ ಅಧಿಕಾರಿ ಇದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು ಎನ್ನಲಾದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾರ್ಟೂನ್ ಪ್ರಕಟಗೊಂಡಿದೆ ಎನ್ನುವುದನ್ನು ಸುಲಭವಾಗಿ ಗ್ರಹಿಸಬಹುದು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಅದಿರಲಿ. ಈ ಕಾರ್ಟೂನ್ ಧ್ವನಿಸುತ್ತಿರುವ ಸಂದೇಶವೇನು? ನಾನು ಗ್ರಹಿಸಿದ್ದು ಇಷ್ಟು – ಅಪರಾತ್ರಿ ಅಲೆದಾಟಕ್ಕೆ ಹೋದ ಕಾರಣ ಆ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾಗಬೇಕಾಯಿತು. ರಾತ್ರಿ ಹೊತ್ತಲ್ಲಿ ಹೊರಗೆ ಹೋಗಿದ್ದರ ಪರಿಣಾಮ ಏನು ಎನ್ನುವುದನ್ನು ವಿಶ್ವವಿದ್ಯಾನಿಲಯ ಇಂತಹದೊಂದು ಘಟನೆ ಮೂಲಕ ವಿದ್ಯಾರ್ಥಿನಿ ಸಮೂಹಕ್ಕೆ ಕಲಿಸಿದೆ. ಹಾಗಾದರೆ, ಮಹಿಳೆ ರಾತ್ರಿ ಹೊರಗೆ ಅಲೆದಾಡಿದರೆ ಅವರು ಅತ್ಯಾಚಾರಕ್ಕೆ ಒಳಗಾಗುವ ಚಾನ್ಸ್ ಇರುತ್ತದೆ ಎನ್ನುವುದು ಪ್ರಕಾಶ್ ಶೆಟ್ಟಿಯವರ ಅಭಿಪ್ರಾಯ.

ಪುರುಷ ಕೇಂದ್ರಿತ ಆಲೋಚನೆಯ ಫಲ ಈ ಕಾರ್ಟೂನ್. ಅತ್ಯಾಚಾರದಂತಹ ಹೀನ ಕೃತ್ಯ ನಡೆಸಿದವರಿಗಿಂತ (ದಾಖಲಾಗಿರುವ ದೂರಿನ ಪ್ರಕಾರ), ರಾತ್ರಿ ಗೆಳೆಯನೊಂದಿಗೆ ಹೊರಗೆ ಹೋಗಿದ್ದ ವಿದ್ಯಾರ್ಥಿನಿಯೇ ಪ್ರಜಾವಾಣಿ ಮತ್ತು ಶೆಟ್ಟಿಯವರ ಕಣ್ಣುಗಳಿಗೆ ಅಪರಾಧಿಯಾಗಿ ಕಾಣುತ್ತಾರೆ. ಸ್ತ್ರೀಪರ ದನಿ ಎತ್ತುವ ಅನೇಕರಿಗೆ ಈ ಪತ್ರಿಕೆ ಅವಕಾಶ ಮಾಡಿಕೊಟ್ಟಿದೆ. ಸ್ತ್ರೀಶೋಷಣೆ ಮತ್ತು ಅವರ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಕೃತ್ಯಗಳು ನಡೆದಾಗಲೆಲ್ಲಾ ಪತ್ರಿಕೆ ಸ್ತ್ರೀಪರ ನಿಂತಿದೆ.

ಕಾರ್ಟೂನ್‌ಗಳು ವಿವಾದಕ್ಕೀಡಾದಗೆಲ್ಲಾ ಕಾರ್ಟೂನಿಸ್ಟ್‌ನ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆಗುತ್ತದೆ. ಅಂತಹದೊಂದು ಕಾರ್ಟೂನ್ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವ ಅಭಿಪ್ರಾಯ ಮಂಡಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ಕಾರ್ಟೂನ್ ಬರೆದವರ ಮತ್ತು ಅವನ್ನು ಓಕೆ ಮಾಡಿರುವ ಮನಸ್ಸುಗಳು ಎಂತಹವು ಎಂಬುದನ್ನು ಅರ್ಥ ಮಾಡಿಕೊಳ್ಳುವುದಷ್ಟೆ ಮುಖ್ಯ.

ಬೆಂಗಳೂರು ವಿವಿ ರಿಜಿಸ್ಟ್ರಾರ್ ಮೈಲಾರಪ್ಪ ಕೂಡಾ ಈ ಪ್ರಸ್ತುತ ಕಾರ್ಟೂನ್‌ನ ದನಿಯಲ್ಲಿಯೇ ಮಾತನಾಡಿದ್ದಾರೆ. ರಾತ್ರಿ ಹೊತ್ತು ಆ ವಿದ್ಯಾರ್ಥಿನಿ ಅದೇಕೆ ಓಡಾಡಬೇಕಿತ್ತು ಎಂದು ಮಾಧ್ಯಮದ ಮುಂದೆ ಕೇಳಿದ್ದಾರೆ. ಅಷ್ಟೇ ಅಲ್ಲ, ವಿವಿ ಕ್ಯಾಂಪಸ್‌ನಲ್ಲಿರುವ ಕೆಲ ವಿದ್ಯಾರ್ಥಿನಿಯರೂ ಇಂತಹದೇ ಪ್ರಶ್ನೆ ಎತ್ತಿದ್ದಾರೆ. ಅವರಿಗೆಲ್ಲಾ ಅತ್ಯಾಚಾರಕ್ಕಿಂತ, ಗೆಳೆಯನೊಂದಿಗೆ ರಾತ್ರಿ ಹೊರ ಹೋಗಿದ್ದೇ ದೊಡ್ಡ ಅಪರಾಧವಾಗಿ ಕಾಣುತ್ತಿದೆ. ಇವರೆಲ್ಲ ಇಂತಹ ಸಂಕುಚಿತ ಅಭಿಪ್ರಾಯ ಹೊಂದಲು ಈ ಹೊತ್ತಿನ ಮಾಧ್ಯಮಗಳೂ ಕಾರಣ.

(ಕಾರ್ಟೂನ್ ಕೃಪೆ: ಪ್ರಜಾವಾಣಿ)

ಅಧಿಕಾರರೂಢರ ದುರಹಂಕಾರ… ಕ್ರಾಂತಿಯತ್ತ ದೇಶ…


– ರವಿ ಕೃಷ್ಣಾರೆಡ್ಡಿ


ದಿನೇದಿನೇ ಈ ದೇಶ ದುರಂತದತ್ತ ಮತ್ತು ಕ್ರಾಂತಿಯತ್ತ ನಡೆಯುತ್ತಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಲ್ಲ. ಮತ್ತು ಇವು ಆರೋಪಗಳಷ್ಟೇ ಅಲ್ಲ, ಮೇಲ್ನೋಟಕ್ಕೇ ಆರೋಪ ರುಜುವಾತಾಗುವ, ಸಾಬೀತಾಗುವ ಪ್ರಕರಣಗಳು. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಕೆಟ್ಟಿದೆ. ಶಾಸಕಾಂಗದ ಜನಪ್ರತಿನಿಧಿಗಳು ಎಂದೋ ಕೆಟ್ಟಿದ್ಡಾರೆ. ಆಡಳಿತಾಂಗದ ಅಧಿಕಾರಿಗಳು ರಾಜಕಾರಣಿಗಳ ಜೊತೆಜೊತೆಗೇ ಕೆಟ್ಟಿದ್ದಾರೆ. ಹಾಗಾಗಿ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯೇ ಆಗುವುದಿಲ್ಲ. ದುರಹಂಕಾರದಿಂದ ಮತ್ತು ವೇಗದಿಂದ ಭ್ರಷ್ಟಾಚಾರ ಮತ್ತು ಅವುಗಳನ್ನು ಮುಚ್ಚಿಹಾಕುವ ಪ್ರವೃತ್ತಿ ಎಡೆಬಿಡದೆ ಸಾಗುತ್ತಿದೆ.

ರಾಬರ್ಟ್ ವಾದ್ರಾ ದೇಶದ ಜನತೆಯ ಎದುರು ಬೆತ್ತಲಾಗಿದ್ದಾರೆ. ಅವರ ಅತ್ತೆಯಂತೂ ಹಿಂದೆಂದಿಗಿಂತ ಹೆಚ್ಚು ಟೀಕೆಗೆ ಒಳಗಾಗುತ್ತಿದ್ದಾರೆ ಮತ್ತು ಜನತೆ ತಮಗೆ ದೊರಕಲಿರುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಸೋನಿಯಾ ಮತ್ತು ಪ್ರಿಯಾಂಕರವರ ಮೇಲ್ನೋಟಕ್ಕೆ ಘನತೆ ಮತ್ತು ಗಂಭೀರತೆಯಿಂದ ಕೂಡಿದ್ದ ನಡವಳಿಕೆ, ಸೋನಿಯಾರವರು ಪ್ರಧಾನಿ ಸ್ಥಾನದಿಂದ ಹಿಂದೆ ಸರಿದದ್ದು, ಪ್ರಿಯಾಂಕಾರವರು ನೇರರಾಜಕಾರಣಕ್ಕೆ ಬರದೆ ತಮ್ಮ ಪ್ರಚಾರವನ್ನು ಉತ್ತರಪ್ರದೇಶದ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸಿಕೊಂಡಿದ್ದ ಸಂಯಮ, ಇವೆಲ್ಲವೂ ಅವರ ಮನೆಯಲ್ಲಿಯೇ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪ ಮತ್ತು ಅಪರಾಧಗಳಿಂದ ಅವರನ್ನು ರಕ್ಷಿಸದು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಆರೋಪ ಕೇಳಿಬಂದ ನಂತರ ನಡೆದ ಘಟನೆಗಳು ಅವರ ಮತ್ತು ಅವರ ದಾಸವರ್ಗದ ಜನರ ಅಹಂಕಾರ ಮತ್ತು ಸ್ವೇಚ್ಚಾಚಾರವನ್ನು ಎತ್ತಿ ಎತ್ತಿ ತೋರಿಸುತ್ತಿವೆ.

ಈಗ ಕಾಂಗ್ರೆಸ್ ಪಕ್ಷದವರಿಂದ ದೂಷಣೆ ಮತ್ತು ಶಿಕ್ಷೆಗೆ ಒಳಗಾಗಿರುವ ಐಎ‌ಎಸ್ ಅಧಿಕಾರಿ ಅಶೋಕ್ ಖೇಮ್‍ಕ ನೆನ್ನೆ ರಾತ್ರಿ ಟಿವಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಒಂದು ವಿಚಾರ ಹೇಳಿದರು: “ರಾಜಕಾರಣಿಗಳ ಜೊತೆ ಸಕ್ರಿಯವಾಗಿ ಕೈಜೋಡಿಸಿ ರಾಜಾರೋಷದಿಂದ ಭ್ರಷ್ಟಾಚಾರ ಎಸಗುವ ಅಧಿಕಾರಿಗಳಿಗಿಂತ ವಿನಮ್ರವಾಗಿ ರಾಜಕಾರಣಿಗಳ ಜೊತೆಗೂಡಿ ಭ್ರಷ್ಟಾಚಾರ ಎಸಗುವ ಅಧಿಕಾರಿಗಳು ಬಹಳ ಅಪಾಯಕಾರಿ. ರಾಜಾರೋಷದಿಂದ ವರ್ತಿಸುವವರು ಇಂದಲ್ಲ ನಾಳೆ ಸಿಕ್ಕಿಬೀಳುತ್ತಾರೆ. ಆದರೆ ವಿನಮ್ರವಾಗಿ ಮತ್ತು ಧೂರ್ತತೆಯಿಂದ ಕೆಲಸ ಮಾಡುವವರು ಸಿಕ್ಕಿಬೀಳುವ ಸಂಭವ ಕಡಿಮೆ.” ಇದು ಕಳೆದ 19 ವರ್ಷದಲ್ಲಿ 43 ಬಾರಿ ವರ್ಗಾವಣೆ ಆಗಿರುವ, ಬೇರೆಯವರು ಅವರ ಬಗ್ಗೆ ಹೀಗೆ ಹೇಳುತ್ತಾರೆಂದು ಅವರೇ ಹೇಳಿಕೊಂಡ “ಪ್ರಾಮಾಣಿಕ ವ್ಯಕ್ತಿ, ಆದರೆ ಹೇಳಿದ ಮಾತು ಕೇಳದ” ಹಿರಿಯ ಅಧಿಕಾರಿ ಹೇಳುವ ಮಾತು. ನಮ್ಮ ಸಮಾಜದಲ್ಲಿ ಈ ಅಧಿಕಾರಸ್ಥ ರಾಜಕಾರಣಿಗಳ ದುರಹಂಕಾರ ಹೇಗಿದೆ ಅಂದರೆ, ಅದೇ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಂಸದನೊಬ್ಬ “ಖೇಮ್‌ಕ ತಾನು ಇಷ್ಟು ಬಾರಿ ವರ್ಗಾವಣೆ ಆಗಿರುವುದು ಯಾಕೆ ಎಂದು ಹೇಳಬೇಕು” ಎನ್ನುತ್ತ ಈ ಮನುಷ್ಯನದೇ ಏನೋ ತಪ್ಪಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ. ಅದಕ್ಕೆ ಖೇಮ್‍ಕ ಹೇಳಿದ್ದು, ಅತೀವ ದು:ಖದಿಂದ, “ಇದು ಹೇಗಿದೆ ಅಂದರೆ, ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಲೆ ಅವಳು ಏನು ಮಾಡಿದ್ದಕ್ಕೆ ಈ ಅತ್ಯಾಚಾರ ಮಾಡಲಾಯಿತು ಎಂದು ಕೇಳುವಂತಿದೆ” ಎಂದು. ಖೇಮ್‌ಕರಿಗೆ ಈಗಾಗಲೆ ಜೀವಬೆದರಿಕೆ ಹಾಕಲಾಗಿದೆ. ಹಲವು ಬೆದರಿಕೆ ಕರೆಗಳನ್ನು ಮಾಡಲಾಗಿದೆ. ಹರ್ಯಾಣ ಸರ್ಕಾರವಂತೂ ಅಧಿಕೃತವಾಗಿ ಹಿಂಬಡ್ತಿ ತರಹದ ಶಿಕ್ಷೆ ನೀಡಿ, ಅವರಿಗಿಂತ ಹದಿನೈದು ವರ್ಷ ಕಿರಿಯ ಆಧಿಕಾರಿಗೆ ಕೊಡುವ ಜವಾಬ್ದಾರಿಯನ್ನು ಕೊಟ್ಟು, ಮೂರು ತಿಂಗಳೂ ಆಗಿರದ ಅವರ ಸದ್ಯದ ಹುದ್ದೆಯಿಂದ ವರ್ಗಾವಣೆ ಮಾಡಿದೆ.

ಇದೆಲ್ಲವೂ ಯಾತಕ್ಕಾಗಿ? ರಾಬರ್ಟ್ ವಾದ್ರಾ ಮೇಲೆ ಕೇಳಿಬಂದ ಆರೋಪಗಳು ನೇರವಾಗಿ ಖೇಮ್‌ಕರವರ ಅಧೀನ ಅಧಿಕಾರಿಗಳ ಅಧಿಕಾರ ದುರುಪಯೋಗ ಮತ್ತು ಕಾನೂನು ಉಲ್ಲಂಘನೆಯನ್ನು ಎತ್ತಿ ತೋರಿಸುತ್ತಿದ್ದವು. ಅದು ಹೌದೇ ಅಲ್ಲವೇ ಎಂದು ವಿಚಾರಣೆಗೆ ಅಶೋಕ್ ಖೇಮ್‌ಕ ಮುಂದಾದ ಎರಡೇ ದಿನಕ್ಕೆ ರಾತ್ರಿ 10 ಗಂಟೆ ಸಮಯದಲ್ಲಿ ಸರ್ಕಾರ ಇವರ ವರ್ಗಾವಣೆ ಆದೇಶ ಹೊರಡಿಸಿದೆ.

ರಾತ್ರಿ ಕೇಳಿಬಂದ ವಿಚಾರಗಳಲ್ಲಿ ಒಂದು ವಿಚಾರ, ರಾಬರ್ಟ್ ವಾದ್ರಾ ವಿವಾದದಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜನರಿಗೆ ತಿಂಗಳಾನುಗಟ್ಟಲೆ ತೆಗೆದುಕೊಳ್ಳುವ (ಖಾತಾ, ಇಲ್ಲವೇ ಮ್ಯುಟೇಷನ್ ಇರಬೇಕು) ಅನುಮತಿ/ಆದೇಶ ಪತ್ರವೊಂದು ವಾದ್ರಾಗೆ ಕೇವಲ ಒಂದೇ ದಿನದಲ್ಲಿ ಸಿಗುತ್ತದೆ. ಅಂದಹಾಗೆ ಇಂತಹವು ರಾಜಕಾರಣಿಗಳ, ಶ್ರೀಮಂತರ, ಅಧಿಕಾರಸ್ಥರ ವಿಚಾರಕ್ಕೆ ದೇಶದಾದ್ಯಂತ ದಿನವೂ ನಡೆಯುತ್ತದೆ. ನಮ್ಮ ರಾಜ್ಯದ ಗೃಹಸಚಿವ ಆರ್.ಆಶೋಕ್ ಅಕ್ರಮವಾಗಿ ಕೊಂಡುಕೊಂಡು ಡಿನೋಟಿಫೈ ಮಾಡಿಸಿಕೊಂಡ ಜಮೀನೊಂದರ ವಿಚಾರದಲ್ಲಿಯೂ ನೊಂದಾವಣೆ ಆದ ಮಾರನೆಯ ದಿನವೇ ಅವರಿಗೆ ಖಾತಾ ಸಿಕ್ಕಿತ್ತು. ಇದೆಲ್ಲವೂ ಪತ್ರಿಕೆಗಳಲ್ಲಿ, ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ದಾಖಲಾಗಿವೆ.

ಈ ದೇಶದಲ್ಲಿ ಕಾನೂನುಗಳೇನಿದ್ದರೂ ಬಡವರಿಗೆ, ದುಡ್ಡು ಹೊಂದಿಸಲಾಗದ ಅಶಕ್ತರಿಗೆ, ಪ್ರಾಮಾಣಿಕವಾಗಿ ಇರಬೇಕು ಎಂದು ಬಯಸುವವರಿಗೆ. ಈ ಗುಂಪಿನಲ್ಲಿರದವರಿಗೆ ಕಾನೂನುಗಳು ಅವರ ತೂಕದ ಜೇಬಿನಲ್ಲಿರುತ್ತವೆ. ಕಾನೂನುಗಳನ್ನು ದಿನವೂ ಉಲ್ಲಂಘಿಸಲಾಗುತ್ತದೆ. ದಿನೇದಿನೇ ಹಗರಣಗಳು ಪಕ್ಷಭೇದವಿಲ್ಲದೆ ಹೊರಬರುತ್ತಿವೆ; ಬಯಲುಸೀಮೆಯ ಹಳ್ಳಿಗಳಲ್ಲಿ ಬೆಳಗ್ಗೆ ಪಾಯಕಾನೆಗೆ ಹೋಗುವ ಜನ ಖಾಲಿ ಇರುವ ಬಯಲಿನಲ್ಲಿ ಸಾಮೂಹಿಕವಾಗಿ ಹಾಕುವ ಅಮೇದ್ಯದ ಗುಡ್ಡೆಗಳಂತೆ. ಇನ್ನು ನಮ್ಮ ಮಾಧ್ಯಮಗಳ ಮತ್ತು ಜನರ ಮನಸ್ಥಿತಿ ಕ್ಷಣಕ್ಕೊಂದು ಅಮೇಧ್ಯದ ಗುಡ್ಡೆಗೆ ಹಾರುವ ನೊಣದಂತಾಗಿದೆ. ಯಾವುದೂ ಮುಖ್ಯವಾಗುತ್ತಿಲ್ಲ. ಒಂದು ಕೋಲನ್ನು ಮುರಿಯದೆ ಸಣ್ಣದು ಮಾಡುವ ವಿಧಾನದಂತೆ ಅದಕ್ಕಿಂತ ಉದ್ದದ್ದ ಕೋಲು ಕಾಣಿಸಿಕೊಂಡಾಕ್ಷಣ ಹಳೆಯದು ಮರೆಯಾಗುತ್ತಿದೆ.

ಮೊನ್ನೆ ರಾಬರ್ಟ್ ವಾದ್ರಾ, ನೆನ್ನೆ ಸಲ್ಮಾನ್ ಖುರ್ಷಿದ್, ಇಂದು ನಿತಿನ್ ಗಡ್ಕರಿ; ಇವು ಏನಾದರೂ ಸಕಾರಾತ್ಮಕ ಬದಲಾವಣೆ ತರುತ್ತವೆಯೇ? ಬಹುಶಃ ಇಂದು ಬಯಲಾಗುವ ನಿತಿನ್ ಗಡ್ಕರಿ ಹಗರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಮೇಲೆ ಮತ್ತೊಮ್ಮೆ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಮಾತೂ ಕೇಳಿಬರಬಹುದು. ಇವರಿಗಂತೂ ಹತ್ತಾರು ಕೇಸುಗಳಲ್ಲಿ ಇದೂ ಒಂದಾಗಲಿದೆ. ಶಿಕ್ಷೆ? ನ್ಯಾಯಾಲಯದಲ್ಲಿ ಸಿಗುವುದು ಸಂದೇಹ. ನ್ಯಾಯಪ್ರಜ್ಞೆ ಕಳೆದುಕೊಂಡ ಸಮಾಜದಲ್ಲಂತೂ ಖಂಡಿತ ಸಿಗದು. ಯಾರೂ ಮಾಡದ್ದನ್ನು ಇವರು ಮಾಡಿಲ್ಲ ಎಂದು ಜನ ಪ್ರತಿಯೊಬ್ಬ ಅವಿವೇಕಿ, ಅನರ್ಹ, ಭ್ರಷ್ಟ, ದುಷ್ಟನ ವಿಚಾರಕ್ಕೆ ಹೇಳುತ್ತಿದ್ದಾರೆ.

ಅರಾಜಕತೆ ಮತ್ತು ಕ್ರಾಂತಿಯತ್ತ ದೇಶ ನಡೆಯುತ್ತಿದೆ. ಅದು ರಕ್ತರಹಿತ ಕ್ರಾಂತಿಯಾಗಿರಲಿ ಎಂದಷ್ಟೇ ನನ್ನ ಬಯಕೆ.